Home / ಮಾನವ ಪ್ರಾಣದ ಘನತೆ

ಮಾನವ ಪ್ರಾಣದ ಘನತೆ

ಇಸ್ಲಾಮ್ ಧರ್ಮದಲ್ಲಿ ಸತ್ಯವಿಶ್ವಾಸಕ್ಕೆ ಇರುವಷ್ಟೇ ಪ್ರಾಮುಖ್ಯತೆ ಮಾನವ ಪ್ರಾಣಕ್ಕೂ ನೀಡಲಾಗಿದೆ.

“ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದಂತೆ.” (ಪವಿತ್ರ ಕುರ್‍ಆನ್, 5:32)

ವಿದಾಯ ಹಜ್ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಪ್ರವಾದಿ(ಸ) ಹೀಗೆ ಘೋಷಿಸಿದರು:
“ಜನರೇ! ನಿರ್ಣಾಯಕ ದಿನದ ವರೆಗೆ ನಿಮ್ಮ ಪ್ರಾಣಗಳು ಪರಸ್ಪರರಿಗೆ ನಿಷಿದ್ಧವಾಗಿವೆ.”

“ಸತ್ಯ ವಿಶ್ವಾಸಿಯೊಬ್ಬನು ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಪ್ರಮಾದದಿಂದಾಗಿ ಹೊರತು ವಧಿಸುವುದು ಸರಿಯಲ್ಲ….. ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶ ಪೂರ್ವಕವಾಗಿ ವಧಿಸಿದವನಿಗೆ ಅದರ ಪ್ರತಿಫಲ ನರಕವೇ ಆಗಿದ್ದು ಅವನು ಅದರಲ್ಲಿ ಸದಾಕಾಲ ವಾಸಿಸುವನು. ಅವನ ಮೇಲೆ ಅಲ್ಲಾಹನ ಕ್ರೋಧ ಮತ್ತು ಶಾಪವಿದೆ. ಅಲ್ಲಾಹನು ಅವನಿಗಾಗಿ ಘೋರ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುತ್ತಾನೆ” (ಪವಿತ್ರ ಕುರ್‍ಆನ್, 4:92-93)

ಮಾನವ ಹತ್ಯೆ ಘೋರ ಪಾಪ ಕಾರ್ಯವೆಂದು ಮುಹಮ್ಮದ್(ಸ) ಹೇಳಿದ್ದಾರೆ: ‘ಅತ್ಯಂತ ಘೋರ ಅಪರಾಧಗಳು ಸೃಷ್ಟಿಕರ್ತನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿಸುವುದು ಮತ್ತು ಮಾನವ ಹತ್ಯೆಯಾಗಿದೆ.’ ಮತ್ತೊಂದು ಪ್ರವಾದಿ ವಚನ ಹೀಗಿದೆ: ‘ಕರಾರು ಮಾಡಿಕೊಂಡಿರುವ ವ್ಯಕ್ತಿಯನ್ನು (ಇಸ್ಲಾವಿೂ ಸರಕಾರದ ಮುಸ್ಲಿಮೇತರ ಪ್ರಜೆ) ಯಾರು ಕೊಲ್ಲುತ್ತಾನೋ, ಆತನು ಸ್ವರ್ಗದ ಪರಿಮಳವನ್ನು ಸಹ ಆಸ್ವದಿಸಲಾರನು.’

ಕೊಲೆಯ ಪ್ರತೀಕಾರ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನು ಹರಡಿದ ಕಾರಣಕ್ಕಾಗಿ ಹತ್ಯೆಗೈಯುವುದನ್ನು ನ್ಯಾಯಾಲಯವೇ ನಿರ್ಧರಿಸುವುದು. ಯಾವನೇ ವ್ಯಕ್ತಿ ಅಥವಾ ಸರಕಾರಕ್ಕೆ ಇಂತಹ ಕ್ರಮ ಕೈಗೆತ್ತಿಕೊಳ್ಳಲು ಅನುಮತಿ ಇಲ್ಲ (ಕಾನೂನು ಇಂತಹ ಅನುಮತಿ ನೀಡುವ ಹೊರತು). ಎಲ್ಲ ರೂಪದ ಹತ್ಯೆಗಳನ್ನು- ಮಾನವ ಹತ್ಯೆ ಮತ್ತು ಶಿಶು ಹತ್ಯೆ- ಇಸ್ಲಾಮ್ ಘೋರ ಅಪರಾಧವೆಂದು ಸಾರಿದೆ. ಯಾವ ಪ್ರದೇಶದ ಮೇಲಾದರೂ ಯುದ್ಧ ಘೋಷಿಸ ಬೇಕಿದ್ದರೆ ಅದನ್ನು ಸರಕಾರವೇ ನಿರ್ಧರಿಸಬೇಕು. ಯಾವುದೇ ಗುಂಪಿಗೆ ಅಥವಾ ಸಂಘಟನೆಗೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ.

ಮಾನವ ಹತ್ಯೆಯನ್ನು ತಡೆಯುವಂತೆ ಕುರ್‍ಆನ್ ಅನೇಕ ಕಡೆ ಆದೇಶಿಸಿದೆ.
“ಅಲ್ಲಾಹನು ಸನ್ಮಾನಿಸಿದ ಯಾವ ಜೀವವನ್ನೂ ನ್ಯಾಯದ ವಿನಾ ಕೊಲೆ ಮಾಡಬೇಡಿರಿ.” (ಪವಿತ್ರ ಕುರ್‍ಆನ್, 6:151)
ನ್ಯಾಯ ಪಾಲನೆಯಲ್ಲಿ ಆಗುವ ಹತ್ಯೆಗಳು ಇದಕ್ಕೆ ಹೊರತಾಗಿವೆ.

ಮೇಲಿನ ಎಲ್ಲಾ ಕುರ್‍ಆನ್ ಸೂಕ್ತಗಳಲ್ಲಿ ಮತ್ತು ಪ್ರವಾದಿ ವಚನಗಳಲ್ಲಿ ನಫ್ಸ್(ಚಿತ್ತ) ಪದದ ಪ್ರಯೋಗವಾಗಿದೆ. ಜನಾಂಗೀಯತೆ, ಪ್ರಾಂತೀಯತೆಯ ಯಾವುದೇ ಭೇದಭಾವ ಇಲ್ಲಿಲ್ಲ. ಮನುಷ್ಯರು ಯಾವುದೇ ಪ್ರಾಂತ್ಯದಲ್ಲಿದ್ದರೂ, ಯಾವುದೇ ಧರ್ಮದ ಅನುಯಾಯಿಗಳಾಗಿದ್ದರೂ, ಎಲ್ಲರ ಪ್ರಾಣಗಳಿಗೆ ಸಮಾನ ಗೌರವ, ಘನತೆ ನೀಡಲಾಗಿದೆ. ಮನುಷ್ಯನು ಕಾಡು ಮನುಷ್ಯನಾಗಿದ್ದರೂ, ಅನಾಗರಿಕ ಸಂಸ್ಕ್ರತಿಗೆ ಸೇರಿದವನಾಗಿದ್ದರೂ ಅವನ ಪ್ರಾಣಕ್ಕೆ ಸಮಾನ ಬೆಲೆ ಇದೆ.

ಮುಹಮ್ಮದ್‍ರಿಗೆ(ಸ) ಪ್ರವಾದಿತ್ವದ ಹೊಣೆಗಾರಿಕೆ ಲಭಿಸಿದ ಕಾಲದಲ್ಲಿ ಜನರು ತಮ್ಮ ಹೆಣ್ಣು ಮಕ್ಕಳನ್ನು ಜೀವಂತ ಹೂಳುತ್ತಿದ್ದರು. ಹೆಣ್ಣು ಮಕ್ಕಳಿಗೂ ಜೀವಿಸುವ ಸಮಾನ ಹಕ್ಕುಗಳಿವೆ ಎಂದು ಸಾರುವ ಮೂಲಕ ಪ್ರವಾದಿ(ಸ) ಈ ಬರ್ಬರ ಕೃತ್ಯಗಳನ್ನು ಕೊನೆಗೊಳಿಸಿದರು. ಹೆಣ್ಣು ಮಕ್ಕಳಿಗೆ ಬದುಕುವ ಹಕ್ಕು ದೊರಕಿಸಲಿಕ್ಕಾಗಿ ಮುಹಮ್ಮದ್(ಸ) ಹೀಗೆ ಘೋಷಿಸಿದರು: ‘ಯಾರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಸರಿಯಾದ ಪಾಲನೆ ಪೋಷಣೆ ಮಾಡುತ್ತಾರೋ, ಸ್ವರ್ಗದಲ್ಲಿ ಅಂತಹ ಜನರು ನನಗೆ ಅತ್ಯಂತ ಸವಿೂಪವಿರುತ್ತಾರೆ.’

ಶಿಶು ಹತ್ಯೆಯನ್ನು ತಡೆಯುವ ಮೂಲಕ ಇಸ್ಲಾಮ್ ಗರ್ಭಪಾತ ಮೊದಲಾದ ಕೃತ್ಯಗಳನ್ನೂ ವಿರೋಧಿಸುತ್ತದೆ (ವಿಶೇಷ ಪರಿಸ್ಥಿತಿಗಳನ್ನು ಹೊರತು ಪಡಿಸಿ). ಆರೋಗ್ಯ ತೊಂದರೆಗಳಿದ್ದಲ್ಲಿ ಯೋಜಿತ ಗರ್ಭಧಾರಣೆಗೆ ಇಸ್ಲಾಮ್ ಆಸ್ಪದ ನೀಡುತ್ತದೆ. ಕೇವಲ ಜೀವಿಸುವ ಹಕ್ಕನ್ನು ಮಾತ್ರ ಇಸ್ಲಾಮ್ ನೀಡುವುದಲ್ಲ; ಮರ್ಯಾದಸ್ಥ ಜೀವನವನ್ನು ನಡೆಸುವ ಹಕ್ಕು ಎಲ್ಲ ಮನುಷ್ಯರಿಗೆ ಇದೆಯೆಂದು ಅದು ಸಾರುತ್ತದೆ.

ತಾಯಿಯ ಹೊಟ್ಟೆಯಲ್ಲಿರುವ ಮಗುವಿಗೂ ಇಸ್ಲಾಮ್ ಜೀವಿಸುವ ಹಕ್ಕನ್ನು ನೀಡುತ್ತದೆ. ಒಬ್ಬ ಮಹಿಳೆಗೆ ಮರಣ ದಂಡನೆಯ ಶಿಕ್ಷೆ ನೀಡಲಾಗಿತ್ತು. ಆಕೆಯು ಗರ್ಭವತಿಯಾಗಿದ್ದ ಕಾರಣದಿಂದ ಆಕೆಯ ಪ್ರಸವದವರೆಗೂ ಪ್ರವಾದಿ(ಸ) ಆಕೆಯ ಶಿಕ್ಷೆಯನ್ನು ಮುಂದೂಡಿದ್ದರು.

ಪ್ರಮಾದದಿಂದಾಗಿ ಯಾರನ್ನಾದರೂ ಕೊಲೆ ಮಾಡಿದರೆ ಅದರ ಬದಲಿಯಾಗಿ ಪರಿಹಾರ ಧನವನ್ನು ಕೊಡುವ ವ್ಯವಸ್ಥೆಯನ್ನು ಇಸ್ಲಾಮ್ ನೀಡಿತು. ಇದರಿಂದ ಸಮಾಜವನ್ನು ರಕ್ತಪಾತ ಮತ್ತು ಪ್ರತೀಕಾರದ ಹತ್ಯೆಗಳಿಂದ ರಕ್ಷಿಸಲಾಯಿತು.

ಈ ರೀತಿ ಇಸ್ಲಾಮ್ ಮಾನವ ಪ್ರಾಣಕ್ಕೆ ಗೌರವ ನೀಡಿತು.
“ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ.” (ಪವಿತ್ರ ಕುರ್‍ಆನ್, 5:32)

SHARE THIS POST VIA