Home / ಪ್ರಶ್ನೋತ್ತರ / ಮುಸ್ಲಿಮ್ ಮಹಿಳೆ ಹೊರ ಹೋಗಿ ದುಡಿಯಬಾರದೇ?

ಮುಸ್ಲಿಮ್ ಮಹಿಳೆ ಹೊರ ಹೋಗಿ ದುಡಿಯಬಾರದೇ?

ಜಾಸಿಮುಲ್ ಮುತವ್ವ 

ಮಹಿಳೆಯರು ದುಡಿದು ಸಂಪಾದಿಸುವ ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ಮಹಿಳೆಯರ ಆರ್ಥಿಕ ಜವಾಬ್ದಾರಿಯ ಕುರಿತು ವಿವಿಧ  ಸಂಶಯಗಳು ನೆಲೆ ನಿಂತಿವೆ. ಆಕೆಯ ಸಂಪಾದನೆಯ ಹಣವನ್ನು ದಾನ ಮಾಡಬೇಕು ಅಥವಾ ಕುಟುಂಬದ ಖರ್ಚು ವೆಚ್ಚ  ಭರಿಸಬೇಕೆಂಬುದೇ ಹೆಚ್ಚಿನ ಚರ್ಚಾ ವಿಷಯವಾಗಿದೆ. ಕುರ್‌ಆನ್, ಪ್ರವಾದಿ ಚರ್ಯೆ ಮತ್ತು ವಿದ್ವಾಂಸರ ಅಭಿಪ್ರಾಯದ ಆಧಾರದಲ್ಲಿ ನಾನು ಇಲ್ಲಿ ಚರ್ಚಿಸಲು ಬಯಸುತ್ತೇನೆ.

ಮಹಿಳೆಯರು ಹೊರಹೋಗಿ ದುಡಿಯುವುದರ ಬಗ್ಗೆ ಇಸ್ಲಾಮಿನ ವಿಧಿಯೇನು? ಇದರ ಪರವಾಗಿರುವವರ ಅಭಿಪ್ರಾಯವೇನೆಂದರೆ ಆಕೆ  ಸಮಾಜದ ಅರ್ಧಾಂಶವಾದ ಕಾರಣ ಸಮಾಜದ ಕಷ್ಟ ನಷ್ಟಗಳಲ್ಲಿಯೂ ಆಕೆ ಸಮಾನ ಪಾಲುದಾರಳು ಎಂದಾಗಿದೆ. ಆದರೆ ಇಸ್ಲಾಮಿನ  ಯಾವುದೇ ನಿಯಮಗಳನ್ನು ಪಾಲಿಸದ ಓರ್ವ ಮಹಿಳೆಯು ಉದ್ಯೋಗ ಮಾಡುವ ಮೂಲಕ ಸಮಾಜದಲ್ಲಿ ಅಭಿವೃದ್ಧಿಯಾಗಬಹುದೇ  ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಪ್ರಸ್ತುತ ಪ್ರಶ್ನೆಯೇ ಇಸ್ಲಾಮೀ ಶರೀಅತ್‌ನ ಅಧ್ಯಯನಕ್ಕೆ ಪ್ರೇರಕವಾಗಿರುವುದು.

ಈ ಕುರಿತು ಇಸ್ಲಾಮೀ ಆರ್ಥಿಕ ತಜ್ಞರೋರ್ವರು ಅಧ್ಯಯನ ಮಾಡಿದ್ದಾರೆ. ದೊಡ್ಡ ಮಟ್ಟದ ಸಂಪಾದನೆ ಮತ್ತು ಸೇವೆಯನ್ನು ಪರಿಗಣಿಸಿ ಇಂದು ಅಭಿವೃದ್ದಿಯನ್ನು ಅಳೆಯಲಾಗುತ್ತದೆ. ಮಾನವೀಯತೆ, ನೈತಿಕತೆ, ಆಧ್ಯಾತ್ಮಿಕತೆಯ ಮೌಲ್ಯಗಳಿಗೆ ಅಲ್ಲಿ ಯಾವುದೇ ಸ್ಥಾನವಿಲ್ಲ. ಆದ್ದರಿಂದ ಅದರಲ್ಲಿ ಸಮಗ್ರವಾದ ಒಂದು ಅಭಿವೃದ್ದಿ ಕಂಡು ಬರುವುದಿಲ್ಲ. ಇದು ಲೌಕಿಕ ವಿಚಾರವಾಗಿದೆ. ಕುಟುಂಬ ನಿರ್ಮಾಣದಲ್ಲಿ ಮತ್ತು ಕುಟುಂಬ ಸಂಬಂಧಗಳ ಪರಿಪಾಲನೆಯ ದೌತ್ಯ ಮಹಿಳೆಗೆ ಇಲ್ಲ ಎಂದಾದರೆ ಅದು ಲಾಭಕರವಲ್ಲ. ಅದರ ಕಾರಣದಿಂದ ಸಂತಾನಗಳು ದಾರಿ ತಪ್ಪುವುದು. ಮಾತ್ರವಲ್ಲ ಇದರಿಂದ ವಿವಾಹ ವಿಚ್ಛೇಧನಗಳು ವರದಿಗಳು ವ್ಯಾಪಕವಾಗುವುದು. ಇವತ್ತು ಯುವ ಸಮೂಹವು ಮಾದಕ ವ್ಯಸನಿಗಳಾಗುತ್ತಿರುವುದು ಮತ್ತು ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಇವೆಲ್ಲಾ ಸೇರಿವೆ.  ದುಷ್ಕೃತ್ಯಗಳಲ್ಲಿರುವಾಗ ಅವರು ಮಾತಾಪಿತರನ್ನು ಕೂಡಾ ಗೌರವಿಸಲಾರರು. ಹೊರ ಹೋಗಿ ಉದ್ಯೋಗ ನಡೆಸುವ ಮಹಿಳೆಯರಿಂದಾಗುವ ಸಾಮಾಜಿಕ ವಿಪತ್ತುಗಳ ಪರಿಹಾರಕ್ಕಾಗಿ ಪಾಶ್ಚಾತ್ಯ ಸರಕಾರಗಳು ಕೋಟ್ಯಂತರ ಡಾಲರ್ ವ್ಯಯಿಸುತ್ತಿವೆ. ಅದರಿಂದಗಿ  ಲೈಂಗಿಕ ಅರಾಜಕತೆ ವ್ಯಾಪಕವಾಗಿದೆ. ಇದರ ಫಲವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ದೇಶಕ್ಕೆ ನಾಶ ನಷ್ಟವುಂಟಾಗುತ್ತದೆ.

ಅಂದರೆ ಮಹಿಳೆಯರು ಉದ್ಯೋಗಕ್ಕೆ ತೆರಳುವುದನ್ನು ಇಸ್ಲಾಮ್ ನಿಷೇಧಿಸಿದೆ ಎಂದಲ್ಲ. ಶರೀಅತ್ ನಿಯಮಗಳನ್ನು ಪಾಲಿಸಬೇಕೆಂಬುದು ಈ ಬರಹದ ಉದ್ದೇಶವಾಗಿದೆ.
1. ಆಕೆ ಉದ್ಯೋಗ ಮಾಡಬೇಕಾಗಿರುವುದು ಸಮಾಜದ ಮತ್ತು ಆಕೆಯ ಅಗತ್ಯಕ್ಕಾಗಿದೆ.
2. ಪತಿಯ ಅನುಮತಿಯೊಂದಿಗೆ ಮಹಿಳೆಗೆ ಅನುಕೂಲವಾದ ಸ್ಥಳದಲ್ಲಿ ಉದ್ಯೋಗ ನಿರ್ವಹಿಸಬೇಕು.
3. ಉದ್ಯೋಗ ಮತ್ತು ಮನೆಯ ಅಗತ್ಯಗಳ ಜೊತೆ ಸಂತುಲನೆಯಿರಬೇಕು.
4. ಪರ ಪುರುಷರೊಂದಿಗೆ ಏಕಾಂತದಲ್ಲಿರುವ ಕಡೆ ಆಗಬಾರದು.
5. ಮಹಿಳೆಯರ ದೈಹಿಕ ಪ್ರಕೃತಿಗೆ ಒಗ್ಗದ ಉದ್ಯೋಗವನ್ನು ಮಾಡಬಾರದು.

ಲೌಕಿಕ ಅಗತ್ಯದ ಪೂರ್ತೀಕರಣದ ಬದಲು ಮನುಷ್ಯನ ಅಗತ್ಯಗಳಿಗಾಗಿ ಆಹಾರ ಮತ್ತಿತರ ವಿಚಾರಗಳಿಗೆ ಮಾದರೀ ರೂಪದಲ್ಲಿ  ಸ್ವಾತಂತ್ರ್ಯವನ್ನು ಉಪಯೋಗಿಸಬೇಕೆಂಬುದು ಇಸ್ಲಾಮಿನ ಆರ್ಥಿಕ ಅಭಿವೃದ್ಧಿಯ ಸೂಚಿಯಾಗಿದೆ. ಅಂತಹ ವ್ಯವಸ್ಥೆಯಲ್ಲಿ ಮಹಿಳೆಯ  ಸಹಭಾಗಿತ್ವ ಹೀಗಿರಬೇಕು.
1. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದರ ಜೊತೆಗೆ ರಾಷ್ಟ್ರೀಯ ವರಮಾನದ ಅಭಿವೃದ್ದಿಯ ಭಾಗವಾಗಲು  ಸಹಾಯಕವಾಗುವಂತಹ ಉದ್ಯೋಗಗಳಲ್ಲಿ ನಿರತರಾಗಿರಿ.
2. ಮಹಿಳೆಯು ಮಕ್ಕಳ ಧಾರ್ಮಿಕ ಮತ್ತು ಆಧ್ಯಾತ್ಮಿಕವಾದ ಶಿಕ್ಷಣಕ್ಕಾಗಿ  ಗಮನಹರಿಸಬೇಕು. ಕುಟುಂಬದ ನಿರ್ಮಾಣ ಮತ್ತು ಅದರ  ಸಂರಕ್ಷಣೆಯು ಸಾಮಾಜಿಕ ಅಭಿವೃದ್ದಿಯ ತಳಹದಿಯಾಗಿದೆ.
3. ಸಾಮಾಜಿಕ ಕೆಡುಕುಗಳ ಫಲವಾಗಿ ದೇಶಕ್ಕೆ ಕುಟುಂಬಕ್ಕೆ ಉಂಟಾಗುವ ಆರ್ಥಿಕ ತೊಂದರೆಗಳಿಂದ ಮಕ್ಕಳನ್ನು ಕಾಪಾಡಿರಿ. ಮಹಿಳೆಯೋರ್ವಳು ತನ್ನ ಮನೆಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಇದು ಸಾಧ್ಯ.
4. ಪುರುಷರ ಪ್ರಾಬಲ್ಯವಿರದ ವಲಯಗಳಲ್ಲಿ ಇಸ್ಲಾಮೀ ನಿಯಮ ಪಾಲಿಸಿಕೊಂಡು ಮಹಿಳೆಯರು ಉದ್ಯೋಗ ನಿರ್ವಹಿಸಬಹುದು.  ಅದಕ್ಕೆ ನರ್ಸ್, ಶಿಕ್ಷಕಿ, ವೈದ್ಯೆ ಮುಂತಾದವುಗಳು ಉದಾಹರಣೆಗಳು.

ಅಮೇರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ಸಾಧ್ಯವಾಗದ ಸಾಮಾಜಿಕ ಅಭಿವೃದ್ಧಿಯನ್ನು  ಇಸ್ಲಾಮಿನ ಪ್ರಾರಂಭ ಘಟ್ಟದಲ್ಲಿ ಇಸ್ಲಾಮೀ  ರಾಷ್ಟ್ರಗಳು ಗಳಿಸಿಕೊಂಡಿವೆ. ಝಕಾತ್ ಪಡೆಯಲು ಬಡ ದರಿದ್ರರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಸ್ಲಾಮೀ ಶಿಕ್ಷಣ ಪ್ರಾಯೋಗಿಕವಾಗಿರುವ ಕಾಲದಲ್ಲಿ ಇದು ನಡೆದಿತ್ತು ಎಂಬುದು ಗಮನಾರ್ಹ.

ಇಸ್ಲಾಮೀ ಕರ್ಮಶಾಸ್ತ್ರದ ಪ್ರಕಾರ  ಕುಟುಂಬದ ಆರ್ಥಿಕ ಖರ್ಚು ವೆಚ್ಚಗಳನ್ನು ಪುರುಷನು ನಿಭಾಯಿಸಬೇಕು. ಆತನ ಸಾಮರ್ಥ್ಯದನುಸಾರ ಕುಟುಂಬದ ಆಹಾರ, ವಸತಿ, ಉಡುಪು, ಚಿಕಿತ್ಸೆ, ಶಿಕ್ಷಣ ಮುಂತಾದ ಎಲ್ಲಾ ಖರ್ಚು ವೆಚ್ಚಗಳನ್ನು ಪುರುಷರು ನಿಭಾಯಿಸಬೇಕು.  ಅದನ್ನು ಕುರ್‌ಆನ್ ಹೀಗೆ ಸ್ಪಷ್ಟಪಡಿಸುತ್ತದೆ-
“ಪುರುಷರು ಸ್ತ್ರೀಯರ ಮೇಲೆ `ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ. ಸುಶೀಲೆಯರಾದ ಸ್ತ್ರೀಯರು ಅನುಸರಣಶೀಲರಾಗಿರುತ್ತಾರೆ  ಮತ್ತು ಅವರು ಪುರುಷರ ಅನುಪಸ್ಥಿತಿಯಲ್ಲಿ ಅಲ್ಲಾಹನ ರಕ್ಷಣೆಯಲ್ಲಿ ಅವರ ಹಕ್ಕು ಬಾಧ್ಯತೆಗಳ ರಕ್ಷಣೆ ಮಾಡುತ್ತಾರೆ. ನಿಮ್ಮ ಸ್ತ್ರೀಯರಿಂದ  ಆಜ್ಞೆಲ್ಲಂಘನೆಯ ಆಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ. ಅನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ, ಅವರ ಮೇಲೆ ಕೈಯೆತ್ತಲು ಬೇಕು ಬೇಕೆಂದೇ ನೆಪ ಹುಡುಕಬೇಡಿರಿ.  ನಿಶ್ಚಯವಾಗಿಯೂ ಅಲ್ಲಾಹನು ಅತ್ಯುನ್ನತನೂ ಮಹಾನನೂ ಆಗಿರುತ್ತಾನೆ.” (ಅನ್ನಿಸಾ: 34)

ಪುರುಷನಿಗೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ತನ್ನ ಸಂಗಾತಿಯ ನೆರವು ಪಡೆಯಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಸನ್ಮನಸ್ಸಿನಿಂದ ಪತ್ನಿ ಪತಿಗೆ ನೆರವಾಗಬೇಕು. ಇದು ದಾಂಪತ್ಯ  ಸಂಬಂಧ ಬಲಪಡಿಸಲು ಪರಸ್ಪರ ಸಹಾಯಕವಾಗುವ ಅಂಶಗಳಾಗಿವೆ. ಸಂಗಾತಿಗೆ ಸಾಧ್ಯವಿದೆಯೆಂದಾದರೆ ನೆರವು ನೀಡುವುದು ಕಡ್ಡಾಯ.

ಅಲ್ಲಾಹನು ಹೇಳುತ್ತಾನೆ.
“ಅಲ್ಲಾಹ ಗ್ರಂಥದಲ್ಲಿ ರಕ್ತ ಸಂಬಂಧಿಕರು ಪರಸ್ಪರ ಹೆಚ್ಚು ಹಕ್ಕುದಾರರು.” (ಅಲ್ ಅನ್ಫಾಲ್: 75)

ಪತ್ನಿ ಮತ್ತು ಸಂತಾನಗಳು ಅತ್ಯಾಪ್ತ ಬಂಧುಗಳಾಗಿದ್ದಾರೆ. ಪತಿಯು ಸಂಕಷ್ಟದಲ್ಲಿರುವಾಗ ಅದನ್ನು ಅರ್ಥೈಸಿ ಸಹಾಯ ಮಾಡಲು ಸಾಧ್ಯವಿರುವ ಮಹಿಳೆಯರು ಉದಾರತೆ ತೋರಿಸುವುದು ಕಡ್ಡಾಯವಾಗಿದೆಯೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಅನೇಕ ಸಲ ಪತ್ನಿಯರು ಪತಿಯ ಸಂಪತ್ತಿನಿಂದ ಅವರ ಅನುಮತಿ ಪಡೆಯದೆ ದಾನ ಮಾಡಲು ವ್ಯಯಿಸುತ್ತಾರೆ. ಈ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅನುಮತಿ ಪಡೆಯದೆ ಪತಿಯ ಸಂಪತ್ತಿನಿಂದ  ಪತ್ನಿ ದಾನ ಮಾಡಬಹುದೆಂದು ಹೇಳಿದವರಿದ್ದಾರೆ. ಅದು ಅವರ  ಆರ್ಥಿಕ ವ್ಯವಹಾರಗಳಿಗೆ ತೊಂದರೆ ಬಾರದ ಸಣ್ಣ ಮೊತ್ತವಾಗಿರಬೇಕೆಂಬುದು ಇದರ ನಿಬಂಧನೆಯಾಗಿದೆ. ಆದರೆ ದೊಡ್ಡ  ಮೊತ್ತದ್ದಾದರೆ ಅನುಮತಿ ಪಡೆಯಲೇಬೇಕು. ಆದರೆ ಮೊತ್ತ ಸಣ್ಣದಾದರೂ ಸರಿ ದೊಡ್ಡಮಟ್ಟದ್ದಾದರೂ ಸರಿ ಅನುಮತಿ ಪಡೆಯಲೇಬೇಕೆಂಬುದು ಹೆಚ್ಚಿನವರ ಪ್ರಬಲ ಅಭಿಪ್ರಾಯವಾಗಿದೆ.

ಪ್ರವಾದಿವರ್ಯರು(ಸ) ಮಹಿಳೆಯರ ಜೊತೆ ದಾನ-ಧರ್ಮ ಮಾಡಲು ವಿಶೇಷವಾಗಿ ಹೇಳುತ್ತಿದ್ದರು. ಮುಸ್ಲಿಮ್ ಉದ್ದರಿಸಿದ ಒಂದು ಪ್ರವಾದಿ ವಚನದಲ್ಲಿ “ಮಹಿಳಾ ಸಮೂಹವೇ, ನೀವು ನಿಮ್ಮ ಆಭರಣಗಳಿಂದಾದರೂ ಸರಿ. ದಾನ ಮಾಡಿರಿ” ಎಂದಿದೆ. ನಂತರ ಅವರು  ಆಭರಣಗಳನ್ನು ದಾನ ಮಾಡಿದರು ಎಂದು ಹದೀಸ್‌ನ ಪ್ರಮುಖ ಗ್ರಂಥಗಳಲ್ಲಿ ದಾಖಲಾಗಿದೆ. ಆದರೆ ಮಹಿಳೆ ತನ್ನಲ್ಲಿರುವ ಹಣವನ್ನು ದಾನ ಮಡಲು ಪತಿ ಅನುಮತಿಬೇಕೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಮಹಿಳೆಗೆ ತನ್ನ ಹಣವನ್ನು ವ್ಯಯ ಮಾಡಲು ಪತಿಯ ಅನುಮತಿ ಬೇಕಿಲ್ಲ ಎಂಬುದು ಪ್ರಬಲ ಅಭಿಪ್ರಾಯವಾಗಿದೆ. ಆದರೆ ಸಾರ್ವಜನಿಕವಾಗಿ ಪಾಲಿಸುವ ಹಿತಮಿತ ಅನುಸರಿಸಿಯಾಗಬೇಕೆಂಬ ನಿರ್ದೇಶನ ಕೂಡಾ ಇದಕ್ಕೆ ಅನ್ವಯವಾಗುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *