Home / ಪ್ರಶ್ನೋತ್ತರ / ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರಿಂದ ಜಿಝಿಯಾ ಎಂಬ ತೆರಿಗೆಯನ್ನು ಪಡೆಯುತ್ತಿದೆಯಲ್ಲವೇ? ಇದು ದೊಡ್ಡ ಅನ್ಯಾಯವಲ್ಲವೇ?

ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರಿಂದ ಜಿಝಿಯಾ ಎಂಬ ತೆರಿಗೆಯನ್ನು ಪಡೆಯುತ್ತಿದೆಯಲ್ಲವೇ? ಇದು ದೊಡ್ಡ ಅನ್ಯಾಯವಲ್ಲವೇ?

ಜೀಝಿಯಾ ಧಾರ್ಮೀಕ ತೆರಿಗೆಯಲ್ಲ. ಅದು ಸ್ಪಷ್ಟ ತಪ್ಪು ಧಾರಣೆಯಾಗಿದೆ. ಇದು ಅತ್ಯಂತ ಹೆಚ್ಚು ತಪ್ಪುಕಲ್ಪನೆಗೊಳಗಾದ ವಿಷಯವಾದುದರಿಂದ ಸ್ವಲ್ಪ ವಿವರಿಸಿದರೆ ಉತ್ತಮವೆಂದು ಭಾವಿಸಿದ್ದೇನೆ. ಮುಸ್ಲಿಮರು ತಮ್ಮ ಕೃಷಿ ಉತ್ಪನ್ನದ ವರಮಾನದ ಹತ್ತು ಶೇಕಡಾ ಮತ್ತು ಇತರ ಆರ್ಥಿಕ ವರಮಾನಗಳ ಎರಡೂವರೆ ಶೇಕಡಾವನ್ನು ಸರಕಾರಿ ಬೊಕ್ಕಸಕ್ಕೆ, ಒಪ್ಪಿಸಲೇಬೇಕು. ಇದು ಧಾರ್ಮಿಕ ಆರಾಧನಾ ಕರ್ಮವೂ ಆಗಿರುವುದರಿಂದ ಇತರ ಧರ್ಮೀಯರ ಮೇಲೆ ಹೇರುವುದು ಸಮಂಜಸವಲ್ಲ. ಏಕೆಂದರೆ ಅದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಆರ್ಥಿಕ ಸಮಾನತೆ ಕಾಪಾಡಲು ಮುಸ್ಲಿಮೇತರ ಪ್ರಜೆಗಳಿಗೆ ಇಸ್ಲಾಮಿನ ಆರಾಧನೆಗಳೊಂದಿಗೆ ಸಂಬಂಧವಿಲ್ಲದ ಇನ್ನೊಂದು ತೆರಿಗೆಯನ್ನು ನಿರ್ಧರಿಸಲಾಯಿತು. ಅದುವೇ ಜಿಝಿಯಾ. ಮುಸ್ಲಿಮರಿಂದ ಕಡ್ಡಾಯವಾಗಿ ವಸೂಲಿ ಮಾಡುತ್ತಿರುವ ಝಕಾತಿಗೆ ಬದಲಿಯಾದ ತೆರಿಗೆಯಿದು.

ಆರ್ಥಿಕವಾಗಿ ಸಬಲವಾಗಿರುವ ಮುಸ್ಲಿಮರೆಲ್ಲಾ ಝಕಾತ್ ನೀಡುವುದು ಕಡ್ಡಾಯವಾಗಿದೆ. ಸ್ತ್ರೀಯರು, ಮಕ್ಕಳು, ವೃದ್ಧರು, ರೋಗಿಗಳುಹೀಗೆ ಯಾರೂ ಕೂಡಾ ಇದರಿಂದ ಮುಕ್ತರಲ್ಲ, ಆದರೆ ಜಿಝಿಯಾದಲ್ಲಿ ಹಲವಾರು ಅನುಕೂಲತೆಗಳು, ರಿಯಾಯಿತಿಯೂ ಇದೆ. ಸ್ತ್ರೀಯರು, ಮಕ್ಕಳು, ಅಂಧರು, ವೃದ್ಧರು, ಮಾನಸಿಕ ಅಸ್ವಸ್ಥರು, ನಿತ್ಯರೋಗಿಗಳು, ಮಠದಲ್ಲಿರುವ ಸನ್ಯಾಸಿಗಳು, ಪುರೋಹಿತರಂತಹವರಿಗೆ ಜಿಝಿಯಾ ವಿಧಿಸಲಾಗುವುದಿಲ್ಲ. ಆದ್ದರಿಂದ ಜಿಝಿಯಾ ಮುಸ್ಲಿಮೇತರ ಪ್ರಜೆಗಳೊಂದಿಗೆ ಮಾಡಿದ ಅನ್ಯಾಯವಲ್ಲ, ಅವರಿಗೆ ಆರ್ಥಿಕವಾಗಿ ರಿಯಾಯಿತಿ ನೀಡುವ ಉಪಾಧಿಯಾಗಿದೆ.

ಯಾರಾದರೂ ಮುಸ್ಲಿಮರಂತೆ ಝಕಾತ್ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಇಸ್ಲಾಮೀ ರಾಷ್ಟ್ರವು ಅವರಿಂದ ಜಿಝಿಯಾ ವಸೂಲು ಮಾಡುವುದಿಲ್ಲ, ಇತಿಹಾಸದಲ್ಲಿ ಇದಕ್ಕೆ ಬಹಳಷ್ಟು ಉದಾಹರಣೆಗಳನ್ನು ಕಾಣಬಹುದು. ಒಂದು ಹೀಗಿದೆ: ಸರ್ ಥಾಮ ಆರ್ನಲ್ಡ್ ಬರೆಯುತ್ತಾರೆ: ‘ಅವರೊಂದಿಗೆ (ತಗ್ಲೀಬ್ ಗೋತ್ರ) ಮುಸ್ಲಿಮೇತರ ಗೋತ್ರಗಳಿಗೆ ನೀಡುವ ರಕ್ಷಣೆಗೆ ಬದಲಾಗಿ ನೀಡಬೇಕಾದ ತೆರಿಗೆಜಿಝಿಯಾಪಾವತಿಸುವಂತೆ ಖಲೀಫ್ ಉಮರುಲ್ ಫಾರೂಕ್ ಹೇಳಿದರು. ಆದರೆ ಜಿಝಿಯಾ ಪಾವತಿಸುವುದು ಅವಮಾನವೆಂದು ಭಾವಿಸಿದ ತಗ್ಲೀಬ್ ಗೋತ್ರವು ತಮಗೆ ಮುಸ್ಲಿಮರಂತೆ ತೆರಿಗೆ (ಝಕಾತ್) ಪಾವತಿಸಲು ಅನುಮತಿಸಬೇಕೆಂದು ಕೇಳಿಕೊಂಡಿತು. ಖಲೀಫರು ಒಪ್ಪಿಗೆ ನೀಡಿದ ಬಳಿಕ ಅವರು ಮುಸ್ಲಿಮರಂತೆ ಜಿಝಿಯಾಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ಖಜಾನೆಗೆ ನೀಡುತ್ತಿದ್ದರು.’ (ಇಸ್ಲಾಮ್: ಸಂದೇಶವೂ ಪ್ರಚಾರವೂ ಪುಟ 62)

ಇಸ್ಲಾಮೀ ರಾಷ್ಟ್ರದ ಸರ್ವ ಪ್ರಜೆಗಳ ರಕ್ಷಣೆಯು ಹೊಸ ಸರಕಾರದ ಮೇಲಿದೆ. ಮುಸ್ಲಿಮ್ಮುಸ್ಲಿಮೇತರ ಎಂಬ ಭೇದವಿಲ್ಲದೆ ಎಲ್ಲರೂ ಸೊತ್ತು ಸ್ವಾಭಿಮಾನವನ್ನು ರಕ್ಷಿಸಲು ಕಡ್ಡಾಯ ಸೈನಿಕ ಸೇವೆಯನ್ನು ಮುಸ್ಲಿಮರಿಗೆ ಜಾರಿಗೊಳಿಸಲಾಗಿತ್ತು. ರೀತಿ ಅವರ ಸಂರಕ್ಷಣೆಯನ್ನು ಸಂಪೂರ್ಣವಾಗಿ ವಹಿಸಿಕೊಂಡು ಸೈನಿಕ ಸೇವೆಯಿಂದ ಅವರನ್ನು ಮುಕ್ತಗೊಳಿಸಿದ್ದಕ್ಕೆ ಬದಲಾಗಿಯೂ ಜಿಝಯಾ ವಸೂಲಿ ಮಾಡಲಾಗುತ್ತಿತ್ತು. ಸೈನಿಕ ಸೇವೆಗೆ ಅಂದು ಸಂಬಳವಿರಲಿಲ್ಲವೆಂಬುದು ಗಮನಾರ್ಹ. ಯಾವುದೋ ಪರಿಸ್ಥಿತಿಯಲ್ಲಿ ದೇಶವಾಸಿಗಳಿಗೆ ಸಂರಕ್ಷಣೆ ನೀಡಲು ಸರಕಾರಕ್ಕೆ ಸಾಧ್ಯವಾಗದಿದ್ದರೆ ಜಿಝಯಾವನ್ನು ಮರಳಿ ನೀಡುವುದು ವಾಡಿಕೆಯಾಗಿತ್ತು. ಅದೇ ರೀತಿ ಸೈನಿಕ ಸೇವೆಗೆ ಸ್ವಯಂ ಸನ್ನದ್ಧರಾಗಿ ಮುಂದೆ ಬಂದವರನ್ನು ಜಿಝಿಯಾದಿಂದ ಮುಕ್ತಗೊಳಿಸಲಾಗುತ್ತಿತ್ತು. ಸರ್ ಥಾಮಸ್ ಆರ್ನಲ್ಡ್ ಬರೆಯುತ್ತಾರೆ: ‘ಕೆಲವರು ಹೇಳುವ ಪ್ರಕಾರ ಇಸ್ಲಾಮ್ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದವರಿಗೆ ಶಿಕ್ಷೆಯ ರೂಪದಲ್ಲಿ ಕ್ರೈಸ್ತರಿಂದ ಜಿಝಿಯಾವನ್ನು ವಸೂಲು ಮಾಡುತ್ತಿದ್ದುದಲ್ಲ. ಎಲ್ಲಾ ಮುಸ್ಲಿಮೇತರ ಪ್ರಜೆಗಳಿಂದಲೂ ಇದನ್ನು ಸಂಗ್ರಹಿಸಲಾಗುತ್ತಿತ್ತು. ಧಾರ್ಮಿಕ ಕಾರಣಗಳಿಂದ ಅವರನ್ನು ಕಡ್ಡಾಯ ಸೈನಿಕ ಸೇವೆಯಿಂದ ದೂರವಿರಿಸಲಾಗಿತ್ತು. ಮುಸ್ಲಿಮರು ನೀಡುತ್ತಿದ್ದ ರಕ್ಷಣೆಗೆ ಬದಲಿಯಾಗಿ ಅವರು ಜಿಝಿಯಾ ಕೊಡಬೇಕಾಗಿತ್ತು.’

ತುರ್ಕಿ ಆಡಳಿತ ಕಾಲದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ರೈಸ್ತರಿಗೆ ಜಿಝಿಯಾದಿಂದ ವಿನಾಯಿತಿ ನೀಡಲಾಗಿತ್ತು. ತೀರ ಪ್ರದೇಶಗಳಾದ ಸಿತ್ತಿರೋಸ್, ಗರಾನಿಯವನ್ನು ಕಾಯಲು ಶಸ್ತ್ರಧಾರಿಗಳ ಒಂದು ತಂಡವನ್ನು ನೀಡುತ್ತೇವೆಂಬ ಶರತ್ತಿನೊಂದಿಗೆ ಅಲ್ಬೇನಿಯಾದ ಕ್ರೈಸ್ತ ವರ್ಗವಾದ ಮೆಗಾರಿಗಳನ್ನು ತುರ್ಕಿಯಲ್ಲಿ ಜಿಝಿಯಾದಿಂದ ಮುಕ್ತಗೊಳಿಸಲಾಗಿತ್ತು. ತುರ್ಕಿ ಸೈನ್ಯಕ್ಕೆ ಮುಂಚೆಯೇ ಮೊದಲು ತೆರಳಿ ಸೇತುವೆ, ಹಾದಿಗಳನ್ನು ಸರಿಪಡಿಸುತ್ತಿದ್ದ ಕ್ರೈಸ್ತರಿಂದ ಜಿಝಿಯಾ ಪಡೆಯುತ್ತಿರಲಿಲ್ಲ, ಮಾತ್ರವಲ್ಲ ಕಂದಾಯ ವಸೂಲಿ ಮಾಡದೆ ಭೂಮಿಯನ್ನು ನೀಡಲಾಗಿತ್ತು.

ಹೈಸ್ರದ ಕ್ರೈಸ್ತರು ಸುಲ್ತಾನ್ರಿಗೆ ಜಿಝಿಯಾ ನೀಡುತ್ತಿರಲಿಲ್ಲ. ಅದಕ್ಕೆ ಬದಲಾಗಿ 250 ದೃಢಕಾಯದ ನಾವಿಕರನ್ನು ತುರ್ಕಿ ಸೇನೆಗೆ ನೀಡಿದರು.

ಅರ್ಮತ್ತೋಳಿ ಎಂದು ಕರೆಯಲಾಗುತ್ತಿದ್ದ ದಕ್ಷಿಣ ರುಮೇನಿಯಾದವರು ಹದಿನಾರು, ಹದಿನೇಳನೇ ಶತಮಾನದಲ್ಲಿ ತುರ್ಕಿ ಸೈನ್ಯದ ಮುಖ್ಯ ಅಂಗವಾಗಿದ್ದರು. ಸ್ಕುಟಾರ್ಗೆ ಪಶ್ಚಿಮದಲ್ಲಿರುವ ಪರ್ವತಗಳಲ್ಲಿ ವಾಸಿಸಿದ್ದ ಮಿರ್ದಿಗಳು ಎಂಬ ಅರೇಬಿಯನ್ ಕ್ಯಾಥೋಲಿಕರನ್ನು ತೆರಿಗೆಯಿಂದ ಮುಕ್ತಗೊಳಸಲಾಗಿತ್ತು. ಯುದ್ಧದ ಸಂದರ್ಭದಲ್ಲಿ ಆಯುಧ ಧಾರಿಗಳನ್ನು ನೀಡುತ್ತೇವೆಂಬ ಒಪ್ಪಂದವಿತ್ತು. ಅದರಂತೆ ಗ್ರೀಕ್ ಕ್ರೈಸ್ತರಿಗೂ ಜಿಝಿಯಾ ವಿಧಿಸಲಿಲ್ಲ. ಕಾನ್ಸ್ಟಾಂಟಿನೋಪಲ್ಗೆ ಶುದ್ಧ ಜಲವನ್ನುತರುತ್ತಿದ್ದ ಕಲ್ಲು ಗುಂಡಿಗಳನ್ನು ಅವರೇ ಸಂರಕ್ಷಿಸಿದ್ದರು. ನಗರದ ಮದ್ದುಗುಂಡಿನ ಕಾರ್ಖಾನೆಗೆ ಕಾವಲುಗಾರರಾದವರಿಗೂ ಜಿಝಿಯಾ ಇರಲಿಲ್ಲ. ಆದರೆ ಈಜಿಪ್ಟಿನ ಗ್ರಾಮೀಣ ಕೃಷಿಕರನ್ನು ಸೈನಿಕ ಸೇವೆಯಿಂದ ದೂರವಿರಿಸಿದಾಗ ಅವರಿಗೂ ಕೂಡ ಕ್ರೈಸ್ತರಂತೆ ತೆರಿಗೆಯನ್ನು ವಿಧಿಸಲಾಯಿತು.’ (ಸರ್ ಥಾಮಸ್ಆರ್ನಲ್ಡ್ ಇಸ್ಲಾಮ್: ಸಂದೇಶವೂ ಪ್ರಚಾರವೂ, ಪುಟ 73-76)

ಪ್ರವಾದಿವರ್ಯರ ಕಾಲದಲ್ಲಿ ಮದೀನಾದ ಮುಸ್ಲಿಮೇತರ ವಿಭಾಗಗಳು ರಾಷ್ಟ್ರದ ರಕ್ಷಣಾ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ ಜಿಝಿಯಾವನ್ನು ಪಡೆಯುತ್ತಿರಲಿಲ್ಲ.

ಸಂಕ್ಷಿಪ್ತವಾಗಿ, ಪಾಶ್ಚಾತ್ಯರ ಅಪಪ್ರಚಾರದಂತ, ವಿಶೇಷವಾಗಿ ವರ್ಣಿಸುವಂತೆ ಜಿಝಿಯಾ ಧಾರ್ಮಿಕ ತೆರಿಗೆ ಖಂಡಿತ ಅಲ್ಲ, ವಾಸ್ತವದಲ್ಲಿ ಯುದ್ಧದ ತೆರಿಗೆಯಾಗಿದೆ. ಶಕ್ತಿ, ಸಾಮರ್ಥ್ಯವಿದ್ದರೂ ಕೂಡ ಸೈನ್ಯದಲ್ಲಿ ಸೇವೆಗೆ ಸಿದ್ಧರಾಗದವರಿಂದ ಅದನ್ನು ಸಂಗ್ರಹಿಸಲಾಗುತ್ತದೆ. ಅಂದು ಕಡ್ಡಾಯ ಸೈನಿಕ ಸೇವೆಯಿದ್ದ ಸಂದರ್ಭದಲ್ಲೂ ವಿನಾಯಿತಿ ನೀಡಲ್ಪಟ್ಟು ದೈಹಿಕ ಹಾಗೂ ಆರ್ಥಿಕ ಸುರಕ್ಷತೆ ಅನುಭವಿಸಿದುದರ ಪ್ರತಿಫಲವಾಗಿತ್ತು. ಆದರೆ ಇಸ್ಲಾಮೀ ರಾಷ್ಟ್ರದ ಮುಸ್ಲಿಮ್ ಪ್ರಜೆಗಳು ಕಡ್ಡಾಯ ಸೈನಿಕ ಸೇವೆಯನ್ನು ನೀಡಿದರೂ ಸರ್ಕಾರಕ್ಕೆ ಝಕಾತ್ ನೀಡಬೇಕಾಗಿತ್ತು. ಎಲ್ಲಾ ಕಾಲದಲ್ಲೂ ಝಕಾತ್ ಮೌಲ್ಯವು ಜಿಝಿಯಾಕ್ಕಿಂತ ಬಹಳಷ್ಟ ಹೆಚ್ಚಾಗಿತ್ತು ಎಂಬುದು ಗಮನಾರ್ಹ. ಮುಸ್ಲಿಮೇತರ ಪ್ರಜೆಗಳು ಝಕಾತ್ ನೀಡಲು ಅಥವಾ ಸೈನಿಕ ಸೇವೆ ನೀಡಲು ಸ್ವಯಂ ಸಿದ್ಧರಾದರೆ ಜಿಝಿಯಾದಿಂದ ಮುಕ್ತಗೊಳಿಸಿಲಾಗುತ್ತಿತ್ತು. ಸೇನಾವೃತ್ತಿಯು ವರಮಾನವಿರುವ ಉದ್ಯೋಗವಾಗಿ ಬದಲಾದ ಇಂದಿನ ಕಾಲದಲ್ಲೂ ಮುಸ್ಲಿಮೇತರ ಪ್ರಜೆಗಳಿಗೆ ಜಿಝಿಯಾ ಹೇರಬಾರದು. ಆದ್ದರಿಂದ ಇಸ್ಲಾಮೀ ರಾಷ್ಟ್ರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಸಂಕಷ್ಟ ಅನುಭವಿಸುತ್ತಿಲ್ಲ, ಮಾತ್ರವಲ್ಲದೆ ಝಕಾತ್ನಿಂದ ಮುಕ್ತರಾಗಿರುವುದರಿಂದ ಮುಸ್ಲಿಮರಿಗಿಂತಲೂ ಉತ್ತಮ ಆರ್ಥಿಕತೆಯನ್ನು ಜೀವನ ಸೌಕರ್ಯವನ್ನು ಅನುಭವಿಸುತ್ತಿದ್ದಾರೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *