Home / ಪ್ರಶ್ನೋತ್ತರ / ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ?

ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ?

ಪ್ರಕೃತಿ ದತ್ತವಾದ ವಿಶೇಷತೆಗಳನ್ನು ಗಮನಿಸುವಾಗ ಮಹಿಳೆಯ ಮುಖ್ಯ ಕಾರ್ಯಕ್ಷೇತ್ರ ಮನೆಯಾಗಿದೆ. ಆಕೆಯ ಮಹತ್ವದ ಹೊಣೆಗಾರಿಕೆ ತಾಯ್ತನವಾಗಿದೆ. ಆದರೆ ಮಹಿಳೆ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳವುದನ್ನು ಇಸ್ಲಾಮ್ ನಿಷೇಧಿಸಿಲ್ಲ, ಮಾತ್ರವಲ್ಲ, ಅದಕ್ಕೆ ಅನುಮತಿ ನೀಡಿದೆಯಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪ್ರೋತ್ಸಾಹವನ್ನೂ ನೀಡಿದೆ.

ಶಿಕ್ಷಣ ಪಡೆಯುವುದರಲ್ಲಿ ಹಾಗೂ ನೀಡುವುದರಲ್ಲಿ ಪ್ರವಾದಿಯವರ ಕಾಲದಲ್ಲಿಯೇ ಪುರುಷರಂತೆ ಸ್ತ್ರೀಯರು ಕ್ರಿಯಾಶೀಲರಾಗಿದ್ದರು. ಪ್ರವಾದಿಯವರ ಬಳಿ ಬಂದು ವಿಷಯಗಳನ್ನು ಕಲಿತು. ಅದನ್ನು ಇತರರಿಗೆ ಕಲಿಸಕೊಡುವುದರಲ್ಲೂ ಹಿಂದೆ ಇರಲಿಲ್ಲ. ಪ್ರವಾದಿ ವಚನಗಳ ವರದಿಗಾರರಲ್ಲಿ ಮಹಿಳೆಯರ ಹೆಸರುಗಳು ಇದೇ ಕಾರಣದಿಂದ ಕಾಣಸಿಗುತ್ತದೆ.

ಪ್ರವಾದಿ ಪತ್ನಿ ಆಯಿಶಾ(ರ) ರು ಪಾಂಡಿತ್ಯದಲ್ಲಿ ಮುಂದಿದ್ದರು. ಇಮಾಮ್ ಝುಹ್ರಿ ಹೇಳುತ್ತಾರೆ: ‘ಆಯಿಶಾರು ಆಗಾಧ ಜ್ಞಾನ ಭಂಡಾರದ ವ್ಯಕ್ತಿಯಾಗಿದ್ದರು. ಪ್ರವಾದಿಗಳ ಪ್ರಮುಖ ಅನುಯಾಯಿಗಳು ಅವರಿಂದ ಕಲಿಯುತ್ತಿದ್ದರು.’ ಝುಬೈರ್‌ರ ಮಗ ಉರ್ವ ಉಲ್ಲೇಖಿಸಿದ್ದಾರೆ: ‘ಕುರ್‌ಆನ್, ವಾರೀಸು ನಿಯಮಗಳು, ವೈಜ್ಞಾನಿಕ, ಕವಿತೆ, ಕರ್ಮಶಾಸ್ತ್ರ ಹರಾಮ್, ಹಲಾಲ್, ವೈದ್ಯಕೀಯ ಹಾಗೂ ಅರೇಬಿಯಾದ ಪುರಾತನ ವೃತ್ತಾಂತಗಳ ಕುರಿತು ಆಯಿಶಾರಿಗಿಂತ ಅಧಿಕ ಜ್ಞಾನವಿರುವವರನ್ನು ನಾನು ನೋಡಿಲ್ಲ.’

ಲಬೀದ್‌ರ ಮಗ ಮಮಹಮೂದ್ ಹೇಳುತ್ತಾರೆ: ‘ಪ್ರವಾದಿ ಪತ್ನಿಯರೆಲ್ಲರೂ ಪ್ರವಾದಿ ವಚನಗಳನ್ನು ಕಂಠಪಾಠ ಮಾಡಿದ್ದರು. ಆದರೆ ಅವರು ಆಯಿಶಾ ಹಾಗೂ ಉಮ್ಮುಸಲ್ಮಾರ ಮಟ್ಟಕ್ಕೆ ತಲುಪಿರಲಿಲ್ಲ.

ಪ್ರವಾದಿ ಪತ್ನಿಯರಲ್ಲಿ ಆಯಿಶಾ(ರ)ರೊಬ್ಬರೇ ಎರಡು ಸಾವಿರದ ಇನ್ನೂರ ಹತ್ತು ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ಉಮ್ಮು ಸಲ್ಮಾರು ಹಲವಾರು ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ಸ್ತ್ರೀಯರು ಮಾತ್ರವಲ್ಲ, ಧಾರಾಳ ಪುರುಷರೂ ಅವರಿಂದ ಶಿಕ್ಷಣ ಪಡೆದಿದ್ದರು. ವೈಜ್ಞಾನಿಕ ರಂಗದಂತೆಯೇ ಇಸ್ಲಾಮೀ ಸಂದೇಶ ಪ್ರಚಾರ ರಂಗದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದರು. ಅದರಿಂದಾಗಿ ಪುರುಷರಂತೆಯೇ ಮಹಿಳೆಯರೂ ಕ್ರೂರ ಮರ್ದನಗಳಿಗೆ ಗುರಿಯಾಗಬೇಕಾಯಿತು. ಇಸ್ಲಾಮಿನ ಪ್ರಥಮ ಹುತಾತ್ಮತೆಯ ಪದವಿಯು ಸುಮಯ್ಯ ಎಂಬ ಮಹಿಳೆಗೆ ದೊರೆಯಿತು. ಜನ್ಮದೇಶದಲ್ಲಿ ಜೀವನ ದುಸ್ತರವಾದಾಗ ಪಲಾಯನ ಅನಿವಾರ್ಯವಾಗಿ ವಲಸೆ ಹೋದವರಲ್ಲಿ ಮಹಿಳೆಯರೂ ಇದ್ದರು. ಪ್ರವಾದಿಗಳ ಹಾಗೂ ಸಜ್ಜನರಾದ ಖಲೀಫರ ಕಾಲಗಳಲ್ಲಿ ಸಾಮಾಜಿಕ ರಂಗಗಳಿಂದ ಮಹಿಳೆಯರನ್ನು ದೂರವಿರಿಸಿರಲಿಲ್ಲ, ಯುದ್ಧ ರಂಗದಲ್ಲೂ ಮಹಿಳೆಯರು ಮಂಚೂಣಿಯಲ್ಲಿದ್ದರು. ಉಹುದ್ ಯುದ್ಧದಲ್ಲಿ ಸೈನಿಕರಿಗೆ ನೀರು ತಲುಪಿಸುವ, ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಕೆಲಸಕ್ಕೆ ಪ್ರವಾದಿ ಪತ್ನಿ ಆಯಿಶಾ(ರ) ನೇತೃತ್ವ ವಹಿಸಿದ್ದರು. ಉಮ್ಮು ಸುಲೈಮ್, ಉಮ್ಮು ಸಲೀತ್ ಈ ಸಾಹಸ ಕಾರ್ಯದಲ್ಲಿ ಭಾಗವಹಿಸಿದ್ದರು.

ಖೈಬರ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರಿಗೆ ಆಹಾರ ಸಿದ್ಧಪಡಿಸಿದ, ಗಾಯಾಳುಗಳಿಗೆ ಶುಶ್ರೂಷೆ ನೀಡಿದ ಮಹಿಳೆಯರಿಗೆ ಪ್ರವಾದಿವರ್ಯರು ಸಮರಾರ್ಜಿತ ಸೊತ್ತಿನ ಪಾಲನ್ನು ನೀಡಿದ್ದರು. ಉಹುದ್ ಯುದ್ಧದ ಗಾಯಾಳುಗಳನ್ನು, ಹುತಾತ್ಮರಾದವರನ್ನು ಮದೀನಾಕ್ಕೆ ತಲುಪಿಸುವ ಜವಾಬ್ದಾರಿಯನ್ನು ಮುಅವ್ವಿದ್ ರ ಪುತ್ರಿ ರುಬಯ್ಯ ಹಾಗೂ ಅವರ ಸಹಕಾರ್ಯಕರ್ತೆಯರು ನಿರ್ವಹಿಸಿದ್ದರು. ಉಮ್ಮು ಅತಿಯ್ಯ ಏಳು ಯುದ್ಧಗಳಲ್ಲಿ ಭಾಗವಹಿಸಿದರು. ಅನಸ್ ಇಬ್ನು ಮಾಲಿಕ್ ರ ತಾಯಿ ಉಮ್ಮು ಸುಲೈಮ್ ಪ್ರವಾದಿಯವರೊಂದಿಗೆ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದರು. ಕಂದಕ್ ಯುದ್ಧದ ಸಂದರ್ಭದಲ್ಲಿ ಮಹಿಳೆಯರನ್ನು, ಮಕ್ಕಳನ್ನು ಆಕ್ರಮಿಸಲು ಬಂದ ಶತ್ರು ಸೈನಿಕನನ್ನು ಸಫಿಯ್ಯ(ರ) ಚೂಪಾದ ಭರ್ಚಿಯಿಂದ ಕೊಂದಿದ್ದರು. ಉಹುದ್ ಯುದ್ಧದಲ್ಲಿ ಪ್ರವಾದಿಯವರ ಜೀವನ ರಕ್ಷಣೆಗಾಗಿ ಹೋರಾಡಿದವರಲ್ಲಿ ಉಮ್ಮು ಅಮ್ಮಾರ ಒಬ್ಬರು. ಅವರ ದೇಹದಲ್ಲಿ ಯುದ್ಧದಿಂದಾದ ಹಲವು ಗಾಯಗಳಿದ್ದವು. ಒಂದನೇ ಖಲೀಫ ಅಬೂಬಕರ್ ಸಿದ್ದೀಕ್‌ರ ಕಾಲದಲ್ಲಿ ನಡೆದ ಯಮಾಮ ಯುದ್ಧದಲ್ಲಿ ಭಾಗವಹಿಸಿದ ಅವರ ದೇಹದಲ್ಲಿ ಹನ್ನೆರಡು ಗಾಯಗಳಿದ್ದವು. ಹೀಗೆ ಇಸ್ಲಾಮೀ ಇತಿಹಾಸದ ಪುಟಗಳನ್ನು ತಿರುವಿದಾಗ ಧೈರ್ಯ, ಸ್ಥೈರ್ಯದಿಂದ ಹೋರಾಡಿದ ಅನೇಕ ಮಹಿಳೆಯರನ್ನು ಕಾಣಬಹುದು.

ಆಧುನಿಕ ಜಗತ್ತಿನಲ್ಲೂ ಮುಸ್ಲಿಮ್ ಮಹಿಳೆಯರು ಯುದ್ಧರಂಗದಲ್ಲಿ ಹೋರಾಡಿದ ಅಸಂಖ್ಯಾತ ಉದಾಹರಣೆಗಳಿವೆ. ರಝಾ ಶಾ ಪಹ್ಲವಿಯ ಸರ್ವಾಧಿಕಾರಿ ಆಡಳಿತದ ವಿರುದ್ಧ ಖುಮೈನಿ ನಡೆಸಿದ ಹೋರಾಟದಲ್ಲೂ ರಷ್ಯಾ ಆಕ್ರಮಣದ ವಿರುದ್ಧ ಅಫ್ಘಾನ್ ಜನತೆಯ ಹೋರಾಟದಲ್ಲೂ ಮಹಿಳೆಯರು ಧೀರೊದ್ಧಾತ್ತವಾದ ಸೇವೆಯನ್ನು ಅರ್ಪಿಸಿದರು. ಪಾಶ್ಚಾತ್ಯ ಮಾಧ್ಯಮಗಳು ಕೂಡಾ ಎತ್ತಿ ತೋರಿಸಬೇಕಾದ ರೀತಿಯಲ್ಲಿ ಮಹಿಳೆಯರು ಯುದ್ಧರಂಗದಲ್ಲಿ ಹೋರಾಡಿದ್ದಾರೆ.

ಮಹಿಳೆಯು ಮನೆಯಿಂದ ಹೊರಗಿಳಿದು ಉದ್ಯೋಗ ಮಾಡುವುದನ್ನು ಸಮಾಜ ಸೇವಾ ಚಟವಟಿಕೆಗಳಲ್ಲಿ ಭಾಗಿಯಾಗುವುದನ್ನು ಇಸ್ಲಾಮ್ ವಿರೋಧಿಸುವುದಿಲ್ಲವೆಂದು ಈ ಎಲ್ಲಾ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಎರಡನೇ ಖಲೀಫ ಉಮರುಲ್ ಫಾರುಕ್‌ರ ಆಡಳಿತ ಕಾಲದಲ್ಲಿ ವ್ಯಾಪಾರ ವಹಿವಾಟುಗಳ ಮೇಲ್ನೋಟದ ಹೊಣೆಗಾರಿಕೆಯನ್ನು ಶಿಫಾ ಬಿಂತ್ ಅಬ್ದುಲ್ಲಾ ಎಂಬ ಮಹಿಳೆಗೆ ವಹಿಸಿದ್ದರು.

ಸಮಕಾಲೀನ ಸಮೂಹದಲ್ಲೂ ಮುಸ್ಲಿಮ್ ಮಹಿಳೆಯರು ಇಸ್ಲಾಮೀ ಆಂದೋಲನದ ಚಟುವಟಿಕೆಗಳಂತೆಯೇ ಸಮಾಜ ಸೇವಾ ರಂಗಗಳಲ್ಲೂ ಸಾಮಾಜಿಕ ಕ್ಷೇತ್ರಗಳ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ವಿಜ್ಞಾನ-ತಂತ್ರಜ್ಞಾನ ರಂಗಗಳಲ್ಲೂ ಇರಾನೀ ಮಹಿಳೆಯರು ಅಭಿನಂದನಾರ್ಹ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲಿನ ಯುನಿವರ್ಸಿಟಿಗಳ ಪ್ರೊಫೆಸರ್‌ಗಳು ಹಾಗೂ ಇತರ ಉದ್ಯೋಗಿಗಳಲ್ಲಿ 40% ಮಹಿಳೆಯರಿದ್ದಾರೆ. ನರ್ಸರಿಯಿಂದ ಆರಂಭಿಸಿ, ಹೈಸ್ಕೂಲ್‌ನ ಕೊನೆಯ ವರ್ಷದವರೆಗಿನ ಶಿಕ್ಷಣವನ್ನು ಸಂಪೂರ್ಣವಾಗಿ ಮಹಿಳೆಯರೇ ವಹಿಸಿಕೊಂಡಿದ್ದಾರೆ. ಇರಾನ್‌ನ ಬಹುದೊಡ್ಡ ಸಂಖ್ಯೆಯ ಮಹಿಳೆಯರು ಸ್ವತಂತ್ರವಾಗಿ ವ್ಯಾಪಾರ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಖಾಸಗಿ ಹಾಗೂ ಸರಕಾರಿ ಕಛೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕಡಿಮೆಯಿಲ್ಲ, ಧಾರಾಳ ಮಹಿಳಾ ವಕೀಲೆಯರು, ವೈದ್ಯೆಯರು, ಇಂಜಿನಿಯ‌ರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಹಾಗೂ ಆರೋಗ್ಯ ರಂಗಗಳಲ್ಲಿ ಹನ್ನೊಂದು ಲಕ್ಷಕ್ಕಿಂತ ಅಧಿಕ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ರಂಗದಲ್ಲೂ ಅತ್ಯಧಿಕ ಪ್ರಾತಿನಿಧ್ಯವಿದೆ. ದೂರದರ್ಶನ ವಿಭಾಗದಲ್ಲಿ ಮೂವತ್ತೈದು ಶೇಕಡಾ ಸ್ತ್ರೀಯರಿದ್ದಾರೆ.

ಈಜಿಪ್ಟ್ ಸುಡಾನ್ ಮೊದಲಾದ ಮುಸ್ಲಿಮ್ ರಾಷ್ಟ್ರಗಳಲ್ಲೂ ಇಸ್ಲಾಮೀ ನಿಯಮಗಳನ್ನು ಪಾಲಿಸಿಕೊಂಡು ಲಕ್ಷಗಟ್ಟಲೆ ಸ್ತ್ರೀಯರು ಸಾಮಾಜಿಕ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರ್ಮಿಕ ವಿದ್ವಾಂಸರು, ಇಸ್ಲಾಮೀ ಸಂಘಟನೆಗಳು ಇದನ್ನು ವಿರೋಧಿಸದಿರುವುದು ಗಮನಿಸಬೇಕಾದ ಅಂಶವಾಗಿದೆ. ಹೀಗೆ ಸಾಮಾಜಿಕ ರಂಗಗಳಲ್ಲಿ ದುಡಿಯಲು ಅನುಮತಿ ನೀಡಿದರೂ, ಮಹಿಳೆಯರು ಮನೆ ಮತ್ತು ಮಕ್ಕಳ ಸಂರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂದು ಇಸ್ಲಾಮ್ ಒತ್ತಿ ಹೇಳುತ್ತದೆ. ಅದರ ನಿರ್ಲಕ್ಷ್ಯವು ಅಪಾಯಕಾರಿಯೂ ಹಾಗು ಹಲವಾರು ಆಘಾತಗಳಿಗೆ ಕಾರಣವೂ ಆಗುವುದೆಂಬ ಎಚ್ಚರಿಕೆಯನ್ನು ನೀಡುತ್ತದೆ. ಭಾವೀ ತಲೆಮಾರುಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದನ್ನು ಇಸ್ಲಾಮ್ ಕ್ಷುಲ್ಲಕ ಕಾರ್ಯವೆಂದು ಭಾವಿಸುವುದಿಲ್ಲ, ಅತ್ಯಂತ ಪ್ರಾಮುಖ್ಯದ ಕಾರ್ಯವೆಂದು ಪರಿಗಣಿಸುತ್ತದೆ. ಈ ಭೂಮಿಯಲ್ಲಿ ಅದೇ ಕಾರಣದಿಂದ ಮಾತೆಯೆಂಬ ಸ್ಥಾನಕ್ಕೆ ಅತ್ಯುನ್ನತ ಗೌರವವನ್ನು ನೀಡಲಾಗಿದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *