Home / ಪ್ರಶ್ನೋತ್ತರ / ‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ?

‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ?

ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು ಮೈಬಣ್ಣದವನು ನಾನು ಯಾಕೆ ಬಿಳಿಯವನಾಗಿಲ್ಲವೆಂದು ಪ್ರಶ್ನಿಸಬಹುದು. ತನ್ನನ್ನು ಸುಂದರಗೊಳಿಸಿಲ್ಲವೇಕೆಂದು ಕುರೂಪಿಯೂ, ಪ್ರತಿಭಾವಂತನಾಗಿ ಮಾಡಲಿಲ್ಲವೆಂದು ಸಾಮಾನ್ಯ ಬುದ್ದಿಯುಳ್ಳವನೂ ಕೇಳಬಹುದು. ಉತ್ತಮ ಹವಾಮಾನ ಇರುವ ಸ್ಥಳದಲ್ಲಿ ಹುಟ್ಟಿಸಲಿಲ್ಲವೇಕೆಂದು ಮರುಭೂಮಿಯ ನಿವಾಸಿಯೂ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿಸಲಿಲ್ಲವೇಕೆಂದು ಬಡವನೂ, ರಾಜನಾಗಿ ಮಾಡಲಿಲ್ಲವೆಂದು ಜನಸಾಮಾನ್ಯನೂ, ಇಪ್ಪತ್ತೊಂದನೇ ಶತಮಾನದಲ್ಲಿ ಜೀವನ ಸಿಗಲಿಲ್ಲವೆಂದು ಹತ್ತನೇಯ ಶತಮಾನದವನ ಪ್ರಶ್ನೆಯೂ ಎಲ್ಲವೂ ಪ್ರಸಕ್ತ ಹಾಗೂ ನ್ಯಾಯಯುತವೇ ಆಗಿದೆ. ಇವುಗಳನ್ನು ಅವರವರ ದೃಷ್ಟಿಕೋನದಿಂದ ನೋಡುವಾಗ ಇದು ಬಹಳ ದೊಡ್ಡ ಅನ್ಯಾಯವಾಗಿದೆ. ಮಹಿಳೆಯರು ಹೀಗೆ ಪ್ರಶ್ನಿಸಬಹುದು- ನಾನೇ ಗರ್ಭಧರಿಸಿ ಕಷ್ಟಪಟ್ಟು ನೋವನುಭವಿಸಿ ಹೆತ್ತು, ಮಗುವಿಗೆ ಸ್ತನಪಾನ ಮಾಡಿಸಬೇಕು. ನನ್ನ ಗಂಡನಿಗೆ ಅಂತಹ ಕಷ್ಟವೇನೂ ಇಲ್ಲವಲ್ಲ, ಆದ್ದರಿಂದ ತನ್ನನ್ನು ಗಂಡಾಗಿ ಸೃಷ್ಟಿಸಲಿಲ್ಲವೇಕೆಂದು ತಗಾದೆ ತಗೆಯಬಹುದು. ತನ್ನೊಂದಿಗೆ ಅನ್ಯಾಯವಾಗಿದೆಯಂದು ಸಮರ್ಥಿಸಬಹುದು.

ಮನುಷ್ಯರ ನಡುವೆ ವ್ಯತ್ಯಾಸಗಳಿಲ್ಲದಿರುವುದೇ ನ್ಯಾಯವೆನ್ನುವುದಾದರೆ ಎಲ್ಲರೂ ಒಂದೇ ಭೂ ಪ್ರದೇಶದಲ್ಲಿ ಒಂದೇ ಕಾಲ, ಕುಟುಂಬ, ಒಂದೇ ತಂದೆ-ತಾಯಿಗಳ ಮಕ್ಕಳಾಗಿ, ಸಮಾನ ಬುದ್ಧಿವಂತಿಕೆ, ಒಂದೇ ರೀತಿಯ ರೂಪ, ದೇಹ, ಲಿಂಗ ಅಥವಾ ಒಂದೇ ರೀತಿಯ ಆರೋಗ್ಯದಿಂದ ಹುಟ್ಟುವ ಮತ್ತು ಸಾಯುವ ಪರಿಸ್ಥಿತಿ ಇರುತ್ತಿತ್ತು. ಇದು ಅಸಾಧ್ಯ ಮತ್ತು ಅಪ್ರಾಯೋಗಿಕವೆಂದು ಎಲ್ಲರಿಗೂ ಅರ್ಥವಾಗುತ್ತದೆ. ಆದ್ದರಿಂದ ಎಲ್ಲದರಲ್ಲಿಯೂ ವೈವಿಧ್ಯತೆಯು ಮಾನವ ಕುಲದ ಅಸ್ತಿತ್ವಕ್ಕೆ ಅನಿವಾರ್ಯವಾಗಿದೆ.

ಮಾನವ ಜೀವನವು ಮರಣದೊಂದಿಗೆ ಕೊನೆಗೊಳ್ಳುವುದೆಂದಿದ್ದರೆ ಅನ್ಯಾಯದ ಕುರಿತಾದ ಪ್ರಶ್ನೆಗಳು ಸರಿಯಾಗಿದೆ. ಅಂತಾದರೆ ಜನನದಿಂದ ಮರಣದವರೆಗೆ ಜೀವನವು ಎಲ್ಲರಿಗೂ ಸಮಾನವಾಗಿ ಆಸ್ವಾದಿಸಲು ದೊರೆಯಬೇಕು. ಆದರೆ ನ್ಯಾಯವಂತನಾದ ದೇವನು ಮರಣದೊಂದಿಗೆ ನಮ್ಮ ಜೀವನವನ್ನು ಕೊನೆಗೊಳಿಸುವುದಿಲ್ಲ . ಇಹಲೋಕವು ಕರ್ಮ ಮಾಡುವ ಜೀವನವಾಗಿದೆ. ವಿಚಾರಣೆ, ವಿಧಿ, ಕರ್ಮಫಲ ಎಲ್ಲಾ ಮರಣದ ಬಳಿಕ ಪರಲೋಕದಲ್ಲಿ ಲಭಿಸುವುದು. ಪ್ರತಿಯೊಬ್ಬರಿಗೂ ಅವರಿಗೆ ನೀಡಲಾಗಿರುವ ಸಾಮರ್ಥ್ಯಕ್ಕೆ  ಅನುಗುಣವಾಗಿ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.

ಶ್ರೀಮಂತನಿಗಿರುವ ಜವಾಬ್ದಾರಿ ಬಡವನಿಗಿಲ್ಲ. ವಿದ್ವಾಂಸನ ಹೊಣೆಗಾರಿಕೆ ಸಾಮಾನ್ಯ ವ್ಯಕ್ತಿಗಿಲ್ಲ. ಪ್ರತಿಭಾನ್ವಿತ ವ್ಯಕ್ತಿಯ ಕರ್ತವ್ಯ ಸಾಮಾನ್ಯ ಬುದ್ದಿವಂತನಿಗಿಲ್ಲ. ಮಂದ ಬುದ್ದಿಯವನಿಗೆ ಸ್ವಲ್ಪವೂ ಹೊಣೆಗಾರಿಕೆಯಿಲ್ಲ. ಅಂಗವಿಕಲನಿಗೆ ಆರೋಗ್ಯವಂತನಿಗಿಂತ ಕಡಿಮೆ ಹೊಣೆಗಾರಿಕೆಯಿದೆ. ಈ ಹೊಣೆಗಾರಿಕೆಗಳ ನಿರ್ವಹಣೆಯು ಜೀವನದ ಸೋಲು-ಗೆಲುವಿನ ಮಾನದಂಡವಾಗಿದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳನ್ನು ಹೇಗೆ ವಿನಿಯೋಗಿಸಿದರೆಂಬುದನ್ನು ಪರಿಗಣಿಸಲಾಗುವುದು. ನಂತರ, ಅದೇ ಆಧಾರದಲ್ಲಿ ಮರಣದ ಬಳಿಕ ಪುಣ್ಯ-ಶಿಕ್ಷೆಗಳು ನಿರ್ಧಾರವಾಗುತ್ತದೆ. ಆದ್ದರಿಂದ ಮರಣಾನಂತರ ಪರಲೋಕವಿಲ್ಲದಿದ್ದರೆ ಮಾತ್ರ ಭೂಮಿಯಲ್ಲಿ ಮಾನವನ ನಡುವಿನ ವ್ಯತ್ಯಾಸಗಳು ಅನ್ಯಾಯವೆನಿಸುತ್ತದೆ. ಶಾಶ್ವತವಾದ ಪರಲೋಕ ನಿಷೇಧಿಸಲಾಗದ ವಾಸ್ತವವಾದುದರಿಂದ ದೇವನು ಮಾಡಿರುವಂತಹ ವೈವಿಧ್ಯತೆಗಳು, ವ್ಯತ್ಯಾಸಗಳು ಖಂಡಿತ ನ್ಯಾಯಕ್ಕೆ ವಿರುದ್ಧವಾಗುವುದಿಲ್ಲ.

ತನಗೆ ದೇವನು ನೀಡಿದ ಅನುಗ್ರಹಗಳನ್ನು ಸ್ಮರಿಸಿ, ಅಂಗವಿಕಲರೊಂದಿಗೂ, ದರಿದ್ರರೊಂದಿಗೂ ಅನುಕಂಪ ತೋರಿ, ಪರಸ್ಪರ ಪ್ರೀತಿಸಿ, ಸಹಾಯ ಸಹಕಾರಗಳನ್ನು ನೀಡಿ, ಉದಾರತೆಯಿಂದ ವರ್ತಿಸಿದ್ದಾರೋ ಎಂಬ ಆಧಾರದಲ್ಲಿ ಮರಣದ ಬಳಿಕದ ಜೀವನದ ಶಿಕ್ಷೆ-ರಕ್ಷೆ-ಪ್ರತಿಫಲವು ದೊರೆಯುವುದು.

ಆದರೆ ದೇವನನ್ನು ಹಾಗೂ ಪರಲೋಕವನ್ನು ನಿಷೇಧಿಸುವ ನಾಸ್ತಿಕರು ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಸಾಧ್ಯ. ಪ್ರಪಂಚಕ್ಕೆ ಸಮಗ್ರ ವ್ಯವಸ್ಥೆಯನ್ನು ಕಲ್ಪಿಸಿದ ಪ್ರಕೃತಿಯು ಮಾನವರೊಂದಿಗೆ ನ್ಯಾಯ ತೋರದಿರಲು ಕಾರಣವೇನು? ಪ್ರಕೃತಿಯಿಂದಾದ ಈ ಅನ್ಯಾಯಕ್ಕೆ ಯಾವ ಪರಿಹಾರವನ್ನು ಅವರು ಸೂಚಿಸುತ್ತಾರೆ. ಇವುಗಳಿಗೆ ನಾಸ್ತಿಕರು ಹಾಗೂ ಧರ್ಮಧಿಕ್ಕಾರಿಗಳು ಉತ್ತರಿಸಬೇಕು.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *