Home / ನಮಾಝ್

ನಮಾಝ್

ನಮಾಝ್ ಇಸ್ಲಾಮಿನ ಅತ್ಯಂತ ಕಡ್ಡಾಯ ಕರ್ಮಗಳಲ್ಲಿ ಒಂದಾಗಿದೆ. ನಮಾಝ್ ಶರೀರದ ಮುಲಕ ನಿರ್ವಹಿಸಲ್ಪಡುವ ಅತ್ಯಂತ ಶ್ರೇಷ್ಠ ಆರಾಧನೆಯಾಗಿದೆ. ನಮಾಝ್ ಸಮಯ ನಿಗದಿಗೊಳಿಸಿರುವ ಆರಾಧನೆಯಾಗಿದೆ. ನಮಾಝನ್ನು ಅದರ ಸಮಯದಲ್ಲಿಯೇ ನಿರ್ವಹಿಸಬೇಕು. ನಮಾಝ್ ದಿನದ ಐದು ಹೊತ್ತು ಕಡ್ಡಾಯವಾಗಿದೆ. ನಿಶ್ಚಿತ ರೂಪದಲ್ಲಿ ಅಂಗ ಶುದ್ಧಿ ಮಾಡಿದ ಬಳಿಕ ನಮಾಝ್ ಮಾಡಬೇಕು. ಶುದ್ಧಗೊಳಿಸಿದ ಶರೀರ, ಶುದ್ಧವಾದ ವಸ್ತ್ರವನ್ನು ಧರಿಸಿ, ಶುದ್ಧವಿರುವ ಸ್ಥಳದಲ್ಲಿ ನಮಾಝನ್ನು ನಿರ್ವಹಿಸಬೇಕು.

ನಮಾಝ್ ಒಂದು ಸಾಮುಹಿಕ ಆರಾಧನೆಯಾಗಿದೆ. ಅದನ್ನು ಮಸೀದಿಯಲ್ಲಿ ಸಾಮುಹಿಕವಾಗಿ ನಿರ್ವಹಿಸಬೇಕು. ಮಸೀದಿಗೆ ಬರಲು ಅಡ್ಡಿಯಿರುವವರಿಗೆ ಮನೆಯಲ್ಲಿಯೋ ದಾರಿಯಲ್ಲಿಯೋ ಅವರು ಎಲ್ಲಿರುವರೋ ಅಲ್ಲಿಯೇ ನಮಾಝನ್ನು ನಿರ್ವಹಿಸಬಹುದಾಗಿದೆ. ಪ್ರತಿಯೊಂದು ನಮಾಝ್‍ನ ವೇಳೆಯಲ್ಲಿಯು ಮಸೀದಿಯಲ್ಲಿ ಓರ್ವರು ಅದನ್ನು ಉಚ್ಚ ಸ್ವರದಲ್ಲಿ ಕೂಗಿ ಕರೆಯುತ್ತಾರೆ. ಈ ಕರೆಯನ್ನು ಅದಾನ್ ಎಂದು ಕರೆಯಲಾಗುತ್ತದೆ. ಮಕ್ಕಾದ ಕಅಬಾಕ್ಕೆ ಮುಖ ಮಾಡಿಯೇ ಲೋಕದಾದ್ಯಂತವಿರುವ ಮುಸ್ಲಿಮರು ನಮಾಝನ್ನು ನಿರ್ವಹಿಸುತ್ತಾರೆ. ಶುಕ್ರವಾರ ಮಧ್ಯಾಹ್ನ ಜುಮುಅ: ನಮಾಝನ್ನು ನಿರ್ವಹಿಸಲಾಗುತ್ತದೆ. ತಾವಿರುವಲ್ಲಿ ಜುಮುಅ: ನಮಾಝನ್ನು ಸಂಸ್ಥಾಪಿಸುವುದು ಮತ್ತು ಅದರಲ್ಲಿ ಪಾಳ್ಗೊಳ್ಳುವುದು ಆಯಾ ನಾಡಿನ ಮುಸ್ಲಿಮರ ಕರ್ತವ್ಯವಾಗಿದೆ.

ವಿಶ್ವಾಸಿಯ ಮೈ-ಮನಸ್ಸು ದೇವನಿಗೆ ಅರ್ಪಿತವಾಗಿರಲು ನಮಾಝ್ ನಿರ್ವಹಿಸುವುದು ಒಂದು ಶರ್ತವಾಗಿದೆ. ದೇವನ ಮುಂದೆ ಹೋಗಿ ನಿಂತು ಕೆಲವು ಆಂಶಿಕ ಚಲನೆಗಳೊಂದಿಗೆ ಅವನೊಂದಿಗೆ ದಾಸ್ಯ ವಿನಮ್ರತೆಗಳನ್ನು ಪ್ರಕಟಿಸುವುದು ಮತ್ತು ಅವನನ್ನು ಸ್ತುತಿಸುವುದು. ಸನ್ಮಾರ್ಗ ಪ್ರಾಪ್ತಿಗೆ, ದುರ್ಮಾರ್ಗದಿಂದ ಮುಕ್ತವಾಗುವುದಕ್ಕೆ ಪ್ರಾರ್ಥಿಸುವುದು, ಕೊನೆಗೆ ತನ್ನ ಸುತ್ತಮುತ್ತಲಿನ ಶಾಂತಿಯನ್ನು ಬಯಸಿ ವಿಶ್ವಾಸಿಯು ನಮಾಝ್‍ನಿಂದ ವಿರಮಿಸುತ್ತಾನೆ. ಪ್ರತಿ ದಿನ ಐದು ಹೊತ್ತು ನಮಾಝ್ ಮಾಡುತ್ತಲಿರುವ ವಿಶ್ವಾಸಿಯಲ್ಲಿ ದೇವನ ಬಗ್ಗೆ ಭಕ್ತಿ ಮತ್ತು ಸನ್ಮಾರ್ಗದ ಆಕಾಂಕ್ಷೆಯು ಸಕ್ರಿಯವಾಗಿ ನೆಲೆ ನಿಲ್ಲುವುದು. ನಮಾಝ್ ಅವರಲ್ಲಿ ದೇವನು ನಿಷಿದ್ಧಗೊಳಿಸಿರುವವುಗಳಿಂದ ತಡೆಯುವುದು, ದೇವ ಸಂಪ್ರೀತಿಯ ಮಾರ್ಗದೆಡೆಗೆ ಅವರನ್ನು ಮುನ್ನಡೆಸುತ್ತದೆ.

ಪವಿತ್ರ ಕುರ್ ಆನ್ ಹೇಳಿತು: “ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯು ನಮಾಝ್ ಅಶ್ಲೀಲ ಹಾಗೂ ದುಷ್ಕ್ರತ್ಯಗಳಿಂದ ತಡೆಯುತ್ತದೆ. ದೇವಸ್ಮರಣೆಯು ಅತ್ಯಂತ ಮಹತ್ತರವಾಗಿದೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ” (ಪವಿತ್ರ ಕುರ್ ಆನ್-29:45)

ಪ್ರವಾದಿವರ್ಯರು(ಸ) ನಮಾಝನ್ನು ಹೀಗೆ ವರ್ಣಿಸಿರುತ್ತಾರೆ: “ನಿಮ್ಮ ಮನೆಯ ಬಳಿ ಒಂದು ತಿಳಿ ನೀರಿನ ಒರತೆ ಹರಿಯುತ್ತಿರುತ್ತದೆ. ನೀವು ಐದು ಹೊತ್ತು ಅದರಲ್ಲಿ ಸ್ನಾನ ಮಾಡುತ್ತಿರುತ್ತೀರಿ. ಹಾಗಿದ್ದರೆ ನಿಮ್ಮ ದೇಹದಲ್ಲಿ ಏನಾದರೂ ಕೊಳೆ ಉಳಿದೀತೆ?. ಅದೇ ರೀತಿ ನಮಾಝ್ ಮಾಡುವವನ ಮನಸ್ಸು ಸಂಶುದ್ಧವೂ ಸುಸಂಸ್ಕ್ರತವೂ ಆಗಿರುವುದು.”

ಸಾಮುಹಿಕ ನಮಾಝ್ ಮಾನವೀಯ ಐಕ್ಯದ, ಸಾಮಾಜಿಕ ಶಿಸ್ತಿನ ಪ್ರಾಯೋಗಿಕ ತರಬೇತಿ ಕೂಡಾ ಆಗಿದೆ. ಆಡಳಿತಾಧಿಕಾರಿ, ಪ್ರಜೆ, ಉಳ್ಳವ, ಇಲ್ಲದವ, ಬಿಳಿಯ, ಕರಿಯ, ವಿದ್ವಾಂಸ, ಪಾಮರ ಹೀಗೆ ಎಲ್ಲರೂ ಒಂದೇ ಸಾಲಿನಲ್ಲಿ ಭುಜಕ್ಕೆ ಭುಜ ತಾಗಿಸಿ ನಿಂತು ವಿನಮ್ರವಾಗಿ ಅಲ್ಲಾಹನ ದಾಸರೆಂಬ ನೆಲೆಯಲ್ಲಿ ಮಾನವರೆಲ್ಲರೂ ಸಮಾನರೆಂಬ ಆಶಯವನ್ನು ಮುರ್ತರೂಪದಲ್ಲಿ ಪ್ರಕಟಿಸುತ್ತಾ ನಮಾಝನ್ನು ನಿರ್ವಹಿಸುತ್ತಾರೆ. ಮಸೀದಿಗೆ ಮೊದಲು ಗುಮಾಸ್ತ ತಲುಪಿದರೆ ಆತ ನಮಾಝ್‍ನಲ್ಲಿ ಪ್ರಥಮ ಸಾಲಿನ ಪ್ರಥಮ ವ್ಯಕ್ತಿಯಾಗುವನು. ನಮ್ಮ ಜಿಲ್ಲಾಧಿಕಾರಿ ಅಥವಾ ಪ್ರಧಾನ ಮಂತ್ರಿ ಮಸೀದಿಗೆ ತಲುಪಿದಾಗ ನಮಾಝ್‍ನ ಸಾಲಿನಲ್ಲಿ ಸ್ಥಳವಿದ್ದರೆ ಅವನೊಂದಿಗೇ ಭುಜಕ್ಕೆ ಭುಜಕ್ಕೆ ತಾಗಿಸಿ ನಿಲ್ಲಬೇಕು, ಸ್ಥಳವಿಲ್ಲದಿದ್ದರೆ ತನ್ನ ಆಫೀಸಿನ ಗುಮಾಸ್ತನ ಹಿಂದೆ ಅವರು ನಿಲ್ಲಬೇಕು. ಹಾಗಿರುವಾಗ ಸಾಷ್ಟಾಂಗದ ಸಮಯದಲ್ಲಿ ಅವರು ತಮ್ಮ ತಲೆಯನ್ನು ತಮ್ಮದೇ ಆಫೀಸಿನ ಗುಮಾಸ್ತನ ಕಾಲಿನ ಬಳಿ ಇರಿಸಬೇಕಾಗುತ್ತದೆ.

ಮಸೀದಿಯು ಮೇಲು ಕೀಳನ್ನು ನಿರಾಕರಿಸುವ ಸ್ಥಳವಾಗಿದೆ. ಅದು ಅಲ್ಲಾಹನ ಮುಂದೆ ಸಾಷ್ಟಾಂಗವನ್ನು ದಾಖಲಿಸುವ ಸ್ಥಳವಾಗಿದೆ. ವಿಶ್ವಾಸಿಗಳಿಗೆ ಪ್ರತಿ ದಿನವೂ ಐದು ಹೊತ್ತು ನಮಾಝ್‍ನ ಸಂದರ್ಭದಲ್ಲಿ ತಮ್ಮ ಸುತ್ತಮುತ್ತ ಇರುವ ಸಹ ವಿಶ್ವಾಸಿಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬುದು ಸಾಮುಹಿಕ ನಮಾಝಿನ ಇನ್ನೊಂದು ಅರ್ಥವಾಗಿದೆ. ಈ ಸಮ್ಮಿಲನ ಮತ್ತು ಭೇಟಿಯ ಉದ್ದೇಶವು ಯಾವುದಾದರೂ ಭೌತಿಕ ಹಿತಾಸಕ್ತಿಗಾಗಿರುವುದಿಲ್ಲ, ಆದ್ದರಿಂದ ಅದು ನಿಷ್ಕಳಂಕವಾಗಿದೆ. ಅದು ಅವರಲ್ಲಿ ಪರಸ್ಪರ ಪರಿಚಯ, ಗ್ರಹಿಕೆ, ಸೌಹಾರ್ದ, ಒಗ್ಗಟ್ಟು, ಸಹೋದರತೆಯನ್ನು ಬೆಳೆಸುತ್ತದೆ. ಓರ್ವ ನಾಯಕನ ಹಿಂದೆ ನೆರೆಯುವುದು, ಅವನ ಚಲನೆಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು, ನಮಾಝಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದು ಇವೆಲ್ಲವೂ ವಿಶ್ವಾಸಿಗಳಲ್ಲಿ ಶಿಸ್ತಿನ ಪಾಠಗಳನ್ನು ಕಲಿಸುತ್ತದೆ. ವ್ಯಕ್ತಿಗತವಾಗಿಯೂ, ಸಾಮುಹಿಕವಾಗಿಯೂ ನಮಾಝ್ ದೇವನ ವಿಧಿ ನಿಷೇಧಗಳನ್ನು ಪಾಲಿಸಿ ಜೀವಿಸುವ ತರಬೇತಿ ಕೂಡಾ ಆಗಿದೆ.

ನಮಾಝಿನಿಂದ ಉದ್ದೇಶಿಸಲಾದ ಪ್ರತಿಫಲಗಳನ್ನು ಪಡೆಯುವುದಕ್ಕಾಗಿ ಅದನ್ನು ಭಕ್ತಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ಪವಿತ್ರ ಕುರ್ ಆನ್ ವಿಶೇಷವಾಗಿ ಸೂಚಿಸಿದೆ. “ನೀವು ಕಂಡಿರಾ, ಪರಲೋಕದ ಕರ್ಮಫಲಗಳನ್ನು ನಿರಾಕರಿಸುವವನನ್ನು? ಅವನೇ ತಾನೆ, ಅನಾಥರನ್ನು ದೂರ ದಬ್ಬುವವನು ಮತ್ತು ದರಿದ್ರರಿಗೆ ಊಟವನ್ನು ಕೊಡಲು ಪ್ರೇರೇಪಿಸದವನು ಮತ್ತು ವಿನಾಶ ಕಾದಿದೆ ನಮಾಝ್ ನಿರ್ವಹಿಸುವವರಿಗೆ ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ಥೆ ತೋರುತ್ತಾರೆ, ಅವರು ತೋರಿಕೆಯ ಕೆಲಸ ಮಾಡುತ್ತಾರೆ ಮತ್ತು ಜನರಿಗೆ ಸಾಮಾನ್ಯ ಅವಶ್ಯಕ ವಸ್ತುಗಳನ್ನು ಕೊಡುವುದಕ್ಕೂ ಹಿಂಜರಿಯುತ್ತಾರೆ.(ಪವಿತ್ರ ಕುರ್ ಆನ್-107:1-7)”

ಯಥಾರ್ಥವಾದ ನಮಾಝಿನಲ್ಲಿ ಆಗಬೇಕಾದದ್ದು ಪರಲೋಕದ ನೆನಪು, ಸಮಾನತೆಯ ಭಾವನೆ, ಸಹೋದರತೆಯ ಪ್ರಜ್ಞೆ, ಪರಲೋಕದ ಚಿಂತೆಯಾಗಿದೆ. ಅದು ಆಗದ ನಮಾಝ್ ಕೇವಲ ಜಡವಾಗಿದೆಯೆಂದು ಈ ಕುರ್ ಆನ್ ಸೂಕ್ತಗಳು ಸ್ಪಷ್ಟಪಡಿಸುತ್ತದೆ.

SHARE THIS POST VIA