Home / ಪ್ರಶ್ನೋತ್ತರ / ಇದ್ದತ್ ನ ಉದ್ದೇಶ?

ಇದ್ದತ್ ನ ಉದ್ದೇಶ?

ಪ್ರಶ್ನೆ : ಪತಿಯು ಮರಣ ಹೊಂದಿ ಇದ್ದತ್ ಆಚರಿಸುವ ಮಹಿಳೆಯು ಉದ್ಯೋಗಸ್ಥೆಯಾದರೆ ಅವರಿಗೆ ಕೆಲಸಕ್ಕೆ ಹೋಗಬಹುದೇ? ಇದ್ದತ್ ಆಚರಿಸುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು. ತಲೆ ಬೋಳಿಸಬೇಕು ಎಂದೆಲ್ಲಾ ಹೇಳುತ್ತಾರೆ. ಇದು ಸರಿಯೇ?

ಉತ್ತರ : ಪತಿ ಮರಣ ಹೊಂದಿದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಮತ್ತು ಗರ್ಭಿಣಿಯಾಗಿದ್ದರೆ ಹೆರಿಗೆಯ ವರೆಗೆ ಪುನರ್ವಿವಾಹವಾಗುವುದರಿಂದ ಮತ್ತು ಅಲಂಕಾರ ಹೊಂದುವುದರಿಂದ ದೂರ ನಿಲ್ಲುವುದನ್ನು `ಇದ್ದತ್’ ಎನ್ನುತ್ತಾರೆ.

ಕುರ್‍ಆನ್ ಹೇಳುತ್ತದೆ, “ನಿಮ್ಮಲ್ಲಿ ಯಾರಾದರೂ ಮೃತಪಟ್ಟರೆ ಮತ್ತು ಅವರ ಪತ್ನಿಯ ಜೀವಂತವಾಗಿದ್ದರೆ ಅವರು ನಾಲ್ಕು ತಿಂಗಳು, ಹತ್ತು ದಿನಗಳ ತನಕ ತಮ್ಮನ್ನು ತಾವೇ ತಡೆದಿರಿಸಿಕೊಳ್ಳಬೇಕು.” (ಅಲ್ ಬಕರ: 234)

ಪತಿಯೊಂದಿಗೆ ನೈಜ ಸಂಪರ್ಕ ಏರ್ಪಡುವ ಮೊದಲೇ ಪತಿಯನ್ನು ಕಳಕೊಂಡ ಸ್ತ್ರೀಯರಿಗೂ ಮರಣದ ನಂತರದ ಈ ಇದ್ದತ್ ಅನ್ವಯಿಸುತ್ತದೆ. ಆದರೆ ಗರ್ಭಿಣಿ ಸ್ತ್ರೀ ಇದಕ್ಕೆ ಹೊರತಾಗಿದ್ದಾಳೆ. ಆಕೆಯ ಇದ್ದತ್‍ನ ಅವಧಿ ಹೆರಿಗೆಯ ತನಕವಾಗಿದೆ. ಹೆರಿಗೆ ಪತಿಯ ನಿಧನದ ತಕ್ಷಣವಾದರೂ ಅಥವಾ ಕೆಲವು ತಿಂಗಳುಗಳ ಬಳಿಕವಾದರೂ ಸರಿಯೇ. ‘ತಮ್ಮನ್ನು ತಾವು ತಡೆದಿರಿಕೊಳ್ಳಬೇಕು’ ಎಂದರೆ ಮರುವಿವಾಹದಿಂದ ತಡೆದಿರಿಕೊಳ್ಳಬೇಕೆಂದು ಮಾತ್ರವಲ್ಲ, ತನ್ನನ್ನು ಶೃಂಗಾರದಿಂದಲೂ ತಡೆದಿರಿಸಬೇಕೆಂದೂ ಅದರಲ್ಲಿ ಸೇರಿದೆ.

ಯಾವ ಮನೆಯಲ್ಲಿ ಆಕೆಯ ಪತಿ ಮರಣ ಹೊಂದಿದ್ದರೋ ಆ ಮನೆಯಲ್ಲಿ ಇದ್ದತ್ ಆಚರಿಸಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದ್ದತ್‍ನ ಕಾಲಾವಧಿಯಲ್ಲಿ ಪುನರ್ವಿವಾಹಕ್ಕೆ ಮುಂದಾಗುವುದು ಅಥವಾ ಯಾರಾದರೂ ಅವರ ಬಳಿ ವಿವಾಹ ಸಂಬಂಧದೊಂದಿಗೆ ಸವಿೂಪಿಸುವುದು ನಿಷಿದ್ಧವಾಗಿದೆ. ಆದರೂ ವಿವಾಹ ಸಂಬಂದಗಳ ಕುರಿತು ಸೂಚಿಸುವುದರಲ್ಲಿ ವಿರೋಧವಿಲ್ಲ.

ಕುರ್‍ಆನ್ ಹೇಳುತ್ತದೆ, “ಇದ್ದತ್‍ಗಳ ಕಾಲಾವಧಿಯಲ್ಲಿ ಆ ವಿಧವೆಯರೊಂದಿಗೆ ವಿವಾಹದ ಇರಾದೆಯನ್ನು ನೀವು ಸಂಕೇತಗಳ ಮೂಲಕ ಪ್ರಕಟಗೊಳಿಸಿದರೂ ಮನಸ್ಸಿನೊಳಗೆ ಬಚ್ಚಿಟ್ಟರೂ ತಪ್ಪಿಲ್ಲ. ನಿಮ್ಮ ಮನದೊಳಗೆ ಅವರ ಯೋಚನೆ ಬಂದೇ ತೀರುವುದೆಂಬುದನ್ನು ಅಲ್ಲಾಹನು ಅರಿತಿರುತ್ತಾನೆ. ಆದರೆ ರಹಸ್ಯ ವಾಗ್ದಾನ ಮಾಡಬಾರದು. ಯಾವುದೇ ಪ್ರಸ್ತಾಪ ಮಾಡುವುದಾದರೆ ನ್ಯಾಯೋಚಿತ ರೀತಿಯಿಂದ ಮಾಡಿರಿ. ಇದ್ದತ್ ಪೂರ್ಣಗೊಳ್ಳುವ ತನಕ ವಿವಾಹ ಬಂಧನದ ನಿರ್ಧಾರ ಮಾಡಬೇಡಿರಿ.” (ಅಲ್ ಬಕರ: 235)

ಇದ್ದತ್ ಆಚರಿಸುವ ವಿಧವೆಯು ಸಿಂಗರಿಸುವುದರ ಕುರಿತು ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಅಬೂದಾವೂದ್ ನಸಾಯಿ ಮುಂತಾದವರು ವರದಿ ಮಾಡಿದ್ದಾರೆ, “ಅವಳು ಬಣ್ಣ ಬಣ್ಣದ ವಸ್ತ್ರ ಧರಿಸಬಾರದು. ಆಭರಣಗಳನ್ನು ಧರಿಸಬಾರದು. ಮದರಂಗಿ ಹಚ್ಚಬಾರದು. ಕಣ್ಣುಗಳಿಗೆ ಕಾಡಿಗೆ ಹಚ್ಚಬಾರದು.” ಈ ರೀತಿಯ ಹಲವು ಹದೀಸ್‍ಗಳಿವೆ. ಇದರಿಂದೆಲ್ಲಾ ತಿಳಿದು ಬರುವುದೇನೆಂದರೆ ಪತಿ ಮರಣ ಹೊಂದಿದ ಮಹಿಳೆಯು ಸಿಂಗರಿಸಿಕೊಂಡು ನಡೆಯಬಾರದು ಮತ್ತು ಸರಳ ವೇಷ ಭೂಷಣಗಳಲ್ಲಿ ಕಳೆಯಬೇಕು ಎಂದಾಗಿದೆ. ಇದು ಇಸ್ಲಾಮ್ ಹೇಳಿರುವ ಇದ್ದತ್ ಹಾಗೂ ದುಃಖಾಚರಣೆಯಾಗಿದೆ.

ಪುರುಷರನ್ನು ನೋಡುವ ವಿಚಾರದಲ್ಲಿ ಇತರ ಮಹಿಳೆಯರಿಗಿಂತ ಹೆಚ್ಚಿನ ನಿಯಮಗಳೇನೂ ಇದ್ದತ್ ಆಚರಿಸುವ ಮಹಿಳೆಯರಿಗಿಲ್ಲ. ಅಗತ್ಯ ಕೆಲಸಕ್ಕಾಗಿ ಹೊರಹೋಗುವುದರಲ್ಲೂ ಅಭ್ಯಂತರವಿಲ್ಲ. ಆದರೆ ರಾತ್ರಿ ಸ್ವಗೃಹದಲ್ಲೇ ಉಳಿದುಕೊಳ್ಳಬೇಕು. ಹಝ್ರತ್ ಮುಜಾಹಿದ್‍ರಿಂದ ವರದಿಯಾದ ಒಂದು ವಚನವು ಅದಕ್ಕಿರುವ ಪುರಾವೆಯಾಗಿದೆ:

ಉಹುದ್ ಯುದ್ಧದಲ್ಲಿ ಹಲವಾರು ಮಂದಿ ಹುತಾತ್ಮರಾಗಿದ್ದರು. ಅವರ ಪತ್ನಿಯರು ಬಂದು ಪ್ರವಾದಿಯವರೊಡನೆ(ಸ) ಹೇಳಿದರು, “ಪ್ರವಾದಿಯವರೇ(ಸ) ರಾತ್ರಿ ಕಾಲದಲ್ಲಿ ನಮಗೆ ವಿಪರೀತ ಏಕಾಂತತೆಯ ಅನುಭವವಾಗುತ್ತದೆ. ಆದ್ದರಿಂದ ನಾವು ಯಾರಾದರೊಬ್ಬರ ಮನೆಯಲ್ಲಿ ನಾವೆಲ್ಲರೂ ಉಳಿದುಕೊಳ್ಳಬಹುದೇ? ಪ್ರಭಾತವಾಗುವಾಗ ನಾವು ನಮ್ಮ ಸ್ವಗೃಹಕ್ಕೆ ಮರಳುತ್ತೇವೆ.” ಪ್ರವಾದಿಯವರು(ಸ) ಹೇಳಿದರು, “ನೀವು ನಿಮ್ಮ ಪೈಕಿ ಯಾರಾದರೊಬ್ಬರ ಮನೆಯಲ್ಲಿ ಕುಳಿತು ಮಾತನಾಡುತ್ತೀರಿ. ಆದರೆ ಮಲಗಲು ಪ್ರತಿಯೋರ್ವರೂ ತಂತಮ್ಮ ಮನೆಗೇ ಹೋಗಬೇಕು.”

ಆದರೆ ಹಜ್ಜ್ ನಂತಹ ಸುಪ್ರದಾನವೂ ಸುಧೀರ್ಘವೂ ಆದ ಯಾತ್ರೆಗಳಲ್ಲಿ ಮನೆ ತೊರೆಯುವುದರಲ್ಲೋ ಬೇರೆ ಸ್ಥಳಗಳಲ್ಲಿ ಉಳಿದುಕೊಳ್ಳವುದರಲ್ಲೋ ವಿರೋಧವಿಲ್ಲ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳು ಹಾಗೂ ತಾಬಿಈಗಳ ಕಾಲದಲ್ಲಿ ನಡೆದ ಇಂತಹ ಘಟನೆಗಳನ್ನು ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.

ಈ ಹಿನ್ನಲೆಯಲ್ಲಿ ಇದ್ದತ್ ಆಚರಿಸುವ ಉದ್ಯೋಗಸ್ಥ ಮಹಿಳೆಯು ಕೆಲಸಕ್ಕೆ ಹೋಗುವುದರಲ್ಲಿ ವಿರೋಧವಿಲ್ಲ. ಇದ್ದತ್‍ನ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು. ಕನ್ನಡಿ ನೋಡಬಾರದು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು, ತಲೆ ಬೋಳಿಸಬೇಕು ಮೊದಲಾದ ನಿಯಮಗಳು ಅಜ್ಞಾನ ಕಾಲದ ಸಂಸ್ಕ್ರತಿಗಳಿಂದ ಮುಸ್ಲಿಮ್ ಸಮುದಾಯಕ್ಕೆ ಬಂದ ಅನಾಚಾರಗಳಾಗಿವೆ. ಅವುಗಳಿಗೆ ಇಸ್ಲಾಮಿನಲ್ಲಿ ಯಾವುದೇ ಪುರಾವೆಗಳಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *