Home / ಪ್ರಶ್ನೋತ್ತರ / ಇಸ್ಲಾಮ್ ಪುರುಷ ಪ್ರಧಾನ ಧರ್ಮವಲ್ಲವೇ? ಕುರ್‌ಆನ್ ನ 4ನೇ ಅಧ್ಯಾಯದ 34ನೇ ಸೂಕ್ತವು ಇದಕ್ಕೆ ಆಧಾರವಲ್ಲವೇ?

ಇಸ್ಲಾಮ್ ಪುರುಷ ಪ್ರಧಾನ ಧರ್ಮವಲ್ಲವೇ? ಕುರ್‌ಆನ್ ನ 4ನೇ ಅಧ್ಯಾಯದ 34ನೇ ಸೂಕ್ತವು ಇದಕ್ಕೆ ಆಧಾರವಲ್ಲವೇ?

ಪವಿತ್ರ ಕುರ್‌ಆನ್ ನ ನಾಲ್ಕನೇ ಅಧ್ಯಾಯದ 34ನೇ ವಾಕ್ಯವು ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ ದೇವಾದೇಶವಾಗಿದೆ. ಅದು ಹೀಗಿದೆ: ‘ಪುರುಷರು ಸ್ತ್ರೀಯರ ಮೇಲೆ ‘ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ ಆಗಿದೆ.’

ಇಲ್ಲಿ ಪುರುಷರಿಗೆ ಕುರ್‌ಆನ್ ‘ಕವ್ವಾಮ್’ ಎಂಬ ಪದವನ್ನು ಪ್ರಯೋಗಿಸಿದೆ. ‘ಒಂದು ಸಂಸ್ಥೆ ಅಥವಾ ವ್ಯವಸ್ಥೆಯ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ಅದರ ಮೇಲ್ನೋಟ ವಹಿಸಿ, ಅದರ ಬೇಡಿಕೆಗಳನ್ನು ಪೂರೈಸುವ ಹೊಣೆಗಾರ ವ್ಯಕ್ತಿಗೆ ಅರಬಿ ಭಾಷೆಯಲ್ಲಿ ಕವ್ವಾಮ್‌ ಅಥವಾ ಕಯ್ಯಿಮ್’ ಎನ್ನಲಾಗುತ್ತದೆ.’ (ತಫೀಮುಲ್ ಕುರ್ ಆನ್, ಭಾಗ 1,ಪುಟ 310, 56 ನೇ ಟಿಪ್ಪಣಿ)

ಮೇಲ್ವಿಚಾರಕ ಹಾಗೂ ಸಂರಕ್ಷಕನಿಲ್ಲದೆ ಯಾವುದೇ ಸಂಸ್ಥೆಯು ಯಶಸ್ವಿಯಾಗಲು ಸಾಧ್ಯವಿಲ್ಲ. ಸಮಾಜದ ಮೂಲ ಘಟಕವಾದ ಕುಟುಂಬವು ಸುಭದ್ರವೂ, ಸುರಕ್ಷಿತವೂ ಆಗಿರಬೇಕಾದುದು ಅನಿವಾರ್ಯ. ಸೂಕ್ತ ಸಾರಥಿಯಿಲ್ಲದಿದ್ದರೆ ಅದು ಅಸಾಧ್ಯ. ಆ ಮೇಲ್ವಿಚಾರಕ ಯಾರೆಂಬ ಬಗ್ಗೆ ಸ್ತ್ರೀ-ಪುರುಷರ ನಡುವೆ ಪ್ರತಿಯೊಂದು ಕುಟುಂಬದಲ್ಲೂ ವಿವಾದಗಳು ಉಂಟಾದರೆ ಕುಟುಂಬದ ಭದ್ರತೆ ಮಾಯವಾಗಿ ಬಿಕ್ಕಟ್ಟು ತಲೆದೋರುತ್ತದೆ. ಆದ್ದರಿಂದ ಶಾರೀರಿಕ, ಮಾನಸಿಕ, ವೈಚಾರಿಕ ವಿಶೇಷತೆಗಳನ್ನು ಪರಿಗಣಿಸಿ, ಇಸ್ಲಾಮ್ ಹೊಣೆಗಾರಿಕೆಯನ್ನು ಪುರುಷರಿಗೆ ನೀಡಿತು. ಕುಟುಂಬದ ಸಂರಕ್ಷಕನೆಂದರೆ ಅದೊಂದು ಹಕ್ಕು ಅಥವಾ ಅಧಿಕಾರ ಅಲ್ಲ ಅದು ಅತ್ಯಂತ ಜವಾಬ್ದಾರಿಯುತ ಹೊಣೆಗಾರಿಕೆಯಾಗಿದೆ. ಬದುಕಿನ ಜಂಜಾಟದ ನಡುವೆ ಹೋರಾಡಲು ಪುರುಷನಿಗೆ ಶಕ್ತಿ ಸಾಮರ್ಥ್ಯವಿರುವುದರಿಂದ ಅದನ್ನು ನೀಡಲಾಯಿತು. ಆದ್ದರಿಂದ ಇಸ್ಲಾಮೀ ದೃಷ್ಟಿಕೋನದಲ್ಲಿ ಕುಟುಂಬವೆಂಬ ಪುಟ್ಟ ರಾಷ್ಟ್ರದಲ್ಲಿ ಪುರುಷನು ಪ್ರಧಾನ ಮಂತ್ರಿಯೂ ಮಹಿಳೆಯೂ ಗೃಹ ಮಂತ್ರಿಯೂ ಆಗಿದ್ದಾಳೆ. ಮನೆಯ ಎಲ್ಲಾ ಕಾರ್ಯಗಳನ್ನು ತೀರ್ಮಾನಿಸುವವಳು, ನಿರ್ವಹಿಸುವವಳು ಮಹಿಳೆಯಾಗಿದ್ದಾಳೆ.

ಸ್ತ್ರೀ-ಪುರುಷರ ನಡುವಿನ ಸಂಬಂಧವು ಆಡಳಿತಗಾರ ಮತ್ತು ಪ್ರಜೆಯ ಮಧ್ಯೆ ಇರುವಂತಹದ್ದಲ್ಲ. ಆದ್ದರಿಂದಲೇ ಇಸ್ಲಾಮ್ ದಂಪತಿಗಳನ್ನು ಗಂಡ-ಹೆಂಡಿರೆಂದು ಕರೆಯುವುದಿಲ್ಲ. ಅದು ‘ಜೋಡಿಗಳು’ ಎಂಬ ವಿಶೇಷಣವನ್ನು ನೀಡಿದೆ ‘ಸ್ತ್ರೀಯರು ಪುರುಷರ ಹಾಗೂ ಪುರುಷರು ಸ್ತ್ರೀಯರ ಉಡುಪಾಗಿರುವರು.’ (ಪವಿತ್ರ ಕುರ್‌ಆನ್  2:187) ಎಂದು ಪವಿತ್ರ ಕುರ್‌ಆನ್  ಹೇಳಿದ ಕಾರಣವೂ ಅದುವೇ ಆಗಿದೆ.

ದೇಶದ ಆಡಳಿತಾಧಿಕಾರಿ ಪ್ರಜೆಗಳೊಂದಿಗೆ ಹಾಗೂ ಸಮೂಹದ ನಾಯಕನು ಅನುಯಾಯಿಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಕುಟುಂಬ ನಾಯಕನೂ ಸಮಾಲೋಚಿಸಿಯೇ ನಿರ್ಧಾರ ಕೈಗೊಳ್ಳಬೇಕು. ತಮ್ಮ ವ್ಯವಹಾರಗಳನ್ನು ಪರಸ್ಪರ ಸಮಾಲೋಚನೆಯಿಂದ ನಡೆಸುತ್ತಾರೆ.’ (ಪವಿತ್ರ ಕುರ್‌ ಆನ್ 42: 38)

ಆದ್ದರಿಂದ ಪುರುಷನು ಮನೆಯಲ್ಲಿ ಸ್ಟೇಚ್ಛಾಧಿಪತಿಯೋ, ಸರ್ವಾಧಿಕಾರಿಯೋ ಅಲ್ಲ. ಎಲ್ಲಾ ದೇವ ನಿಯಮಗಳನ್ನು ಪಾಲಿಸುವವನಾಗಿದ್ದಾನೆ. ಕುಟುಂಬದ ಸಂರಕ್ಷಣೆಯನ್ನು

ಮಾನ-ಮರ್ಯಾದೆಯೊಂದಿಗೆ ನಿರ್ವಹಿಸುವ ಹೊಣೆಗಾರಿಯುಳ್ಳವನಾಗಿದ್ದಾನೆ. ಮಹಿಳೆಯರ ಎಲ್ಲಾ ಹಕ್ಕುಗಳನ್ನು ಸಂಪೂರ್ಣವಾಗಿ ನೀಡಿಯೇ ತನ್ನ ಹೊಣೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹನು ಹೇಳುತ್ತಾನೆ: ‘ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ, ಸ್ತ್ರೀಯರಿಗೂ ಪುರಷರ ಮೇಲೆ ನ್ಯಾಯೋಚಿತ ಹಕ್ಕು ಇದೆ.’ (ಪವಿತ್ರ ಕುರ್‌ಆನ್ 2:228)

ಪ್ರವಾದಿ(ಸ)ರು ಹೇಳಿರುವರು: ‘ಗೌರವಾರ್ಹ ವ್ಯಕ್ತಿಗಳಲ್ಲದವರು ಸ್ತ್ರೀಯನ್ನು ಗೌರವಿಸುವುದಿಲ್ಲ, ನೀಚರ ಹೊರತು ಯಾರೂ ನಿಂದಿಸುವುದಿಲ್ಲ’

‘ಕುಟುಂಬದೊಂದಿಗೆ ಕರುಣ ತೋರದವನೂ, ಅಹಂಕಾರಿಯೂ ಸ್ವರ್ಗ ಪ್ರವೇಶಿಸಲಾರನು.’ (ಅಬೂದಾವೂದ್)

‘ವಿಶ್ವಾಸಿಗಳಲ್ಲಿ ಉತ್ತಮ ಸ್ವಭಾವದವರು ವಿಶ್ವಾಸದಲ್ಲಿ ಸಂಪೂರ್ಣತೆಯನ್ನು ಗಳಿಸುತ್ತಾರೆ. ತನ್ನ ಪತ್ನಿಯೊ೦ದಿಗೆ ಅತ್ಯುತ್ತಮವಾಗಿ ವರ್ತಿಸುವವನೇ ನಿಮ್ಮಲ್ಲಿ ಅತ್ಯತ್ತಮನು.'(ಪ್ರವಾದಿ ವಚನ)

ಒಂದು ಕುಟುಂಬದ ಉಳಿವಿಗಾಗಿ, ರಕ್ಷಣೆಗಾಗಿ, ಮೂಲಭೂತ ಅಗತ್ಯಗಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಪುರುಷನಾದ್ದರಿಂದ ಸಮಾಲೋಚನೆಯ ಬಳಿಕ ಕೊನೆಯ ಮಾತು ಅವನದಾಗಿರುತ್ತದೆ. ಆದರೆ ಅದು ಹಕ್ಕುಗಳ ಉಲ್ಲಂಘನೆಯೋ, ಅವಿವೇಕಪೂರ್ಣವೋ ಆಗಿರಬಾರದು. ಪತಿಯಿಂದ ತಪ್ಪು ಸಂಭವಿಸಿದರೆ ತಿದ್ದಲು ಹಾಗೂ ಆತನ ಅನ್ಯಾಯದ ತೀರ್ಮಾನಗಳನ್ನು ಕಡೆಗಣಿಸಲು ಅಥವಾ ಅಗತ್ಯ ಬಂದರೆ ಆತನ ಕುಟುಂಬ ಹಾಗೂ ಅಧಿಕಾರ ಕೇಂದ್ರಗಳನ್ನು ಭೇಟಿಯಾಗಲು ಮಹಿಳೆಗೆ ಅವಕಾಶವಿದೆ. ಅಂತಹ ಸಂದರ್ಭದಲ್ಲಿ ಪುರುಷನು ದೇವನ ಆದೇಶಗಳನ್ನು ಪಾಲಿಸಲು ಬದ್ಧನಾಗಿರಬೇಕು.

ಹೊರಗಿನ ಕ್ಷೇತ್ರದಲ್ಲಿ ಕೆಲಸ ಮಾಡಲು ಮಹಿಳೆಗಿಂತ ಪುರುಷನೇ ಅರ್ಹವ್ಯಕ್ತಿ. ತನ್ನ ಮೇಲಿನ ಆಕ್ರಮಣವನ್ನು ಎದುರಿಸಲು ಪುರುಷನು ಸಶಕ್ತನಾಗಿದ್ದಾನೆ. ಮಹಿಳೆಗೆ ಎಲ್ಲ ಸಮಯಗಳಲ್ಲೂ ಒಂದೇ ರೀತಿಯಲ್ಲಿ ಗದ್ದೆ, ಫ್ಯಾಕ್ಟರಿ, ತೋಟ, ಕಛೇರಿಗಳಿಗೆ ಹೋಗಿ ದುಡಿಯಲು ಸಾಧ್ಯವಿಲ್ಲ, ಮಾನವ ಕುಲದ ಉಳಿಯುವಿಕೆಗೆ ಮಹಿಳೆ ಗರ್ಭಧರಿಸುವುದು, ಹೆರುವುದು, ಎದೆ ಹಾಲು ಉಣಿಸುವುದು ಅನಿಯವಾರ್ಯ, ಇಂತಹ ದೈಹಿಕ ವಿಶೇಷತೆಯ ಕಾರಣ ಇಸ್ಲಾಮ್ ಕುಟುಂಬದ ಆರ್ಥಿಕ ಹೊಣೆಗಾರಿಕೆ, ಸಂರಕ್ಷಣೆ ಹಾಗೂ ನಾಯಕತ್ವ ಸ್ಥಾನವನ್ನು ಪುರುಷನಿಗೆ ನೀಡಿದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *