Home / ಪ್ರಶ್ನೋತ್ತರ / ಮಹಿಳೆಯರು ಪ್ರವಾದಿಯಾಗಿ ನೇಮಕವಾಗದಿರಲು ಕಾರಣವೇನು?

ಮಹಿಳೆಯರು ಪ್ರವಾದಿಯಾಗಿ ನೇಮಕವಾಗದಿರಲು ಕಾರಣವೇನು?

ದೇವನು ಲಿಂಗ ಪಕ್ಷಪಾತಿಯಲ್ಲದಿದ್ದರೆ ಮಹಿಳಾ ಪ್ರವಾದಿಗಳನ್ನು ಏಕೆ ನಿಯೋಗಿಸಲಿಲ್ಲ?

ದೇವದತ್ತ ಜೀವನ ವ್ಯವಸ್ಥೆಯನ್ನು ಸಮಾಜಕ್ಕೆ ಅರ್ಪಿಸಿ, ಕಾರ್ಯಗತಗೊಳಿಸುವುದು ಮತ್ತು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಪ್ರವಾದಿಗಳ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ಕರ್ಮಗಳು, ಸಾಮಾಜಿಕ, ಆರ್ಥಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದಗಳಂತಹ ವಿಷಯಗಳಲ್ಲೂ ಅವರು ಸಮಾಜಕ್ಕೆ ಮಾದರಿಯಾಗಿರಬೇಕು. ತಿಂಗಳ ನಿರ್ದಿಷ್ಟ ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸಲು, ಗರ್ಭಧಾರಣೆ, ಹೆರಿಗೆಯಂತಹ ಸಂದರ್ಭಗಳಲ್ಲಿ ನಾಯಕತ್ವ ವಹಿಸಲು ಮಹಿಳೆಗೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಸಮೂಹಕ್ಕೆ ಸದಾ ಸಮಯವೂ, ಎಲ್ಲ ರಂಗಗಳಲ್ಲೂ ನಾಯಕತ್ವ ವಹಿಸಬೇಕಾದ ಪ್ರವಾದಿತ್ವದ ಹೊಣೆಗಾರಿಕೆಯಿಂದ ಮಹಿಳೆಯರನ್ನು ಮುಕ್ತಗೊಳಿಸಲಾಯಿತು. ಆದರೂ ಪ್ರವಾದಿ ಮೂಸಾರ ಮಾತೆಗೆ ಅತ್ಯಗತ್ಯವಾದ ಆದೇಶಗಳನ್ನು ದೇವವಾಣಿಯ ಮೂಲಕ ನೀಡಲಾಗಿತ್ತೆಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ಅಲ್ಲಾಹನು ಹೇಳುತ್ತಾನೆ: ‘ನಾವು ಮೂಸಾರ ತಾಯಿಗೆ, ಇದಕ್ಕೆ ಮೊಲೆ ಹಾಲುಣಿಸು, ಮುಂದೆ ನಿನಗೆ ಇದರ ಪ್ರಾಣದ ಬಗ್ಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿಬಿಡು. ನೀನು ಕೊಂಚವೂ ಭಯಪಡಬೇಡ. ವ್ಯಥೆ ಪಡಬೇಡ. ನಾವು ಇದನ್ನು ನಿನ್ನ ಬಳಿಗೇ ಮರಳಿ ತರುವೆವು ಮತ್ತು ಇದನ್ನು ಸಂದೇಶವಾಹಕರಲ್ಲಿ ಸೇರಿಸುವೆವು” ಎಂದು ಸೂಚನೆ ನೀಡಿದೆವು.’ (ಪವಿತ್ರ ಕುರ್‌ಆನ್ 28:7)

ಏಸುವಿನ ತಾಯಿಗೂ ಪ್ರವಾದಿಗಳಿಗೆ ಲಭಿಸುವ ರೀತಿಯಲ್ಲಿ ದೇವಚರರಿಂದ ದೇವಸಂದೇಶ ಲಭಿಸಿತ್ತೆಂದು ಪವಿತ್ರ ಕುರ್‌ಆನ್ ಹೇಳುತ್ತದೆ: ‘ಮರ್ಯಮರಿಗೆ ಆ ಮಗುವಿನ ಗರ್ಭ ಉಂಟಾಯಿತು ಮತ್ತು ಅವರು ಆ ಗರ್ಭ ಸಹಿತ ದೂರದ ಒಂದು ಸ್ಥಳಕ್ಕೆ ಹೋದರು. ತರುವಾಯ ಪ್ರಸವ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು “ ಅಕಟ! ನಾನು ಇದಕ್ಕಿಂತ ಮುಂಚೆಯೇ ಸತ್ತು ಹೋಗಿದ್ದರೆ ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ(ಚೆನ್ನಾಗಿತ್ತು)’ ಎನ್ನತೊಡಗಿದರು. ದೇವಚರನು ಕಾಲ ಬಳಿಯಿಂದ ಅವರನ್ನು ಕೂಗಿ ಇಂತೆಂದನು. ಮರುಗಬೇಡಿರಿ. ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿ ಬಿಟ್ಟಿದ್ದಾನೆ. ಮತ್ತು ನೀವು ಆ ಮರದ ಕಾಂಡವನ್ನು ಹಿಡಿದು ಅಲುಗಾಡಿಸಿರಿ. ನಿಮ್ಮ ಮೇಲೆ ಹಸನಾದ ಖರ್ಜೂರದ ಹಣ್ಣುಗಳು ಉದುರಿ ಬೀಳುವುದು. ಈ ರೀತಿಯಲ್ಲಿ ನೀವು ತಿಂದು ಕುಡಿದು ಕಣ್ಮನಗಳನ್ನು ತಣಿಸಿರಿ, ನೀವು ಮಾನವರಾರನ್ನಾದರೂ ಕಂಡರೆ – ‘ನಾನು ಕರುಣಾನಿಧಿ (ಅಲ್ಲಾಹ್) ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರನೆಂದು-ಹೇಳಿ ಬಿಡಿರಿ.’ (ಪವಿತ್ರ ಕುರ್‌ಆನ್ 19: 22-26)

ನಿಸರ್ಗದತ್ತವಾದ ಕಾರಣಗಳಿಂದ ಮಹಿಳೆಯರನ್ನು ಪ್ರವಾದಿಯಾಗಿ ನೇಮಿಸದಿದ್ದರೂ ಪ್ರವಾದಿಗಳಂತೆ ಅವರಿಗೂ ದಿವ್ಯಸಂದೇಶ ಲಭಿಸಿತ್ತೆಂದು ಈ ಸೂಕ್ತಗಳು ಸ್ಪಷ್ಟಪಡಿಸುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *