Home / ಪ್ರಶ್ನೋತ್ತರ / ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ?

ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ?

ಭಾರತದಲ್ಲಿ ಮುಸ್ಲಿಮರು ಜಿಹಾದ್ ನಡೆಸುತ್ತಿಲ್ಲವೆಂಬ ಭಾವನೆ ಸರಿಯಲ್ಲ ಏಕೆಂದರೆ ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಜಿಹಾದ್ ಕಡ್ಡಾಯವಾಗಿದೆ. ಆದರಿಂದ ದೂರ ಸರಿಯಲು ಯಾರಿಗೂ ಅನುಮತಿಯಿಲ್ಲ. ನರಕದಿಂದ ಮುಕ್ತಿಗೆ ಮತ್ತು ಸ್ವರ್ಗ ಪ್ರವೇಶಕ್ಕೆ ಅದು ಅನಿವಾರ್ಯವಾಗಿದೆ.

ಪವಿತ್ರ ಕುರ್ ಆನ್ ಹೇಳುತ್ತದೆ: ‘ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾವು ನಿಮಗೆ ತೋರಿಸಿ ಕೊಡಲೇ? ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ ಮತ್ತು ನಿಮ್ಮ ಸಂಪತ್ತುಗಳಿಂದಲೂ, ಜೀವನಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ, ನೀವು ಅರಿಯುವವರಾಗಿದ್ದರೆ, ನಿಮ್ಮ ಪಾಲಿಗೆ ಇದೇ ಉತ್ತಮವಾಗಿದೆ.'(ಪವಿತ್ರ ಕುರ್ ಆನ್ 61:10-11)

ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರು ಮತ್ತು ಅದಕ್ಕಾಗಿ ಸಹನೆ ವಹಿಸುವವರ ಹೊರತು ಸರ್ಗ ಪ್ರವೇಶ ಸಾಧ್ಯವಲ್ಲವೆಂದು ಕುರ್ ಆನ್ ಹೇಳುತ್ತದೆ. ಮುಸ್ಲಿಮ್ ಸಮುದಾಯವನ್ನು ನಿಯೋಗಿಸಲಾದ ಉದ್ದೇಶವೇ ಜಿಹಾದ್ ನಿರ್ವಹಿಸಲಿಕ್ಕಾಗಿದೆ: ‘ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಕಾರ್ಯಕ್ಕಾಗಿ ನಿಮ್ಮನ್ನು ಆರಿಸಿಕೊಂಡಿರುತ್ತಾನೆ. ಮತ್ತು ಧರ್ಮದಲ್ಲಿ ನಿಮಗೇನೂ ಸಂಕೀರ್ಣತೆಯನ್ನು ಇರಿಸಿಲ್ಲ.’ (ಪವಿತ್ರ ಕುರ್ ಆನ್ 22:78)

ಜಿಹಾದ್ ಯಾರದಾದರೂ ವಿರುದ್ಧವೆಂದು ಭಾವಿಸಿದರೆ ಅದು ಖಂಡಿತಾ ಅಸಂಬದ್ಧವಾಗಿದೆ. ಅದು ಸತ್ಯ ಸಂಸ್ಥಾಪನೆಗಾಗಿ ನಡೆಸುವ ನಿರಂತರ ಪ್ರಯತ್ನವಾಗಿದೆ. ಬಯಕೆಗಳನ್ನು ಕಡಿತಗೊಳಿಸಿ, ಇಚ್ಛೆಗಳನ್ನು ನಿಯಂತ್ರಿಸಿ, ಆಗ್ರಹಗಳ ಮೇಲೆ ಅಧಿಪತ್ಯ ಸ್ಥಾಪಿಸಿ, ಬದುಕನ್ನು ಸಂಪೂರ್ಣವಾಗಿ ದೇವಾದೇಶಕ್ಕೆ ಬದ್ಧಗೊಳಿಸಿ ನೈಜ ಸತ್ಯವಿಶ್ವಾಸಿಯಾಗಲು ಪಡುವ ಪರಿಶ್ರಮವೆಲ್ಲವೂ ಜಿಹಾದ್ ಆಗಿದೆ. ಯುದ್ಧ ರಂಗದಿಂದ ಮರಳಿ ಬರುವಾಗ ಪ್ರವಾದಿವರ್ಯರು ಹೇಳಿದರು: ‘ನಾವು ಅತಿ ಸಣ್ಣ ಜಿಹಾದ್‌ನಿಂದ ಅತ್ಯಂತ ದೊಡ್ಡ ಜಿಹಾದ್‌ನೆಡೆಗೆ ಮರಳಿ ಬಂದಿದ್ದೇವೆ.’ ಆಗ ಪ್ರವಾದಿಯ ಅನುಯಾಯಿಗಳು ಕೇಳುತ್ತಾರೆ. ‘ಅತ್ಯಂತ ದೊಡ್ಡ ಜಿಹಾದ್ ಯಾವುದು?’ ಪ್ರವಾದಿ(ಸ) ಹೇಳುತ್ತಾರೆ: ‘ದೇಹೇಚ್ಚೆಯೊಂದಿಗಿನ ಹೋರಾಟವು ಅತ್ಯಂತ ದೊಡ್ಡ ಜಿಹಾದ್ ಆಗಿದೆ.”

ಕುಟುಂಬದ ಇಸ್ಲಾಮೀಕರಣಕ್ಕೆ ನಡೆಸುವ ಶಿಕ್ಷಣ, ಸಂಸ್ಕರಣೆ, ಸದುಪದೇಶ ಎಲ್ಲವೂ ಜಿಹಾದ್ ನಲ್ಲಿ ಒಳಗೊಂಡಿದೆ. ಸತ್ಯದ ಸಂಸ್ಥಾಪನೆ ಹಾಗೂ ಒಳಿತಿನ ಪ್ರಚಾರಕ್ಕಾಗಿ, ಧರ್ಮದ ಉತ್ಥಾನಕ್ಕಾಗಿ ನಡೆಸುವ ಭಾಷಣ, ಲೇಖನ, ಚರ್ಚೆ, ಸಂಭಾಷಣೆ, ಶಿಕ್ಷಣ ಪ್ರಚಾರವೆಲ್ಲವೂ ಅದರಲ್ಲಿ ಸೇರಿಕೊಂಡಿದೆ. ಸಮುದಾಯದ ಉನ್ನತಿಯನ್ನು ಗಮನದಲ್ಲಿರಿಸಿ ವೈಜ್ಞಾನಿಕ, ಆರ್ಥಿಕ, ಸಾಂಕೇತಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ ರಂಗಗಳಲ್ಲಿ ಮಾಡುವ ಕರ್ಮಗಳು ಜಿಹಾದ್ ನೊಂದಿಗೆ ಸೇರುತ್ತದೆ. ದೇವ ಧರ್ಮದ ಸಂಸ್ಥಾಪನೆಗಾಗಿ ನಡೆಸುವ ಪ್ರತಿಯೊಂದು ಪ್ರಯತ್ನವೂ ದೇವ ಮಾರ್ಗದ ಜಿಹಾದ್ ಆಗಿದೆ. ಜಿಹಾದ್ ಎಂಬುದು ಒಂದು ಸಮಗ್ರ ಪದವಾಗಿದೆ. ಬೌದ್ಧಿಕ ಹಾಗೂ ವೈಚಾರಿಕ ಕ್ರಾಂತಿ ಉಂಟಾಗಲು, ಜನರ ಭಾವನೆ, ಆಲೋಚನೆ, ಇಚ್ಛೆಗಳನ್ನು ಸಂಸ್ಕರಿಸಲು, ಅವರ ದೃಷ್ಟಿಕೋನವನ್ನು ದೇವನ ಸನ್ಮಾರ್ಗದಡೆಗೆ ತಿರುಗಿಸಲು ನಡೆಸಲಾಗುವ ಮಾತುಕತೆ ಹಾಗೂ ಲಿಖಿತವಾದ ವಿಧಾನಗಳಿಂದ ಆರಂಭಗೊಂಡು, ಶತ್ರುವಿನೊಂದಿಗೆ ಆಯುಧ ಹೋರಾಟ ನಡೆಸುವವರೆಗೆ ಅದು ಮುಂದುವರಿಯುತ್ತದೆ. ವ್ಯಕ್ತಿಯು ತನ್ನ ಮಾನ, ಸ್ವಾಭಿಮಾನ, ಪ್ರಾಣ, ಸೊತ್ತುಗಳನ್ನು ರಕ್ಷಿಸಲು ಹೋರಾಡುವುದು ಜಿಹಾದ್ ಆಗಿದೆ. ಆ ಮಾರ್ಗದ ಮರಣವು ದೇವಮಾರ್ಗದಲ್ಲಿ ಹುತಾತ್ಮತೆಯನ್ನು ದಯಪಾಲಿಸುತ್ತದೆ.

ಆದ್ದರಿಂದ ಮುಸ್ಲಿಮರು ಅಲ್ಪಸಂಖ್ಯಾತರಾದರೂ ಬಹುಸಂಖ್ಯತರಾದರೂ ಜಿಹಾದ್ ಕಡ್ಡಾಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಅದರ ವಿಧಾನಗಳಲ್ಲಿ ವ್ಯತ್ಯಾಸವಿರುತ್ತದೆ. ಅದು ಮುಸ್ಲಿಮೇತರರ ವಿರುದ್ಧ ಶಸ್ತ್ರಾಸ್ತ್ರ ಹೋರಾಟವೋ, ಯುದ್ಧವೋ ಅಲ್ಲ, ದೇವಮಾರ್ಗದಲ್ಲಿ ತ್ಯಾಗ ಮತ್ತು ಪರಿಶ್ರಮವಾಗಿದೆ.

ಪ್ರಶ್ನೆಯಲ್ಲಿ ಕೇಳಿರುವಂತೆ ಮುಸ್ಲಿಮೇತರರೆಲ್ಲಾ ಕಾಫಿ‌ರ್ ಗಳಲ್ಲ ‘ಕಾಫಿರ್’ ಎಂಬುದು ಇಸ್ಲಾಮಿನ ಸಾಂಕೇತಿಕ ರೂಪವಾಗಿದೆ. ಸತ್ಯ ಹಾಗೂ ಸನ್ಮಾರ್ಗವನ್ನು ಸಂಪೂರ್ಣ ಅರ್ಥೈಸಿಕೊಂಡ ಬಳಿಕವೂ ಪ್ರಜ್ಞಾಪೂರ್ವಕವಾಗಿ ಅದನ್ನು ನಿರಾಕರಿಸುವವರನ್ನು ಕಾಫಿರ್ ಎನ್ನಲಾಗುತ್ತದೆ. ಕಾಫಿರ್‌ಗಳೊಂದಿಗೂ ಅನಿವಾರ್ಯ ಕಾರಣಗಳಿಲ್ಲದೆ, ಶಸ್ತ್ರಾಸ್ತ್ರ ಹೋರಾಟ ಸಲ್ಲದೆಂದು ಇಸ್ಲಾಮ್ ಆಜ್ಞಾಪಿಸುತ್ತದೆ. ಮುಸ್ಲಿಮ್ ಬಾಹುಳ್ಯವಿರುವ ಅಥವಾ ಅಲ್ಪಸಂಖ್ಯಾತರಾಗಿರುವ ಸ್ಥಳದಲ್ಲಾದರೂ ಸರಿ.

 

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *