Home / ಪ್ರಶ್ನೋತ್ತರ / ವಾಸ್ತು ದೋಷ?

ವಾಸ್ತು ದೋಷ?

ಪ್ರಶ್ನೆ: ರೋಗ ಬಾಧಿಸುವುದು ಮತ್ತು ವ್ಯಾಪಾರದಲ್ಲಿ ನಷ್ಟವಾಗುವುದು ವಾಸ್ತುವಿನಿಂದ ಎಂದು ಕೆಲವರು ಹೇಳುತ್ತಾರೆ. ಇಸ್ಲಾಮಿನಲ್ಲಿ ವಾಸ್ತು ದೋಷವೆಂಬುದಿದೆಯೇ? ಇದ್ದರೆ ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾಯಿಸಬಹುದೇ?

ಉತ್ತರ: ವಾಸ್ತು ದೋಷವೆಂಬುದು ಮಿಥ್ಯ ಕಲ್ಪನೆಯಾಗಿದೆ. ಅದಕ್ಕೆ ಇಸ್ಲಾಮಿನಲ್ಲಿ ಯಾವುದೇ ಸ್ಥಾನವಿಲ್ಲ. ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾವಣೆಯಿಂದ ರೋಗ ಬಾಧಿಸುವುದೋ ವ್ಯಾಪಾರದಲ್ಲಿ ನಷ್ಟವಾಗುವುದೋ ನಿವಾರಣೆಯಾಗುವುದಿಲ್ಲ. ಇಸ್ಲಾಮೀನ ಪ್ರಕಾರ, ರೋಗಬಾಧಿಸುವುದು ಮತ್ತು ವ್ಯಾಪಾರ, ಕೃಷಿ ಇತ್ಯಾದಿಗಳಲ್ಲಿ ನಷ್ಟ ಸಂಭವಿಸುವುದು ಅಥವಾ ಇನ್ನಿತರ ಯಾವುದೇ ಸಂಕಷ್ಟಗಳು ಮನುಷ್ಯನಿಗೆ ಬಾಧಿಸುವುದು ವಿಧಿಲಿಖಿತ ಪ್ರಕಾರವಾಗಿದೆ. ಅಂದರೆ ಅವೆಲ್ಲವೂ ಅಲ್ಲಾಹನಿಂದ ಪೂರ್ವನಿರ್ಧರಿತವಾಗಿರುತ್ತದೆ. ಅವೆಲ್ಲ ಮನುಷ್ಯನ ಪರೀಕ್ಷಾರ್ಥವಾಗಿ ಅಲ್ಲಾಹನು ಕಳುಹಿಸುತ್ತಾನೆ. ಬಂಧ ಸಂಕಷ್ಟಗಳು ಅಥವಾ ಇನ್ನು ಬರಬಹುದಾದ ಯಾವುದೇ ವಿಪತ್ತು ಅಥವಾ ಸಂಕಷ್ಟ ಅಲ್ಲಾಹನ ವತಿಯಿಂದ ಮಾತ್ರ ಬರುತ್ತದೆ ಎಂಬ ದೃಢ ನಂಬಿಕೆ ಹೊಂದಿದರೆ ಅವನು ಜೀವನದ ಪರೀಕ್ಷೆಯಲ್ಲಿ ಸಫಲನಾಗುವನು. ಮಾತ್ರವಲ್ಲ, ಸತ್ಯದ ಹಾದಿಯಲ್ಲಿ ಅಚಲವಾಗಿ ನಿಲ್ಲಲು ಅವನಿಗೆ ಅದು ಸ್ಫೂರ್ತಿ ನೀಡುತ್ತದೆ. ಪವಿತ್ರ ಕುರ್‍ಆನ್ ಹೇಳುತ್ತದೆ, “ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನ ಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಂದ ಖಂಡಿತ ನಿಮ್ಮನ್ನು ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು, `ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನಡೆಗೆ ನಮಗೆ ಮರಳಲಿಕ್ಕಿದೆ’ಯೆನ್ನುವರು. ಅವರ ಮೇಲೆ ಅವರ ಪ್ರಭುವಿನ ಮಹಾ ಅನುಗ್ರಹಗಳಿರುವುವು. ಅವನ ಕಾರುಣ್ಯವು ಅವರನ್ನು ಅಚ್ಛಾದಿಸುವುದು ಮತ್ತು ಇಂತಹವರೇ ಸನ್ಮಾರ್ಗ ಹೊಂದಿದವರಾಗಿರುತ್ತಾರೆ.” (2: 155-157)

ಆದ್ದರಿಂದ ಅಲ್ಲಾಹನ ವಿಧಿಯ ಮೇಲೆ ಅಚಂಚಲ ವಿಶ್ವಾಸವಿರಿಸುವುದೇ ವಿಶ್ವಾಸಿಗಳಿಗಿರುವ ಸರಿಯಾದ ನಿಲುವು. ಮಳೆಯ ಕುರಿತು ಅಲ್ಲಾಹನು ಹೇಳುತ್ತಾನೆ, “ಮಳೆಯನ್ನು ಸುರಿಸುವವರು ನಾವು” (56: 68-69) ಆದರೆ ಮಳೆ ಬರುವುದು ಇಂತಿಂತಹ ಕಾರಣಗಳಿಂದ ಎಂದು ನಂಬಿದರೆ ಅಥವಾ ಹೇಳಿದರೆ ಅವನು `ಶಿರ್ಕ್’ ಮಾಡಿದನು ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಶಿರ್ಕ್ ಅಥವಾ ಬಹುದೇವಾರಾಧನೆ ಮಹಾ ಪಾಪವಾಗಿದೆಯಷ್ಟೆ. ಅದು ಇದಕ್ಕೂ ಅನ್ವಯಿಸುತ್ತದೆ. ಆದ್ದರಿಂದ ವಾಸ್ತುವನ್ನು ಬದಲಾಯಿಸುವುದರಿಂದ ವಿಧಿ ಬದಲಾಗುವುದಿಲ್ಲವೆಂಬುದನ್ನು ತಿಳಿದಿರಬೇಕು. ವಿಧಿ ಬದಲಾಗಬೇಕಾದರೆ ಅಲ್ಲಾಹನೊಂದಿಗೆ ಸನ್ಮನಸ್ಸಿನಿಂದ ಪ್ರಾರ್ಥಿಸಬೇಕು. ರೋಗ ಬಾಧಿಸಿದರೂ ವ್ಯಾಪಾರದಲ್ಲಿ ನಷ್ಟ ಸಂಭವಿಸಿದರೂ ಅಥವಾ ಇನ್ಯಾವುದೇ ಸಂಕಷ್ಟ ಬಂದರೂ ಅಲ್ಲಾಹನಲ್ಲೇ ಪ್ರಾರ್ಥಿಸಬೇಕು. ಅವನಿಚ್ಛಿಸಿದರೆ ಸಂಕಷ್ಟದ ಪರಿಸ್ಥಿತಿಯನ್ನು ಬದಲಾಯಿಸುವನು.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *