Home / ಪ್ರಶ್ನೋತ್ತರ / ಧರ್ಮ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಲದೇ ?

ಧರ್ಮ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಲದೇ ?

  • ಧರ್ಮವು ದೇವನದ್ದಾಗಿದ್ದರೆ ವಿಶ್ವದಲ್ಲಿ ವಿವಿಧ ಧರ್ಮಗಳು ಇರಲು ಕಾರಣವೇನು? ವಿವಿಧ ದೇಶಗಳಿಗೆ ಹಾಗೂ ಕಾಲಗಳಿಗೆ ದೇವನು ಬೇರೆ ಬೇರೆ ಧರ್ಮವನ್ನು ನೀಡಿದ್ದಾನೆಯೇ? ಹಾಗಿದ್ದರೆ ವಿವಿಧ ಧರ್ಮಗಳ ನಡುವೆ ಭಿನ್ನತೆಯೂ ವಿರೋಧಾಭಾಸವೂ ಕಂಡು ಬರಲು ಕಾರಣವೇನು?

ಮಾನವಕುಲಕ್ಕೆ ಸರ್ವಶಕ್ತನಾದ ದೇವನು ನೀಡಿರುವ ಜೀವನ ವ್ಯವಸ್ಥೆಯನ್ನು ಧರ್ಮ ಎನ್ನಲಾಗುತ್ತದೆ. ಮನುಷ್ಯನೆಂದರೆ ಯಾರು? ಏನು? ಎಲ್ಲಿಂದ ಬಂದಿದ್ದಾನೆ? ಎಲ್ಲಿಗೆ ಹೋಗಲಿದ್ದಾನೆ? ನಮ್ಮ ಜೀವನ ಯಾವ ರೀತಿ ಇರಬೇಕೆಂದೂ, ಮರಣಾನಂತರ ನಮ್ಮ ಅವಸ್ಥೆಯೇನೆಂದು ಧರ್ಮವು ಮನುಷ್ಯನಿಗೆ ಕಲಿಸಿಕೊಡುತ್ತದೆ. ಹೀಗೆ ಜನರನ್ನು ಸನ್ಮಾರ್ಗದತ್ತ ಮುನ್ನಡೆಸಿ ಶಾಶ್ವತ ವಿಜಯಕ್ಕೆ ಧರ್ಮವು ತಲುಪಿಸುತ್ತದೆ ಅಥವಾ ತಲುಪಿಸಬೇಕಾಗುತ್ತದೆ. ದೇವನು ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಕಾಲ ದೇಶಗಳ ಭೇದವಿಲ್ಲದೆ ಎಲ್ಲಾ ಜನಾಂಗಗಳಿಗೂ ಕರುಣಿಸಿದ್ದಾನೆ. ತನ್ನ ಸಂದೇಶವಾಹಕರ ಮೂಲಕ ಈ ಕಾರ್ಯವನ್ನು ನಿರ್ವಹಿಸಿದ್ದಾನೆ. ಎಲ್ಲ ಸಂದೇಶವಾಹಕರು ಮಾನವಕುಲಕ್ಕೆ ನೀಡಿರುವ ಜೀವನ ವ್ಯವಸ್ಥೆಯು ಒಂದೇ ಆಗಿದೆ. ಅಲ್ಲಾಹನು ಹೇಳುತ್ತಾನೆ: ”ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು ಮತ್ತು ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ ಮತ್ತು ‘ತಾಗೂತ’ನ ಆರಾಧನೆಯಿಂದ ದೂರವಿರಿ” ಎಂದು ಅವರ ಮುಖಾಂತರ ಎಚ್ಚರಿಕೆ ನೀಡಿದೆವು. (ಪವಿತ್ರ ಕುರ್‌ಆನ್ 16:36)

ಹೀಗೆ ಒಂದು ಜನಾಂಗಕ್ಕೆ ಸಂದೇಶವಾಹಕರು ನಿಯುಕ್ತರಾಗುತ್ತಾರೆ. ತನ್ನ ಜನತೆಯನ್ನು ಸನ್ಮಾರ್ಗದೆಡೆಗೆ ಕರೆಯುತ್ತಾರೆ. ಆಗ ಅದರಲ್ಲಿ ಒಂದು ವಿಭಾಗ ಪ್ರವಾದಿಗಳನ್ನು ಅನುಸರಿಸುತ್ತದೆ. ಇನ್ನೊಂದು ವಿಭಾಗ ತಮ್ಮ ಪೂರ್ವ ಧರ್ಮದಲ್ಲಿ ಅಚಲರಾಗಿರುತ್ತದೆ. ಸಂದೇಶವಾಹಕರ ವಿಯೋಗದ ನಂತರ ಕೆಲವೇ ವರ್ಷಗಳಲ್ಲಿ ಅಥವಾ ದೀರ್ಘಕಾಲದ ನಂತರ ಅವರ ಅನುಯಾಯಿಗಳು ದೈವಿಕ ಮಾರ್ಗದಿಂದ ದೂರಸರಿಯುತ್ತಾರೆ. ಸ್ವಾರ್ಥಿಗಳಾದ ಪಂಡಿತ, ಪುರೋಹಿತರು ಅವರಲ್ಲಿ ಮೂಢನಂಬಿಕೆ ಹಾಗೂ ಅನಾಚಾರಗಳನ್ನು ಬೆಳೆಸುತ್ತಾರೆ. ಹೀಗೆ ಜನಸಮೂಹವು ದೇವಮಾರ್ಗದಿಂದ ಸಂಪೂರ್ಣ ದೂರವಾದಾಗ ಅಲ್ಲಾಹನನ್ನು ಪುನಃ ಪ್ರವಾದಿಗಳನ್ನು ಕಳಿಸುತ್ತಾನೆ. ಸಮೂಹದ ಒಂದು ವಿಭಾಗ ಇವರನ್ನು ಅನುಸರಿಸಿದರೆ ಇನ್ನೊಂದು ಪೂರ್ವಿಕರ ಧರ್ಮದಲ್ಲೇ ದೃಢವಾಗಿರುತ್ತದೆ. ಇದರೊಂದಿಗೆ ಪ್ರವಾದಿಯನ್ನು ಅನುಸರಿಸುವವರದೊಂದು ಧರ್ಮ ಮತ್ತು ಅನುಸರಿಸದವರದು ಇನ್ನೊಂದು ಧರ್ಮವಾಗಿ ರೂಪುಗೊಳ್ಳುತ್ತದೆ. ವಾಸ್ತವದಲ್ಲಿ ಎಲ್ಲಾ ಪ್ರವಾದಿಗಳು ಜನತೆಯನ್ನು ಏಕದೇವಾರಾಧನೆಯ ಕಡೆಗೆ ಕರೆದಿದ್ದಾರೆ ಮತ್ತು ಅವನ ಜೀವನ ವ್ಯವಸ್ಥೆಯನ್ನೇ ಪರಿಚಯಪಡಿಸಿದ್ದಾರೆ. ಇಸ್ರಾಯೀಲರು ದೇವಮಾರ್ಗದಿಂದ ದೂರವಾದಾಗ ಅವರನ್ನು ಸನ್ಮಾರ್ಗದೆಡೆಗೆ ಅಹ್ವಾನಿಸಲು ಪ್ರವಾದಿ ಮೋಶೆ(ಮೂಸಾ)ರನ್ನು ನಿಯೋಗಿಸಲಾಯಿತು. ನಂತರ ಅವರ ಅನುಯಾಯಿಗಳು ಧರ್ಮದಿಂದ ದೂರ ಸರಿದಾಗ ಈಸಾ(ಅ) (ಯೇಸು)ರನ್ನು ನಿಯೋಗಿಸಲಾಯಿತು. ಅವರ ಆಹ್ವಾನವನ್ನು ನಿರಾಕರಿಸಿ ತಮ್ಮದುರಾಚಾರದಲ್ಲೇ ಉಳಿದವರು ಯಹೂದಿಗಳಾದರು. ಅವರನ್ನು ಅನುಸರಿದವರು ಕ್ರೈಸ್ತರಾದರು. ಹೀಗೆ ಜನಸಮೂಹವು ಸನ್ಮಾರ್ಗದಿಂದ ದೂರಸರಿಯುವಾಗ ಅವರನ್ನು ನೇರಮಾರ್ಗಕ್ಕೆ ಆಹ್ವಾನಿಸಲು ನಿಯೋಜಿತರಾಗುವ ಪ್ರವಾದಿಗಳನ್ನು ಒಪ್ಪಿಕೊಳ್ಳದ ತಮ್ಮ ಪೂರ್ವಿಕರ ಆಚಾರದಲ್ಲೇ ಉಳಿದುದರಿಂದ ಲೋಕದಲ್ಲಿ ಹಲವಾರು ಧರ್ಮಗಳು ಹುಟ್ಟಿದುವು. ಅವುಗಳ ನಡುವೆ ಭಿನ್ನತೆಯೂ, ವಿರೋಧಾಭಾಸವೂ ಇದೆ.

ನದಿಗಳು ವಿವಿಧೆಡೆಗಳಲ್ಲಿ ಹುಟ್ಟಿ, ಹಲವು ದಾರಿಗಳಿಂದ ಹರಿದು ಸಮುದ್ರವನ್ನು ತಲುಪುತ್ತವೆ. ಅದೇ ರೀತಿ ಮನುಷ್ಯನು ವಿವಿಧ ಮಾರ್ಗಗಳಿಂದ ದೇವನೆಡೆಗೆ ತಲುಪುತ್ತಾನೆ. ಆದ್ದರಿಂದ ಶ್ರೀ ನಾರಾಯಣ ಗುರು ಹೇಳಿದಂತೆ ಧರ್ಮ ಯಾವುದೇ ಆದರೂ ಮನುಷ್ಯನು ಒಳ್ಳೆಯವನಾದರೆ ಸಾಕು ಎಂಬುದು ಸರಿಯಲ್ಲವೇ?

ಧರ್ಮವು ಸೃಷ್ಟಿಕರ್ತನ ಪ್ರೀತಿ ಮತ್ತು ಪ್ರತಿಫಲವನ್ನು ಪಡೆಯಲು ನಾನು ಅನುಸರಿಸಬೇಕಾದ ಮಾರ್ಗವಾಗಿದೆ. ತನ್ನ ಕಡೆಗೆ ಬಂದು ತಲುಪಬೇಕಾದ ದಾರಿ ಯಾವುದೆಂದು ಆತನೇ ನಿರ್ಧರಿಸಬೇಕು. ಅದನ್ನು ದೇವನು ನಿಶ್ಚಯಿಸಿ ತನ್ನ ಸಂದೇಶವಾಹಕರ ಮೂಲಕ ಮಾನವ ಸಮೂಹಕ್ಕೆ ತಿಳಿಸಿಕೊಟ್ಟಿದ್ದಾನೆ.

ಪರಸ್ಪರ ವಿರುದ್ಧ ವಿಷಯಗಳು ಏಕಕಾಲಕ್ಕೆ ಸರಿಯಾಗಲು ಸಾಧ್ಯವಿಲ್ಲವೆಂಬುದರಲ್ಲಿ ಸಂಶಯವಿಲ್ಲ. ಗಣಿತದಲ್ಲಿ ಎರಡು ಮತ್ತು ಎರಡು ಸೇರಿದರೆ ನಾಲ್ಕು ಆಗುತ್ತದೆ ಎಂಬ ಉತ್ತರ ಸರಿ. ಅದೇ ವೇಳೆ ಮೂರೆಂದೂ, ಐದೆಂದೂ ಹೇಳಿದರೆ ತಪ್ಪಾಗುತ್ತದೆ. ಆಮ್ಲಜನಕ ಮತ್ತು ಜಲಜನಕ ಸೇರಿದರೆ ನೀರುಂಟಾಗುತ್ತದೆ ಎಂಬುದು ಸತ್ಯ ಸಂಗತಿ. ಆದರಿಂದ ಮದ್ಯ ಉಂಟಾಗುತ್ತದೆಂದು ಹೇಳಿದರೆ ತಪ್ಪಾಗುತ್ತದೆ. ಹೀಗೆ ಧರ್ಮದಲ್ಲಿ ಸತ್ಯ ಯಾವುದು ಅಸತ್ಯ ಯಾವುದು? ಎಂಬುದು ಮಹತ್ವದ ಪ್ರಶ್ನೆಯಾಗುತ್ತದೆ. ಅದ್ವೈತ ಸಿದ್ಧಾಂತ ಸರಿಯೆಂದು ದ್ವೈತವು ಸುಳ್ಳೆಂದು ಶ್ರೀ ಶಂಕರಾಚಾರ್ಯರು ಹೇಳುತ್ತಾರೆ. ದ್ವೈತ ಸಿದ್ಧಾಂತವೇ ಸರಿಯೆಂದೂ, ಅದ್ವೈತ ಸರಿಯಲ್ಲವೆಂದು ಶ್ರೀ ಮಧ್ವಾಚಾರ್ಯರು ಹೇಳುತ್ತಾರೆ. ಇದು ಎರಡೂ ಮಿಥ್ಯವೆಂದು ವಿಶಿಷ್ಟಾದ್ವೈತವೇ ಸತ್ಯವೆಂದು ರಾಮಾನುಜಾರ್ಯರು ವಾದಿಸುತ್ತಾರೆ, ದೇವಾವತಾರ ಎಂಬ ಕಲ್ಪನೆಯು ಸತ್ಯವೆಂದೂ, ದೇವಾವತಾರ ಎಂಬ ಕಲ್ಪನೆಯೇ ಇಲ್ಲವೇಂದೂ ಹೇಳುವ ಹಿಂದೂ ಪಂಡಿತರಿದ್ದಾರೆ. ಪುನರ್ಜನ್ಮದ ವಿಷಯವೂ ಅಷ್ಟೆ ಹಿಂದೂ ಪಂಡಿತರುಗಳೇ ಹಿಂದೂ ಧರ್ಮದ ವಿವಿಧ ವಿಶ್ವಾಸಗಳು ಸತ್ಯವೆಂದು ಒಪ್ಪಿಕೊಳ್ಳವುದಿಲ್ಲವೆಂದು ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ವಿವಿಧ ಧರ್ಮಗಳಲ್ಲಿರುವ ಏಕದೇವತ್ವ ತ್ರಿದೇವತ್ವ ಬಹುದೇವಾರಾಧನೆ, ದ್ವೈತ, ಅದ್ವೈತ, ಏಕದೇವಾರಾಧನೆ, ಬಹುದೇವಾರಾಧನೆ ಹಾಗೂ ವಿಗ್ರಹಾರಾಧನೆ ಕ್ಷಮಿಲಾಗದ ಪಾಪವೆಂಬ ವಿಶ್ವಾಸ, ಪರಲೋಕ ವಿಶ್ವಾಸ, ಪುರ್ನಜನ್ಮ ವಿಶ್ವಾಸ, ಮನುಷ್ಯರಲ್ಲ ಪರಿಶುದ್ಧರಾಗಿಯೇ ಹುಟ್ಟುತ್ತಾರೆಂಬ ದೃಷ್ಟಿಕೋನ, ಪಾಪಿಗಳಾಗಿ ಹುಟ್ಟುವರೆಂಬ ನಂಬಿಕೆ ಇವುಗಳಲ್ಲಾ ಏಕಕಾಲಕ್ಕೆ ಸತ್ಯವೂ ಹಾಗೂ ಸರಿಯೂ ಹೌದು ಎಂದು ಹೇಳಿದರೆ ಅದನ್ನು ಸ್ವೀಕರಿಸಲಾಗುವುದಿಲ್ಲ, ಎಲ್ಲವೂ ಸರಿ ಎಂದು ಹೇಳುವುದು ಎರಡು ಎರಡು ನಾಲ್ಕೆಂದೂ, ಐದೆಂದೂ, ಮೂರೆಂದೂ ಹೇಳುವುದಕ್ಕೆ ಸಮಾನವೆಂದು ಹೇಳುವಂತೆ ಅಸಂಬದ್ಧವಾಗಿದೆ.

ಆದ್ದರಿಂದ ಮಾನವ ಹಸ್ತಕ್ಷೇಪವಿಲ್ಲದ, ನೈಜ ಧರ್ಮ ಸಿದ್ಧಾಂತ ಯಾವುದೆಂದು ಕಂಡು ಹಿಡಿದು ಅದನ್ನು ಅನುಸರಿಸಬೇಕು. ನಿಜವಾದ ವಿಜಯವೂ ಅದೇ ಆಗಿದೆ. ತನ್ನ ವಿಶ್ವಾಸ ಹಾಗು ಅದಕ್ಕೆ ವಿರುದ್ಧವಾದ ಕಾರ್ಯಗಳೂ ಎರಡು ಒಂದೇ ಎಂದು ಸಾಮಾನ್ಯ ಪ್ರಜ್ಞೆಯುಳ್ಳ ಯಾರೂ ಒಪ್ಪಿಕೊಳ್ಳಲಾರರು. ಕಮ್ಯೂನಿಝಂ ಮತ್ತು ಕ್ಯಾಪಿಟಲಿಝಂ ಒಂದೇ ರೀತಿ ಸರಿಯೆಂದೂ ಒಳ್ಳೆಯದೆಂದೂ ಅದರ ಕುರಿತು ತಿಳಿದಿರುವ ಅವರ ಅನುಯಾಯಿಗಳು ಹೇಳಲು ಸಾಧ್ಯವಿಲ್ಲವಷ್ಟೇ?

ವಾಸ್ತವದಲ್ಲಿ ಮಾನವನನ್ನು ಉನ್ನತಗೊಳಿಸುವ ಧರ್ಮ ಅಗತ್ಯ ಅಥವಾ ಐಹಿಕ ಜೀವನದಲ್ಲಿ ಮಾನವ ಮನಸ್ಸಿಗೆ ಶಾಂತಿ ಸಮಾಧಾನ ನೀಡುವ, ವ್ಯಕ್ತಿಜೀವನದಲ್ಲಿ ಪಾವಿತ್ರತೆ ಕರುಣಿಸುವ, ಕುಟುಂಬ ಹಾಗು ಸಮಾಜಕ್ಕೆ ಧೈರ್ಯವನ್ನೂ, ಸ್ಥೈರ್ಯವನ್ನೂ ಅನುಗ್ರಹಿಸುವ, ರಾಷ್ಟ್ರಕ್ಕೆ ಕ್ಷೇಮವನ್ನೂ, ಭದ್ರತೆಯನ್ನೂ, ಲೋಕದಲ್ಲಿ ಶಾಂತಿಯನ್ನೂ ಬಯಸುವ ಮಾತ್ರವಲ್ಲ ಪರಲೋಕದಲ್ಲಿ ನರಕ ಮುಕ್ತಿ ಮತ್ತು ಸ್ವರ್ಗವನ್ನು ವಾಗ್ದಾನ ಮಾಡುವ ಧರ್ಮ. ಧರ್ಮವೆಂಬುದು ಇಲ್ಲದೆ ಇದು ಸಾಧ್ಯವೂ ಅಲ್ಲ, ಯಾವ ಧರ್ಮವನ್ನು ಸ್ವೀಕರಿಸಬಹುದೆಂದು ಕುರ್ ಆನ್ ಹೇಳಿದೆ. ‘ನಿಶ್ಚಯವಾಗಿಯೂ ಪೈಗಂಬರರನ್ನು ನಂಬುವವರಿರಲಿ, ಯಹೂದಿಯರಿರಲಿ, ಕ್ರೈಸ್ತರಿರಲಿ, ಸಬಯನರಿರಲ್ಲಿ ಯಾರು ಅಲ್ಲಾಹ್ ಮತ್ತು ನಿರ್ಣಾಯಕ ದಿನದ ಮೇಲೆ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡುವರೋ ಅವರಿಗೆ ಅದರ ಪ್ರತಿಫಲವು ಅವರ ಪ್ರಭುವಿನ ಬಳಿ ಇದ್ದೇ ಇದೆ. ಅವರಿಗೆ ಯಾವ ಭಯವೂ ವ್ಯಥೆಯೂ ಇಲ್ಲ’ (ಪವಿತ್ರ ಕು‌ಆನ್ 2:62) ಈ ವಚನದ ಕುರಿತು ಏನೆನ್ನುವಿರಿ? ಈ ಪವಿತ್ರ ವಚನವು ಯಹೂದಿಯರ ವಂಶೀಯತೆನ್ನು ನಿರಾಕರಿಸುತ್ತದೆ. ತಮ್ಮ ವಂಶವೇ ದೇವನಿಗೆ ಪ್ರಿಯವೆಂದೂ ನಾವೇ ಸ್ವರ್ಗದ ಹಕ್ಕುದಾರರೆಂದೂ ಅವರ ವಾದ. ನಾವು ಯಾವ ರೀತಿ ಬಾಳಿದರೂ ನಮಗೆ ರಕ್ಷಣೆಯಿದೆಯೆಂದೂ, ಇತರರೆಲ್ಲಾ ನರಕದ ಹಕ್ಕುದಾರರೆಂದೂ ಅವರ ವಿಶ್ವಾಸ. ಅವರ ಈ ವಿಶ್ವಾಸವನ್ನು ಖಂಡಿಸಿ ಕುರ್‌ ಆನ್ ಹೇಳುತ್ತದೆ. ವಂಶ, ಜಾತಿ, ಸಮುದಾಯವು ಶಾಶ್ವತ ವಿಜಯದ ಮೇಲೆ ಪ್ರಭಾವ ಬೀರದು ಬದಲಾಗಿ ದೇವ ವಿಶ್ವಾಸ, ಪರಲೋಕದ ವಿಶ್ವಾಸ ಸತ್ಕರ್ಮ ಇವು ವಿಜಯದ ಕೀಲಿಕೈ ಆಗಿದೆ.

ಇಸ್ಲಾಮ್ ಎಂದರೆ ದೇವನ ಮರಣಾನಂತರ ಜೀವನದಲ್ಲೂ ನೈಜ ವಿಶ್ವಾಸವಿರಿಸುವುದು ಹಾಗೂ ಸತ್ಕರ್ಮವನ್ನು ಮಾಡುವುದು. ಯಾರು ಅದರಂತೆ ಜೀವಿಸುವರೋ ಅವರು ಮುಸ್ಲಿಮರಾಗಿದ್ದಾರೆ. ಅವರ ವಂಶ, ವರ್ಗ, ದೇಶ, ಭಾಷೆ, ಜಾತಿ, ಯಾವುದು ಇಲ್ಲಿ ಮುಖ್ಯವಾಗುವುದಿಲ್ಲ, ಯಹೂದಿಯರು, ಕ್ರೈಸ್ತರು, ಸಬಯನರು ದೇವನಲ್ಲೂ ಪರಲೋಕದಲ್ಲೂ ವಿಶ್ವಾಸವಿರಿಸಿ, ಸತ್ಕರ್ಮವೆಸಗಿದರೆ ಅವರು ಬದಲಾಗುತ್ತಾರೆ. ಅವರ ವಿಶ್ವಾಸ, ಆರಾಧನೆ, ಆಚಾರ, ವಿಚಾರ ಹಾಗು ಜೀವನದ ರೀತಿಗಳಲ್ಲಿ ಆಮೂಲಾಗ್ರ ಬದಲಾವಣೆ ಸಂಭವಿಸುತ್ತದೆ. ನಂತರ ಅವರು ಅವರ ಮೊದಲ ಹೆಸರಿನಲ್ಲಿ ಕರೆಯಲ್ಪಡುವುದೂ ಇಲ್ಲ. ಆದ್ದರಿಂದ ಕುರ್ ಆನ್ ಇಲ್ಲಿ ಮಾನವನ ವಿಜಯದ ಹಾದಿಯಾಗಿ ಇಸ್ಲಾಮಿನ ಮೂಲಭೂತ ವಿಶ್ವಾಸ ಮತ್ತು ಸತ್ಕರ್ಮವನ್ನೇ ಎತ್ತಿತೋರಿಸಿದೆ.

(ವಿವರಣೆಗಾಗಿ ಡಯಲಾಗ್ ಸೆಂಟರ್ ಪ್ರಕಟಿಸಿದ ‘ಸರ್ವಧರ್ಮ ಸಮಭಾವ’ ಎಂಬ ಕೃತಿ ನೋಡಿರಿ)

“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *