Home / ಪ್ರವಾದಿ ವಚನಗಳು / ಅಲ್ಲಾಹನ ಗ್ರಂಥಗಳ ಮೇಲೆ ವಿಶ್ವಾಸ

ಅಲ್ಲಾಹನ ಗ್ರಂಥಗಳ ಮೇಲೆ ವಿಶ್ವಾಸ

ಗ್ರಂಥಗಳ ಮೇಲೆ ವಿಶ್ವಾಸವೆಂದರೆ ಅಲ್ಲಾಹನು ತನ್ನ ಸಂದೇಶವಾಹಕರ ಮೂಲಕ ಆಗಾಗ ಕಳಿಸುತ್ತಿದ್ದ ಎಲ್ಲ ಮಾರ್ಗದರ್ಶಕ ಗ್ರಂಥಗಳನ್ನು ಸತ್ಯವೆಂದು ನಂಬುವುದು. ಹಿಂದಿನ ಜನ ಸಮುದಾಯಗಳು ತಮ್ಮ ಬಳಿಗೆ ಬಂದಿದ್ದ ಗ್ರಂಥಗಳನ್ನು ಬದಲಾಯಿಸಿಬಿಟ್ಟಿದ್ದರು. ಅಲ್ಲಾಹನು ಕೊನೆಯದಾಗಿ ತನ್ನ ಅಂತಿಮ ಸಂದೇಶವಾಹಕರ(ಸ) ಮೂಲಕ ಸುಸ್ಪಷ್ಟವಾದ ಅಂತಿಮ ಗ್ರಂಥವನ್ನು ಕಳಿಸಿದನು. ಅದು ಎಲ್ಲ ನ್ಯೂನತೆಗಳಿಂದ ಮುಕ್ತವಾದ, ಎಲ್ಲ ರೀತಿಯ ಕೆಡುಕಿನಿಂದ ಸುರಕ್ಷಿತವಾದ ಗ್ರಂಥವಾಗಿದೆ. ಕೇವಲ ಮುಸ್ಲಿಮರಲ್ಲ, ಮುಸ್ಲಿಮೇತರ ಸಂಶೋಧಕರು ಕೂಡಾ ಅದನ್ನು ಸತ್ಯಗ್ರಂಥವೆಂದು ಒಪ್ಪಿದ್ದಾರೆ! ಅಲ್ಲಾಹನ ಕಡೆಗೆ ತಲಪಬಲ್ಲ ಬೇರಾವ ಗ್ರಂಥವೂ ಈ ಗ್ರಂಥದ ಹೊರತು ಈಗ ಲೋಕದಲ್ಲಿ ಅಸ್ತಿತ್ವದಲ್ಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡಲಾಗಿದೆ. ಅದರಿಂದ ಕುರ್‍ಆನ್‍ನ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯ ಮತ್ತು ಅದರ ಬೇಡಿಕೆಗಳೇನೆಂದು ಸ್ಪಷ್ಟವಾಗಿ ಮನದಟ್ಟಾಗುತ್ತದೆ.

ಹ. ಇಬ್ನು ಅಬ್ಬಾಸ್(ರ) ಹೇಳುತ್ತಾರೆ- ಅಲ್ಲಾಹನ ಗ್ರಂಥವನ್ನು ಅನುಸರಿಸುವವನು ಈ ಲೋಕದಲ್ಲೂ ದಾರಿ ತಪ್ಪಲಾರನು. ಪರಲೋಕದಲ್ಲೂ ಪರಾಜಯ ಹೊಂದಲಾರನು. ತರುವಾಯ ಅವರು, “ಯಾರು ನನ್ನ ಸನ್ಮಾರ್ಗವನ್ನು ಅನುಸರಿಸುವನೋ ಅವನು ಇಹಲೋಕದಲ್ಲಿ ಪಥಭ್ರಷ್ಟನಾಗಲಾರನು, ಪರಲೋಕದಲ್ಲೂ ಪರಾಜಯ ಹೊಂದಲಾರನು” (ಸೂರಃ ತಾಹಾ: 123) ಎಂಬ ಕುರ್‍ಆನ್ ವಚನವನ್ನು ಪಠಿಸಿದರು. [ಮಿಶ್ಕಾತ್]

ಅಬೂ ಹುರೈರಾ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಕುರ್‍ಆನ್‍ನಲ್ಲಿ ಐದು ವಸ್ತುಗಳ ಪ್ರಸ್ತಾಪವಿದೆ- 1) ಹಲಾಲ್. 2) ಹರಾಮ್. 3) ಮುಹ್ಕಮ್. 4) ಮುತಶಾಬಿಹ್. 5) ಅಮ್ಸಾಲ್. ನೀವು ಹಲಾಲನ್ನು ಹಲಾಲ್ (ಧರ್ಮಬದ್ಧ) ಎಂದು ಭಾವಿಸಿರಿ. ಹರಾಮನ್ನು ಹರಾಮ್ (ನಿಷಿದ್ಧ) ಎಂದು ಬಗೆಯಿರಿ, ಮುಹ್ಕಮ್‍ನಂತೆ (ನಿಯಮಗಳನ್ನು ವಿವರಿಸಲಾದ ಕುರ್‍ಆನ್ ಭಾಗಗಳು) ನಡೆಯಿರಿ, ಮುತಶಾಬಿಹ್ (ಪರಲೋಕದ ಕುರಿತು ಕುರ್‍ಆನಿನಲ್ಲಿ ಪ್ರಸ್ತಾಪಿಸಲಾದ ಭಾಗಗಳು ಅಂದರೆ ಸ್ವರ್ಗ, ನರಕ, ಅರ್ಶ್ (ದೇವ ಪೀಠ) ಕುರ್ಸಿ ಇತ್ಯಾದಿ)ಗಳ ಮೇಲೆ ವಿಶ್ವಾಸವಿರಿಸಿರಿ. (ಅದರ ಶೋಧನೆಗೆ ಹೋಗಬೇಡಿರಿ) ಅಮ್ಸಾಲ್‍ನಿಂದ (ಜನಾಂಗಗಳ ವಿನಾಶದ ಪಾಠಪ್ರದ ಪ್ರಸ್ತಾಪವಿರುವ ಕುರ್‍ಆನಿನ ಭಾಗಗಳು) ಪಾಠ ಬೋಧಕ ಕಲಿಯಿರಿ. [ಮಿಶ್ಕಾತ್]

ಜಾಬಿರ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಅಲ್ಲಾಹನು ಕೆಲವು ವಿಷಯಗಳನ್ನು ಫರ್ಝ್(ಕಡ್ಡಾಯ) ಎಂದು ಸಾರಿದ್ದಾನೆ. ಅವುಗಳನ್ನು ನೆರವೇರಿಸಬೇಕು, ವ್ಯರ್ಥ ಗೊಳಿಸಬಾರದು. ಕೆಲವು ವಿಷಯಗಳನ್ನು ಹರಾಮ್ (ನಿಷಿದ್ಧ) ಎಂದು ಸಾರಿದ್ದಾನೆ. ಅವುಗಳನ್ನು ಮಾಡಬಾರದು. ಕೆಲವು ಮೇರೆಗಳನ್ನು ನಿಶ್ಚಯಿಸಿರುವನು. ಅವುಗಳನ್ನು ಉಲ್ಲಂಘಿಸಬಾರದು. ಕೆಲವು ವಿಷಯಗಳ ಬಗ್ಗೆ ಮೌನ ತಾಳಿದ್ದಾನೆ- ಇದು ಮರೆವಿನಿಂದಲ್ಲ- ಅವುಗಳನ್ನು ಕೆದಕಬಾರದು. [ಮಿಶ್ಕಾತ್]

ಝಿಯಾದ್ ಬಿನ್ ಲಬೀದ್(ರ) ಹೇಳುತ್ತಾರೆ: ಪ್ರವಾದಿ(ಸ) ಒಂದು ವಿಷಯವನ್ನು ಪ್ರಸ್ತಾಪಿಸಿದರು- (ಬಹುಶಃ ಸಮುದಾಯಕ್ಕೆ ಮುಂದೆ ಬರಲಿರುವ ‘ಅಪಾಯ’ದ ಕುರಿತಾಗಿರಬೇಕು) ಆ ಕಾಲವು ‘ಇಲ್ಮ್’ (ವಿದ್ಯೆ) ಎತ್ತಲ್ಪಡುವ ಕಾಲವಾಗಿರುವುದು. ಆಗ ನಾನು ಹೀಗೆ ಕೇಳಿದೆ- “ಅಲ್ಲಾಹನ ಸಂದೇಶವಾಹಕರೇ! ಅದು ಹೇಗೆ ಎತ್ತಲ್ಪಡುವುದು? ನಾವು ಕುರ್‍ಆನ್ ಓದುತ್ತಿರುವೆವು, ನಮ್ಮ ಮಕ್ಕಳಿಗೂ ಕಲಿಸುತ್ತಿರುವೆವು ಮತ್ತು ನಮ್ಮ ಮಕ್ಕಳು ಅವರ ಸಂತಾನಗಳಿಗೂ ಕಲಿಸುವರಲ್ಲವೆ?” ಪ್ರವಾದಿ(ಸ) ಹೇಳಿದರು- ಝಿಯಾದ್, ಭೇಷ್! ನಾನು ನಿಮ್ಮನ್ನು ಮದೀನಾದಲ್ಲಿ ದೊಡ್ಡ ಧರ್ಮಜ್ಞಾನಿಯೆಂದು ಭಾವಿಸಿದ್ದೆ! ಯಹೂದಿಯರೂ ಕ್ರೈಸ್ತರೂ ತೌರಾತ್ ಮತ್ತು ಇಂಜೀಲನ್ನು ಪಠಿಸುತ್ತಿಲ್ಲವೆ? ಆದರೆ ಅವುಗಳ ಬೋಧನೆಗಳಂತೆ ಅವರು ನಡೆಯುವುದಿಲ್ಲ. [ಇಬ್ನುಮಾಜಃ] ಟಿಪ್ಪಣಿ: ‘ಇಲ್ಮ್’ ಎಂದರೆ ಪ್ರವಾದಿಗಳ ಮೂಲಕ ಬಂದ ವಿದ್ಯೆಯಾಗಿದೆ. ಈ ಹದೀಸ್‍ನಿಂದ ತಿಳಿದು ಬರುವುದೇನೆಂದರೆ ಸಹಾಬಿಗಳು ತಮ್ಮ ಮಕ್ಕಳಿಗೆ ಪ್ರವಾದಿಗಳ ಶಿಕ್ಷಣವನ್ನು ನೀಡುವ ಬಗ್ಗೆ ಆಸ್ಥೆ ವಹಿಸುತ್ತಿದ್ದರು. ಅವರು ಕುರ್‍ಆನ್ ಕಲಿಸದೆ ಕ್ರೈಸ್ತ ಮಿಶನರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಇಂದಿನ ಮುಸ್ಲಿಮರಂತೆ ಆಗಿರಲಿಲ್ಲ.

ಅಬೂ ಶುರೈಹ್ ಖುಝಾಈ(ರ) ಹೇಳುತ್ತಾರೆ: ಪ್ರವಾದಿ(ಸ) ಒಂದು ದಿನ ತಮ್ಮ ನಿವಾಸದಿಂದ ಹೊರಟು ನಮ್ಮ ಬಳಿಗೆ ಬಂದು ಹೀಗೆಂದರು- ನೀವು ಅಲ್ಲಾಹನ ಹೊರತು ಬೇರೆ ಇಲಾಹ್ (ಆರಾಧ್ಯ, ಒಡೆಯ ಮತ್ತು ಆಜ್ಞಾಧಿಕಾರಿ) ಯಾರೂ ಇಲ್ಲವೆಂದೂ ನಾನು ಅಲ್ಲಾಹನ ಸಂದೇಶವಾಹಕನೆಂದೂ ಸಾಕ್ಷ್ಯ ವಹಿಸುವುದಿಲ್ಲವೆ? ಜನರು ಹೇಳಿದರು- ಖಂಡಿತ, ನಾವು ಈ ಎರಡೂ ವಿಷಯಗಳ ಸಾಕ್ಷ್ಯ ವಹಿಸುತ್ತೇವೆ. ತರುವಾಯ ಪ್ರವಾದಿ(ಸ) ಹೇಳಿದರು- ನೋಡಿರಿ, ಅಲ್ಲಾಹನ ಗ್ರಂಥದ- ಪವಿತ್ರ ಕುರ್‍ಆನ್- ಒಂದು ತುದಿಯು ಅಲ್ಲಾಹನ ಕೈಯಲ್ಲೂ ಇನ್ನೊಂದು ತುದಿಯು ನಿಮ್ಮ ಕೈಯಲ್ಲೂ ಇದೆ. ಆದುದರಿಂದ ನೀವು ಕುರ್‍ಆನನ್ನು ಬಿಗಿಯಾಗಿ ಹಿಡಿದರೆ ಎಂದೂ ದಾರಿ ತಪ್ಪಲಾರಿರಿ ಮತ್ತು ನಾಶವಾಗಲಾರಿರಿ. [ತರ್ಗೀಬು ಲಿಲ್ ಮುಂದಿರಿ]

ಟಿಪ್ಪಣಿ: ‘ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಿರಿ’ ಎಂಬ ಕುರ್‍ಆನಿನ ಸೂಕ್ತದ ಅತ್ಯುತ್ತಮ ವ್ಯಾಖ್ಯಾನವಾಗಿದೆ ಈ ಹದೀಸ್. ಕುರ್‍ಆನ್ ವಾಸ್ತವದಲ್ಲಿ ಒಂದು ಹಗ್ಗವಾಗಿದ್ದು ಅದರ ಒಂದು ತುದಿ ಅಲ್ಲಾಹನ ಕೈಯಲ್ಲೂ ಇನ್ನೊಂದು ತುದಿ ಸತ್ಯವಿಶ್ವಾಸಿಗಳ ಕೈಯಲ್ಲೂ ಇದೆ. ಮುಸ್ಲಿಮರು ಎಲ್ಲಿಯ ವರೆಗೆ ಈ ಹಗ್ಗವನ್ನು ಹಿಡಿದಿರುವರೋ ಅಲ್ಲಿಯ ವರೆಗೆ ಅಲ್ಲಾಹನ ಸಹಾಯ ಸಿಗುತ್ತಲಿರುವುದು. ಇಹಲೋಕದಲ್ಲೂ ಗೌರವ, ಪ್ರತಿಷ್ಠೆ ಹಾಗೂ ಪರಲೋಕದಲ್ಲೂ ಶಾಶ್ವತ ಸುಖ ಲಭಿಸುವುದು.

ಆಯತ್‍ನಲ್ಲಿರುವ ‘ಹಬ್ಲ್’ ಎಂಬ ಪದಕ್ಕೆ ಒಪ್ಪಂದ ಎಂಬ ಅರ್ಥವೂ ಇದೆ. ಒಪ್ಪಂದವು ಏಕಪಕ್ಷೀಯವಾಗಿರುವುದಿಲ್ಲ. ಪ್ರವಾದಿಯವರ(ಸ) ಈ ಮಾತಿನ ಇಂಗಿತವೇನೆಂದರೆ ಕುರ್‍ಆನ್ ಒಂದು ಒಡಂಬಡಿಕೆಯಾಗಿದೆ. ಮುಸ್ಲಿಮರ ಮತ್ತು ಸರ್ವಲೋಕಗಳ ಪಾಲಕನಾದ ಅಲ್ಲಾಹನ ನಡುವೆ ನಡೆದ ಒಡಂಬಡಿಕೆಯಿದು. ಇದರಲ್ಲಿ ಎರಡು ಪರಿಚ್ಛೇದಗಳಿವೆ. ಒಂದನೆಯದು ಮುಸ್ಲಿಮರಿಗೆ ಸಂಬಂಧಿಸಿದೆ. ಎರಡನೆಯದರ ಸಂಬಂಧ ಅಲ್ಲಾಹನೊಂದಿಗಿದೆ. ಮುಸ್ಲಿಮರಿಗೆ ಸಂಬಂಧಿಸಿದ ಪರಿಚ್ಛೇದದಲ್ಲಿ ಈ ವಾಕ್ಯವಿದೆ- ಅಲ್ಲಾಹನೇ! ನಾವು ನಿನ್ನ ಗ್ರಂಥದ ಬೆಳಕಿನಲ್ಲಿ ಜೀವನ ಸಾಗಿಸುವೆವು. ನಿನ್ನ ಎಲ್ಲಾ ಆಜ್ಞೆಗಳನ್ನು ಪಾಲಿಸುವೆವು. ನಿನ್ನ ದಾಸರಾಗಿ ಬಾಳುವೆವು ಮತ್ತು ನಿನ್ನ ದಾಸ್ಯ ಅನುಸರಣೆಯಲ್ಲೇ ಸಾಯುವೆವು. ಅಲ್ಲಾಹನಿಗೆ ಸಂಬಂಧಿಸಿದ ಪರಿಚ್ಛೇದದಲ್ಲಿ ಈ ರೀತಿ ಬರೆಯಲಾಗಿದೆ- ಮುಸ್ಲಿಮರೇ! ನೀವು ಎಲ್ಲಿಯ ವರೆಗೆ ನಿಮ್ಮ ಒಪ್ಪಂದವನ್ನು ಪಾಲಿಸುವಿರೋ ಅಲ್ಲಿಯವರೆಗೆ ಭೂಲೋಕದಲ್ಲಿ ನಾನು ನಿಮ್ಮ ಸಹಾಯಕನಾಗಿರುವೆನು. ವೈರಿಗಳ ವಿರುದ್ಧ ನಿಮ್ಮನ್ನು ಗೆಲ್ಲಿಸುವೆನು. ಆದರೆ ನೀವು ಈ ಒಪ್ಪಂದದಲ್ಲಿ ವಂಚನೆ ಮಾಡಿದರೆ ನನ್ನ ಸಹಾಯ ಸಹಕಾರಗಳಿಂದ ವಂಚಿತರಾಗುವಿರಿ. ಇನ್ನು ನೀವು ಒಪ್ಪಂದವನ್ನು ಮುರಿದರೆ ನನ್ನ ಸಹಾಯ ಸಹಕಾರಗಳು ಶಾಶ್ವತವಾಗಿ ನಿಮ್ಮಿಂದ ದೂರ ಸರಿಯುವುವು. ಈ ಒಪ್ಪಂದದ ಪ್ರಸ್ತಾಪವು ಕುರ್‍ಆನಿನ ಸೂರಃ ಅಲ್ ಮಾಇದಃದ 7ರಿಂದ 13ರವರೆಗಿನ ವಚನಗಳಲ್ಲಿದೆ. ಮುಂದಿನ ಅಧ್ಯಾಯಗಳಲ್ಲಿ ಪ್ರವಾದಿಯವರ(ಸ) ವಚನಗಳಿಂದ ಅಲ್ಲಾಹನೊಂದಿಗೆ ಮಾಡಿದ ಒಪ್ಪಂದವನ್ನು ಮುರಿಯುವುದರ ದುಷ್ಪರಿಣಾಮಗಳು ವಾಚಕರ ಮುಂದೆ ಬರಲಿದೆ. ಮುಸ್ಲಿಮ್ ಸಮುದಾಯಕ್ಕೆ ಈ ಒಪ್ಪಂದವನ್ನು ಪುನಶ್ಚೇತನಗೊಳಿಸುವ ಸೌಭಾಗ್ಯವನ್ನು ಅಲ್ಲಾಹನು ದಯಪಾಲಿಸಲಿ. ಒಪ್ಪಂದ ಭಂಗ ಮತ್ತು ಅದರ ದುಷ್ಪರಿಣಾಮಗಳಿಂದ ಸಮುದಾಯವನ್ನು ರಕ್ಷಿಸಲಿ.

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …