Home / ಪ್ರಶ್ನೋತ್ತರ / ಮುಹರ್ರಮ್ ಏನು ಏನಲ್ಲ?

ಮುಹರ್ರಮ್ ಏನು ಏನಲ್ಲ?

  • ಸಬೀಹಾ ಫಾತಿಮಾ 

ಚಾಂದ್ರಮಾನ ಕ್ಯಾಲೆಂಡರ್ ಅಥವಾ ಹಿಜರಿ ಕ್ಯಾಲೆಂಡರಿನ ಪ್ರಥಮ ತಿಂಗಳ ಹೆಸರೇ ಮುಹರ್ರಮ್. ಬಹುಧರ್ಮೀಯ, ಬಹು ಸಂಸ್ಕೃತಿಯ ಭವ್ಯ ಭಾರತದಲ್ಲಿ ಬಾಳಿ ಬದುಕುತ್ತಿರುವವರಲ್ಲಿ ಮುಹರ್ರಮ್ ಎಂಬುದು ಮುಸ್ಲಿಮರ ಒಂದು ಹಬ್ಬ ಎಂಬ ನಂಬಿಕೆ ಪ್ರಚಲಿತವಾಗಿದೆ. ಆದರೆ ಇಸ್ಲಾಮಿನಲ್ಲಿ ಕೇವಲ ಎರಡೇ ಹಬ್ಬಗಳು. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳು ರಮಝಾನ್ ನ ಉಪವಾಸ ಮುಗಿಸಿ 10ನೇ ತಿಂಗಳ ಆರಂಭ ಶವ್ವಾಲ್ ತಿಂಗಳ ಒಂದರಂದು ಆಚರಿಸುವ ಈದುಲ್ ಫಿತ್ರ್ ಮತ್ತು ಅದರ ಎರಡು ತಿಂಗಳು 10 ದಿನಗಳ ಬಳಿಕ ಆಚರಿಸುವ ಈದುಲ್ ಅಝ್ಹಾ ಎಂಬ ಬಕ್ರೀದ್ ಅಥವಾ ಬಲಿದಾನದ ಹಬ್ಬ. ಈ ಎರಡು ಹಬ್ಬಗಳ ಹೊರತು ಬರುವ ವಿಶೇಷ ದಿನಗಳನ್ನು ಸಹಜವಾಗಿಯೇ ಹಬ್ಬದ ದಿನಗಳು ಎಂದು ತಿಳಿಯಲಾಗುತ್ತದೆ. ಮುಹರ್ರಮ್ ಎಂಬುದು ಹಬ್ಬದ ಹೆಸರಲ್ಲ ತಿಂಗಳ ಹೆಸರು. ಈ ತಿಂಗಳ ಹತ್ತನೇ ತಾರೀಕು ಆಶೂರ ದಿನ ಎಂದು ಕರೆಯಲ್ಪಡುತ್ತದೆ .ಈ ದಿನ ಉಪವಾಸವಿರುವುದು ಅತಿ ಹೆಚ್ಚು ಪ್ರತಿಫಲಕ್ಕೆ ಅರ್ಹವಾದದು ಎಂದು ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟಿದ್ದಾರೆ.

ಈ ತಿಂಗಳ ವಿಶೇಷತೆ
ಇದು ಹಿಜರಿ 1444 ನೇ ವರ್ಷದ ಮುಹರ್ರಮ್ ತಿಂಗಳು. ಸೃಷ್ಟಿಕರ್ತನಾದ ಅಲ್ಲಾಹನು ಪ್ರಥಮ ಮಾನವ ಆದಮರನ್ನು ಸೃಷ್ಟಿಸಿ ಸ್ವರ್ಗದಲ್ಲಿ ಇರಿಸಿದನು. ಬಳಿಕ ಅವರಿಗೆ ಜತೆಗಾತಿಯಾಗಿ ಹವ್ವಾ ಎಂಬ ಸ್ತ್ರೀಯನ್ನು ಸೃಷ್ಟಿಸಿದನು. ಇವರು ಜಗತ್ತಿನ ಆದಿಪಿತ ಮತ್ತು ಆದಿಮಾತೆ. ಇವರು ಸ್ವರ್ಗದಲ್ಲಿ ಪರೀಕ್ಷಿಸಲ್ಪಟ್ಟು ಭೂಮಿಗೆ ಕಳುಹಿಸಲ್ಪಟ್ಟ ತಿಂಗಳು ಮುಹರ್ರಮ್. ಅವರ ಸಂತಾನ ಪರಂಪರೆಗಳೇ ಮುಂದುವರಿದುಕೊಂಡು ಜಗತ್ತಿನಾದ್ಯಂತ ಚದುರಿ ಹಲವು ಕುಲ, ಗೋತ್ರ, ಜನಾಂಗಗಳಾಗಿ ವಿಭಜನೆಯಾದವು. ಇದು ಪರಸ್ಪರರನ್ನು ಗುರುತಿಸಲಿಕ್ಕಿರುವ ಉಪಾದಿ ಮಾತ್ರ ಎಂದು ಪವಿತ್ರ ಕುರ್‌ಆನ್‌ ಹೇಳುತ್ತದೆ.
ಜನರೇ ,ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ಜನಾಂಗಗಳನ್ನು ಗೋತ್ರಗಳನ್ನಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠೆ ಇರುವವನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನು ವಿವರ ಪೂರ್ಣನು ಆಗಿರುತ್ತಾನೆ.(49:13)

ಅದೇ ರೀತಿ ಕಾಲಂತರದಲ್ಲಿ ಬಂದ ಪ್ರವಾದಿ ನೂಹರನ್ನು ಹಡಗಿನ ಮೂಲಕ ಪ್ರಳಯದಿಂದ ಪಾರುಗೊಳಿಸಿ ದುಷ್ಟ ವ್ಯಕ್ತಿಗಳಿಂದ ಸಂರಕ್ಷಿಸಿದ ಘಟನೆ ಕೂಡ ಇದೇ ತಿಂಗಳಲ್ಲಿ ನಡೆಯಿತು.

ಸಹಸ್ರಾರು ವರ್ಷಗಳ ಬಳಿಕ ಬಂದ ದೇವ ಸಂದೇಶವಾಹಕ ಮೂಸಾ ಅಂದಿನ ದುಷ್ಟ ಚಕ್ರವರ್ತಿ ಸ್ವೇಚ್ಛಾಧಿಕಾರಿ, ಕ್ರೂರಿ ಫರೋವನ ವಿರುದ್ಧ ಅವನ ಅಧಿಕಾರದ ವಿರುದ್ಧ ಸೆಟೆದು ನಿಂತು, ಅವನಿಂದ ತುಳಿತಕ್ಕೊಳಗಾದ ಬಡಪಾಯಿ ಇಸ್ರಾಯಿಲಿ ವಂಶದವರನ್ನು ದೇವನ ಆದೇಶದ ಪ್ರಕಾರ ನೈಲ್ ನದಿ ದಾಟಿಸಿ ರಕ್ಷಿಸಿದ ಮತ್ತು ಫರೋವನು ಅದೇ ಸಮುದ್ರದಲ್ಲಿ ಮುಳುಗಿ ಸತ್ತ ಘಟನೆಯು ಸಂಭವಿಸಿದ ಐತಿಹಾಸಿಕ ಮಹತ್ವವುಳ್ಳ ತಿಂಗಳು.

ಕಾಲಂತರಗಳಲ್ಲಿ ಇಂದಿಗೆ ಸರಿಸುಮಾರು 1450 ವರ್ಷಗಳ ಹಿಂದೆ ಮಕ್ಕಾದಲ್ಲಿ ಬಂದ ಪ್ರವಾದಿ ಮುಹಮ್ಮದರು ಕೇವಲ ನಾನು ದೇವನ ಸಂದೇಶವಾಹಕನಾಗಿ ನಿಯುಕ್ತನಾಗಿದ್ದೇನೆ ಎಂಬ ಸತ್ಯದ ಸಂದೇಶವನ್ನು ಜನರಿಗೆ ತಲುಪಿಸಲು ಪ್ರಯತ್ನಿಸಿದ ಕಾರಣಕ್ಕಾಗಿ ಅದುವರಿಗೆ ಸಮಾಜದಲ್ಲಿ ಸತ್ಯಸಂಧ, ಪ್ರಾಮಾಣಿಕ ಎಂದು ಬಿರುದುಕೊಟ್ಟು ಗೌರವಿಸಿದ್ದ ವ್ಯಕ್ತಿಯನ್ನು ತಿರಸ್ಕರಿಸಿಬಿಟ್ಟರು. 13 ವರ್ಷಗಳ ಕಾಲ ನಿರಂತರ ನಿಂದನೆ, ಪೀಡನೆ ಮತ್ತು ಅವಮಾನಗಳಿಗೆ ಗುರಿಯಾಗಿಸಿದರು.
ಇವೆಲ್ಲವುಗಳನ್ನು ಸಹಿಸಿ ಕೊನೆಗೆ ದೇವನ ಆದೇಶದ ಪ್ರಕಾರ ಆ ಮಕ್ಕಾವನ್ನು ತೊರೆದು ಮದೀನಾಕ್ಕೆ ವಲಸೆ ಹೋದ ಘಟನೆ ಇತಿಹಾಸ ಪ್ರಸಿದ್ಧವಾದ ಹಿಜರ ಸಂಭವಿಸಿದ್ದು ಇದೇ ಮುಹರ್ರಮ್ ತಿಂಗಳಲ್ಲಾಗಿತ್ತು. ಹಿಜರ ಒಂದು ಪಲಾಯನವಾಗಿರಲಿಲ್ಲ. ಅದೊಂದು ಹೊಸ ಭರವಸೆಯಾಗಿತ್ತು . ಹಿಜರ ಹೋಗುವಾಗ ದಾರಿ ಮಧ್ಯೆ ಸೌರ್ ಎಂಬ ಗುಹೆಯಲ್ಲಿ ಪ್ರವಾದಿ ಮುಹಮ್ಮದ್ ಗೆಳೆಯ ಅಬೂಬಕರ್ ರೊಂದಿಗೆ ಅಡಗಿಕೊಂಡರು. ಅಬೂಬಕ್ಕರ್ ಹೆದರಿಬಿಟ್ಟಿದ್ದರು. ಆದರೆ ಪ್ರವಾದಿಯವರು ನೀವು ಭಯಪಡಬೇಡಿರಿ. ಅಲ್ಲಾಹನು ನಮ್ಮೊಂದಿಗೆ ಇದ್ದಾನೆ ಎಂಬ ಭರವಸೆಯನ್ನು ನೀಡಿದರು.

ಈ ರೀತಿ ಇತಿಹಾಸದುದ್ದಕ್ಕೂ ಕಣ್ಣೋಡಿಸಿದರೆ ಹತ್ತು ಹಲವು ಅವಿಸ್ಮರಣೀಯ ಪಾಠಪ್ರದವಾದ ಘಟನೆಗಳಿಗೆ ಕಾರಣವಾದ ಈ ತಿಂಗಳನ್ನು ಅಂತಿಮ ಪ್ರವಾದಿಯವರಿಗೆ ಅವತೀರ್ಣಗೊಳಿಸಿದ ಪವಿತ್ರ ಕುರ್‌ಆನ್‌ ನಲ್ಲಿ ‘ಶಹರುಲ್ಲಾಹ್ ‘ ಅಂದರೆ ಅಲ್ಲಾಹನ ತಿಂಗಳು ಎಂದು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಈ ಪವಿತ್ರ ತಿಂಗಳಲ್ಲಿ ಹೊಸ ವರ್ಷದ ಆರಂಭ ಎಂಬ ನಿಟ್ಟಿನಲ್ಲಿ ಮನುಷ್ಯನಿಗೆ ತನ್ನ ಬಗ್ಗೆ ಆಲೋಚಿಸಲು, ತನ್ನಿಂದ ಸಂಭವಿಸಿ ಹೋದ ತಪ್ಪುಗಳಿಗಾಗಿ ದೇವನೊಂದಿಗೆ ಕ್ಷಮೆಯಾಚಿಸಲು, ದೇವನೊಂದಿಗಿಯೇ ಅತ್ಯುತ್ತಮ ರೀತಿಯ ಸಂಬಂಧ ಇಟ್ಟುಕೊಂಡಂತೆಯೇ ಸಹಜೀವಿಗಳೊಂದಿಗೂ ಅತ್ಯುತ್ತಮ ಸಂಬಂಧ ಇರಿಸಿಕೊಳ್ಳಲು ,ಹೊಸ ಸ್ಪೂರ್ತಿಯನ್ನು ಈ ತಿಂಗಳು ನೀಡುತ್ತದೆ.

ವರ್ಷಗಳು ಹೀಗೆ ಉರುಳುತ್ತಿರುತ್ತವೆ. ಹೊಸ ಹೊಸ ತಿಂಗಳು ವರುಷಗಳು ನಮ್ಮನ್ನು ಸ್ವಾಗತಿಸುತ್ತವೆ. ಆದರೆ ನಾವೆಷ್ಟು ದಿನ ಬದುಕಿರುತ್ತೇವೆ ಎಂಬುದನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ತಿಳಿಸಿಕೊಡುವ ವ್ಯವಸ್ಥೆ ಈ ಜಗತ್ತಿನ ಮೇಲೆ ಇಲ್ಲ. ಇರುವಷ್ಟು ಕಾಲ ದೇವನು ಹೇಳಿದಂತೆ ಬಾಳನ್ನು ಸಾಗಿಸುವ ಬಗೆ ಹೇಗೆ ಮತ್ತು ಅಂತಹ ವ್ಯಕ್ತಿಗಳನ್ನು ದೇವನು ಹೇಗೆ ಸಹಾಯ ಮಾಡಿ ಸಂರಕ್ಷಿಸುತ್ತಾನೆ ಎಂಬುದನ್ನು ಮುಹರ್ರಮ್ ನಮಗೆ ಪದೇಪದೇ ನೆನಪಿಸಿಕೊಡುತ್ತದೆ.

ಹೊಸ ಆಚರಣೆಗಳು

ಸರಿಸುಮಾರು ಸಾವಿರದ ಮುನ್ನೂರ ಎಂಬತ್ತು ವರ್ಷಗಳ ಹಿಂದೆ ಹಿಜರಿ ಶಕ 61ನೆಯ ಮುಹರ್ರಮ್ ಹತ್ತರಂದು ಪ್ರವಾದಿಯವರ ಮಮತೆಯ ಮೊಮ್ಮಗನಾದ, ಫಾತಿಮಾ ಅಲಿ ದಂಪತಿಗಳ ಪುತ್ರ, ಪುತ್ರ ಇಮಾಮ್ ಹುಸೇನ್ ಕರ್ಬಲ ಮೈದಾನದಲ್ಲಿ ತಮ್ಮ ಸಂಗಡಿಗರೊಂದಿಗೆ ಹುತಾತ್ಮರಾದರು. ಇದು ಕಾಕತಾಳಿಯ ಸಂಭವವಾಗಿತ್ತು. ಅನ್ಯಾಯದ ವಿರುದ್ಧ ಸತ್ಯದ ಹರಿಕಾರರಾಗಿ ತಮ್ಮ ತನು ಮನ ಧನಗಳನ್ನು ತ್ಯಾಗ ಮಾಡಿ ಹುತಾತ್ಮರಾದ ದಿನವಿದು. ಇದರ ಹೆಸರಿನಲ್ಲಿ ಹೊಸಹೊಸ ಆಚರಣೆಗಳನ್ನು ಜನರು ರೂಢಿಗೆ ತಂದಿರುವರು. ಇವುಗಳಿಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. ಒಂದು ಕಡೆ ಕಪ್ಪು ಬಟ್ಟೆ ಧರಿಸಿ, ಹರಿತವಾದ ಆಯುಧಗಳಿಂದ ದೇಹದಂಡನೆ ಮಾಡಿಕೊಳ್ಳುವುದು. ಎದೆ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡುತ್ತಾ ಶೋಕವನ್ನು ವ್ಯಕ್ತಪಡಿಸುವುದು, ಹುತಾತ್ಮರ ನೆನಪಿಗಾಗಿ ಮೆರವಣಿಗೆಗಳನ್ನು ಮಾಡುವುದು, ಎದೆ ಬಡಿದುಕೊಂಡು ಗಟ್ಟಿಯಾಗಿ ರೋಧಿಸುವುದು, ಮತ್ತೊಂದೆಡೆ ಲೋಹದಲ್ಲಿ ತಯಾರಿಸಿದ ಹುತಾತ್ಮರ ಹಸ್ತಗಳನ್ನು ಇಟ್ಟು ಅವುಗಳ ಮುಂದೆ ತಲೆಬಾಗುವುದು. ಹುಲಿ, ಕರಡಿ, ಚಿರತೆ, ವೇಷ ಹಾಕಿಕೊಂಡು ಕುಣಿದು ಕುಪ್ಪಳಿಸುವುದು. ಇವೆಲ್ಲವುಗಳಿಗೂ ಈ ತಿಂಗಳಿಗೂ ಯಾವುದೇ ಸಂಬಂಧವಿಲ್ಲ. ಪವಿತ್ರ ಕುರ್‌ಆನ್‌ ನಲ್ಲಾಗಲಿ ಪ್ರವಾದಿ ವಚನಗಳಲ್ಲಾಗಲಿ ಇಂತಹ ಆಚರಣೆಗಳ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ.

ಮುಹರ್ರಮ್ ಸಂದೇಶ
ಅನ್ಯಾಯ, ಅನೀತಿ, ಕೆಡುಕುಗಳು ತುಂಬಿ ತುಳುಕುತ್ತಿರುವ ಮತ್ತು ಅರಾಜಕತೆಯು ರಾರಾಜಿಸುತ್ತಿರುವ ಒಂದು ಸಮಾಜದಲ್ಲಿ ಒಬ್ಬ ನಿಜವಾದ ಮಾನವೀಯ ಕಳಕಳಿಯುಳ್ಳ ಮನುಷ್ಯನಿಗೆ ಹತಾಶೆ ಉಂಟಾಗುವುದು ಸಹಜ. ಆದರೆ ಇದು ಖಂಡಿತವಾಗಿಯೂ ಶಾಶ್ವತವಾಗಿ ಉಳಿಯುವ ವ್ಯವಸ್ಥೆಯಲ್ಲ. ಇಂತಹ ಹಲವು ದುಷ್ಟ ವ್ಯವಸ್ಥೆಗಳನ್ನು ನಿರ್ನಾಮ ಮಾಡಲು ನಮ್ಮನ್ನು ನಿಯಂತ್ರಿಸುವ ದೇವನೊಬ್ಬನಿದ್ದಾನೆ ಎಂಬ ಹೊಸ ಭರವಸೆಯನ್ನು ಮುಹರ್ರಮ್ ತಿಂಗಳು ನಮಗೆ ನೀಡುತ್ತದೆ. ಆದರೆ ನಾವು ನಿಷ್ಕ್ರಿಯರಾಗಿದ್ದರೆ ಏನನ್ನು ಸಾಧಿಸಲಿಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ಕಂಡು ಬರುವ ಎಲ್ಲಾ ಕೆಡುಕು, ಅನ್ಯಾಯಗಳ ವಿರುದ್ಧ ಗಟ್ಟಿ ದ್ವನಿಯನ್ನು ಎತ್ತಲೇಬೇಕು. ಕನಿಷ್ಠ ಆ ಮಾನವೀಯ ಕಾಳಜಿಯನ್ನು ನಮ್ಮಲ್ಲಿ ಜೀವಂತವಾಗಿಟ್ಟುಕೊಳ್ಳಬೇಕು.

ಇದೇ ಮುಹರ್ರಮ್ ನಮಗೆ ನೀಡುವ ಸಂದೇಶ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *