Home / ಪ್ರವಾದಿ ವಚನಗಳು / ವಿಶ್ವಾಸ ಮತ್ತು ನಂಬಿಕೆ

ವಿಶ್ವಾಸ ಮತ್ತು ನಂಬಿಕೆ

ಅಬೂ ಹುರೈರಾ(ರ) ಹೇಳುತ್ತಾರೆ- ಪ್ರವಾದಿ(ಸ) ಜನರೊಂದಿಗೆ ಹೀಗೆಂದರು- ‘ನೀವು ನನ್ನಲ್ಲಿ ಧರ್ಮದ ವಿಷಯಗಳನ್ನು ಕೇಳಿ ತಿಳಿಯಿರಿ.’ ಆದರೆ ಜನರಿಗೆ ಪ್ರವಾದಿಯವರ(ಸ) ಮೇಲೆ ಇದ್ದ ಗೌರವಾದರಗಳಿಂದಾಗಿ, ಅವರು ಸಾಮಾನ್ಯವಾಗಿ ಏನೂ ಪ್ರಶ್ನಿಸುತ್ತಿರಲಿಲ್ಲ (ಹೊರಗಿನಿಂದ ಯಾರಾದರೂ ಬಂದು ಪ್ರಶ್ನೆ ಕೇಳಿದರೆ ತಮಗೂ ಅದರಿಂದ ಪ್ರಯೋಜನ ಪಡೆಯಬಹುದೆಂದು ಪ್ರತಿಯೊಬ್ಬನೂ ನಿರೀಕ್ಷಿಸುತ್ತಿದ್ದನು). ಹೀಗಿರುವಾಗ ಒಬ್ಬ ವ್ಯಕ್ತಿ ಬಂದು, ಪ್ರವಾದಿಯವರ(ಸ) ಸಮೀಪ ಕುಳಿತುಕೊಂಡು ಕೇಳಿದನು- ಅಲ್ಲಾಹನ ಸಂದೇಶ ವಾಹಕರೆ! ಇಸ್ಲಾಮ್ ಎಂದರೇನು? ಪ್ರವಾದಿ(ಸ) ಹೇಳಿದರು- ಯಾರನ್ನೂ ದೇವನ ಸಹಭಾಗಿಯಾಗಿಸದಿರುವುದು, ನಮಾಝ್ ಸಂಸ್ಥಾಪಿಸುವುದು, ಅಲ್ಲಾಹನ ಮಾರ್ಗದಲ್ಲಿ ಸಂಪತ್ತನ್ನು ಖರ್ಚುಮಾಡುವುದು, ರಮಝಾನ್ ತಿಂಗಳಲ್ಲಿ ಉಪವಾಸವ್ರತ ಆಚರಿಸುವುದು. ಆಗ ಆ ವ್ಯಕ್ತಿ, ‘ತಾವು ನಿಜ ಹೇಳಿದಿರಿ’ ಎಂದನು. ತರುವಾಯ ಅವನು ಕೇಳಿದನು, ಅಲ್ಲಾಹನ ಸಂದೇಶವಾಹಕರೇ, ಈಮಾನ್ ಎಂದರೇನು? ಪ್ರವಾದಿ(ಸ) ಹೇಳಿದರು- ಅಲ್ಲಾಹನನ್ನು, ಮಲಕ್‍ಗಳನ್ನು, ಅಲ್ಲಾಹನ ಗ್ರಂಥಗಳನ್ನು, ಅವನ ಪ್ರವಾದಿಗಳನ್ನು ನಂಬುವುದು, ಮರಣದ ಬಳಿಕ ಜೀವಂತ ಎಬ್ಬಿಸಲ್ಪಡಲಿಕ್ಕಿದೆ ಹಾಗೂ ಈ ಲೋಕದಲ್ಲಿ ಸಂಭವಿಸುವುದೆಲ್ಲವೂ ಅಲ್ಲಾಹನ ವಿಧಿ ನಿಯಮಕ್ಕನುಗುಣವಾಗಿ ನಡೆಯುವುದೆಂದು ದೃಢವಾಗಿ ನಂಬುವುದು. ಆಗ ಅವನು, ತಾವು ಸತ್ಯ ಹೇಳಿದಿರಿ ಎಂದನು. ಆ ಬಳಿಕ ಆ ವ್ಯಕ್ತಿ ‘ಇಹ್ಸಾನ್’ ಎಂದರೇನು ಎಂದು ಕೇಳಿದನು. ಪ್ರವಾದಿ(ಸ) ಹೇಳಿದರು- ‘ಇಹ್ಸಾನ್’ ಎಂದರೆ ನೀನು ಅಲ್ಲಾಹನನ್ನು ನೋಡುತ್ತಿರುವೆಯೋ ಎಂಬಂತೆ ಅವನನ್ನು ಭಯಪಡುವುದು. ಒಂದು ವೇಳೆ ನೀನು ಅವನನ್ನು ನೋಡದಿದ್ದರೂ ಅವನಂತೂ ನಿನ್ನನ್ನು ನೋಡುತ್ತಿದ್ದಾನೆ. ಆಗ ಅವನು ಹೇಳಿದನು- ತಾವು ಸರಿಯಾದ ಉತ್ತರವನ್ನೇ ನೀಡಿದಿರಿ.
ತರುವಾಯ ಅವನು ಕಿಯಾಮತ್(ಅಂತಿಮದಿನ) ಯಾವಾಗ ಬರುವುದೆಂದು ಕೇಳಿದನು. ಪ್ರವಾದಿ(ಸ) ಹೇಳಿದರು- ನನಗೂ ನಿಮ್ಮಂತೆಯೇ ಅದು ಬರುವ ಸಮಯ ತಿಳಿದಿಲ್ಲ. ಆದರೆ ಅದು ಬರುವುದಕ್ಕಿಂತ ಮುಂಚೆ ಪ್ರಕಟವಾಗುವ ಕೆಲವು ಸೂಚನೆಗಳನ್ನು ನೀಡಬಲ್ಲೆ-
(1) ಸ್ತ್ರೀಯು ತನ್ನ ಮಾಲಕನನ್ನು ಹಡೆಯುವುದನ್ನು ಕಂಡರೆ ಕಿಯಾಮತ್ ಹತ್ತಿರ ಬಂತೆಂದು ತಿಳಿಯಿರಿ.
(2) ನಗ್ನ ಪಾದ ಮತ್ತು ನಗ್ನ ಶರೀರದ ಕಿವುಡರ ಮತ್ತು ಮೂಗರ ಕೈಯಲ್ಲಿ ಭೂಮಿಯ ಅಧಿಕಾರ ಬಂದರೆ ಅದೂ ಕಿಯಾಮತ್‍ನ ಕುರುಹುಗಳಲ್ಲೊಂದಾಗಿದೆ.
(3) ಜಾನುವಾರುಗಳನ್ನು ಮೇಯಿಸುವವರು ಭವ್ಯ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಪೈಪೋಟಿ ನಡೆಸುವುದನ್ನು ಕಂಡರೆ ಕಿಯಾಮತ್ ಹತ್ತಿರ ಬಂತೆಂದು ತಿಳಿಯಿರಿ.
[ಬುಖಾರಿ, ಮುಸ್ಲಿಮ್]

ಟಿಪ್ಪಣಿ: ಈಮಾನ್ ಎಂಬ ಪದದ ನೈಜ ಅರ್ಥ- ಯಾರನ್ನಾದರೂ ನಂಬುವುದು, ಅವನ ಮಾತನ್ನು ಸತ್ಯವೆಂದು ತಿಳಿದು ಒಪ್ಪಿಕೊಂಡು ಅದನ್ನು ತನ್ನದಾಗಿಸುವುದು. ಮನುಷ್ಯನಿಗೆ ಯಾವುದಾದರೊಂದು ವಿಷಯದ ಸತ್ಯಸಂಧತೆಯ ಬಗ್ಗೆ ಖಾತ್ರಿಯಾದಾಗ ಮಾತ್ರ ಆತನು ಅದನ್ನು ನಂಬಿ ಸ್ವೀಕರಿಸಿಕೊಳ್ಳುತ್ತಾನೆ. ಈಮಾನ್‍ನ ನೈಜ ಸ್ಫೂರ್ತಿ ಇದೇ ವಿಶ್ವಾಸ ಮತ್ತು ನಂಬಿಕೆಯಾಗಿದೆ. ಒಬ್ಬನು ಸತ್ಯ ವಿಶ್ವಾಸಿಯಾಗಲು ಅಲ್ಲಾಹನ ವತಿಯಿಂದ ಬಂದ ಎಲ್ಲ ವಿಷಯಗಳನ್ನು ಒಪ್ಪಿ ಅಂಗೀಕರಿಸಬೇಕಾದುದು ಅಗತ್ಯ.

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …