Home / ಪ್ರಶ್ನೋತ್ತರ / ಜಿಝಿಯಾ ?

ಜಿಝಿಯಾ ?

ಜಿಝಿಯಾ (ರಕ್ಷಣಾ ತೆರಿಗೆ) ಎಂಬುದು ಜಗತ್ತಿನಲ್ಲಿ ಅತ್ಯಧಿಕ ತಪ್ಪು ತಿಳಿಯಲ್ಪಟ್ಟ ಇಸ್ಲಾಮಿ ಪಾರಿಭಾಷಿಕ ಪದವಾಗಿದೆ. ಅದನ್ನು ಇಸ್ಲಾಮಿ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರೊಂದಿಗಿರುವ ಪಕ್ಷಪಾತ ಮತ್ತು ಅವರನ್ನು ದ್ವಿತೀಯ ದರ್ಜೆಯ ಪೌರರೆಂದು ಪರಿಗಣಿಸುವ ಮನೋಭಾವದ ಸಂಕೇತವೆಂದೂ ಆಕ್ಷೇಪಿಸಲಾಗುತ್ತಿದೆ. ಮುಸ್ಲಿಮೇತರ ಪ್ರಜೆಗಳಿಗೆ ವಿಧಿಸಲಾಗುವ ಈ ತೆರಿಗೆಯ ಹಿನ್ನೆಲೆಯನ್ನು ಸರಿಯಾಗಿ ಗ್ರಹಿಸದಿರುವುದೇ ಈ ತಪ್ಪು ತಿಳುವಳಿಕೆ ಮತ್ತು ಟೀಕೆಗಳಿಗೆ ಕಾರಣವಾಗಿದೆ.

ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪೌರರಿಗೆ ಈ ಕಂದಾಯವನ್ನು ವಿಧಿಸುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ.

1. ಮುಸ್ಲಿಮರು ತಮ್ಮ ಕೃಷಿ ಆದಾಯಗಳ 10% ಮತ್ತು ಇತರ ಆದಾಯಗಳ 2.5% ಝಕಾತಿನ ಬಾಬ್ತಿನಲ್ಲಿ ಸಾರ್ವಜನಿಕ ಬೊಕ್ಕಸಕ್ಕೆ (ಬೈತುಲ್ ಮಾಲ್) ಕಡ್ಡಾಯವಾಗಿ ನೀಡಬೇಕು. ಇದು ಕೇವಲ ಆರ್ಥಿಕ ಹೊಣೆ ಮಾತ್ರವಲ್ಲ, ಧಾರ್ಮಿಕ ಆರಾಧನಾ ಕರ್ಮವೂ ಆಗಿದೆ. ಆದ್ದರಿಂದ ಅದನ್ನು ಮುಸ್ಲಿಮೇತರರಿಗೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅದರಿಂದ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುವುದು. ಈ ಹಿನ್ನೆಲೆಯಲ್ಲಿ ಸಮಾಜದ ಆರ್ಥಿಕ ಸಂತುಲನೆಗಾಗಿ ಮುಸ್ಲಿಮೇತರ ಪೌರರಿಗೆ ಇಸ್ಲಾಮಿ ಧಾರ್ಮಿಕ ಆಚಾರಗಳಿಗೆ ಸಂಬಂಧವಿಲ್ಲದ ಬೇರೊಂದು ತೆರಿಗೆಯನ್ನು ವಿಧಿಸಲಾಯಿತು. ಅದೇ ಜಿಝಿಯಾ. ವಸ್ತುತಃ ಅದು ಮುಸ್ಲಿಮರಿಂದ ರಾಷ್ಟ್ರವು ಕಡ್ಡಾಯವಾಗಿ ವಸೂಲು ಮಾಡುವ ಝಕಾತಿಗೆ ಪರ್ಯಾಯವಾಗಿರುವ ತೆರಿಗೆಯಾಗಿದೆ.

ಸ್ಥಿತಿವಂತ ಮುಸ್ಲಿಮರೆಲ್ಲರೂ ಝಕಾತ್ ನೀಡುವುದು ಕಡ್ಡಾಯವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳೇ ಮುಂತಾದ ಯಾರೂ ಅದರಿಂದ ಮುಕ್ತರಲ್ಲ. ಆದರೆ, ಅದಕ್ಕೆ ಹೋಲಿಸಿದಾಗ ‘ಜಿಝಿಯಾ’ದಲ್ಲಿ ಅನೇಕ ವಿನಾಯಿತಿ ಮತ್ತು ಸೌಲಭ್ಯಗಳಿವೆ.

ಮಹಿಳೆಯರು, ಮಕ್ಕಳು, ಕುರುಡರು, ಮುದುಕರು, ಮಾರಕ ರೋಗಿಗಳು, ಹುಚ್ಚರು, ಮಠದ ಸನ್ಯಾಸಿಯರು, ಪುರೋಹಿತರು ಮುಂತಾದವರಿಂದ ಜಿಝಿಯಾ ವಸೂಲು ಮಾಡಲಾಗುವುದಿಲ್ಲ. ಆದ್ದರಿಂದ ಜಿಝಿಯಾ ಮುಸ್ಲಿಮೇತರರೊಂದಿಗಿನ ಪಕ್ಷಪಾತವಲ್ಲ, ಬದಲಾಗಿ ಅವರಿಗೆ ಆರ್ಥಿಕವಾಗಿ ವಿನಾಯಿತಿ ದೊರೆಯುವ ಉಪಾಧಿಯಾಗಿದೆ.

ಒಮ್ಮೆ ಪ್ರವಾದಿಯವರ ದ್ವಿತೀಯ ಉತ್ತರಾಧಿಕಾರಿ ಉಮರ್ ಫಾರೂಕರು ಬೀದಿಯಲ್ಲಿ ಹೋಗುತ್ತಿದ್ದರು. ಆಗ ಓರ್ವ ಕುರುಡ ಮತ್ತು ದುರ್ಬಲರಾಗಿದ್ದ ಓರ್ವ ಮುದುಕರನ್ನು ಭೇಟಿಯಾದರು. ಉಮರ್‌ರು ಅವರ ಭುಜದ ಮೇಲೆ ಕೈಯಿರಿಸಿ ‘ನೀವು ಯಾರು?’ ಎಂದು ವಿಚಾರಿಸಿದರು. ‘ನಾನೋರ್ವ ಯಹೂದಿ’ ಎಂದು ಹೇಳಿದಾಗ ಅವರು ಪುನಃ ‘ನಿಮ್ಮ ಈ ಸ್ಥಿತಿಗೆ ಕಾರಣವೇನು?’ ಎಂದು ಪ್ರಶ್ನಿಸಿದರು.

“ವೃದ್ಧ ಮತ್ತು ದುರ್ಬಲನಾದ ನಾನು ಜಿಝಿಯಾ ನೀಡಬೇಕಾಗಿದೆ.” ಯಹೂದಿ ಹೇಳಿದರು. ಕೂಡಲೇ ಉಮರ್‌ರು ಆತನನ್ನು ತಮ್ಮ ವಾಸ ಸ್ಥಳಕ್ಕೆ ಕರೆದೊಯ್ದು ಸ್ವಲ್ಪ ಹಣ ನೀಡಿದರು. ಅನಂತರ ಆ ಕೂಡಲೇ ಕೋಶಾಧಿಕಾರಿಗಳಿಗೆ ಆ ವೃದ್ಧರ ಮೂಲಕ ಒಂದು ಸಂದೇಶ ಕಳುಹಿಸಿದರು. ಅದರಲ್ಲಿ ಹೀಗೆ ಆದೇಶಿಸಲಾಗಿತ್ತು. ಇವರನ್ನೂ ಇವರಂಥ ಇತರರನ್ನೂ ಗುರುತಿಸಿರಿ. ಅಲ್ಲಾಹನಾಣೆ! ಅವರ ಯೌವನವನ್ನು ನಾವು ಬಳಸಿ ವಾರ್ಧಕ್ಯದಲ್ಲಿ ಅವರನ್ನು ಬೀದಿ ಪಾಲುಗೊಳಿಸುವುದು ಸರ್ವಥಾ ನ್ಯಾಯವಲ್ಲ, ಝಕಾತ್‌ನ ಆದಾಯವು ಬಡವರು (ಫುಕರಾಅ್) ಮತ್ತು ದರಿದ್ರ(ಮಸಾಕೀನ್)ರ ಹಕ್ಕಾಗಿದೆ. ಫುಕರಾಅ್ ಗಳೆಂದರೆ ಮುಸ್ಲಿಮರಲ್ಲಿರುವ ಬಡವರು. ಇವರು ಗ್ರಂಥದವರಾಗಿರುವುದರಿಂದ ಮಸಾಕೀನ್ ನಲ್ಲಿ ಸೇರುತ್ತಾರೆ. ತರುವಾಯ ಉಮರ್‌ರು ಆ ವೃದ್ಧನನ್ನು ಜಿಝಿಯಾದ ಹೊರೆಯಿಂದ ಮುಕ್ತಗೊಳಿಸಿದರು.’ (ಅಬೂ ಯೂಸುಫ್: ಕಿತಾಬುಲ್ ಖರಾಜ್, ಪುಟ: 126 ನೋಡಿರಿ.)

‘ಜಿಝಿಯಾ’ ಝಕಾತ್‌ಗೆ ಪರ್ಯಾಯವಾಗಿರುವುದರಿಂದ ಯಾರಾದರೂ ಮುಸ್ಲಿಮರಂತೆಯೇ ಝಕಾತ್ ನೀಡಲು ಸ್ವಯಂ ಸನ್ನದ್ಧರಾದರೆ ಅವರನ್ನು ಇಸ್ಲಾಮಿ ರಾಷ್ಟ್ರವು ‘ಜಿಝಿಯಾ’ದಿಂದ ಮುಕ್ತಗೊಳಿಸುತ್ತದೆ. ಚರಿತ್ರೆಯಲ್ಲಿ ಅಂಥ ಅನೇಕ ಉದಾಹರಣೆಗಳಿವೆ. ಇಲ್ಲಿ ಒಂದು ಉದಾಹರಣೆಯನ್ನು ತಿಳಿಸುತ್ತೇನೆ. ಸರ್ ಥಾಮಸ್ ಅರ್ನಾಲ್ಡ್ ಬರೆದಿದ್ದಾರೆ: “…ಅವರೊಡನೆ (ತಗ್ಲಿಬ್ ಗೋತ್ರ) ಮುಸ್ಲಿಮೇತರ ಗೋತ್ರಗಳಿಗೆ ಒದಗಿಸುವ ಭದ್ರತೆಗೆ ಪ್ರತಿಯಾಗಿ ವಿಧಿಸುವ ತೆರಿಗೆ ಜಿಝಿಯ ಪಾವತಿಸುವಂತೆ ಅವರು (ಉಮರ್) ತಿಳಿಸಿದರು. ಆದರೆ, ಜಿಝಿಯಾ ಪಾವತಿಸುವುದನ್ನು ಅಪಮಾನವೆಂದು ಭಾವಿಸಿದ ತಗ್ಲಿಬ್ ಗೋತ್ರವು ತಮಗೆ ಮುಸ್ಲಿಮರಂತೆಯೇ ತೆರಿಗೆ (ಝಕಾತ್), ನೀಡಲು ಅನುಮತಿಸಬೇಕೆಂದು ವಿನಂತಿಸಿದರು. ಖಲೀಫರು ಅದಕ್ಕೆ ಅನುಮತಿ ನೀಡಿ, ಅವರು ಮುಸ್ಲಿಮರಂತೆಯೇ ಜಿಝಿಯಾದ ಇಮ್ಮಡಿ ಮೊತ್ತವನ್ನು ಬೊಕ್ಕಸಕ್ಕೆ ಪಾವತಿಸಿದರು.” (ಥೋಮಸ್‌ ಅರ್ನಾಳ್ಡ್: ಇಸ್ಲಾಮ್ ಪ್ರಚಾರ ಮತ್ತು ಪ್ರಸಾರ, ಪುಟ: 62)

ಜಿಝಿಯಾವನ್ನು ಯಾವ ಕಾರಣಕ್ಕೂ ಹೆಚ್ಚಿಸಬಾರದೆಂದು ಪ್ರವಾದಿಯವರು ಆದೇಶಿಸಿದ್ದರು. ಅವರು ಹೀಗೆ ಹೇಳಿದ್ದಾರೆ: “ಒಪ್ಪಂದಕ್ಕೆ ಬದ್ಧನಾಗಿರುವವನನ್ನು (ದಿಮ್ಮಿ) ಪೀಡಿಸುವ ಅಥವಾ ಅಮಿತ ತೆರಿಗೆ ವಿಧಿಸುವವರ ವಿರುದ್ಧ ಅಂತ್ಯ ದಿನದಲ್ಲಿ ನಾನು ವಾದಿಸುತ್ತೇನೆ.” (ಅಬೂ ಯೂಸುಫ್: ಕಿತಾಬುಲ್ ಖರಾಜ್, ಪುಟ: 71)

2, ಇಸ್ಲಾಮೀ ರಾಷ್ಟ್ರವು ಅಪೇಕ್ಷಿಸಿದಾಗ ಮುಸ್ಲಿಮ್ ಪೌರನು ಸೇನೆಗೆ ಸೇರುವುದು ಕಡ್ಡಾಯವಾಗಿದೆ. ಇದು ಅವರ ಧಾರ್ಮಿಕ ಹೊಣೆಯೂ ಆಗಿದೆ. ಒಂದು ಮೌಲ್ಯಾಧಾರಿತ ರಾಷ್ಟ್ರದ ಸಂರಕ್ಷಣೆಗಾಗಿ ಆ ಮೌಲ್ಯವನ್ನು ಅಂಗೀಕರಿಸದವರನ್ನು ನಿರ್ಬಂಧಿಸುವುದು ತರವಲ್ಲ ಆದ್ದರಿಂದ, ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪೌರರನ್ನು ಸೈನಿಕ ಸೇವೆಗಾಗಿ ಒತ್ತಾಯಿಸುವುದಿಲ್ಲ. ಅದೇ ವೇಳೆ ಅವರು ಸ್ವತಃ ಅಪೇಕ್ಷಿಸಿದರೆ ಸೇನೆಯಲ್ಲಿ ಅವಕಾಶ ನೀಡಲಾಗುತ್ತದೆ.

ಇಸ್ಲಾಮಿ ರಾಷ್ಟ್ರಕ್ಕೆ ಅದರ ಎಲ್ಲ ಪೌರರಿಗೂ ಭದ್ರತೆ ಒದಗಿಸುವ ಹೊಣೆಗಾರಿಕೆಯಿದೆ, ಆದ್ದರಿಂದ ಮುಸ್ಲಿಮರು ತಮ್ಮ ಮಾತ್ರವಲ್ಲ ಮುಸ್ಲಿಮೇತರ ಪ್ರಜೆಗಳ ಪ್ರಾಣ,
ಸೊತ್ತು-ವಿತ್ತ, ಮಾನಗಳ ರಕ್ಷಣೆಗಾಗಿಯೂ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಹೀಗೆ ಭದ್ರತೆ ಒದಗಿಸಲಿಕ್ಕಾಗಿ ಮತ್ತು ಸೈನಿಕ ಸೇವೆಯಿಂದ ವಿನಾಯಿತಿ ನೀಡಲಿಕ್ಕಾಗಿ ಮುಸ್ಲಿಮೇತರರಿಂದ ಜಿಝಿಯಾ ಸಂಗ್ರಹಿಸಲಾಗುತ್ತದೆ. ಕಾರಣವಶಾತ್ ಅವರಿಗೆ ಭದ್ರತೆ ಒದಗಿಸಲು ಅಸಾಧ್ಯವಾದರೆ ಜಿಝಿಯಾವನ್ನು ಮರಳಿಸಲಾಗುತ್ತದೆ. ಹಾಗೆಯೇ ಅವರು ಸ್ವತಃ ಸೇನೆಯಲ್ಲಿ ಸೇರಿದರೂ ಅವರಿಗೆ ಜಿಝಿಯಾ ಮನ್ನಾ ಮಾಡಲಾಗುತ್ತದೆ.

ಸರ್ ಥಾಮಸ್ ಅರ್ನಾಲ್ಡ್ ಹೀಗೆ ಬರೆದಿದ್ದಾರೆ. ಕೆಲವರು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿರುವಂತೆ, ಇದು ಮುಸ್ಲಿಮ್ ವಿಶ್ವಾಸವನ್ನು ಅಂಗೀಕರಿಸಲು ನಿರಾಕರಿಸಿದ್ದಕ್ಕೆ ದಂಡನೆಯಾಗಿ ಕ್ರೈಸ್ತರ ಮೇಲೆ ಹೇರಿದ ತೆರಿಗೆಯಲ್ಲ, ಅದನ್ನು ಎಲ್ಲ ಮುಸ್ಲಿಮೇತರ ಪೌರರೂ ತೆರಬೇಕು. ಧಾರ್ಮಿಕ ಕಾರಣಗಳಿಂದಾಗಿ ಅವರನ್ನು ಸೈನಿಕ ಸೇವೆಯಿಂದ ಮುಕ್ತಗೊಳಿಸಲಾಗಿತ್ತು. ಮುಸ್ಲಿಮರು ಒದಗಿಸಿದ ಭದ್ರತೆಗಾಗಿ ಅವರು ಜಿಝಿಯಾ ನೀಡಬೇಕಾಯಿತು. ಹೀರಾದ ನಿವಾಸಿಗಳು ಒಪ್ಪಂದದ ಪ್ರಕಾರ ತೆರಿಗೆಯನ್ನು ಪಾವತಿಸಿದಾಗ, ಅದು ಮರ್ದಕರಿಂದ (ಅವರು ಮುಸ್ಲಿಮರು ಅಥವಾ ಇತರರಾಗಿದ್ದರೂ) ರಕ್ಷಣೆ ಒದಗಿಸಲಿಕ್ಕಾಗಿ ವಸೂಲು ಮಾಡಲಾಗುತ್ತಿದೆ ಎಂದು ಮುಸ್ಲಿಮರಿಗೆ ಪ್ರತ್ಯೇಕವಾಗಿ ತಿಳಿಸಲಾಗಿತ್ತು. ಹೀರಾದ ಸಮೀಪ ಪ್ರದೇಶದ ಕೆಲವು ಗೋತ್ರಗಳೊಡನೆ ಒಪ್ಪಂದ ಮಾಡಿದಾಗ ಖಾಲಿದ್ ಹೀಗೆ ಸ್ಪಷ್ಟಪಡಿಸಿದ್ದರು: “ನಾವು ನಿಮಗೆ ರಕ್ಷಣೆ ಒದಗಿಸುವಾಗ ಜಿಝಿಯಾದಲ್ಲಿ ನಮಗೆ ಹಕ್ಕಿದೆ. ನಾವು ನಿಮ್ಮನ್ನು ಸಂರಕ್ಷಿಸದಿದ್ದರೆ ನಮಗೆ ಆ ಹಕ್ಕು ಇರುವುದಿಲ್ಲ!”

ಖಲೀಫ ಉಮರ್‌ರ ಕಾಲದಲ್ಲಿ ನಡೆದ ಒಂದು ಘಟನೆಯಿಂದ ಈ ರೀತಿಯ ಒಪ್ಪಂದಗಳ ಪಾಲನೆಯ ಬಗ್ಗೆ ಮುಸ್ಲಿಮರು ಎಷ್ಟೊಂದು ಕಟ್ಟೆಚ್ಚರ ವಹಿಸುತ್ತಿದ್ದರೆಂದು ವ್ಯಕ್ತವಾಗುತ್ತದೆ. ಹರ್ಕ್ಯುಲೆಸ್ ಚಕ್ರವರ್ತಿಯು ಮುನ್ನುಗ್ಗುತ್ತಿರುವ ಮುಸ್ಲಿಮ್ ಸೇನೆಯನ್ನು ಬಗ್ಗುಬಡಿಯಲಿಕ್ಕಾಗಿ ಒಂದು ದೊಡ್ಡ ಸೇನೆಯನ್ನು ಸಜ್ಜುಗೊಳಿಸಿದರು. ಆದ್ದರಿಂದ, ಮುಸ್ಲಿಮರು ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಅವರ ವಿರುದ್ಧ ಬಳಸಬೇಕಾಯಿತು. ಇದರಿಂದಾಗಿ ಅರಬ್ ಸೇನಾ ನಾಯಕ ಅಬೂ ಉಬೈದರು, ಸಿರಿಯನ್ ನಗರಗಳ ಮುಸ್ಲಿಮ್ ರಾಜ್ಯಪಾಲರುಗಳಿಗೆ, ಅವರು ಈಗಾಗಲೇ ಸಂಗ್ರಹಿಸಿರುವ ಜಿಝಿಯಾವನ್ನು ಹಿಂತಿರುಗಿಸುವಂತೆ ಆದೇಶಿಸಿ ಪತ್ರ ಬರೆದರು. ಮುಸ್ಲಿಮೇತರ ಪ್ರಜೆಗಳಿಗೆ ಹೀಗೆ ತಿಳಿಸಬೇಕೆಂದೂ ಸೂಚಿಸಿದರು. “ನಿಮ್ಮಿಂದ ಸ್ವೀಕರಿಸಿರುವ ಹಣವನ್ನು ನಿಮಗೆ ಮರಳಿಸುತ್ತಿದ್ದೇವೆ. ನಮ್ಮ ವಿರುದ್ಧ ಒಂದು ಬೃಹತ್ ಸೇನೆಯು ಆಗಮಿಸುತ್ತಿದೆಯೆಂಬ ಸುದ್ದಿಯಿದೆ. ನಿಮ್ಮನ್ನು ಸಂರಕ್ಷಿಸುವವೆಂದು ನಾವು ಒಪ್ಪಂದ ಮಾಡಿದ್ದೆವು.” ಈಗ ಅದು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ, ನಿಮ್ಮಿಂದ ಪಡೆದುದೆಲ್ಲವನ್ನೂ ನಾವು ಹಿಂತಿರುಗಿಸುತ್ತಿದ್ದೇವೆ. ಜಯಿಸಿದರೆ ಪುನಃ ನಾವು ಒಪ್ಪಂದದಂತೆ ವರ್ತಿಸುವ ಹೊಣೆ ವಹಿಸುತ್ತೇವೆ.’ ಈ ಆಜ್ಞೆಯಂತೆ ಬೊಕ್ಕಸದಿಂದ ಹೇರಳ ಹಣವನ್ನು ವಿತರಿಸಲಾಯಿತು. ಕ್ರೈಸ್ತರು, ಮುಸ್ಲಿಮರ ವಿಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು. “ದೇವನು ಪುನಃ ನಿಮಗೆ ನಮ್ಮನ್ನು ಆಳುವ ಸಾಮರ್ಥ್ಯವನ್ನು ನೀಡಲಿ. ನೀವು ರೋಮನರನ್ನು ಸೋಲಿಸುವಂತಾಗಲಿ. ಒಂದು ವೇಳೆ ಅವರ ಆಳ್ವಿಕೆಯಿರುತ್ತಿದ್ದರೆ ಅವರು ನಮಗೆ ಏನನ್ನೂ
ಹಿಂತಿರುಗಿಸುತ್ತಿರಲಿಲ್ಲ ಮಾತ್ರವಲ್ಲ ನಮ್ಮ ಬಳಿಯಲ್ಲಿರುವುದನ್ನೂ ದೋಚುತ್ತಿದ್ದರು.”

ದೇಹ ಬಲವಿರುವ ಪುರುಷರಿಗೆ ಜಿಝಿಯಾ ಅನ್ವಯವಾಗುತ್ತಿತ್ತೆಂಬುದನ್ನು ನಾವು ನೋಡಿದೆವು. ಇದು ಸೈನಿಕ ಸೇವೆಗೆ ಪರ್ಯಾಯವಾಗಿತ್ತು. ಸೇನೆಯಲ್ಲಿ ಸೇರಿದ ಕೈಸ್ತರಿಗೆ ಜಿಝಿಯಾವನ್ನು ಮನ್ನಾ ಮಾಡುತ್ತಿದ್ದರು. ಅಂಟಾಕಿಯಾ ಪರಿಸರದಲ್ಲಿದ್ದ ಜುರ್ಜಿಯಾ ಗೋತ್ರವು ಜಿಝಿಯಾ ನೀಡುತ್ತಿರಲಿಲ್ಲ. ಅವರು ಮುಸ್ಲಿಮರ ಜತೆಗೂಡಿ ಯುದ್ಧ ಮಾಡುವೆವೆಂದು ಒಪ್ಪಂದ ಮಾಡಿಕೊಂಡಿದ್ದರು. ಜಿಝಿಯಾ ಕೇಳಬಾರದು ಮತ್ತು ಸಮರಾರ್ಜಿತ ಸಂಪತ್ತಿನಲ್ಲಿ ಅವರಿಗೂ ಪಾಲು ನೀಡಬೇಕೆಂದು ಒಪ್ಪಂದದಲ್ಲಿ ಸೂಚಿಸಲಾಗಿತ್ತು. ಅರಬ್ ಸೇನೆಯು ಹಿಜರಿ 22ರಲ್ಲಿ ಪರ್ಶಿಯದ ಉತ್ತರ ಭಾಗಕ್ಕೆ ತಲಪಿದಾಗ ಗಡಿಯ ಒಂದು ಗೋತ್ರದೊಡನೆ ಮುಸ್ಲಿಮರು ಹೀಗೆಯೇ ಒಪ್ಪಂದ ಮಾಡಿದ್ದರು.

‘ಟರ್ಕಿ ಆಡಳಿತ ಕಾಲದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ರೈಸ್ತರು ಜಿಝಿಯಾ ನೀಡುತ್ತಿರಲಿಲ್ಲವೆಂದು ಕಂಡು ಬರುತ್ತದೆ. ಕೋರಿಂಟ್ ಜಲಸಂಧಿಗೆ ಸಾಗುವ ಸಿಟ್ರೋನ್, ಗರಾನಿಯ ಕಣಿವೆಯನ್ನು ಕಾಯುವುದಕ್ಕೆ ಸಶಸ್ತ್ರ ತಂಡವನ್ನು ನೀಡುವೆವೆಂಬ ಶರ್ತದಲ್ಲಿ ಆಲ್ಬೇನಿಯನ್ ಕ್ರೈಸ್ತ ವರ್ಗದ ಮೆಗಾರಿಗಳನ್ನು ಟರ್ಕಿಗಳು ಜಿಝಿಯಾದಿಂದ ಮುಕ್ತಗೊಳಿಸಿದ್ದರು. ಟರ್ಕಿ ಸೇನೆಯು ಸಾಗುವ ರಸ್ತೆ, ಸೇತುವೆಗಳನ್ನು ಸರಿಪಡಿಸುತ್ತಿದ್ದ ಕ್ರೈಸ್ತ ತಂಡಕ್ಕೆ ಜಿಝಿಯಾದಿಂದ ವಿನಾಯಿತಿ ನೀಡಲಾಗಿತ್ತು ಮಾತ್ರವಲ್ಲ, ಕಂದಾಯ ಪಡೆಯದ ಜಮೀನು ಹಂಚಿಕೊಡಲಾಗಿತ್ತು. ಹೈಬ್ರಾದ ಕೈಸ್ತರು ಸುಲ್ತಾನ್‌ರಿಗೆ ಜಿಝಿಯಾ ನೀಡುತ್ತಿರಲಿಲ್ಲ. ಅದರ ಬದಲಿಗೆ ಅವರು 250 ದೃಢಕಾಯ ನಾವಿಕರನ್ನು ಟರ್ಕಿ ಸೇನೆಗೆ ನೀಡಿದರು.

‘ಆರ್ಮಟೋಲಿ’ ಎಂದು ಕರೆಯಲ್ಪಡುವ ದಕ್ಷಿಣ ರುಮಾನಿಯವರು 16-17ನೆಯ ಶತಮಾನಗಳಲ್ಲಿ ಟರ್ಕಿ ಸೇನೆಯ ಪ್ರಧಾನ ಅಂಗವಾಗಿದ್ದರು. ಸ್ಕೂಟಾರಿಕ್‌ನ ಉತ್ತರದ ಪರ್ವತ ಶ್ರೇಣಿಗಳಲ್ಲಿ ವಾಸವಾಗಿರುವ ಮಿರ್ದಿಯರೆಂಬ ಆಲ್ಬೇನಿಯನ್ ಕಥೋಲಿಕರನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿತ್ತು. ಅವರು ಯುದ್ಧ ವೇಳೆಯಲ್ಲಿ ಸಶಸ್ತ್ರ ತಂಡವೊಂದನ್ನು ನೀಡುವ ವಾಗ್ದಾನವಿತ್ತಿದ್ದರು. ಹಾಗೆಯೇ ಗ್ರೀಕ್ ಕೈಸ್ತರನ್ನು ಜಿಝಿಯಾದಿಂದ ಮುಕ್ತಗೊಳಿಸಲಾಯಿತು. ಕಾನ್ಸ್‌ಟೆಂಟಿನೋಪಲ್‌ಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕಲ್ಲಿನ ನಾಲೆಗಳನ್ನು ಅವರು ಸಂರಕ್ಷಿಸುತ್ತಿದ್ದರು. ನಗರದ ಸಿಡಿಮದ್ದು ಸ್ಥಾವರವನ್ನು ಕಾಯುತ್ತಿದ್ದವರಿಗೂ ಕರ ವಿನಾಯಿತಿಯಿತ್ತು. ಆದರೆ, ಸೈನಿಕ ಸೇವೆಗಳಿಂದ ಮುಕ್ತಗೊಳಿಸಿದ್ದ ಈಜಿಪ್ಟ್‌ನ ಗ್ರಾಮೀಣ ರೈತರಿಂದ, ಕ್ರೈಸ್ತರಂತೆಯೇ ಕರ ವಸೂಲು ಮಾಡಲಾಯಿತು.’ (ಥೋಮಸ್ ಅರ್ನಾಳ್ಡ್: ಇಸ್ಲಾಮ್ ಪ್ರಚಾರ ಮತ್ತು ಪ್ರಸಾರ, ಪುಟ: 73-76)

“ಪ್ರವಾದಿಯವರ(ಸ) ಕಾಲದಲ್ಲಿ ಮದೀನದ ಮುಸ್ಲಿಮೇತರ ವಿಭಾಗಗಳು ರಾಷ್ಟ್ರದ ರಕ್ಷಣಾ ಸೇವೆಯಲ್ಲಿ ಭಾಗಿಯಾಗಿದ್ದುದರಿಂದ ಜಿಝಿಯಾ ವಸೂಲು ಮಾಡುತ್ತಿರಲಿಲ್ಲ. ಹಾಗೆಯೇ ಕೈರೋದಿಂದ ಕೆಂಪು ಸಮುದ್ರದ ವರೆಗೆ ಕಾಲುವೆಗಾಗಿ ಸ್ಥಳ ನಿಗದಿ ಪಡಿಸಲು ನೆರವಾದ ಮುಸ್ಲಿಮೇತರರಿಗೆ ಖಲೀಫ ಉಮರ್ ಫಾರೂಕ್‌ರು ಕರ ಮನ್ನಾ ಮಾಡಿದ್ದರು.” (ಇಮಾಮ್ ಸುಯೂತಿ: ಹುಸ್ನುಲ್ ಮುಹಾದರ ಫೀ ಅಖ್ಬಾರಿ ಮಿಸ್ರ್ ವಲ್ ಕಾಹಿರಾ:)

ಸುಲ್ತಾನ್ ಸಲಾಹುದ್ದೀನ್‌ ರು ಸಿರಿಯಾದಿಂದ ಹಿಂದೆ ಸರಿಯಲು ನಿರ್ಬಂಧಿತರಾದಾಗ, ಊರವರಿಂದ ಸಂಗ್ರಹಿಸಿದ್ದ ಜಿಝಿಯಾವನ್ನು ವಾಪಾಸು ಕೊಟ್ಟಿದ್ದರು.” (ಉದ್ಧರಣೆ: Do: Roy Choudhary)

ಸಂಕ್ಷಿಪ್ತದಲ್ಲಿ, ಜಿಝಿಯಾವು ಧಾರ್ಮಿಕ ತೆರಿಗೆಯಲ್ಲ. ಆಗಿಯೂ ಇರಲಿಲ್ಲ. ಒಂದು ವೇಳೆ ಅದು ಧಾರ್ಮಿಕ ತೆರಿಗೆಯಾಗಿರುತ್ತಿದ್ದರೆ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಪುರೋಹಿತರನ್ನು ಅದರಿಂದ ಮುಕ್ತಗೊಳಿಸುತ್ತಿರಲಿಲ್ಲ. ವಸ್ತುತಃ ಜಿಝಿಯಾವು ಯುದ್ಧ ತೆರಿಗೆಯಾಗಿದೆ. ಶಕ್ತಿ ಸಾಮರ್ಥ್ಯವಿದ್ದರೂ ಸೇನೆಯಲ್ಲಿ ಸೇರಲು ಸಿದ್ಧವಿಲ್ಲದವರು ಅದನ್ನು ನೀಡಬೇಕು. ಸೈನಿಕ ಸೇವೆಯನ್ನು ಕಡ್ಡಾಯಗೊಳಿಸಿದ ಸಂದರ್ಭಗಳಲ್ಲಿ ಅದನ್ನು ಕೈಬಿಡಲಾಗುತ್ತಿತ್ತು. ಹಾಗೆಯೇ ಅದು ಪ್ರಾಣ ಸೊತ್ತು ವಿತ್ತಗಳಿಗೆ ನೀಡಿದ ಭದ್ರತೆಯ ಪ್ರತಿಫಲವೂ ಆಗಿತ್ತು. ಅದೇ ವೇಳೆ ಇಸ್ಲಾಮಿ ರಾಷ್ಟ್ರದ ಮುಸ್ಲಿಮ್ ಪೌರರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದರೂ ಸರಕಾರಕ್ಕೆ ಝಕಾತ್ ನೀಡಲೇಬೇಕು. ಎಲ್ಲ ಕಾಲದಲ್ಲಿಯೂ ಝಕಾತ್‌ನ ಮೊತ್ತವು ಜಿಝಿಯಾಕ್ಕಿಂತ ಬಹಳಷ್ಟು ಅಧಿಕವಾಗಿತ್ತೆಂಬ ವಾಸ್ತವಿಕತೆಯನ್ನು ಇಲ್ಲಿ ಎತ್ತಿ ಹೇಳಬೇಕಾಗಿದೆ. ಆದ್ದರಿಂದ, ಇಸ್ಲಾಮೀ ರಾಷ್ಟ್ರದಲ್ಲಿ ಜಿಝಿಯಾ ನೀಡುವ ಮುಸ್ಲಿಮೇತರ ಪೌರರು ಮುಸ್ಲಿಮರಿಗಿಂತ ಹೆಚ್ಚಿನ ಸೌಲಭ್ಯ ಮತ್ತು ರಿಯಾಯಿತಿಗಳನ್ನು ಅನುಭವಿಸುತ್ತಿದ್ದರು.

  • (ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ)
SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *