Home / ಪ್ರಶ್ನೋತ್ತರ / ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?

ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?

ಪ್ರಶ್ನೆ: ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ವಿಷಯಗಳು ಚರ್ಚಿಸಲ್ಪಟ್ಟಿದೆ. ಕಾಬಾದಲ್ಲಿ  ಮೊದಲೇ ವಿಗ್ರಹಗಳಿದ್ದಾಗ ಮುಹಮ್ಮದರ ಅಜ್ಜ, ತಂದೆ ಅವರ ಧರ್ಮ ಯಾವುದು ಎಂಬ ಬಗ್ಗೆ ಕೆಲವರಲ್ಲಿ ಪ್ರಶ್ನೆ ಮೂಡಿದೆ. ಉತ್ತರಿಸಬಹುದೇ? 

ಪ್ರಥಮ ಮಾನವ, ಪ್ರಥಮ ಪ್ರವಾದಿ ಆದಮ್(ಅ)ರ ಬಳಿಕ ಭೂಮುಖದ ಪ್ರಥಮ ಐತಿಹಾಸಿಕ ಜನಾಂಗ ನೂಹರ ಜನಾಂಗವಾಗಿತ್ತು. ಮಹಾ ಪುರುಷರನ್ನು, ಸಜ್ಜನರನ್ನು ದೇವರ ಸ್ಥಾನಕ್ಕೇರಿಸಿ ಪ್ರತಿಮೆಗಳನ್ನು ಸ್ಥಾಪಿಸಿದ ಮೊದಲ ಜನಾಂಗ ನೂಹರ ಜನಾಂಗ. ಸಮಾಜದಲ್ಲಿ ಅತಿಕ್ರಮವನ್ನು ಅನುಸರಿಸಿದ ಈ ಜನಾಂಗದಲ್ಲಿ ನೂಹರ ಜೊತೆ ಸೇರಿದವರು ಹೊರತು ಪಡಿಸಿ ಉಳಿದವರು ಜಲಪ್ರಳಯದಲ್ಲಿ ನಾಶವಾದದ್ದು ಇತಿಹಾಸ. ನಾವೆಯಲ್ಲಿ ರಕ್ಷಿಸಲ್ಪಟ್ಟ ಜನಾಂಗ ಮುಂದೆ ವಿವಿಧ ಜನಾಂಗವಾಯಿತು. ಆ ಎಲ್ಲ ಜನಾಂಗಗಳ ವೃತ್ತಾಂತವೂ ಕುರ್ ಆನ್ ನಲ್ಲಿದೆ. ಹೂದ್, ಸ್ವಾಲಿಹ್ ಶುಐಬ್ ಆ ಜನಾಂಗಕ್ಕೆ ನಿಯುಕ್ತರಾದ ಪ್ರವಾದಿಗಳಾಗಿದ್ದಾರೆ. ಮದೀನಾದ ಔಸ್ ಖಝ್ರಜ್ ಎಂಬ ಗೋತ್ರಗಳು ನಾವೆಯಲ್ಲಿ ರಕ್ಷಿಸಲ್ಪಟ್ಟವರ ಪರಂಪರೆ ಎಂದೂ ಇದೆ.

ಇರಾಕ್ ನ ಉರ್ ಪಟ್ಟಣದಲ್ಲಿ ಇಬ್ರಾಹೀಮರು ಜನಿಸಿದ್ದರು. ನಾನೇ ಪ್ರಭು, ಜನನ ಮತ್ತು ಮರಣ ನನ್ನ ಅಂಕೆಯಲ್ಲಿದೆ ಎಂದು ವಾದಿಸಿ ಪ್ರಜೆಗಳನ್ನು ಅನ್ಯಾಯವಾಗಿ ಕೊಲೆ ಮಾಡುತ್ತಿದ್ದ ಅಲ್ಲಿನ ಸರ್ವಾಧಿಕಾರಿ ರಾಜ ನಮ್ರೂದ್. ಇಬ್ರಾಹೀಮರ ತಂದೆ ನಮ್ರೂದ್ ರಾಜನ ಆಸ್ಥಾನದಲ್ಲಿ ಉನ್ನತ ಸ್ಥಾನ ಗಳಿಸಿದ್ದರು. ಪುರೋಹಿತ ವೃತ್ತಿ ಮಾಡುತ್ತಿದ್ದರು. ಇರಾಕ್ ನಲ್ಲಿ ಧರ್ಮದ ವ್ಯಾಪಾರೀಕರಣ, ದೇವದಾಸಿ ಪದ್ದತಿ, ಒಂದು ದೊಡ್ಡ ಮಂದಿರದಲ್ಲಿ ಪುರೋಹಿತನಿಗಾಗಿ ಮಹಿಳೆಯರು ಮದುಮಗಳಂತೆ ಹೋಗುವ ಸಂಪ್ರದಾಯವಿತ್ತು. ಇಬ್ರಾಹೀಮರು ಬಾಲ್ಯದಲ್ಲಿ ಸ್ವಂತ ಬುದ್ಧಿಯಿಂದ ಸತ್ಯಾನ್ವೇಷಣೆ ನಡೆಸಿ ಸೃಷ್ಟಿಕರ್ತನನ್ನು ಅರಿತರು. ರಾಜನಿಗೆ ಸಹಕರಿಸುತ್ತಿದ್ದ ತಂದೆಯನ್ನು ವಿರೋಧಿಸಿದರು. ತನ್ನ ಸಾರ್ವಭೌಮತೆಗೆ ಅಡ್ಡಿಯಾಗುವ ಭೀತಿಯಿಂದ ರಾಜ ನಮ್ರೂದನು ಇಬ್ರಾಹೀಮರನ್ನು ಬೆಂಕಿಗೆಸೆದನು. ದೇವಾನುಗ್ರಹದಿಂದ ಇಬ್ರಾಹೀಮರು ಪಾರಾಗಿ ಅಲ್ಲಿಂದ ಹಾರಾನ್ ಗೆ ವಲಸೆ ಹೋದರು. ಅಲ್ಲಿಂದ ಈಜಿಪ್ಟ್ ಗೆ ಹೋದರು. ಅನಂತರ ಹಿಜಾಝ್ ಗೆ ಹೋಗಿ ಮಕ್ಕಾದಲ್ಲಿ ಪವಿತ್ರ ಕಾಬಾ ನಿರ್ಮಿಸಿ ಎಲ್ಲ ಜನರೂ ಒಬ್ಬ ದೇವನ ಸೃಷ್ಟಿಗಳು ಪರಸ್ಪರ ಸಮಾನರೆಂಬ ಕಲ್ಪನೆಯನ್ನು ಸಾಕಾರಗೊಳಿಸಲು ಎಲ್ಲರನ್ನೂ ಈ ಭವನದ ಕಡೆಗೆ ಒಲಿಯುವಂತೆ ಮಾಡು ಎಂದು ದೇವನಲ್ಲಿ ಪ್ರಾರ್ಥಿಸಿದ್ದರು.

ಹಾಗೆಯೇ ಅಲ್ಲಿನ ಝಮ್ ಝಮ್ ನೀರಿನ ಒರತೆ ಜನರನ್ನು ಆ ಕಡೆಗೆ ಆಕರ್ಷಿಸಿತು. ಅಲ್ಲಿ ಮಾಡುವ ಆರಾಧನೆಗೆ ಹಜ್ ಎನ್ನಲಾಯಿತು. ನಂತರ ಕಾಬಾದ ಮೇಲ್ವಿಚಾರಣೆಯನ್ನು ಪುತ್ರ ಇಸ್ಮಾಯೀಲರಿಗೆ ವಹಿಸಿಕೊಟ್ಟರು. ಅನಂತರ ಫೆಲೆಸ್ತೀನ್ ಗೆ ಮರಳಿ ಹಿಬ್ರೂನ್ ನಲ್ಲಿ ನಿಂತು ಅಲ್ಲಿಯೇ ಮರಣ ಹೊಂದಿದರು.

ಫೆಲೆಸ್ತೀನ್ ನಲ್ಲಿ ದ್ವಿತೀಯ ಪುತ್ರ ಪ್ರವಾದಿ ಇಸ್ಹಾಕ್ ಆ ಕೇಂದ್ರದಲ್ಲಿ ತಂದೆಯ ಉತ್ತರಾಧಿಕಾರಿಯಾದರು. ನಂತರ ಆ ಸ್ಥಾನ ಪ್ರವಾದಿ ಯಾಕೂಬ್ ರಿಗೆ ದೊರೆಯಿತು. ಯಾಕೂಬ್ ರಿಗೆ ಹನ್ನೆರಡು ಪುತ್ರರು. ಇವರ ಸಂತಾನ ಪರಂಪರೆ ಬನೀ ಇಸ್ರಾಯೀಲ್ (ಅಲ್ಲಾಹನದಾಸ)ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಯೂಸುಫ್, ಝಕರಿಯ್ಯ,ಯಹ್ಯಾ, ಮೂಸಾ, ಈಸಾ ಈ ಪರಂಪರೆಯಲ್ಲಿ ಪ್ರವಾದಿಯಾಗಿದ್ದರು. ಈಸಾರು ಕೊನೆಯ ಪ್ರವಾದಿ ಅಹ್ಮದ್ (ಪ್ರಶಂಸಾರ್ಹ) ಬರಲಿರುವ ಬಗ್ಗೆ ಸುವಾರ್ತೆ ನೀಡಿದ್ದರು. ಆ ಪ್ರವಾದಿಯನ್ನು ಇಸ್ರಾಯೀಲರು ಕಾಯುತ್ತಿದ್ದರು. ನಮ್ಮಲ್ಲಿಯೇ ಪ್ರವಾದಿಗಳ ಆಗಮನವಾಗಿದೆ. ನಾವು ಯಾವ ಅಪರಾಧ ಮಾಡಿದರೂ ಸ್ವರ್ಗಕ್ಕೆ ಎಂಬ ಇಸ್ರಾಯೀಲರ ಅಹಂಕಾರ ಮತ್ತು ಜನಾಂಗೀಯ ಮೇಲ್ಮೆ ಒಂದು ಕಡೆಯಾದರೆ,
ಮಕ್ಕಾದಲ್ಲಿ ನಾವು ಇಬ್ರಾಹೀಮರ ಸಂಪ್ರದಾಯ ಕಾಬಾದ ಮೇಲ್ವಿಚಾರಕರು ಎಂಬ ಅರಬರ ಜನಾಂಗೀಯ ಮೇಲ್ಮೆ ಇನ್ನೊಂದು ಕಡೆ. ಇಸ್ರಾಯೀಲ್ ಮತ್ತು ಅರಬ್ ಜನಾಂಗೀಯತೆಯನ್ನು ತೊಡೆದು ಹಾಕಲು ಮುಹಮ್ಮದ್ ರನ್ನು ಪ್ರವಾದಿಯಾಗಿ ನೇಮಿಸಲಾಯಿತು ಎಂಬುದು ಕುರ್ ಆನ್ ನಲ್ಲಿರುವ ಸಂದೇಶ. (ಶಾಂತಿ ಇರಲಿ ಎಲ್ಲ ಪ್ರವಾದಿಗಳ ಮೇಲೆ)

ಕಾಬಾದಲ್ಲಿ ವಿಗ್ರಹಗಳು ಹೇಗೆ ಬಂತು ಎಂಬ ಪ್ರಶ್ನೆ.
ಏಕದೇವಾರಾಧಕರಾದ ಇಬ್ರಾಹೀಮ್ ಮತ್ತು ಇಸ್ಮಾಯೀಲರ ನಿಧನದ ಬಳಿಕ ಕಾಬಾದಲ್ಲಿ ಅವರದೇ ಚಿತ್ರಗಳನ್ನು ಹಾಕಲಾಯಿತು. ಅದು ಕೂಡಾ ಅವರು ಜೂಜಾಡುವ ಚಿತ್ರಗಳು. ಪ್ರವಾದಿಗಳು ಜೂಜಾಡುತ್ತಿರಲಿಲ್ಲ. ಇಸ್ಮಾಯೀಲರ ನಿಧನದ ಬಳಿಕ ಇಸ್ಮಾಯೀಲರ ಪತ್ನಿಯ ಸಂಬಂಧಿಗಳ ಕಡೆಯವರಿಂದ ಆರಂಭದಲ್ಲಿ ಕಾಬಾದಲ್ಲಿ ವಿಗ್ರಹಗಳನ್ನು ತಂದು ನೆಲೆಗೊಳಿಸಲಾಯಿತು. ಕ್ರಮೇಣ ಒಂದೊಂದಾಗಿ ಮೂರ್ತಿಗಳ ಪ್ರತಿಷ್ಠಾಪನೆ, ನಗ್ನ ಪ್ರದಕ್ಷಿಣೆ, ಮಾನವರ ಬಲಿ, ಮದಿರಾಪಾನ, ನೃತ್ಯ,ರಾತ್ರಿ ಜಾಗರಣೆಯಲ್ಲಿ ಕಥಾ ಪ್ರಸಂಗ ಹೀಗೆ ಎಲ್ಲವೂ ನಡೆಯಲು ಆರಂಭವಾಯಿತು. ಆದರೆ ಕಾಬಾದ ಮೇಲ್ವಿಚಾರಕರು ನೈಜ ದೇವನನ್ನು, ಇಬ್ರಾಹೀಮರ ದೇವನನ್ನು ಅಲ್ಲಾಹ್ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ಕಾಬಾ ಒಡೆಯಲು ಬಂದ ಅಬ್ರಹ ರಾಜನ ಸೇನೆಯನ್ನು ಸರ್ವನಾಶ ಮಾಡಿದ ದೇವ ಅಲ್ಲಾಹ್ ಎಂಬುದು ಮಕ್ಕಾವಾಸಿಗಳ ಬಲವಾದ ನಂಬಿಕೆ.
ಈ ಘಟನೆ ಆನೆಗಳ ವರ್ಷ ಎಂದು ಪ್ರಸಿದ್ದ.

ಮುಹಮ್ಮದರು ಹುಟ್ಟುವುದಕ್ಕಿಂತ ಮುಂಚೆಯೇ ಈ ಘಟನೆ ನಡೆದಿದೆ.
ಮುಹಮ್ಮದ್ ಕಾಬಾದ ವಿಗ್ರಹಗಳನ್ನು ಒಡೆಯಲು ಬಂದ ಪ್ರವಾದಿಯಲ್ಲ. ಬದಲಾಗಿ ಮಾನವರ ಸಂಸ್ಕರಣೆಗಾಗಿ ಕಳುಹಿಸಲ್ಪಟ್ಟ ಪ್ರವಾದಿ ಎಂಬುದು ಕುರ್ ಆನ್ ನಲ್ಲಿ ಇದೆ. ಮುಹಮ್ಮದರು ಹಿಂಸೆಗೆ ಆಸ್ಪದವೇ ಕೊಡದೆ ಮದೀನಾ ಹೋಗಲು ಕಾರಣ ಮದೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿತ್ತು. ಅಲ್ಲಿಯೇ ಮಸೀದಿ ನಿರ್ಮಾಣ, ಹತ್ತು ವರ್ಷಗಳ ಜೀವನ. ಮಕ್ಕಾದ ಕಾಬಾ ವಿಗ್ರಹಗಳಿಂದ ಮುಕ್ತವಾಗಲು ಕಾರಣ ಮಕ್ಕಾವಾಸಿಗಳೇ ಆಗಿದ್ದಾರೆ. ವಿಗ್ರಹ ಇರುವಾಗ ಕಾಬಾದ ಕೀಲಿ ಕೈ ಯಾರ ಬಳಿಯಲ್ಲಿ ಇತ್ತೋ ವಿಗ್ರಹ ತೆರವಾದ ಬಳಿಕ ಕೀಲಿಕೈ ಅದೇ ವ್ಯಕ್ತಿಯ ಕೈಯಲ್ಲಿ ಇರುವುದಾದರೆ ಇಲ್ಲಿ ಬಲವಂತ ಇರಲಿಲ್ಲ ಎಂಬುದಕ್ಕೆ ಇದೇ ಆಧಾರ ಸಾಕು. ಅದೂ ಅಲ್ಲದೆ ಪ್ರವಾದಿಯವರು ಮದೀನಾದಲ್ಲಿಯೇ ಕೊನೆಯುಸಿರೆಳೆದರು. ಮಕ್ಕಾದಲ್ಲಿ ಅಲ್ಲ.
ಪ್ರವಾದಿ ಮದೀನಾಕ್ಕೆ ವಲಸೆ ಹೋಗಿದ್ದರೂ ಮಕ್ಕಾದಲ್ಲಿರುವ ಬಹುದೇವಾರಾಧಕರು ಎಲ್ಲರೂ ಪ್ರವಾದಿ ಮತ್ತು ಅವರ ಅನುಯಾಯಿಗಳನ್ನು ದ್ವೇಷಿಸುವವರಾಗಿರಲಿಲ್ಲ. ಸ್ನೇಹ ಸಂಬಂಧವನ್ನೇ ಬೆಳೆಸಿದ್ದರು.

*ಇಬ್ರಾಹೀಮರಿಗೆ ಝಮ್ ಝಮ್ ನೀರು ಸಿಕ್ಕಿದ ಮಕ್ಕಾದ ಕಾಬಾ ಇರುವ ಸ್ಥಾನ ಒಂದು ಕಾಲದಲ್ಲಿ ಪ್ರಥಮ ಮಾನವ ಆದಮ್(ಅ) ರಿಗೆ ದೇವನು ಗೊತ್ತುಪಡಿಸಿದ ಸ್ಥಾನ ಎಂದೂ ಯಾವುದೋ ಕಾರಣದಿಂದ ಬರಡು ಭೂಮಿಯಾಗಿ ಮಾರ್ಪಟ್ಟಿತ್ತು ಎಂದು ಚರಿತ್ರೆಯಲ್ಲಿದೆ. ಕಾಬಾ ಇರುವ ಪ್ರದೇಶ ಮೊದಲ ಮಾನವ ನಾಗರಿಕತೆಯ ಉಗಮ ಸ್ಥಳವಾಗಿದೆ. ಮಕ್ಕಾ ನಗರಕ್ಕೆ ಉಮ್ಮುಲ್ ಕುರಾ (ನಗರಗಳ ಮಾತೆ) ಎಂಬ ಹೆಸರಿದೆ.

✍️ಶಮೀರ ಜಹಾನ್

 

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *