Home / ಪ್ರಶ್ನೋತ್ತರ / ವಿಶ್ವದಲ್ಲಿರುವ ಮುಸ್ಲಿಮರು ಭಯೋತ್ಪಾದಕರೂ, ಉಗ್ರಗಾಮಿಗಳು ಆಗಲು ಇಸ್ಲಾಮ್ ಕಾರಣವಲ್ಲವೇ?

ವಿಶ್ವದಲ್ಲಿರುವ ಮುಸ್ಲಿಮರು ಭಯೋತ್ಪಾದಕರೂ, ಉಗ್ರಗಾಮಿಗಳು ಆಗಲು ಇಸ್ಲಾಮ್ ಕಾರಣವಲ್ಲವೇ?

ಇದು ಸ್ವಲ್ಪ ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. ಕ್ರಿ.ಶ. 1492 ಮಾನವ ಇತಿಹಾಸದ ಭಯಾನಕರವಾದ ಮಹಾ ದುರಂತ ನಡೆದ ವರ್ಷವಾಗಿತ್ತು. ಸುದೀರ್ಘ ಕಾಲದ ತನಕ ವೈಜ್ಞಾನಿಕ-ತಂತ್ವಜ್ಞಾನ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ನಾಗರಿಕತೆಯ ಎಲ್ಲಾ ರಂಗಗಳಲ್ಲಿಯೂ ವಿಶ್ವದ ನೇತೃತ್ವವನ್ನು ವಹಿಸಿದ್ದ ಮುಸ್ಲಿಮ್ ಸ್ಪೇಯಿನ್ ನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು.

ಗ್ರಾನಡೆ ನಗರವು ಮಾತ್ರ ಆತನ ಅಧೀನದಲ್ಲಿತ್ತು. 1492 ಜನವರಿ ಕೊನೆಯಲ್ಲಿ ಅವರನ್ನು ಪದಚ್ಯುತಿಗೊಳಿಸಿ ಸ್ಪೇಯಿನಿಗರು ಆಧಿಪತ್ಯ ಸ್ಥಾಪಿಸಿದರು. ಸ್ಟೇಯಿನ್‌ನ ಪತನ ಪೂರ್ತಿಯಾದ ಅದೇ ವರ್ಷವೇ ಸಾಮ್ರಾಜ್ಯಶಾಹಿತ್ವದ ವಸಾಹತು ಆರಂಭಗೊಂಡಿತೆಂಬುದು ಗಮನಾರ್ಹ. 1492ರಲ್ಲೇ ಕೊಲಂಬಸ್ ತನ್ನ ದಂಡಯಾತ್ರೆಯನ್ನು ಆರಂಭಿಸಿದ್ದ.

ಅದೇ ವರ್ಷ ಅಕ್ಟೋಬರ್ 12ಕ್ಕೆ ಆತ ಗ್ವನಾಹಾನಿ ದ್ವೀಪಕ್ಕೆ ತಲುಪಿದ. ಆಯುಧಗಳೊಂದಿಗೆ ಹಡಗಿನಿಂದ ಇಳಿದ ಕೊಲಂಬಸ್ ಹಾಗೂ ಅನುಚರರು ಅಂದಿನಿಂದ ಈ ನಾಡು ಸ್ಪಾನಿಶ್ ರಾಜನದ್ದೆಂದು ಘೋಷಿಸಿದ. ಅಲ್ಲಿನವರಿಗೆ ಅರ್ಥವಾಗದ ಸ್ಪಾನಿಶ್ ಭಾಷೆಯಲ್ಲಿ ಓದಿ ಕೇಳಿಸಿದ. ಅದನ್ನು ಅನುಸರಿಸದಿದ್ದರೆ ಪರಿಣಾಮವೇನಾದೀತೆಂಬುದನ್ನು ವಿವರಿಸಿದ. ನಾನು ದೃಢವಾಗಿ ಹೇಳುತ್ತಿದ್ದೇನೆ: ದೇವನ ಸಹಾಯದಿಂದ ನಾವು ನಿಮ್ಮ ದೇಶದೊಳಗೆ ಬಲಾತ್ಕಾರವಾಗಿ ಪ್ರವೇಶಿಸುತ್ತೇವೆ. ನಿಮ್ಮೊಂದಿಗೆ ಸಾಧ್ಯವಾದ ರೀತಿಯಲ್ಲಿ ಯುದ್ಧ ಮಾಡುತ್ತೇವೆ. ನಿಮ್ಮನ್ನು ಕ್ರೈಸ್ತ ಚರ್ಚ್‌ಗಳ ಹಾಗೂ ಧರ್ಮಗಳಿಗೆ ಅಧೀನಗೊಳಿಸುತ್ತೇವೆ. ನಿಮ್ಮ ಪತ್ನಿಯರನ್ನೂ ಮಕ್ಕಳನ್ನೆಲ್ಲಾ ಬಂಧಿಸಿ ಗುಲಾಮರನ್ನಾಗಿಸುತ್ತೇವೆ. ನಿಮ್ಮ ಸೊತ್ತುಗಳನ್ನು ವಶಪಡಿಸುತ್ತೇವೆ. ನಮ್ಮಿಂದಾಗುವ ಎಲ್ಲಾ ವಿಧದ ದ್ರೋಹ ಹಾಗೂ ನಾಶಕ್ಕಾಗಿ ಪ್ರಯತ್ನಿಸುತ್ತೇವೆ. (David Estannard, American Holocaust, The Conquest of the New World, oup 1993,p66) (ಉದ್ಧರಣೆ: ಪಾಶ್ಚಿತ್ಯಿಕರಣದ 500 ವರ್ಷ, ಐ, ಪಿ, ಎಚ್, ಪುಟ 17)

ಇದರೊಂದಿಗೆ ಯೂರೋಪಿನ ವಶಾಹತುಶಾಹಿತ್ವ ಆರಂಭಗೊಂಡಿತು. ಮುಸ್ಲಿಮ್ ಸ್ಪೇಯಿನ್ ಕುಸಿದು ಬಿದ್ದು ಸರಿಯಾಗಿ 6 ವರ್ಷ ಕಳೆದಾಗ ಅಂದರೆ 1498 ರಲ್ಲಿ ವಾಸ್ಕೋಡಗಾಮ ಕೋಝಿಕ್ಕೋಡ್ ಗೆ ತಲುಪಿದ.

1492ರಲ್ಲಿ ಅಮೇರಿಕಾದಲ್ಲಿ ಏಳುವರೆ ಕೋಟಿಯಿಂದ ಹತ್ತು ಕೋಟಿಯಷ್ಟು ಆದಿವಾಸಿಗಳಿದ್ದರು. ಯೂರೋಪಿಯನ್ ವಶಾಹತು ಶಾಹಿತ್ವದಿಂದ ಒಂದೂವರೆ ಶತಮಾನದಲ್ಲಿ ತೊಂಬತ್ತು ಶೇಕಡಾ ಆದಿವಾಸಿಗಳು ಸ್ವಂತ ನೆಲದಿಂದ ಹೊಡೆದೋಡಿಸಲ್ಪಟ್ಟರು. ಅತ್ಯಂತ ಹೇಯ ಕ್ರೂರ ಕೃತ್ಯಗಳಿಂದ, ಸಾಮೂಹಿಕ ಹತ್ಯಾಕಾಂಡಗಳಿಂದ ಆ ದೇಶದ ನಿವಾಸಿಗಳನ್ನು ನಿರ್ನಾಮಗೊಳಿಸಿದ ಬಳಿಕ 1776ರ ಸ್ವಾತಂತ್ರ್ಯ ಘೋಷಣೆಯೊಂದಿಗೆ ಯೂರೋಪಿಯನ್ನರು ಅಮೇರಿಕಾವನ್ನು ಅಧೀನಗೊಳಿಸಿದರು. ಹೀಗೆ ಅನ್ಯಾಯ, ಅತಿಕ್ರಮದ ಘೋಷಣೆಗಳಿಂದ ಇಂದಿನ ಅಮೇರಿಕಾ ಸ್ಥಾಪಿತವಾಯಿತು.

1527 ರಲ್ಲಿ ಪೋರ್ಚುಗೀಸರು ಬಹರೈನನ್ನು ವಶಪಡಿಸಿಕೊಂಡರು. ಕೆಲವೇ ಸಮಯಗಳಲ್ಲಿ ಓಮನ್ ಕೂಡಾ ಅವರ ಅಧೀನವಾಯಿತು. ಆದರೂ ಉಸ್ಮಾನಿಗಳು ಆ ದೇಶವನ್ನು ಮರಳಿ ಪಡೆದರು. ನಂತರ 1798-1801 ರ ಕಾಲದಲ್ಲಿ ನೆಪೋಲಿಯನ್‌ನ ಫ್ರೆಂಚ್ ಸೇನೆಯು ಈಜಿಪ್ಟ್ ನ ಅಲೆಕ್ಸಾಂಡ್ರಿಯಾ, ಅಕ್ಕಾ ನಗರಗಳನ್ನು ಅಧೀನಗೊಳಿಸಿತು.

ನಂತರ ಎರಡು ಶತಮಾನಗಳು ಅರಬ್ -ಮುಸ್ಲಿಮ್ ರಾಷ್ಟ್ರಗಳು ಇತರ ಏಷ್ಯ-ಆಫ್ರಿಕಾ ದೇಶಗಳಂತೆ ಪಾಶ್ಚಾತ್ಯ ವಸಾಹತು ಶಾಹಿತ್ವದ ಹಿಡಿತಲ್ಲಿದ್ದವು. ಫ್ರಾನ್ಸ್ 1830 ರಲ್ಲಿ ಅಲ್ಜಿರಿಯವನ್ನು 1859ರಲ್ಲಿ ಜಿಬೂಟ್ಟಿಯನ್ನು 1881ರಲ್ಲಿ ಟುನಿಷ್ಯಾವನ್ನು ಹಾಗೂ 1919ರಲ್ಲಿ ಮೌರಿತಾನಿಯವನ್ನು ವಶಪಡಿಸಿತು. ಇಟಲಿ 1859ರಲ್ಲಿ ಸೋಮಾಲಿಯಾವನ್ನು 1911ರಲ್ಲಿ ಲಿಬಿಯಾವನ್ನು ಹಾಗೂ 1880ರಲ್ಲಿ ಐರಿತ್ರಿಯವನ್ನು ಅಧೀನಗೊಳಿಸಿತು. ಬ್ರಿಟನ್ 1800ರಲ್ಲಿ ಮಸ್ಕತ್, 1820ರಲ್ಲಿ ಒಮನ್‌ನ ಉಳಿದ ಭಾಗ 1839ರಲ್ಲಿ ಏಥೆನ್, 1863ರಲ್ಲಿ ಬಹೈನ್, 1878ರಲ್ಲಿ ಸೈಪ್ರಸ್, 1882ರಲ್ಲಿ ಈಜಿಪ್ಟ್ 1898ರಲ್ಲಿ ಸುಡಾನ್, 1899ರಲ್ಲಿ ಕುವೈಟ್‌ಗಳನ್ನು ವಶಪಡಿಸಿತು. 1916ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಜಂಟಿಯಾಗಿ ಮಾಡಿದ ಸೈಕ್ಸ್-ಪಿ ಕ್ಕೋಟ್ ರಹಸ್ಯ ಕರಾರಿನಂತೆ ಉಸ್ಮಾನಿಯಾ ಖಲೀಫರ ಅಧೀನದಲ್ಲಿದ್ದ ಅರಬ್ ಸಂಸ್ಥಾನಗಳನ್ನು ಬ್ರಿಟನ್ ಮತ್ತು ಫ್ರಾನ್ಸ್ ಹಂಚಿಕೊಂಡವು.

ಹೀಗೆ ಇರಾಕ್, ಜೋರ್ಡಾನ್, ಫೆಲೆಸ್ತೀನ್, ಕತಾರ್‌ಗಳು ಬ್ರಿಟನ್‌ಗೆ ಅಧೀನವಾದರೆ ಸಿರಿಯಾ, ಲೆಬನಾನ್ ಫ್ರಾನ್ಸ್‌ನ ಹಿಡಿತಕ್ಕೋಳಗಾದವು. ಮೊರೊಕ್ಕೊ ಸ್ಪೈನ್‌ ನ, ಇಂಡೋನೇಶ್ಯಾ ಡಚ್ಚರ ವಶಾಹತುಗಳಾದವು. ಭಾರತ ಮತ್ತು ಅಫಘಾನಿಸ್ತಾನವು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಅಧೀನವಾದಂತೆ ಈ ಎಲ್ಲಾ ರಾಷ್ಟ್ರಗಳ ಪಾಡೂ ಅದೇ ಆಗಿತ್ತು.

ಕಳೆದ ಶತಮಾನದ ಮೊದಲ ಹಂತ ಕಳೆದೊಡನೆ ಪಶ್ಚಿಮದ ರಾಷ್ಟ್ರಗಳಲ್ಲಿ ಸ್ವಾತಂತ್ಯ ಹೋರಾಟ ಶಕ್ತವಾಯಿತು. ಅದರ ಫಲವಾಗಿ 1932 ರಲ್ಲಿ ಇರಾಕ್, 1946 ರಲ್ಲಿ ಸಿರಿಯಾ, ಲೆಬನಾನ್, 1951ರಲ್ಲಿ ಲಿಬಿಯಾ, ಒಮನ್ 1952ರಲ್ಲಿ ಈಜಿಪ್ಟ್, 1956ರಲ್ಲಿ ಮೊರಕ್ಕೋ, ಸುಡಾನ್ ಮತ್ತು ಟುನಿಷ್ಯಾ 1958 ರಲ್ಲಿ ಜೋರ್ಡಾನ್ 1959 ರಲ್ಲಿ ಮೌರಿತಾನಿಯ 1960 ರಲ್ಲಿ ಸೋಮಾಲಿಯಾ 1961ರಲ್ಲಿ ಕುವೈತ್ 1962 ರಲ್ಲಿ ಅಲ್ಜಿರಿಯಾ, 1968 ರಲ್ಲಿ ಯಮನ್ 1971ರಲ್ಲಿ ಕತರ್, ಬಹರೈನ್, ಅರಬ್ ಎಮಿರೇಟ್ಸ್ ಹಾಗೂ 1972 ರಲ್ಲಿ ಜಿಬೂಟಿ ಮುಂತಾದ ರಾಷ್ಟ್ರಗಳು ಸ್ವಾತಂತ್ರ್ಯ ಪಡೆದುವು.

ಆದರೆ ಆ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಹಿತವನ್ನು ಸಂರಕ್ಷಿಸುವ ಸರ್ವಾಧಿಕಾರಿಗಳು, ಸ್ಟೇಚ್ಛಾಧಿಪತಿಗಳಾದ ರಾಜಕುಮಾರರನ್ನು, ಚಕ್ರವರ್ತಿಗಳನ್ನು ಸುಲ್ತಾನರನ್ನು ಅಧಿಕಾರ ಸ್ಥಾನದಲ್ಲಿ ಕುಳ್ಳಿರಿಸಿದ ಬಳಿಕವೇ ಆ ರಾಷ್ಟ್ರಗಳಿಂದ ವಿದಾಯ ಹೇಳಿದರು. ಮಾತ್ರವಲ್ಲ ಈ ರಾಷ್ಟ್ರಗಳ ನಡುವೆ ಪರಿಹಾರ ಅಸಾಧ್ಯವಾದಂತಹ ಗಡಿ ವಿವಾದಗಳನ್ನು ಹುಟ್ಟುಹಾಕಿದರು. ಯಮನ್ – ಸೌದಿ ಅರೇಬಿಯಾ, ಇರಾನ್-ಇರಾಕ್, ಇರಾಕ್ -ಕುವೈತ್ ಮತ್ತು ಇರಾನ್-ಯು.ಎ.ಇ ಗಳ ನಡುವೆ ಇಂದಿಗೂ ಪರಿಹಾರ ಕಾಣದೆ ಉಳಿದಿರುವ ಸಮಸ್ಯೆಗಳಿಗೆ ಸಾಮ್ರಾಜ್ಯಶಾಹಿ ಶಕ್ತಿಗಳ ಕುತಂತ್ರವೇ ಕಾರಣ. ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳು ಒಂದಾಗಲು ಈ ಗಡಿ ವಿವಾದಗಳು ನಿರಂತರ ತಡೆಯೊಡ್ಡುವುದಲ್ಲದೆ ಸಂಘರ್ಷಗಳಿಗೂ ಕಾರಣವಾಗುತ್ತಿದೆ. ಅಮೇರಿಕ ಹಾಗೂ ಇತರ ಬಂಡವಾಳಶಾಹಿ ರಾಷ್ಟ್ರಗಳಿಗೆ ಅಲ್ಲಿನ ಪೆಟ್ರೋಲ್, ಅನಿಲ ಹಾಗೂ ಇತರ ಕಚ್ಚಾ ಪದಾರ್ಥಗಳನ್ನು ಅಪಹರಿಸಲು ಹಾಗೂ ಆ ದೇಶಗಳನ್ನು ತಮ್ಮ ಶಸ್ತ್ರಾಸ್ತ್ರ ಮಾರುಕಟ್ಟೆಯಾಗಿ ಬದಲಾಯಿಸಲು ಅವಕಾಶ ಮಾಡಿಕೊಡುತ್ತಿದೆ.

ಸಾಮ್ರಾಜ್ಯಶಾಹಿ ಶಕ್ತಿಗಳೇ ಹುಟ್ಟು ಹಾಕಿದ ವಿವಾದವು ಇರಾಕ್ ಮತ್ತು ಕುವೈತ್‌ ನ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಇದು ಅಮೇರಿಕಾಕ್ಕೆ ಆ ಭಾಗಗಳಲ್ಲಿ ತನ್ನ ಪಾರಮ್ಯ ಮೆರೆಯಲು ಅವಕಾಶ ನೀಡಿತು. ಅಮೇರಿಕಾದ ನೈಜ ಉದ್ದೇಶವು ಅದೇ ಆಗಿತ್ತು. ಅರಬ್-ಮುಸ್ಲಿಮ್ ರಾಷ್ಟ್ರಗಳು ಸ್ವತಂತ್ರ್ಯಗೊಂಡ ಬಳಿಕವೂ ಅಲ್ಲೆಲ್ಲಾ ಅದೃಶ್ಯ ಸಾಮ್ರಾಜ್ಯಶಾಹಿತ್ವ, ವಂಚನೆ ಹಾಗೂ ನಿಯಂತ್ರಣವು ಇಂದಿಗೂ ಪ್ರಬಲವಾಗಿದೆ. ಆ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು, ಪ್ರಕೃತಿಯ ಕೊಡುಗೆಗಳನ್ನು ತಮ್ಮಿಚ್ಚೆಯಂತೆ ವಿನಿಯೋಗಿಸಲು, ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲಿನ ಆಡಳಿತಗಾರರು ತಿಳಿದೋ ತಿಳಿಯದೆಯೋ, ನಿರ್ಬಂದಿತರಾಗಿಯೋ, ಅಲ್ಲದೆಯೋ ಪಾಶ್ಚಾತ್ಯ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದಾರೆ.

ಇರಾಕ್‌ನಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ದೊರೆತೊಡನೆ ಅಮೇರಿಕಾವು ಅರಬ್ ರಾಷ್ಟ್ರಗಳ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿ, ತನ್ನ ಸೈನಿಕರನ್ನು ಪೋಷಿಸುವ ಹೊಣೆಯನ್ನು ಆರ್ಥಿಕ ಮುಗ್ಗಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಆ ದೇಶಗಳ ತಲೆಗೆ ಕಟ್ಟಿ ಹಾಕಿತು. ಇಂದು ಪ್ರಮುಖ ಅರಬ್ ರಾಷ್ಟ್ರಗಳಲ್ಲೆಲ್ಲಾ ಅಮೇರಿಕಾಕ್ಕೆ ಶಸ್ತ್ರಾಸ್ತ್ರ ಕೇಂದ್ರಗಳೂ, ಸೈನಿಕ ಕೇಂದ್ರಗಳೂ ಇವೆ. ಅದನ್ನು ತೆರವುಗೊಳಿಸುವಂತೆ ಹೇಳುವುದನ್ನೂ ಸಾಮ್ರಾಜ್ಯಶಾಹಿಯ ಮೋಸದಾಟವನ್ನು ಕೊನೆಗೊಳಿಸಬೇಕೆಂದು ವಾದಿಸುವುದನ್ನು ಪಾಶ್ಚಾತ್ಯ ಶಕ್ತಿಗಳು ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿದೆ.

ಕಳೆದ ಶತಮಾನದ ಕೊನೆಯ ದಶಕಗಳ ವರೆಗೂ ಜಾಗತಿಕ ರಾಷ್ಟ್ರಗಳ ಶಕ್ತಿಯಲ್ಲಿ ಸಂತುಲಿತತೆ ಇತ್ತು. ಆದರೆ ಸೋಶಲಿಸ್ಟ್ ರಷ್ಯಾ, ಪತನಗೊಂಡ ಇತಿಹಾಸ ಪುಟವನ್ನು
ಸೇರುವುದರೊಂದಿಗೆ ಶೀತಲಸಮರವು ಕೊನೆಗೊಂಡಿತು. ಲೋಕವು ಅಮೇರಿಕಾದ ನೇತೃತ್ವದಲ್ಲಿ ಏಕಧ್ರುವೀಕರಣಗೊಂಡಿತು. ಗಲ್ಫ್ ಯುದ್ಧದಲ್ಲಿ ಅಮೇರಿಕಾ, ವಿಜಯ ಹೊಂದುವುದರೊಂದಿಗೆ ಆ ದೇಶವು ವಿಶ್ವ ಪೊಲೀಸನಂತೆ ವರ್ತಿಸಲಾರಂಭಿಸಿತು. ತನ್ನ ಹಿತಾಸಕ್ತಿಗೆ ವಿರೋಧ ವ್ಯಕ್ತಪಡಿಸುವವರನ್ನು ಉಗ್ರವಾದಿಗಳು, ಹಾಗೂ ಭಯೋತ್ಪಾದಕರೆಂಬ ಮುದ್ರೆಯೊತ್ತಿ ಅವರನ್ನೆಲ್ಲಾ ಸರ್ವನಾಶ ಮಾಡಲು ಹೊರಟಿತು.

ಪಾಶ್ಚಾತ್ಯ ಮೈತ್ರಿಯ ಕಮ್ಯೂನಿಸ್ಟ್ ಪತನದ ಬಳಿಕ ಇಸ್ಲಾಮನ್ನು ತನ್ನ ಮುಖ್ಯ ಶತ್ರುವಾಗಿ ಪರಿಗಣಿಸಿತು. ಅಮೇರಿಕಾ ಹಾಗೂ ಅದರ ನಾಯಕತ್ವದಲ್ಲಿರುವ ನ್ಯಾಟೋ ಈ ವಿಷಯವನ್ನು ಸಂಶಯಾತೀತವಾಗಿ ಸ್ಪಷ್ಟಪಡಿಸಿದೆ. ಆದ್ದರಿಂದ ವಿಶ್ವದಲ್ಲಿರುವ ಇಸ್ಲಾಮೀ ನವೋತ್ಥಾನವನ್ನು ಇಸ್ಲಾಮಿನ ಏಳಿಗೆಯನ್ನು ಚಿವುಟಲು ಅಮೇರಿಕಾ ಮತ್ತದರ ಬೆಂಬಲಿಗರು ಗರಿಷ್ಠ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಆಡನ್ನು ನಾಯಿಯನ್ನಾಗಿ ಮಾಡುವ ರೀತಿಯ ಪ್ರಚಾರ ನಡೆಸಲಾಗುತ್ತದೆ. ಮುಸ್ಲಿಮರಿಗೆ ಭಯೋತ್ಪಾದರು, ಉಗ್ರಗಾಮಿಗಳು, ಮತಾಂಧರು ಮುಂತಾದ ಪದಪ್ರಯೋಗ ಮಾಡಲಾಗುತ್ತದೆ. 1993ರಲ್ಲಿ ಅಮೇರಿಕಾ ಕಾಂಗ್ರೆಸ್ ಅಂಗೀಕರಿಸಿ, ಪ್ರಕಟಿಸಿದ ಕೇವಲ 93 ಪುಟಗಳ ‘ಹೊಸ ಲೋಕದ ಇಸ್ಲಾಮಿಸ್ಟ್‌ಗಳು’ ಎಂಬ ಅದಿಕೃತ ದಾಖಲೆಯಲ್ಲಿ 288 ಬಾರಿ ಭಯೋತ್ಪಾದಕರು, ಭಯೋತ್ಪಾದನೆ ಎಂಬ ಪದವನ್ನು ಪುನರಾವರ್ತಿಸಲಾಗಿದೆ. ಝಿಯೊನಿಸ್ಟರೊಂದಿಗೆ ಸಹಮತವಿರುವ ಫಾನ್ ಪೋರೆಯ್‌ಸ್ಟ್ ಯೋಸಫ್ ಸೋದಾನ್ ಸ್ಕಿ ಎಂಬವರು ಇದನ್ನು ತಯಾರಿಸಿದ್ದಾರೆ.

ವಿಶ್ವದಲ್ಲಿ ಸಾಮೂಹಿಕ ಹತ್ಯಕಾಂಡಗಳನ್ನೂ, ಭಯೋತ್ಪಾದನಾ ಕೃತ್ಯಗಳನ್ನೂ, ಯುದ್ಧಗಳನ್ನೂ ನಡೆಸುವ ನೈಜ ಅಪರಾಧಿಗಳು ಯಾರು ? ಒಂದನೇ ಮಹಾ ಯುದ್ಧದಲ್ಲಿ 80 ಲಕ್ಷ, ಎರಡನೇ ಮಹಾ ಯುದ್ಧದಲ್ಲಿ ಐದು ಕೋಟಿ ಮತ್ತು ವಿಯಟ್ನಾಂನಲ್ಲಿ 30 ಲಕ್ಷ ಜನರು ಕೊಲ್ಲಲ್ಪಟ್ಟರು. ಪನಾಮ, ಗೋಟ್ಟಿಮಲ, ನಿಕಾರಗುವ ಕಂಬೋಡಿಯಾ, ಕೊರಿಯ, ದಕ್ಷಿಣ ಆಫ್ರಿಕಾಗಳಲ್ಲಿ ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಇವುಗಳಲ್ಲಿ ಇಸ್ಲಾಮಿಗೋ, ಮುಸ್ಲಿಮರಿಗೋ ಯಾವುದೇ ಪಾತ್ರವಿಲ್ಲ.

ಜಪಾನ್ ದೇಶವು ಯುದ್ಧದಿಂದ ಹಿಂದೆ ಸರಿಯಲು ಸನ್ನದ್ಧವಾದರೂ ಹಿರೋಶಿಮಾ ನಾಗಾಸಾಕಿಯಲ್ಲಿ ಅಣುಬಾಂಬ್ ಸುರಿಸಿದ ಭಯೋತ್ಪಾದಕ ರಾಷ್ಟ್ರವಾದ ಅಮೇರಿಕಾವೇ ಆ ಹೆಸರಿಗೆ ಅರ್ಹವಾಗಿದೆ. ತಮ್ಮ ಕುತಂತ್ರಗಳಿಗೆ, ಹಿತಾಸಕ್ತಿಗೆ ವಿರೋಧ ಸೂಚಿಸುವ ದೇಶಗಳನ್ನು ವಿರೋಧಿಸುತ್ತದೆ. ತನ್ನ ದಾರಿಗೆ ಬರದ ರಾಷ್ಟ್ರಗಳಲ್ಲೆಲ್ಲಾ ಭಯೋತ್ಪಾದಕ ಕೃತ್ಯವನ್ನು ನಡೆಸುತ್ತದೆ. ಗುಪ್ತಚರ ಸಂಘಟನೆಯಾದ ಸಿ.ಐ.ಎ ಯನ್ನು ಭಯೋತ್ಪಾದನಾ ಕೃತ್ಯದಲ್ಲಿ ಮುಂಚೂಣಿಯಲ್ಲಿರುವ ಝಿಯೋನಿಷ್ಟ್ ಗಳನ್ನೂ ಅದಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಆಂತರಿಕ ಸಮಸ್ಯೆಗಳಿಂದ ಜಾರಿಕೊಳ್ಳಲೂ ಕೂಡ ವಿಶ್ವದಲ್ಲಿ ಯುದ್ಧಗಳು ಉಂಟಾಗುತ್ತದೆ. ಅಮೇರಿಕನ್ ರಾಜಕೀಯ ವಲಯಗಳಲ್ಲಿ ಸುದ್ದಿಯಲ್ಲಿರುವ ಮಿಸ್ಟರ್ ರೋಸ್ಪೆರೋ ಹೇಳುತ್ತಾರೆ: ‘ಆಂತರಿಕ ಪರಿಸ್ಥಿತಿಯು ಪ್ರತಿಕೂಲವಾಗುವಾಗ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ನಾವು ವಿಶ್ವದಲ್ಲಿ ಸಣ್ಣ ಪುಟ್ಟ ಯುದ್ಧಗಳನ್ನು ಆಯೋಜಿಸುತ್ತೇವೆ.’

ಹೀಗೆ ಕಳೆದ ಒಂದು ಶತಮಾನದೊಳಗೆ ಅಮೇರಿಕಾ ವಿಶ್ವದ ಐವತ್ತಕ್ಕಿಂತಲೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೂಗುತೋರಿಸಿ ಸಂಘರ್ಷವನ್ನುಂಟು ಮಾಡಿ, ಹಲವಾರು ಸಾಮೂಹಿಕ ಹತ್ಯಾಕಾಂಡಗಳಿಗೆ ಕಾರಣವಾಗಿದೆ. ಇಂತಹ ಭಯೋತ್ಪಾದಕ ರಾಷ್ಟ್ರವು ಮಾಡುವ ಪ್ರಚಾರವೇ ಇಸ್ಲಾಮ್ ಮತ್ತು ಮುಸ್ಲಿಮ್‌ ಮೇಲಿನ ತಪ್ಪುಭಾವನೆಗಳು ಹೆಚ್ಚಲು ಕಾರಣವಾಗಿದೆ. ಎಲ್ಲಾ ವಿಧದ ಪ್ರಚಾರ ಮಾಧ್ಯಮಗಳನ್ನು ಹಿಡಿತದಲ್ಲಿರಿಸಿರುವ ಅಮೇರಿಕಾ ಮುಸ್ಲಿಮರನ್ನು ಭಯೋತ್ಪಾದಕರೆಂದು ಚಿತ್ರಿಸಲು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ.

ವಾಸ್ತವದಲ್ಲಿ ಇಂದು ವಿಶ್ವದಲ್ಲಿ ಅತ್ಯಂತ ಭೀಕರ ಕೃತ್ಯವನ್ನು ಶಾಂತಿಯ ರಕ್ಷಕನೆಂದು ತಿಳಿಯಲಾಗಿರುವ ವಿಶ್ವಸಂಸ್ಥೆಯ ಸೆಕ್ಯೂರಿಟಿ ಕೌನ್ಸಿಲ್‌ ನಡೆಸುತ್ತಿದೆ. ಸಾಮಾನ್ಯವಾಗಿ ನಾವು ಒಂದು ದೇಶದ ಆಡಳಿತಗಾರನ ಮೇಲಿನ ದ್ವೇಷದಿಂದ ಆ ದೇಶದ ವಿಮಾನವನ್ನು ಅಪಹರಿಸಿ ಅದರಲ್ಲಿರುವ ಮುನ್ನೂರೋ, ಐನೂರೋ ಯಾತ್ರಿಕರನ್ನು ಒತ್ತೆಯಿರಿಸಿದರೆ ನಾವು ಅವರನ್ನು ಉಗ್ರಗಾಮಿಗಳೆಂದೂ, ಭಯೋತ್ಪಾದಕರೆಂದೂ ಕರೆಯುತ್ತೇವೆ. ಖಂಡಿತವಾಗಿಯೂ ಅಪಹರಣಕಾರರಿಗೆ ಅದೇ ಸೂಕ್ತ ಹೆಸರು. ನಿರಪರಾಧಿಗಳಾದ ಪ್ರಯಾಣಿಕರನ್ನು ಮಾನಸಿಕ ಮತ್ತು ದೈಹಿಕ ಹಿಂಸೆಗೊಳಪಡಿಸುವುದು ಕ್ರೂರ ಹಾಗೂ ಅಮಾನವೀಯ ಕೃತ್ಯವಾಗಿದೆ. ಆದ್ದರಿಂದಲೇ ಅದು ಧರ್ಮ ವಿರೋಧಿಯೂ ಹೌದು. ಆದರೆ ಸದ್ದಾಂ ಹುಸೈನ್ ಎಂಬ ಆಡಳಿತಗಾರನ ಮೇಲಿನ ದ್ವೇಷದಿಂದ ಇರಾಕ್‌ನ ಸುಮಾರು ಒಂದೂಕಾಲು ಕೋಟಿ ಮನುಷ್ಯರನ್ನು ಹನ್ನೊಂದು ವರ್ಷದಿಂದ ಆಹಾರ, ಔಷಧಿ ನೀಡದೆ ಬಂದಿಗಳನ್ನಾಗಿಸಿ ಆರುಲಕ್ಷ ಮಕ್ಕಳೂ ಸೇರಿದಂತೆ ಹನ್ನೊಂದು ಲಕ್ಷ ಜನರನ್ನು ವಿಶ್ವಸಂಸ್ಥೆಯು ಕೊಂದು ಮುಗಿಸಿತು. ಹೀಗೆ ವಿಶ್ವದ ಅತ್ಯಂತ ಕ್ರೂರ ಕೊಲೆಗಡುಕನಾಗಿ ಬದಲಾದ ಭದ್ರತಾ ಸಂಸ್ಥೆಯು ಈಗಲೂ ಶಾಂತಿಯ ಕಾವಲುಗಾರನೆಂದೇ ಬಿಂಬಿಸಲ್ಪಟ್ಟಿದೆ. ಅಮೇರಿಕಾದ ಹೊರತು ಬೇರಾವ ಮಾನದಂಡವೂ ಇಂದು ಲೋಕಕ್ಕಿಲ್ಲದಿರುವುದೇ ಇದಕ್ಕೆ ಕಾರಣ.

ಮುಸ್ಲಿಮರಲ್ಲಿ ಉಗ್ರಗಾಮಿಗಳು ಯಾ ಭಯೋತ್ಪಾದಕರು ಇಲ್ಲವೇ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಇಸ್ಲಾಮಿನ ಹೆಸರಿಗೆ ಕಳಂಕ ತರುವ, ಗೌರವವನ್ನು ಕೆಡಿಸುವ ಅಪಾಯಕಾರಿಯೂ, ವಿವೇಕರಹಿತವೂ ಆದ ಕೃತ್ಯಗಳನ್ನೆಸಗುವವರನ್ನು ಕೆಲವೊಮ್ಮೆ ಕಾಣಬಹುದು ಮುಸ್ಲಿಮ್ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಿಂತನೆಗಳು ಮೂಡಿಬರಲು ಕಾರಣ, ಅಲ್ಲಿನ ಸರ್ವಾಧಿಕಾರಿ-ಸ್ಟೇಚ್ಛಾಧಿಪತಿ ಸರಕಾರಗಳು ಹಾಗೂ ಅವುಗಳಲೆಸಗುವ ಮಹಾ ಕೆಡುಕುಗಳಾಗಿವೆ. ಪ್ರಜಾಪ್ರಭುತ್ವ ರೀತಿಯಲ್ಲಿ ಶಾಂತಿಯುತ ಮಾರ್ಗಗಳಿಂದ ಜನರ ಅಭಿಲಾಷೆಯನ್ನು ಪ್ರತಿನಿಧಿಸುವ ಸರಕಾರವನ್ನು ಸ್ಥಾಪಿಸಲು ಹಾಗೂ ಆಡಳಿತ ವ್ಯವಸ್ಥೆಯ ಬದಲಾವಣೆಯ ಪ್ರಯತ್ನವನ್ನು ಸಾಮ್ರಾಜ್ಯಶಾಹಿ ಶಕ್ತಿಗಳು ಮಧ್ಯಪ್ರವೇಶಿಸಿ ಬುಡಮೇಲುಗೋಳಿಸಿ ಬಿಡುತ್ತದೆ.

ಇದರಿಂದ ನಿರಾಶೆ ಹೊಂದಿದ ಹಲವು ಯುವಕರು ಉಗ್ರವಾದಿ ಸಿದ್ಧಾಂತವನ್ನು ನೆಚ್ಚಿಕೊಂಡರು. ಮುಸ್ಲಿಮ್ ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಬಹುಸಂಖ್ಯಾತರೊಂದಿಗೆ ಆಡಳಿತ ಪಕ್ಷಗಳು ಸೇರಿ ಮಾಡುವಂತಹ ಭೀಕರ ಕೃತ್ಯಗಳು, ಕೆಲವು ಯುವಕರನ್ನು ಪ್ರತೀಕಾರವೆಸಗಲು ಪ್ರೇರೇಪಿಸುತ್ತದೆ. ಇದು ಅಪರೂಪದ ಕೆಲವು ಘಟನೆಗಳು ಮಾತ್ರ. ಅವುಗಳನ್ನು ವೈಭವೀಕರಿಸಿ, ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗುತ್ತಿದೆ.

ಇಸ್ಲಾಮ್ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಅದು ವ್ಯಕ್ತಿಗಳದ್ದಾಗಿರಬಹುದು, ಸಂಘಟನೆಗಳ, ಸರಕಾರಗಳ, ವಿಶ್ವಸಂಸ್ಥೆಯದ್ದೇ ಆಗಿರಬಹುದು. ಎಲ್ಲಾ ರೀತಿಯ ಉಗ್ರವಾದವನ್ನು ಅದು ಪ್ರಬಲವಾಗಿ ಖಂಡಿಸುತ್ತದೆ. ನಿರಪರಾಧಿಗಳ ಪ್ರಾಣ, ಆಸ್ತಿ ಪಾಸ್ತಿಗಳ ನಾಶಕ್ಕೆ ಕಾರಣವಾಗುವ ಭಯೋತ್ಪಾದಕ ಕೃತ್ಯವು ಧರ್ಮವಿರೋಧಿಯಾಗಿದೆ. ‘ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಶೋಭೆಯನ್ನುಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರು ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ’ ಎಂದು ಪವಿತ್ರ ಕುರ್ ಆನ್ ಸ್ಪಷ್ಟಪಡಿಸಿದೆ. (5:32)

ಆದ್ದರಿಂದ ನೈಜ ವಿಶ್ವಾಸಿಗಳಿಗೆ ಖಂಡಿತವಾಗಿಯೂ ಭಯೋತ್ಪಾದಕರಾಗಲು ಅಥವಾ ಉಗ್ರಗಾಮಿಗಳಾಗಲು ಸಾಧ್ಯವಿಲ್ಲ. ಅದರೊಂದಿಗೆ ವಿಶ್ವದಲ್ಲೆಡೆ ಮುಸ್ಲಿಮರು ಭಯೋತ್ಪಾ ದಕರೆಂಬ ಅಮೇರಿಕಾ ಹಾಗೂ ಅದರ ಹಿಂಬಾಲಕ ರಾಷ್ಟ್ರಗಳ ಮತ್ತು ಅವುಗಳ ಮೆಗಾಫೋನ್ ಗಳಾಗಲು ವಿಧಿಸಲ್ಪಟ್ಟಿರುವ ಪೌರ್ವಾತ್ಯ ರಾಷ್ಟ್ರಗಳ ಪ್ರಚಾರ ಮಾತ್ರವೆಂಬ ವಾಸ್ತವವನ್ನು ಖಂಡಿತವಾಗಿಯೂ ಮರೆಯಬಾರದು. (ವಿವರಣೆಗಾಗಿ ಭಯೋತ್ಪಾದನೆ ಮತ್ತು ಇಸ್ಲಾಮ್, ಯುದ್ಧದ ಕುರಿತು ಕುರ್ ಆನಿನ ನಿಲುವು ಎಂಬ ಕೃತಿಗಳನ್ನು ನೋಡಿರಿ)

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *