Home / ಪ್ರಶ್ನೋತ್ತರ / ಭಾರತದಲ್ಲಿ ಸರ್ವಧರ್ಮಿಯರಿಗೂ ಸಮಾನ ಅವಕಾಶವಿರಲು ಇಲ್ಲಿ ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿರುವುದು ಕಾರಣವಲ್ಲವೇ.? ಇಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿದ್ದರೆ ಇದೊಂದು ಇಸ್ಲಾಮೀ ರಾಷ್ಟ್ರವಾಗಿ ಮಾರ್ಪಟ್ಟು ಇತರ ಧರ್ಮೀಯರು ಎರಡನೇ ದರ್ಜೆಯ ಪೌರರಾಗುತ್ತಿರಲಿಲ್ಲವೇ ಅಥವಾ ಇಸ್ಲಾಮ್‌ ಗೆ ಬಲವಂತವಾಗಿ ಮತಾಂತರಕ್ಕೊಳ ಪಡುತ್ತಿರಲಿಲ್ಲವೇ?

ಭಾರತದಲ್ಲಿ ಸರ್ವಧರ್ಮಿಯರಿಗೂ ಸಮಾನ ಅವಕಾಶವಿರಲು ಇಲ್ಲಿ ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿರುವುದು ಕಾರಣವಲ್ಲವೇ.? ಇಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿದ್ದರೆ ಇದೊಂದು ಇಸ್ಲಾಮೀ ರಾಷ್ಟ್ರವಾಗಿ ಮಾರ್ಪಟ್ಟು ಇತರ ಧರ್ಮೀಯರು ಎರಡನೇ ದರ್ಜೆಯ ಪೌರರಾಗುತ್ತಿರಲಿಲ್ಲವೇ ಅಥವಾ ಇಸ್ಲಾಮ್‌ ಗೆ ಬಲವಂತವಾಗಿ ಮತಾಂತರಕ್ಕೊಳ ಪಡುತ್ತಿರಲಿಲ್ಲವೇ?

  • ಸಮಾಜದಲ್ಲಿ ಗಾಢವಾಗಿ ಬೇರೂರಿರುವ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ, ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳು ಧರ್ಮಾಧಾರಿತ ಇಸ್ಲಾಮೀ ರಾಷ್ಟ್ರಗಳೆಂಬ ಭಾವನೆ ಸರಿಯಲ್ಲ, ಇಸ್ಲಾಮೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ರಾಷ್ಟ್ರಗಳು ಮಾತ್ರ ಇಸ್ಲಾಮೀ ರಾಷ್ಟ್ರ ಎಂಬ ಹೆಸರಿಗೆ ಅರ್ಹವಾಗುತ್ತದೆ. ಈಗ ಮುಸ್ಲಿಮ್ ರಾಷ್ಟ್ರಗಳೆಂದು ಹೇಳಿಕೊಳ್ಳುವ ಯಾವುದೇ ರಾಷ್ಟ್ರವೂ ವಿಶ್ವದಲ್ಲಿ ಕಂಡು ಬರುತ್ತಿಲ್ಲ. ಭಾಗಶಃ ಇಸ್ಲಾಮೀ ವ್ಯವಸ್ಥೆಗಳನ್ನು ಪಾಲಿಸುವ ರಾಷ್ಟ್ರಗಳಿವೆ. ಆದರೆ ಅವೆಲ್ಲಾ ಅಷ್ಟರ ಮಟ್ಟಿಗೆ ಇಸ್ಲಾಮೀ ರಾಷ್ಟ್ರವಾಗುತ್ತವೆ.

ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳಿಗೆ ತಮ್ಮ ವಿಶ್ವಾಸದಂತೆ ಬಾಳಲು, ಆರಾಧನಾ ಕರ್ಮಗಳನ್ನು ನಿರ್ವಹಿಸಲು, ತಮ್ಮ ಆಚಾರ, ಸಂಪ್ರದಾಯವನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯವಿರುತ್ತದೆ. ಯಾರ ಮೇಲೂ ಇಸ್ಲಾಮನ್ನು ಬಲವಂತವಾಗಿ ಹೇರುವ ಪ್ರಶ್ನೆಯೇ ಇಲ್ಲ. ಇದನ್ನು ಇಸ್ಲಮ್ ಬಲವಾಗಿ ಖಂಡಿಸುತ್ತದೆ. ‘ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸತ್ಯವನ್ನು ಮಿಥ್ಯದಿಂದ ಬೇರ್ಪಡಿಸಲಾಗಿದೆ.’ (ಪವಿತ್ರ ಕುರ್ ಆನ್ 2:256)

“ನೀವು ಹೀಗೆ ಹೇಳಿಬಿಡಿರಿ- ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ. ಇಷ್ಟವಿದ್ದವರು ನಿರಾಕರಿಸಲಿ.’ (ಪವಿತ್ರ ಕುರ್ ಆನ್ 18:29)

ಪ್ರವಾದಿಗಳಿಗೂ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯ ಮಾಡುವ ಅನುಮತಿಯಿರಲಿಲ್ಲ. ಅಲ್ಲಾಹನು ಹೇಳುತ್ತಾನೆ: ‘ಜನರು ವಿಶ್ವಾಸಿಗಳಾಗಲು ನೀವು ಅವರನ್ನು ಒತ್ತಾಯಿಸುವುದೇ? ದೇವನಿಚ್ಛೆಯಿಲ್ಲದಿದ್ದರೆ ಒಬ್ಬನಿಗೂ ವಿಶ್ವಾಸ ಹೊಂದಲು ಸಾಧ್ಯವಿಲ್ಲ.’ (ಪವಿತ್ರ ಕುರ್ ಆನ್ 6:69)

‘ಸಂದೇಶವಾಹಕರೇ, ನೀವು ಉಪದೇಶ ಮಾಡುತ್ತಾ ಸಾಗಿರಿ. ನೀವು ಕೇವಲ ಉಪ ದೇಶಕರು ಅವರ ಮೇಲೇನೂ ಬಲಾತ್ಕಾರ ಮಾಡುವವರಲ್ಲ.’ (ಪವಿತ್ರ ಕುರ್ ಆನ್ 88:21-22)

‘ವಿಶ್ವದ ಪ್ರಥಮ ಇಸ್ಲಾಮೀ ರಾಷ್ಟ್ರವಾದ ಮದೀನಾದಲ್ಲಿ, ಅದರ ಸ್ಥಾಪಕರಾದ ಪ್ರವಾದಿ ಮುಹಮ್ಮದ್(ಸ)ರು ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಿದ ಸ್ವಾತಂತ್ರ್ಯ ಹಾಗೂ ಸೌಕರ್ಯಗಳು ಇತರ ಯಾವುದೇ ಜಾತ್ಯತೀತ ಹಾಗೂ ಧರ್ಮಾಧಾರಿತ ರಾಷ್ಟ್ರಗಳಲ್ಲೂ ಕಾಣಲು ಸಾಧ್ಯವಿದೆಯೇ ಎಂಬುದು ಚಿಂತನಾರ್ಹ ವಿಷಯವಾಗಿದೆ. ಮದೀನಾದಲ್ಲಿ ಅಂಗೀಕರಿಸಲಾದ ನಿಯಮಾವಳಿಗಳಲ್ಲಿ ಇದನ್ನು ಕಾಣಬಹುದು. ‘ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಯಹೂದಿಯರಿಗೆ ಧರ್ಮದ ಆಧಾರದಲ್ಲಿ ಪಕ್ಷಪಾತ ವರ್ತನೆಗಳಿಂದ, ದ್ರೋಹಗಳಿಂದ ರಕ್ಷಣೆ ನೀಡಲಾಗುವುದು. ಮುಸ್ಲಿಮ್ ಸಮುದಾಯದ ಸದಸ್ಯರಂತೆ ಅವರು ಕೂಡ ನಮ್ಮ ಸಹಾಯಕ್ಕೂ ಪ್ರೀತಿಯ ಸಂರಕ್ಷಣೆಗೂ ಅರ್ಹರು. ಅವರು ಮುಸ್ಲಿಮರೊಂದಿಗೆ ಸೇರಿ ಒಂದೇ ರೀತಿಯ ರಾಷ್ಟ್ರವಾಗುತ್ತಾರೆ. ಮುಸ್ಲಿಮರಂತೆಯೇ ತಮ್ಮ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ಅವರಿಗೆ ನೀಡಲಾಗಿದೆ.’

ಸರ್ ಥಾಮಸ್ ಆರ್ನಲ್ಡ್‌ ಬರೆಯುತ್ತಾರೆ: ‘ಮುಹಮ್ಮದ್ ಹಲವು ಅರಬ್ – ಕ್ರೈಸ್ತ ಗೋತ್ರಗಳೊಂದಿಗೆ ಒಪ್ಪಂದವನ್ನು ಏರ್ಪಡಿಸಿದ್ದರು. ಅವರಿಗೆ ಸಂರಕ್ಷಣೆ ಹಾಗೂ ಸ್ವಂತ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ನೀಡಿದರು.’ (ಇಸ್ಲಾಮ್ ಸಂದೇಶ ಪ್ರಚಾರ ಪುಟ-60)

ಪ್ರವಾದಿವರ್ಯರ ಮಾರ್ಗವನ್ನು ಅನುಸರಿಸಿದ, ಎಲ್ಲಾ ಮುಸಲ್ಮಾನ ಆಡಳಿತಗಾರರು `ಇದೇ ನಿಲುವನ್ನು ಅಂಗೀಕರಿಸಿದರು. ಭಾರತದ ಇತಿಹಾಸದ ಪುಟಗಳಲ್ಲಿ ಅತ್ಯಧಿಕವಾಗಿ ತಪ್ಪಾಗಿ ಚಿತ್ರೀಕೃತವಾದ, ವಿಮರ್ಶಿಸಲ್ಪಟ್ಟ ಔರಂಗಜೇಬ್‌ರ ಧಾರ್ಮಿಕ ಸಹಿಷ್ಣುತೆಯ ಕುರಿತು ಅಲೆಕ್ಸಾಂಡರ್ ಹಾಮಿಲ್ಟನ್ ಬರೆಯುತ್ತಾರೆ: ‘ಹಿಂದೂಗಳಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದಲ್ಲದೆ, ಹಿಂದೂ ರಾಜರ ಅಧೀನದಲ್ಲಿರುವಾಗ ನಡೆಯುತ್ತಿದ್ದ ವ್ರತಾನುಷ್ಠಾನಗಳು, ಉತ್ಸವಗಳು, ಜಾತ್ರೆಗಳಿಗೂ ಸೌಲಭ್ಯ ಏರ್ಪಡಿಸಲಾಗುತ್ತಿತ್ತು. ಕೇವಲ ಮೀರತ್‌ ನಗರದಲ್ಲಿ ನೂರಕ್ಕಿಂತಲೂ ಹೆಚ್ಚು ವಿಭಿನ್ನ ಹಿಂದೂ ಪಂಗಡಗಳಿದ್ದರೂ, ಅವರೊಳಗೆ ಪ್ರಾರ್ಥನೆಯ ಸಿದ್ಧಾಂತಗಳ ವಿಷಯದಲ್ಲಿ ಯಾವುದೇ ವಿವಾದ ಉಂಟಾಗಿರಲಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ತನ್ನಿಚ್ಛೆಯಂತೆ ಆರಾಧಿಸುವ, ಪೂಜಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು.’ (Alexander Hamilton, A New Account of the East Indies, vol-1 pp, 159, 162, 163)

ಮುಸ್ಲಿಮ್ ಆಡಳಿತಗಾರರು ಮತಾಂತರಕ್ಕೆ ಬಲಾತ್ಕಾರಿಸಿ ಒತ್ತಡ ಹೇರುತ್ತಿದ್ದರೆ ಶತಮಾನಗಳ ಮುಸ್ಲಿಮ್ ಆಡಳಿತದ ಬಳಿಕವೂ ಈ ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿ ಉಳಿಯಲು ಸಾಧ್ಯವಿತ್ತೇ?

ಇಸ್ಲಾಮೀ ಆಡಳಿತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಪೂರ್ಣ ಆರಾಧನಾ ಸ್ವಾತಂತ್ರ್ಯ, ನೀಡಲಾಗಿತ್ತು. ನಜ್ರಾನ್‌ನ ಕೃಷ್ಣ ರಾಜರೊಂದಿಗೆ ಪ್ರವಾದಿವರ್ಯರು ಮಾಡಿದ ಒಪ್ಪಂದದಲ್ಲಿ ಹೀಗೆ ಕಾಣಬಹುದು. ‘ನಜ್ರಾನಿನ ಕೈಸ್ತರಿಗೂ ಅವರ ಸಹವಾಸಿಗಳಿಗೂ ದೇವನ ಅಭಯವೂ, ಪ್ರವಾದಿಯಾದ ಮುಹಮ್ಮದ್(ಸ)ರಿಗೆ ಅವರ ಸಂರಕ್ಷಣೆಯ ಹೊಣೆಗಾರಿಕೆಯೂ ಇದೆ. ಅವರ ಪ್ರಾಣ, ಧರ್ಮ, ಭೂಮಿ, ಸಂಪತ್ತುಗಳಿಗೂ ಅವರ ಉಪಸ್ಥಿತಿಯಲ್ಲೂ, ಅನುಪಸ್ಥಿತಿಯಲ್ಲೂ ಅವರ ಒಂಟೆಗಳಿಗೂ, ವ್ಯಾಪಾರಿ ತಂಡಗಳಿಗೂ, ಶಿಲುಬೆ, ಚರ್ಚ್ ಗಳಂತಹ ಧಾರ್ಮಿಕ ಚಿಹ್ನೆಗಳಿಗೂ ರಕ್ಷಣೆ ನೀಡಲಾಗುವುದು. ಈಗ ಇರುವ ಸ್ಥಿತಿಯಲ್ಲಿ ಸ್ವಲ್ಪವೂ ಬದಲಾವಣೆ ತರುವುದಿಲ್ಲ, ಅವರ ಹಕ್ಕು ಮತ್ತು ಧಾರ್ಮಿಕ ಚಿಹ್ನೆಯ ಮೇಲೆ ಹಸ್ತಕ್ಷೇಪವಿಲ್ಲ, ಅವರ ಪಾದ್ರಿ, ಪುರೋಹಿತ, ಚರ್ಚ್‌ ನ ಸೇವಕರನ್ನು ಅವರ ಸ್ಥಾನದಿಂದ ಪದಚ್ಯುತಗೊಳಿಸುವುದಿಲ್ಲ.

ಒಂದನೇ ಖಲೀಫ ಅಬೂಬಕರ್ ಸಿದ್ದೀಕ್(ರ) ಹೀರಾ ನಿವಾಸಿಗಳೊಂದಿಗೆ ಮಾಡಿದ ಕರಾರಿನಲ್ಲಿ ಹೀಗಿದೆ: ‘ಅವರ ಆರಾಧನಾಲಯಗಳು, ಶಿಲುಬೆಗಳು ಮುಕ್ತವಾದ ಕೋಟೆಗಳನ್ನು ಕೆಡವಲಾಗುವುದಿಲ್ಲ. ಘಂಟೆ ಬಾರಿಸುವುದು, ಹಬ್ಬದಲ್ಲಿ ಶಿಲುಬೆ ಮೆರವಣಿಗೆಯಿಂದ ತಡೆಯುವುದಿಲ್ಲ’

ಮಧ್ಯಪ್ರಾಚ್ಯ ದೇಶದ ಕ್ರೈಸ್ತರು ಮುಸ್ಲಿಮ್ ಆಡಳಿತದ ಅಧೀನದಲ್ಲಿ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ದೊರೆತ ಬಗ್ಗೆ ಬಹಳ ಸಂತೃಪ್ತರಾಗಿದ್ದರು. ಐದು ಶತಕಗಳ ಕಾಲ ದೀರ್ಘವಾಗಿ ಮುಂದುವರಿದ ಇಸ್ಲಾಮೀ ಆಡಳಿತದಲ್ಲಿ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲವೆಂದು 12ನೇ ಶತಮಾನದ ಎರಡನೇ ಹಂತದಲ್ಲಿ ಅಂಟಾಕಿಯಾದ ಯಾಕೋಬನಾಗಿದ್ದ ಪಾತ್ರಿಯಾರ್ಕಿಸ್ ಆಗಿದ್ದ ದೊಡ್ಡ ಮೈಕಲ್‌ನ ಪ್ರಸ್ತಾಪ ಇದನ್ನು ಸ್ಪಷ್ಟಪಡಿಸುತ್ತದೆ. ರೋಮನ್ ಆಡಳಿತಗಾರ, ಹರ್ಕ್ಯೂಲನ ಮರ್ದನದ ಕಥೆಗಳನ್ನು ವಿವರಿಸಿ ಅವರು ಬರೆಯುತ್ತಾರೆ: ‘ಸರ್ವಶಕ್ತನು ಮಾನವ ಸಾಮ್ರಾಜ್ಯದ ಒಳಿತಿಗಾಗಿ ತನ್ನಿಚ್ಚೆಯಂತೆ ಬದಲಾಯಿಸುವವನೂ, ತಾನಿಚ್ಚಿಸಿದವರಿಗೆ ಸಾಮ್ರಾಜ್ಯವನ್ನು ನೀಡುವವನೂ, ಬಡವರ ಉದ್ಧಾರಕನಾದ ಪ್ರತೀಕಾರದ ದೇವನು ಇಸ್ಮಾಯೀಲ್‌ರ ಸಂತಾನವನ್ನು ರೋಮನರ ಕರಗಳಿಂದ ನಮ್ಮನ್ನು ರಕ್ಷಿಸಲೆಂದು ಕರೆತಂದಿದ್ದಾನೆ. ರೋಮನರು ನಮ್ಮ ಚರ್ಚ್ ಗಳನ್ನು ಕೊಳ್ಳೆಹೊಡೆಯಬಹುದು ಮತ್ತು ನಮ್ಮನ್ನು ನಿರ್ಧಯವಾಗಿ ಮರ್ದಿಸುವುದನ್ನು ದೇವನು ನೋಡುತ್ತಲಿದ್ದ ಕಾಲ್‌ಸಿಡೋನಿಯನ್ ವಿಭಾಗದವರಿಗೆ ಒಪ್ಪಿಸಲಾದ ಚರ್ಚ್‌ಗಳು ಅವರ ಕೈಯಲ್ಲೇ ಉಳಿದುದರಿಂದ ನಮಗೆ ಅಲ್ಪಪ್ರಮಾಣದ ನಷ್ಟವುಂಟಾಯಿತು. ಅರಬರು ನಮ್ಮ ನಗರಗಳನ್ನು ವಶಪಡಿಸಿದಾಗ ಚರ್ಚ್‌ಗಳನ್ನು ಯಥಾ ಸ್ಥಿತಿಯಲ್ಲಿಯೇ ಉಳಿಸಿದರು. ಏನಿದ್ದರೂ ರೋಮನರ ಕ್ರೌರ್ಯ, ನೀಚತೆ, ರೋಷ ಹಾಗೂ ಧಾರ್ಮಿಕ ಆವೇಶದಿಂದಲೂ ಪಾರಾಗಿ, ಶಾಂತಿ ಸಮಾಧಾನದ ಜೀವನ ಸಾಗಿಸಲು ಸಾಧ್ಯವಾದದ್ದು ಸಣ್ಣ ವಿಷಯವೇನಲ್ಲ.’ (Michel the Elder vol-2 pp. 412,413 ಉದ್ಧರಣೆ: ಸರ್ ಥಾಮಸ್ ಅರ್ನಾಲ್ಡ್ ಇಸ್ಲಾಮಿ ಸಂದೇಶವೂ ಪ್ರಚಾರವೂ, ಪುಟ-67)

‘ಭಾರತದ ಮುಸ್ಲಿಮ್ ಆಡಳಿತದ ಕುರಿತು ಶ್ರೀ ಈಶ್ವರಿ ಪ್ರಸಾದ್ ಹೇಳುತ್ತಾರೆ: ‘ಮುಸ್ಲಿಮರು ತಮ್ಮ ಅಧೀನದಲ್ಲಿರುವ ಜನತೆಗೆ ಆರಾಧನಾ ಸ್ವಾತಂತ್ರ್ಯವನ್ನು ನೀಡಿದರು ಮತ್ತು ಸಹಿಷ್ಣುತೆಯಿಂದ ವರ್ತಿಸಿದರು.’ (History of Muslim Rule page 46)

ಬಾಬರ್ ಚಕ್ರವರ್ತಿಯು ತನ್ನ ಮಗನಾದ ಹುಮಾಯೂನನಿಗೆ ನೀಡಿದ ಅಂತಿಮ ಉಪದೇಶದಲ್ಲಿ ಹಿಂದೂ ಬಾಂಧವರೊಂದಿಗೆ ಉದಾರತೆಯಿಂದ ವರ್ತಿಸಬೇಕೆಂದು ಹೇಳಿದ್ದರು. ಡಾ| ರಾಜೇಂದ್ರ ಪ್ರಸಾದರೂ ಸೇರಿದಂತೆ ಹಲವರು ಉದ್ಘರಿಸಿದ ಈ ಅಂತ್ಯೋಪದೇಶದಲ್ಲಿ ಹೀಗೆ ಕಾಣಬಹುದು: ‘ಭಾರತವು ವಿವಿಧ ಧರ್ಮಗಳ ಸಂಗಮ ಭೂಮಿ, ಅದಕ್ಕಾಗಿ ನೀನು ಕೃತಜ್ಞತೆ ಅರ್ಪಿಸಬೇಕು. ಅಲ್ಲಾಹನನು ನಿನಗೆ ಅಧಿಕಾರ ನೀಡಿದರೆ ನೀನು ಕೋಮು ಪಕ್ಷಪಾತಿ ಆಗಬಾರದು. ಹಿಂದೂಗಳ ಹೃದಯ ಭೇದಿಸುವಂತೆ ದನಗಳನ್ನು ಕಡಿಯಬಾರದು. ಹಾಗೆ ಮಾಡಿದರೆ, ಜನರು ನಿನ್ನನ್ನು ದ್ವೇಷಿಸುವರು. ದೇವಾಲಯಗಳನ್ನು, ಧಾರ್ಮಿಕ ಕ್ಷೇತ್ರಗಳನ್ನು ಕೆಡವಬಾರದು. ಆಡಳಿತಗಾರನು ಪ್ರಜೆಗಳನ್ನೂ, ಪ್ರಜೆಗಳು ಆಡಳಿತಗಾರನನ್ನೂ ಪ್ರೀತಿಸುವ ವಾತಾವರಣ ನಿರ್ಮಿಸಬೇಕು. ಕರುಣೆ ತುಂಬಿದ ಹೃದಯದಿಂದ ಇಸ್ಲಾಮನ್ನು ಪಾವನಗೊಳಿಸಬೇಕು ಹೊರತು ಆಕ್ರಮಣದಿಂದಲ್ಲ.’ (ಉದ್ದರಣೆ: ಮಿಸಿಸ್ ನಿಲೋಫರ್ ಅಹ್ಮದ್‌, ಇನ್ಸ್‌ಟಿಟ್ಯೂಟ್ ಆಫ್ ಒಬ್ಜೆಕ್ಟಿವ್ ಸ್ಟಡೀಸ್, ನವದೆಹಲಿ)

ಆಲಂಗೀರ್ ನಾಮದಲ್ಲಿ ಹೀಗಿದೆ: ‘ಔರಂಗಜೇಬ್ ಬಂಗಾಳ ಮತ್ತು ಅಸ್ಸಾಂನಲ್ಲಿ ಕೆಲವು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾರಲ್ಲದೆ ಬುದ್ದಗಯಾಕ್ಕೆ ಬೃಹತ್ ಪ್ರಮಾಣದಲ್ಲಿ ಭೂಮಿಯನ್ನು ಸರ್ಕಾರದ ವತಿಯಿಂದ ನೀಡಿದ್ದಾರೆ.’ ( ಉದ್ಧರಣೆ Illustrated weekly, 5,10,73)

ಪಂಡಿತ್ ಸುಂದರ್‌ಲಾಲ್ ಹೇಳುತ್ತಾರೆ: ‘ಅಕ್ಟರ್, ಜಹಾಂಗೀರ್, ಶಾಜಹಾನ್‌ರ ಕಾಲದಲ್ಲೂ, ಔರಂಗಜೇಬ್‌ ಮತ್ತು ಅವರ ಉತ್ತರಾಧಿಕಾರಿಗಳ ಕಾಲದಲ್ಲೂ ಹಿಂದೂ ಮುಸ್ಲಿಮರೊಂದಿಗೆ ಸಮಾನ ನಿಲುವನ್ನು ಸ್ವೀಕರಿಸಲಾಗಿತ್ತು. ಎರಡು ಧರ್ಮಗಳೂ ಸಮಾನವಾಗಿ ಗೌರವಿಸಲ್ಪಟ್ಟವು. ಧರ್ಮದ ಹೆಸರಿನಲ್ಲಿ ಎಲ್ಲೂ ವಂಚನೆ ನಡೆಯಲಿಲ್ಲ, ಎಲ್ಲಾ ಚಕ್ರವರ್ತಿಗಳು ಹಲವಾರು ಕ್ಷೇತ್ರಗಳಿಗೆ ಬೃಹತ್ ಪ್ರಮಾಣದಲ್ಲಿ ಭೂದಾನ ಮಾಡಿದರು. ಇಂದು ಕೂಡ ಭಾರತದ ವಿವಿಧ ಕ್ಷೇತ್ರಗಳ ಅರ್ಚಕರಲ್ಲಿ ಔರಂಗಜೇಬರ ಸಹಿಯಿರುವ ರಾಜಾಜ್ಞೆಯ ಪ್ರತಿಗಳಿವೆ. ಅದು ಪಾರಿತೋಷಕಗಳು ಹಾಗೂ ಸೊತ್ತುಗಳನ್ನು ನೀಡಿದ ಸ್ಮರಣಿಕೆಗಳಾಗಿವೆ. ಇಂತಹ ಎರಡು ಆದೇಶಗಳು ಈಗಲೂ ಅಲಹಾಬಾದನಲ್ಲಿದೆ. ಅದರಲ್ಲೊಂದು ಸೋಮನಾಥ ಕ್ಷೇತ್ರದ ಅರ್ಚಕರ ಕೈಯಲ್ಲಿದೆ.’

ಇತರ ಧರ್ಮಿಯರ ಆರಾಧಾನಾಲಯಗಳ ಸಂರಕ್ಷಣೆಗೆ ಇಸ್ಲಾಮೀ ರಾಷ್ಟ್ರವು ಬಹಳ ಕಾಳಜಿ ವಹಿಸುತ್ತ ಬಂದಿದೆ. ಒಂದನೇ ಖಲೀಫ ಅಬೂಬಕರ್ ಸಿದ್ದಿಕ್ ರನ್ನು ದೇಶದ ಕ್ರೈಸ್ತ ಬಾಂಧವರು ಹೊಸದಾಗಿ ನಿರ್ಮಿಸಿದ ಚರ್ಚನ್ನು ಉದ್ಘಾಟಿಸಲು ಆಮಂತ್ರಿಸಿದರು. ಅದನ್ನು ನಮಾಝ್ ನಿರ್ವಹಿಸಿ ಉದ್ಘಾಟಿಸಿದರೆ ಸಾಕು ಎಂದು ಹೇಳಿದರು. ಆಗ ಖಲೀಫ ಹೇಳಿದರು: ‘ಈ ಚರ್ಚನ್ನು ನಾನು ಉದ್ಘಾಟಿಸಿದರೆ ನನ್ನ ಕಾಲಾನಂತರ ಮುಂದಿನ ಪೀಳಿಗೆಯು ಇದು ನಮ್ಮ ಖಲೀಫ ನಮಾಝ್ ಮಾಡಿದ ಸ್ಥಳ, ಅದು ನಮಗೆ ಸಲ್ಲಬೇಕೆಂಬ ವಾದದೊಂದಿಗೆ ಬಂದರೆ ಖಂಡಿತವಾಗಿಯೂ ಅಶಾಂತಿಗೆ ಕಾರಣವಾದೀತು.’ ಖಲೀಫರ ದೂರದೃಷ್ಟಿ ಸರಿಯೆಂದು ಕ್ರೈಸ್ತ ಸಹೋದರರಿಗೂ ಅರ್ಥವಾಗಿ ಅವರು ಹಿಂದೆ ಸರಿದರು.

ಎರಡನೇ ಖಲೀಫ ಉಮರುಲ್ ಫಾರೂಕ್ ಫೆಲೆಸ್ತೀನ್‌ ಗೆ ಭೇಟಿ ನೀಡಿದಾಗ ನಮಾಝ್ ನ ಸಮಯವಾಯಿತು: ಆಗ ಅಲ್ಲಿನ ಪಾದ್ರಿ ಯಾರ್ಕಿಸ್ ಸಫರ್ನಿಯಾಸ್, ತಮ್ಮ ಚರ್ಚ್ ನಲ್ಲೇ ನಮಾಝ್ ನಿರ್ವಹಿಸಲು ಸೂಚಿಸಿದರು. ಆಗ ಖಲೀಫರು ಅದನ್ನು ನಯವಾಗಿ ತಿರಸ್ಕರಿಸಿದರು. ತಾನು ಈ ನಮಾಝ್ ಇಲ್ಲಿ ನಿರ್ವಹಿಸಿದರೆ ನನ್ನ ನಂತರದ ಅವಿವೇಕಿ ಮುಸ್ಲಿಮರು ಯಾರಾದರೂ ಇದರ ಹೆಸರಿನಲ್ಲಿ ಅವಕಾಶವಾದದೊಂದಿಗೆ ಬರಬಹುದು, ಮಸೀದಿ ಮಾಡಲು ಪ್ರಯತ್ನಿಸಬಹುದು ಎಂಬುದೇ ಕಾರಣವಾಗಿತ್ತು. ಇಂತಹ ಅಶಾಂತಿಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಚರ್ಚ್‌ನ ಹೊರಭಾಗದ ಖಾಲಿ ಜಾಗದಲ್ಲಿ ಹಾಸನ್ನು ಹಾಸಿ ನಮಾಝ್ ನಿರ್ವಹಿಸಿದರು.

ಮುಸ್ಲಿಮೇತರರಿಗೆ ಅವರ ವ್ಯಕ್ತಿ ನಿಯಮದಂತೆ ಜೀವಿಸುವ ಸಂಪೂರ್ಣ ಸ್ವಾತಂತ್ರ ನೀಡುವ ಇಸ್ಲಾಮ್ ಅವರ ಹಕ್ಕಿಗೆ ಸ್ವಲ್ಪವೂ ಚ್ಯುತಿ ಬರುವುದಕ್ಕೆ ಅನುಮತಿ ನೀಡುವುದಿಲ್ಲ. ಪ್ರವಾದಿ(ಸ)ರು ಹೇಳಿರುವರು: ‘ಜಾಗರೂಕರಾಗಿರಿ, ನಿಮ್ಮಲ್ಲಿ ಯಾರಾದರೂ ಮುಸ್ಲಿಮೇತರ ಪ್ರಜೆಗಳನ್ನು ಆಕ್ರಮಿಸುವುದೋ, ಅವರಿಗೆ ಅಸಾಧ್ಯವಾದಷ್ಟು ತೆರಿಗೆಯನ್ನು ಹೇರುವುದೋ, ಅವರೊಂದಿಗೆ ಕ್ರೂರವಾಗಿ ವರ್ತಿಸುವುದೋ ಅವರ ಹಕ್ಕುಗಳನ್ನು ಕಡಿತಗೊಳಿಸುವಂತಹ ಕೆಲಸವನ್ನೋ ಮಾಡಿದರೆ ಅಂತ್ಯ ದಿನದಂದು ನಾನು ಅವರ ವಿರುದ್ಧ ದೂರು ನೀಡುತ್ತೇನೆ.’ (ಅಬೂದಾವೂದ್)

‘ಮುಸ್ಲಿಮೇತರ ಪ್ರಜೆಯನ್ನು ಅಪಾಯಕ್ಕೀಡುಗೊಳಿಸುವವನಿಗೆ ಸ್ವರ್ಗದ ಸುವಾಸನೆಯೂ ದೊರೆಯದು.’ (ಅಬೂ ಯೂಸುಫ್ ಕಿತಾಬುಲ್ ಖರಾಜ್, ಪುಟ 71)

ವಿವಾಹ, ವಿವಾಹ ವಿಚ್ಛೇದನ, ವಾರೀಸು ಹಕ್ಕು ಮೊದಲಾದ ವ್ಯಕ್ತಿ ನಿಯಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಕ್ಷಿಯ ಧರ್ಮದ ರೀತಿಯಂತೆ ಇಸ್ಲಾಮೀ ನ್ಯಾಯಾಲಯ ತೀರ್ಪು ನೀಡುತ್ತದೆ. ಶರೀಅತ್ ನಿಯಮಗಳನ್ನು ಅವರಿಗೆ ಜಾರಿಗೊಳಿಸುವುದಿಲ್ಲ, ಪ್ರವಾದಿಯವರ ಕಾಲದಲ್ಲಿ ಯಹೂದಿಯರ ಪ್ರಕರಣಗಳು ವಿಚಾರಣೆಗೆ ಬಂದರೆ ಮದೀನಾದ ‘ಬೈತುಲ್ ಮಿದ್ ರಾಸ್’ ಎಂಬ ಯಹೂದಿ ಸಂಸ್ಥೆಯೊಂದಿಗೆ ಸಂಪರ್ಕಿಸಿ, ಅಲ್ಲಿನ ಪುರೋಹಿತರೊಂದಿಗೆ ಪ್ರಶ್ನೆಗಳ ಕುರಿತು ಚರ್ಚಿಸಿ ನಂತರವೇ ತೀರ್ಪು ನೀಡಲಾಗುತ್ತಿತ್ತು. (ಇಟ್ಟು ಹಿಶಾಮ್, ಸೀರತುನ್ನಬಿ, ಭಾಗ-2, ಪುಟ 201)

ಸರ್ ಥಾಮಸ್ ಆರ್ನಲ್ಡ್ ಬರೆಯುತ್ತಾರೆ: ‘ಮುಸ್ಲಿಮೇತರ ಸಮೂಹಗಳು ಸಂಪೂರ್ಣ ತನ್ನ ಹಕ್ಕುಗಳನ್ನು ಅನುಭವಿಸಿತು. ಹೇಗೆಂದರೆ ಅವರ ಆಂತರಿಕ ವ್ಯವಹಾರಗಳನ್ನು ನಡೆಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಸರಕಾರವು ಅವರಿಗೆ ವಹಿಸಿತ್ತು. ಧಾರ್ಮಿಕ ವಿಷಯಗಳನ್ನು ತೀರ್ಮಾನಿಸುವ ಅಧಿಕಾರ ಅವರ ಪುರೋಹಿತರಿಗೆ ಲಭಿಸಿತು. ಅವರ ಮಠಗಳಿಗೆ ಯಾವುದೇ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲಾಯಿತು.’ (ಇಸ್ಲಾಮ್ ಸಂದೇಶವೂ ಪ್ರಚಾರವೂ, ಪುಟ 78)

ಆದರೆ ಇಸ್ಲಾಮೀ ರಾಷ್ಟ್ರದಲ್ಲಿ ಅನ್ಯಾಯ, ಅವಿವೇಕಗಳಿಗೆ ಅವಕಾಶವಿಲ್ಲ. ಜಾತಿ-ಮತ-ಭೇದವಿಲ್ಲದೆ ನಿಷ್ಪಕ್ಷಪಾತವಾದ ನ್ಯಾಯವನ್ನು ಜಾರಿಗೊಳಿಸಲಾಗುವುದು. ಪವಿತ್ರ ಕುರ್‌ಆನ್‌ ಆದೇಶಿಸುತ್ತದೆ. ‘ನೀವು ಅಲ್ಲಾಹನಿಗಾಗಿ ಸತ್ಯದಲ್ಲೇ ನೆಲೆನಿಲ್ಲುವವರೂ ನ್ಯಾಯದ ಸಾಕ್ಷ್ಯವಹಿಸುವವರೂ ಅಗಿರಿ, ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವಭಯಕ್ಕೆ ಹೆಚ್ಚು ಅನುಗುಣವಾಗಿರುತ್ತದೆ.” (5: 8)

ಇಸ್ಲಾಮೀ ರಾಷ್ಟ್ರದಲ್ಲಿ ಮುಸ್ಲಿಮೇತರ ಪ್ರಜೆಗಳ ವಿರುದ್ಧ ದಂಗೆಯೆದ್ದರೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು. ಕೊಂದರೆ ಪ್ರತಿ ಶಿಕ್ಷೆ ನೀಡಲಾಗುವುದು. ಆರಾಧನಾಲಯಗಳನ್ನು ಧ್ವಂಸಗೊಳಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅದನ್ನು ಪುನನಿರ್ಮಾಣ ಮಾಡಲಾಗುವುದು. ಆರಾಧನಾಲಯಗಳಂತೆಯೇ ಧಾರ್ಮಿಕ ಅಲ್ಪಸಂಖ್ಯಾತರ ಜೀವ, ಸೊತ್ತು, ಶಿಕ್ಷಣ ಸಂಸ್ಥೆಗಳು, ವ್ಯಕ್ತಿ ನಿಯಮಗಳಿಗೆ ಸಂಪುರ್ಣ ರಕ್ಷಣೆ ನೀಡಲಾಗುವುದು, ಅವುಗಳಿಗೆದುರಾಗಿ ಹಸ್ತಕ್ಷೇಪಕ್ಕೆ ಅನುಮತಿ ನೀಡುವುದಿಲ್ಲ. ಆದ್ದರಿಂದ ಇಸ್ಲಾಮೀ ಆಡಳಿತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಹಾಗೂ ರಕ್ಷಣೆ ದೊರೆಯುತ್ತದೆಂಬುದರಲ್ಲಿ ಸಂಶಯವಿಲ್ಲ. ಅವರು ಖಂಡಿತವಾಗಿಯೂ ಅನ್ಯಾಯ, ಆಕ್ರಮಣ, ಅವಮಾನಗಳಿಗೆ ಒಳಗಾಗಲಾರರು, ದೇಶದ ಆದಿವಾಸಿಗಳೂ, ಹಿಂದುಳಿದ ವರ್ಗದವರೆಲ್ಲರೂ ತಾವು ಹಿಂದುಗಳಲ್ಲವೆಂದು ಪ್ರಬಲವಾಗಿ ವಾದಿಸುತ್ತಿರುವಾಗ, ಪ್ರಶ್ನೆಯಲ್ಲಿ ಕೇಳಿರುವ ಭಾರತದ ಬಹುಸಂಖ್ಯಾತ ಹಿಂದೂಗಳೆಂಬ ಪ್ರಸ್ತಾಪ ವಸ್ತುನಿಷ್ಠವೋ, ಅಲ್ಲವೋ ಎಂದು ಹೇಳಬೇಕಾದ ಅಗತ್ಯವಿದೆ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *