Home / ಪ್ರಶ್ನೋತ್ತರ / ಸಾಕ್ಷಿಗೆ ಒಬ್ಬಪುರುಷನ ಬದಲು ಇಬ್ಬರು ಸ್ತ್ರೀಯರಿರಬೇಕೆಂಬುದು ಇಸ್ಲಾಮಿನ ನಿಯಮ, ಇದು ಸ್ತ್ರೀಯೊಂದಿಗಿನ ಅನ್ಯಾಯ ಹಾಗೂ ಪುರುಷ ಪ್ರಧಾನವಾದ ದೃಷ್ಟಿಕೋನವಲ್ಲವೇ?

ಸಾಕ್ಷಿಗೆ ಒಬ್ಬಪುರುಷನ ಬದಲು ಇಬ್ಬರು ಸ್ತ್ರೀಯರಿರಬೇಕೆಂಬುದು ಇಸ್ಲಾಮಿನ ನಿಯಮ, ಇದು ಸ್ತ್ರೀಯೊಂದಿಗಿನ ಅನ್ಯಾಯ ಹಾಗೂ ಪುರುಷ ಪ್ರಧಾನವಾದ ದೃಷ್ಟಿಕೋನವಲ್ಲವೇ?

ಓರ್ವ ಪುರುಷನ ಬದಲಿಗೆ ಇಬ್ಬರು ಸ್ತ್ರೀಯರು ಸಾಕ್ಷಿಗಳಾಗಬೇಕೆಂಬುದು ಇಸ್ಲಾಮಿನ ಸಾಮಾನ್ಯ ನಿಯಮವಲ್ಲ. ಇದು ಆರ್ಥಿಕ ವ್ಯವಹಾರಗಳಿಗೆ ಮಾತ್ರ ಅನ್ವಯವಾಗುತ್ತದೆ.

ಮಹಿಳೆಯರು ಸಾಮಾನ್ಯವಾಗಿ ಆರ್ಥಿಕ ವ್ಯವಹಾರ ಹಾಗೂ ಕೊಡುಕೊಳ್ಳುವಿಕೆಯಂತಹ ಕೆಲಸಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದಿರುವುದರಿಂದ, ಸಾಕ್ಷ್ಯದಲ್ಲಿ ಏನಾದರೂ ಗೊಂದಲ ಉಂಟಾಗದಿರಲು ಹಾಗೂ ಸೂಕ್ಷ್ಮತೆಯನ್ನು ಪಾಲಿಸಲು ನಿಶ್ಚಯಿಸಲಾದ ನಿಬಂಧನೆಯಾಗಿದೆ. ಸ್ತ್ರೀಯ ಮೇಲೆ ಸದಾಚಾರ ಉಲ್ಲಂಘನೆಯ ಆರೋಪ ಹೊರಿಸಲ್ಪಟ್ಟರೆ ಆಗ ಮಾಡಬೇಕಾದ ವಿಧಿ ನಿಯಮಗಳಂತೆ, ಸಾಕ್ಷ್ಯ ಹೇಳಲು ಮತ್ತು ಆಣೆ ಹಾಕಲು ಸ್ತ್ರೀ-ಪುರುಷರ ನಡುವೆ ವ್ಯತ್ಯಾಸವಿಲ್ಲವೆಂದು ಕುರ್ ಆನ್ ಸಂಶಯಾತೀತವಾಗಿ ಸ್ಪಷ್ಟಪಡಿಸಿದೆ. (24:6-9)

ಇತರ ಸಾಕ್ಷ್ಯಗಳ ಸ್ಥಿತಿಯೂ ಇದೇ ರೀತಿ ಇವೆ. ವಿವಾಹ ವಿಚ್ಛೇದನದ ಕುರಿತು ಕುರ್ ಆನ್ ಹೇಳುತ್ತದೆ: ‘ಅವರು ತಮ್ಮ(ಇದ್ದತ್‌ನ) ಕಾಲಾವಧಿಯ ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ ನಿಮ್ಮ ವಿವಾಹದಲ್ಲಿ ಉಳಿಸಿಕೊಳ್ಳಿರಿ. ಇಲ್ಲವೇ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ. ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ. ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಲಾಹನಿಗಾಗಿಯೇ ನೀಡಿರಿ.’ (65:2)

ವಸಿಯ್ಯತ್‌ ಕುರಿತು ಪವಿತ್ರ ಕುರ್‌ ಆನ್ ಹೇಳುತ್ತದೆ. ‘ಓ ಸತ್ಯವಿಶ್ವಾಸಿಗಳೇ, ನಿಮಗಾರಿಗಾದರೂ ಮರಣದ ಕಾಲ ಬಂದಾಗ ಮತ್ತು ಅವನು ‘ಉಯಿಲು’ ಮಾಡುತ್ತಿರುವಾಗ ನಿಮ್ಮ ಕೂಟದಿಂದ ಇಬ್ಬರು ನ್ಯಾಯಶೀಲರನ್ನು ಸಾಕ್ಷಿಗಳನ್ನಾಗಿರಿಸಿಕೊಳ್ಳಬೇಕು. ಅಥವಾ ನೀವು ಪ್ರಯಾಣದಲ್ಲಿದ್ದಾಗ ಮರಣದ ಯಾತನೆ ಉಂಟಾದರೆ ಪರಧರ್ಮೀಯರರಿಂದಲಾದರೂ ಇಬ್ಬರನ್ನು ಸಾಕ್ಷಿಗಳಾಗಿರಿಸಿಕೊಳ್ಳಿರಿ.” (5:106)

ಆರ್ತವ, ಹೆರಿಗೆ ಮೊದಲಾದವುಗಳಲ್ಲಿ ಪುರುಷರಿಗೆ ಸಾಕ್ಷಿಗಳಾಗಲು ಸಾಧ್ಯವಿಲ್ಲದಿರುವುದರಿಂದ ಸ್ತ್ರೀಯರ ಸಾಕ್ಷ್ಯವೇ ಸ್ವೀಕಾರಾರ್ಹವೆಂಬುದರಲ್ಲಿ ಇಸ್ಲಾಮೀ ವಿದ್ವಾಂಸರಿಗೆ ಒಮ್ಮತಾಭಿಪ್ರಾಯವಿದೆ.

ಇಸ್ಲಾಮಿನ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಆಡಳಿತಾತ್ಮಕವಾದ ಎಲ್ಲಾ ನಿಯಮಗಳ ಮೂಲ ಆಧಾರ ಪ್ರಮಾಣಗಳಲ್ಲಿ ಪ್ರವಾದಿ ಚರ್ಯೆಯೂ ಒಂದು. ಪ್ರವಾದಿ ಚರ್ಯೆಯ ವರದಿಗಳ ಸ್ವೀಕಾರಾರ್ಹತೆಯಲ್ಲಿ ಪುರುಷರಂತೆಯೇ ಸ್ತ್ರೀಯರದ್ದು ಪ್ರಾಮಾಣಿಕವೂ ಪ್ರಬಲವೂ ಆಗಿದೆ. ಇದರಲ್ಲಿ ಲಿಂಗ ತಾರತಮ್ಯವಿಲ್ಲ. ಆದ್ದರಿಂದ ಪ್ರಸಿದ್ಧ ಹದೀಸ್ ಗ್ರಂಥಗಳಲ್ಲಿ ಪುರುಷರಂತೆಯೇ ಮಹಿಳೆಯರು ವರದಿ ಮಾಡಿದ ಹದೀಸ್ ವಚನಗಳನ್ನು ಧಾರಾಳವಾಗಿ ಕಾಣಬಹುದು.

ಎಲ್ಲಾ ಸಾಕ್ಷಿಗಳ ಸಾಕ್ಷ್ಯವಾದ ಆಧಾರ ಪ್ರಮಾಣಗಳ ವಿಷಯದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಸ್ಥಾನಮಾನ ನೀಡಿದ ಇಸ್ಲಾಮ್ ವ್ಯವಹಾರಗಳ ವಿಷಯದಲ್ಲಿ ವಿಭಿನ್ನ ನಿಲುವು ಸ್ವೀಕರಿಸಿರುವುದು ಅಸಮಾನತೆಯೋ ಅನ್ಯಾಯವೋ ಖಂಡಿತ ಅಲ್ಲವೆಂದೂ, ಗೊಂದಲ ಉಂಟಾಗದಿರಲು ಸೂಕ್ಷ್ಮತೆ ಪಾಲಿಸಲು ಮಾತ್ರವೆಂದೂ ಸ್ಪಷ್ಟವಾಗುತ್ತದೆ.

ಇಮಾಮ್ ಅಬೂ ಹನೀಫ, ತಬರಿಯವರಂತಹ ವಿದ್ವಾಂಸರು ಮಹಿಳೆಯರಿಗೆ ನ್ಯಾಯಾಧೀಶೆಯ ಸ್ಥಾನವನ್ನು ಅಲಂಕರಿಸಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಕಾನೂನು ಅಥವಾ ನ್ಯಾಯ ವ್ಯವಸ್ಥೆಯಲ್ಲಿ ಅಸಮಾನತೆಯಿದ್ದರೆ ನ್ಯಾಯ ತೀರ್ಮಾನ ಮಾಡುವಂತಹ ಉನ್ನತ ಪದವಿಯಾದ ನ್ಯಾಯಾಧೀಶೆಯ ಸ್ಥಾನವನ್ನು ಮಹಿಳೆಗೆ ನೀಡಬಹುದೆಂದು ಪ್ರಾಮಾಣಿಕ ವಿದ್ವಾಂಸರು ಖಂಡಿತ ಹೇಳುತ್ತಿರಲಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *