Home / ಪ್ರಶ್ನೋತ್ತರ / ಹಜ್ಜ್ ವೇಳೆಯಲ್ಲಿ ಹಾಗೂ ಹಬ್ಬದ ಸಂದರ್ಭಗಳಲ್ಲಿ ನಡೆಸುವ ಪ್ರಾಣಿ ಹತ್ಯೆ ಸರಿಯೇ ಅಸಂಖ್ಯಾತ ಪ್ರಾಣಿಗಳನ್ನು ಕೊಲ್ಲುವುದೇ?

ಹಜ್ಜ್ ವೇಳೆಯಲ್ಲಿ ಹಾಗೂ ಹಬ್ಬದ ಸಂದರ್ಭಗಳಲ್ಲಿ ನಡೆಸುವ ಪ್ರಾಣಿ ಹತ್ಯೆ ಸರಿಯೇ ಅಸಂಖ್ಯಾತ ಪ್ರಾಣಿಗಳನ್ನು ಕೊಲ್ಲುವುದೇ?

ಇತಿಹಾಸದ ಅಂಧಕಾರದ ಕರಿನೆರಳಿನಲ್ಲಿ ನಡೆಸಲಾಗುತ್ತಿದ್ದ ನರಬಲಿಯೆಂಬ ಕ್ರೂರ ಕೃತ್ಯಕ್ಕೆ ತಡೆ ಹಾಕಿದ ಸಂಭ್ರಮದ ಸ್ಮರಣೆಯೇ ಇಸ್ಲಾಮಿನ ಬಲಿ ಕರ್ಮ. ಅದರೊಂದಿಗೆ ಅಸಾಮಾನ್ಯ ತ್ಯಾಗದ ಸಂಕೇತ ಮತ್ತು ಸಮರ್ಪಣಾ ಭಾವವನ್ನು ಇದು ಎತ್ತಿ ತೋರಿಸುತ್ತದೆ.

ಪ್ರಾಯ ಮೀರಿದರೂ ಪ್ರವಾದಿ ಇಬ್ರಾಹೀಮ್ (ಅ)ರಿಗೆ ಸಂತಾನ ಭಾಗ್ಯವಿರಲಿಲ್ಲ. ಅತ್ಯಂತ ದುಃಖಿತರಾದ ಅವರು ದೇವನೊಂದಿಗೆ ಸಂತಾನಕ್ಕಾಗಿ ಪ್ರಾರ್ಥಿಸಿದರು. ನಿರಂತರ ಪ್ರಾರ್ಥನೆಯ ಬಳಿಕ ಸೃಷ್ಟಿಕರ್ತನು ಅವರಿಗೆ ಓರ್ವ ಮಗನನ್ನು ದಯಪಾಲಿಸಿದನು. ಇಸ್ಮಾಯೀಲ್ ಎಂಬ ಹೆಸರಿನ ಆ ಪ್ರಿಯ ಪುತ್ರನೊಂದಿಗೆ ಸಂತೋಷದಿಂದಿರುವಾಗ ಅವನನ್ನು ಬಲಿ ನೀಡಬೇಕೆಂಬ ದೇವಾದೇಶ ಬಂತು. ತಂದೆ ಹಾಗೂ ಪುತ್ರನು ದೇವಾದೇಶಕ್ಕೆ ಸಿದ್ಧರಾದರು. ಬಲಿದಾನದ ಹಂತದಲ್ಲಿರುವಾಗ ಮಗನನ್ನು ಬಲಿ ನೀಡಬೇಕಾಗಿಲ್ಲವೆಂದೂ, ಮೃಗವನ್ನು ಬಲಿ ನೀಡಿದರೆ ಸಾಕೆಂದೂ ದೇವಾಜ್ಞೆ ದೊರೆಯಿತು.

ಲೌಕಿಕ ಜೀವನವು ಮನುಷ್ಯನನ್ನು ‘ಏನು ಲಭಿಸುತ್ತದೆ’ ಎಂಬ ಕಡೆಗೆ ಪ್ರೇರೇಪಿಸುತ್ತದೆ. ಆದರೆ ಧರ್ಮವು ‘ಧರ್ಮ ಏನು ನೀಡಬಹುದು’ ಎಂಬ ಪ್ರಶ್ನೆಯನ್ನು ವಿಶ್ವಾಸಿಗಗಳೊಂದಿಗೆ ನಿರಂತರವಾಗಿ ಕೇಳುತ್ತದೆ. ಅದಕ್ಕೆ ಎಂತಹ ತ್ಯಾಗಕ್ಕೂ ಸಿದ್ಧ ಎಂಬ ಉತ್ತರವನ್ನು ನಮ್ಮ ಬದುಕಿನಲ್ಲಿ ನೀಡಲು ಬಲಿ ಕರ್ಮವು ಪ್ರೇರಕವಾಗಿದೆ.

ತನಗೆ ಅತೀ ಪ್ರಿಯವಾದದ್ದನ್ನು ದೇವ ಮಾರ್ಗದಲ್ಲಿ ಅರ್ಪಿಸಲು ಸಿದ್ಧವಾದ ಪ್ರವಾದಿ ಇಬ್ರಾಹೀಮರ ತ್ಯಾಗಮಯ ಜೀವನವೇ ನಮ್ಮದೆಂದು ನೆನಪಿಸಲು ಹಜ್ಜ್ ನ ಮತ್ತು ಹಬ್ಬದ ಸಂದರ್ಭದಲ್ಲಿ ಬಲಿದಾನ ನೀಡಲಾಗುತ್ತದೆ. ತನಗೆ ಅತ್ಯಧಿಕ ಪ್ರೀತಿ ಪಾತ್ರವಾದುದನ್ನು ದೇವ ಮಾರ್ಗದಲ್ಲಿ ಅರ್ಪಿಸಲು ಸಿದ್ಧನೆಂಬುದರ ಪ್ರತಿಜ್ಞೆಯೂ ಹೌದು. ಹಣ, ಸ್ಥಾನಮಾನ, ಗೌರವ, ಪ್ರಶಸ್ತಿ, ಸನ್ಮಾನ, ಹೆಣ್ಣು ಹೊನ್ನು, ಕುಟುಂಬ ಅಥವಾ ಅಧಿಕಾರಗಳು ಯಾವುದೂ ದೇವಾದೇಶದ ಪಾಲನೆಗೆ ಅಡ್ಡಿಯಾಗದೆಂಬ ಘೋಷಣೆಯನ್ನೂ ಇದು ಒಳಗೊಂಡಿದೆ.

ತನ್ನ ಸರ್ವಸ್ವವೆಂದು ಭಾವಿಸುವವುಗಳ ತ್ಯಾಗವು ಎಲ್ಲರಿಗೂ ಕಷ್ಟಕರ ವಿಚಾರವಾಗಿದೆ. ತಾನು ಅದಕ್ಕೂ ಸಿದ್ಧವೆಂದು ವಿಶ್ವಾಸಿಯು ಬಲಿದಾನದ ಮೂಲಕ ಘೋಷಿಸುತ್ತಾನೆ. ಪ್ರತ್ಯಕ್ಷವಾಗಿ ನೋಡುವಾಗ ಅದೊಂದು ಜೀವಹರಣವಾಗಿದೆ. ಆದರೆ ಅದರ ಆಂತರಿಕ ಅರ್ಥವು ಅತಿ ಮಹತ್ತರವಾಗಿದೆ. ಸೃಷ್ಟಿಕರ್ತನ ಪ್ರೀತಿಗಳಿಸಲು ಅತ್ಯಂತ ಪ್ರಿಯಕರವಾದುದನ್ನು ಅರ್ಪಿಸಲು ಸನ್ನದ್ದನೆಂಬ ಪ್ರತಿಜ್ಞೆಯಾಗಿದೆ. ಆದ್ದರಿಂದ ಈ ಕುರಿತು ಪವಿತ್ರ ಕುರ್ ಆನ್ ಹೇಳುತ್ತದೆ: ‘ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ, ಆದರೆ ಅವನಿಗೆ ನಿಮ್ಮ ‘ಧರ್ಮನಿಷ್ಠೆ’ ತಲುಪುತ್ತದೆ.’ (22:37)

ಇಸ್ಲಾಮಿನ ಆರಾಧನೆಗಳು ಹೆಚ್ಚಾಗಿ ಸಮಾಜಕ್ಕೆ ಅದರಲ್ಲೂ ಅಸಹಾಯಕ, ಅನಾಥರಿಗೆ ಉಪಕಾರಪ್ರದವಾಗಿರುತ್ತದೆ. ಬಲಿ ಕರ್ಮವು ಅದೇ ರೀತಿಯಾಗಿದೆ. ಅಲ್ಲಾಹನು ಆಜ್ಞಾಪಿಸುತ್ತಾನೆ: ‘ಅದರಿಂದ ಸ್ವತ: ತಿನ್ನಲಿ ಮತ್ತು ಬಡಬಗ್ಗರಿಗೂ ಕೊಡಲಿ.’ (22:28)

ಸಂತೋಷದ ಸಂದರ್ಭಗಳಲ್ಲಿ ದೇವನಿಗೆ ಕೃತಜ್ಞತೆಯ ಭಾಗವಾಗಿ ಅವನ ಸೃಷ್ಟಿಗಳಾದ ಮನುಷ್ಯನಿಗೆ, ವಿಶೇಷವಾಗಿ ಬಡವರು, ನಿರ್ಗತಿಕರಿಗೆ ಅನ್ನದಾನವನ್ನು ನೀಡುವುದು ಉತ್ತಮವೆಂದು ಇಸ್ಲಾಮ್ ಸಾರುತ್ತದೆ. ಆಹಾರ ಪದಾರ್ಥಗಳಲ್ಲಿ ಮಾಂಸಾಹಾರದಲ್ಲಿ ಹೆಚ್ಚು ಪೋಷಕಾಂಶವಿರುವುದಿರಂದ ಉದಾರಮತಿಗಳಾದ ವಿಶ್ವಾಸಿಗಳು ಅದನ್ನೇ ಕೊಡಬಯಸುತ್ತಾರೆ. ಮಾಂಸಾಹಾರದ ಅಡುಗೆಗಳಿಲ್ಲದ ಸತ್ಕಾರ ಕೂಟಗಳು ವಿಶ್ವದ ಯಾವುದೇ ಭಾಗದಲ್ಲೂ ಯಾವುದೇ ಜನ ವಿಭಾಗದಲ್ಲೂ ಆಗುವುದು ಕಡಿಮೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *