Home / ಪ್ರಶ್ನೋತ್ತರ / ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೇ?

ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೇ?

ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕರೆಂಬುದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಒಂದು ತಪ್ಪುಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ ಏಸುಕ್ರಿಸ್ತ ಎನ್ನಲಾಗುವಂತೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧರಾಗಿರುವಂತೆ, ಝರತುಷ್ಟ್ರ ಧರ್ಮದ ಸ್ಥಾಪಕ ಝರತುಷ್ಟ್ರರಾಗಿರುವಂತೆ, ಇಸ್ಲಾಮ್ ಧರ್ಮವು ಮುಹಮ್ಮದರಿಂದ(ಸ) ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ.

ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್‍ರವರು(ಸ) ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಹೊಸ ಪಂಥವಾಗಲೀ ಅಲ್ಲ. ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿರುವಂತೆ, ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವೂ ಅಲ್ಲ. ಅದು ಮುಹಮ್ಮದ್(ಸ) ಆವಿಷ್ಕರಿಸಿದ ಮುಹಮ್ಮದೀಯ ಧರ್ಮವಾಗಿರದೇ ಮಾನವಕುಲದ ಆದಿಪಿತ ಆದಮರಿಂದ(ಅ) ಹಿಡಿದು ಅಂತಿಮ ಪ್ರವಾದಿ ಮುಹಮ್ಮದ್‍ರವರ(ಸ) ವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನವೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ. ಮನುಷ್ಯನು ತನ್ನ ಸೃಷ್ಟಿಕರ್ತ, ಪಾಲಕ, ಪ್ರಭು ಮತ್ತು ಅಧಿಪತಿಯಾದ ಅಲ್ಲಾಹನಿಗೆ ಸಂಪೂರ್ಣ ವಿಧೇಯನಾಗಿ ಅವನ ಆಜ್ಞೆಗಳನ್ನು ಅನುಸರಿಸಿ ಜೀವಿಸುವ ಜೀವನ ಪದ್ಧತಿ ಎಂಬುದೇ ಆ ಪದದ ತಾತ್ಪರ್ಯ. ಹಾಗೆ ಜೀವಿಸಿದಾಗ ಅವನು ಇಹ-ಪರ ಲೋಕಗಳಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಮೋಕ್ಷ ಮತ್ತು ವಿಜಯವನ್ನು ಪಡೆಯುವನು.

ಅಲ್ಲಾಹನ ಬಳಿ ಸ್ವೀಕಾರ ಯೋಗ್ಯವಾದ ಧರ್ಮವು ಇದೊಂದೇ ಆಗಿದೆ ಎಂಬುದನ್ನು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಪ್ರಥಮ ಮಾನವರೂ ಪ್ರಥಮ ಪ್ರವಾದಿಯೂ ಆದ ಆದಮ್‍ರಿಂದ(ಅ) ಅಂತಿಮ ಪ್ರವಾದಿ ಹ. ಮುಹಮ್ಮದ್‍ರ(ಸ) ತನಕ ಎಲ್ಲ ಪ್ರವಾದಿಗಳು ತಂತಮ್ಮ ಜನತೆಯ ಮುಂದೆ ಇದೇ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಅದರಂತೆ ಬದುಕಿ ತೋರಿಸಿದರು. ಈ ಧರ್ಮವು ಮನುಷ್ಯನ ಪರಲೋಕ ಮೋಕ್ಷಕ್ಕೆ ಹೇತುವಾಗುವುದು ಮಾತ್ರವಲ್ಲ ಅವನ ಇಹಲೋಕ ಜೀವನದ ಅತ್ಯುತ್ತಮ ನಿರ್ಮಾಣವೂ ಈ ಧರ್ಮದಿಂದಲೇ ಆಗುವುದು. ಅವನ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಸೂಕ್ತ ಪರಿಹಾರವಿದ್ದು ಈ ಧರ್ಮ ಮಾತ್ರ ನೈಜ ಅರ್ಥದಲ್ಲಿ ಅವನನ್ನು ವಿಜಯದ ಕಡೆಗೆ ಒಯ್ಯಬಲ್ಲುದು. ಅವನಿಗೆ ಶಾಂತಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ನೀಡಬಲ್ಲುದು.

SHARE THIS POST VIA

About admin

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *