Home / ಪ್ರಶ್ನೋತ್ತರ / ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.?

ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.?

ಮಾನವ ಜಗತ್ತಿನ ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಪಾತ್ರ ಹೇಳಬೇಕಾದ ಅಗತ್ಯವಿಲ್ಲದಷ್ಟು ಸ್ಪಷ್ಟವೂ, ವಿವಾದಾತೀತವೂ ಆಗಿದೆ. ಗಾಢ ನಿದ್ರೆಯಲ್ಲಿದ್ದ ಅರೇಬಿಯನ್ ಜನತೆಯನ್ನು ಇಸ್ಲಾಮ್ ಬಡಿದೆಬ್ಬಿಸಿತು. ಅವರ ಅಜ್ಞಾನ, ಅಂಧ ವಿಶ್ವಾಸವನ್ನು ಹೋಗಲಾಡಿಸಿತು. ಜೀವನದ ಎಲ್ಲಾ ರಂಗಗಳಲ್ಲೂ ಅವರ ಉನ್ನತಿಗೆ ಹಾಗೂ ಮುನ್ನಡೆಗೆ ಕಾರಣವಾಯಿತು. ಹೀಗೆ ಅವರು ವಿಶ್ವದ ನಾಯಕತ್ವ ಸ್ಥಾನಕ್ಕೆ ತಲುಪಿಸಿದರು. ಸತ್ಯ, ನ್ಯಾಯ, ಸಮಾನತೆ, ಸಹೋದರತೆ, ಸಹಿಷ್ಣುತೆ ಹಾಗೂ ಧಾರ್ಮಿಕ ಮೌಲ್ಯಗಳಲ್ಲಿ ಮಾತ್ರವಲ್ಲ ಕಲೆ, ಸಾಹಿತ್ಯ, ತಂತ್ರಜ್ಞಾನ, ಶಿಕ್ಷಣ, ವೈಜ್ಞಾನಿಕ, ನಾಗರಿಕ, ಆಡಳಿತ ನಿರ್ವಹಣೆಯಂತಹ ಎಲ್ಲಾ ರಂಗಗಳಲ್ಲೂ ಸುದೀರ್ಘ ಕಾಲದವರೆಗೆ ಮುಸ್ಲಿಮರು ಜಗತ್ತಿಗೆ ನೇತೃತ್ವವನ್ನು ವಹಿಸಿದರು. ಇಂದು ಆ ಸ್ಥಾನದಲ್ಲಿ ಪಾಶ್ಚಾತ್ಯರಿದ್ದಾರಲ್ಲವೇ? ಅದಕ್ಕೆ ಅವರನ್ನು ಸಜ್ಜುಗೊಳಿಸಿದ್ದಲ್ಲದೆ ಪಾಶ್ಚಾತ್ಯ ನಾಗರಿತೆಗೆ ತೊಟ್ಟಿಲನ್ನು ಒದಗಿಸಿ ಕೊಟ್ಟವರು ಇಸ್ಲಾಮ್ ಮತ್ತು ಮುಸ್ಲಿಮರೇ ಆಗಿದ್ದಾರೆ. ನಿಷಕ್ಷಪಾತಿಗಳಾದ ಇತಿಹಾಸಕಾರರು ಈ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ರಾಬರ್ಟ್ ಬ್ರಿಪೋರ್ಟ್‌ ಬರೆಯುತ್ತಾರೆ: ’15 ನೇ ಶತಮಾನದಲ್ಲಿ ಅರಳಿದ ಅರಬ್-ಮೋರಿಶ್ ನಡುವಿನ ನಾಗರೀಕತೆಯ ಕಂಪು ನವನಾಗರಿಕತೆಗೆ ನಾಂದಿ ಹಾಡಿತು. ಸ್ಪೇನ್ ಯೂರೋಪ್‌ಗೆ ಪುನರ್ಜನ್ಮನೀಡಿದ ದೇಶವಾಗಿತ್ತು. ಸಾರಸ್ವತ ಸಾಮ್ರಾಜ್ಯದ ನಗರಗಳಾದ ಕೈರೋ, ಕಾರ್ಡೋವಾ, ಬಗ್ದಾದ್, ಟೋಲಿಡೋಗಳು ಸಾಂಸ್ಕೃತಿಕ ಹಾಗೂ ವೈಚಾರಿಕತೆಯ ಕೇಂದ್ರಗಳಾಗಿ ಬೆಳೆದಾಗ, ಅನಾಗರಿಕತೆಯಲ್ಲಿ ಮುಳುಗಿದ ಯೂರೋಪ್ ಅಜ್ಞಾಂಧಕಾರದಲ್ಲಿ ಅಧಃಪತನಗೊಂಡಿತು. ಮಾನವ ಜೀವನಕ್ಕೆ ಹೊಸ ದಿಕ್ಕು ನೀಡಲು ಆ ನಗರದ ನಿವಾಸಿಗಳಿಗೆ ಸಾಧ್ಯವಾಯಿತು. ಹೀಗೆ ನಾಗರೀಕತೆಯು ಬೆಳೆದು ಇತರೆಡೆಗೂ ತನ್ನ ಕಂಪನ್ನು ಬೀರಲು ಆರಂಭಿಸಿತು.

ಅರಬರಿಲ್ಲದಿರುತ್ತಿದ್ದರೆ ಆಧುನಿಕ ಯೂರೋಪ್ ರೂಪುಗೊಳ್ಳುತ್ತಿರಲಿಲ್ಲವೆಂಬ ಸತ್ಯವನ್ನು ನಂಬಲೇಬೇಕು. ಪರಿಣಾಮದ ದೃಷ್ಟಿಯಿಂದ ಪ್ರಾಚೀನ ದಶಕಗಳನ್ನು ಮುಚ್ಚಿ ಹಾಕುವ ಸ್ವಭಾವ ಗುಣಗಳನ್ನು ಮುಸ್ಲಿಮರ ಅಭಾವದಲ್ಲಿ ಗಳಿಸಲು ಅವರಿಗೆ ಸಾಧ್ಯವಿಲ್ಲ. ಯುರೋಪಿನ ಬೆಳವಣಿಗೆಯ ಸಣ್ಣ ಹಂತದಲ್ಲಿ ಕೂಡಾ ಇಸ್ಲಾಮ್‌ ನ ಪ್ರಭಾವ ಕಾಣದಿರಲು ಸಾಧ್ಯವಿಲ್ಲ,’ (The making of Humanity, page 183-190)

ಯೂರೋಪ್ ಇಂದು ಅನುಭವಿಸುತ್ತಿರುವ ಸುಖ ಸೌಕರ್ಯಗಳಿಗೆಲ್ಲಾ ಅದು ಇಸ್ಲಾಮ್ ಮತ್ತು ಮುಸ್ಲಿಮರೊಂದಿಗೆ ಋಣಭಾರ ಇರಿಸಬೇಕಾಗಿದೆಯೆಂದು ಪ್ರಸಿದ್ಧ ಇತಿಹಾಸಕಾರರಾದ ಜಾನ್ ವಿಲಿಯಂ ತನ್ನ Intellectual Development of Europe ಎಂಬ ಗ್ರಂಥದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ. ‘ವೈಜ್ಞಾನಿಕ ರಂಗದಲ್ಲಿ ಮುಸ್ಲಿಮರು ಆರಂಭಿಸಿದ ಯಾವುದನ್ನೂ ನಮಗೆ ಪೂರ್ತಿಗೊಳಿಸಬೇಕಾಗಿ ಬರಲಿಲ್ಲ’ ಎಂದು ಎಚ್.ಜಿ.ವೆಲ್ಸ್ ಎಂಬವರು ತನ್ನ ‘ವಿಶ್ವ ಚರಿತ್ರೆಯ ಸಂಗ್ರಹ’ ಎಂಬ ಗ್ರಂಥದಲ್ಲಿ ಬಹಿರಂಗಪಡಿಸಿದ್ದಾರೆ. ಪಂಡಿತ್ ಜವಾಹರಲಾಲ್ ನೆಹರೂ ತನ್ನ Glimpses of World History ಯಲ್ಲಿ ಬರೆಯುತ್ತಾರೆ: ‘ಪ್ರಾಚೀನ ಕಾಲವನ್ನು ಗಮನಿಸುವಾಗ ಈಜಿಪ್ಟ್, ಭಾರತ ಅಥವಾ ಚೀನಾದಲ್ಲೂ ಸೂಕ್ತ ಸಾಂಸ್ಕೃತಿಕ ಪರಂಪರೆ ನಾವು ಕಾಣುವುದಿಲ್ಲ, ಅದರ ಸಣ್ಣ ಕುರುಹು ಪುರಾತನ ಗ್ರೀಕ್ ನಲ್ಲಿ ಗೋಚರಿಸುತ್ತದೆ. ರೋಮನರಲ್ಲೂ ಅದು ಇರಲಿಲ್ಲ. ಆದರೆ ಅರಬರಲ್ಲಿ ವೈಜ್ಞಾನಿಕ ಸಂಶೋಧನೆಯ ಉತ್ಸಾಹ ಕಂಡು ಬಂದಿತ್ತು. ಆದ್ದರಿಂದ ಆಧುನಿಕ ವಿಜ್ಞಾನದ ಪಿತಾಮಹರು ಮುಸ್ಲಿಮರೆಂದು ಹೇಳಬಹುದು.’ ಅವರು ಪುನಃ ಬರೆಯುತ್ತಾರೆ: ‘ಗ್ರೀಕರು ಆರಂಭಿಸಿ, ಬಳಿಕ ಉಪೇಕ್ಷಿಸಿದ ಸಾಮಾನ್ಯ ಜ್ಞಾನದ ಕ್ರಮಬದ್ಧವಾದ ಬೆಳವಣಿಗೆಯನ್ನು ಅರಬ್ ಮನಸ್ಸು ಒಂದು ಹೊಸ ದೃಷ್ಟಿಕೋನ ಹಾಗೂ ಚೈತನ್ಯದಿಂದ ಸ್ವೀಕರಿಸಿತು. ಹೀಗೆ ಅರಬರಿಂದ ಜಗತ್ತಿಗೆ ವಿಜ್ಞಾನದ ಪ್ರಭೆ ಹಾಗೂ ಶಕ್ತಿ ಲಭಿಸಿತೇ ಹೊರತು ಲ್ಯಾಟಿನ್‌ನ ಮೂಲಕ ಲಭಿಸಿದ್ದಲ್ಲ.’

ಈ ಎಲ್ಲ ರೀತಿಯ ಪ್ರಗತಿಗೆ ಇಸ್ಲಾಮೀ ವಿಶ್ವಾಸವೇ ಕಾರಣ. Rom Landon ತನ್ನ Islam and the Abars’ ಎಂಬ ಗ್ರಂಥದಲ್ಲಿ ಬರೆಯುತ್ತಾರೆ: ವೈಜ್ಞಾನಿಕ ಸಂಶೋಧನೆಗಳಿಗೆ ಅಲ್ಲಾಹನು ಸೃಷ್ಟಿಸಿದ ವಿಸ್ಮಯಕಾರಿ ಪ್ರಪಂಚದ ಕುರಿತು ಅಗಾಧ ಪಾಂಡಿತ್ಯವನ್ನು ಗಳಿಸುವ ಬಯಕೆಯೇ ಪ್ರಚೋದನೆ ನೀಡಿತ್ತು. ಲೌಕಿಕ ಪ್ರಪಂಚವೂ ಆಧ್ಯಾತ್ಮಿಕ ಲೋಕದಂತೆಯೇ ಪ್ರಾಮುಖ್ಯವೆಂಬ ನಂಬಿಕೆಯೂ, ಸತ್ಯಾನ್ವೇಷಣೆಯ ಜಿಜ್ಞಾಸೆಯೂ ಕೂಡಾ ಸೇರಿಕೊಂಡಿತು. ಮಾತೃವಾತ್ಸಲ್ಯದಿಂದ ಮಾರಕ ರೋಗಗಳ ವರೆಗಿನ ಪ್ರತಿಯೊಂದೂ ದೇವನು ಸೃಷ್ಟಿಸಿದ ಪ್ರಪಂಚದಲ್ಲಿ ಸೇರಿಕೊಂಡಿದೆ. ಅವೆಲ್ಲವೂ ಅವನ ನಿದರ್ಶನಗಳಾಗಿವೆ. ಆದ್ದರಿಂದ ಅವು ಕಲಿಕೆಗೆ ಯೋಗ್ಯವಾಗಿದೆ. ಇಸ್ಲಾಮ್‌ನಲ್ಲಿ ಧರ್ಮ ಮತ್ತು ವಿಜ್ಞಾನ ಬೇರೆ ಬೇರೆಯಲ್ಲ. ಧರ್ಮವು ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಚೋದನೆ ನೀಡುವ ಶಕ್ತಿಯಾಗಿದೆ.

ಶಿಲುಬೆ ಯುದ್ಧದಿಂದ ಮುಸ್ಲಿಮ್ ರಾಷ್ಟ್ರಗಳನ್ನು ವಶಪಡಿಸಿಕೊಂಡ ಕ್ರೈಸ್ತರು ನಂತರದ ದಿನಗಳಲ್ಲಿ ಅರಬರ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಗತಿಯನ್ನು ತಮ್ಮದಾಗಿಸಿಕೊಳ್ಳಲು ಬಹಳಷ್ಟು ಪ್ರಯತ್ನಿಸಿದರು. ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಅರಬಿ ಗ್ರಂಥಗಳನ್ನು ತಮ್ಮ ಭಾಷೆಗೆ ಅನುವಾದಿಸಿದರು. ಹೀಗೆ ಯೂರೋಪ್‌ನಲ್ಲಿ ಅಭಿವೃದ್ಧಿಯ ಚಲನೆಗಳು ಗೋಚರಿಸ ತೋಡಗಿದವು. ಕಾರ್ಡೋವ, ಗ್ರಾನಿಡ್, ಡೋಲಿಡೋ, ಬಗ್ದಾದ್, ಡಮಾಸ್ಕಸ್, ಕೈರೋ, ಅಲೆಗ್ಸಾಂಡ್ರಿಯಾಗಳಂತಹ ಪ್ರಸಿದ್ಧ ನಗರಗಳ ಗ್ರಂಥಾಲಯಗಳಲ್ಲಿದ್ದ ಗ್ರಂಥಗಳಲ್ಲಿ ಮುಖ್ಯವಾದವುಗಳನ್ನೆಲ್ಲಾ ಲ್ಯಾಟಿನ್ ಭಾಷೆಗೆ ಭಾಷಾಂತರಿಸಿದರು. ಬಳಿಕ ಅವುಗಳನ್ನು ಉಪಯೋಗಿಸಿಕೊಂಡು ಸಂಶೋಧನೆಗಳನ್ನು ನಡೆಸಿದರು. ಹೀಗೆ ಪಾಶ್ಚಾತ್ಯರು ವೈಜ್ಞಾನಿಕ ಪ್ರಗತಿಯ ಮೆಟ್ಟಿಲನ್ನು ಏರಿದರು.

ಇಸ್ಲಾಮೀ ಸಾಂಸ್ಕೃತಿಕ ಹಾಗೂ ನಾಗರಿಕತೆಯ ಕೇಂದ್ರವಾಗಿದ್ದ ಸ್ಪೇನ್ ನ ಸರ್ವವನ್ನೂ ವಶಪಡಿಸಿದ ಇಸ್ಲಾಮಿನ ಶತ್ರುಗಳು 1492ರಲ್ಲಿ ಆ ರಾಷ್ಟ್ರವನ್ನೇ ತಮ್ಮ ಅಧೀನಗೊಳಿಸಿದರು. ಬಳಿಕ ಅಲ್ಲಿನ ಬೃಹತ್ ಗ್ರಂಥಗಳನ್ನೆಲ್ಲಾ ಅಗ್ನಿಗಾಹುತಿ ಮಾಡಿದರು. ಅರ್ಧಶತಮಾನ ಕಳೆದಾಗ ಒಬ್ಬ ಮುಸ್ಲಿಮನೂ ಉಳಿಯದ ರೀತಿಯಲ್ಲಿ ಬಲತ್ಕಾರವಾಗಿ ಮತಾಂತರಿಸಿ, ಒಪ್ಪದವರನ್ನು ನಿರ್ದಯವಾಗಿ ಕೊಂದು ಹಾಕಿದರು. ಅದರೊಂದಿಗೆ ಮುಸ್ಲಿಮ್ ರಾಷ್ಟ್ರಗಳು ಕುಸಿತ ಕಂಡು ಹಿನ್ನಲೆಗೆ ಸರಿದವು. ಮುಸ್ಲಿಮರು ಹಿಂದುಳಿದವರೆಂಬ ಹಣೆಪಟ್ಟಿಯೂ ದೊರೆಯಿತು. ಈ ವಿಷಯವನ್ನು ಪ್ರಸಿದ್ಧ ಆಂಗ್ಲ ಇತಿಹಾಸಕಾರರಾದ ಲೆಯಿನ್ ಪೂಲ್ ಸ್ಪಷ್ಟಪಡಿಸುತ್ತಾರೆ: ‘ಸ್ಪೇನ್ ದೇಶವು ಶತಮಾನಗಳವರೆಗೆ ನಾಗರಿಕತೆಯ ಕೇಂದ್ರ, ಕಲಾ ವೈವಿಧ್ಯಗಳ ಸಂಗಮ ಭೂಮಿಯಾಗಿತ್ತು. ಅದೇ ರೀತಿ ಎಲ್ಲಾ ರಂಗಗಳಲ್ಲೂ ನಾಯಕತ್ವ ಸ್ಥಾನದಲ್ಲಿತ್ತು. ಯೂರೋಪ್‌ನ ಯಾವುದೇ ದೇಶವೂ ಕೂಡಾ ಅರಬ್ ನಾಗರಿಕತೆಯ ಸನಿಹಕ್ಕೂ ತಲುಪಿರಲಿಲ್ಲ, ಫೆರ್ಡಿನಾಂಡ್ ಇಸಬೆಲ್ಲಾ, ಚಾರ್ಲ್ಸ್‌ ಸಾಮ್ರಾಜ್ಯಗಳಿಗೆ ಯಾವುದೇ ಶಾಶ್ವತ ಉನ್ನತಿ ಪ್ರಾಪ್ತವಾಗಿರಲಿಲ್ಲ. ಮುಸ್ಲಿಮರನ್ನು ಹೊರಕಟ್ಟಲಾಯಿತು. ಕೆಲವೆಡೆಗಳಲ್ಲಿ ಕ್ರೈಸ್ತ ಸ್ಪೇನ್ ಚಂದ್ರನಂತೆ ಸಾಲ ಪಡೆದ ಬೆಳಕಿನಿಂದ ಪ್ರಕಾಶಿತವಾಯಿತು. ಕೆಲವೇ ಕ್ಷಣಗಳಲ್ಲಿ ಅದಕ್ಕೆ ಗ್ರಹಣ ಉಂಟಾಯಿತು. ಬಳಿಕ ಇಂದಿನವರೆಗೂ ಸ್ಪೇನ್ ಅಂಧಕಾರದಲ್ಲೇ ತಡಕಾಡುತ್ತಿದೆ.

ಸಾಮ್ರಾಜ್ಯಶಾಹಿಗಳ ಆಕ್ರಮಣದಿಂದ ಮುಸ್ಲಿಮ್ ರಾಷ್ಟ್ರಗಳ ಅವನತಿ ಪೂರ್ಣಗೊಂಡಿತು. 19ನೇ ಶತಮಾನದಲ್ಲಿ ಹಾಗೂ 20ನೇ ಶತಮಾನದ ಮೊದಲ ದಶಕಗಳಲ್ಲಿ ಅವು ಎಲ್ಲಾ ಮುಸ್ಲಿಮ್ ರಾಷ್ಟ್ರಗಳನ್ನು ಹಂಚಿಕೊಂಡವು. ಹೀಗೆ ಮುಸ್ಲಿಮ್ ಜಗತ್ತು ಪಾಶ್ಚಾತ್ಯ ಸಾಮ್ರಾಜ್ಯ ಶಕ್ತಿಗಳ ವಶವಾಯಿತು. ಅವರು ಮುಸ್ಲಿಮ್ ರಾಷ್ಟ್ರಗಳನ್ನು ಸಂಪೂರ್ಣವಾಗಿ ಕೊಳ್ಳೆ ಹೊಡೆದದ್ದು ಮಾತ್ರವಲ್ಲ, ಮುಸ್ಲಿಮರನ್ನು ಅವರ ಉನ್ನತ ಧ್ಯೇಯ, ಆದರ್ಶ ಹಾಗೂ ವಿಶ್ವಾಸಗಳಿಂದ ವ್ಯತಿಚಲಿಸುವಂತೆ ಮಾಡಿದರು. ಹೀಗೆ ಮುಸ್ಲಿಮ್ ರಾಷ್ಟ್ರಗಳು ಹಾಗೂ ಸಮುದಾಯ ಸುಲಭದಲ್ಲಿ ಪರಿಹರಿಸಲಾಗದಂತಹ ಹಿಂದುಳಿದ ಸ್ಥಿತಿಗೆ ಒಳಗಾಯಿತು. ಅದರೊಂದಿಗೆ ಅಭಿವೃದ್ಧಿ ಹಾಗೂ ನವೋತ್ಥಾನದ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದರ್ಶ ಸಿದ್ಧಾಂತಗಳೂ, ಜೀವನದ ದೃಷ್ಟಿಕೋನಗಳೂ ಮಸುಕಾದವು.

ಕಳೆದ ಶತಮಾನದ ಮಧ್ಯದಶಕಗಳಲ್ಲಿ ಈ ರಾಷ್ಟ್ರಗಳು ಸ್ವಾತಂತ್ರ್ಯಗಳಿಸಿದರೂ ನೇರವಾಗಿ ಎದ್ದು ನಿಲ್ಲಲಾಗದ ಸ್ಥಿತಿಗೆ ತಲುಪಿದ್ದವು. ಸಾಮ್ರಾಜ್ಯಶಾಹಿ ಶಕ್ತಿಗಳು ಸ್ವಾತಂತ್ರ್ಯ ನೀಡುವುದರೊಂದಿಗೆ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಂಡಿದ್ದವು. ತಮ್ಮ ಬೇಡಿಕೆಗಳನ್ನು ಪೂರೈಸುವ, ಇಸ್ಲಾಮೀ ವ್ಯವಸ್ಥೆಯನ್ನು ಜಾರಿಗೆ ತರುವ ಮನಸ್ಸಾಕ್ಷಿಯಿಲ್ಲದ, ದೇಶದ ಪ್ರಗತಿಯ ಕುರಿತು ದೂರದೃಷ್ಟಿ ಇಲ್ಲದ ಸರ್ವಾಧಿಕಾರಿಗಳು, ರಾಜ ಕುಮಾರರು, ಸುಲ್ತಾನರನ್ನು ಆಡಳಿತದಲ್ಲಿ ಕುಳ್ಳಿರಿಸಿದರು. ಸ್ವದೇಶಿಗಳ ಅಭಿಪ್ರಾಯ, ಅಭಿರುಚಿಗಳನ್ನು ಪರಿಗಣಿಸದ ಅವರು ಇಂದು ಆಡಳಿತ ನಡೆಸುತ್ತಿದ್ದಾರೆ. ಆದ್ದರಿಂದ ಪಾಶ್ಚಾತ್ಯ ಶಕ್ತಿಗಳಿಗೆ ಗುಲಾಮಗಿರಿಯ ಕಾಲದಂತೆಯೇ ನಂತರವೂ ಆ ದೇಶಗಳನ್ನು ಕೊಳ್ಳೆ ಹೊಡೆಯಲು ಸಾಧ್ಯವಾಯಿತು. ಇಂದು ಕೂಡಾ ಅದೇ ಸ್ಥಿತಿ ಮುಂದುವರಿದಿದೆ. ದೇಶಗಳ ಪ್ರಗತಿ ಹಾಗು ಅಭಿವೃದ್ಧಿಗೆ ಕಾರಣವಾಗುವ ಇಸ್ಲಾಮೀ ವ್ಯವಸ್ಥೆಯ ಜಾರಿಗೆ ಪ್ರಯತ್ನಿಸುವ ಸಂಘಟನೆಗಳನ್ನು ಸಾಮ್ರಾಜ್ಯಶಾಹಿ ಶಕ್ತಿಗಳ ಸಹಕಾರದೊಂದಿಗೆ ಆ ದೇಶದ ಸರ್ವಾಧಿಕಾರಿಗಳು ಕ್ರೂರವಾಗಿ ಮರ್ದಿಸಿ, ರಕ್ತದಲ್ಲಿ ಮುಳುಗಿಸಿ ಕೊಲ್ಲುತ್ತಿದ್ದಾರೆ. ಅಲ್ಲಿ ಜನರ ಹಿತಾಸಕ್ತಿಗಳ ಈಡೇರಿಕೆಯನ್ನು ಹಾಗೂ ಪ್ರಜಾಪ್ರಭುತ್ವ ಸ್ಥಾಪನೆಯಾಗುವುದನ್ನು ಪಾಶ್ಚಾತ್ಯ ಶಕ್ತಿಗಳು ಇಷ್ಟಪಡುವುದಿಲ್ಲ, ಅವರ ಮೋಸದಾಟ ಹಾಗೂ ಮುಸ್ಲಿಮ್ ರಾಷ್ಟ್ರಗಳ ಹಿಂದುಳಿಯುವಿಕೆಯು ನಿರಂತರವಾಗಿ ಮುಂದುವರಿಯಲು ಅದು ಅನಿವಾರ್ಯವಲ್ಲವೇ? ಮುಸ್ಲಿಮ್ ರಾಷ್ಟ್ರಗಳು ಇಸ್ಲಾಮೀ ವ್ಯವಸ್ಥೆಯನ್ನು ಯಥಾವತ್ತಾಗಿ ಜಾರಿಗೆ ತಂದಾಗ ಉನ್ನತಿಯ ಶಿಖರಕ್ಕೇರಿದ್ದು ಮತ್ತು ಅದನ್ನು ಕೈಬಿಟ್ಟಾಗ ಅವನತಿಯ ಪಾತಾಳಕ್ಕೆ ಇಳಿದದ್ದು ನಮಗೆ ಕಾಣಲು ಸಾಧ್ಯವಾಗಿದೆ. ಇಸ್ಲಾಮ್ ಸಮಾಜದಲ್ಲಿ ಸೃಷ್ಟಿಸುವ ಸ್ವಾಧೀನವು
ಎಂತಹದ್ದೆಂದು ಇತಿಹಾಸವು ಸ್ಪಷ್ಟಪಡಿಸುತ್ತದೆ.

ಭಾರತದಲ್ಲಿ ವಿದೇಶಿಯರ ಆಕ್ರಮಣದವರೆಗೆ ಮುಸ್ಲಿಮರ ಸ್ಥಿತಿಯು ಇತರ ವರ್ಗಗಳಿಗೆ ಹೋಲಿಸಿದರೆ ಹಿಂದುಳಿದಿರಲಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *