Home / ಪ್ರಶ್ನೋತ್ತರ / ಇಸ್ಲಾವಿೂ ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?

ಇಸ್ಲಾವಿೂ ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?

ಪ್ರಶ್ನೆ: ಎರಡು ರಾಷ್ಟ್ರಗಳ ವಿರುದ್ಧ ಯುದ್ಧ ನಡೆದಾಗ ಒಂದು ಇಸ್ಲಾವಿೂ ರಾಷ್ಟ್ರ ಕೇವಲ ಆ ರಾಷ್ಟ್ರದ ಸೇನೆಯ ವಿರುದ್ಧ ಹೋರಾಡಬೇಕೇ? ಅಥವಾ ಒಂದು ರಾಷ್ಟ್ರ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡಿದರೆ ಇಸ್ಲಾವಿೂ ರಾಷ್ಟ್ರ ಕೂಡ ಅವರ ಸಮಾಜದ ಮೇಲೆ ಆಕ್ರಮಣ ಮಾಡಬಹುದೇ?

ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ ಹಿತಾಸಕ್ತಿಗೆ ತಕ್ಕಂತೆ ವರ್ತಿಸಬಹುದು. ದೇವನ ಆದೇಶಕ್ಕೆ ವಿರುದ್ಧವಾಗಿಯೂ ನಡೆಯಬಹುದು. ಆದರೆ ಇಸ್ಲಾವಿೂ ರಾಷ್ಟ್ರಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಮುಸ್ಲಿಮ್ ಎಂದರೆ ದೇವನನ್ನು ಭಯ ಪಟ್ಟು ಜೀವಿಸುವ ಹೆಸರಾಗಿದೆ. ಯಾರಾದರೂ ಮುಸ್ಲಿಮನ ತಾಯಿ, ಮಕ್ಕಳ ಮೇಲೆ ಹಿಂಸೆ ದೌರ್ಜನ್ಯ ನಡೆಸಿದರೆ ಅವರ ತಾಯಿ ಮಕ್ಕಳ ಮೇಲೆ ಹಿಂಸೆ ನಡೆಸುವುದನ್ನು ಇಸ್ಲಾಮ್ ಸರ್ವಥಾ ಅನುಮತಿ ನೀಡುವುದಿಲ್ಲ ಮತ್ತು ಅದನ್ನು ಅಪರಾಧವೆಂದು ಪರಿಗಣಿಸುತ್ತದೆ. ಮುಸ್ಲಿಮನಾಗುವುದರ ಅರ್ಥ ಗರಿಷ್ಠ ದೌರ್ಜನ್ಯ ನಡೆದರೂ ಕೂಡಾ ಮುಸ್ಲಿಮನು ಅನ್ಯಾಯ ದೌರ್ಜನ್ಯ ನಡೆಸಲಾರನು. ಒಂದು ವೇಳೆ ಹಾಗೆ ಮಾಡಿದರೆ ಮುಸ್ಲಿಮನಿಗೂ ಜಾಹಿಲ್(ಅಜ್ಞಾನಿ)ಗೂ ಯಾವುದೇ ವ್ಯತ್ಯಾಸವಿರಲಾರದು. ಆದ್ದರಿಂದ ಎಲ್ಲ ರೀತಿಯ ಜಾಹಿಲಿಯ್ಯತನ್ನು ಪ್ರವಾದಿ(ಸ) ಕೊನೆಗೊಳಿಸಿದ್ದಾರೆ. ಒಬ್ಬನು ಅಕ್ರಮ, ಅನ್ಯಾಯ, ದೌರ್ಜನ್ಯವೆಸಗಿಸದರೆ ನಾವು ಕೂಡಾ ಹಾಗೆಯೇ ಮಾಡುವುದನ್ನು ಜಾಹಿಲಿಯ್ಯತ್ ಎಂದು ಪ್ರವಾದಿ(ಸ) ಶಿಕ್ಷಣ ನೀಡಿದ್ದಾರೆ.

ಆದ್ದರಿಂದ ನಮಗೆ ಎಲ್ಲ ಪರಿಸ್ಥಿತಿಗಳಲ್ಲಿಯೂ ಅಲ್ಲಾಹನ ಕಾನೂನಿನಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ. ನಾವು ಯಾವುದೇ ಅಮಾಯಕನ ಜೀವವನ್ನು ಹರಣ ಮಾಡಬಾರದು. ಇಸ್ಲಾಮಿನ ಪ್ರಕಾರ ಸೇನೆಗೆ ಹೊರತಾದವರ ಮೇಲೆ ಆಕ್ರಮಣ ನಡೆಸುವುದು ಬಹಳ ದೊಡ್ಡ ಅಪರಾಧವಾಗಿದೆ. ನಾಗರಿಕರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಕುರ್‍ಆನ್ ಮತ್ತು ಪ್ರವಾದಿ ಚರ್ಯೆ ಮತ್ತು ಸಹಾಬಿಗಳ ಚರಿತ್ರೆಯಲ್ಲಿ ಯಾವುದೇ ಉದಾಹರಣೆಯಿಲ್ಲ.

ಅಬೂಬಕರ್(ರ) ಯುದ್ಧಕ್ಕೆ ಹೊರಡುವವರೊಂದಿಗೆ ನೀಡಿದ ಪ್ರಥಮ ಶಿಕ್ಷಣ, “ನಿಮ್ಮ ವಿರುದ್ಧ ಯುದ್ಧ ಮಾಡದವರೊಂದಿಗೆ ಯುದ್ಧ ಮಾಡಬಾರದು” ಎಂದಾಗಿತ್ತು. ಒಂದು ವೇಳೆ ಯಾವುದೇ ಸೇನಾ ನೆಲೆಯ ಮೇಲೆ ಆಕ್ರಮಣ ನಡೆಸಿದಾಗ, ಅನಿರೀಕ್ಷಿತವಾಗಿ ಅಥವಾ ತಪ್ಪಿ ಯಾವುದಾದರೂ ನಾಗರಿಕರು ಜೀವ ಕಳೆದು ಕೊಂಡರೆ ಆ ಬಗ್ಗೆ ಕ್ಷಮೆ ಕೇಳಲಾಗುತ್ತದೆ ಮತ್ತು ಪರಿಹಾರ ನೀಡಲಾಗುತ್ತದೆ. ಕುರ್‍ಆನ್ ಮಾನವ ಜೀವಕ್ಕೆ ಬಹಳ ಪಾವಿತ್ರ್ಯತೆಯನ್ನು ನೀಡಿದೆ. ಒಂದು ವೇಳೆ ಕೊಲೆ ಮಾಡುವ ಉದ್ದೇಶ ಇಲ್ಲದೆ ತಪ್ಪಿ ಯಾರದಾದರೂ ಜೀವ ಹರಣವಾದರೆ ಅದಕ್ಕೆ ಎರಡು ತಿಂಗಳು ಉಪವಾಸ ಆಚರಿಸಬೇಕು. ಪರಿಹಾರ ನೀಡಬೇಕು.

ಪ್ರವಾದಿಯವರು(ಸ), “ಕಅಬಾ, ಮಕ್ಕಾಕ್ಕೆ ಎಷ್ಟು ಗೌರವವಿದೆಯೋ ಅಷ್ಟೇ ಗೌರವ ಮಾನವ ಜೀವಕ್ಕೂ ಇದೆ” ಎಂದು ಹೇಳಿದ್ದಾರೆ. ಅದಕ್ಕೆ ಜಾತಿ ಮತ ಧರ್ಮದ ಭೇದವಿಲ್ಲ. ನಾವು ಮುಸ್ಲಿಮರಾಗಿದ್ದೇವೆ. ಇತರರು ಅನ್ಯಾಯ, ಆಕ್ರಮ, ದೌರ್ಜನ್ಯವೆಸಗಿದರೆ ನಾವು ಕೂಡಾ ಅದೇ ಬಣ್ಣ ತೋರಿಸುವುದು ಇಸ್ಲಾಮಿಗೆ ವಿರುದ್ಧವಾದುದಾಗಿದೆ. ಅವರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಿದರೆ ನಾವು ಅವರ ಮಕ್ಕಳನ್ನು ಕಿಡ್ನಾಪ್ ಮಾಡುವುದು, ಅವರು ನಮ್ಮ ಮಹಿಳೆಯ ಮೇಲೆ ದೌರ್ಜನ್ಯವೆಸಗಿದರೆ ನಾವು ಅವರ ಮಹಿಳೆಯರ ಮೇಲೆ ದೌರ್ಜನ್ಯ ವೆಸಗುವುದು ಇವೆಲ್ಲವೂ ಜಾಹಿಲಿಯ್ಯತ್ (ಅಜ್ಞಾನ) ಆಗಿದ್ದು, ಪ್ರವಾದಿ(ಸ) ವಿರೋಧಿಸಿದ ಕೃತ್ಯಗಳಾಗಿವೆ. ಅದೇ ರೀತಿ ಕೋಮು ಗಲಭೆ ಮತ್ತಿತರ ಸಂದರ್ಭಗಳಲ್ಲಿ ಅವರು ನಮ್ಮವರಿಗೆ ಹೊಡೆದರೆ ನಾವು ಅವರಿಗೆ ಹೊಡೆಯಬೇಕು ಎಂಬುದೂ ಜಾಹಿಲಿಯ್ಯತ್ ಪಟ್ಟಿಗೆ ಸೇರುತ್ತದೆ.

ಅದೇ ಸಂದರ್ಭದಲ್ಲಿ ಅತ್ಮರಕ್ಷಣೆ ಮತ್ತು ದೌರ್ಜನ್ಯವೆಸಗುವವರನ್ನು ಪ್ರತಿಭಟಿಸುವುದು ಹಾಗೂ ಅಮಾಯಕರನ್ನು ಗೌರವಿಸುವುದನ್ನು ಇಸ್ಲಾಮ್ ಅನುಮತಿಸುತ್ತದೆ. “ಯಾರಾದರೂ ತನ್ನ ಸೊತ್ತು, ಮನೆ ಮತ್ತು ಜೀವದ ರಕ್ಷಣೆಗಾಗಿ ಮಡಿದರೆ ಅವನಿಗೆ ಹುತಾತ್ಮನ ಪದವಿ ಸಿಗುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದರೆ ಇಲ್ಲಿ ಯಾವುದೇ ಅಮಾಯಕನು ಅನ್ಯಾಯ ಮತ್ತು ದೌರ್ಜನ್ಯಕ್ಕೆ ಆಸ್ಪದವಿರಬಾರದು. ಮುಸ್ಲಿಮನು ಜಾತಿ ಮತ್ತು ಧರ್ಮ ಭೇದವೆನ್ನದೆ ಮಾನವ ಜೀವದ ರಕ್ಷಕರಾಗುವ ಜವಾಬ್ದಾರಿಯನ್ನು ನಿರ್ವಹಿಸಬೇಕು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *