Home / ಪ್ರಶ್ನೋತ್ತರ / ಮಾಟ ಮತ್ತು ಚಿಕಿತ್ಸೆ?

ಮಾಟ ಮತ್ತು ಚಿಕಿತ್ಸೆ?

ಪ್ರಶ್ನೆ: ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ಮಾಟದ ಪ್ರಭಾವವುಂಟಾಗಿತ್ತೆಂದು ಅಧ್ಯಯನಗಳಿಂದ ತಿಳಿಯುತ್ತದೆ. ಒಬ್ಬ ಮಹಾನ್ ಪ್ರವಾದಿಯ ಮೇಲೂ ಮಾಟದ ಪ್ರಭಾವವುಂಟಾಗಲು ಸಾಧ್ಯವಿದೆಯೆಂದಾದರೆ ನಮ್ಮಂತಹ ಸಾಮಾನ್ಯರ ಮೇಲೆ ಉಂಟಾಗುವ ಮಾಟದ ಪ್ರಭಾವವನ್ನು ಅರಿಯುವುದು ಹೇಗೆ? ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಶರೀಅತ್ ಪ್ರಕಾರವೇ ತಿಳಿಸಿ. ಕೇವಲ `ಮುಅವ್ವಿದತೈನ್’ ಓದಿದರೆ ಸಾಕೆ?

ಉತ್ತರ: ಪ್ರವಾದಿ ಮುಹಮ್ಮದ್(ಸ) ಅವರ ಶಿಕ್ಷಣ ಬೋಧನೆಗಳನ್ನು ಹತ್ತಿಕ್ಕಲು ಇಸ್ಲಾಮಿನ ವಿರೋಧಿಗಳಾದ ಯಹೂದಿಯರು ಮತ್ತು ಮುಶ್ರಿಕರು ಬಹಳಷ್ಟು ಪ್ರಯತ್ನಿಸಿದರು. ಅವರ ಎಲ್ಲ ಷಡ್ಯಂತ್ರಗಳೂ ವಿಫಲವಾದಾಗ ಯಹೂದ್ಯರು ಪ್ರವಾದಿ(ಸ) ಅವರ ಮೇಲೆ ಮಾಟ ಮಾಡಿದರು. ಇದರ ಪ್ರಭಾವವು ಪ್ರವಾದಿ(ಸ) ಅವರ ಮೇಲೆ ಗೋಚರಿಸ ತೊಡಗಿತು. ಈ ಪ್ರಭಾವವು ಒಂದು ವರ್ಷದವರೆಗೆ ಮುಂದುವರಿಯಿತು. ಆ ಅವಸ್ಥೆಯಲ್ಲಿ ಪ್ರವಾದಿಯವರ(ಸ) ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಮಾರ್ಪಟುಗಳುಂಟಾಗಿತ್ತು. ಅವರು ಯಾವುದಾದರೊಂದು ಕೆಲಸವನ್ನು ಮಾಡಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಅದನ್ನು ಮಾಡಿರುತ್ತಿರಲಿಲ್ಲ. ಕೆಲವು ಪತ್ನಿಯರ ಬಳಿಗೆ ಹೋಗಿ ಬಂದಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಹಾಗೆ ಹೋಗುತ್ತಿರಲಿಲ್ಲ. ಅವರ ಶರೀರದಲ್ಲಿ ಬಳಲಿಕೆಯಿರುತ್ತಿತ್ತು. ಆದರೆ ಅವೆಲ್ಲದರ ಹೊರತಾಗಿಯೂ ಅವರ ನೈಜ ಕರ್ತವ್ಯ (ಸಂದೇಶ ಪ್ರಚಾರ)ದಲ್ಲಿ ಎಂದೂ ಕೊರೆತೆಯುಂಟಾಗಿರಲಿಲ್ಲ. ಈ ಕುರಿತು ಇತಿಹಾಸದಲ್ಲಿ ಪ್ರವಾದಿ(ಸ) ಅವರ ವೈರಿಗಳಿಂದಲೂ ಯಾವುದೇ ಉಲ್ಲೇಖವಿಲ್ಲ. ಒಂದು ವೇಳೆ ಪ್ರವಾದಿವರ್ಯರಿಂದ(ಸ) ಅದರಲ್ಲೂ ಲೋಪವುಂಟಾಗುತ್ತಿದ್ದರೆ ಪ್ರವಾದಿತ್ವದ ನಿರಾಕರಣೆಗೆ ಅಂದೊಂದೇ ಘಟನೆ ಸಾಕಾಗುತ್ತಿತ್ತು. ಇನ್ನು ಪ್ರವಾದಿವರ್ಯರ(ಸ) ಮೇಲೆ ಮಾಟ ಮಾಡಿದ್ದು ಅವರಿಗೆ ತಿಳಿದಿತ್ತೇ ಎಂಬ ಪ್ರಶ್ನೆ. ಪ್ರವಾದಿವರ್ಯರಿಗೆ(ಸ) ಮಾಟ ಮಾಡಲಾಗಿತ್ತೆಂದು ಮಾಟದ ಪ್ರಭಾವ ಸಂಪೂರ್ಣವುಂಟಾಗಿ ಒಂದು ವರ್ಷ ದಾಟಿದಾಗಲಷ್ಟೇ ಇಬ್ಬರು ದೇವಚರರ ಮೂಲಕ ಅವರಿಗೆ ತಿಳಿಸಲಾಗಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಯಾರು ಮಾಟ ಮಾಡಿದ್ದಾರೆಂದು ಅವರಿಗೆ ತಿಳಿಸಲಾಯಿತು. ಆದ್ದರಿಂದ ಅಪರಾಧಿಯ ಪತ್ತೆಯೂ ಆಯಿತು. ಆದರೆ ಪ್ರವಾದಿವರ್ಯರು(ಸ) ಅಪರಾಧಿಯ ವಿರುದ್ಧ ಪ್ರತೀಕಾರವೆಸಗಲಿಲ್ಲ. ಏಕೆಂದರೆ ತಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿದವರೊಂದಿಗೆ ಅವರು ಎಂದೂ ಪ್ರತಿಕಾರವೆಸಗುತ್ತಿರಲಿಲ್ಲ.

ಪ್ರವಾದಿ(ಸ) ಅವರಂತಹ ಉನ್ನತ ವ್ಯಕ್ತಿಗೆ ಮಾಟ ಮಾಡಲಾಗಿದೆಯೆಂದು ತಿಳಿಯದಾದಾಗ ನಮ್ಮಂತಹ ಸಾಮಾನ್ಯ ವ್ಯಕ್ತಿಗಳಿಗೆ ಅದನ್ನು ಗುರುತಿಸಲು ಸಾಧ್ಯವಿಲ್ಲವೆಂದು ವ್ಯಕ್ತವಾಗುತ್ತದೆ. ಒಂದು ವೇಳೆ ಹಾಗೇನಾದರೂ ಸಂದೇಹವುಂಟಾದರೆ ಪವಿತ್ರ ಕುರ್‍ಆನಿನ ಕೊನೆಯ ಎರಡು ಸೂರಾಃಗಳಾದ `ಮುಆವ್ವಿದತೈನ್’ ಓದುತ್ತಾ ಇದ್ದರೆ ಸಾಕು. ಪ್ರವಾದಿ(ಸ) ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಸೂರಾಃಗಳನ್ನು ಓದಿ ಕೈಗಳಿಗೆ ಊದಿ ಇಡೀ ಶರೀರಗಳ ಮೇಲೆ ಸವರುತ್ತಿದ್ದರು ಎಂದು ಹದೀಸ್‍ಗಳಿಂದ ತಿಳಿದು ಬರುತ್ತದೆ. ಒಂದು ವೇಳೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಏನಾದರೂ ತೊಂದರೆ ಇದ್ದರೆ ಅದಕ್ಕೆ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಟ ಮಾಡಲಾಗಿದೆಯೆಂಬ ಸಂದೇಹದಿಂದ ಜ್ಯೋತಿಷಿಗಳನ್ನು ಸವಿೂಪಿಸುವುದು ಅವರು ಕೊಟ್ಟ ಮಾಹಿತಿ ಪ್ರಕಾರ ಯಾರ ಮೇಲಾದರೂ ಹಗೆತನವಿಟ್ಟುಕೊಳ್ಳುವುದು ಇತ್ಯಾದಿ ಅಪಕೃತ್ಯಗಳನ್ನು ಮಾಡುವುದು ಸರಿಯಲ್ಲ. ಮಾಟ ಮಾಡುವುದು ಮಾನವನನ್ನು ವಿನಾಶಕ್ಕೂಯ್ಯಬಲ್ಲ ಏಳು ಮಹಾ ಪಾಪಗಳ ಪೈಕಿ ಒಂದಾಗಿದೆ. ಅದೇ ರೀತಿ ಮಾಟಗಾರನನ್ನು- ಮಾಟ ಮಾಡಲು ಅಥವಾ ಬಿಡಿಸಲು- ಸವಿೂಪಿಸುವುದು ಸತ್ಯವಿಶ್ವಾಸಕ್ಕೆ ವಿರುದ್ಧವಾದ ಕಾರ್ಯಗಳಾಗಿವೆ. ಪ್ರವಾದಿ(ಸ) ಹೀಗೆ ಹೇಳಿದ್ದಾರೆ. “ತನ್ನ ಸಮುದಾಯದ ಎಪ್ಪತ್ತು ಸಾವಿರ ಮಂದಿಯನ್ನು ವಿಚಾರಣೆವಿಲ್ಲದೆ ಸ್ವರ್ಗಕ್ಕೆ ಕಳಿಸಲಾಗುವುದು. ಅವರಲ್ಲಿ ಮಾಟಗಾರರ ಬಳಿಗೆ ಹೋಗದವರೂ ಸೇರಿದ್ದಾರೆ.”

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *