Home / ಲೇಖನಗಳು / ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ

ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ

✍️ ಅಬೂ ಝೀಶಾನ್

ನೀವು ಪ್ರವಾದಿ(ಸ)ರೊಂದಿಗೆ ಪ್ರಥಮ ಬಾರಿ ಇದ್ದಾಗ ಹಾಗೂ ಅವರು ಏನಾದರೂ ಹಾಸ್ಯ ಮಾಡಿದಾಗ ಇಷ್ಟು ಮಹಾನ್ ಪ್ರವಾದಿ(ಸ) ರವರು ಹಾಸ್ಯ ಮಾಡುವುದೇ? ಎಂಬ ಪ್ರಶ್ನೆ ಕೆಲವು ಕೆಲವು ಸಹಾಬಿಗಳನ್ನು ಕಾಡಿತು. ಪ್ರವಾದಿ(ಸ) ಹಾಸ್ಯ ಮಾಡಿದಾಗ ಅವರು ಆಶ್ಚರ್ಯಚಕಿತರಾಗಿ ಕೇಳಿದರು, “ಯಾ ರಸೂಲುಲ್ಲಾಹ್, ನೀವು ನಮ್ಮೊಂದಿಗೆ ಹಾಸ್ಯ ಮಾಡುತ್ತಿರುವುದೇ?” ಆಗ ಪ್ರವಾದಿ(ಸ) ಉತ್ತರಿಸಿದರು, “ಹೌದು, ನಾನೂ ಹಾಸ್ಯ ಮಾಡುತ್ತೇನೆ. ಆದರೆ ನಾನು ನನ್ನ ಹಾಸ್ಯದಲ್ಲಿ ಕೇವಲ ಸತ್ಯವನ್ನೇ ಹೇಳುತ್ತೇನೆ.”

ಪ್ರವಾದಿ(ಸ) ಹಾಸ್ಯ ಮಾಡುವಾಗ ಅದರಲ್ಲಿ ಯಾವುದೇ ಸುಳ್ಳನ್ನು ಹೇಳುತ್ತಿರಲಿಲ್ಲ. ಪ್ರವಾದಿ(ಸ) ಹೇಳಿದರು, ಒಬ್ಬ ಸುಳ್ಳು ಹೇಳುವುದನ್ನು ಬಿಟ್ಟರೆ, ಅದು ಹಾಸ್ಯಕ್ಕಾದರೂ ಸರಿ, ಆತನಿಗೆ ಸ್ವರ್ಗದಲ್ಲಿ ಒಂದು ಭವನ ನೀಡಲಾಗುವುದು.

ಹ. ಆಯಿಶಾ(ರ) ಹೇಳುತ್ತಾರೆ, ಯಾವುದಾದರೂ ಗಂಭೀರ ವಿಷಯವಲ್ಲದಿದ್ದರೆ ಪ್ರವಾದಿ(ಸ) ಯಾವಾಗಲೂ ಹಾಸ್ಯ ಮಾಡುತ್ತಿದ್ದರು. ತನ್ನ ಕುಟುಂಬದೊಂದಿಗೆ ಸದಾ ಹಾಸ್ಯವನ್ನು ಮಾಡುತ್ತಿದ್ದರು. ಅವರಿಂದಾಗಿ(ಸ) ಮನೆಯಲ್ಲಿ ಸಂತೋಷದ ವಾತಾವರಣವಿರುತ್ತಿತ್ತು.

ಪ್ರವಾದಿ(ಸ) ಹಾಸ್ಯಗಳ ಮೂಲಕ ಸಂಬಂಧಗಳನ್ನು ಬಲಪಡಿಸುತ್ತಿದ್ದರು ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗೆ ಮಾಡುತ್ತಿದ್ದರು. ಇದು ಅವರ(ಸ) ಬುದ್ಧಿವಂತಿಕೆಯಾಗಿತ್ತು.

ಒಮ್ಮೆ ಹ. ಫಾತಿಮಾ(ರ) ಹಾಗೂ ಹ. ಅಲೀ(ರ)ರ ಮಧ್ಯೆ ವಿರಸವುಂಟಾಯಿತು. ಪ್ರವಾದಿ(ಸ) ಹ. ಫಾತಿಮಾ(ರ)ರ ಮನೆಗೆ ಬಂದು ಹ. ಅಲೀ(ರ) ಎಲ್ಲಿ ಎಂದು ಕೇಳಿದಾಗ, ಅವರು ಕೋಪಗೊಂಡು ಮಸೀದಿಯಲ್ಲಿ ಹೋಗಿ ಮಲಗಿದ್ದಾರೆ ಎಂದು ಉತ್ತರ ಕೊಟ್ಟರು. ಪ್ರವಾದಿ(ಸ) ನೇರವಾಗಿ ಮಸೀದಿಗೆ ಹೋದಾಗ ಹ. ಅಲಿ(ರ) ಅಲ್ಲಿ ಮಲಗಿದ್ದರು ಹಾಗೂ ಅವರ ಮೇಲೆ ಮಣ್ಣುಗಳಿದ್ದವು. (ಅಂದಿನ ಮಸೀದಿಯಲ್ಲಿ ಇಂದಿನ ಹಾಗೆ ಕಾರ್ಪೆಟ್‌ಗಳಿರಲಿಲ್ಲ.) ಪ್ರವಾದಿ(ಸ) ಮಣ್ಣುಗಳನ್ನು ಹ. ಅಲಿ(ರ) ಅವರ ದೇಹದಿಂದ ಸರಿಸುತ್ತಾ ಅವರನ್ನು ಎಬ್ಬಿಸುತ್ತಾ ಹೇಳಿದರು, “ಓ ಅಬೂತುರಾಬ್ (ಮಣ್ಣಿನ ತಂದೆಯೇ) ಎದ್ದು ನಿಲ್ಲಿ” ಎಂದು ಹೇಳಿ ಅವರನ್ನು ಶಾಂತಗೊಳಿಸಿದರು.

ಪ್ರವಾದಿ(ಸ) ಉದ್ವಿಗ್ನ ವಾತಾವರಣವನ್ನು ಬದಲಾಯಿಸುತ್ತಿದ್ದರು. ಕೆಲವೊಮ್ಮೆ ಪ್ರವಾದಿ(ಸ) ವಿಷಯಗಳನ್ನು ಬಹಳ ಸುಂದರವಾಗಿ ವಿವರಿಸಲು ಹಾಸ್ಯ ಮಾಡುತ್ತಿದ್ದರು. ಉದಾಹರಣೆಗೆ ಒಂದು ಮುದಿ ಪ್ರಾಯದ ಮಹಿಳೆ ಬಂದು ನಾನು ಸ್ವರ್ಗದ ಉದ್ಯಾನದಲ್ಲಿ ಪ್ರವೇಶಿಸಲು ಪ್ರಾರ್ಥಿಸಿರಿ” ಎಂದು ಹೇಳಿದರು. ಪ್ರವಾದಿ(ಸ) ಹಾಸ್ಯ ಪ್ರಜ್ಞೆಯಿಂದ, “ಮುದಿ ಪ್ರಾಯದವರು ಸ್ವರ್ಗದ ಉದ್ಯಾನಕ್ಕೆ ಪ್ರವೇಶಿಸಲಾರರು” ಎಂದರು. ಆಕೆ ಬೇಸರಗೊಂಡು ಅಳುತ್ತಾ ಹಿಂತಿರುಗಿ ಹೋಗುವಾಗ ಪ್ರವಾದಿ(ಸ) ಆಕೆಯನ್ನು ಕರೆದು ಹೇಳಿದರು, “ಅಂದರೆ ಯಾವ ಮಹಿಳೆಯೂ ಮುದಿ ಪ್ರಾಯದವಳಾಗಿ ಸ್ವರ್ಗ ಪ್ರವೇಶಿಸಲಾರಳು. ಆಕೆಯನ್ನು ಯುವತಿಯಾಗಿ ಮಾಡಿ ಸ್ವರ್ಗ ಪ್ರವೇಶ ಮಾಡಲಾಗುವುದು” ಎಂದರು.

ಪ್ರವಾದಿ(ಸ) ಹೆಚ್ಚಾಗಿ ಹಾಸ್ಯ ಮಾಡುತ್ತಿದ್ದುದು ಸಮಾಜದಲ್ಲಿ ನಿರ್ಲಕ್ಷಿಸಲ್ಪಟ್ಟವರು, ಕೆಳವರ್ಗದ ಬಡವರೊಂದಿಗೆ ಹಾಗೂ ಸಮಾಜದಲ್ಲಿ ಜನರು ಅವರೊಂದಿಗೆ ಮಾತನಾಡಲು ಇಷ್ಟಪಡದವರೊಂದಿಗಾಗಿತ್ತು. ಸ್ವಲ್ಪ ಊಹಿಸಿ ನೋಡಿ, ಸಮಾಜದ ಬಹಳ ದೊಡ್ಡ ವ್ಯಕ್ತಿ, ಅಥವಾ ದೊಡ್ಡ ಕಂಪೆನಿಯ ಮಾಲಕ ಅಥವಾ ಧಾರ್ಮಿಕ ಸಂಘಟನೆಯ ನಾಯಕ ಸಾಮಾನ್ಯ ವ್ಯಕ್ತಿಯೊಂದಿಗೆ ಹಾಸ್ಯದಿಂದ ಮಾತನಾಡುವಾಗ ಆತನಿಗೆ ಅದರಿಂದ ಮನಸ್ಸಿಗೆ ಎಷ್ಟು ಸಂತೋಷವಾಗಬಹುದು ಹಾಗೂ ಅದರಿಂದ ಅವರಿಗೆ ಎಷ್ಟು ಆತ್ಮೀಯತೆ ಮೂಡಬಹುದು? ಇಲ್ಲಿ ಪ್ರವಾದಿ(ಸ) ಬಡವರೊಂದಿಗೆ, ಅನಾಥರೊಂದಿಗೆ, ದೀನರೊಂದಿಗೆ, ನಿರ್ಲಕ್ಷಿಸಲ್ಪಟ್ಟವರೊಂದಿಗೆ ಹೋಗಿ ಹಾಸ್ಯ ಮಾಡುವಾಗ ಅವರ ಮನಸ್ಸಿಗೆ ಎಷ್ಟು ನೆಮ್ಮದಿ, ಸಂತೋಷ ಆಗುತ್ತಿರಬಹುದು?

ಪ್ರವಾದಿ(ಸ)ರ ಇನ್ನೊಂದು ಹಾಸ್ಯದ ಘಟನೆ. ಹ. ಝಾಹಿರ್(ರ) ಎಂಬ ಸಹಾಬಿ ನೋಡಲು ಅಷ್ಟು ಸುಂದರವಾಗಿರಲಿಲ್ಲ. ಒಮ್ಮೆ ಅವರು ಪ್ರವಾದಿ(ಸ)ರನ್ನು ಕಾಣಲು ಬಂದಾಗ ಅವರು(ಸ) ತಮ್ಮ ಮನೆಯಲ್ಲಿರಲಿಲ್ಲ. ಅವರು ಪ್ರವಾದಿ(ಸ)ರನ್ನು ಹುಡುಕುತ್ತಾ ಮಾರ್ಕೆಟಿಗೆ ಹೋದರು.

ಝಾಹಿರ್(ರ) ಬಂದ ವಿಷಯ ತಿಳಿದ ಪ್ರವಾದಿ(ಸ)ರು ಅವರನ್ನು ಕಾಣಲು ಮಾರ್ಕೆಟ್‌ಗೆ ಹೋದರು. ದೂರದಿಂದ ಹ. ಝಾಹಿರ್ (ರ)ರನ್ನು ಕಂಡ ಪ್ರವಾದಿ(ಸ) ಮೆಲ್ಲಗೆ ಹೋಗಿ ಹಿಂದಿನಿಂದ ಅವರನ್ನು ಅಪ್ಪಿಹಿಡಿದು ಜೋರಾಗಿ ಹೇಳಿದರು, “ಈತನನ್ನು ಖರೀದಿಸಲು ಯಾರು ತಯಾರಿದ್ದೀರಿ? ಯಾರಿಗೆ ಬೇಕು ಈತ? ಝಾಹಿರ್(ರ) ರಿಗೆ ತನ್ನನ್ನು ಹಿಂದಿನಿಂದ ಅಪ್ಪಿ ಹಿಡಿದದ್ದು ಪ್ರವಾದಿ(ಸ) ಎಂದು ತಿಳಿದಾಗ ಬಹಳ ಸಂತೋಷಗೊಂಡು ಶಾಂತರಾದರು.”

ಪ್ರವಾದಿ(ಸ) ಅಪ್ಪುಗೆಯು ಅವರಿಗೆ ಅತೀವ ಸಂತೋಷವನ್ನು ತಂದಿತ್ತು. ಅವರು ಪ್ರವಾದಿ(ಸ)ರೊಂದಿಗೆ ಹೇಳಿದರು, “ಓ ಪ್ರವಾದಿಯವರೇ(ಸ), ಒಂದು ವೇಳೆ ನನ್ನನ್ನು ಉಚಿತವಾಗಿ ನೀಡಿದರೂ ಯಾರೂ ನನ್ನನ್ನು ಖರೀದಿಸಲು ಇಷ್ಟ ಪಡಲಾರರು.” ಪ್ರವಾದಿ(ಸ) ಆ ಹಾಸ್ಯ ಪ್ರಜ್ಞೆಯ ನಡುವೆಯೂ ಝಾಹಿರ್(ರ)ರಿಗೆ ನೀಡಿದ ಉತ್ತರವು ಅವರಿಗೆ ತನ್ನ ಮೇಲೆ ಕೀಳರಿಮೆಯ ಬುಡವನ್ನೇ ಕಡಿಯಿತು. ಪ್ರವಾದಿ(ಸ) ಹೇಳಿದರು, “ಆದರೆ ನೀನು ಅಲ್ಲಾಹನ ದೃಷ್ಟಿಯಲ್ಲಿ ಬಹಳ ಅಮೂಲ್ಯವಾಗಿರುವಿ.” ಈ ಹಾಸ್ಯ ಪ್ರಜ್ಞೆಯಿಂದ ಝಾಹಿರ್(ರ)ರಿಗೆ ಎಷ್ಟು ಸಂತೋಷವಾಗಿರಬಹುದು? ಪ್ರವಾದಿ(ಸ) ರೊಂದಿಗೆ ಅವರ ಮನದಲ್ಲಿ ಎಷ್ಟು ಆತ್ಮೀಯ ಭಾವನೆ ಮೂಡಿರಬಹುದು?

ಪ್ರವಾದಿ(ಸ) ಹಾಸ್ಯ ಮಾಡುತ್ತಿದ್ದಾಗ ಇತರರಿಗೆ ಪ್ರವಾದಿ(ಸ) ನನ್ನ ಬಗ್ಗೆ ಗಮನಹರಿಸುತ್ತಿದ್ದಾರೆ, ನನ್ನ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಾರೆ, ನನ್ನೊಂದಿಗೆ ಆತ್ಮೀಯತೆಯಿಂದಿದ್ದಾರೆ ಎಂಬ ಭಾವನೆ ಮೂಡುತ್ತಿತ್ತು. ಅವರು(ಸ) ಹಾಸ್ಯಗಳಿಂದ ಸಮಾಜದಲ್ಲಿ ನಿರ್ಲಕ್ಷಿಸಲ್ಪಟ್ಟವರೊಂದಿಗೆ ವಿಶೇಷ ರೀತಿಯ ಆತ್ಮೀಯವಾದ ಸಂಬಂಧಗಳನ್ನು ಸ್ಥಾಪಿಸುತ್ತಿದ್ದರು. ಆ ಹಾಸ್ಯಗಳಿಗೆ ವಿಶೇಷ ರೀತಿಯ ಕಾರಣಗಳಿರುತ್ತಿತ್ತು.

ಪ್ರವಾದಿ(ಸ) ಇತರರನ್ನು ತಮಾಷೆ ಮಾಡುವ, ಹೆದರಿಸುವ, ಇತರರ ಮನಸ್ಸನ್ನು ನೋಯಿಸುವ ಹಾಸ್ಯಗಳಿಗೆ ಅನುಮತಿ ನೀಡುತ್ತಿರಲಿಲ್ಲ. ಇತರರ ವಸ್ತುಗಳನ್ನು ಹಾಸ್ಯಕ್ಕಾಗಿ ಅಡಗಿಸಿಟ್ಟು ಅವರನ್ನು ಹೆಸರಿಸುವುದನ್ನು ಅನುಮತಿಸುತ್ತಿರಲಿಲ್ಲ. ಪ್ರವಾದಿ(ಸ) ಹಾಸ್ಯ ಮಾಡುತ್ತಿದ್ದಾಗ ಜನರನ್ನು ಅವಮಾನಗೊಳಿಸುತ್ತಿರಲಿಲ್ಲ. ಬದಲಾಗಿ ಪ್ರವಾದಿ(ಸ)ರ ಹಾಸ್ಯಗಳು ಜನರಿಗೆ ಹೆಚ್ಚು ಗೌರವ ನೀಡುತ್ತಿತ್ತು, ಸಂಬಂಧಗಳನ್ನು ಬಲಪಡಿಸುತ್ತಿತ್ತು ಹಾಗೂ ಜನರೊಂದಿಗೆ ವಿಶೇಷ ರೀತಿಯ ಸಂಪರ್ಕ ಸ್ಥಾಪಿಸುತ್ತಿತ್ತು.

 

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *