Home / ಪ್ರಶ್ನೋತ್ತರ / ಇಸ್ಲಾಮಿನಲ್ಲಿ ವರದಕ್ಷಿಣೆ ನಿಷಿದ್ಧ ಯಾಕೆ?

ಇಸ್ಲಾಮಿನಲ್ಲಿ ವರದಕ್ಷಿಣೆ ನಿಷಿದ್ಧ ಯಾಕೆ?

ಪ್ರಶ್ನೆ: ಇಂದು ಮುಸ್ಲಿಮ್ ಸಮುದಾಯದಲ್ಲಿ ವರದಕ್ಷಿಣೆಯ ಪದ್ದತಿ ರೂಢಿಯಲ್ಲಿದೆ. ಇದು ನಿಶಿದ್ಧ ಹಾಗೂ ಅನುವದನೀಯ ಎಂಬ ಅಭಿಪ್ರಾಯಗಳು ಹಲವರಿಂದ ಕೇಳಿಬರುತ್ತಿದೆ. ಇದರ ಕುರಿತು ಇಸ್ಲಾಮಿನ ನಿಲುವೇನು? ಇದು ನಿಷಿದ್ಧ ಎಂದಾದರೆ ಯಾವ ಆಧಾರದಲ್ಲಿ ಇದನ್ನುನಿಷಿದ್ಧಗೊಳಿಸಲಾಗಿದೆ?

ಉತ್ತರ: ವಿವಾಹಿತನಾಗಲು ಬಯಸುವ ಯುವಕ ಅಥವಾ ಅವನ ಮನೆ ಮಂದಿ ವಿವಾಹಕ್ಕಿರುವ ಬೇಡಿಕೆಯಾಗಿ ಹೆಣ್ಣಿನ ಕಡೆಯಿಂದ ಅನ್ಯಾಯವಾಗಿ ಪಡೆಯುವ ಹಣ, ಚಿನ್ನ, ಆಸ್ತಿ-ಪಾಸ್ತಿಗಳು, ವಾಹನಗಳು, ಕಟ್ಟಡಗಳು ಮುಂತಾದವುಗಳನ್ನು ವರದಕ್ಷಿಣೆ ಎಂದು ಹೇಳುತ್ತಾರೆ.
ಈ ರೀತಿಯ ಬೇಡಿಕೆ ಇರಿಸುವುದು ವಿವಾಹಿತನಾಗುವವನೋ ಅವನ ಹೆತ್ತವರೋ ಆಗಿರಬಹುದು. ಇದನ್ನು ನೀಡಬೇಕಾದ ಹೊಣೆ ವಧು ಅಥವಾ ಅವಳ ಮನೆಯವರಿಗೋ ಆಗಿರುತ್ತದೆ. ವಿವಾಹದ ಎಲ್ಲಾ ಸಿದ್ಧತೆಗಳು ಮುಗಿದಿದ್ದರೂ ಈ ಹಣ ಸಿಗದಿದ್ದರೆ ವಿವಾಹವೇ ನಿಂತುಹೋಗುವುದಿದೆ.
ಇಂದು ಚಾಲ್ತಿಯಲ್ಲಿರುವ ವರದಕ್ಷಿಣೆ ಸಂಪ್ರದಾಯವು ನಿಷಿದ್ಧವಾಗಿದೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಅನ್ಯಾಯವಾಗಿ ಇತರರ ಸಂಪತ್ತನ್ನು ಅನುಭವಿಸುವ, ಅಲ್ಲಾಹನು ಸ್ಪಷ್ಟವಾಗಿ ವಿರೋದಿಸಿದ ಸಾಲಿಗೆ ಇದು ಸೇರುತ್ತದೆ. ಗತ್ಯಂತರವಿಲ್ಲದೆ ಮನೆಮಾರುಗಳನ್ನು ಮಾರಿ ಹೊರಲಾರದ ಸಾಲಗಳನ್ನು ಹೊತ್ತು ಅಭಿಮಾನವನ್ನು ಅಡವಿಟ್ಟು ಇತರರ ಮುಂದೆ ಬೇಡಿ ಮಾನಸಿಕ ಯಾತನೆ ಅನುಭವಿಸಿ ಹೆತ್ತವರು ಹಣ ಹೊಂದಿಸುತ್ತಾರೆ. ಹೀಗೆ ಹಣ ಶೇಕರಿಸಿ ನೀಡುವ ವರದಕ್ಷಿಣೆಯನ್ನು ಸಮರ್ಥಿಸುವ ಯಾವುದೇ ಕುರ್‍ಆನ್ ಸೂಕ್ತಗಳು, ಪ್ರವಾದಿ ವಚನಗಳು ಅಥವಾ ಇಮಾಮರುಗಳ ಅಭಿಪ್ರಾಯಗಳೋ ಇಲ್ಲ.
ಇನ್ನು ವರದಕ್ಷಿಣೆಯು ನಿಷಿದ್ಧವಾಗುವುದು ಯಾವ ಆಧಾರದಲ್ಲೆಂದರೆ,
(1)ಇಸ್ಲಾಮಿನ ದೃಷ್ಟಿಯಲ್ಲಿ ಓರ್ವನ ಬಳಿಯಲ್ಲಿರುವ ಹಣವು ಇನ್ನೋರ್ವನಿಗೆ ಅನುವದನೀಯವಾಗಬೇಕಾದರೆ ಈ ಕೆಳಗಂಡ ಯಾವುದಾದರೂ ಮಾರ್ಗದಲ್ಲಾಗಿರಬೇಕು. 1. ವ್ಯಾಪಾರ 2. ಕೃಷಿ 3. ದುಡಿಮೆ 4. ನೌಕರಿ. ಅಥವಾ ವಂತಿಗೆ, ದಾನ, ಪಾರಿತೋಷಿಕ, ಪಿತ್ರಾರ್ಜಿತ ಮತ್ತು ವಸೀಯತ್‍ನ ರೂಪದಲ್ಲಿ.
ಪ್ರವಾದಿ(ಸ) ಹೇಳಿದರು: “ಯಾವುದೇ ವಿಶ್ವಾಸಿಗೆ ತನ್ನ ಸಹೋದರನ ಒಂದು ಬೆತ್ತ ಕೂಡಾ ಆತನ ತೃಪ್ತಿಯಿಲ್ಲದೆ ಅನುವದನೀಯವಾಗುವುದಿಲ್ಲ. ಇದು, ಓರ್ವ ವಿಶ್ವಾಸಿಯ ಸಂಪತ್ತಿನಲ್ಲಿ ಇನ್ನೋರ್ವ ವಿಶ್ವಾಸಿಗೆ ಎಷ್ಟು ಬಾಧ್ಯತೆ ಇದೆ ಎಂದು ತಿಳಿಸುವುದಕ್ಕಾಗಿದೆ.” (ಇಬ್ನು ಹಿಬ್ಬಾನ್) ಇಲ್ಲಿ ವರದಕ್ಷಿಣೆಯು ಈ ಅನುವದನೀಯವಾದ ಪಟ್ಟಿಗೆ ಸೇರುವುದಿಲ್ಲ.
(2) ವರದಕ್ಷಿಣೆಯು ಕುರ್‍ಆನಿನ ಆದೇಶಕ್ಕೆ ವಿರುದ್ಧವಾಗಿದೆ. ಕಾರಣ, ಪುರುಷನು ಮಹಿಳೆಗೆ ವಿವಾಹ ಧನ (ಮಹ್ರ್) ನೀಡಬೇಕೆಂದು ಕುರ್‍ಆನ್ ಆಜ್ಞಾಪಿಸಿದೆ. ಅದಕ್ಕೆ ಯಾವುದೇ ಮಿತಿ ಇಲ್ಲ. ಮಿತಿ ನಿಶ್ಚಯಿಸಲು ಪ್ರಯತ್ನಿಸಿದ ಆಢಳಿತಾಧಿಕಾರಿಗಳು ಪ್ರಜೆಗಳಿಂದ ಪ್ರಶ್ನಿಸಲ್ಪಟ್ಟ ಐತಿಹಾಸಿಕ ಉದಾಹರಣೆಗಳಿವೆ. ಹಾಗೆ ನೀಡಲ್ಪಟ್ಟ ವಿವಾಹ ಧನವು ಹೆಣ್ಣಿನ ಹಕ್ಕಾಗಿ ಬದಲಾಗುತ್ತದೆ. ಬಳಿಕ ಅದರ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ.
(3) ಇದು ಇತರ ಸಮುದಾಯ ಹಾಗೂ ವಿಭಾಗಗಳ ಅನಾಚಾರಗಳನ್ನು ಅನುಸರಿಸುವಂಥಾಗಿದೆ. “ಯಾರು ಒಂದು ಸಮುದಾಯದೊಂದಿಗೆ ಸಾಮ್ಯತೆ ಇರುವಂತೆ ವರ್ತಿಸಿದನೋ ಅವನು ಆ ಸಮುದಾಯಕ್ಕೆ ಸೇರಿದವನಾಗುತ್ತಾನೆ” ಎಂದು ಪ್ರವಾದಿ(ಸ) ಹೇಳಿದ್ದಾರೆ.
(4) ವರದಕ್ಷಿಣೆ ಸಂಪ್ರದಾಯದ ಮೂಲಕ ಒಂದು ವಿಭಾಗ ಸಂತೋಷಪಡುವಾಗ ಇನ್ನೊಂದು ವಿಭಾಗವು ಕಷ್ಟ ಹಾಗೂ ದುಃಖ ಅನುಭವಿಸುತ್ತದೆ.
(5) ಹೆಣ್ಣಿನ ಮನೆಯವರ ಹಣ ಖರ್ಚು ಮಾಡಿ ವಿವಾಹವಾಗುವುದು ಓರ್ವ ಗಂಡಿಗೆ ಭೂಷಣವಲ್ಲ.
ವರನು ವಧುವಿಗೆ ಕಡ್ಡಾಯವಾಗಿ ವಧುದಕ್ಷಿಣೆ ನೀಡಬೇಕೆಂದು ಆಜ್ಞಾಪಿಸುವ ಹಲವಾರು ಪ್ರವಾದಿ ವಚನಗಳೂ ಪುರಾವೆಗಳೂ ಇವೆ. ಇವೆಲ್ಲವನ್ನು ಕಡೆಗಣಿಸಿ ಮಹ್ರ್ ನೀಡುವುದನ್ನು ಕ್ಷುಲ್ಲಕ ಹಾಗೂ ಹೆಸರಿಗೆ ಮಾತ್ರ ಇರುವ ಕಾರ್ಯವಾಗಿ ಮಾಡುತ್ತಾರೆ. ಒಂದು ಪವನ್ ಚಿನ್ನವನ್ನು ಮಹ್ರ್ ಆಗಿ ನಿಶ್ಚಯಿಸಿ ಪವನ್ ಗಟ್ಟಲೆ ಚಿನ್ನ ಹಾಗೂ ಲಕ್ಷಗಟ್ಟಲೆ ಹಣವನ್ನು ಹೆಣ್ಣಿನ ಕಡೆಯಿಂದ ಪಡೆಯುತ್ತಾರೆ. ಇದು ಶರೀಅತ್‍ವ ಕಾನೂನನ್ನು ಗೇಲಿಮಾಡುವುದಲ್ಲವೇ?
ಮೇಲೆ ವಿವರಿಸಿದ್ದಕ್ಕಿಂತ ಭಿನ್ನವಾಗಿ, ಯಾವುದಾದರೂ ಹೆತ್ತವರು ಪೂರ್ಣ ಸಂತೃಪ್ತಿಯೊಂದಿಗೆ ತಮ್ಮ ಮಗಳ ವಿವಾಹದ ಪ್ರಯುಕ್ತ ಆಭರಣ ಅಥವಾ ಇತರ ವಸ್ತುಗಳನ್ನು ವಿವಾಹ ಪಾರಿತೋಶಕವಾಗಿ ನೀಡಿದರೆ ಅದನ್ನು ವರದಕ್ಷಿಣೆ ಎಂದು ಹೇಳಲು ಸಾಧ್ಯವಿಲ್ಲ. ಹುಡುಗ ಅಥವಾ ಆತನ ಹೆತ್ತವರ ಪ್ರೇರಣೆ, ಒತ್ತಡ ಇಲ್ಲದಿದ್ದರೆ ಅದನ್ನು ಮೇಲೆ ತಿಳಿಸಿದ ವರದಕ್ಷಿಣೆಯ ಪಟ್ಟಿಗೆ ಸೇರಿಸಲಾಗದು. ಮಾತ್ರವಲ್ಲ, ಪ್ರವಾದಿ(ಸ) ತನ್ನ ಪ್ರಿಯ ಪುತ್ರಿ ಫಾತಿಮಾರನ್ನು ವಿವಾಹ ಮಾಡಿಸಿ ಕಳಿಸುವಾಗ ಅಗತ್ಯದ ಗೃಹಬಳಕೆಯ ಸಾಮಗ್ರಿಗಳನ್ನು ನೀಡಿರುವುದಾಗಿ ಹದೀಸ್‍ಗಳಲ್ಲಿ ವರದಿಯಾಗಿದೆ.
ಆದರೆ ಹಾಗೆ ಮಾಡಲುದ್ದೇಶಿಸುವವರು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು. ವರದಕ್ಷಿಣೆಯು ಸಾರ್ವತ್ರಿಕವಾಗಿರುವ ಈ ಕಾಲದಲ್ಲಿ ಹೆಣ್ಣಿನ ಹೆತ್ತವರು ತನ್ನ ಅಳಿಯನಿಗೆ ವಿವಾಹದ ಪ್ರಯುಕ್ತ ವಾಹನ ಅಥವಾ ಇತರ ವಸ್ತುಗಳನ್ನು ಪಾರಿತೋಶಕವಾಗಿ ನೀಡಿದಾಗ ಅದು ಹಲವು ತಪ್ಪು ತಿಳುವಳಿಕೆಗಳಿಗೆ ಕಾರಣವಾಗಬಹುದು. ಅದನ್ನು ವರದಕ್ಷಿಣೆಗೆ ಸಮರ್ಥನೆಯಾಗಿ ಹಲವರು ಬಳಸಬಹುದು. ವಿಶೇಷತಃ ವರದಕ್ಷಿಣೆಯ ವಿರುದ್ಧ ಹೋರಾಟ ನಡೆಸುವವರಿಗೆ ಇದು ದೊಡ್ಡ ಸಂಕಷ್ಟವನ್ನು ತಂದೊಡ್ಡಬಹುದು.
SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *