Home / ಪ್ರಶ್ನೋತ್ತರ / ಮುಹಮ್ಮದರು ಹಲವಾರು ಯುದ್ಧವನ್ನು ನಡೆಸಿಲ್ಲವೇ? ಇಸ್ಲಾಮಿನ ಧರ್ಮ ಪ್ರಚಾರದಲ್ಲಿ ಶಸ್ತ್ರಾಸ್ತ್ರ ಹೋರಾಟವು ಪ್ರಮುಖ ಪಾತ್ರ ವಹಿಸಿದೆಯಲ್ಲವೇ ?

ಮುಹಮ್ಮದರು ಹಲವಾರು ಯುದ್ಧವನ್ನು ನಡೆಸಿಲ್ಲವೇ? ಇಸ್ಲಾಮಿನ ಧರ್ಮ ಪ್ರಚಾರದಲ್ಲಿ ಶಸ್ತ್ರಾಸ್ತ್ರ ಹೋರಾಟವು ಪ್ರಮುಖ ಪಾತ್ರ ವಹಿಸಿದೆಯಲ್ಲವೇ ?

ಪ್ರವಾದಿ ಮುಹಮ್ಮದ್(ಸ)ರು ಪ್ರವಾದಿತ್ವದ ಬಳಿಕ ಸುದೀರ್ಘವಾದ 13 ವರ್ಷ ಮಕ್ಕಾದಲ್ಲಿ ಇಸ್ಲಾಮೀ ಪ್ರಚಾರ ನಡೆಸಿದರು. ಆ ಕಾಲದಲ್ಲಿ ವಿರೋಧಿಗಳು ಪ್ರವಾದಿಯವರನ್ನು ಹಾಗೂ ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿದರು. ಅಸಹನೀಯವಾದ ಬೈಗುಳ, ಊರಿನಿಂದ ಬಹಿಷ್ಕಾರ ನಡೆಯಿತು. ಆಗಲೂ ಪ್ರವಾದಿಯವರು ಅವರ ವಿರುದ್ಧ ಪ್ರತೀಕಾರಕ್ಕೆ ಪ್ರಯತ್ನಿಸಲಿಲ್ಲ, ಅನುಯಾಯಿಗಳು ಪ್ರತೀಕಾರವೆಸಗಲು ಅನುಮತಿ ಕೇಳಿದರೂ ಪ್ರವಾದಿವರ್ಯರು ಒಪ್ಪಲಿಲ್ಲ. ‘ಕೈಗಳನ್ನು ತಡೆದಿರಿಸಿ, ನಮಾಝ್ ನಿಷ್ಠೆಯಿಂದ ಪಾಲಿಸಿ, ಝಕಾತ್ ನೀಡಿ’ ಎಂಬುದು ಆಗ ದೇವಾಜ್ಞೆಯಾಗಿತ್ತು.

ಮಕ್ಕಾದಲ್ಲಿ ಬದುಕು ಅಸಹನೀಯವಾದಾಗ ಪ್ರವಾದಿ ಮತ್ತು ಅನುಯಾಯಿಗಳು ಮದೀನಾದಲ್ಲಿ ಅಭಯ ಪಡೆದರು. ಮದೀನಾದಲ್ಲಿ ಸ್ಥಾಪಿತವಾದ ಇಸ್ಲಾಮೀ ಸಮೂಹ ಹಾಗು ರಾಷ್ಟ್ರದ ವಿರುದ್ಧ ಶತ್ರುಗಳು ಆಕ್ರಮಗಳನ್ನು ಮುಂದುವರಿಸಿದರು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರಿಗೆ ಅದರ ವಿರುದ್ಧ ಹೋರಾಡುವ ಅನುಮತಿ ಲಭಿಸಿತು. ಅಲ್ಲಾಹನು ಹೇಳಿದನು: ‘ನಿಶ್ಚಯವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ಪರವಾಗಿ ರಕ್ಷಣೆ ಮಾಡುತ್ತಾನೆ. ಅಲ್ಲಾಹನು ಯಾವುದೇ ವಿಶ್ವಾಸಘಾತುಕ ಕೃತಘ್ನನನ್ನು ಮೆಚ್ಚುವುದಿಲ್ಲ. ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರು ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಅವರಿಗೆ ಸಹಾಯ ಮಾಡಲು ಸಮರ್ಥನು. ‘ನಮ್ಮ ಪ್ರಭು ಅಲ್ಲಾಹ್’ ಎಂದಿಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಅನ್ಯಾಯವಾಗಿ ಹೊರಹಾಕಲ್ಪಟ್ಟವರು. ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನೀಗಿಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳು, ಇಗರ್ಜಿಗಳು, ಯಹೂದಿಯರ ಆರಾಧನಾಲಯಗಳು, ಮಸೀದಿಗಳು ಧ್ವಂಸಗೊಳ್ಳುತ್ತಿದ್ದವು. ಯಾರು ಅಲ್ಲಾಹನಿಗೆ ಸಹಾಯ ಮಾಡುವರೋ ಅವರಿಗೆ ಅವನು ಖಂಡಿತ ಸಹಾಯ ಮಾಡುವನು. ಅಲ್ಲಾಹನು ಮಹಾ ಶಕ್ತಿವಂತನೂ ಪ್ರಬಲನೂ ಆಗಿರುತ್ತಾನೆ.’ (ಪವಿತ್ರ ಕುರ್ ಆನ್ 22:38-40)

ಎಲ್ಲಾ ಧರ್ಮೀಯರ ಆರಾಧನಾ ಸ್ವಾತಂತ್ರ್ಯವನ್ನು ಸಂರಕ್ಷಿಸಲು ಇಸ್ಲಾಮ್ ಯುದ್ಧಕ್ಕೆ ಅನುಮತಿ ನೀಡಿದೆಯೆಂದು ಈ ಕುರ್ ಆನ್ ವಚನವು ಸಂದೇಹಾತೀತವಾಗಿ ಸ್ಪಷ್ಟಪಡಿಸುತ್ತದೆ. ಅತಿಕ್ರಮವೆಸಗದವರ ಮೇಲೆ ಆಕ್ರಮಣವೆಸಗಲು ಇಸ್ಲಾಮ್ ಅನುಮತಿ ನೀಡುವುದಿಲ್ಲ. ಎಂತಹ ಸಂದರ್ಭಗಳಲ್ಲಿ ಯುದ್ಧಕ್ಕೆ ಅನುಮತಿಯನ್ನೂ ಆದೇಶಗಳನ್ನೂ ನೀಡಲಾಯಿತೆಂದು ಸ್ಪಷ್ಟಪಡಿಸುವ ಹಲವಾರು ಕುರ್ ಆನ್ ವಚನಗಳಿವೆ. ಕೆಲವನ್ನು ಇಲ್ಲಿ ವಿವರಿಸುತ್ತೇನೆ.

‘ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ, ಆದರೆ ಅತಿಕ್ರಮಿಸಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ. ಅವರೊಡನೆ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗಲೆಲ್ಲ ಹೋರಾಟ ನಡೆಸಿರಿ ಮತ್ತು ಅವರು ನಿಮ್ಮನ್ನು ಹೊರಕ್ಕಟ್ಟಿದಲ್ಲಿಂದ ನೀವು ಅವರನ್ನು ಹೊರಕಟ್ಟಿರಿ ಏಕೆಂದರೆ ಹತ್ಯೆಯು ಕೆಟ್ಟದಾಗಿದ್ದರೂ ಕೋಭೆಯು (ಪಿತ್ನ) ಅದಕ್ಕಿಂತಲೂ ಕೆಟ್ಟದಾಗಿದೆ. ಅವರು ‘ಮಸ್ಜಿದುಲ್ ಹರಾಮ್ ‘ನ ಬಳಿ ನಿಮ್ಮೊಡನೆ ಹೋರಾಡದಿದ್ದರೆ ನೀವು ಹೋರಾಡಬೇಡಿರಿ, ಆದರೆ ಅಲ್ಲಿಯೂ ಅವರು ನಿಮ್ಮೊಡನೆ ಹೋರಾಡಿದರೆ, ನೀವು ಅವರನ್ನು ನಿರ್ದಾಕ್ಷಿಣ್ಯವಾಗಿ ವಧಿಸಿರಿ. ಇಂತಹ ಸತ್ಯನಿಷೇಧಿಗಳಿಗೆ ಇದೇ ಪ್ರತಿಫಲ, ಅನಂತರ ಅವರು ಹಿಂಜರಿದರೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆಂಬುದನ್ನು ನೀವು ಅರಿತಿರಬೇಕು. ಶೋಭೆಯು ಸಂಪುರ್ಣ ಅಳಿದು ಹೋಗುವವರೆಗೂ ಧರ್ಮವು ಪರಿಪೂರ್ಣವಾಗಿ ಅಲ್ಲಾಹನಿಗೇ ಆಗುವವರೆಗೂ ನೀವು ಅವರ ವಿರುದ್ಧ ಹೋರಾಡಿರಿ ಅನಂತರ ಅವರು ಹಿಮ್ಮೆಟ್ಟಿದರೆ ಆಕ್ರಮಿಗಳ ವಿನಾ ಇನ್ನಾರ ಮೇಲೂ ಕೈಯೆತ್ತಬಾರದೆಂಬುದನ್ನು ನೀವು ತಿಳಿದಿರಬೇಕು.’ (ಪವಿತ್ರ ಕುರ್ ಆನ್ 5:2)

‘ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವ ಭಯಕ್ಕೆ ಹೆಚ್ಚು ಅನುಗುಣವಾಗಿರುತ್ತದೆ. ಅಲ್ಲಾಹನನ್ನು ಭಯಪಟ್ಟು ವರ್ತಿಸಿರಿ. ನೀವು ಮಾಡುತ್ತಿರುವುದನ್ನೆಲ್ಲ ಅಲ್ಲಾಹನು ಚೆನ್ನಾಗಿ ಅರಿಯುವನಾಗಿದ್ದಾನೆ.’ (ಪವಿತ್ರ ಕುರ್ ಆನ್ 5:8)

ನಿಮ್ಮೊಡನೆ ಯುದ್ಧಕ್ಕೆ ಸಿದ್ಧರಾಗದವರೊಡನೆ ಸ್ವೀಕರಿಸಬೇಕಾದ ನಿಲುವಿನ ಕುರಿತು ಪವಿತ್ರ ಕುರ್ ಆನ್ ಬಹಳ ಸ್ಪಷ್ಟವಾಗಿ ವಿವರಿಸಿದೆ: ‘ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗು ನಿಮ್ಮನ್ನು ನಿಮ್ಮ ಮನೆಯಿಂದ ಹೊರಹಾಕಿರದವರೊಂದಿಗೆ ಸೌಜನ್ಯ ಹಾಗೂ ನ್ಯಾಯದಿಂದ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಅಲ್ಲಾಹನು ನ್ಯಾಯಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ. ನೀವು ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿರುವ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕಿರುವ ಮತ್ತು ನಿಮ್ಮನ್ನು ಹೊರಹಾಕುವ ವಿಷಯದಲ್ಲಿ ಪರಸ್ಪರ ಸಹಕರಿಸಿರುವ ಜನರೊಂದಿಗೆ ಸ್ನೇಹ ಬೆಳೆಸುವುದರಿಂದ ಮಾತ್ರ ಅಲ್ಲಾಹನು ನಿಮ್ಮನ್ನು ತಡೆಯುತ್ತಾನೆ. ಅವರೊಂದಿಗೆ ಸ್ನೇಹ ಬೆಳೆಸುವವರೇ ಅಕ್ರಮಿಗಳು.’ (60:8-9)

ಪವಿತ್ರ ಕುರ್ ಆನಿನ ಆಜ್ಞೆಗಳಂತೆ ಕಾರ್ಯನಿರತರಾದ ಪ್ರವಾದಿವರ್ಯರು ಇಸ್ಲಾಮ್ ಮತ್ತು ಮುಸ್ಲಿಮರನ್ನು ಆಕ್ರಮಿಸಿದವರೊಂದಿಗೆ ಮತ್ತು ತಮ್ಮೊಡನೆ ಯುದ್ಧ ಮಾಡಿದವರೊಂದಿಗೆ ಮಾತ್ರ ಹೋರಾಡಿದ್ದಾರೆ. ಪ್ರವಾದಿಯವರ ಕಾಲದಲ್ಲಿ ಸುಮಾರು ಎಪ್ಪತ್ತೊಂದು ಹೋರಾಟಗಳು ನಡೆದಿವೆ. ಅದರಲ್ಲಿ 27ರಲ್ಲಿ ಪ್ರವಾದಿಯವರು ಸ್ವತಃ ಹೋರಾಟ ನಡೆಸಿದ್ದಾರೆ. ಉಳಿದ 54ರಲ್ಲಿ ಅನುಯಾಯಿ ತಂಡಗಳು ಹೋರಾಟ ನಡೆಸಿತ್ತು. ಒಟ್ಟು 81 ಯುದ್ಧಗಳಿಂದ 1018 ಜನರು ಸಾವನ್ನಪ್ಪಿದ್ದರು. 259 ಮುಸ್ಲಿಮರು ಮತ್ತು 759 ಶತ್ರುಗಳ ಅಂತ್ಯವಾಗಿತ್ತು. ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಯುದ್ಧವನ್ನು ನಡೆಸಿದ ಪ್ರವಾದಿಯವರು ಸಾಮೂಹಿಕ ಹತ್ಯಾಕಾಂಡಕ್ಕೆ ಶ್ರಮಿಸಲಿಲ್ಲವೆಂಬುದು ಈ ಅಂಕಿ ಅಂಶದಿಂದ ಸ್ಪಷ್ಟವಾಗುತ್ತದೆ.

ಮರ್ದಿತರ ಬಿಡುಗಡೆಗಾಗಿ ಮರ್ದಕರೊಂದಿಗೆ ಹೋರಾಡಬೇಕೆಂದು ಇಸ್ಲಾಮ್ ತನ್ನ ಅನುಯಾಯಿಗಳಿಗೆ ಆದೇಶಸಿದೆ: “ಓ, ನಮ್ಮ ಪ್ರಭು, ಅಕ್ರಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರತೆಗೆ, ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು’ ಎಂದು ಮೊರೆಯಿಡುತ್ತಿರುವ ಮರ್ದನಕ್ಕೊಳಗಾದ ಪುರುಷರು-ಸ್ತ್ರೀಯರು ಮತ್ತು ಮಕ್ಕಳಿಗಾಗಿ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು?’ (ಪವಿತ್ರ ಕುರ್ ಆನ್ 4:75)

ಈ ಆದೇಶದಿಂದ ಮುಸ್ಲಿಮರು ರೋಮ್ -ಪರ್ಶಿಯಾ ಸಾಮ್ರಾಜ್ಯಗಳಲ್ಲಿ ಬಂಧಿತರಾಗಿ ಗುಲಾಮರಾಗಿ ನರಕಯಾತನೆ ಅನುಭವಿಸಿದ ವ್ಯಕ್ತಿಗಳ ಬಿಡುಗಡೆಗಾಗಿ ಪ್ರಯತ್ನಿಸಿದರು. ಇದರಿಂದ ಆ ಬೃಹತ್ ಸಾಮ್ರಾಜ್ಯ ಶಕ್ತಿಗಳು ಇಸ್ಲಾಮ್‌ನೊಂದಿಗೆ ಸಂಘರ್ಷ ನಡೆಸಿತು. ಅವುಗಳು ಪರಾಜಯಗೊಂಡು ನೆಲಕ್ಕಪ್ಪಳಿಸಿದಾಗ ವಸಾಹತುಶಾಹಿಗಳಾಗಿದ್ದ ಇರಾನ್, ಇರಾಕ್, ಸಿರಿಯ, ಜೋರ್ಡಾನ್, ಫೆಲೆಸ್ತೀನ್, ಈಜಿಪ್ಟ್ ನಂತಹ ದೇಶಗಳು ಸ್ವತಂತ್ರಗೊಂಡು, ಇಸ್ಲಾಮೀ ಸಾಮ್ರಾಜ್ಯದ ಭಾಗಗಳಾದವು. ರೋಮ್ ಮತ್ತು ಪರ್ಶಿಯನ್ ಸಾಮ್ರಾಜ್ಯಗಳಿಂದ ರೋಸಿ ಹೋಗಿದ್ದ ಆ ರಾಷ್ಟ್ರಗಳ ಜನರು ಮುಸ್ಲಿಮರ ಆಗಮನವನ್ನು ಸಂತೋಷದಿಂದ ಸ್ವಾಗತಿಸಿದರು. ಹೀಗೆ ಇಸ್ಲಾಮಿಗೆ ರಾಷ್ಟ್ರದ ಭಾಗವಾದ ಅಲ್ಲಿನ ನಿವಾಸಿಗಗಳನ್ನು ಧರ್ಮ ಬದಲಾಯಿಸಲು ಮುಸ್ಲಿಮರು ನಿರ್ಬಂಧಿಸಲಿಲ್ಲ. ಅದಕ್ಕೆ ಇಸ್ಲಾಮ್ ಅನುಮತಿಯನ್ನು ನೀಡುವುದಿಲ್ಲ.

ಇಸ್ಲಾಮಿನಿಂದ ಆಕರ್ಷಿತರಾಗಿ ತಮ್ಮಿಚ್ಛೆಯಿಂದ ಇಸ್ಲಾಮ್ ಸ್ವೀಕರಿಸಲು ಸಿದ್ಧರಾಗಿದ್ದವರು ಮುಸ್ಲಿಮರಾದರು. ಉಳಿದವರು ಪೂರ್ವ ಧರ್ಮದಲ್ಲೇ ಮುಂದುವರಿದರು. ಆದ್ದರಿಂದಲೇ ಇಸ್ಲಾಮಿನ ಪ್ರಚಾರ ಆಯುಧ ಬಲದಿಂದ ಆಗಿಲ್ಲ. ನಿಷ್ಪಕ್ಷಪಾತಿಗಳಾದ ಇತಿಹಾಸಕಾರರು ಇದನ್ನು ಸ್ಪಷ್ಟಪಡಿಸಿದ್ದಾರೆ. ಇಸ್ಲಾಮ್ ಖಡ್ಗದಿಂದ ಪ್ರಚಾರವಾಗಿದೆಯೆಂಬ ಸುಳ್ಳಾರೋಪವನ್ನು ಖಂಡಿಸಿ ಸರ್ ಥಾಮಸ್ ಆರ್ನಲ್ಡ್ ಒಂದು ಬೃಹತ್ ಗ್ರಂಥವನ್ನು ರಚಿಸಿದ್ದರು. ಅವರ ‘ಇಸ್ಲಾಮ್: ಸಂದೇಶ ಮತ್ತು ಪ್ರಸಾರ’ ಎಂಬ ಕೃತಿಯು ವಿವಿಧ ರಾಷ್ಟ್ರಗಳಲ್ಲಿ ಇಸ್ಲಾಮೀ ಪ್ರಚಾರದ ಸಂಧರ್ಭವನ್ನು ವಿವರವಾಗಿ ತಿಳಿಸಿ, ಪಾಶ್ಚಾತ್ಯರ ಆರೋಪಗಳು ಆಧಾರ ರಹಿತವೆಂದು ಸಮರ್ಥಿಸುತ್ತದೆ.

ಮಧ್ಯ ಪೌರ್ವಾತ್ಯ ದೇಶಗಳ ಇಸ್ಲಾಮ್ ಧರ್ಮದ ಪ್ರಚಾರವನ್ನು ವಿವರಿಸುತ್ತಾ ಆರ್ನಲ್ಡ್ ಬರೆಯುತ್ತಾರೆ: ‘ಮೇಲೆ ತಿಳಿಸಲಾದ ವಿವರಣೆಗಳಿಂದ ಕ್ರೈಸ್ತ ಗೋತ್ರಗಳು ತಮ್ಮಿಚ್ಛೆಯಂತೆ ಇಸ್ಲಾಮ್ ಸ್ವೀಕರಿಸಿವೆ ಎಂದು ನಾವು ಊಹಿಸಬಹುದು. ವಿಜಯಿಗಳಾದ ಮುಸ್ಲಿಮರು ಹಾಗೂ ಮುಂದಿನ ತಲೆಮಾರಿನ ಮುಸ್ಲಿಮರು ಅವರೊಂದಿಗೆ ತೋರಿದ ಸಹಿಷ್ಣತೆಯು ಇದಕ್ಕೆ ಪ್ರೇರೇಪಿಸಿತು. ಮಹಮ್ಮದೀಯರ ನಡುವೆ ಈಗಲೂ ಬದುಕುತ್ತಿರುವ ಕ್ರೈಸ್ತ ಅರಬರು ಸಹಿಷ್ಣತೆಯ ಜೀವಂತ ಸಾಕ್ಷಿಗಳಾಗಿದ್ದಾರೆ.’ (ಪುಟ 64) ಅವರು ಮುಂದುವರಿಯುತ್ತಾರೆ: ‘ಮುಸ್ಲಿಮರ ಆಡಳಿತದ ಪ್ರಾರಂಭ ಕಾಲದಲ್ಲಿ ಅವರು ಕ್ರೈಸ್ತರೊಂದಿಗೆ ತೋರಿದ ಸಹಿಷ್ಣುತೆಯ ಆಧಾರದಲ್ಲಿ ಇಸ್ಲಾಮ್‌ ಪ್ರಚಾರ ಖಡ್ಗದಿಂದ ನಡೆಯಿತು ಎಂಬ ವಾದವು ಸರಿಯೆನಿಸುವುದಿಲ್ಲ.’ (ಪುಟ:83)

ಭಾರತದ ಇಸ್ಲಾಮ್ ಧರ್ಮದ ಪ್ರಚಾರದ ಕುರಿತು ಡಾ|| ಈಶ್ವರಿ ಪ್ರಸಾದ್ ಹೇಳುತ್ತಾರೆ: ಉದ್ಯೋಗ ಭಡ್ತಿ ಹಾಗೂ ಪ್ಯೂಡಲ್ ಸ್ಥಾನಮಾನಗಳಿಗಾಗಿ ಹಾತೊರೆಯುತ್ತಿದ್ದವರಲ್ಲಿ ಹಲವರು ಇಸ್ಲಾಮ್ ಸ್ವೀಕರಿಸಿದರು. ಅವರಲ್ಲಿ ಕೆಳಜಾತಿಯ ವ್ಯಕ್ತಿಗಳೇ ಅಧಿಕವಾಗಿದ್ದರು. ಇದಕ್ಕೆ ಮುಖ್ಯವಾಗಿ ಹಿಂದೂ ಧರ್ಮದಲ್ಲಿದ್ದ ಅತಿಕ್ರೂರವಾದ ಜಾತಿ ವ್ಯವಸ್ಥೆ ಕಾರಣವಾಗಿತ್ತು. ಅವರಿಗೆ ಮೃಗಕ್ಕಿಂತಲೂ ಕೆಳಗಿನ ಸ್ಥಾನವನ್ನು ನೀಡಲಾಗಿತ್ತು. ಇಸ್ಲಾಮ್ ಧರ್ಮವು ಸಮಾನತೆಯನ್ನು ಪ್ರತಿಪಾದಿಸುವುದು ಕಾರಣವಾಗಿತ್ತು.’ (Ram Gopal Indian Muslims A Political History P-2)

ಡಾ|| ರಾಯ್ ಚೌಧರಿ ಬರೆಯುತ್ತಾರೆ: ‘ಬಂಗಾಳದ ದಮನಿಸಲ್ಪಟ್ಟ ಕೆಳವರ್ಗದ ಜನರಿಗೆ ಇಸ್ಲಾಮ್ ಸಾಂತ್ವನವಾಗಿತ್ತು. ಸವರ್ಣೀಯರ ದೌರ್ಜನ್ಯಗಳಿಗೆ ಕೊನೆಯಾಯಿತೆಂದು ಅವರಿಗೆ ಭಾಸವಾಯಿತು.’ (ಡಾ|| ರಾಯ್ ಚೌಧರಿ, ಹಿಸ್ಟರಿ ಆಫ್ ಮುಸ್ಲಿಮ್ ರೂಲ್ ಪ್ರಸ್ತಾವನೆ-14 ಚರಿತ್ರೆವಾದಗಳು ಪುಟ 344)

ದೀರ್ಘಕಾಲ ಬಂಗಾಳದ ಸಿವಿಲ್ ಸರ್ವಿಸ್‌ ನಲ್ಲಿದ್ದ ಸರ್ ಹೆನ್ರಿಕೋಟನ್ India and Home Affairs ಎಂಬ ಗ್ರಂಥದಲ್ಲಿ ಬರೆಯುತ್ತಾರೆ. ‘ಬಂಗಾಳದ ಮುಸ್ಲಿಮರು ಕೆಳವರ್ಗದ ಹಿಂದುಗಳ ಸಂತಾನವಾಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಅವರ ಹಿರಿಯರು ಮತಾಂತರಗೊಂಡಿದ್ದರು.’ (ಉದ್ದರಣೆ: Ibid ಪುಟ:335)

ಹರ್ಬನ್ಸ್ ಮುಖಿಯ ಬರೆಯುತ್ತಾರೆ: ‘ಮತಾಂತರ ನಡೆದ ವಿಷಯವನ್ನು ಯಾರೂ ನಿರಾಕರಿಸುವುದಿಲ್ಲ. ಹೆಚ್ಚಿನ ಜನರು ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದರು. ಜನರ ನಡುವೆಯೇ ಬೆರೆತು, ಅವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸಿದ ಸೂಫಿಗಳ ಪ್ರಭಾವದಿಂದ ಇದು ಸಾಧ್ಯವಾಗಿದೆ.’ (ಕೋಮುವಾದ ಮತ್ತು ಪ್ರಾಚೀನ ಭಾರತದ ಇತಿಹಾಸ ರಚನೆ, ಪುಟ-48)

ಗಾಂಧೀಜಿ ಬರೆಯುತ್ತಾರೆ: ‘ಇಂದು ಮಾನವ ಸಮೂಹದ ಹೃದಯದಲ್ಲಿ ಆಧಿಪತ್ಯ ಸಾಧಿಸಿದ ಓರ್ವರ ಜೀವನದ ಅತ್ಯುತ್ತಮ ಗುಣಗಳನ್ನು ತಿಳಿಯಲು ನಾನು ಪ್ರಯತ್ನಿಸಿದೆ. ಆ ಕಾಲದಲ್ಲಿ ಇಸ್ಲಾಮ್ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ‘ಖಡ್ಗ’ ಕಾರಣವಲ್ಲವೆಂದು ಮನದಟ್ಟಾಯಿತು. ಪೈಗಂಬರರ ಮಾದರಿ, ಸರಳತೆ, ಉದಾತ್ತವಾದ ಆತ್ಮ ಸ್ಥೈರ್ಯ, ಕರಾರು ಪಾಲನೆ, ಕುಟುಂಬಿಕರು ಹಾಗೂ ಅನುಯಾಯಿಗಳೊಂದಿನ ಸಮರ್ಪಣಾಭಾವ, ನಿರ್ಭಯತೆ, ದೇವನಲ್ಲೂ ತನ್ನ ಹೊಣೆಗಾರಿಕೆಯಲ್ಲಿಯೂ ದೃಢವಿಶ್ವಾಸ ಕಾರಣವಾಗಿತ್ತೇ ವಿನಾ ಖಡ್ಗವಲ್ಲ. ಅವರ ಮುನ್ನಡೆಗೆ ಹಾಗೂ ಅವರ ಗುರಿಯೆಡಗಿನ ಹಾದಿಯಲ್ಲಿರುವ ಅಡೆತಡೆಗಳನ್ನು ಆ ಗುಣಗಳೇ ನಿವಾರಿಸಿತು.’ (ಯಂಗ್ ಇಂಡಿಯಾ 16-9-1924)

ಪಾಶ್ಚಾತ್ಯ ಗ್ರಂಥಕರ್ತ ಮಿಸ್ಟರ್ ರಾಬರ್ಟ್ ಸೇನ್ ಬರೆಯುತ್ತಾರೆ, ‘ತಮ್ಮ ಧರ್ಮದಲ್ಲಿ ಆವೇಶ ಹಾಗೂ ಇತರ ಧರ್ಮಗಳೊಂದಿಗೆ ಸಹಿಷ್ಣುತೆಯ ಚೈತನ್ಯವನ್ನು ಉಳಿಸಿಕೊಳ್ಳಲು ಮುಸ್ಲಿಮರಿಗೆ ಮಾತ್ರ ಸಾಧ್ಯವಾಯಿತು. ಅವರು ಖಡ್ಗವೆತ್ತುವುದರೊಂದಿಗೇ ಇಸ್ಲಾಮಿನಲ್ಲಿ ಆಸಕ್ತಿಯಿಲ್ಲದವರಿಗೆ ಅವರದೇ ಧರ್ಮದಲ್ಲಿ ಉಳಿಯುವ ಅನುಮತಿ ನೀಡಿದರು.’ (Civilization of Arab ಉದ್ದರಣೆ: ಇಸ್ಲಾಮ್ ಮತ ಸಹಿಷ್ಣುತೆ, ಪುಟ-168)

ಪ್ರವಾದಿವರ್ಯರು ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ವಿರುದ್ಧ ಅಕ್ರಮ, ಅನ್ಯಾಯವೆಸಗಿದವರ ವಿರುದ್ಧ ಹಾಗೂ ಅನೀತಿಯನ್ನು ಕೊನೆಗೊಳಿಸುವ ಉದ್ದೇಶದಿಂದ ಮಾತ್ರ ಯುದ್ಧದಲ್ಲಿ ಭಾಗವಹಿಸಿದರೆಂದೂ, ಖಡ್ಗದಿಂದ ಇಸ್ಲಾಮ್ ಪ್ರಸಾರವಾಯಿತೆಂಬುದು ಮಿಥ್ಯಾರೋಪ ಮಾತ್ರವೆಂದೂ ನಿಷ್ಪಕ್ಷಪಾತವಾಗಿ ಅಧ್ಯಯನ ನಡೆಸುವವರಿಗೆ ಖಂಡಿತ ತಿಳಿದು ಬರುತ್ತದೆ ಎಂಬುದು ವಾಸ್ತವ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *