Home / ಪ್ರಶ್ನೋತ್ತರ / ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?

ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?

  • ಏ.ಕೆ. ಕುಕ್ಕಿಲ

1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ?
2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್‌ನಲ್ಲಿ ಅದಕ್ಕೆ ನಿಷೇಧ ಇದೆಯೇ?

ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ ಪರಮೇಶ್ವರಿಯವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ, ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, ಅಕ್ಬರ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಇಂದಿರಾಗಾಂಧಿ, ನರೇಂದ್ರ ಮೋದಿಯವರೆಗೆ.. ದೇವರುಗಳು, ಧರ್ಮ ಸುಧಾರಕರು, ರಾಜರು ಮತ್ತು ಪ್ರಧಾನ ಮಂತ್ರಿಗಳ ಚಿತ್ರಗಳು, ಪುತ್ಥಳಿಗಳು, ಕಟೌಟ್‌ಗಳು ಮತ್ತು ವಿವಿಧ ಭಂಗಿಯ ದೃಶ್ಯ ರೂಪಗಳು ಯಥೇಚ್ಛ ಲಭ್ಯವಿರುವ ಕಾಲದಲ್ಲಿ 6ನೇ ಶತಮಾನದಲ್ಲಿ ಬಾಳಿ ಬದುಕಿದ ಮುಹಮ್ಮದ್‌ರ(ಸ) ಬಗ್ಗೆ ಮತ್ತು ಅವರು ಪರಿಚಯಿಸಿದ ದೇವರ ಬಗ್ಗೆ ಇಂಥ ಯಾವ ರಚನೆಗಳೂ ಯಾಕೆ ಲಭ್ಯವಿಲ್ಲ ಎಂಬ ಕುತೂಹಲ ಯಾರಲ್ಲಾದರೂ ಮೂಡಿದರೆ ಅಚ್ಚರಿ ಏನಿಲ್ಲ.

ಪ್ರವಾದಿ ಹುಟ್ಟಿ ಬೆಳೆದ 6ನೇ ಶತಮಾನದ ಬದುಕು-ಭಾವ ಮತ್ತು ಜೀವನ ಕ್ರಮಗಳನ್ನು ಅಧ್ಯಯನ ನಡೆಸಿದರೆ ಹಾಗೂ ಪ್ರವಾದಿ ಬೋಧನೆಗಳ ಆಶಯಗಳನ್ನು ಅರಿತುಕೊಂಡರೆ, ಚಿತ್ರ-ಪುತ್ಥಳಿಗಳ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಅಬ್ದುಲ್ಲಾ ಮತ್ತು ಆಮಿನಾರ ಪುತ್ರರಾದ ಮುಹಮ್ಮದರು ಹುಟ್ಟುವಾಗ ಮಕ್ಕಾ ಏನೂ ಮುಸ್ಲಿಮರ ಆಡುಂಬೊಲ ಆಗಿರಲಿಲ್ಲ. ಅಲ್ಲಿ ಕ್ರೈಸ್ತರು, ಯಹೂದಿಯರು ಮತ್ತು ವಿಗ್ರಹಾರಾಧಕರೇ ಇದ್ದರು. ಆದಿ ಮಾನವ ಮತ್ತು ಇಸ್ಲಾಮಿನ ಪ್ರಥಮ ಪ್ರವಾದಿ ಆದಮ್(ಅ)ರಿಂದ ನಿರ್ಮಿತವಾಗಿ ಕಾಲಕ್ರಮೇಣ ಜೀರ್ಣಾವಸ್ಥೆಗೆ ತಲುಪಿ ಬಳಿಕ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಈಲ್(ಅ)ರಿಂದ ಪುನರ್ ನಿರ್ಮಾಣಗೊಂಡ ಮಕ್ಕಾದ ಕಾಬಾದೊಳಗೆ ಆಗ 360ಕ್ಕಿಂತ ಅಧಿಕ ವಿಗ್ರಹಗಳಿದ್ದುವು. ವಿಪರ್ಯಾಸ ಏನೆಂದರೆ, ದೇವನೊಬ್ಬನೇ ಮತ್ತು ಆತನನ್ನು ಮಾತ್ರ ಆರಾಧಿಸಬೇಕು ಎಂದು ಜನರಿಗೆ ಕರೆಕೊಟ್ಟಿದ್ದ ಪ್ರವಾದಿ ಇಬ್ರಾಹೀಮ್ ಮತ್ತು ಇಸ್ಮಾಈಲ್‌ರ ವಿಗ್ರಹವೂ ಕಾಬಾದ ಒಳಗಿತ್ತು. ಅಷ್ಟೇ ಅಲ್ಲ, ಮಕ್ಕಾದಲ್ಲಿ ಈ ಹಿಂದೆ ಬದುಕಿ ಮರೆಯಾಗಿದ್ದ ಸಜ್ಜನರಾದ ಲಾತ್, ಉಝ್ಝ, ಮನಾತ ಮತ್ತಿತರ ಹಲವು ವ್ಯಕ್ತಿಗಳೂ ಆ ಕಾಬಾದೊಳಗೆ ವಿಗ್ರಹಗಳಾಗಿ ಪೂಜಾರ್ಹ ಗೊಂಡಿದ್ದರು. ಬಾಲಕ ಮುಹಮ್ಮದ್ ಇವನ್ನೆಲ್ಲಾ ನೋಡಿ ಬೆಳೆದರು. ಮಾತ್ರವಲ್ಲ, ಮನುಷ್ಯರು ಆರಾಧನೆಗೆ ಒಳಗಾಗುವುದನ್ನು ಅವರ ಅಂತರಾತ್ಮ ಒಪ್ಪುತ್ತಿರಲಿಲ್ಲ. ಆದ್ದರಿಂದಲೇ,

ಇಂಥ ಪೂಜಾ ವಿಧಾನ ಮತ್ತು ಆರಾಧನಾ ಕ್ರಮಗಳಿಂದೆಲ್ಲ ಅವರು ಅಂತರ ಕಾಯ್ದುಕೊಂಡರು. 40ನೇ ಪ್ರಾಯದಲ್ಲಿ ಪ್ರವಾದಿಯಾಗಿ ನಿಯುಕ್ತಗೊಳ್ಳುವುದಕ್ಕಿಂತ ಮೊದಲೇ ಅವರೊಳಗೆ ಮನುಷ್ಯ ಮತ್ತು ದೇವನ ನಡುವಿನ ವ್ಯತ್ಯಾಸಗಳ ಬಗ್ಗೆ ಆಗಿನ ಮಕ್ಕಾ ಜನತೆಯ ನಿಲುವಿಗಿಂತ ಭಿನ್ನ ಆಲೋಚನೆಯಿತ್ತು. 40ನೇ ಪ್ರಾಯದಲ್ಲಿ ಅವರಿಗೆ ದೇವನಿಂದ ವಾಣಿಗಳು ಅವತೀರ್ಣವಾಗತೊಡಗಿತು. ಒಂದು ರೀತಿಯಲ್ಲಿ,

40 ವರ್ಷದ ವರೆಗಿನ ಮುಹಮ್ಮದ್ ಮತ್ತು 40 ವರ್ಷದ ಬಳಿಕದ ಮುಹಮ್ಮದ್- ಈ ಎರಡೂ ಒಂದೇ ಆಗಿರಲಿಲ್ಲ. 40 ವರ್ಷದ ವರೆಗೆ ಅವರೋರ್ವ ವ್ಯಕ್ತಿ. ಮಕ್ಕಾದ ಅಷ್ಟೂ ಜನರ ನಡುವೆ ಓರ್ವ ಸಜ್ಜನ, ಸತ್ಯವಂತ ಮತ್ತು ಪ್ರಾಮಾಣಿಕ ಎಂದು ಗುರುತಿಸಿಕೊಂಡ ವ್ಯಕ್ತಿ. ಜೊತೆಗೇ ಪ್ರಮುಖ ವ್ಯಾಪಾರಿ. ಆದರೆ, 40 ವರ್ಷದ ಬಳಿಕ ಅವರು ಈ ಐಡೆಂಟಿಟಿಯನ್ನು ಮೀರಿ ಪ್ರವಾದಿಯಾಗಿ ಗುರುತಿಸಿಕೊಂಡರು. ಹಾಗೆಯೇ, ಆ ವರೆಗೆ ಮಕ್ಕಾ ಜನತೆಯಿಂದ ಎದುರಿಸದ ವಿರೋಧಗಳನ್ನು ಆ ಬಳಿಕ ಎದುರಿಸಿದರು. ಅವರು ಪ್ರವಾದಿ ಹೌದೋ ಅಲ್ಲವೋ ಎಂಬುದಾಗಿ ಮಕ್ಕಾದ ಜನತೆ ಅವರನ್ನು ವಿಧವಿಧವಾಗಿ ಪರೀಕ್ಷಿಸಿದರು. ಆದರೆ ಪ್ರತಿ ಪರೀಕ್ಷೆಯಲ್ಲೂ ಮುಹಮ್ಮದ್‌ರ ಪ್ರವಾದಿತ್ವ ಸಾಬೀತುಗೊಳ್ಳುತ್ತಲೇ ಹೋಯಿತು ಮತ್ತು ಅನುಯಾಯಿಗಳು ಮತ್ತು ಪರೋಕ್ಷ ಬೆಂಬಲಿಗರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಬಂತು.

ಅಷ್ಟಕ್ಕೂ, ತನಗಿರುವ ಜನಪ್ರಿಯತೆ ಮತ್ತು ದಿನೇದಿನೇ ಹೆಚ್ಚುತ್ತಿರುವ ಬೆಂಬಲಿಗರ ಸಂಖ್ಯೆಯನ್ನು ಪರಿಗಣಿಸಿ, ಅವರಿಗೆ ತಾನು ಮನುಷ್ಯಾತೀತ ಎಂದು ಹೇಳಿಕೊಳ್ಳಬಹುದಿತ್ತು. ತನ್ನನ್ನು ಪವಾಡ ಪುರುಷನಾಗಿಯೋ ಪೂಜೆಗೆ ಅರ್ಹನಾದ ವ್ಯಕ್ತಿಯಾಗಿಯೋ ದೇವನ ಅವತಾರವಾಗಿಯೋ ಬಿಂಬಿಸಿಕೊಳ್ಳಬಹುದಿತ್ತು. ಹೀಗೆ ಬಿಂಬಿಸಿಕೊಳ್ಳದ ಪ್ರವಾದಿ ಇಬ್ರಾಹೀಮ್ ಮತ್ತು ಇಸ್ಮಾಈಲ್‌ರೇ ವಿಗ್ರಹವಾಗಿ ಕಾಬಾದೊಳಗೆ ಪೂಜೆಗೊಳ್ಳುತ್ತಿರುವಾಗ, ಒಂದು ವೇಳೆ ಜೀವಂತವಿರುವಾಗಲೇ ಪ್ರವಾದಿ ಮುಹಮ್ಮದ್ ಹಾಗೆ ಬಿಂಬಿಸಿಕೊಂಡಿರುತ್ತಿದ್ದರೆ ಅವರ ಜನಪ್ರಿಯತೆಗೇನೂ ಕುಂದುಂಟಾಗುತ್ತಿರಲಿಲ್ಲ ಮತ್ತು ಅವರನ್ನು ವಿರೋಧಿಸುತ್ತಿದ್ದವರೇ ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಹೆಚ್ಚಿತ್ತು. ‘ನೀನು ಏಕದೇವ ಪ್ರತಿಪಾದನೆಯನ್ನು ಕೈಬಿಟ್ಟರೆ ನಿನಗೆ ಬೇಕಾದುದನ್ನು ನಾವು ಕೊಡುತ್ತೇವೆ..’ ಎಂದು ಮಕ್ಕಾದ ವಿರೋಧಿಗಳು ಅವರಿಗೆ ಆಫರನ್ನೂ ನೀಡಿದ್ದರು. ಆದರೆ, ಪ್ರವಾದಿ ಮುಹಮ್ಮದ್ ಎಲ್ಲೂ ಮಾನವ ದೇವನಾಗುವ ಸಂದರ್ಭಕ್ಕೆ ಅವಕಾಶವನ್ನೇ ಕೊಡಲಿಲ್ಲ.

ಮಾತ್ರವಲ್ಲ, ಪವಿತ್ರ ಕುರ್‌ಆನ್‌ನಲ್ಲಿ ಜನರೊಂದಿಗೆ ಹೀಗೆ ಹೇಳುವಂತೆ ಅಲ್ಲಾಹನೇ ಅವರಿಗೆ ಆಜ್ಞಾಪಿಸುತ್ತಾನೆ;
‘ಓ ಪೈಗಂಬರರೇ, ಇವರೊಡನೆ ಹೇಳಿರಿ, ನನ್ನಲ್ಲಿ ಅಲ್ಲಾಹನ ಖಜಾನೆಗಳಿವೆಯೆಂದು ನಾನು ನಿಮ್ಮೊಡನೆ ಹೇಳುವುದಿಲ್ಲ. ನಾನು ಪರೋಕ್ಷ ಜ್ಞಾನಿಯೂ ಅಲ್ಲ. ನಾನು ದೇವಚರನೆಂದೂ ಹೇಳುವುದಿಲ್ಲ. ನಾನು ನನ್ನ ಮೇಲೆ ಅವತೀರ್ಣಗೊಳ್ಳುತ್ತಿರಿರುವ ದಿವ್ಯ ವಾಣಿಯ ಅನುಸರಣೆಯನ್ನು ಮಾತ್ರ ಮಾಡುತ್ತಿದ್ದೇನೆ.’ (6:50)

ಇನ್ನೊಂದು ವಚನ ಹೀಗಿದೆ;
‘ಇವರೊಡನೆ ಹೇಳಿರಿ, ನಾನೋರ್ವ ಅಪೂರ್ವ ಸಂದೇಶವಾಹಕನಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗರಿಯದು. ನಾನಂತೂ ನನ್ನ ಬಳಿಗೆ ಕಳುಹಿಸಲಾಗುತ್ತಿರುವ ದಿವ್ಯವಾಣಿಯನ್ನು ಅನುಸರಿಸುತ್ತಿದ್ದೇನೆ. ನಾನೋರ್ವ ಸುಸ್ಪಷ್ಟ ಎಚ್ಚರಿಕೆ ನೀಡುವವನೇ ಹೊರತು ಇನ್ನೇನಲ್ಲ.’ (46:9)

ಇದನ್ನೂ ಓದಿ;
‘ಓ ಪೈಗಂಬರರೇ ಹೇಳಿರಿ, ನಾನು ನಿಮ್ಮಂತೆಯೇ ಇರುವ ಓರ್ವ ಮನುಷ್ಯ. ನಿಮ್ಮ ದೇವನು ಏಕಮಾತ್ರ ದೇವನೆಂದು ನನ್ನ ಕಡೆಗೆ ದಿವ್ಯವಾಣಿ ಮಾಡಲಾಗುತ್ತಿದೆ.’ (18:110)

ಇಷ್ಟೇ ಅಲ್ಲ,
‘ನನ್ನ ಸಮಾಧಿಯನ್ನು ಆರಾಧನೆಯ ವಿಗ್ರಹವಾಗಿ ಮಾಡಬೇಡಿ’ ಎಂದು ಅಲ್ಲಾಹನಲ್ಲೂ ಅವರು ಪ್ರಾರ್ಥಿಸಿದ್ದರು ಮತ್ತು ದೇವನು ಅದನ್ನು ಸ್ವೀಕರಿಸಿದ್ದಾಗಿ ವರದಿಯಿದೆ. ಕ್ರೈಸ್ತರು ಈಸಾರನ್ನು ಅತಿರೇಕ ಮಟ್ಟಕ್ಕೆ ಕೊಂಡೊಯ್ದಂತೆ ನನ್ನನ್ನು ಕೊಂಡೊಯ್ಯಬೇಡಿ ಎಂದೂ ತನ್ನ ಅನುಯಾಯಿಗಳಲ್ಲಿ ಪ್ರವಾದಿ(ಸ) ಹೇಳಿದ್ದರು. ಅಷ್ಟಕ್ಕೂ,

ಪವಿತ್ರ ಕುರ್‌ಆನ್‌ನಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಇಷ್ಟೆಲ್ಲಾ ಜಾಗರೂಕತೆಯ ವಾಣಿಗಳು ಅವತೀರ್ಣಗೊಳ್ಳುವುದಕ್ಕೆ ಕಾರಣಗಳೇ ನು? ತನ್ನನ್ನು ಆರಾಧ್ಯರ ಮಟ್ಟಕ್ಕೆ ಏರಿಸಬೇಡಿ, ಪ್ರವಾದಿ ಈಸಾರ ವಿಷಯದಲ್ಲಿ ಅವರ ಅನುಯಾಯಿಗಳು ಇಂಥ ತಪ್ಪು ಮಾಡಿದ್ದಾರೆ, ತನ್ನ ಸಮಾಧಿ ವಿಗ್ರಹವಾಗದಿರಲಿ ಎಂದೆಲ್ಲಾ ಸ್ವತಃ ಪ್ರವಾದಿಯೇ(ಸ) ಹೇಳಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರವೇ ‘ಪ್ರವಾದಿಯವರ ಚಿತ್ರವೇಕಿಲ್ಲ’ ಎಂಬ ಪ್ರಶ್ನೆಗೂ ಉತ್ತರ ಅನ್ನಿಸುತ್ತದೆ. ತನ್ನ ಹಿಂದಿನ ಕಾಲದ ಪ್ರವಾದಿಗಳು ಮತ್ತು ಸಜ್ಜನರು ವಿಗ್ರಹಗಳಾಗಿ ಮತ್ತು ಪವಾಡ ಪುರುಷರಾಗಿ ಆರಾಧನೆಗೊಳಗಾಗುತ್ತಿರುವುದನ್ನು ಪ್ರವಾದಿ ಕಣ್ಣಾರೆ ಕಂಡಿದ್ದಾರೆ. ಒಂದು ವೇಳೆ ತಾನು ಈ ವಿಷಯದಲ್ಲಿ ಎಚ್ಚರಿಕೆ ವಹಿಸದೇ ಹೋದರೆ ತನ್ನ ಕಾಲಾನಂತರ ತಾನೂ ಹೀಗೆಯೇ ಆರಾಧನೆಗೆ ಒಳಗಾಗಬಹುದು ಎಂಬ ಭಾವ ಅವರಲ್ಲಿ ಉಂಟಾಗಿರಬಹುದು. ಆದುದರಿಂದಲೇ, ತನ್ನ ಅನುಯಾಯಿಗಳಿಗೆ ತಾನೇನು ಮತ್ತು ಪೂಜೆಗೆ ಅರ್ಹನು ಯಾರು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದರು ಎಂದನ್ನಿಸುತ್ತದೆ. ಒಂದು ವೇಳೆ, ತನ್ನ ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟರೆ ತಾನಿಲ್ಲದ ಕಾಲದಲ್ಲಿ ಅದು ಅಸಾಮಾನ್ಯ ಗೌರವಕ್ಕೆ ಪಾತ್ರವಾದೀತು ಎಂಬ ಭಯವೂ ಅವರಲ್ಲಿ ಇದ್ದಿರಬಹುದು. ಹಾಗಂತ, ಪವಿತ್ರ ಕುರ್‌ಆನ್‌ನಲ್ಲಿ ಚಿತ್ರ ಬಿಡಿಸಬಾರದು ಎಂಬ ನೇರ ವಾಕ್ಯ ಇಲ್ಲ. ಇದೇ ವೇಳೇ, ಆರಾಧನೆಗಾಗಿ ಚಿತ್ರವನ್ನಾಗಲಿ ಸ್ಮಾರಕವನ್ನಾಗಲಿ ರಚಿಸಬಾರದು, ಆದರೆ ಕಲೆಯಾಗಿ ತಪ್ಪಿಲ್ಲ’ ಎಂಬ ಅಭಿಪ್ರಾಯವನ್ನು ಆಧುನಿಕ ವಿದ್ವಾಂಸರು ವ್ಯಕ್ತಪಡಿಸಿರುವುದನ್ನು ನೋಡಿದರೆ ಚಿತ್ರ ರಚನೆಗೆ ಇಸ್ಲಾಮ್ ವಿರೋಧಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇನ್ನೂ ಒಂದು ಸಂಗತಿಯಿದೆ-
ಒಂದು ಚಿತ್ರವಾಗಿ ತಾನಿರುವುದನ್ನು ಪ್ರವಾದಿ ಬಯಸಿರಲಿಲ್ಲವಾದರೂ ಮೌಖಿಕವಾಗಿ ಮತ್ತು ಬರಹದ ರೂಪದಲ್ಲಿ ಅವರಿರುವುದನ್ನು ವಿರೋಧಿಸಿಲ್ಲ ಎಂಬುದೂ ಮುಖ್ಯವಾಗುತ್ತದೆ. ಪ್ರವಾದಿಯ ಶರೀರ ಹೇಗಿತ್ತು, ಅವರ ಬಣ್ಣ, ಅವರ ಕೂದಲು ಮತ್ತು ಗಡ್ಡದ ಉದ್ದಳತೆ, ಅವರು ಕುಳಿತುಕೊಳ್ಳುವ ಭಂಗಿ, ನಮಾಝ್ ಗೆ ನಿಲ್ಲುವ ರೀತಿ, ತಿನ್ನುವ ವಿಧಾನ, ಮಾತಿನ ಶೈಲಿ, ನಗು, ನಡೆಯುವ ರೀತಿ, ಧರಿಸುವ ವಸ್ತ್ರ ಪೇಟ, ಕಣ್ಣುಗಳು.. ಇತ್ಯಾದಿಗಳ ವಿವರ ಗ್ರಂಥಗಳಲ್ಲಿ ಸಿಗುತ್ತದೆ. ಹೀಗೆ ಬರೆದಿಡುವುದನ್ನು ಮತ್ತು ಮೌಖಿಕವಾಗಿ ಹೇಳುವುದನ್ನು ಪ್ರವಾದಿ ವಿರೋಧಿಸಿಲ್ಲ ಎಂದೇ ಇದರರ್ಥ. ಅಂದರೆ, ಒಂದು ಚಿತ್ರವಾಗಿ ಉಳಿಯುವುದರ ಬಗ್ಗೆ ಪ್ರವಾದಿಯವರಿಗೆ ನಿರ್ದಿಷ್ಟ ನಿಲುವು ಇತ್ತು. ಈ ಹಿಂದಿನ ಸಜ್ಜನರಂತೆ ತಾನೂ ಆರಾಧನೆಗೋ ಇನ್ನೇನಕ್ಕೋ ಒಳಗಾದೇನು ಎಂಬ ಸ್ಪಷ್ಟತೆ ಅದರಲ್ಲಿತ್ತು. ಸಾಮಾನ್ಯ ಜನರು ತಕ್ಷಣ ಭಾವುಕರಾಗುತ್ತಾರೆ. ತಮ್ಮಲ್ಲಿಲ್ಲದ ವಿಶೇಷತೆ ಇನ್ನೊಬ್ಬರಲ್ಲಿ ಕಂಡಾಗ ಮೋಹಗೊಳ್ಳುತ್ತಾರೆ. ಕ್ರಮೇಣ ಈ ಮೋಹವು ಆರಾಧನಾ ರೂಪವಾಗಿ ಬದಲಾಗಿ ಬಿಡುತ್ತದೆ. ಇವತ್ತಿನ ದಿನಗಳಲ್ಲಿ ಇಂಥವು ಮಾಮೂಲು. ದೇವ ಮಾನವರೇ ತುಂಬಿ ಹೋಗಿರುವ ಮತ್ತು ಮನುಷ್ಯರೇ ದೇವರಂತೆ ಪೂಜೆಗೊಳ್ಳುತ್ತಿರುವ ಸನ್ನಿವೇಶದಲ್ಲಿ ಪ್ರವಾದಿಯ ಚಿತ್ರ ಇಲ್ಲದೇ ಇರುವುದರ ಮಹತ್ವ ಸುಲಭದಲ್ಲೇ ಅರ್ಥವಾಗಬಹುದು. ಹುಟ್ಟಿಯೇ ಇಲ್ಲದ ಉರಿಗೌಡ-ನಂಜೇಗೌಡರನ್ನು ಹುಟ್ಟಿಸಿ ಅವರದ್ದೊಂದು ಚೆಲುವಾದ ಆಕೃತಿಯನ್ನು ರಚಿಸಿ ಜನಸಾಮಾನ್ಯರನ್ನು ನಂಬಿಸಬಹುದಾದ ಈ ಕಾಲದಲ್ಲಿ ಪ್ರವಾದಿಯ(ಸ) ಚಿತ್ರ ಬಿಡಿಸುವುದಕ್ಕೆ ಅನುಮತಿ ಸಿಗುತ್ತಿದ್ದರೆ ಏನಾಗುತ್ತಿತ್ತು? ಅಂದಹಾಗೆ,

ಪವಿತ್ರ ಕುರ್‌ಆನ್ ಪರಿಚಯಿಸುವ ಅಲ್ಲಾಹನನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ತರುವುದಕ್ಕೆ ಸಾಧ್ಯವೇ ಇಲ್ಲ. ‘ವಿಶ್ವದ ಯಾವ ವಸ್ತುವೂ ಅಲ್ಲಾಹನನ್ನು ಹೋಲುವುದಿಲ್ಲ’ (42:11) ಎಂದು ಹೇಳುವ ಕುರ್‌ಆನ್, ಇನ್ನೊಂದೆಡೆ ‘ಅಲ್ಲಾಹನು ಭೂಮಿ-ಆಕಾಶಗಳ ಪ್ರಕಾಶವಾಗಿರುವನು’ (24:35) ಎಂದೂ ಹೇಳಿದೆ. ‘ಅಲ್ಲಾಹನಿಗೆ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ’ (112:3) ಎಂದೂ ಹೇಳಿದೆ. ಅಲ್ಲಾಹನೆಂಬುದು ಆಕಾರಗಳಲ್ಲಿ ನಿರ್ದಿಷ್ಟವಾಗಿ ಕಟ್ಟಿಕೊಡಲಾಗದ ಒಂದು ಅಪರಿಮಿತ ಶಕ್ತಿ. ಅಲ್ಲಾಹನಿಗೆ ಸಂಬಂಧಿಸಿ ನೋಡಿದರೆ ಪ್ರವಾದಿಯವರಿಗೆ ಖಚಿತ ಐಡೆಂಟಿಟಿಯಿದೆ. ಅವರು 63 ವರ್ಷಗಳ ಕಾಲ ಜನರ ನಡುವೆ ಬದುಕಿದ್ದಾರೆ. ಅವರ ದೇಹಾಕೃತಿ, ಮಾತು-ಕೃತಿ, ಬದುಕು-ಭಾವಗಳನ್ನು ಜನರು ಕಂಡಿದ್ದಾರೆ. ಅವರು ಮದುವೆಯಾಗಿದ್ದರು, ಮಕ್ಕಳಿದ್ದರು, ಕಾಯಿಲೆ ಬಂದಿತ್ತು, ಹಸಿವು- ನೀರಡಿಕೆ, ದುಃಖ, ಸಂತೋಷ ಇತ್ಯಾದಿ ಮಾನವ ಸಹಜವಾದುದು ಅವರಲ್ಲೂ ಇತ್ತು. ಇವೆಲ್ಲವುಗಳ ಆಚೆಗೂ ಚಿತ್ರವಾಗಿ ಈ ಜಗತ್ತಿನಲ್ಲಿ ಅವರಿಲ್ಲ ಎಂಬುದು ಕೌತುಕದಷ್ಟೇ ಅಧ್ಯಯನಕ್ಕೂ ಯೋಗ್ಯ. ಚಿತ್ರವಿಲ್ಲದ ಪ್ರವಾದಿಗೆ ಜಾಗತಿಕವಾಗಿ ಇಷ್ಟೊಂದು ಅನುಯಾಯಿಗಳು ಯಾಕಿದ್ದಾರೆ ಮತ್ತು ಅವರು ಪರಿಚಯಿಸಿದ ಅಲ್ಲಾಹನನ್ನು ಅನುಸರಿಸುವವರು ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹೇಗೆ ನಿರ್ಮಾಣವಾದರು ಎಂಬುದೂ ವಿಶ್ಲೇಷಣೆಗೆ ಅರ್ಹ. ಅಷ್ಟಕ್ಕೂ,

ಕಲೆ ನಿಷಿದ್ಧವಲ್ಲದ ಧರ್ಮದಲ್ಲಿ ಅಲ್ಲಾಹನ ಮತ್ತು ಪ್ರವಾದಿ ಮುಹಮ್ಮದ್(ಸ)ರ ಚಿತ್ರ ಇಲ್ಲದೇ ಇರುವುದು ಹಾಗೂ ಇದರಿಂದಾಗಿ ಇಸ್ಲಾಮ್ ಧರ್ಮಕ್ಕೆ ಆಗಿರುವ ಲಾಭ-ನಷ್ಟಗಳೇನು ಎಂಬುದು ಸಂಶೋಧನೆಗೆ ಒಳಗಾಗುವುದಾದರೆ ನಿಜಕ್ಕೂ ಸ್ವಾಗತಾರ್ಹ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *