Home / ಪ್ರಶ್ನೋತ್ತರ / ಆಧುನಿಕ ಮಾನವನಿಗೆ 6ನೇ ಶತಮಾನದ ಧರ್ಮವೇ?

ಆಧುನಿಕ ಮಾನವನಿಗೆ 6ನೇ ಶತಮಾನದ ಧರ್ಮವೇ?

ಪ್ರವಾದಿಗಳು ಧರ್ಮದ ಸ್ಥಾಪಕರಲ್ಲ:

ಯೇಸು ದೇವಪುತ್ರನೆಂದು ಕ್ರೈಸ್ತರು, ಮುಹಮ್ಮದ್ ಅಂತಿಮ ಪ್ರವಾದಿಯೆಂದು ನೀವೂ ವಾದಿಸುತ್ತೀರಿ? ಇದು ತಮ್ಮ ಧರ್ಮ ಸಂಸ್ಥಾಪಕರನ್ನು ಮಹಾನ್ ವ್ಯಕ್ತಿಗಳಾಗಿಸುವ ಒಂದು ಅವಕಾಶವಾದವಲ್ಲವೇ?

ಇಸ್ಲಾಮ್ ಮತ್ತು ಮುಸ್ಲಿಮ್‌ ರ ಕುರಿತು ಇರುವ ಗಂಭೀರವಾದ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ. ಮುಹಮ್ಮದ್(ಸ) ನಮ್ಮೆಲ್ಲರ ಪ್ರವಾದಿಯಾಗಿದ್ದಾರೆ. ಅವರು ಯಾವುದೇ ಧರ್ಮಿಯರ, ಸಮುದಾಯಕ್ಕೆ ಸೀಮಿತವಾದ ಪ್ರವಾದಿಯಲ್ಲ, ಸಕಲ ಲೋಕದ ಮಾನವ ಕುಲಕ್ಕಾಗಿ ನಿಯೋಜಿತರಾದ ಪ್ರವಾದಿಯಗಿದ್ದಾರೆ. ಅವರ ಕುರಿತು ಪವಿತ್ರ ಕುರ್ ಆನ್ ಹೇಳುತ್ತದೆ. ‘ಪೈಗಂಬರರೇ ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.’ (ಪವಿತ್ರ ಕುರ್‌ಆನ್ 21:107)

ಅದೇ ವೇಳೆ ಈ ಲೋಕಕ್ಕೆ ವಿಶ್ವದ ವಿವಿಧ ಭಾಗಗಳಲ್ಲಿ, ಹಲವು ಕಾಲಗಳಲ್ಲಿ ಆಗಮಿಸಿದ ಎಲ್ಲಾ ಪ್ರವಾದಿಗಳನ್ನು ತಮ್ಮ ಪ್ರವಾದಿಯೆಂದು ಅಂಗೀಕರಿಸುವುದು ಮುಸ್ಲಿಮರಿಗೆ ಕಡ್ಡಾಯವಾಗಿದೆ. ಅವರಲ್ಲಿ ಯಾವುದೇ ಭೇದಭಾವ ತೋರಿಸಬಾರದು. ಮುಸ್ಲಿಮ್‌ ರು ಹೀಗೆ ಹೇಳಲು ನಿರ್ಬಂಧಿತರಾಗಿದ್ದಾರೆ: ‘ಹೇಳಿರಿ ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ, ಇಬ್ರಾಹೀಮ್, ಇಸ್ಮಾಯೀಲ್, ಇಸ್ಟಾಕ್, ಯಅಕೂಬ್ ಮತ್ತು ಯಅಕೂಬರ ಸಂತತಿಗಳ ಮೇಲೆ ಅವತೀರ್ಣಗೊಳಿಸಲ್ಪಟ್ಟ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ಕಡೆಯಿಂದ ನೀಡಲ್ಪಟ್ಟವುಗಳ ಮೇಲೂ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ಭೇದವೆನಿಸುವುದಿಲ್ಲ ಮತ್ತು ಅಲ್ಲಾಹನ ಆಜ್ಞಾಪಾಲಕ(ಮುಸ್ಲಿಮರು)ರಾಗಿರುತ್ತೇವೆ.’ (ಪವಿತ್ರ ಕುರ್ ಆನ್ 3:84)

‘ಸಂದೇಶವಾಹಕರು ತನ್ನ ಪ್ರಭುವಿನ ವತಿಯಿಂದ ಅವತೀರ್ಣಗೊಂಡುದರ ಮೇಲೆ ವಿಶ್ವಾಸವಿರಿಸಿದ್ದಾರೆ ಮತ್ತು ಈ ಸಂದೇಶವಾಹಕರ ಮೇಲೆ ವಿಶ್ವಾಸವಿಡುವವರು ಸಹ ಈ ಬೋಧನೆಯನ್ನು ಹೃತೂರ್ವಕ ಸ್ವೀಕರಿಸಿದ್ದಾರೆ. ಇವರೆಲ್ಲರೂ ಅಲ್ಲಾಹನಲ್ಲಿಯೂ ಅವನ ದೇವಚರರಲ್ಲಿಯೂ ಅವನ ದಿವ್ಯಗ್ರಂಥಗಳಲ್ಲೂ ಸಂದೇಶವಾಹಕರಲ್ಲೂ ವಿಶ್ವಾಸವಿರಿಸುತ್ತಾರೆ.

”ನಾವು ಅಲ್ಲಾಹನ ಸಂದೇಶವಾಹಕರ ನಡುವೆ ಯಾವ ತಾರತಮ್ಯವನ್ನಿರಿಸುವುದಿಲ್ಲ, ನಾವು ಆಜ್ಞೆಯನ್ನು ಆಲಿಸಿದೆವು ಮತ್ತು ಅನುಸರಣೆಯನ್ನು ಸ್ವೀಕರಿಸಿದೆವು. ನಮ್ಮ ಪ್ರಭೂ, ನಾವು ನಿನ್ನಿಂದ ಪಾಪ ವಿಮೋಚನೆಯನ್ನು ಬಯಸುತ್ತೇವೆ ಮತ್ತು ನಮಗೆ ನಿನ್ನ ಕಡೆಗೆ ಮರಳಲಿಕ್ಕಿದೆ” ಎಂದು ಅವರೆನ್ನುತ್ತಾರೆ. (ಪವಿತ್ರ ಕುರ್ ಆನ್ 2:285)

ಪ್ರವಾದಿಗಳು ಧರ್ಮಸ್ಥಾಪಕರಲ್ಲವೆಂದೂ, ದೇವನ ಸಂದೇಶವನ್ನು ಮಾನವ ಕುಲಕ್ಕೆ ತಲುಪಿಸುವ ಸಂದೇಶವಾಹಕರು ಮಾತ್ರವೆಂದು ಪವಿತ್ರ ಕು‌ರ್ ಆನ್‌ನ ಈ ವಚನಗಳು ಸ್ಪಷ್ಟಪಡಿಸುತ್ತದೆ. ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಇಸ್ಲಾಮ್ ಅವರಿಂದ ಆರಂಭವಾಗಿಲ್ಲ. ಆದು ಆದಿಮಾನವನಿಂದ ಆರಂಭಿಸಿ, ಲೋಕಾಂತ್ಯದವರೆಗಿನ ಮನುಷ್ಯರಿಗೆ ದೇವನು ನೀಡಿದ ಜೀವನ ವ್ಯವಸ್ಥೆ. ಈ ಜೀವನ ವ್ಯವಸ್ಥೆಯನ್ನು ಜನರಿಗೆ ತಲುಪಿಸಲು ಪ್ರವಾದಿಗಳನ್ನು ನೇಮಿಸಲಾಗಿತ್ತು. ಅವರು ದೇವಪುತ್ರರೋ, ದೇವನ ಅವತಾರವೋ ಆಗಿರಲಿಲ್ಲ. ದೇವನ ವತಿಯಿಂದಲೇ ಮನುಷ್ಯರೊಳಗಿಂದ ನಿಯುಕ್ತರಾದ ಸಂದೇಶವಾಹಕರು ಮಾತ್ರ. ಭೂಮಿಯಲ್ಲಿ ಜನವಾಸ ಆರಂಭವಾದಂದಿನಿಂದ ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ಕಾಲಗಳಲ್ಲಿ ಇಂತಹ ಲಕ್ಷಾಂತರ ಸಂದೇಶವಾಹಕರು ಆಗಮಿಸಿದ್ದರು. ಅವರಲ್ಲಿ ಕೊನೆಯವರು ಪ್ರವಾದಿ ಮುಹಮ್ಮದ್ (ಸ) ಆಗಿದ್ದಾರೆ.

ಈಗ ಸಂದೇಶವಾಹಕರು ಏಕೆ ಬರುವುದಿಲ್ಲ?

ಪ್ರವಾದಿ ಮುಹಮ್ಮದ್ ದೇವನ ಅಂತಿಮ ಪ್ರವಾದಿಯಾಗಲು ಕಾರಣವೇನು? ದೈವಿಕ ಮಾರ್ಗದರ್ಶನ ಈಗಲೂ ಅಗತ್ಯವಿಲ್ಲವೇ? ಹಾಗಿದ್ದರೆ ಈಗ ಸಂದೇಶವಾಹಕರನ್ನು ನೇಮಿಸದಿರಲು ಕಾರಣವೇನು?

ಮನುಷ್ಯರ ಮಾರ್ಗದರ್ಶನಕ್ಕಾಗಿ ಪ್ರವಾದಿಗಳನ್ನು ನಿಯೋಗಿಸಲಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ರಿಗಿಂತ ಮೊದಲು ಆಗಮಿಸಿದ ಪ್ರವಾದಿಗಳಿಗೆ ದೊರೆತ ದೇವಸಂದೇಶವು ಕೆಲವು ದೇಶ ಹಾಗೂ ಕಾಲಗಳಿಗೆ ಸೀಮಿತವಾಗಿತ್ತು. ವಿಶ್ವದಾದ್ಯಂತ ಆ ಸಂದೇಶಗಳ ಪ್ರಚಾರ ಹಾಗೂ ಸಂರಕ್ಷಣೆ ಅಸಾಧ್ಯವೆಂಬುದು ಕಾರಣವಾಗಿರಬಹುದು. ಏನಿದ್ದರೂ ಅವರಿಂದ ಸಂದೇಶವು ಮಾನವ ಹಸ್ತಕ್ಷೇಪವಿಲ್ಲದೆ ಎಲ್ಲಿಯೂ ಉಳಿದಿಲ್ಲ. ಆದರೆ ಹದಿನಾಲ್ಕು ಶತಮಾನಗಳ ಹಿಂದೆ ಮುಹಮ್ಮದ್ (ಸ)ರಿಗೆ ಅವತೀರ್ಣಗೊಂಡ ಕುರ್‌ಆನ್ ಸರ್ವ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಲು ಪರ್ಯಾಪ್ತವಾಗಿದೆ. ಅಂದು ಅದು ವಿಶ್ವದೆಲ್ಲೆಡ ತಲುಪುವಂತೆ ಮಾನವ ನಾಗರಿಕತೆ ವಿಕಾಸಗೊಂಡಿತ್ತು. ಪ್ರವಾದಿಗಳ ನಿಯೋಗದ ಕೆಲವೇ ವರ್ಷಗಳಲ್ಲಿ ಅಂದಿನ ಪ್ರಸಿದ್ಧವಾದ ಎಲ್ಲ ದೇಶಗಳಲ್ಲೂ ಕುರ್‌ಆನ್‌ನ ಸಂದೇಶ ತಲುಪಿದ್ದು ಪ್ರಚಾರ ಪಡೆದಿದ್ದವು. ಕುರ್‌ ಆನ್ ಮಾನವನ ಎಲ್ಲಾ ರೀತಿಯ ಹಸ್ತಕ್ಷೇಪದಿಂದ ಮುಕ್ತವಾಗಿ ಮೂಲ ರೀತಿಯಲ್ಲಿ ಉಳಿದುಕೊಂಡಿದೆ. ಅಂತಿಮ ದಿನದವರೆಗೂ ಅದು ಅದೇ ರೀತಿ ಉಳಿಯುತ್ತದೆ. ದೇವಗ್ರಂಥವಾದ ಕುರ್‌ಅನ್‌ನಲ್ಲಿ ಒಂದಕ್ಷರವೂ ಬದಲಾವಣೆಗೊಂಡಿಲ್ಲ. ಅದರ ಸಂರಕ್ಷಣೆಯನ್ನು ಸೃಷ್ಟಿಕರ್ತನೇ ವಹಿಸಿಕೊಂಡಿದ್ದಾನೆ. ಅಲ್ಲಾಹನು ವಾಗ್ದಾನ ಮಾಡುತ್ತಾನೆ: ‘ಈ ಉಪದೇಶ’ವನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ. (ಪವಿತ್ರ ಕುರ್ ಆನ್15:9)

ಮಾನವರಿಗೆ ನೀಡಲಾದ ದೇವಸಂದೇಶ ಪವಿತ್ರ ಕುರ್‌ ಆನ್ ಮತ್ತು ಅದರ ವ್ಯಾಖ್ಯಾನವಾದ ಪ್ರವಾದಿ ಚರ್ಯೆಗಳಲ್ಲಿ ಭದ್ರವಾಗಿರುವಾಗ ಹೊಸ ಮಾರ್ಗದರ್ಶನದ ಅಥವಾ ಪ್ರವಾದಿಯ ಅಗತ್ಯವಿಲ್ಲ. ಆದ್ದರಿಂದಲೇ ಕಳೆದ ಹದಿನಾಲ್ಕು ಶತಮಾನಗಳಿಂದ ಹೊಸ ದೈವಿಕ ಗ್ರಂಥವೋ, ದೇವ ಸಂದೇಶವಾಹಕರೋ ಬಂದಿಲ್ಲ. ಇನ್ನು ಬರುವ ಸಾಧ್ಯತೆಯೂ ಇಲ್ಲ. ಈ ವಿಷಯವನ್ನು ಕುರ್ ಆನ್ ಸ್ಪಷ್ಟಪಡಿಸಿದೆ: ‘ಜನರೇ, ಮುಹಮ್ಮದ್ ನಿಮ್ಮ ಪರುಷರಲ್ಲಿ ಯಾರ ತಂದೆಯೂ ಅಲ್ಲ, ನಿಜವಾಗಿ ಅವರು ಅಲ್ಲಾಹನ ಪ್ರವಾದಿಯೂ ಪ್ರವಾದಿಗಳಲ್ಲಿ ಕೊನೆಯವರೂ ಆಗಿದ್ದಾರೆ. ಅಲ್ಲಾಹನು ಸರ್ವವನ್ನೂ ಅರಿಯುವನಾಗಿದ್ದಾನೆ.’ (ಪವಿತ್ರ ಕುರ್ ಆನ್ 32:40)

ಆರನೇ ಶತಮಾನದ ಧರ್ಮ!

ಹದಿನಾಲ್ಕು ಶತಮಾನ ಕಳೆಯುವಾಗ ಜಗತ್ತು ಊಹಿಸಲಸಾಧ್ಯ ರೀತಿಯಲ್ಲಿ ಬದಲಾಯಿತು. ಆಧುನಿಕತೆಯ ಉತ್ತುಂಗದಲ್ಲಿರುವ ಈ ದಿನಗಳಲ್ಲಿ 6ನೇ ಶತಮಾನದ ಮತದೊಂದಿಗೆ ಸಾಗುವುದು ಮೂರ್ಖತನವಲ್ಲವೇ?

ಕಾಲ ಬದಲಾಗಿದೆ ಎಂಬ ವಿಷಯ ನಿಜ, ಅದರೊಂದಿಗೆ ಸ್ವರೂಪವೂ ಬದಲಾಗಿದೆ. ಮನುಷ್ಯನು ಬಹಳ ಪ್ರಗತಿ ಸಾಧಿಸಿದ್ದಾನೆ. ಆಧುನಿಕ ತಂತ್ರಜ್ಞಾನಗಳು ಜಗತ್ತನ್ನೇ ಬದಲಿಸಿದೆ. ಜೀವನ ಸೌಕರ್ಯಗಳು ಹೆಚ್ಚಿದವು. ನಾಗರೀಕತೆ ನಿರ್ಣಾಯಕ ಹಂತ ತಲುಪಿದೆ. ಆದರೆ ಮನುಷ್ಯರಲ್ಲಿ ಇವುಗಳು ಮೌಲ್ಯಯುತವಾದ ಬದಲಾವಣೆಗಳನ್ನು ಉಂಟು ಮಾಡಿದೆಯೇ? ನಮ್ಮ ವಿಚಾರ, ಆಚಾರ, ಆರಾಧನಾ ರೀತಿಗಳು,ಸಂಪ್ರದಾಯಗಳು ಗುಣನಡತೆ ಸ್ವಭಾವಗಳನ್ನು ಅವು ಅಕರ್ಷಿಸಿದೆಯೇ? ‘ಇಲ್ಲ” ಎಂದು ಧೈರ್ಯವಾಗಿ ಹೇಳಬಹುದು. ಸಾವಿರಾರು ವರ್ಷಗಳ ಹಿಂದೆ ನಮ್ಮ ಸಮಾಜ ಮೂಢನಂಬಿಕೆಯಲ್ಲಿ ಮುಳುಗಿತ್ತು. ಅದೇ ಪರಿಸ್ಥಿತಿ ಆಧುನಿಕ ಯುಗದಲ್ಲೂ ಮುಂದುವರಿದಿದೆ. ಅಂದಿನಂತೆ ಇಂದೂ ಮನುಷ್ಯರು ನಿರ್ಜೀವ ವಸ್ತುಗಳನ್ನು ಪೂಜಿಸುತ್ತಿದ್ದಾರೆ. ಮೋಸ, ವಂಚನೆ, ಕೊಲೆ, ದರೋಡೆ ಹಿಂದಿನಂತೆಯೇ ಸಾಗುತ್ತಿದೆ. ಮದ್ಯಪಾನದಲ್ಲೂ ಬದಲಾವಣೆಯಾಗಿಲ್ಲ, ಲೈಂಗಿಕ ಅರಾಜಕತೆ ಕಡಿಮೆಯಾಗಿಲ್ಲ. ಹೆಚ್ಚೇಕೆ ಆರನೇ ಶತಮಾನದಲ್ಲಿ ಕೆಲವು ಅರಬ್ ಗೋತ್ರಗಳು ಮಾಡುತ್ತಿದ್ದಂತೆ ಹೆಣ್ಣು ಮಗುವನ್ನು ಆಧುನಿಕ ಮಾನವನೂ ಕೊಲ್ಲುತ್ತಿದ್ದಾನೆ. ಅಂದು ಒಂದೆರಡು ಸಂಖ್ಯೆಯಲ್ಲಿದ್ದರೆ ಇಂದು ಲಕ್ಷ ಕೋಟಿಗಳಷ್ಟು ನಡೆಯುತ್ತಿದೆ. ವೈದ್ಯಕೀಯ ರಂಗದ ಪ್ರಗತಿಯು ಅದನ್ನು ಸುಲಭಗೊಳಿಸಿದೆ, ನಾವು ಅಂಧಕಾರಯುಗವೆಂದು ಆರೋಪಿಸುವ ಕಾಲದಲ್ಲಿ ನಡೆದಂತೆ ಇಂದೂ ಮನುಷ್ಯನು ಮನುಷ್ಯನನ್ನು ಕ್ರೂರವಾಗಿ ಕೊಲ್ಲುತ್ತಿದ್ದಾನೆ. ಅಂದು ಚೂಪಾದ ಕಲ್ಲುಗಳಿಂದ ಈ ಕೃತ್ಯ ನಡೆಸುತ್ತಿದ್ದರೆ, ಇಂದು ತಂತ್ರಜ್ಞಾನದಿಂದ, ಬಾಂಬುಗಳಿಂದ’ ಎಂಬ ವ್ಯತ್ಯಾಸ ಮಾತ್ರವಿದೆ. ಇದರಿಂದ ಕೊಲೆಯ ಸಂಖ್ಯೆಯೂ ಹೆಚ್ಚಿದೆ.

ಒಟ್ಟಿನಲ್ಲಿ ಜಗತ್ತಿನಲ್ಲಿ ಸಂಭವಿಸಿದ ಬದಲಾವಣೆಗಳು ಬಾಹ್ಯಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಆಂತರಿಕವಾಗಿ ಯಾವುದೇ ಬದಲಾವಣೆಯಿಲ್ಲ, ಮಾನವನ ಮನ-ಮಸ್ತಿಷ್ಕಗಳಲ್ಲಿ ಬದಲಾವಣೆ ಸಂಭವಿಸಿಲ್ಲ, ಆದರೆ ಶತಮಾನಗಳ ಹಿಂದೆ ಸಂಭವಿಸಿದಂತೆ ಮಾನವನಲ್ಲಿ ಮನಪರಿವರ್ತನೆಯನ್ನು ಸೃಷ್ಟಿಸಿದ ಧಾರ್ಮಿಕ ಆದರ್ಶ, ವಿಶ್ವಾಸಗಳು ಹಾಗೂ ಧಾರ್ಮಿಕ ಮೌಲ್ಯಗಳಿಗೆ ಮಾತ್ರ ಇಂದೂ ಅದು ಸಾಧ್ಯ. ಆರನೇ ಶತಮಾನದಲ್ಲಿ ಮನುಷ್ಯನ ಮನಸ್ಸಿಗೆ ನೆಮ್ಮದಿ, ಕುಟುಂಬಕ್ಕೆ ಧೈರ್ಯ, ಸಮಾಜಕ್ಕೆ ಸುರಕ್ಷತೆ, ರಾಷ್ಟ್ರಕ್ಕೆ ಭದ್ರತೆಯನ್ನು ನೀಡಿದ ಜೀವನ ವ್ಯವಸ್ಥೆಗೆ ಅಂದಿನಂತೆ ಇಂದೂ ಪ್ರಾಮುಖ್ಯತೆಯಿದೆ. ಅದನ್ನು ಕ್ರಿಯಾತ್ಮಕಗೊಳಿಸಿದಂತೆ ಅದರ ಮಹತ್ವ ಅನಿವಾರ್ಯತೆ, ಸತ್ಪಲಗಳು ಪ್ರಕಟವಾಗುತ್ತದೆ. ಕುರ್‌ ಆನ್ ಮತ್ತು ಪ್ರವಾದಿಚರ್ಯೆಯು ಸಮರ್ಪಿಸುವ ಸಮಗ್ರ ಜೀವನ ವ್ಯವಸ್ಥೆಯಲ್ಲಿ ಆಧುನಿಕ ಜಗತ್ತಿಗೆ ಅಪ್ರಾಯೋಗಿಕ ಹಾಗೂ ಅನುಚಿತವಾದ ಒಂದಂಶವೂ ಇಲ್ಲವೆಂಬುದು ವಾಸ್ತವಿಕತೆಯಾಗಿದೆ. ಮಾತ್ರವಲ್ಲ ಅದನ್ನು ಪ್ರಾಯೋಗಿಕಗೊಳಿಸುವುದರಲ್ಲಿ ಮಾತ್ರ ಮಾನವ ಸಮೂಹ ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಕಷ್ಟ ನಷ್ಟಗಳಿಗೂ ಪರಿಹಾರ ಲಭಿಸುತ್ತದೆ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *