ಮನುಷ್ಯನ ಆರ್ಥಿಕ ಜೀವನವನ್ನು ಸತ್ಯ ಮತ್ತು ನ್ಯಾಯಗಳಲ್ಲಿ ಅಧಿಷ್ಟಿತಗೊಳಿಸಲಿಕ್ಕಾಗಿ ಇಸ್ಲಾಮ್ ಕೆಲವು ತತ್ವಗಳನ್ನು ಹಾಗೂ ಕೆಲವು ಮಿತಿಮೇರೆಗಳನ್ನು ನಿಶ್ಚಯಿಸಿದೆ.
ಸಂಪತ್ತಿನ ಉತ್ಪಾದನೆ, ಬಳಕೆ ಮತ್ತು ಅದರ ಚಲಾವಣೆಯ ಎಲ್ಲ ಕ್ರಿಯೆಗಳೂ ಈ ನಿಶ್ಚಿತ ಪರಿಧಿಯೊಳಗೆ ನಡೆಯುವಂತೆ ಮಾಡಿದೆ. ಸಂಪತ್ತಿನ ಉತ್ಪಾದನಾ ವಿಧಾನಗಳು ಮತ್ತದರ ಚಲಾವಣೆಯ ರೂಪಗಳು ಹೇಗಿರಬೇಕು ಎಂಬ ಕುರಿತು ಇಸ್ಲಾಮ್ ಯಾವುದೇ ಸೀಮಿತ ನಿರ್ಬಂಧವನ್ನು ಹೇರಿಲ್ಲ. ವಿಭಿನ್ನ ಕಾಲಘಟ್ಟಗಳಲ್ಲಿ, ನಾಗರಿಕತೆಯ ಬೆಳವಣಿಗೆಯೊಂದಿಗೇ ಅವು ಬೇರೆ ಬೇರೆ ರೂಪಗಳನ್ನು ಧರಿಸುತ್ತಲಿರುತ್ತವೆ. ಮನುಷ್ಯನ ಪರಿಸ್ಥಿತಿ ಮತ್ತವನ ಅವಶ್ಯಕತೆಗಳ ನೆಲೆಯಲ್ಲಿ ಅವುಗಳ ಸ್ವರೂಪವು ತನ್ನಿಂತಾನೇ ನಿರ್ಧರಿಸಲ್ಪಡುತ್ತದೆ. ಆದರೆ ಎಲ್ಲ ಕಾಲ ಮತ್ತು ಎಲ್ಲ ಪರಿಸ್ಥಿತಿಗಳಲ್ಲೂ ಎಲ್ಲ ರೂಪದ ಆರ್ಥಿಕ ವ್ಯವಹಾರಗಳಲ್ಲು ಸಾರ್ವಕಾಲಿಕವಾಗಿ ಅನ್ವಯಿಸುವಂತಹ ಕೆಲವು ತತ್ವಗಳನ್ನು ಇಸ್ಲಾಮ್ ನಿಗದಿಪಡಿಸಿದ್ದು, ಅವುಗಳ ಪಾಲನೆ ಕಡ್ಡಾಯವಾಗಿದೆ.
ಇಸ್ಲಾಮೀ ದೃಷ್ಟಿಕೋನದಂತೆ, ಭೂಮಿ ಮತ್ತು ಅದನ್ನೊಳಗೊಂಡ ಸರ್ವ ವಸ್ತುಗಳನ್ನೂ ದೇವನು ಮಾನವಕುಲಕ್ಕಾಗಿ ಸೃಷ್ಟಿಸಿದ್ದಾನೆ. ಆದ್ದರಿಂದ ಈ ಭೂಮಿಯ ಮೇಲೆ ತನ್ನ ಜೀವನೋಪಾಧಿಯನ್ನು ಸಂಪಾದಿಸಲು ಪ್ರಯತ್ನಿಸುವ ಜನ್ಮಸಿದ್ಧ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಈ ಹಕ್ಕಿನ ವಿಷಯದಲ್ಲಿ ಎಲ್ಲ ಮನುಷ್ಯರೂ ಸಮಾನರಾಗಿದ್ದಾರೆ. ಯಾರು ಯಾರಿಂದಲೂ ಈ ಅಧಿಕಾರವನ್ನು ಕಿತ್ತುಕೊಳ್ಳುವಂತಿಲ್ಲ. ಹಾಗೆಯೇ, ಈ ವಿಷಯದಲ್ಲಿ ಒಬ್ಬರಿಗೆ ಇನ್ನೊಬ್ಬರಿಗಿಂತ ಹೆಚ್ಚಿನ ಆದ್ಯತೆ ಸಿಗುವಂತಿಲ್ಲ. ಯಾವುದೇ ವ್ಯಕ್ತಿ, ಕುಲ ಅಥವಾ ಜನಾಂಗದ ಮೇಲೆ, ಅವರು ಜೀವನೋಪಾದಿಯನ್ನು ಸಂಪಾದಿಸುವ ಯಾವುದಾದರು ನಿರ್ದಿಷ್ಟ ಮಾಧ್ಯಮವನ್ನು ಬಳಸಲು ಹಕ್ಕುದಾರರಲ್ಲ ಎಂದು ನಿಷೇಧ ಹೇರುವಂತಿಲ್ಲ. ಯಾವುದಾದರೂ ಒಂದು ಅಥವಾ ಕೆಲವು ವರ್ಗಗಳು ಇಂತಿಂತಹ ಕಸಬುಗಳನ್ನು ಮಾಡಬಾರದೆಂದು ತಡೆಯುವಂತಿಲ್ಲ.
ಇದೇ ರೀತಿ ದಿವ್ಯ ನಿಯಮ ಅಥವಾ ಶರೀಅತ್ತಿನ ಪ್ರಕಾರ, ಯಾವುದೇ ಕಸಬು ಅಥವಾ ಜೀವನೋಪಾಧಿಯ ಸಂಪಾದನೆಯ ಮೇಲೆ ಯಾವುದಾದರೊಂದು ನಿರ್ದಿಷ್ಟ ವರ್ಗ, ಕುಲ ಅಥವಾ ಜನಾಂಗದ ಏಕಸ್ವಾಮ್ಯ ಇರುವಂತಹ ಪಕ್ಷಪಾತಕ್ಕೂ ಅವಕಾಶವಿಲ್ಲ.
ದೇವನು ಸೃಷ್ಟಿಸಿದ ಭೂಮಿಯಲ್ಲಿ ಮತ್ತು ಅವನೇ ಒದಗಿಸಿದ ಸಂಪನ್ಮೂಲಗಳಲ್ಲಿ ತಮ್ಮ ಪಾಲನ್ನು ಪಡೆಯಲು ಪ್ರಯತ್ನಿಸುವುದಕ್ಕೆ ಎಲ್ಲ ಮನುಷ್ಯರೂ ಸಮಾನ ಹಕ್ಕುದಾರರಾಗಿದ್ದಾರೆ. ಈ ಪ್ರಯತ್ನ ನಡೆಸಲು ಎಲ್ಲರಿಗು ಸಮಾನವಾದ ಮುಕ್ತ ಅವಕಾಶ ಸಿಗಲೇಬೇಕಾಗಿದೆ.
ಪ್ರಕೃತಿಯ ಯಾವ ಕೊಡುಗೆಯನ್ನು ನಿರ್ಮಿಸುವಲ್ಲಿ ಅಥವಾ ಉಪಯುಕ್ತಗೊಳಿಸುವಲ್ಲಿ ಯಾರದೇ ಶ್ರಮ ಅಥವಾ ಪ್ರತಿಭೆಗಳ ಪಾತ್ರವಿಲ್ಲವೋ ಆ ಎಲ್ಲ ಕೊಡುಗೆಗಳು ಎಲ್ಲ ಮನುಷ್ಯರ ಹಕ್ಕುಗಳಾಗಿವೆ. ಅವಶ್ಯಾನುಸಾರ ಅವುಗಳಿಂದ ಪ್ರಯೋಜನ ಪಡೆಯಲು ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕಿದೆ. ನದಿ ಮತ್ತು ಝರಿಗಳ ನೀರು, ಕಾಡಿನ ಮರಳು, ಸ್ವಾಭಾವಿಕ ಮರಗಳ ಫಲ, ತಾವಾಗಿ ಬೆಳೆದ ಹುಲ್ಲು, ಮೇವು, ಗಾಳಿ, ನೀರು, ಬಯಲುಗಾಡಿನ ಪ್ರಾಣಿಗಳು, ಭೂಮಿಯೊಳಗೆ ಸುಪ್ತವಾಗಿರುವ ಗಣಿಗಳು ಮತ್ತು ಇಂತಹ ಇತರ ವಸ್ತುಗಳ ಮೇಲೆ ಯಾರದೇ ಏಕಸ್ವಾಮ್ಯ ಸ್ಥಾಪಿಸಲು ಸಾಧ್ಯವಿಲ್ಲ. ಹಾಗೆಯೇ ಹೆಚ್ಚೆಂದರೆ, ವ್ಯಾಪಾರೀ ಮನೋಭಾವದಿಂದ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಬಳಸುವವರ ಮೇಲೆ ತೆರಿಗೆಗಳನ್ನು ಹಾಕಬಹುದು.
ದೇವನು ಮನುಷ್ಯರ ಉಪಯೋಗಕ್ಕೆಂದು ಮಾಡಿಟ್ಟ ವಸ್ತುಗಳನ್ನು ಕಲೆ ಹಾಕಿ ನಿರುಪಯುಕ್ತವಾಗಿಡುವುದು ಸರಿಯಲ್ಲ. ಒಂದೋ ಅವುಗಳನ್ನು ಸ್ವತಃ ಬಳಸಬೇಕು ಇಲ್ಲವೇ ಇತರರು ಬಳಸಲು ಬಿಡಬೇಕು. ಈ ತತ್ವದ ಆಧಾರದಲ್ಲೇ ಇಸ್ಲಾಮ್, ಯಾವುದೇ ವ್ಯಕ್ತಿ ತನ್ನ ಅಧೀನವಿರುವ ನೆಲವನ್ನು ಮೂರು ವರ್ಷಕ್ಕಿಂತ ಹೆಚ್ಚಿನ ಕಾಲ ನಿರುಪಯುಕ್ತವಾಗಿ ಇಡಬಾರದೆಂದು ವಿಧಿಸಿದೆ. ಒಬ್ಬ ವ್ಯಕ್ತಿ ತನ್ನ ನೆಲವನ್ನು ಮೂರು ವರ್ಷಕ್ಕಿಂತ ಹೆಚ್ಚಿನ ಕಾಲ ವ್ಯವಸಾಯ ಅಥವಾ ನಿರ್ಮಾಣ ಯಾವುದಕ್ಕೂ ಬಳಸದೆ ಇದ್ದರೆ ಆ ನೆಲವನ್ನು ಪಾಳುಬಿದ್ದ ನೆಲವೆಂದು ಪರಿಗಣಿಸಲಾಗುತ್ತದೆ. ಬೇರೊಬ್ಬ ವ್ಯಕ್ತಿ ಆ ನೆಲವನ್ನು ತನ್ನ ಉಪಯೋಗಕ್ಕೆಂದು ಬಳಸಿಕೊಂಡರೆ ಆತನ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದಿಲ್ಲ. ಹಾಗೆಯೇ ಆ ನೆಲವನ್ನು ಬೇರೆ ಯಾರಿಗಾದರೂ ಕೊಟ್ಟು ಬಿಡುವ ಅಧಿಕಾರ ಇಸ್ಲಾಮೀ ಸರಕಾರಕ್ಕೆ ಇರುವುದು.
ಒಬ್ಬ ವ್ಯಕ್ತಿ ಪ್ರಕೃತಿಯ ಭಂಡಾರದಿಂದ ನೇರವಾಗಿ ಯಾವುದಾದರು ವಸ್ತುವನ್ನು ಪಡಕೊಂಡು ತನ್ನ ಶ್ರಮ ಮತ್ತು ಅರ್ಹತೆಯಿಂದ ಅದನ್ನು ತನ್ನ ಉಪಯೋಗಕ್ಕೆ ತೆಗೆದುಕೊಂಡರೆ ಅವನೇ ಅದರ ಮಾಲಕನಾಗಿರುವನು. ಉದಾ: ಯಾವುದೇ ಮಾಲಕತ್ವದಲ್ಲಿಲ್ಲದ ಯಾವುದಾದರು ಪಾಳು ಭೂಮಿಯನ್ನು ಒಬ್ಬ ವ್ಯಕ್ತಿ ತನ್ನ ವಶಕ್ಕೆ ತೆಗೆದುಕೊಂಡು ಅದನ್ನು ಉಪಯುಕ್ತ ರೀತಿಯಲ್ಲಿ ಬಳಸಲಾರಂಭಿಸಿದರೆ ಯಾರೂ ಆತನನ್ನು ತಡೆಯುವಂತಿಲ್ಲ.
ಇಸ್ಲಾಮೀ ದೃಷ್ಟಿಕೋನದಂತೆ, ಲೋಕದಲ್ಲಿ ಯಾವುದೇ ವಸ್ತುವಿನ ಮಾಲಕತ್ವದ ಹಕ್ಕು ಇದೇ ರೀತಿ ಆರಂಭವಾಗುತ್ತದೆ. ಮೊದ ಮೊದಲು ಭೂಮಿಯಲ್ಲಿ ಜನವಸತಿ ಆರಂಭಗೊಂಡಾಗ ಎಲ್ಲ ವಸ್ತುಗಳೂ ಎಲ್ಲರಿಗೂ ಸಾರ್ವತ್ರಿಕವಾಗಿ ಉಪಯೋಗಾರ್ಹವಾಗಿದ್ದುವು. ಯಾರು ಈ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಉತ್ತಮ ರೀತಿಯಲ್ಲಿ ಬಳಸಿಕೊಂಡರೋ ಅವರೇ ಅವುಗಳ ಮಾಲಕರೆನಿಸಿದರು. ಅಂದರೆ ಆ ವಸ್ತುಗಳನ್ನು ತಮ್ಮ ಬಳಕೆಗೆ ಮಾತ್ರ ಸೀಮಿತಗೊಳಿಸಲು ಮತ್ತು ಅವುಗಳನ್ನು ಇತರರು ಬಳಸ ಬಯಸಿದರೆ ಅವರಿಂದ ಅದಕ್ಕೆ ಸೂಕ್ತ ಸಂಭಾವನೆ ಪಡೆಯಲು ಅವರು ಹಕ್ಕುದಾರರೆನಿಸಿದರು. ಇದುವೇ ಮನುಷ್ಯನ ಎಲ್ಲ ಆರ್ಥಿಕ ವ್ಯವಹಾರಗಳ ಪ್ರಾಕೃತಿಕ ಬುನಾದಿಯಾಗಿದೆ. ಈ ಬುನಾದಿ ಯಥಾ ಸ್ಥಿತಿಯಲ್ಲಿ ಸ್ಥಾಪಿತವಾಗಿರಬೇಕು.
ದಿವ್ಯ ಕಾನೂನಿನ ಪ್ರಕಾರ ಸಮ್ಮತವಾಗಿರುವ ಮಾರ್ಗಗಳಿಂದ ಯಾರಿಗೇ ಆಗಲಿ, ಈ ಲೋಕದಲ್ಲಿ ಪ್ರಾಪ್ತವಾಗಿರುವ ಮಾಲಕತ್ವ ಹಕ್ಕುಗಳು ಗೌರವಾರ್ಹವಾಗಿವೆ. ಇನ್ನು ಯಾವ ಮಾಲಕತ್ವವು ಕಾನೂನಿನ ಪ್ರಕಾರ ಸಮ್ಮತ ಮತ್ತು ಯಾವುದು ಸಮ್ಮತವಲ್ಲ ಎಂಬುದು ಬೇರೆ ವಿಷಯ. ಕಾನೂನು ರೀತ್ಯಾ ಸಮ್ಮತವಲ್ಲದ ಮಾಲಕತ್ವದ ಹಕ್ಕನ್ನು ಖಂಡಿತ ರದ್ದುಗೊಳಿಸಬಹುದು. ಆದರೆ ಕಾನೂನಿನ ಪ್ರಕಾರ ಸಮ್ಮತವಾಗಿರುವ ಮಾಲಕತ್ವ ಹಕ್ಕನ್ನು ಯಾರಿಂದಲೇ ಆಗಲಿ, ಕಿತ್ತುಕೊಳ್ಳುವ ಅಥವಾ ಅವರ ಧರ್ಮಸಮ್ಮತ ಹಕ್ಕುಗಳಲ್ಲಿ ಹೆಚ್ಚು ಕಡಿಮೆ ಮಾಡುವ ಹಕ್ಕು ಯಾವುದೇ ಸರಕಾರಕ್ಕಾಗಲೀ ನ್ಯಾಯಾಂಗಕ್ಕಾಗಲೀ ಖಂಡಿತ ಇಲ್ಲ.
ಸಾರ್ವಜನಿಕ ಹಿತಾಸಕ್ತಿಯ ಹೆಸರಲ್ಲಿ, ಜನರ ಧರ್ಮದತ್ತ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಯಾವುದೇ ವ್ಯವಸ್ಥೆಯನ್ನು ಸ್ಥಾಪಿಸುವಂತಿಲ್ಲ. ಸಾಮೂಹಿಕ ಹಿತಾಸಕ್ತಿಗಾಗಿ ದಿವ್ಯ ಕಾನೂನು ಖಾಸಗಿ ಮಾಲಕತ್ವಗಳ ಮೇಲೆ ಎಷ್ಟು ನಿರ್ಬಂಧಗಳನ್ನು ಹೇರಿದೆಯೋ ಆ ನಿರ್ಬಂಧಗಳನ್ನು ಕಡಿಮೆಗೊಳಿಸುವುದು ಪರಮ ಅನ್ಯಾಯ ಆಗಿರುವಂತೆಯೇ, ಆ ನಿರ್ಬಂಧಗಳನ್ನು ವಿಸ್ತರಿಸುವುದು ಕೂಡಾ ಅಷ್ಟೇ ಘೋರ ಅನ್ಯಾಯವಾಗಿದೆ.
ವ್ಯಕ್ತಿಗಳ ಧರ್ಮದತ್ತ ಹಕ್ಕು- ಅಧಿಕಾರಗಳನ್ನು ಸಂರಕ್ಷಿಸುವುದು ಮತ್ತು ಅವರ ಮೇಲೆ ಧರ್ಮವು ಯಾವ ಸಾಮೂಹಿಕ ಬಾಧ್ಯತೆಗಳನ್ನು ವಿಧಿಸಿದೆಯೋ ಅವುಗಳನ್ನು ಅವರು ನೆರವೇರಿಸುವಂತೆ ನೋಡಿಕೊಳ್ಳುವುದು ಕೂಡಾ ಇಸ್ಲಾಮೀ ಸರಕಾರವೊಂದರ ಕರ್ತವ್ಯಗಳಲ್ಲಿ ಒಳಪಟ್ಟಿದೆ.
ದೇವನು ತನ್ನ ಕೊಡುಗೆಗಳ ವಿತರಣೆಯ ವಿಷಯದಲ್ಲಿ ಯಾವುದೇ `ಸಮಾನತೆ’ಯನ್ನು ತೋರಿಲ್ಲ. ತನ್ನ ಯುಕ್ತಿಯ ಪ್ರಕಾರ ಕೆಲವರ ಎದುರು ಮತ್ತೆ ಕೆಲವರಿಗೆ ಆದ್ಯತೆಯನ್ನು ಕೊಟ್ಟಿದ್ದಾನೆ. ಸೌಂದರ್ಯ, ಕಂಠ ಮಾಧುರ್ಯ, ಆರೋಗ್ಯ, ಶಾರೀರಿಕ ಸಾಮಥ್ರ್ಯ, ಬೌದ್ಧಿಕ ಪ್ರತಿಭೆಗಳು, ಹುಟ್ಟುವ ಪರಿಸರ ಇವೆಲ್ಲಾ ಎಲ್ಲ ಮನುಷ್ಯರಿಗೂ ಏಕ ರೀತಿಯಲ್ಲಿ ಸಿಗುವುದಿಲ್ಲ. ಅದೇ ರೀತಿ ಆರ್ಥಿಕ ಸ್ಥಿತಿ ಕೂಡಾ. ಮನುಷ್ಯರ ಮಧ್ಯೆ ಆರ್ಥಿಕ ತಾರತಮ್ಯ ಇರಬೇಕಾದುದು. ದೇವ ನಿರ್ಮಿತ ಸಾಕ್ಷಾತ್ ಪ್ರಕೃತಿಯ ಬೇಡಿಕೆಯಾಗಿದೆ. ಆದ್ದರಿಂದಲೇ ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯರ ಮಧ್ಯೆ ಕೃತಕವಾಗಿ ಆರ್ಥಿಕ ಸಮಾನತೆಯನ್ನು ಸ್ಥಾಪಿಸಲಿಕ್ಕಾಗಿ ಬಳಸುವ ತಂತ್ರಗಳೆಲ್ಲಾ ಧ್ಯೇಯದಲ್ಲೂ ತತ್ವದಲ್ಲೂ ತಪ್ಪೆನಿಸುತ್ತದೆ.
ಇಸ್ಲಾಮ್, ಆರ್ಥಿಕ ಸಮಾನತೆಯ ಬದಲು, ಸಂಪತ್ತಿನ ಪ್ರಾಪ್ತಿಗಾಗಿ ಪ್ರಯತ್ನಿಸುವ ಅವಕಾಶಗಳಲ್ಲಿ ಸಮಾನತೆಯನ್ನು ಅಪೇಕ್ಷಿಸುತ್ತದೆ. ಒಂದು ಸಮಾಜದಲ್ಲಿ, ಒಬ್ಬ ವ್ಯಕ್ತಿ ತನ್ನ ಶಕ್ತಿ ಮತ್ತು ಸಾಮಥ್ರ್ಯಾನುಸಾರ ಸಂಪಾದನೆ ಮಾಡಲು ಪ್ರಯತ್ನಿಸದಂತೆ ತಡೆಗಟ್ಟುವ ಕಾನೂನುಗಳು ಮತ್ತು ಸಾಮಾಜಿಕ ಕಟ್ಟಳೆಗಳು ಇದ್ದರೆ ಅಂತಹ ಅಡೆತಡೆಗಳನ್ನೆಲ್ಲಾ ಇಸ್ಲಾಮ್ ಮುರಿದು ಹಾಕ ಬಯಸುತ್ತದೆ. ಅದೇ ರೀತಿ ಕೆಲವು ನಿರ್ದಿಷ್ಟ ಕುಲಗೋತ್ರಗಳ, ವರ್ಗ ಅಥವಾ ಜನಾಂಗಗಳ ಜನರಿಗೆ ಕೇವಲ ಅವರ ಸಂಪನ್ನ ಜನನದ ಆಧಾರದಲ್ಲಿ ವಿಶೇಷ ಕಾನೂನು ಭದ್ರತೆಗಳನ್ನು ಒದಗಿಸುವಂತಹ ಪಕ್ಷಪಾತ ಹಾಗೂ ಭೇದ ಭಾವಗಳನ್ನೂ ಇಸ್ಲಾಮ್ ಅಳಿಸಿ ಹಾಕುತ್ತದೆ. ಏಕೆಂದರೆ ಇವೆರಡೂ ಪದ್ಧತಿಗಳು ಪ್ರಕೃತಿ ಸಹಜವಾದ ಅಸಮಾನತೆಯ ಸ್ಥಾನದಲ್ಲಿ ಒಂದು ಬಗೆಯ ಕೃತಕ ಅಸಮಾನತೆಯನ್ನು ಹೇರುತ್ತವೆ. ಆದ್ದರಿಂದಲೇ ಇಸ್ಲಾಮ್, ಅದನ್ನು ಅಳಿಸಿ ಆರ್ಥಿಕ ವ್ಯವಸ್ಥೆಯನ್ನು ಎಲ್ಲರಿಗೂ ಶ್ರಮಿಸುವ ಮುಕ್ತ ಅವಕಾಶ ಇರುವಂತಹ ನೈಸರ್ಗಿಕ ಸ್ಥಿತಿಗೆ ತರ ಬಯಸುತ್ತದೆ.
ಇನ್ನು ಶ್ರಮಿಸುವ ಅವಕಾಶ ಮತ್ತು ಫಲಿತಾಂಶಗಳು ಇವೆಲ್ಲದರಲ್ಲೂ ಎಲ್ಲರನ್ನೂ ಬಲಾತ್ಕಾರವಾಗಿ ಸಮಾನಗೊಳಿಸಬೇಕೆಂಬ ಕೆಲವು ವರ್ಗಗಳ ವಾದವನ್ನು ಇಸ್ಲಾಮ್ ಮನ್ನಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ, ದೇವನು ತನ್ನನ್ನು ಯಾವ ಪರಿಸರದಲ್ಲಿ ಹುಟ್ಟಿಸಿರುವನೋ ಅಲ್ಲಿಂದಲೇ ಆರ್ಥಿಕ ರಂಗದಲ್ಲಿನ ತನ್ನ ಸ್ಪರ್ಧೆಯನ್ನು ಆರಂಭಿಸುವಂತಹ ವ್ಯವಸ್ಥೆ ಮಾತ್ರವೇ ಪ್ರಕೃತಿಗೆ ನಿಕಟವಾಗಿರುವ ವ್ಯವಸ್ಥೆಯೆನಿಸಲು ಸಾಧ್ಯ. ವಾಹನ ತಂದವನು ವಾಹನದಲ್ಲೇ ಹೋಗಲು, ಎರಡು ಕಾಲುಗಳನ್ನು ತಂದವನು ಎರಡು ಕಾಲುಗಳಲ್ಲೇ ನಡೆಯಲು ಮತ್ತು ಕುಂಟನಾಗಿರುವವನು ಕುಂಟುತ್ತಲೇ ನಡೆಯಲು ಆರಂಭಿಸಬೇಕು. ಆದರೆ ಸಮಾಜದಲ್ಲಿ, ವಾಹನ ತಂದವನಿಗೆ ಆ ವಾಹನದ ಮೇಲೆ ಶಾಶ್ವತ ಗುತ್ತೇದಾರಿಕೆ ಕೊಡುವಂತಹ ಹಾಗೂ ಕುಂಟನಾದವನಿಗೆ ವಾಹನದ ಮೇಲೆ ಎಂದೂ ಅಧಿಕಾರ ಸಿಗದಂತೆ ಮಾಡುವಂತಹ ಕಾನೂನುಗಳು ಇರಬಾರದು. ಅದೇ ರೀತಿ, ಎಲ್ಲರ ಸ್ಪರ್ಧೆಯೂ ಕಡ್ಡಾಯವಾಗಿ ಒಂದೇ ಸ್ಥಾನದಿಂದ ಆರಂಭಗೊಂಡು, ಕೊನೆಯವರೆಗೂ ಯಾರು ಒಬ್ಬರನ್ನೊಬ್ಬರು ಮೀರಿ ಹೋಗದಂತೆ ಬಲಾತ್ಕಾರವಾಗಿ ಕಟ್ಟಿಡುವುದೂ ಸರಿಯಲ್ಲ.
ಇದಕ್ಕೆ ತದ್ವಿರುದ್ಧವಾಗಿ, ಕುಂಟುತ್ತಾ ಸ್ಪರ್ಧೆಯನ್ನು ಆರಂಭಿಸಿದವನು ತನ್ನ ಸಾಮಥ್ರ್ಯದಿಂದ ವಾಹನವನ್ನು ಪಡೆಯಲು ಸಾಧ್ಯವಿರುವಂತಹ ಹಾಗೂ ವಾಹನದಲ್ಲೇ ಸ್ಪರ್ಧೆಗೆ ತೊಡಗಿದವನು ತನ್ನ ಅನರ್ಹತೆಯಿಂದಾಗಿ ಕೊನೆಗೆ ಕುಂಟುತ್ತಾ ಹೋಗುವ ಸ್ಥಿತಿಗೆ ಇಳಿಯುವುದಾದರೆ ಅದಕ್ಕೂ ಅವಕಾಶವಿರುವಂತಹ ಕಾನೂನುಗಳು ಇರಬೇಕಾಗಿದೆ.
ಇಸ್ಲಾಮ್, ಸಾಮೂಹಿಕ ಕ್ಷೇತ್ರದಲ್ಲಿನ ಈ ಆರ್ಥಿಕ ಸ್ಪರ್ಧೆಯು ಮುಕ್ತ ಹಾಗೂ ನಿರಾತಂಕವಾಗಿರಬೇಕೆಂದು ಬಯಸುವುದರ ಜೊತೆಗೇ, ಈ ಸ್ಪರ್ಧೆಯು ನಿರ್ದಯ ಹಾಗೂ ಅಮಾನುಷವಾಗಿರಬಾರದು ಎಂದು ಬಯಸುತ್ತದೆ. ಪ್ರಸ್ತುತ ಸ್ಪರ್ಧೆಯು ಸಹೃದಯತೆಯಿಂದ ಕೂಡಿದ್ದು ಮಾನವೀಯವಾಗಿರಬೇಕೆಂದು ಇಸ್ಲಾಮ್ ಅಪೇಕ್ಷಿಸುತ್ತದೆ. ಇದಕ್ಕಾಗಿ ಒಂದೆಡೆ, ತನ್ನ ನೈತಿಕ ಶಿಕ್ಷಣಗಳ ಮೂಲಕ ಜನರಲ್ಲಿ, ಹಿಂದುಳಿದ ಹಾಗೂ ದುರ್ಬಲ ಜನರ ಕೈ ಹಿಡಿದು ಮೇಲೆತ್ತುವ ಮನೋಭಾವವನ್ನು ಬೆಳೆಸುವ ಇಸ್ಲಾಮ್, ಇನ್ನೊಂದೆಡೆ ಸಮಾಜದಲ್ಲಿ ಆಶ್ರಯ ರಹಿತ ಜನರಿಗೆ ಸದಾ ಸಹಾಯ ಹಸ್ತ ಕೊಡುವಂತಹ ಒಂದು ಶಾಶ್ವತ, ಸುದೃಢ, `ಸಂಸ್ಥೆ’ಯನ್ನು ಸ್ಥಾಪಿಸುತ್ತದೆ.
ಆರ್ಥಿಕ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಮಥ್ರ್ಯವಿಲ್ಲದ ಜನರು ತಮ್ಮ ಪಾಲನ್ನು ಈ ಸಂಸ್ಥೆಯಿಂದ ಪಡೆಯಬಹುದು. ಹಾಗೆಯೇ ಕಾಲಚಕ್ರದಡಿ ಸಿಲುಕಿ, ಈ ಸ್ಪರ್ಧೆಯಲ್ಲಿ ಬಿದ್ದು ಹೋದವರನ್ನು ಮತ್ತೆ ಎದ್ದು ನಿಂತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ಸಂಸ್ಥೆ ನೆರವಾಗುತ್ತದೆ. ಪ್ರಸ್ತುತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾರಿಗೆ ಸಹಾಯದ ಅವಶ್ಯಕತೆ ಇದೆಯೋ ಅವರಿಗೆ ಈ ಸಂಸ್ಥೆಯು ಸಹಾಯ ಒದಗಿಸುವುದು.
ಇದೇ ಉದ್ದೇಶದಿಂದ ಇಸ್ಲಾಮ್ ದೇಶದ ಎಲ್ಲ ಸಂಗ್ರಹಿತ ಸಂಪತ್ತಿನ ಮೇಲೆ ವಾರ್ಷಿಕ 2.5% ಹಾಗೂ ದೇಶದ ಎಲ್ಲ ಔದ್ಯಮಿಕ ಭಂಡವಾಳದ ಮೇಲೆ ವಾರ್ಷಿಕ 2.5% ತೆರಿಗೆಯನ್ನು ಝಕಾತ್‍ನ ರೂಪದಲ್ಲಿ ವಿಧಿಸುವ ಕಾನೂನನ್ನೇ ಮಾಡಿದೆ. ಹಾಗೆಯೇ, ಎಲ್ಲ ವ್ಯಾವಸಾಯಿಕ ಜಮೀನುಗಳ ವ್ಯವಸಾಯೋತ್ಪನ್ನದಲ್ಲೂ 5% ರಿಂದ 10%ರ ವರೆಗೆ ತೆರಿಗೆಯನ್ನು ತೆರಲು ವಿಧಿಸಿದೆ. ಖನಿಜೋತ್ಪನ್ನಗಳಲ್ಲಿ 20% ತೆರಿಗೆಯನ್ನು ಅದು ವಿಧಿಸುತ್ತದೆ. ಅಲ್ಲದೆ ನಿರ್ದಿಷ್ಟ ಸಂಖ್ಯೆಯ ಸಾಕು ಪ್ರಾಣಿಗಳ ಮೇಲೂ ವಿಶೇಷ ಅನುಪಾತದಲ್ಲಿ ವಾರ್ಷಿಕ ಝಕಾತ್ ಕೊಡಲು ಇಸ್ಲಾಮ್ ವಿಧಿಸಿದೆ. ಈ ರೀತಿ ಸಂಗ್ರಹವಾಗುವ ಸಂಪತ್ತನ್ನು ಬಡವರು, ಅನಾಥರು ಮತ್ತು ದುರ್ಬಲರ ಕಲ್ಯಾಣಕ್ಕಾಗಿ ಬಳಸಬೇಕೆಂದು ಅದು ಆದೇಸಿಸುತ್ತದೆ. ಇದೊಂದು ಬಗೆಯ ಸಾಮೂಹಿಕ ವಿಮೆಯಾಗಿದ್ದು ಇಂತಹ ವ್ಯವಸ್ಥೆಯಿರುವ ಇಸ್ಲಾಮೀ ಸಮಾಜವೊಂದರಲ್ಲಿ ಯಾವನೇ ಒಬ್ಬ ವ್ಯಕ್ತಿ ಜೀವನದ ಯಾವುದೇ ಅನಿವಾರ್ಯ ಅವಶ್ಯಕತೆಗಳಿಂದ ವಂಚಿತನಾಗಿರಲು ಸಾಧ್ಯವೇ ಇಲ್ಲ.
ಅಂತಹ ಸಮಾಜದಲ್ಲಿ ಯಾವನೇ ಒಬ್ಬ ಶ್ರಮಜೀವಿಯೂ ಕೇವಲ ಹಸಿವಿಗೆ ಹೆದರಿ, ಉದ್ಯಮಿಗಳು ಮತ್ತು ಭೂಮಾಲಕರು ಹೇರುವಂತಹ ಕ್ರೂರ ಸೇವಾ ನಿಬಂಧನೆಗಳನ್ನು ಒಪ್ಪಿಕೊಳ್ಳುವಷ್ಟು ಅಸಹಾಯಕನಾಗಿರುವುದಿಲ್ಲ. ಅದೇ ರೀತಿ ಅಂತಹ ಸಮಾಜದಲ್ಲಿ ಯಾವನೇ ವ್ಯಕ್ತಿಯು, ಆರ್ಥಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಶ್ಯಕವಿರುವ ಕನಿಷ್ಟ ಅರ್ಹತೆಗಳೂ ಇಲ್ಲದಷ್ಟು ದುರ್ಬಲನಾಗಲಿಕ್ಕೂ ಸಾಧ್ಯವಿಲ್ಲ.
ಇಸ್ಲಾಮ್, ವ್ಯಕ್ತಿ ಮತ್ತು ಸಮಾಜದ ಮಧ್ಯೆ ಒಂದು ಅದ್ಭುತ ಸಮತೋಲನವನ್ನು ಸ್ಥಾಪಿಸುತ್ತದೆ. ಒಂದೆಡೆ ವ್ಯಕ್ತಿತ್ವ ಮತ್ತವನ ಹಕ್ಕು-ಸ್ವಾತಂತ್ರೃಗಳೂ ಸ್ವಾತಂತ್ರೃಗಳೂ ಸುರಕ್ಷಿತವಾಗಿದ್ದು ಇನ್ನೊಂದೆಡೆ ಅವನ ಸ್ವಾತಂತ್ರೃವು ಸಾಮೂಹಿಕ ಹಿತಾಸಕ್ತಿಗೆ ಮಾರಕವಾಗುವ ಬದಲು ಪೂರಕವಾಗಿ ಪಾತ್ರ ವಹಿಸುವಂತಹ ಸಮತೋಲನ!
ವ್ಯಕ್ತಿಗಳನ್ನು ಸಂಪೂರ್ಣವಾಗಿ ಸಮಾಜದಲ್ಲಿ ವಿಲೀನಗೊಳಿಸಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಸೂಕ್ತ ವಿಕಾಸಕ್ಕಾಗಿ ಅಗತ್ಯವಾಗಿರುವಷ್ಟು ಸ್ವಾತಂತ್ರೃವನ್ನು ಕೂಡಾ ಅವನಿಗೆ ಕೊಡಲು ನಿರಾಕರಿಸುವಂತಹ ಯಾವುದೇ ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯನ್ನು ಇಸ್ಲಾಮ್ ವಿರೋಧಿಸುತ್ತದೆ. ಯಾವುದೇ ರಾಷ್ಟ್ರದ ಎಲ್ಲ ಉತ್ಪಾದನಾ ಮೂಲಗಳನ್ನು ರಾಷ್ಟ್ರೀಯ ಸೊತ್ತಾಗಿ ಮಾರ್ಪಡಿಸಿದರೆ ಅದರ ಸಹಜ ಪರಿಣಾಮವಾಗಿ ರಾಷ್ಟ್ರದ ಎಲ್ಲ ವ್ಯಕ್ತಿಗಳು ಸಮೂಹದಲ್ಲಿ ಕರಗಿ ಹೋದಾಗ ವ್ಯಕ್ತಿಯ ಅನನ್ಯತೆಯ ರಕ್ಷಣೆ ಮತ್ತದರ ಬೆಳವಣಿಗೆ ಕಷ್ಟ ಸಾಧ್ಯ ಮಾತ್ರವಲ್ಲ ಅಸಾಧ್ಯವಾಗುತ್ತದೆ. ವ್ಯಕ್ತಿಯ ಅನನ್ಯತೆ ಉಳಿಯಬೇಕಾದರೆ ಅದಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರೃವು ಎಷ್ಟು ಅಗತ್ಯವೋ ಆರ್ಥಿಕ ಸ್ವಾತಂತ್ರೃವೂ ಅಷ್ಟೇ ಅವಶ್ಯಕವಾಗಿದೆ. ನಾವು ವ್ಯಕ್ತಿಗಳ ಅನನ್ಯತೆಯನ್ನು ಸಂಪೂರ್ಣವಾಗಿ ನಾಸ್ತಿಗೊಳಿಸಲು ಬಯಸುವುದಿಲ್ಲವೆಂದಾದರೆ ನಮ್ಮ ಸಾರ್ವಜನಿಕ ಕ್ಷೇತ್ರದಲ್ಲಿ ಕನಿಷ್ಟ ಪಕ್ಷ ಒಬ್ಬ ವ್ಯಕ್ತಿ ತನ್ನ ಜೀವನೋಪಾದಿಯನ್ನು ತಾನೇ ಸ್ವತಂತ್ರವಾಗಿ ಸಂಪಾದಿಸಿಕೊಂಡು, ತನ್ನ ಆತ್ಮಸಾಕ್ಷಿಯನ್ನು ಜೀವಂತವಾಗಿಟ್ಟುಕೊಂಡು ತನ್ನ ಪ್ರಾಕೃತಿಕ ಒಲವುಗಳ ಪ್ರಕಾರ ತನ್ನ ಮಾನಸಿಕ ಮತ್ತು ನೈತಿಕ ಶಕ್ತಿಗಳನ್ನು ಬೆಳೆಸಿಕೊಂಡು ಹೋಗುವಷ್ಟಾದರೂ ಸ್ವಾತಂತ್ರೃ ಇರಬೇಕು.
ಕಟ್ಟಿಹಾಕಿ ಕೊಡುವ ಸಂಬಳ, ಅದು ಎಷ್ಟೇ ದೊಡ್ಡದಿದ್ದರು ಸ್ವೀಕಾರ ಯೋಗ್ಯವಲ್ಲ. ಯಾಕೆಂದರೆ ಮನುಷ್ಯನಿಗೆ ಸ್ವಂತ ಶ್ರಮದ ಗಳಿಕೆ ಪ್ರಿಯವೇ ಹೊರತು ಅನ್ಯರ ಭಿಕ್ಷೆಯಲ್ಲ.
ಮನುಷ್ಯನಿಗೆ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅನಿಯಂತ್ರಿತ ಸ್ವಾತಂತ್ರೃವನ್ನು ಕೊಟ್ಟು, ಅವನನ್ನು ತನ್ನ ಇಚ್ಛಾನುಸಾರ ಅಲೆಯಲು ಬಿಡುವ ಹಾಗೂ ಅವನು ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಲಿಕ್ಕೂ ಅನುಮತಿಸುವಂತಹ ವ್ಯವಸ್ಥೆಗಳನ್ನು ಕೂಡಾ ಇಸ್ಲಾಮ್ ವಿರೋಧಿಸುತ್ತದೆ.
ಈ ರೀತಿ ಇಸ್ಲಾಮ್ ಅತಿಬಂಧನ ಮತ್ತು ಅತಿಸ್ವಾತಂತ್ರೃದ ಎರಡೂ ಅತಿರೇಕಗಳಿಂದ ಮುಕ್ತವಾದ ಒಂದು ಮಧ್ಯಮ ಮಾರ್ಗಗಳನ್ನು ಅನುಸರಿಸುತ್ತದೆ. ಅದು ಒಟ್ಟು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವ್ಯಕ್ತಿಯ ಮೇಲೆ ಬಾಧ್ಯತೆಗಳನ್ನು ಹೊರಿಸಿ ಕೆಲವು ಮೇರೆಗಳನ್ನು ಪಾಲಿಸುವಂತೆ ನಿರ್ಬಂಧಿಸಿ ಉಳಿದಂತೆ ಬೇರೆ ವ್ಯವಹಾರಗಳಲಿ ಅವನಿಗೆ ಪೂರ್ಣ ಸ್ವಾತಂತ್ರೃವನ್ನು ಕೊಡುತ್ತದೆ. ಪ್ರಸ್ತುತ ಬಾಧ್ಯತೆಗಳು ಮತ್ತು ಮಿತಿ ಮೇರೆಗಳನ್ನು ವಿವರವಾಗಿ ವಿಶ್ಲೇಷಿಸಲು ಇಲ್ಲಿ ಸಾಧ್ಯವಿಲ್ಲವಾದರೂ ಸಂಕ್ಷಿಪ್ತವಾಗಿ ಅವುಗಳ ಒಂದು ಚಿತ್ರಣವನ್ನು ಮಾತ್ರ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ.
ಮೊದಲು ಕಸುಬು ಅಥವಾ ಸಂಪಾದನಾ ಮಾರ್ಗವನ್ನೇ ತೆಗೆದುಕೊಳ್ಳು, ಸಂಪತ್ತನ್ನು ಪ್ರಾಪ್ತಿ ಮಾಡುವ ಮಾರ್ಗಗಳ ವಿಷಯದಲ್ಲಿ, ಯಾವುದು ಸಕ್ರಮ ಮತ್ತು ಯಾವುದು ಅಕ್ರಮ ಎಂದು ತೀರ್ಮಾನಿಸುವಲ್ಲಿ ಇಸ್ಲಾಮ್ ತೋರಿಸಿರುವಷ್ಟು ಸೂಕ್ಷ್ಮ ಗ್ರಾಹಿತ್ವವನ್ನು ಲೋಕದ ಬೇರಾವುದೇ ಕಾನೂನು ತೋರಿಸಿಲ್ಲ. ಒಬ್ಬ ವ್ಯಕ್ತಿಯು ಯಾವೆಲ್ಲಾ ಮಾರ್ಗಗಳನ್ನು ಬಳಸಿ ಬೇರೆ ವ್ಯಕ್ತಿಗಳಿಗೆ ಅಥವಾ ಒಟ್ಟಿನಲ್ಲಿ ಇಡೀ ಸಮಾಜಕ್ಕೆ ನೈತಿಕ ಅಥವಾ ಭೌತಿಕವಾಗಿ ನಷ್ಟವುಂಟು ಮಾಡಿ ಸಂಪತ್ತು ಗಳಿಸುತ್ತಾನೋ ಅಂತಹ ಎಲ್ಲ ಮಾರ್ಗಗಳನ್ನು ಇಸ್ಲಾಮ್ ಪ್ರತ್ಯಪ್ರತ್ಯೇಕವಾಗಿ ಹೆಸರಿಸಿ ಅವುಗಳನ್ನು ಸಂಪೂರ್ಣ ನಿಷಿದ್ಧ(ಹರಾಮ್)ವೆಂದು ಸಾರಿದೆ. ಶರಾಬು ಮತ್ತಿತರ ಮಾದಕ ದ್ರವ್ಯ ಪದಾರ್ಥಗಳ ತಯಾರಿಕೆ, ಮಾರಾಟ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳು, ಅಶ್ಲೀಲತೆ, ಸಂಗೀತ, ಕುಣಿತ ಮತ್ತು ನಾಟ್ಯ ವೃತ್ತಿ, ಜೂಜು, ಸಟ್ಟಾ, ಲಾಟರಿ, ಬಡ್ಡಿ, ಅದೃಷ್ಟ ಮತ್ತು ವಂಚನೆಯನ್ನವಲಂಬಿಸಿದ ಎಲ್ಲ ವ್ಯವಹಾರಗಳು, ಜಗಳಗಳಿಗೆ ಜನ್ಮ ಕೊಡುವ ಪೈಪೋಟಿಯ ವ್ಯಾಪಾರ, ಒಬ್ಬನ ಲಾಭ ನಿಶ್ಚಿತವಾಗಿದ್ದು ಇನ್ನೊಬ್ಬನು ಲಾಭ ಗಳಿಸುವುದು ಸಂಶಯಾಸ್ಪದವಾಗಿರುವಂತಹ ವ್ಯವಹಾರಗಳು, ಅವಶ್ಯಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನವಿಟ್ಟು ಕೃತಕ ಬೆಲೆಯೇರಿಕೆ ಮಾಡಿಸುವುದು ಹೀಗೆ ಒಟ್ಟು ಸಮಾಜಕ್ಕೆ ಹಾನಿಕರವಾದ ಎಲ್ಲ ಬಗೆಯ ವ್ಯವಹಾರಗಳನ್ನು ಇಸ್ಲಾಮ್ ಕಾನೂನು ಮೂಲಕ ನಿಷಿದ್ಧಗೊಳಿಸಿದೆ.
ಈ ವಿಷಯದಲ್ಲಿ ನೀವು ಇಸ್ಲಾಮಿನ ಆರ್ಥಿಕ ಪದ್ಧತಿಯನ್ನು ಅಭ್ಯಸಿಸಿದರೆ, ಈ ರೀತಿ ನಿಷೇಧಿಸಲ್ಪಟ್ಟ ಸಂಪಾದನಾ ಮಾರ್ಗಗಳ ಒಂದು ದೀರ್ಘ ಪಟ್ಟಿಯೇ ನಿಮ್ಮ ಮುಂದೆ ಬರುತ್ತದೆ. ಪ್ರಚಲಿತ ಬಂಡವಾಳಶಾಹೀ ವ್ಯವಸ್ಥೆಯಲ್ಲಿ ಜನರು ಯಾವ ಅಕ್ರಮ ವಿಧಾನಗಳನ್ನು ಬಳಸಿ ಕೋಟ್ಯಾಧಿಪತಿಗಳಾಗುತ್ತಾರೋ, ಆ ಪೈಕಿ ಎಲ್ಲಾ ಮಾರ್ಗಗಳು ಈ ನಿಷೇಧಿತ ಪಟ್ಟಿಯಲ್ಲಿ ಇರುವುದನ್ನು ನೀವು ಕಾಣಬಹುದು. ಪ್ರಸ್ತುತ ಅಕ್ರಮ ಮಾರ್ಗಗಳನ್ನೆಲ್ಲಾ ಕಾನೂನು ಮೂಲಕ ನಿಷೇದಿಸಿ ಬಿಟ್ಟಿರುವ ಇಸ್ಲಾಮ್, ಇತರರಿಗೆ ಉಪಯುಕ್ತವಾಗುವಂತಹ ಸೇವೆಗಳನ್ನು ಸಲ್ಲಿಸಿ ನ್ಯಾಯಯುತವಾಗಿ ಅದರ ಸೂಕ್ತ ಲಾಭ ಪಡೆಯುವಂತಹ ವಿಧಾನಗಳನ್ನು ಸಂಪಾದನೆಗಾಗಿ ಅನುಮತಿಸಿದೆ.
ಹಲಾಲ್ ಅಥವಾ ಧರ್ಮಸಮ್ಮತವಾದ ಮಾರ್ಗದಿಂದ ಸಂಪಾದಿಸಿದ ಸೊತ್ತಿನ ಮೇಲೆ ಒಬ್ಬ ವ್ಯಕ್ತಿಗೆ ಇರುವ ಮಾಲಕತ್ವ ಹಕ್ಕನ್ನು ಇಸ್ಲಾಮ್ ಅಂಗೀಕರಿಸುತ್ತದೆ. ಆದರೆ ಈ ಹಕ್ಕು ಅನಿಯಂತ್ರಿತವಾಗಿರುವುದಿಲ್ಲ. ತಾನು ಧರ್ಮಸಮ್ಮತ ಮಾರ್ಗದಿಂದ ಸಂಪಾದಿಸಿದ ಗಳಿಕೆಯನ್ನು ಧರ್ಮಸಮ್ಮತವಾದ ಮಾರ್ಗದಲ್ಲೇ ವ್ಯಯಿಸಲು ಅದು ವ್ಯಕ್ತಿಯನ್ನು ನಿರ್ಬಂಧಿಸುತ್ತದೆ. ಖರ್ಚಿನ ವಿಷಯದಲ್ಲಿ ಇಸ್ಲಾಮ್, ವ್ಯಕ್ತಿಯ ಮೇಲೆ ಹೊರಿಸುವ ನಿರ್ಬಂಧಗಳು ಆತನ ಸ್ವಾತಂತ್ರೃಕ್ಕೆ ಧಕ್ಕೆ ತರದೆ, ಆತನು ಗೌರವಯುತವಾದ ನಿಷ್ಕಳಂಕ ಜೀವನವನ್ನು ಸಾಗಿಸಲು ಅವಕಾಶ ಕೊಡುತ್ತದಾದರೂ ಭೋಗ ವಿಲಾಸಗಳಿಗಾಗಿ ಸಂಪತ್ತನ್ನು ಸೊರೆಗೊಳಿಸಲು ಅದು ಅನುಮತಿಸುವುದಿಲ್ಲ. ಯಾರಾದರೂ ತನ್ನ ಠೀವಿ ವರ್ಚಸ್ಸುಗಳನ್ನು ಪ್ರದರ್ಶಿಸುವ ವಿಷಯದಲ್ಲಿ ಇತರರ ಮೇಲೆ ತನ್ನ ಪ್ರಭುತ್ವವನ್ನು ಮೆರೆಸಲು ತೊಡಗುವಷ್ಟು ಮುಂದುವರಿಯಲು ಅದು ಯಾರನ್ನೂ ಬಿಡುವುದಿಲ್ಲ. ಅಪವ್ಯಯದ ಕೆಲವು ವಿಧಾನಗಳನ್ನಂತೂ ಇಸ್ಲಾಮ್ ಕಾನೂನು ಮೂಲಕವೇ ನಿಷೇಧಿಸಿ ಬಿಟ್ಟಿದೆ. ಮತ್ತೆ ಕೆಲವು ವಿಧಾನಗಳನ್ನು ಅದು ಸ್ಪಷ್ಟ ಶಬ್ದಗಳಲ್ಲಿ ಕಾನೂನು ಮೂಲಕ ನಿಷೇಧಿಸಿಲ್ಲವಾದರೂ ತಮ್ಮ ಸಂಪತ್ತನ್ನು ಅಪವ್ಯಯಗೊಳಿಸದಂತೆ ಜನರನ್ನು ಆದೇಶಿಸಿ ತಡೆಯುವ ಹಕ್ಕನ್ನೂ ಇಸ್ಲಾಮೀ ಸರಕಾರವು ಹೊಂದಿರುತ್ತದೆ.
ಧರ್ಮಸಮ್ಮತ ಹಾಗೂ ಸೂಕ್ತವಾದ ರೀತಿಯಲ್ಲಿ ವ್ಯಯಿಸಿದ ಬಳಿಕ ಉಳಿಯುವ ಹಣವನ್ನು ಸಂಗ್ರಹಿಸಿಡುವ ಮತ್ತು ಹೆಚ್ಚಿನ ಸಂಪಾದನೆಗಾಗಿ ಈ ಹಣವನ್ನು ಹೂಡುವ ಹಕ್ಕನ್ನೂ ಇಸ್ಲಾಮ್ ಜನರಿಗೆ ಕೊಡುತ್ತದೆ. ಆದರೆ ಈ ಹಕ್ಕುಗಳು ಕೂಡಾ ಅನಿಯಂತ್ರಿತವಲ್ಲ. ಹಣವನ್ನು ಸಂಗ್ರಹಿಸಿದಲ್ಲಿ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತಕ್ಕೆ ವಾರ್ಷಿಕ 2.5% ಝಕಾತ್ ತೆರಬೇಕಾಗುವುದು. ಇನ್ನು ಅದನ್ನು ವ್ಯಾಪಾರದಲ್ಲಿ ತೊಡಗಿಸುವುದಿದ್ದರೂ ಧರ್ಮಸಮ್ಮತ ವ್ಯಾಪಾರಗಳಲ್ಲಿ ಮಾತ್ರ ತೊಡಗಿಸಬೇಕಾಗುವುದು. ಈ ವ್ಯಾಪಾರವನ್ನು ಆತನು ಸ್ವತಃ ಮಾಡಬಹುದು ಅಥವಾ ತನ್ನ ಭಂಡವಾಳ ಹಣ, ಜಮೀನು, ವಸ್ತುಗಳು ಇತ್ಯಾದಿ ಯಾವುದೇ ರೂಪದಲ್ಲಿ ಇತರರಿಗೆ ಕೊಟ್ಟು ಅವರಿಂದ ವ್ಯಾಪಾರ ಮಾಡಿಸಿ ಅದರಲ್ಲುಂಟಾಗುವ ಲಾಭ-ನಷ್ಟಗಳಲ್ಲಿ ತಾನು ಸಮಾನ ಪಾಲುದಾರನಾಗಿರಬಹುದು.
ಪ್ರಸ್ತುತ ಮಿತಿ-ಮೇರೆಗಳನ್ನು ಪಾಲಿಸುತ್ತಾ, ಶ್ರಮ ವಹಿಸಿ ಒಬ್ಬ ವ್ಯಕ್ತಿ ಕೋಟ್ಯಾಧಿಪತಿಯಾದರೂ ಇಸ್ಲಾಮ್ ಅದನ್ನು ಆಕ್ಷೇಪಿಸುವುದಿಲ್ಲ, ಅದನ್ನು ದೇವದತ್ತ ಕೊಡುಗೆ ಎಂದೇ ಪರಿಗಣಿಸುತ್ತದೆ. ಆದರೆ ಸಾರ್ವಜನಿಕ ಹಿತಾಸಕ್ತಿಯಿಂದ ಅದು ಅಂತಹವರ ಮೇಲೆ ಎರಡು ಬಗೆಯ ನಿಬಂಧನೆಗಳನ್ನು ಹೊರಿಸುತ್ತದೆ. ಮೊದಲನೆಯದಾಗಿ ಅವರು ತಮ್ಮ ಔದ್ಯಮಿಕ ಲಾಭದಿಂದ ಝಕಾತ್ ಮತ್ತು ವ್ಯವಸಾಯಿಕ ಉತ್ಪನ್ನದಿಂದ `ಉಶ್ರ್’ ಕೊಡಬೇಕಾಗುತ್ತದೆ. ಎರಡನೆಯದಾಗಿ ಅವರು ತಮ್ಮ ವ್ಯಾಪಾರ, ಕೈಗಾರಿಕೆ ಅಥವಾ ವ್ಯವಸಾಯದಲ್ಲಿ ಯಾರೊಂದಿಗೆಲ್ಲಾ ಪಾಲುದಾರಿಕೆ ಅಥವಾ ವೇತನದ ರೂಪದಲ್ಲಿ ವ್ಯವಹರಿಸುವರೊ ಅವರೆಲ್ಲರ ಜೊತೆ ನ್ಯಾಯ ಪಾಲಿಸಬೇಕು. ಅವನು ತಾನಾಗಿ ನ್ಯಾಯ ಪಾಲಿಸದಿದ್ದರೆ ಇಸ್ಲಾಮೀ ಸರಕಾರವು ನ್ಯಾಯ ಪಾಲಿಸುವಂತೆ ಆತನನ್ನು ನಿರ್ಬಂಧಿಸುವುದು.
ಇನ್ನು ಹೀಗೆ ಧರ್ಮಸಮ್ಮತ ಮಾರ್ಗದಿಂದ ಸಂಪಾದಿಸಿ ಸಂಗ್ರಹಿಸಲ್ಪಟ್ಟ ಸಂಪತ್ತು ಕೂಡಾ ಬಹುಕಾಲ ಒಂದೇ ಕಡೆ ಕೊಳೆಯುತ್ತಿರಲು ಇಸ್ಲಾಮ್ ಅನುಮತಿಸುವುದಿಲ್ಲ. ಅದು ತನ್ನ ವಾರೀಸು ಕಾನೂನಿನ ಮೂಲಕ ಈ ಸಂಪತ್ತನ್ನು ಪ್ರತಿ ಒಂದು ಪೀಳಿಗೆಯ ಅನಂತರ ಇನ್ನೊಂದು ಪೀಳಿಗೆಗೆ ಹಸ್ತಾಂತರಿಸಿ ವಿತರಿಸಿ ಬಿಡುತ್ತದೆ. ಈ ವಿಷಯದಲ್ಲಿ ಇಸ್ಲಾಮೀ ಕಾನೂನಿನ ಒಲವುಗಳು ಲೋಕದ ಬೇರೆಲ್ಲ ಕಾನೂನುಗಳಿಗಿಂತ ಭಿನ್ನವಾಗಿವೆ. ಬೇರೆ ಕಾನೂನುಗಳೆಲ್ಲಾ ಒಮ್ಮೆ ಒಂದೆಡೆ ಸಂಗ್ರಹವಾದ ಸಂಪತ್ತನ್ನು ಹಾಗೆಯೇ ಸಂಗ್ರಹಿತ ರೂಪದಲ್ಲೇ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತವೆ. ಈ ರೀತಿ ಸಂಪತ್ತು ತಲೆ ತಲಾಂತರಗಳ ವರೆಗು ಸಂಗ್ರಹಿತವಾಗಿಯೇ ಇರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಇಸ್ಲಾಮ್, ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಸಂಗ್ರಹಿಸಿದ ಸಂಪತ್ತು, ಆ ವ್ಯಕ್ತಿ ಮರಣ ಹೊಂದುತ್ತಲೇ ಅವನ ನಿಕಟ ಬಂಧುಗಳಿಗೆಲ್ಲಾ ಹಂಚಿ ಹೋಗುವಂತೆ ಮಾಡುವ ಕಾನೂನನ್ನು ನಿರ್ಮಿಸಿದೆ. ನಿಕಟ ಸಂಬಂಧಗಳು ಇಲ್ಲದ ಸ್ಥಿತಿಯಲ್ಲಿ ದೂರದ ಸಂಬಂಧಿಗಳು ಅನುಕ್ರಮವಾಗಿ ಈ ಸಂಪತ್ತಿನ ಹಕ್ಕುದಾರರಾಗುತ್ತಾರೆ. ಇನ್ನು ದೂರದಲ್ಲೂ ಆ ವ್ಯಕ್ತಿಗೆ ಯಾರೂ ಸಂಬಂಧಿಕರೇ ಇಲ್ಲದಿದ್ದರೆ ಆತನ ಸಂಪತ್ತು ಇಡೀ ಮುಸ್ಲಿಮ್ ಸಮಾಜದ ಹಕ್ಕಾಗಿ ಬಿಡುತ್ತದೆ.
ಈ ವಿಶಿಷ್ಟ ಕಾನೂನು ಯಾವುದೇ ಭಂಡವಾಳ ಶಾಹಿತ್ವವನ್ನು ಅಥವಾ ಯಾವುದೇ ದೊಡ್ಡ ಜಮೀನ್ದಾರಿಕೆಯನ್ನು ಶಾಶ್ವತವಾಗಿ ಮುಂದುವರಿಯಲು ಬಿಡುವುದಿಲ್ಲ. ಈ ಮೊದಲು ಪ್ರಸ್ತಾಪಿಸಿದಂತಹ ಎಲ್ಲ ನಿರ್ಬಂಧಗಳ ಹೊರತಾಗಿಯೂ ಸಂಪತ್ತು ಸಂಗ್ರಹವಾಗಿ ಅದರಿಂದ ಏನಾದರು ಹನಿಯಾಗುವ ಸಂಭವವಿದ್ದರೆ ಈ ಕೊನೆಯ ಪ್ರಹಾರವು ಆ ಹಾನಿಯನ್ನೂ ನಿವಾರಿಸಿ ಬಿಡುತ್ತದೆ.
ಸಂಪತ್ತು
ಇಸ್ಲಾಮಿನ ದೃಷ್ಟಿಯಲ್ಲಿ ಸಂಪತ್ತು ದೇವನದ್ದಾಗಿದೆ. ಅದನ್ನು ನಿರ್ವಹಿಸುವ ಹಕ್ಕನ್ನು ಮಾನವರಿಗೆ ನೀಡಲಾಗಿದೆ. ಆದರೆ ಅದು ನಿಯಂತ್ರಣಕ್ಕೆ ವಿಧೇಯವಾಗಿದೆ. ದೇವನು ನಿಶ್ಚಯಿಸಿದ ಸಾಮಾಜಿಕ ಅವಶ್ಯಕತೆಗಳಿಗೆ ಅನುಸಾರವಾಗಿ ವ್ಯಕ್ತಿಯ ಸಂಪತ್ತಿನ ಒಡೆತನದ ಹಕ್ಕನ್ನು ಇಸ್ಲಾಮ್ ಅಂಗೀಕರಿಸಿದೆ. ಆದುದರಿಂದ ಸಂಪತ್ತಿನ ಗಳಿಕೆ ಮತ್ತು ಸ್ವಾಧೀನ ಎಲ್ಲವೂ ದೇವನ ಮಾರ್ಗದರ್ಶನದಂತಿರಬೇಕು. ಸಂಪತ್ತು ಮಾನವನ ಬದುಕಿಗೆ ಅತ್ಯಗತ್ಯವಾಗಿದೆಯೆಂದು ಪವಿತ್ರ ಕುರ್‍ಆನ್ ಕಲಿಸುತ್ತದೆ. ಸಂಪತ್ತನ್ನು ಇಸ್ಲಾಮ್ ಒಳಿತು ಮತ್ತು ದೇವನ ಅನುಗ್ರಹವೆಂದು ಪರಿಗಣಿಸಿದೆ. ಧನ ಸಂಗ್ರಹಕ್ಕಾಗಿ ನಡೆಸುವ ಪರಿಶ್ರಮವು ಮಹತ್ತರವಾದ ಪುಣ್ಯ ಕಾರ್ಯವಾಗಿದೆ. ಕೆಲಸ ಮಾಡದೆ ತಿನ್ನುವುದನ್ನು ಕೆಟ್ಟ ಕಾರ್ಯವೆಂದು ಇಸ್ಲಾಮ್ ಪರಿಗಣಿಸಿದೆ. ಆದ್ದರಿಂದಲೇ ಪರಿಶ್ರಮವನ್ನು ಅತಿ ಹೆಚ್ಚು ಪ್ರೋತ್ಸಾಹಿಸಲಾಗುತ್ತದೆ. ಕೃಷಿ, ವ್ಯಾಪಾರ, ಕೂಲಿ ಕೆಲಸಗಳೆಲ್ಲ ದೇವನ ಪ್ರೀತಿಗೆ ಕಾರಣವಾಗಿರುವ ಮಹತ್ಕಾರ್ಯಗಳಾಗಿವೆ. ಆದರೆ ಧನ ಸಂಪಾದನೆಯ ಹಾದಿಯಲ್ಲಿ ಶೋಷಣೆ, ಮೋಸ, ಭ್ರಷ್ಟಾಚಾರ, ವಂಚನೆ, ಕಾಳಸಂತೆ, ಸ್ಮಗ್ಲಿಂಗ್, ಕಲಬೆರಕೆ, ಬಡ್ಡಿ, ಜೂಜು ಮುಂತಾದ ಎಲ್ಲ ಸಮಾಜ ವಿರೋಧಿ ದಾರಿಗಳನ್ನು ಸಂಪೂರ್ಣ ತೊರೆಯಬೇಕು ಅಥವಾ ಸರಿಯಾದ ದಾರಿಯಲ್ಲಿ ಮಾತ್ರವೇ ಸಂಪಾದಿಸಬೇಕೆಂದು ಇಸ್ಲಾಮ್ ಆಪೇಕ್ಷಿಸುತ್ತದೆ ಹಾಗಾದರೆ ಅದೊಂದು ಆರಾಧನೆಯಾಗಿ ಮಾರ್ಪಡುವುದು.
ಸಂಪತ್ತನು ತಮ್ಮ ವಶದಲ್ಲಿರಿಸುವ ಹಕ್ಕನ್ನು ಮನುಷ್ಯರಿಗೆ ಇಸ್ಲಾಮ್ ನೀಡಿದೆ. ಆದರೆ ಅದನ್ನು ಸಮಾಜದ ಆರ್ಥಿಕ ವ್ಯವಸ್ಥೆಯೊಂದಿಗೆ ಅಭೇದ್ಯವಾಗಿ ಜೋಡಿಸಿದೆ. ಅಥವಾ ಸಮಾಜದ ಆಹಾರ, ವಸ್ತ್ರ, ವಸತಿ, ವಿದ್ಯಾಭ್ಯಾಸ, ನೀರು, ಬೆಳಕು ಮುಂತಾದ ಪ್ರಾಥಮಿಕ ಆವಶ್ಯಕತೆಗಳನ್ನು ಪೂರ್ತಿಗೊಳಿಸಲು ಸಾಧ್ಯವಾಗದೆ ಕಷ್ಟ ಪಡುವವರಿದ್ದಾಗ ಶ್ರೀಮಂತನ ಸಂಪತ್ತು ಅವನದಾಗಿ ಉಳಿಯುವುದಿಲ್ಲ. ಅದು ಮೂಲಭೂತ ಅವಶ್ಯಕತೆಗಳಿಗೆ ದಾರಿಯಿಲ್ಲದವರದ್ದಾಗಿ ಬಿಡುವುದು. ಇಸ್ಲಾಮ್ ವ್ಯಕ್ತಿಗಳಿಗೆ ತಮ್ಮ ಸಂಪತ್ತನ್ನು ಖರ್ಚು ಮಾಡಲು ಅನುಮತಿ ನೀಡಿದೆ. ಅದರೊಂದಿಗೆ ಸಮಾಜದ ಆರ್ಥಿಕ ವ್ಯವಸ್ಥೆಯ ಪ್ರಕಾರ ದುಡ್ಡು ಪೋಲು ಮಾಡುವುದು, ದುಂದು ವೆಚ್ಚ ಮಾಡುವುದು, ಮಿತಿಮೀರಿ ಖರ್ಚು, ಅನಾವಶ್ಯಕ ಆಡಂಬರಕ್ಕಾಗಿ ಖರ್ಚು ಮಾಡಲು ಅವನಿಗೆ ಅನುಮತಿಸುವುದಿಲ್ಲ. ಈ ರೀತಿ ಇಸ್ಲಾಮಿನ ಅರ್ಥವ್ಯವಸ್ಥೆಯು ಸಂಪತ್ತನ್ನು ಕೈವಶವಿರಿಸುವುದರಲ್ಲಿಯು ಅದನ್ನು ವಿನಿಯೋಗಿಸುವುದರಲ್ಲಿಯು ಸಮತೋಲನವನ್ನು ಕಾಪಾಡುವ ಒಂದು ವ್ಯವಸ್ಥೆಯಾಗಿದೆ.