Home / ಪರಲೋಕ

ಪರಲೋಕ

ನಾನು, ನಾವು, ನೀನು, ನೀವು ಎಂದೆಲ್ಲ ನಾವು ಹೇಳುತ್ತೇವೆ ಅಲ್ಲವೇ? ನಾವು ಹೀಗೆ ಹೇಳುವುದರ ಉದ್ದೇಶವೇನು? ಪ್ರಾಣ ಹೋಗುವುದರೊಂದಿಗೆ ನೀನು, ನಾನು ಇಲ್ಲದಾಗುತ್ತದೆ. ನಮ್ಮ ಶರೀರವೂ ಇಲ್ಲವಾಗುತ್ತದೆ. ಹಾಗಿದ್ದರೆ ಮತ್ತೇನು ನಮ್ಮ ಉದ್ದೇಶ? ಜೀವವು ನಮ್ಮ ಸಂಬೋಧನೆಯ ಉದ್ದೇಶವಾಗಿರಬಹುದೇ? ಹಾಗಿದ್ದರೆ ಜೀವವೆಂದರೇನು? ಜೀವ ಇರುವುದೆಲ್ಲವೂ ಮನುಷ್ಯರಲ್ಲವಲ್ಲ. ಸಂತೋಷ, ದುಃಖ, ಪ್ರೀತಿ, ದ್ವೇಷದಂತಹ ಭಾವನೆಗಳನ್ನು ಜೀವಿಸಿರುವ ನಾವು ಅನುಭವಿಸುತ್ತೇವೆ. ಪ್ರೀತಿಸುವುದು, ದ್ವೇಷಿಸುವುದು, ಸಂತೋಷಪಡುವುದು, ದುಃಖಿಸುವುದು ನಮ್ಮ ಜೀವವೇ. ಸಸ್ಯಗಳಾದಿ ಜೀವವಿರುವ ಎಲ್ಲವೂ ಇಂತಹ ಭಾವನೆಗಳನ್ನು ಪ್ರಕಟಿಸುವುದಿಲ್ಲ. ಈ ರೀತಿಯ ಹುಡುಕಾಟದಲ್ಲಿ ಮನುಷ್ಯರಿಗೆ ಶರೀರ ಮತ್ತು ಜೀವ ಮಾತ್ರ ಇರುವುದಲ್ಲ ಎಂಬ ಸತ್ಯವು ನಮಗೆ ಮನವರಿಕೆಯಾಗುತ್ತದೆ.

ಶರೀರವನ್ನು ಶಕ್ತಿಶಾಲಿಯಾಗಿಸುವುದು ಆತ್ಮವಾಗಿದೆ. ಪ್ರೀತಿ, ದುಃಖಗಳಂತಹ ಭಾವನೆಗಳು ಅದರ ಒಂದು ಭಾಗವಾಗಿದೆ. ಇಂತಹ ಭಾವನೆಗಳನ್ನು ಹೀಗೆಯೇ ಎಂದು ಸೀಮಿತಗೊಳಿಸಿ ವಿಶ್ಲೇಷಿಸಲು ಸಾಧ್ಯವಿಲ್ಲವಷ್ಟೆ. ನಾವು ತಾಯಿಯನ್ನು, ಸಹೋದರಿಯನ್ನು, ಪತ್ನಿಯನ್ನು, ಮಕ್ಕಳನ್ನು, ನೆರೆಹೊರೆಯವರನ್ನು, ಆಹಾರವನ್ನು, ಆಟವನ್ನು ಪ್ರೀತಿಸುತ್ತೇವೆ. ಈ ಪ್ರೀತಿಯೆಲ್ಲ ಒಂದೇ ರೀತಿಯಲ್ಲಿರುವುದಿಲ್ಲ. ಒಂದು ಪ್ರೀತಿ ಇನ್ನೊಂದು ಪ್ರೀತಿಯನ್ನು ಪ್ರತ್ಯೇಕಿಸುತ್ತಿರುವುದು ಯಾವುದು ಮತ್ತು ಏನೆಂದು ಯಾರಿಗೂ ವಿವರಿಸಲು ಸಾಧ್ಯವಿಲ್ಲ. ಅದೇ ರೀತಿ ಅಂತಹ ಭಾವನೆಗಳ ಶಕ್ತಿ ಕೇಂದ್ರವಾದ ಆತ್ಮವನ್ನೂ ಹೀಗೆಯೇ ಎಂದು ವಿವರಿಸಲು ಸಾಧ್ಯವಿಲ್ಲ.

ಪವಿತ್ರ ಕುರ್‍ಆನ್ ಹೇಳುತ್ತದೆ. “ಇವರು ನಿಮ್ಮೊಡನೆ ‘ರೂಹ್(ಆತ್ಮ)’ನ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ- ಈ ‘ರೂಹ್(ಆತ್ಮ)’ ನನ್ನ ಪ್ರಭುವಿನ ಅಪ್ಪಣೆಯಿಂದ ಬರುತ್ತದೆ. ಆದರೆ ನೀವು ಜ್ಞಾನದ ಅಲ್ಪಾಂಶವನ್ನು ಮಾತ್ರ ಪಡೆದಿರುತ್ತೀರಿ.” (ಪವಿತ್ರ ಕುರ್‍ಆನ್ -17:85)

ಶರೀರದ ಪಾತ್ರವಿಲ್ಲದೆಯೇ ಆತ್ಮದ ಅನುಭವಗಳಾಗುವುದಿದೆ. ಕನಸು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಕನಸಿನಲ್ಲಿ ಹಾವಿನ ಕಡಿತದಿಂದ ಕಾಲು ಮುರಿದ ಅನುಭವವಾದರೆ ಆತ್ಮವು ಅದರ ನೋವನ್ನು ಅನುಭವಿಸುತ್ತದೆ. ಕನಸು ಪಂಚೇಂದ್ರೀಯಕ್ಕೆ ಹೊರತಾದುದಲ್ಲವೇ.

ಆತ್ಮಕ್ಕೆ ನಾಶವಿಲ್ಲ. ಮರಣದೊಂದಿಗೆ ಆತ್ಮವು ಮಾನವರ ಶರೀರದಿಂದ ಬೇರ್ಪಡುತ್ತದೆ. ತಮ್ಮ ಕರ್ಮಫಲಗಳನ್ನು ಪಡೆದು ಯಾರೂ ಮರಣ ಹೊಂದುವುದಿಲ್ಲ. ಸಾವಿರಾರು ಮನುಷ್ಯರನ್ನು ಕೊಂದ ಕೊಲೆಗಡುಕರೂ, ಅತಿಕ್ರೂರಿಗಳೂ ಈ ಲೋಕದಲ್ಲಿ ಆಗಿ ಹೋಗಿದ್ದಾರೆ. ಅವರಿಗೆ ಸೂಕ್ತವಾದ ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಾಗಿಲ್ಲ. ಸಾಧ್ಯವೂ ಇಲ್ಲ. ಓರ್ವ ಕೊಲೆಗಡುಕನನ್ನು ನಮಗೆ ಗರಿಷ್ಠವೆಂದರೆ ಒಮ್ಮೆ ಕೊಲ್ಲಲು ಸಾಧ್ಯವಾಗಬಹುದು. ಆದರೆ ಹಾಗೆ ನಾವು ಕೊಲ್ಲುವುದರಿಂದ ನ್ಯಾಯ ಸಂಸ್ಥಾಪನೆಯಾಗುವುದೆಂದು ಹೇಳಲು ಸಾಧ್ಯವಿಲ್ಲ. ನಾನು ಕೊಲೆಗೀಡಾದರೆ ಅದರ ಕಷ್ಟವನ್ನು ನನ್ನ ಪತ್ನಿ ಮಕ್ಕಳು ಅನುಭವಿಸುತ್ತಾರೆ. ನನ್ನನ್ನು ಕೊಂದವನಿಗೆ ವಧೆ ಶಿಕ್ಷೆ ವಿಧಿಸುವುದರಿಂದ ಪತ್ನಿ ಮಕ್ಕಳ ಕಷ್ಟಗಳು ಕಡಿಮೆಯಾಗುವುದಿಲ್ಲ. ಯಾರು ಕೊಲ್ಲಲ್ಪಡುತ್ತಾರೋ ಅವರಿಂದ ಕಷ್ಟ ಅನುಭವಿಸುವವರಿಗೆ ಹಂತಕನ ವಧೆ ಪರಿಹಾರವಾಗಿ ಪರಿವರ್ತನೆಗೊಳ್ಳುವುದಿಲ್ಲ. ಹಾಗಿದ್ದರೂ ಭೂಮಿಯ ಶಾಂತಿ ಸ್ಥಾಪನೆಗಾಗಿ ಅನಿವಾರ್ಯವೆಂದು ಕೋರ್ಟು, ಕಾನೂನುಗಳು ಅಸ್ತಿತ್ವಕ್ಕೆ ಬಂದಿದೆ.

ಯಾರೇ ಆದರೂ ನ್ಯಾಯ ಅಸ್ಥಿತ್ವದಲ್ಲಿರಬೇಕೆಂದೇ ಬಯಸುತ್ತಾರೆ. ಅದೇ ವೇಳೆ ಇಲ್ಲಿ ನಿಷ್ಪಕ್ಷ ನ್ಯಾಯವನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಭೂಮಿಯಲ್ಲಿ ಹತ್ತು, ನೂರು, ಸಾವಿರ, ಹತ್ತು ಸಾವಿರ, ಲಕ್ಷ, ಕೋಟಿ ಮಂದಿಯನ್ನು ಕೊಂದವರನ್ನು ಇಲ್ಲಿ ಶಿಕ್ಷಿಸಲು ಯಾರಿಗೆ ಸಾಧ್ಯವಿದೆ. ಅದೇ ರೀತಿ ಇಲ್ಲಿ ಸಜ್ಜನರಿಗೆ ಸರಿಯಾದ ರಕ್ಷಣೆಯೂ ದೊರೆಯುವುದಿಲ್ಲ. ಇವೆರಡೂ ಸಿಗಬೇಕೆಂದು ಆಶೆಪಡುತ್ತಿದ್ದಂತೆ ಮನುಷ್ಯರ ಇಲ್ಲಿನ ಜೀವನ ಮುಗಿದು ಬಿಡುತ್ತದೆ. ಇಂತಹ ಅದ್ಭುತವಾದ ಒಂದು ಸೃಷ್ಟಿ ವ್ಯವಸ್ಥೆಯ ಕೊನೆ ಹೀಗೆಯೇ ಎಂದು ನಾವು ಯೋಚಿಸಬೇಕಾಗಿದೆ.

ಮನುಷ್ಯರ ಬಗ್ಗೆಯೇ ಆಲೋಚಿಸಿ ನೋಡಿ. ನಾವು ಜೀವಿಸುವ ಲೋಕದಲ್ಲಿ 600 ಕೋಟಿಗೂ ಹೆಚ್ಚು ಮನುಷ್ಯರಿದ್ದಾರೆ. ಒಂದೇ ಗಾಳಿ, ನೀರು ಸೇವಿಸಿ ಒಂದೇ ಭೂಮಿಯ ಮೇಲೆಯೂ, ಸೂರ್ಯನ ಕೆಳಗೂ ವಾಸಿಸುತ್ತಿದ್ದೇವೆ. ಈ 600 ಕೋಟಿ ಮಾನವರಲ್ಲಿ ಓರ್ವನಿಗೆ ಇನ್ನೊಬ್ಬನಂತಹ ಮುಖವಿಲ್ಲ. ಎರಡು ಕೈಗಳಿಂದ ಮುಚ್ಚಬಹುದಾದ ಪುಟ್ಟ ಸ್ಥಳ ಮಾನವನ ಮುಖವಾಗಿದೆ. ಆದರೆ ನಮ್ಮಂತೆ ಮತ್ತೊಬ್ಬರಿದ್ದಾರೆಯೇ?. ಒಂದು ನಿಮಿಷ ನಿಮ್ಮ ಕೈಬೆರಳುಗಳನ್ನು ಗಮನಿಸಿ ನೋಡಿ. ನಿಮ್ಮ ಹೆಬ್ಬೆರಳು. ಎಷ್ಟು ಚಿಕ್ಕ ಸ್ಥಳ. ಓರ್ವ ನುರಿತ ಚಿತ್ರಕಾರ ಅಷ್ಟು ಚಿಕ್ಕ ಸ್ಥಳದಲ್ಲಿ ಒಂದು ವಸ್ತುವಿನ ಎಷ್ಟು ರೂಪಗಳನ್ನು ಸೃಷ್ಟಿಸಬಲ್ಲ ಎಂಬುದನ್ನು ಸ್ವಲ್ಪ ಯೋಚಿಸಿನೋಡಿ. ಈ ಲೋಕದಲ್ಲಿ 600 ಕೋಟಿ ಜನರಿದ್ದಾರೆ. ಈ 600 ಕೋಟಿ ಮನುಷ್ಯರಲ್ಲಿ ಓರ್ವನಿಗೆ ಇನ್ನೋರ್ವನಂತೆ ಕೈಬೆರಳಿಲ್ಲ, ಮಾತ್ರವಲ್ಲ ಈಗಾಗಲೇ ನಿಧನಗೊಂಡಿರುವ ಕೋಟಿಗಟ್ಟಳೆ ಜನರಿಗೂ, ಇನ್ನು ಲೋಕಾಂತ್ಯದವರೆಗೆ ಜನಿಸಲಿರುವ ಜನರಲ್ಲಿ ಯಾರಿಗೂ ನಮ್ಮಂತಹ ಕೈಬೆರಳಿರುವುದಿಲ್ಲ. ಆದ್ದರಿಂದಲೇ ನಮ್ಮ ಕೈಬೆರಳುಗಳ ಅಚ್ಚುಗಳನ್ನು ದಾಖಲೆಗಾಗಿ ಪಡೆಯಲಾಗುತ್ತದೆ. 14ನೇ ಶತಮಾನಕ್ಕೂ ಮೊದಲೇ ಈ ಕುರಿತು ದೇವನು ಹೇಳಿದನು: ”ನಾವಂತೂ ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ”(ಪವಿತ್ರ ಕುರ್‍ಆನ್-75:4).

ವಿಜ್ಞಾನವು ಕೈಬೆರಳುಗಳ ಈ ವಿಶೇಷತೆಯನ್ನು ಮನಗಾಣುವುದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಈ ಕುರಿತು ಪವಿತ್ರ ಕುರ್‍ಆನ್ ಬೆಳಕು ಚೆಲ್ಲಿತು. ನಮ್ಮಲ್ಲಿ ಪ್ರತಿಯೊಬ್ಬರ ತಲೆಯಲ್ಲಿಯು ಸಾವಿರ ಗಟ್ಟಲೆ ಕೂದಲುಗಳಿವೆ. ಹಾಗಿದ್ದರೂ ಲೋಕದ 600 ಕೋಟಿ ಜನರ ತಲೆಯಲ್ಲಿರುವ ಸಾವಿರ ಗಟ್ಟಲೆ ಕೂದಲಿನ ಅಥವಾ ಲೋಕದ ಕೋಟ್ಯಾನುಕೋಟಿ ಜನರ ತಲೆ ಕೂದಲುಗಳ ನಡುವಿನಿಂದ ನಮ್ಮ ಪ್ರತಿಯೊಬ್ಬರ ಕೂದಲುಗಳನ್ನು ಪರಿಶೀಲಿಸಿ ಬೇರ್ಪಡಿಸಲು ಸಾಧ್ಯವಿದೆ. ಅದೇ ರೀತಿ ನಮ್ಮ ನಾಡಿಗಳಲ್ಲಿ ಸಾವಿರಾರು ಬಿಂದು ರಕ್ತ ಹರಿಯುತ್ತಿದೆ. ಹಾಗಿದ್ದರೂ ಲೋಕದ ಆರುನೂರು ಕೋಟಿ ಮಾನವರ ನಾಡಿಗಳಲ್ಲಿ ಹರಿಯುವ ರಕ್ತಕ್ಕಿಂತ ನಮ್ಮ ಶರೀರದಲ್ಲಿರುವ ರಕ್ತವು ಸಂಪೂರ್ಣ ಭಿನ್ನವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರ ದೇಹದ ರಕ್ತಕ್ಕೆ ಬೇರೆ ಬೇರೆ ವಾಸನೆಯಿದೆ. ಆದುದರಿಂದಲೇ ಅಪರಾಧಿಗಳ ಬಂಧನಕ್ಕಾಗಿ ಮಾನವರ ದೇಹದ ವಾಸನೆಯನ್ನು ಗ್ರಹಿಸಲು ತರಬೇತಿ ನೀಡಿರುವ ನಾಯಿಗಳನ್ನು ಬಳಸಲಾಗುತ್ತಿದೆ. ಇಷ್ಟೆಲ್ಲ ವೈಜ್ಞಾನಿಕ ಯೋಜನೆಯಂತೆ ಸೃಷ್ಟಿ ಕ್ರಿಯೆಯು ನಡೆದಿದೆ ಎಂಬುದನ್ನು ಇವೆಲ್ಲವೂ ಸ್ಪಷ್ಟಪಡಿಸುತ್ತದೆ. ಇಷ್ಟೆಲ್ಲ ತಜ್ಞ ವ್ಯವಸ್ಥೆಯಿಂದ ನಿರ್ಮಾಣವಾದ ಮನುಷ್ಯನ ಅಂತ್ಯವು ಅರ್ಥಶೂನ್ಯ ಮತ್ತು ಅನ್ಯಾಯ ಪೂರ್ಣವಾಗಿರುವುದು ಸಾಧ್ಯವಿಲ್ಲ.

ಆದುದರಿಂದ ಮಾನವರಿಗೆ ನ್ಯಾಯಪೂರ್ಣವಾದ ಒಂದು ಅಂತ್ಯ ಇರಬೇಕಾಗಿದೆ. ಹೌದು, ಮನುಷ್ಯನು ಅವನ ಕರ್ಮಫಲವನ್ನು ಅನುಭವಿಸಲೇಬೇಕು. ಅದು ನ್ಯಾಯದ ಬೇಡಿಕೆ ಕೂಡಾ ಆಗಿದೆ. ಅದೇ ವೇಳೆ ಭೂಮಿಯಲ್ಲಿ ಅದು ಸಾಧ್ಯವಿಲ್ಲವೆಂದೂ ನಾವು ಮನಗಾಣುತ್ತೇವೆ. ಇಸ್ಲಾಮ್ ನಮ್ಮೊಡನೆ ಹೇಳುತ್ತದೆ. ಅದೊಂದು ಪರಿವರ್ತನೆ ಮಾತ್ರ. ಜೀವನವು ಅಬಾಧಿತವಾಗಿ ಮುಂದುವರಿಯುವುದು. ಮರಣಾನಂತರ ಪರಲೋಕದಲ್ಲಿ ಕರ್ಮಫಲವನ್ನು ಅನುಭವಿಸಬೇಕಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೆ ಅವನು ಮಾಡಿರುವ ಕರ್ಮಗಳ ಫಲವೇ ದೊರೆಯುವುದು. “ಪ್ರತಿಯೊಬ್ಬ ಮನುಷ್ಯನೂ ಅವನು ಸಂಪಾದಿಸಿರುವುದಕ್ಕೆ ಬಾಧ್ಯಸ್ತನಾಗಿದ್ದಾನೆ” (ಪವಿತ್ರ ಕುರ್‍ಆನ್-74:38). ಅಣುಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು. ಅಣುಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು (ಪವಿತ್ರ ಕುರ್‍ಆನ್- 99:7,8). ಆದ್ದರಿಂದ ದೇವನು ನಿಶ್ಚಯಿಸಿದ ಪಥದಲ್ಲಿ ಸಂಚರಿಸಿದರೆ ಅದಕ್ಕೆ ಪ್ರತಿಫಲವಾಗಿ ದೇವನು ವಾಗ್ದಾನವಿತ್ತ ಸ್ವರ್ಗವು ಲಭಿಸುವುದು. ಅವನು ನಿಷೇಧಿಸಿದ ದಾರಿಯಲ್ಲಿ ಸಂಚರಿಸಿದರೆ ಅವನು ಎಚ್ಚರಿಸಿದ ನರಕದ ಶಿಕ್ಷೆಯನ್ನು ಅನುಭವಿಸಬೇಕಾಗುವುದು.

ಇಂತಹ ಒಂದು ಪರಲೋಕವಿಲ್ಲದಿದ್ದರೆ ನಮ್ಮನ್ಮು ಸೃಷ್ಟಿಸಿರುವ ದೇವನ ನಿಯಮವು ಕ್ರೂರ, ತಾರತಮ್ಯ ಮತ್ತು ಅನ್ಯಾಯದಿಂದ ಕೂಡಿದೆ ಎಂದು ಹೇಳಬೇಕಾಗುತ್ತದೆ. ಕಾರಣ, ಜನರು ಹಲವು ರೀತಿಯವರಾಗಿ ಹುಟ್ಟುತ್ತಾರೆ ಮತ್ತು ಬದುಕುತ್ತಾರೆ. ಅವರಲ್ಲಿ ಕಣ್ಣಿರುವವರಿದ್ದಾರೆ, ಕಣ್ಣಿಲ್ಲದವರೂ ಇದ್ದಾರೆ. ಕೈ ಕಾಲುಗಳಿರುವವರೂ ಇದ್ದಾರೆ, ಇಲ್ಲದವರೂ ಇದ್ದಾರೆ. ಬಲಿಷ್ಠರಿದ್ದಾರೆ, ದುರ್ಬಲರಿದ್ದಾರೆ. ರೋಗಿಗಳಿದ್ದಾರೆ, ಆರೋಗ್ಯವಂತರಿದ್ದಾರೆ. ಬಡವರಿದ್ದಾರೆ, ಶ್ರೀಮಂತರಿದ್ದಾರೆ. ಪ್ರತಿಭಾಶಾಲಿಗಳಿದ್ದಾರೆ, ಸಾಮಾನ್ಯ ಬುದ್ಧಿಯವರಿದ್ದಾರೆ, ಮಂದ ಬುದ್ಧಿಯವರಿದ್ದಾರೆ. ಮರಣಾನಂತರ ಇನ್ನೊಂದು ಲೋಕವಿಲ್ಲದಿದ್ದರೆ ಅಂಧರು, ಅಂಗವಿಕಲರು, ರೋಗಿಗಳು, ದುರ್ಬಲರು, ಮಂದಬುದ್ಧಿಯುಳ್ಳವರೆಲ್ಲ ಅನುಭವಿಸುವ ತಾರತಮ್ಯ, ಪ್ರಯಾಸಗಳಿಗೆ ಏನು ಪರಿಹಾರವಿದೆ?

ಮರಣದೊಂದಿಗೆ ಜೀವನ ಮುಗಿಯುವುದಿದ್ದರೆ ಎಲ್ಲರಿಗೂ ಜನನದಿಂದ ಮರಣದವರೆಗೆ ಒಂದೇ ರೀತಿ ಜೀವನವನ್ನು ಸಮಾನವಾಗಿ ಅನುಭವಿಸಲು, ಆಸ್ವಾದಿಸಲು ಅವಕಾಶ ದೊರೆಯಬೇಕಲ್ಲವೇ. ಆದರೆ ಹಾಗೆ ಸಂಭವಿಸುವುದಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ನ್ಯಾಯವಂತನಾದ ದೇವನು ಮಾನವರ ಜೀವನವನ್ನು ಕೊನೆಗೊಳಿಸುವುದಿಲ್ಲ. ಭೌತಿಕ ಜೀವನವು ಕರ್ಮಕಾಲವಾಗಿದೆ, ವಿಚಾರಣೆ, ವಿಧಿ, ಕರ್ಮಫಲಗಳೆಲ್ಲವೂ ಆ ಲೋಕದಲ್ಲಿ ಅರ್ಥಾತ್ ಪರಲೋಕದಲ್ಲಿ ಸಿಗಲಿದೆ.

ಪ್ರತಿಯೊಬ್ಬರೂ ಭೂಮಿಯಲ್ಲಿ ಅವರವರಿಗೆ ನೀಡಿದ ಸಾಮಥ್ರ್ಯಕ್ಕೆ ಅನುಸಾರವಾಗಿ ಬಾಧ್ಯತೆಗಳನ್ನು ನಿರ್ವಹಿಸಬೇಕಾಗಿದೆ. ಶ್ರೀಮಂತನಿಗಿರುವಷ್ಟು ಹೊಣೆಗಾರಿಕೆಗಳು ಬಡವನಿಗಿಲ್ಲ. ವಿದ್ವಾಂಸನಿಗಿರುವಷ್ಟು ಹೊಣೆಗಾರಿಕೆ ಸಾಮಾನ್ಯನಿಗಿಲ್ಲ. ಪ್ರತಿಭಾಶಾಲಿಗಿರುವಷ್ಟು ಹೊಣೆಗಾರಿಕೆಗಳು ಸಾಮಾನ್ಯ ಬುದ್ಧಿಯವನಿಗಿಲ್ಲ. ಅಂಗವಿಕಲನಿಗೆ ಆರೋಗ್ಯವಂತನಿಗಿರುವಷ್ಟು ಹೊಣೆಯಿಲ್ಲ. ಈ ಬಾಧ್ಯತೆಗಳ ನಿರ್ವಹಣೆಯು ಜೀವನದ ಜಯಾಪಜಯಗಳಿಗೆ ಆಧಾರವಾಗಿದೆ. ಪ್ರತಿಯೊಬ್ಬರೂ ತಮಗೆ ಲಭ್ಯವಾದ ಸಾಮಥ್ರ್ಯಗಳನ್ನು ಹೇಗೆ ವಿನಿಯೋಗಿಸಿದರು ಎಂದು ಪರೀಕ್ಷಿಸಲಾಗುತ್ತದೆ. ಆ ಪ್ರಕಾರ ಒಬ್ಬೊಬ್ಬರಲ್ಲಿ ಅರ್ಪಿತವಾದ ಹೊಣೆಗಾರಿಕೆಗಳನ್ನು ನಿರ್ವಹಿಸಿದ ಆಧಾರದಲ್ಲಿ ಮರಣಾನಂತರ ಜೀವನದ ರಕ್ಷೆ, ಶಿಕ್ಷೆಗಳು ನಿರ್ಧಾರಗೊಳ್ಳುತ್ತದೆ.

ಆದ್ದರಿಂದ ಮರಣಾನಂತರ ಒಂದು ಲೋಕವಿಲ್ಲದಿದ್ದರೆ ಈ ಭೂಮುಖದ ಮನುಷ್ಯನ ಅವಸ್ಥೆ ಮತ್ತು ವ್ಯತ್ಯಾಸಗಳಿಗೆ ನ್ಯಾಯ ಸಲ್ಲುವುದಿಲ್ಲ. ಶಾಶ್ವತ ಪರಲೋಕವಿದೆ ಎಂಬುದು ಸಂದೇಹಾತೀತವಾಗಿದೆ. ಅಂಗವಿಕಲತೆಯಾಗಲಿ, ಆರೋಗ್ಯಸ್ಥಿತಿಯ ಕುರಿತು ಅಂತರವಾಗಲಿ, ಬುದ್ಧಿ ಮಟ್ಟದ ವ್ಯತ್ಯಾಸವಾಗಲಿ ದೇವನ ನ್ಯಾಯಕ್ಕೆ ತೀರಾ ವಿರುದ್ಧವಾಗುವುದಿಲ್ಲ. ನೀವು ಏನಾದರೂ ಮುಟ್ಟುತ್ತೀರಿ. ಮುಟ್ಟಿದ ಸ್ಥಳದಲ್ಲಿ ನಿಮ್ಮ ಕೈ ಬೆರಳಿನ ಗುರುತುಗಳು ಒತ್ತಲ್ಪಡುತ್ತದೆ. ನೀವು ಯಾವುದೇ ದಾರಿಯಲ್ಲಿ ಸಂಚರಿಸಿದರೂ ಅದರ ಪುರಾವೆಯಾಗಿ ನಿಮ್ಮ ಶರೀರದ ವಾಸನೆಯು ವಾತಾವರಣದಲ್ಲಿ ವ್ಯಾಪಿಸುವುದು. ಅದೇ ರೀತಿ ನಿಮ್ಮ ಮಾತುಗಳು ನಾಶಗೊಳ್ಳದೇ ನೆಲೆ ನಿಲ್ಲುವುದು. ಅಂದರೆ ಮನುಷ್ಯರ ಕರ್ಮಗಳೆಲ್ಲವೂ ತುಂಬ ಕಟ್ಟುನಿಟ್ಟಿನಿಂದ ಇಲ್ಲಿ ದಾಖಲಿಸಲ್ಪಡುತ್ತಿರುವುದು. ಅವೆಲ್ಲವೂ ಒಂದೋ ಅವನಿಗೆ ಅನುಕೂಲವಾಗಿ ಇಲ್ಲವೇ ಪ್ರತಿಕೂಲವಾಗಿ ಪರಲೋಕದಲ್ಲಿ ಸಾಕ್ಷ್ಯವಹಿಸುವುದು. ಮಾನವನ ಪ್ರತಿಯೊಂದು ಮಾತುಗಳು ಇಲ್ಲಿ ದಾಖಲಿಸಲ್ಪಡುತ್ತಿದೆ ಎಂದು ಪವಿತ್ರ ಕುರ್‍ಆನ್ ಸ್ಪಷ್ಟವಾಗಿ ತಿಳಿಸಿದೆ.

ಆದ್ದರಿಂದ ಮಾನವರು ತಮ್ಮ ಕರ್ಮಗಳಿಗನುಸಾರ ಒಂದೋ ಸ್ವರ್ಗವನ್ನು ಅಥವಾ ನರಕವನ್ನು ಸ್ವೀಕರಿಸಬೇಕಾಗುತ್ತದೆ. “ಪ್ರತಿಯೊಬ್ಬನೂ ತಾನು ಸಂಪಾದಿಸಿರುವುದಕ್ಕೆ ಹೊಣೆಗಾರನಾಗಿರುತ್ತಾನೆ.” (ಪವಿತ್ರ ಕುರ್‍ಆನ್ 52:21) ಅಣು ಗಾತ್ರದಷ್ಟು ಒಳಿತು ಮಾಡಿದವನಿಗೆ ಅದು ಲಭಿಸುವುದು. ಅಣು ಗಾತ್ರದಷ್ಟು ಕೆಡುಕು ಮಾಡಿದವನಿಗೆ ಅದು ಲಭಿಸುವುದು. ಮಾನವರಿಗೆ ಈ ರೀತಿ ಕರ್ಮಫಲ ಅನುಭವಿಸುವ ಸ್ಥಳವೇ ಮರಣಾನಂತರದ ಪರಲೋಕವಾಗಿದೆ.

SHARE THIS POST VIA