Home / ಮುಂದಿನ ಜೀವನ

ಮುಂದಿನ ಜೀವನ

ಇಸ್ಲಾಮ್ ಧರ್ಮವು ಏಕದೇವ ವಿಶ್ವಾಸ, ಪ್ರವಾದಿತ್ವ ಮತ್ತು ಪರಲೋಕ ಎಂಬ ಮೂರು ಮೂಲಭೂತ ವಿಶ್ವಾಸಗಳಲ್ಲಿ ನೆಲೆ ನಿಂತಿದೆ. ಪರಲೋಕದ ಕುರಿತು ಎಲ್ಲ ಧರ್ಮಗಳಲ್ಲಿಯೂ ವಿಭಿನ್ನ ಕಲ್ಪನೆಗಳಿವೆ. ಇಸ್ಲಾಮಿನ ಪರಲೋಕ ಕಲ್ಪನೆಯು ವಿಶಿಷ್ಟವೂ ಸುಸ್ಪಷ್ಟವೂ ಆಗಿದೆ.

ಮಾನವ ಜೀವನವು ಮುಖ್ಯವಾಗಿ ಮೂರು ಹಂತಗಳನ್ನು ದಾಟಬೇಕು. ಅದರಲ್ಲಿ ಭೂಲೋಕ ಜೀವನವು ಪ್ರಥಮ ಹಂತ. ಎರಡನೆಯ ಹಂತವು ಮರಣ ಮತ್ತು ಪುನರುತ್ಥಾನ ದಿನದ ಮಧ್ಯಂತರವಾಗಿದ್ದು ಆತ್ಮ ಪ್ರಧಾನ ಜೀವನವಾಗಿದೆ. ಮೂರನೆಯ ಹಂತವು ಒಳಿತು ಕೆಡುಕುಗಳಿಗೆ ಪುರಸ್ಕಾರ ಮತ್ತು ಶಿಕ್ಷೆ ದೊರೆಯುವ ಪುನರುತ್ಥಾನ ದಿನದಿಂದ ಆರಂಭವಾಗುವುದು. ಇದರಲ್ಲಿ ಪ್ರಥಮ ಹಂತದ ಜೀವನದ ಬಗ್ಗೆ ಮಾನವನಿಗೆ ತಿಳಿದಿದೆ. ಉಳಿದೆರಡು ಹಂತದ ಜೀವನವು ಮಾನವನ ಅಥವಾ ವಿಜ್ಞಾನದ ಮಿತಿಯನ್ನು ವಿೂರಿದೆ. ಆ ಬಗ್ಗೆ ಸರ್ವಜ್ಞಾನಿಯಾದ ದೇವನು ತನ್ನ ಸತ್ಯಸಂಧ ಪ್ರವಾದಿಗಳ ಮೂಲಕ ನಮಗೆ ತಿಳಿಸಿರುವ ವಿಷಯಗಳಲ್ಲಿ ನಾವು ವಿಶ್ವಾಸವಿರಿಸಬೇಕಾಗಿದೆ.

ಮಾನವ ಜೀವನವು ಅನಶ್ವರ ಮತ್ತು ಶಾಶ್ವತವೆಂದು ಇಸ್ಲಾಮ್ ಪ್ರತಿಪಾದಿಸುತ್ತದೆ. ಮರಣದಿಂದ ಒಂದು ಹೊಸ ಜೀವನ ಆರಂಭವಾಗುತ್ತದೆ. ಇಹಲೋಕ ಜೀವನದಲ್ಲಂತೂ ಸತ್ಕರ್ಮ ವೆಸಗಿದವರಿಗೆ ಸಂಕಷ್ಟ ಮತ್ತು ದುಷ್ಕರ್ಮಿಗಳಿಗೆ ಸುಖ ದೊರೆಯುವ ಸಾಧ್ಯತೆಯಿದೆ. ಆದರೆ ಮರಣೋತ್ತರ ಜೀವನದಲ್ಲಿ ಹಾಗಾಗಲಾರದು. ಆದ್ದರಿಂದ ಅದೇ ವಾಸ್ತವಿಕ ಜೀವನವಾಗಿದೆ. ಮರಣೋತ್ತರ ಜೀವನಕ್ಕೆ ಹೋಲಿಸಿದಾಗ ಈ ಜೀವನ ತೀರಾ ಕ್ಷಣಿಕವಾಗಿದೆ. ಮರಣಾನಂತರ ಒಂದು ಜೀವನವಿದೆಯೇ ಇಲ್ಲವೇ ಎಂಬುದನ್ನು ಕೇವಲ ಭೌತಿಕ ಜ್ಞಾನದಿಂದ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಪರಲೋಕವು ಪಂಚೇಂದ್ರಿಯಗಳಿಗೂ ಮಾನವನ ವೈಜ್ಞಾನಿಕ ಸಾಮರ್ಥ್ಯಗಳಿಗೂ ವಿೂರಿದ ವಿಷಯವಾಗಿದೆ. ವಿಜ್ಞಾನವು ಮಾನವನ ಅನುಭವಗಳಿಂದ ಹುಟ್ಟಿಕೊಂಡ ಒಂದು ಜ್ಞಾನ ಶಾಖೆಯಾಗಿದೆ. ಆದ್ದರಿಂದ ಅನುಭವದ ವ್ಯಾಪ್ತಿಗೆ ವಿೂರಿದ ಯಾವುದೇ ವಿಷಯವನ್ನು ಅದರಿಂದ ನಿರೀಕ್ಷಿಸುವುದು ಅವಿವೇಕತನವಾಗಿದೆ.

ಕೆಲವೊಂದು ವಾಸ್ತವಿಕಾಂಶಗಳು ನಮಗೆ ಹಲವು ಕಾಲದ ಬಳಿಕ ಸಂಶೋಧನೆಗಳಿಂದ ತಿಳಿದು ಬರುತ್ತದೆ. ಆದರೆ ಅದಕ್ಕಿಂತ ಮುಂಚೆ ಆ ವಾಸ್ತವಿಕತೆಯನ್ನು ನಿರಾಕರಿಸುವುದಕ್ಕೆ ಅಜ್ಞಾನವೇ ಕಾರಣವಾಗಿದೆ. ಉದಾಹರಣೆಗಾಗಿ, ಆರ್ಕಿಮಿಡೀಸನು ಸಾಪೇಕ್ಷ ಸಿದ್ಧಾಂತವನ್ನು ಕಂಡು ಹಿಡಿದನು. ಈ ಅನಿರೀಕ್ಷಿತ ಸಂಶೋಧನೆಯಿಂದ ಹರ್ಷಿತನಾಗಿ ಆತ ಬೀದಿಯಲ್ಲಿ ನಗ್ನವಾಗಿ ಓಡಿದನು. ಆದರೆ ಅದಕ್ಕಿಂತ ಮುಂಚೆ ಈ ಸಿದ್ಧಾಂತ ಅಸ್ತಿತ್ವದಲ್ಲಿರಲಿಲ್ಲವೇ? ನ್ಯೂಟನನು ಸೂರ್ಯ ಕಿರಣಗಳನ್ನು ಪೀನ ಮಸೂರದಲ್ಲಿ ಹಾಯಿಸಿ ಬಿಳಿ ಪ್ರಕಾಶವು ಏಳು ಬಣ್ಣಗಳ ಸಮುಚ್ಚಯವೆಂಬ ಸತ್ಯವನ್ನು ಕಂಡು ಹಿಡಿದನು. ಆತನ ಸಂಶೋಧನೆಗಿಂತ ಮೊದಲು ಸೂರ್ಯ ಪ್ರಕಾಶದಲ್ಲಿ ಏಳು ಬಣ್ಣಗಳಿರಲಿಲ್ಲವೇ?

ವಸ್ತುತಃ ಮರಣೋತ್ತರ ಜೀವನವು ಕೇವಲ ಒಂದು ವೈಜ್ಞಾನಿಕ ಸಿದ್ಧಾಂತವಲ್ಲ. ಅದಕ್ಕೆ ನಮ್ಮ ಐಹಿಕ ಜೀವನದೊಂದಿಗೆ ಅಭೇದ್ಯ ಸಂಬಂಧವಿದೆ. ನಮ್ಮ ಧಾರ್ಮಿಕ ಮತ್ತು ನೈತಿಕ ಧೋರಣೆಯು ಸಂಪೂರ್ಣವಾಗಿ ಆ ಸಿದ್ಧಾಂತವನ್ನು ಅವಲಂಬಿಸಿದೆ. ಜೀವನವೆಂದರೆ ಕೇವಲ ಇಹ ಜೀವನ, ಅದರ ಹೊರತು ಬೇರೆ ಜೀವನವಿಲ್ಲವೆಂದು ನಂಬಿದರೆ ನಮ್ಮ ನೈತಿಕ ಧೋರಣೆಯು ಅದಕ್ಕೆ ಮಾತ್ರ ಸೀಮಿತವಾಗಿರುವುದು. ತದ್ವಿರುದ್ಧವಾಗಿ ಇಹಲೋಕ ಜೀವನದ ಬಳಿಕವೂ ಬೇರೊಂದು ಜೀವನವಿದೆ. ಇಹಲೋಕದಲ್ಲಿ ಮಾಡಿದ ಎಲ್ಲ ಕರ್ಮಗಳ ಬಗ್ಗೆ ಅಲ್ಲಿ ವಿಚಾರಣೆ ನಡೆಯಲಿದೆ. ಅಲ್ಲಿ ದೊರೆಯುವ ಪ್ರತಿಫಲ ಶಿಕ್ಷೆಗಳ ಪರಿಣಾಮವು ಇಲ್ಲಿನ ಕರ್ಮಗಳನ್ನು ಅವಲಂಬಿಸಿದೆಯೆಂದು ನಂಬಿದರೆ ನಮ್ಮ ನೈತಿಕ ಧೋರಣೆಯು ಮೊದಲಿನದಕ್ಕಿಂತ ತೀರಾ ಭಿನ್ನವಾಗಿರುವುದು.

ಮಾನವೀಯ ಕರ್ಮಗಳ ನೈತಿಕ ಫಲವು ಸಂಪೂರ್ಣವಾಗಿ ಗೋಚರಿಸುವ ಅವಕಾಶವು ಇಂದಿನ ನೈಸರ್ಗಿಕ ನಿಯಮಗಳಲ್ಲಿಲ್ಲ. ಮಾನವನ ಅಲ್ಪಕಾಲದ ಜೀವನದ ಕರ್ಮಗಳ ಪರಿಣಾಮವು ಅತಿ ವಿಪುಲ ಮತ್ತು ದೂರ ವ್ಯಾಪಕವಾಗಿದೆ. ಈ ಕರ್ಮಗಳ ಸಂಪೂರ್ಣ ಫಲವನ್ನು ಅನುಭವಿಸಬೇಕಾದರೆ ಸುದೀರ್ಘ ಕಾಲದ ಜೀವನವೇ ಬೇಕಾಗುವುದು. ಉದಾ: ಇಲ್ಲಿ ನೂರು ಜನರನ್ನು ಕೊಂದರೂ ಒಬ್ಬನನ್ನು ಕೊಂದರೂ ನೀಡಬಹುದಾದ ಗರಿಷ್ಠ ಶಿಕ್ಷೆಯೆಂದರೆ ಒಂದು ಮರಣ ದಂಡನೆ ಮಾತ್ರ. ನೈಸರ್ಗಿಕ ನಿಯಮದಂತೆ ಅಂತಹ ಸಮಗ್ರ ಶಿಕ್ಷೆ ನೀಡುವಂಥ ಸುದೀರ್ಘ ಜೀವನ ಮಾನವನಿಗೆ ಇಲ್ಲಿ ಲಭ್ಯವಿಲ್ಲ. ಇದರಿಂದ ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ಗ್ರಹಿಸಬಹುದು. ಅದೇನೆಂದರೆ ಮಾನವನ ಅಸ್ತಿತ್ವದ ಭೌತಿಕ ಅಂಶಗಳ ಮಟ್ಟಿಗೆ ಈ ಲೋಕ ಮತ್ತು ಲೌಕಿಕ ನಿಯಮಗಳು ಪರ್ಯಾಪ್ತವಾಗಿದ್ದರೂ ಆತನ ನೈತಿಕ ಮತ್ತು ಆಧ್ಯಾತ್ಮಿಕ ಅಂಶಗಳ ಮಟ್ಟಿಗೆ ಈ ಲೋಕವು ಸಂಪೂರ್ಣ ಪರ್ಯಾಪ್ತವಲ್ಲ. ಅದಕ್ಕೆ ಬೇರೆಯೇ ಒಂದು ಹೊಸ ಲೋಕ ವ್ಯವಸ್ಥೆ ಬೇಕಾಗುವುದು. ಅದರ ಆಡಳಿತ ನಿಯಮವು ನೈತಿಕ ನಿಯಮವಾಗಿರಬೇಕು. ನೈಸರ್ಗಿಕ ನಿಯಮವು ಅದಕ್ಕೆ ಪೂರಕವಾಗಿ ವರ್ತಿಸಬೇಕು. ಅದರಲ್ಲಿ ಜೀವನವು ಚಿರಂತನ ಮತ್ತು ಅನಂತವಾಗಿರಬೇಕು. ಇಹಲೋಕದಲ್ಲಿ ಮಾನವನ ಪರವಾಗಿ ಸಂಭವಿಸಿದ ಅಥವಾ ವಿರುದ್ಧವಾಗಿ ಸಂಭವಿಸಿದ ಎಲ್ಲ ನೈತಿಕ ಪರಿಣಾಮಗಳೂ ಅಲ್ಲಿ ಸರಿಯಾಗಿ ಮತ್ತು ಸಂಪೂರ್ಣವಾಗಿ ಸಾಕ್ಷಾತ್ಕಾರವಾಗಬೇಕು. ಅಲ್ಲಿ ಸತ್ಕರ್ಮಿಗಳಿಗೆ ಸುಖ ಸಂತೋಷವೂ ದುಷ್ಕರ್ಮಿಗಳಿಗೆ ದುಃಖ ಮತ್ತು ಯಾತನೆಯೂ ದೊರೆಯಬೇಕು. ಅಂತಹ ಒಂದು ಲೋಕವಿರಬೇಕೆಂದು ಬುದ್ಧಿಯು ಆಗ್ರಹಿಸುತ್ತದೆ. ನಿಸರ್ಗವು ಬಯಸುತ್ತದೆ.

ಮರಣಾನಂತರ ಪುನಃ ಎದ್ದೇಳಿಸುವವರೆಗೆ ಮಾನವನು ಒಂದು ವಿಶಿಷ್ಟ ಹಂತವನ್ನು ದಾಟಬೇಕಾಗಿದೆ. ಇಸ್ಲಾಮಿನ ಪಾರಿಭಾಷಿಕದಲ್ಲಿ ಅದನ್ನು ‘ಬರ್ಝಕ್’ ಎಂದು ಕರೆಯಲಾಗುತ್ತದೆ. ಮಣ್ಣಿನಲ್ಲಿ ದಫನಗೊಂಡವರಾಗಲಿ, ಭಸ್ಮಗೊಂಡು ನೀರಿನಲ್ಲಿ ಕಲಸಿ ಹೋದವರಾಗಲಿ, ಗಾಳಿಯಲ್ಲಿ ಹಾರಿಹೋದವರಾಗಲಿ ಅಥವಾ ಇನ್ನಾವುದೇ ಸ್ಥಿತಿಯಲ್ಲಿ ಮರಣ ಹೊಂದಿದವರಾಗಲಿ ಎಲ್ಲರೂ ಆ ಹಂತವನ್ನು ದಾಟದೆ ಇರಲಾರರು. ಈ ಭೂಮಿಯಲ್ಲಿ ಮಾನವನನ್ನು ಸಮಾಧಿಗೊಳಿಸಿದ ಅಥವಾ ಭಸ್ಮಗೊಳಿಸಿದ ಬಳಿಕ ಆತನನ್ನು ಪುನಃ ಎದ್ದೇಳಿಸುವುದು ಹೇಗೆ ಸಾಧ್ಯವೆಂಬ ಸಂದೇಹ ಸ್ವಾಭಾವಿಕ. ಆದರೆ ಶೂನ್ಯಾವಸ್ಥೆಯಿಂದ ಮಾನವನನ್ನು ಸೃಷ್ಟಿಸಿದ ದೇವನಿಗೆ ಮರುಸೃಷ್ಟಿ ಕಷ್ಟದ ಕೆಲಸವಲ್ಲ.

ಪವಿತ್ರ ಕುರ್‍ಆನಿನಲ್ಲಿ ಸ್ಪಷ್ಟಪಡಿಸಲಾಗಿದೆ. “ಖಂಡಿತವಾಗಿಯೂ ಗೋರಿಗಳಲ್ಲಿರುವವರನ್ನು ಅಲ್ಲಾಹನು ಪುನಃ ಜೀವಂತಗೊಳಿಸುತ್ತಾನೆ.” (22:7)

ಇದು ವಾಸ್ತವದಲ್ಲಿ ಮಾನವನು ವಿಚಾರಣೆಗಿಂತ ಮುಂಚೆ ಅನುಭವಿಸುವ ಕಾಲವಾಗಿದೆ. ಸತ್ಕರ್ಮಗಳನ್ನು ಮಾಡಿ ತನ್ನನ್ನು ತಾನೇ ಉತ್ತಮಪಡಿಸಿಕೊಂಡವನು ಈ ಹಂತದ ಜೀವನದಲ್ಲಿ ಆನಂದಮಯ ಸ್ವಪ್ನಗಳನ್ನು ಕಾಣುತ್ತಾ ನಿದ್ರಿಸುವಾತನ ಸ್ಥಿತಿಯಲ್ಲಿರುವನು. ಆದರೆ ದುರಾತ್ಮರು ಕ್ರೂರ, ಭೀಕರ ಹಾಗೂ ದುಃಖದಾಯಕ ಯಾತನೆಯ ಸ್ಥಿತಿಯನ್ನು ಅನುಭವಿಸಬೇಕಾಗುವುದು.

ಅಂತ್ಯ ದಿನವೆಂಬುದು ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಗಳ ಸ್ವಾಭಾವಿಕ ಪರಿಣಾಮವಾಗಿದೆ. ಅಂತ್ಯ ದಿನ ಮತ್ತು ಪರಲೋಕದ ಬಗ್ಗೆ ಪ್ರಸ್ತಾಪಿಸುತ್ತಾ ಪವಿತ್ರ ಕುರ್‍ಆನ್ ಜನರ ಮನಸ್ಸಿಗೆ ನಾಟುವಂತಹ ಎಚ್ಚರಿಕೆಯ ಶೈಲಿಯನ್ನು ಬಳಸಿದೆ. “ಲೋಕಾಂತ್ಯವು ಯಾವಾಗ ಸಂಭವಿಸುವುದೆಂದು ದೇವನು ಸ್ಪಷ್ಟಪಡಿಸಿಲ್ಲ. ಆದರೆ ಅದು ನಿರೀಕ್ಷಿತವಾಗಿ ಸಂಭವಿಸುವುದೆಂದು ಆತನು ತಿಳಿಸಿರುತ್ತಾನೆ.” (ಪವಿತ್ರ ಕುರ್‍ಆನ್ – 7:187)

“ವಾಸ್ತವದಲ್ಲಿ ಪುನರುತ್ಥಾನದ ಘಳಿಗೆಯ ಮಹಾ ಕಂಪನವು ಭಯಾನಕ ವಿಷಯವಾಗಿದೆ. ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ತೋರುವರು. ವಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅಷ್ಟು ಭೀಕರವಾಗಿರುವುದು.” (ಪವಿತ್ರ ಕುರ್‍ಆನ್ – 22: 12)

“ಭೂಮಿಯು ತನ್ನ ಸಂಪೂರ್ಣ ಉಗ್ರತೆಯೊಂದಿಗೆ ಕುಲುಕಲ್ಪಡುವಾಗ ಭೂಮಿಯು ತನ್ನೊಳಗಿನ ಸಕಲ ಹೊರೆಗಳನ್ನೂ ಹೊರಹಾಕಿ ಬಿಡುವಾಗ ಈ ಭೂಮಿಗೆ ಏನಾಯಿತೆಂದು ಮಾನವನು ಪ್ರಶ್ನಿಸುವನು.” (ಪವಿತ್ರ ಕುರ್‍ಆನ್ – 99: 13)

ಭೂಮಿಯ ಸಮತೋಲನವನ್ನು ಕಾಪಾಡುತ್ತಿದ್ದ “ಪರ್ವತಗಳು ಚಲಿಸಲಾರಂಭಿಸುವುವು.” (ಪವಿತ್ರ ಕುರ್‍ಆನ್ – 52:10)

“ಪರ್ವತಗಳು ಹಿಂಜಿದ ಉಣ್ಣೆಯಂತಾಗುವುದು.” (ಪವಿತ್ರ ಕುರ್‍ಆನ್ – 101:5)

ಅತಿ ಭಯಂಕರ ಭೂಕಂಪನ ಮತ್ತು ಭೂತೀರಗಳಲ್ಲಿ ಸಂಭವಿಸುವ ಘಟನೆಗಳ ನಿಮಿತ್ತ “ಸಮುದ್ರಗಳು ಭೇದಿಸಲ್ಪಡುವುದು.” (ಪವಿತ್ರ ಕುರ್‍ಆನ್ – 82:3)

“ಸಮುದ್ರಗಳನ್ನು ಕೆರಳಿಸಿ ಬಿಡಲಾಗುವುದು.” (ಪವಿತ್ರ ಕುರ್‍ಆನ್ – 81:6)

“ಈ ಕಂಪನ ಮತ್ತು ವಿನಾಶ ಪ್ರಕ್ರಿಯೆಯು ಬಾನ ಲೋಕದಲ್ಲಿಯೂ ಸಂಭವಿಸುವುದು.” (ಪವಿತ್ರ ಕುರ್‍ಆನ್ – 81:1)

“ಚಂದ್ರನೂ ಕಳೆಗುಂದುವುದು.” (ಪವಿತ್ರ ಕುರ್‍ಆನ್ – 75:8)

“ನಕ್ಷತ್ರಗಳೂ ಚದುರಿ ಬಿಡುವುವು.” (ಪವಿತ್ರ ಕುರ್‍ಆನ್ – 81:2)

“ಸೂರ್ಯ ಮತ್ತು ಚಂದ್ರವು ಒಂದು ಗೂಡಿಸಲ್ಪಡುವುವು” (ಪವಿತ್ರ ಕುರ್‍ಆನ್ – 75:9)
ಒಟ್ಟಿನಲ್ಲಿ ಆ ಪುನರುತ್ಥಾನದ ಗಳಿಗೆಯನ್ನು ಮನದಲ್ಲಿ ಊಹಿಸಲೂ ಸಾಧ್ಯವಿಲ್ಲ.

ಅನ್ಯ ಧರ್ಮಗಳ ಪುನರ್ಜನ್ಮ ಸಿದ್ಧಾಂತ ಮತ್ತು ಇಸ್ಲಾಮಿನ ಪುನರುತ್ಥಾನ ಸಿದ್ಧಾಂತಗಳಲ್ಲಿ ಬಹಳ ವ್ಯತ್ಯಾಸವಿದೆ. ಪುನರ್ಜನ್ಮ ಸಿದ್ಧಾಂತದಂತೆ ಮಾನವನು ಮರಣಾನಂತರ ಈ ಲೋಕಕ್ಕೆ ಪುನಃ ಮರಳಿ ಬರುತ್ತಾನೆ. ಉನ್ನತ ಕುಲಜಾತನಾಗಿ ಅಥವಾ ನಿಕೃಷ್ಟ ಜೀವಿಯಾಗಿ ಪುನರ್ಜನ್ಮ ಪಡೆಯುತ್ತಾನೆ. ಆದರೆ ಇಸ್ಲಾಮಿನ ವಿಶ್ವಾಸದಂತೆ ಮಾನವರು ಮರಳಿ ಬರುವುದಿಲ್ಲ. ಮರಣದ ಬಳಿಕ ಆತನಿಗೆ ಈ ಲೋಕದೊಂದಿಗೆ ಯಾವ ಸಂಬಂಧವೂ ಇಲ್ಲ. “ಪುನರುತ್ಥಾನದ ಕಹಳೆ ಊದಲ್ಪಡುವಾಗ ಆ ತನಕ ಮರಣ ಹೊಂದಿದವರೆಲ್ಲರೂ ಸಮಾಧಿಗಳಿಂದ ಎದ್ದು ಬರುವರು.” (ಪವಿತ್ರ ಕುರ್‍ಆನ್36:51)

ಅಲ್ಲಿ ಮಾನವನ ಕರ್ಮಗಳ ವಿಚಾರಣೆ ನಡೆಯುವುದು. “ಮಾನವನ ಪ್ರತಿಯೊಂದು ಕರ್ಮವನ್ನೂ ದಾಖಲಿಸಿಡಲಾಗಿದೆ, ಅದನ್ನು ಪರಲೋಕದಲ್ಲಿ ಅವನ ವಿಚಾರಣೆಯ ವೇಳೆ ಸಾಕ್ಷಿಯಾಗಿ ತರಲಾಗುವುದೆಂದೂ ಕುರ್‍ಆನ್ ಹೇಳುತ್ತದೆ.” (36:12)

“ಭೂಮಿಯು ತನ್ನ ಪ್ರಭುವಿನ ಜ್ಯೋತಿಯಿಂದ ಬೆಳಗುವುದು. ಕರ್ಮಗ್ರಂಥವು ತಂದಿರಿಸಲ್ಪಡುವುದು. ಪ್ರವಾದಿಗಳೂ ಎಲ್ಲ ಸಾಕ್ಷಿಗಳೂ ಹಾಜರುಗೊಳಿಸಲ್ಪಡುವರು. ಜನರ ನಡುವೆ ನ್ಯಾಯ ಸಹಿತ ತೀರ್ಮಾನ ಮಾಡಿ ಬಿಡಲಾಗುವುದು. ಅವರ ಮೇಲೆ ಯಾವ ಅಕ್ರಮವೂ ಆಗದು.” (ಪವಿತ್ರ ಕುರ್‍ಆನ್ – 39:69)

ಯಾವ ಆತ್ಮವೂ ಇನ್ನೊಂದು ಆತ್ಮದ ಭಾರವನ್ನು ಹೊರದ ಆ ದಿನ, ಈ ಲೋಕದಲ್ಲಿ “ಅಣುಗಾತ್ರ ಒಳಿತು ಮಾಡಿದವನು ಅದನ್ನು ಕಾಣುವನು. ಅಣು ಗಾತ್ರ ಕೆಡುಕು ಮಾಡಿದವನೂ ಅದನ್ನು ಕಾಣುವನು.” (ಪವಿತ್ರ ಕುರ್‍ಆನ್ – 99:78)

ಅಂದು ಯಾರ ಒಳಿತಿನ ತಟ್ಟೆಯು ಅಧಿಕ ಭಾರವಿರುವುದೋ ಆತನು ಸಂತೃಪ್ತ ಜೀವನ‘ಸ್ವರ್ಗ’ವನ್ನು ಪಡೆಯುವನು. ಯಾರ ಕೆಡುಕಿನ ತಟ್ಟೆ ಭಾರವಾಗಿರುವುದೋ ಆತನ ವಾಸಸ್ಥಳವು ಪ್ರಜ್ವಲಿಸುವ ಅಗ್ನಿ ಕುಂಡ(ನರಕ)ವಾಗಿರುವುದು. ಪರಿಣಾಮವು ಏನೇ ಆಗಿದ್ದರೂ ಸಿಗುವ ಪ್ರತಿಫಲವು ಅಂತ್ಯ ದಿನದಲ್ಲಿ ಸಂಪೂರ್ಣವಾಗಿ ದೊರೆಯುವುದು. “ಸುಕೃತಕ್ಕೆ ಸುಕೃತವೇ ಪ್ರತಿಫಲ.”(ಪವಿತ್ರ ಕುರ್‍ಆನ್ – 55:60) ಕೆಡುಕಿಗೆ ಕೆಡುಕೇ ಪ್ರತಿಫಲವಾಗಿರುವುದು.

ಹೀಗೆ ಕುರ್‍ಆನಿನಲ್ಲಿ ಮಾನವ ಜೀವನದ ಅಂತಿಮ ಪರಿಣಾಮದ ಬಗ್ಗೆ ಅನೇಕ ಕಡೆಗಳಲ್ಲಿ ಸುವಾರ್ತೆ ಮತ್ತು ಎಚ್ಚರಿಕೆಯನ್ನು ನೀಡಲಾಗಿದೆ. ಜಗತ್ತಿನ ಇತರ ಯಾವುದೇ ಧರ್ಮಗ್ರಂಥಕ್ಕೆ ಹೋಲಿಸಿದರೆ ಕುರ್‍ಆನಿನ ಪರಲೋಕ ಚಿತ್ರಣವು ಅತ್ಯಂತ ಸ್ಪಷ್ಟ ಮತ್ತು ವಿಶಿಷ್ಟವಾಗಿದೆ. ಮರಣಾನಂತರ ಜೀವನದಲ್ಲಿ ಶಾಶ್ವತ ಸುಖ ಸೌಭಾಗ್ಯ ಲಭಿಸಬೇಕಿದ್ದರೆ ಈ ಲೋಕದಲ್ಲಿ ದೇವಾದೇಶದಂತೆ ಬಾಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಶಾಶ್ವತ ನರಕ ಶಿಕ್ಷೆಯನ್ನು ಅನುಭವಿಸಬೇಕಾಗುವುದು.

SHARE THIS POST VIA