Home / ಪ್ರಶ್ನೋತ್ತರ / ದಯೆಯ ಕುರಿತು ಬಹಳವಾಗಿ ಮಾತನಾಡುವ ಇಸ್ಲಾಮ್ ಪ್ರಾಣಿ ಹಾಗೂ ಇತರ ಜೀವಿಗಳೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆಯಲ್ಲಾ? ಅವುಗಳನ್ನು ಕೊಲ್ಲವುದು ಎಷ್ಟು ಸರಿ.?

ದಯೆಯ ಕುರಿತು ಬಹಳವಾಗಿ ಮಾತನಾಡುವ ಇಸ್ಲಾಮ್ ಪ್ರಾಣಿ ಹಾಗೂ ಇತರ ಜೀವಿಗಳೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆಯಲ್ಲಾ? ಅವುಗಳನ್ನು ಕೊಲ್ಲವುದು ಎಷ್ಟು ಸರಿ.?

ಭೂಮಿಯಲ್ಲಿರುವ ಎಲ್ಲ ಜೀವಜಾಲಗಳ ಮೇಲೆ ದಯೆ ತೋರಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಪ್ರವಾದಿ(ಸ)ರು ಹೇಳಿದರು: ‘ಭೂಮಿಯಲ್ಲಿರುವವರಿಗೆ ಕರುಣೆ ತೋರಿಸಿರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.’ (ತಬ್ರಾನಿ)

‘ಕರುಣೆಯಿಲ್ಲದವನಿಗೆ ಕಾರುಣ್ಯ ಲಭಿಸುವುದಿಲ್ಲ’ (ಬುಖಾರಿ, ಮುಸ್ಲಿಮ್)

‘ದೌರ್ಭಾಗ್ಯ ಶಾಲಿಯ ಹೊರತು ಯಾರೂ ಕರುಣೆಯಿಲ್ಲದವರಾಗಲಾರರು.’ (ಅಬೂದಾವೂದ್)

ಇಸ್ಲಾಮ್ ಭೂಮಿಯಲ್ಲಿರುವ ಜೀವಜಾಲಗಳನ್ನೆಲ್ಲಾ ಮನುಷ್ಯರಂತಹ ಸಮೂಹವೆಂದು ಪರಿಗಣಿಸುತ್ತದೆ. ಅಲ್ಲಾಹನು ಹೇಳುತ್ತಾನೆ: ‘ಭೂಮಿಯ ಮೇಲೆ ಚಲಿಸುವ ಪ್ರಾಣಿಗಳನ್ನು ರೆಕ್ಕೆಗಳಿಂದ ಹಾರಾಡುವ ಪಕ್ಷಿಗಳನ್ನು ನೋಡಿಕೊಳ್ಳಿರಿ. ಇವೆಲ್ಲವೂ ನಿಮ್ಮಂತೆಯೇ ವಾಯುವಿನಲ್ಲಿ ಇರುವ ವರ್ಗಗಳು.’ (ಪವಿತ್ರ ಕುರ್ ಆನ್ 6: 38)

ಮನುಷ್ಯರು ಧಿಕ್ಕಾರಿಗಳಾದರೂ, ಇತರ ಜೀವಜಾಲಗಳನ್ನು ಪರಿಗಣಿಸಿ ಮಳೆ ಸುರಿಯುತ್ತದೆಂದು ಪ್ರವಾದಿವರ್ಯರು ಹೇಳಿದ್ದಾರೆ: ‘ಜನರು ಝಕಾತ್ ನೀಡದಿದ್ದರೆ ಮಳೆ ನಿಂತು ಹೋಗುತ್ತಿತ್ತು. ಇತರ ಜೀವಿಗಳ ಕಾರಣದಿಂದ ಮಳೆ ಸುರಿಯುತ್ತದೆ.’ (ಇಬ್ನು ಮಾಜಃ)

ಯಾವುದೇ ಜೀವಿಗೂ ಸಹಾಯ ಮಾಡುವುದು ಪುಣ್ಯ ಕರ್ಮವಾಗಿದೆ. ಪ್ರವಾದಿ(ಸ) ಹೇಳುತ್ತಾರೆ: ‘ಪ್ರತಿಯೊಂದು ಜೀವಿಗೆ ತೋರುವ ಕರುಣೆಗೂ ಪುಣ್ಯವಿದೆ.’ (ಬುಖಾರಿ)

ಪ್ರವಾದಿವರ್ಯರು ಹೇಳುತ್ತಾರೆ: ‘ಒಬ್ಬನು ದಾರಿಯಲ್ಲಿ ಹೋಗುತ್ತಿದ್ದಾಗ ಬಾಯಾರಿಕೆಯಿಂದ ಬಳಲಿದನು. ಅವನಿಗೆ ಒಂದು ಬಾವಿ ಕಾಣಿಸಿತು. ಅದರಲ್ಲಿ ಇಳಿದು ನೀರು ಕುಡಿದು ಹೊರಗೆ ಬಂದಾಗ ಒಂದು ನಾಯಿಯು ಬಾಯಾರಿ ಬಳಲಿ ನೆಲೆ ನೆಕ್ಕುವುದನ್ನು ಕಂಡನು. ಈ ನಾಯಿಗೆ ನನ್ನಂತೆಯೇ ಬಾಯಾರಿಕೆಯಾಗಿದೆಯೆಂದು ಮನದಲ್ಲಿಯೇ ಹೇಳುತ್ತಾ ಅವನು ಬಾವಿಗಿಳಿದು ತನ್ನ ಬೂಟಿನಲ್ಲಿ ನೀರು ತುಂಬಿಸಿ ಅದನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಮೇಲೆ ಬಂದು ನಾಯಿಗೆ ಕುಡಿಸಿದರು. ಇದಕ್ಕಾಗಿ ಅಲ್ಲಾಹನು ಅವನಿಗೆ ಕೃತಜ್ಞತೆ ತೋರಿದನು. ಅವನಿಗೆ ಕ್ಷಮೆ ನೀಡಿದನು.’ ಇದನ್ನು ಕೇಳಿದ ಅವರ ಸಂಗಾತಿಗಳು ಹೀಗೆ ಪ್ರಶ್ನಿಸಿದರು. ‘ಪ್ರಾಣಿಗಳ ವಿಷಯದಲ್ಲಿಯೂ ನಮಗೆ ಪ್ರತಿಫಲವಿದೆಯೇ’ ಪ್ರವಾದಿ(ಸ) ಉತ್ತರಿಸಿದರು, ‘ಪ್ರಾಣವಿರುವ ಜೀವಿಗಳ ಬಗ್ಗೆಯೂ ನಿಮಗೆ ಪ್ರತಿಫಲವಿದೆ.’ (ಬುಖಾರಿ ಮುಸ್ಲಿಮ್)

ಇನ್ನೊಂದು ಘಟನೆಯನ್ನು ಪ್ರವಾದಿ(ಸ) ಹೀಗೆ ವಿವರಿಸುತ್ತಾರೆ: ‘ಒಂದು ನಾಯಿಯು ಬಾವಿಯ ಸುತ್ತಲೂ ಓಡಾಡುತ್ತಿತ್ತು. ತೀವ್ರ ಬಾಯಾರಿಕೆಯಿಂದ ಅದು ಸಾಯುವ ಸ್ಥಿತಿಗೆ ತಲುಪಿತ್ತು. ಇದನ್ನು ನೋಡಿ ಇಸ್ರಾಈಲ್ ಜನಾಂಗದ ಓರ್ವ ವ್ಯಭಿಚಾರಿಣಿಯು ತನ್ನ ಬೂಟು ಕಳಚಿ ಅದರಲ್ಲಿ ನೀರು ತಂದು ಅದಕ್ಕೆ ಕುಡಿಸಿದಳು ಮತ್ತು ತಾನೂ ಕುಡಿದಳು. ಅದಕ್ಕಾಗಿ ಅಲ್ಲಾಹನು ಆಕೆಗೆ ಕ್ಷಮೆ ನೀಡಿದನು.’ (ಬುಖಾರಿ)

ಜೀವಿಗಳಿಗೆ ದ್ರೋಹವೆಸಗುವುದು ಅಪರಾಧವಾಗಿದೆ. ಪ್ರವಾದಿವರ್ಯರು ಅದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ಹೇಳುತ್ತಾರೆ: ‘ಬೆಕ್ಕಿನಿಂದಾಗಿ ಓರ್ವ ಮಹಿಳೆಯು ದಂಡನೆಗೆ ಗುರಿಯಾದಳು. ಅವಳು ಅದನ್ನು ಹಸಿವೆಯಿಂದ ಸಾಯುವ ತನಕ ಕಟ್ಟಿ ಹಾಕಿದಳು. ಅದ್ದರಿಂದ ಆಕೆ ನರಕವಾಸಿಯಾದಳು.’ (ಬುಖಾರಿ, ಮುಸ್ಲಿಮ್)

‘ಒಂದು ಗುಬ್ಬಚ್ಚಿ ಅಥವಾ ಅದಕ್ಕಿಂತಲೂ ಸಣ್ಣ ಜೀವಿಯನ್ನು ಅನ್ಯಾಯವಾಗಿ ಕೊಲ್ಲುವುದು ಅಲ್ಲಾಹನ ಬಳಿ ಉತ್ತರಿಸಬೇಕಾದ ವಿಷಯವಾಗಿದೆ.’ ‘ನ್ಯಾಯಯುತವಾದ ಅಗತ್ಯವೇನೆಂದು’ ಕೇಳಿದಾಗ ಅವರು ಹೇಳಿದರು: ‘ಆಹಾರ ತಯಾರಿಸುವುದು, ಬಲಿಯರ್ಪಿಸುವುದು ಮತ್ತು ಕೊಂದ ಬಳಿಕ ವೃಥಾ ಉಪೇಕ್ಷಿಸದಿರುವುದು.’ (ಅಹ್ಮದ್)

ಮನೋರಂಜನೆಗಾಗಿ ಪ್ರಾಣಿಗಳನ್ನು ಕೊಲ್ಲುವುದನ್ನೂ, ಪರಸ್ಪರ ಕಾದಾಡಿಸುವುದನ್ನೂ ಪ್ರವಾದಿ(ಸ) ನಿಷೇಧಿಸಿದ್ದಾರೆ.( ಮುಸ್ಲಿಮ್, ತಿರ್ಮಿದಿ)

ಹೀಗೆ ಪ್ರಾಣಿಗಳಿಗೆ ಕಲ್ಲೆಸೆಯುವುದನ್ನೂ, ಜೇನ್ನೊಣ, ಇರುವೆ, ಗುಬ್ಬಚ್ಚಿಯಂತಹವುಗಳನ್ನು ವೃಥಾ ಕೊಲ್ಲುವುದನ್ನು ಪ್ರವಾದಿ(ಸ) ವಿರೋಧಿಸಿದ್ದಾರೆ. (ಮುಸ್ಲಿಮ್, ಅಬೂದಾವುದ್)

ಪ್ರವಾದಿ(ಸ) ಹೇಳಿದ್ದಾರೆ: ಯಾರಾದರೂ ಒಂದು ಪಕ್ಷಿಯನ್ನು ಅನಗತ್ಯವಾಗಿ ಕೊಂದರೆ ಅಂತ್ಯ ದಿನಂದು ಅದು ಅಲ್ಲಾಹನೊಡನೆ ಜೋರಾಗಿ ಕಿರುಚಿಕೊಂಡು ಹೇಳುತ್ತಾರೆ: ‘ನನ್ನ ಪ್ರಭೂ! ಈ ವ್ಯಕ್ತಿ ನನ್ನನ್ನು ಅನಗತ್ಯವಾಗಿ ಕೊಂದಿದ್ದಾನೆ. ಆತನ ಉಪಯೋಗಕ್ಕಾಗಿ ನನ್ನನ್ನು ಕೊಂದದ್ದಲ್ಲ.’ (ನಸಾಈ, ಇಬ್ನು ಹಿಬ್ಬಾನ್)

ಚಳಿಕಾಯಿಸಲು ಬೆಂಕಿ ಉರಿಸಿದ ಅನುಯಾಯಿಗಳೊಡನೆ ಪ್ರವಾದಿ(ಸ) ಅದು ಅಲ್ಲಿರುವ ಇರುವೆಗಳನ್ನು ಸುಡಬಹುದೆಂಬ ಭಯದಿಂದ ಅದನ್ನು ನಂದಿಸುವಂತೆ ಸೂಚಿಸಿದರು. ಹಸಿವೆಯಿಂದ ಕಂಗಾಲಾಗಿ ರೋದಿಸುತ್ತಿದ್ದ ಒಂಟೆಯ ಮಾಲಿಕನನ್ನು ಗದರಿಸಿದರು. ಮೃಗಗಳ ಮುಖದ ಮೇಲೆ ಹಚ್ಚಿ ಹಾಕುವುದನ್ನೂ, ಬೆನ್ನಿಗೆ ಸುಟ್ಟ ಬರೆಯನ್ನು ಹಾಕುವುದನ್ನು ವಿರೋಧಿಸಿದರು. ಮೃಗಗಳ ಬೆನ್ನನ್ನು ಆಸನವನ್ನಾಗಿ ಮಾಡಬಾರದೆಂದು ಆಜ್ಞಾಪಿಸಿದ ಅವರು ಸಸ್ಯ ಸಂಕುಲದೊಂದಿಗೂ ಕರುಣೆ ತೋರಬೇಕೆಂದು ಉಪದೇಶಿಸಿದರು. ಮರಕ್ಕೆ ಕಲ್ಲೆಸೆಯುತ್ತಿದ್ದ ಬಾಲಕನೊಡನೆ ‘ವಿನಾಕಾರಣ ಮರಕ್ಕೆ ಕಲ್ಲೆಸೆಯಬಾರದು. ಅದರಿಂದ ಮರಕ್ಕೆ ನೋವಾಗುವುದೆಂದು ಹೇಳಿದರು.’

ಹೀಗೆ ಪ್ರಪಂಚದ ಸರ್ವಜೀವಜಾಲಗಳೊಂದಿಗೆ ಕರುಣಾಳುಗಳಾಗಿರಬೇಕೆಂದು ಇಸ್ಲಾಮ್ ಬಯಸುತ್ತದೆ.

ಆಹಾರವಿಲ್ಲದೆ ಯಾವ ಜೀವಿಯೂ ಬದುಕಲಾರದು. ಸಸ್ಯ, ಪ್ರಾಣಿ, ಜಲಚರ, ಜಾನುವಾರುಗಳು, ಹಕ್ಕಿಗಳು, ಕೀಟಗಳು ಆಹಾರದಿಂದಲೇ ಬದುಕುತ್ತದೆ. ಅದು ಸಾಧ್ಯವಾಗಬೇಕಾದರೆ ಒಂದು ಜೀವಿ ಇನ್ನೊಂದನ್ನು ಉಪಯೋಗಿಸಬೇಕಾಗುತ್ತದೆ. ಸಸ್ಯಗಳು ತಮ್ಮ ಉಳಿವಿಗಾಗಿ ಇತರ ಸಸ್ಯಗಳನ್ನು ಉಪಯೋಗಿಸುತ್ತದೆ. ಪ್ರಾಣಿಗಳನ್ನು ಆಹಾರವಾಗಿಸುವ ಸಸ್ಯಗಳು ಇದೆ. ಪ್ರಾಣಿಗಳು ಸಸ್ಯಗಳನ್ನು, ಇತರ ಜೀವಗಳನ್ನು ಸೇವಿಸುತ್ತದೆ. ಗಾಳಿ, ನೀರು, ಭೂಮಿ, ಸಮುದ್ರಗಳಲ್ಲಿರುವ ಜೀವಜಾಲಗಳೆಲ್ಲವೂ ಇತರ ಸಸ್ಯ ಹಾಗೂ ಪ್ರಾಣಿಗಳಿಂದಲೇ ಬದುಕುಳಿಯುತ್ತದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಅದರ ಶರೀರಕ್ಕೆ ಅನುಗುಣವಾದ ಜೀವನ ಶೈಲಿಯಿದೆ. ಮೊಲವು ಸಸ್ಯಹಾರಿಯಾದುದರಿಂದ ಅದಕ್ಕೆ ಸೂಕ್ತವಾದ ಹಲ್ಲು ಹಾಗೂ ಹೊಟ್ಟೆಯಿದೆ. ಸಿಂಹವು ಮಾಂಸಹಾರಿಯಾದುದರಿಂದ ಅದು ಸೂಕ್ತವಾದ ದೇಹ ಪ್ರಕೃತಿಯನ್ನು ಹೊಂದಿದೆ.

ಮನುಷ್ಯರು ಸಸ್ಯಾಹಾರ ಹಾಗೂ ಮಾಂಸಾಹಾರ ಉಪಯೋಗಿಸಲು ಸಾಧ್ಯವಾಗುವ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದಾರೆ. ಕೇವಲ ಸಸ್ಯಾಹಾರಿಗಳಾದ ಆಡು, ದನ, ಕುರಿಗಳ ಹಲ್ಲುಗಳು ಸಸ್ಯ ಸೇವನೆಗೆ ಸೂಕ್ತವಾಗಿದೆ. ಮಾಂಸಾಹಾರಿಗಳ ಹಲ್ಲುಗಳು ಚೂಪಾಗಿ ಹರಿತವಾಗಿರುತ್ತದೆ. ಆದರೆ ಮನುಷ್ಯನಿಗೆ ಎರಡಕ್ಕೂ ಸಾಧ್ಯವಾಗುವ ಹಲ್ಲುಗಳಿವೆ. ಅಗಲವಾದ, ಸಮತಟ್ಟಾದ ಹಲ್ಲುಗಳೊಂದಿಗೆ ಚೂಪಾದ ಹಲ್ಲುಗಳೂ ಇವೆ ಅಥವಾ ಮನುಷ್ಯನನ್ನು ಮಿಶ್ರಾಹಾರಿಯಾಗಿಯೇ ಸೃಷ್ಟಿಸಲಾಗಿದೆ.

ಪಚನೇಂದ್ರಿಯಗಳ ಸ್ಥಿತಿಯೂ ಇದೇ ಆಗಿದೆ. ಸಸ್ಯಾಹಾರಿ ಪ್ರಾಣಿಗಳಿಗೆ ಸಸ್ಯಾಹಾರವನ್ನು ಮಾತ್ರ ಜೀರ್ಣವಾಗುವಂತಹ, ಮಾಂಸಾಹಾರಿ ಪ್ರಾಣಿಗಳಿಗೆ ಅದಕ್ಕನುಗುಣವಾದ ಪಚನೇಂದ್ರಿಯಗಳು, ಮನುಷ್ಯರಿಗೆ ಎರಡನ್ನೂ ಜೀರ್ಣಗೊಳಿಸುವ ರೀತಿಯಲ್ಲಿದೆ. ಹಲ್ಲುಗಳು ಹಾಗೂ ಜೀರ್ಣಾಂಗ ವ್ಯವಸ್ಥೆಯಿಂದಲೇ ಮಾನವ ಮಿಶ್ರಾಹಾರಿಯೆಂದು ಸಂಶಯಾತೀತವಾಗಿ ಸ್ಪಷ್ಟವಾಗುತ್ತದೆ.

ಈ ಭೂಮಿ ಹಾಗೂ ಅವುಗಳಲ್ಲಿರುವುದೆಲ್ಲವನ್ನು ಮಾನವ ಸಮೂಹಕ್ಕಾಗಿ ಸೃಷ್ಟಿಸಲಾಗಿದೆ. ಅಥವಾ ಮಾನವನು ಭೂಮಿಯ ಕೇಂದ್ರ ಬಿಂದುವಾಗಿದ್ದಾನೆ. ಅಲ್ಲಾಹನು ಹೇಳುತ್ತಾನೆ: ‘ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿ ಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ?’ (ಪವಿತ್ರ ಕುರ್ ಆನ್ 31:20)

‘ಜಾನವಾರುಗಳಲ್ಲಿ ಸವಾರಿಗಾಗಿ ಮತ್ತು ಹೊರೆ ಹೊರುವುದಕ್ಕಾಗಿ ಉಪಯೋಗವಾಗುವವುಗಳನ್ನು ತಿನ್ನಲು ಮತ್ತು ಹಾಸಲು ಉಪಯೋಗವಾಗುವುಗಳನ್ನು ಉಂಟು ಮಾಡಿದವನು ಅವನೇ, ಅಲ್ಲಾಹನು ನಿಮಗೆ ದಯಪಾಲಿಸಿದ ವಸ್ತುಗಳಿಂದ ತಿನ್ನಿರಿ ಮತ್ತು ಶೈತಾನನನ್ನು ಅನುಸರಿಸಬೇಡಿರಿ. ನಿಜವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ಶತ್ರು.’ (ಪವಿತ್ರ ಕುರ್ ಆನ್ 6:142)

‘ವಾಸ್ತವದಲ್ಲಿ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದೆ, ಅವುಗಳ ಉದರದೊಳಗೆ ಏನಿರುವುದೋ ಅದರಿಂದಲೇ ನಾವು ನಿಮಗೊಂದು ವಸ್ತುವನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಬೇರೆ ಅನೇಕ ಪ್ರಯೋಜನಗಳೂ ಇವೆ. ಅವುಗಳನ್ನು ನೀವು ತಿನ್ನುತ್ತೀರಿ.’ (ಪವಿತ್ರ ಕುರ್ ಆನ್ 23:21)

‘ನಿಮಗಾಗಿ ಸಮುದ್ರಗಳನ್ನು ನಿಯಂತ್ರಿಸಿ ನೀವು ಅದರಿಂದ ತಾಜಾಮಾಂಸ ಪಡೆದು ತಿನ್ನಲಾಗುವಂತೆಯೂ ಅದರಿಂದ ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುವಂತೆಯೂ ಮಾಡಿದವನು ಅವನೇ.’ (ಪವಿತ್ರ ಕುರ್ ಆನ್ 16:14)

ಭೂಮಿಯಲ್ಲಿರುವುದೆಲ್ಲವನ್ನೂ ಮನುಷ್ಯನಿಗಾಗಿ ನಿರ್ಮಿಸಲಾಗಿದೆಯೆಂಬ ಮಾತನ್ನು ಅಂಗೀಕರಿಸದವರೂ, ಪ್ರಾಯೋಗಿಕವಾಗಿ ಅದಕ್ಕೆ ಅನುಗುಣವಾದ ನಿಲುವನ್ನೇ ಸ್ವೀಕರಿಸು ತ್ತಾರೆ. ಮನುಷ್ಯನು ತನ್ನ ಹಿತಾಸಕ್ತಿಗಾಗಿ ಭೂಮಿಯನ್ನು ಆಕ್ರಮಿಸುತ್ತಾನೆ. ಅದರಲ್ಲಿ ಬಾವಿಗಳನ್ನು ತೋಡುತ್ತಾನೆ. ರಸ್ತೆಗಳು, ಸೇತುವೆಗಳನ್ನು ನಿರ್ಮಿಸುತ್ತಾನೆ, ಮನೆ ಕಟ್ಟುತ್ತಾನೆ. ಇವೆಲ್ಲವನ್ನು ಮಾಡುವಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಏನು ಸಂಭವಿಸುತ್ತದೆಯೆಂಬುದನ್ನು ಗಮನಿಸುವುದಿಲ್ಲ, ಎಲ್ಲಾ ಜೀವಿಗಳಿಗೂ ಒಂದೇ ರೀತಿ ಹಕ್ಕುಬಾಧ್ಯತೆಗಳಿರುವ ಭೂಮಿಯಲ್ಲಿ ತಾನು ರಸ್ತೆ ಹಾಗೂ ಬಾವಿಯನ್ನು ಮಾಡುತ್ತಿದ್ದೇನೆಂಬುದನ್ನು ನೆನಪಿಸುವುದಿಲ್ಲ. ಹೀಗೆ ಸಸ್ಯಗಳು, ಫಲ ವೃಕ್ಷಗಳು, ಬೆಳೆಗಳನ್ನೆಲ್ಲವನ್ನೂ ತನ್ನ ಹಿತಾಸಕ್ತಿಯಂತೆ ಉಪಯೋಗಿಸಿಕೊಳ್ಳುತ್ತಾನೆ. ಆದ್ದರಿಂದ ಭೂಮಿ ಹಾಗೂ ಅದರಲ್ಲಿರುವವುಗಳನ್ನೆಲ್ಲಾ ಮಾನವನಿಗಾಗಿ ಸಿದ್ಧಗೊಳಿಸಲಾಗಿದೆಯೆಂಬ ಸತ್ಯವನ್ನು ಪ್ರಾಯೋಗಿಕವಾಗಿ ಒಪ್ಪಿಕೊಳ್ಳದ ಯಾರೂ ಇಲ್ಲ.

ಒಂದು ಜೀವಿಯನ್ನು ಕೊಲ್ಲುವುದಿಲ್ಲವೆಂಬುದು ಅಹಿಂಸೆಯನಿಸಿಕೊಂಡರೆ ಅದರಂತ ಬದುಕುವವರಾರೂ ಈ ಭೂಮಿಯಲ್ಲಿಲ್ಲ. ಮಾಂಸಾಹಾರ ಸೇವಿಸದವರು ಸಸ್ಯಾಹಾರವನ್ನು ಸೇವಿಸುತ್ತಾರಲ್ಲವೇ? ಸಸ್ಯಗಳಿಗೆ ಜೀವ ಹಾಗೂ ಭಾವನೆಗಳು ಇವೆಯೆಂಬುದು ಸರ್ವವಿದಿತ. ಆದ್ದರಿಂದ ಮಾಂಸಾಹಾರಿಗಳಂತೆ, ಸಸ್ಯಾಹಾರಿಗಳು ಜೀವಹಾನಿಯುಂಟು ಮಾಡುವುದರೊಂದಿಗೆ, ಸಸ್ಯಗಳಿಗೆ ನೋವನ್ನು ಉಂಟು ಮಾಡುತ್ತಾರೆ.

ಮನುಷ್ಯನ ದೇಹಕ್ಕೆ ಗಾಯವಾದರೆ ಅದರ ವಿಷಾಣುಗಳನ್ನು ಔಷಧಿ ಹಾಕಿ ಕೊಲ್ಲಲಾಗುತ್ತದೆ. ಹೊಟ್ಟೆಯ ಕ್ರಿಮಿಗಳನ್ನು ನಾಶಪಡಿಸುತ್ತೇವೆ. ಸೊಳ್ಳೆಗಳು ಮೊಟ್ಟೆಯಿಡುವ ಮಲಿನ ಜಲಕ್ಕೆ ವಿಷ ಸಿಂಪಡಿಸಿ ಕೊಲ್ಲಲಾಗುತ್ತದೆ. ಒಟ್ಟಿನಲ್ಲಿ ಯಾವೊಂದು ಜೀವಿಯನ್ನೂ ಕೊಲ್ಲದವರು ಯಾರೂ ಇರಲಾರರು. ಅದು ಸಾಧ್ಯವೂ ಅಲ್ಲ.

ಮಾನವ ಸಮೂಹದ ಸ್ವಸ್ಥತೆಗಾಗಿ ಇವುಗಳನ್ನೆಲ್ಲಾ ಕೊಲ್ಲಬಹುದಾದರೆ ಅತ್ಯಂತ ಪೋಷಕಾಂಶ ಆಹಾರವಾದ ಮಾಂಸವನ್ನು ಉಪಯೋಗಿಸಬಹುದು. ಪ್ರೊಟೀನ್, ಕಬ್ಬಿಣಾಂಶ, ವಿಟಿಮಿನ್ ಬಿ-1, ನಿಯಾಸಿನ್… ಮೊದಲಾದವುಗಳು ಮಾಂಸಾಹಾರದಲ್ಲಿ ಧಾರಾಳವಾಗಿದೆ. ಸಸ್ಯಗಳು, ಪ್ರಾಣಿಗಳು, ಕ್ರಿಮಿ ಕೀಟಗಳನ್ನು ತಮ್ಮ ಉಳಿಯುವಿಕೆಗಾಗಿ ಕೊಲ್ಲುವವರು ಕೋಟ್ಯಂತರ ಜನರಿಗೆ ಆಹಾರವಾಗುವ ಮಾಂಸವನ್ನು ತಿನ್ನಬಾರದೆಂದು ಹೇಳುವುದು ಖಂಡಿತ ಅರ್ಥಶೂನ್ಯವಾಗಿದೆ.

ಅದರಿಂದಾಗಿಯೇ, ಜೀವಜಾಲಗಳೊಂದಿಗೆ ಅತ್ಯಂತ ಕಾರುಣ್ಯದಿಂದ ವರ್ತಿಸಬೇಕೆಂದು ಆದೇಶಿಸುವ ಇಸ್ಲಾಮ್, ಅದರ ಮಾಂಸ ಸೇವನೆಗೆ ಅನುಮತಿ ನೀಡಿತು. ವಿಶ್ವದ ಕೋಟ್ಯಂತರ ಜನರು ಅದನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾರೆ. ಅದನ್ನು ವಿರೋಧಿಸುವುದು ಸಮಾಜದ್ರೋಹವೂ, ಜನವಿರೋಧಿಯೂ ಆಗಿದೆ.

ಮಾಂಸವು ಧರ್ಮಸಮ್ಮತವಾಗಲು ಅವುಗಳನ್ನು ಅಲ್ಲಾಹನ ನಾಮದಿಂದ ಕೊಯ್ಯಬೇಕೆಂದು ಇಸ್ಲಾಮ್ ಆದೇಶಿಸಿದೆ. ದೇವನ ಅನುಗ್ರಹ ಕಾರುಣ್ಯವನ್ನು ಅನುಸರಿಸಿ ಎಲ್ಲಾ ಕರ್ಮಗಳಂತೆಯೇ ಅವನ ಸೃಷ್ಟಿಯಾದ ಪ್ರಾಣಿಯನ್ನು ಅನಿವಾರ್ಯ ಉದ್ದೇಶಗಳಿಗಾಗಿ ಉಪಯೋಗಿಸಬೇಕೆಂದು ಇದು ಕಲಿಸುತ್ತದೆ. ಅದರೊಂದಿಗೆ ಬಲಿಪ್ರಾಣಿಗೆ ಗರಿಷ್ಠ ಸುಖ ನೀಡಿ, ಅದರ ಕಷ್ಟವನ್ನು ಲಘುಗೊಳಿಸಿ ಕೊಡಬೇಕೆಂಬ ಆದೇಶವಿದೆ. ಪ್ರವಾದಿ (ಸ) ಹೇಳಿದರು: ‘ಅಲ್ಲಾಹನು ಎಲ್ಲ ವಿಷಯದಲ್ಲಿಯೂ ಒಳಿತನ್ನು ನಿರ್ಣಯಿಸಿದ್ದಾನೆ. ಆದ್ದರಿಂದ ನೀವು ಕೊಯ್ಯುವುದಿದ್ದರೆ (ದಿಬಹ್) ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ವಧಿಸುವುದಿದ್ದರೂ ಒಳ್ಳೆಯ ರೀತಿಯಲ್ಲಿ ವಧಿಸಬೇಕು. ಚೂರಿಯ ಅಲಗನ್ನು ಚೆನ್ನಾಗಿ ಹರಿತಗೊಳಿಸಿ ಪ್ರಾಣಿಗೆ ಅನುಕೂಲ ಒದಗಿಸಬೇಕು.’ (ಮುಸ್ಲಿಮ್) ಒಮ್ಮೆ ಒಬ್ಬರು ಪ್ರವಾದಿಯವರೊಡನೆ ಹೇಳಿದರು: ‘ನಾನು ಆಡನ್ನು ಕೊಯ್ಯುವಾಗ ದಯೆ ತೋರಿಸುತ್ತೇನೆ.’ ಅದನ್ನು ಕೇಳಿ ಪ್ರವಾದಿಯವರು(ಸ) ಹೀಗೆ ಉತ್ತರಿಸಿದರು. ‘ನೀನು ಅದಕ್ಕೆ ಕರುಣೆ ತೋರಿದರೆ, ಅಲ್ಲಾಹನು ನಿನ್ನ ಮೇಲೆ ಕರುಣೆ ತೋರಿಸುತ್ತಾನೆ.’ ( ಹಾಕಿಮ್)

ಒಮ್ಮೆ ಒಬ್ಬರು ಕೊಯ್ಯಲಿಕ್ಕಾಗಿ ಆಡಿನ ಕಾಲು ಹಿಡಿದು ಎಳೆದೊಯ್ಯತ್ತಿರುವುದನ್ನು ಉಮರ್ ಫಾರೂಕ್(ರ) ನೋಡಿದರು, ‘ನಿನಗೇನಾಗಿದೆ? ಅದನ್ನು ಉತ್ತಮ ರೀತಿಯಲ್ಲಿ ಸಾಯುವಂತೆ ಮಾಡು’ ಎಂದರು.

ಇಸ್ಲಾಮ್ ಧರ್ಮದಂತೆ ಹಿಂದೂ ಧರ್ಮದಲ್ಲೂ ಮಾಂಸಾಹಾರಕ್ಕೆ ಅನುಮತಿಯಿದೆ. ಅದು ಮಾಂಸಾಹಾರವನ್ನು ನಿಷೇಧಿಸುತ್ತದೆಂಬ ಭಾವನೆ ಸರಿಯಲ್ಲ, ಹಲವು ಪುರಾಣಗಳಲ್ಲಿ ಸ್ಪಷ್ಟವಿದೆ. ಶ್ರೀರಾಮನು ವನವಾಸಕ್ಕೆ ಕಳುಹಿಸಲ್ಪಟ್ಟಾಗ, ನನಗೆ ರುಚಿಕರವಾದ ಮಾಂಸಾಹಾರವನ್ನು ಉಪೇಕ್ಷಿಸಬೇಕಾಗುತ್ತದೆಂದು ತಾಯಿಯೊಡನೆ ಹೇಳಿರುವುದಾಗಿ ಅಯೋಧ್ಯಕಾಂಡದ 20, 22, 66, 94 ಶ್ಲೋಕಗಳು ತಿಳಿಸುತ್ತದೆ. ಇದರಿಂದ ಶ್ರೀರಾಮನಿಗೆ ಮಾಂಸಹಾರ ಪ್ರಿಯವೆಂದು ವ್ಯಕ್ತವಾಗುತ್ತದೆ.

ಬೃಹದಾರಣ್ಯಕೋಪನಿಷತ್ ಹೇಳುತ್ತದೆ: ‘ನನಗೆ ವಿದ್ವಾಂಸನೂ, ಪ್ರಸಿದ್ಧನೂ ಸಭೆಗಳಲ್ಲಿ `ಆಕರ್ಷಕವಾಗಿ ಮಾತನಾಡುವ ಪುತ್ರನೂ ಲಭಿಸಬೇಕು. ಅವನು ವೇದಗ್ರಂಥಗಳನ್ನು ಕಲಿಯಬೇಕು. ಆರು ವರ್ಷ ಬದುಕಬೇಕು ಎಂದು ಬಯಸುವುದಿದ್ದರೆ ಮಾಂಸದೊಂದಿಗೆ ಆಹಾರವನ್ನು ಪಾಕಮಾಡಿ ತುಪ್ಪದೊಂದಿಗೆ ಸೇರಿಸಿ ಇಬ್ಬರೂ ತಿನ್ನಬೇಕು. ಅಂತಹ ಪುತ್ರನನ್ನು ಹುಟ್ಟಿಸಲು ಅವರು ಶಕ್ತರಾಗಬಹುದು. ಮಾಂಸವು ದನ ಅಥವಾ ಹೋರಿಯದ್ದಾಗಬಹುದು.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *