Home / ಪ್ರಶ್ನೋತ್ತರ / 786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?

786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?

ಕೆಲವರು ‘786’ ಎಂಬ ಸಂಖ್ಯೆಯನ್ನು ಮತ್ತು ಬಾಲಚಂದ್ರ ಮತ್ತು ನಕ್ಷತ್ರವನ್ನೊಳಗೊಂಡ ಆಕೃತಿಯನ್ನು ಅಲ್ಲಾಹನ ಸಂಕೇತ ಎಂದು ಭಾವಿಸುವುದಿದೆ. ಆದರೆ ಅಲ್ಲಾಹನಿಗೆ ಅಥವಾ ಇಸ್ಲಾಮ್ ಧರ್ಮಕ್ಕೆ ಅಂತಹ ಯಾವ ಸಂಕೇತವೂ ಇಲ್ಲ. ಪವಿತ್ರ ಕುರ್‍ಆನಿನ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಬರುವ “ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ” ಎಂಬರ್ಥದ ವಾಕ್ಯವನ್ನು ಸಂಕೇತಿಸಲು ಕೆಲವು ಮುಸ್ಲಿಮರು 786 ಎಂಬ ಸಂಖ್ಯೆಯನ್ನು ಬಳಸುತ್ತಾರೆ. ‘ಅಬ್‍ಜದ್’ಎಂಬ ಅರಬೀ ಸಂಖ್ಯಾಶಾಸ್ತ್ರದ ಗಣನೆಯ ಪ್ರಕಾರ ಪ್ರಸ್ತುತ ವಾಕ್ಯದ ಮೊತ್ತವೇ 786 ಆಗುತ್ತದೆ. ಕೆಲವರು ಪವಿತ್ರ ಕುರ್‍ಆನಿನ ವಾಕ್ಯಕ್ಕೆ ಅಗೌರವ ಆಗದಿರಲಿ ಎಂಬ ಉದ್ದೇಶದಿಂದ ತಮ್ಮ ಪತ್ರಗಳಲ್ಲಿ ‘786’ ಸಂಖ್ಯೆಯನ್ನು ಬರೆಯುತ್ತಾರೆ. ಮುಸ್ಲಿಮರು ತಮ್ಮ ಎಲ್ಲಾ ಕೆಲಸಗಳನ್ನು ಪರಮ ದಯಾಮನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದಲೇ ಆರಂಭಿಸಬೇಕು ಎಂಬ ಪ್ರವಾದಿ ಮುಹಮ್ಮದ್‍ರವರ(ಸ) ಆದೇಶವನ್ನು ಪಾಲಿಸುವುದೇ ಹೀಗೆ ಮಾಡುವುದರ ಉದ್ದೇಶ. ಆದರೆ ಈ ರೀತಿ ‘786’ ಸಂಖ್ಯೆಯನ್ನು ಬಳಸುವುದಕ್ಕೆ ಕುರ್‍ಆನ್- ಹದೀಸ್‍ಗಳಲ್ಲಿ ಯಾವುದೇ ಪುರಾವೆಯಿಲ್ಲ. ಅಂತೆಯೇ ಆ ಸಂಖ್ಯೆಗೆ ಯಾವುದೇ ಧಾರ್ಮಿಕ ಮಹತ್ವವೂ ಇಲ್ಲ.
ಇಸ್ಲಾಮಿನ ಪಂಚಾಂಗವು ಚಾಂದ್ರಮಾನ ಕಾಲಗಣನೆಯನ್ನು ಅವಲಂಭಿಸಿದೆ. ಹಿಜರಿ ಶಕೆಯೂ ಚಾಂದ್ರಮಾನ ವರ್ಷವನ್ನಾಧರಿಸಿದೆ. ಹಜ್ಜ್ ಯಾತ್ರೆ ಮತ್ತು ಉಪವಾಸ ವ್ರತದಂತಹ ಪ್ರಮುಖ ಆರಾಧನಾ ಕರ್ಮಗಳು ಮತ್ತು ಇಸ್ಲಾಮಿನ ಎರಡು ಪ್ರಮುಖ ಹಬ್ಬಗಳಾದ ‘ಈದುಲ್ ಫಿತೃ’ (ರಮಝಾನ್ ಹಬ್ಬ) ಮತ್ತು ‘ಈದುಲ್ ಅಝ್‍ಹಾ’ (ಬಕ್ರೀದ್) ಆಚರಣೆಯೂ ಚಂದ್ರದರ್ಶನವನ್ನಾಧರಿಸಿದೆ. ಆದುದರಿಂದ ಟರ್ಕಿಯ ಖಿಲಾಫತ್‍ನ ಕಾಲದಲ್ಲಿ ಬಾಲಚಂದ್ರ ಮತ್ತು ನಕ್ಷತ್ರವನ್ನು ಅಲ್ಲಿಯ ರಾಷ್ಟ್ರ ಧ್ವಜದಲ್ಲಿ ಅಳವಡಿಸಲಾಯಿತು. ಅಂದಿನಿಂದ ಅನೇಕ ಮುಸ್ಲಿಮರು ಅದನ್ನು ಒಂದು ಉತ್ತಮ ಸಂಕೇತದ ರೂಪದಲ್ಲಿ ಬಳಸುತ್ತಾರೆ. ಆದರೆ ಅದಕ್ಕೂ ಯಾವುದೇ ಧಾರ್ಮಿಕ ಮಹತ್ವವಿಲ್ಲ.

SHARE THIS POST VIA

About admin

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *