Home / ಪ್ರಶ್ನೋತ್ತರ / ಮುಸ್ಲಿಮೇತರರಿಗೆ ಸಲಾಮ್ ಹೇಳಬಹುದೇ?

ಮುಸ್ಲಿಮೇತರರಿಗೆ ಸಲಾಮ್ ಹೇಳಬಹುದೇ?

ಪ್ರಶ್ನೆ: ನನ್ನ ಮುಸ್ಲಿಮೇತರ ಸ್ನೇಹಿತನೋರ್ವನು ನನ್ನೊಂದಿಗೆ ಕೇಳಿದನು- “ನೀವು ಮುಸ್ಲಿಮರಿಗೆ ಮಾತ್ರ ಸಲಾಮ್ ಹೇಳುವುದು ಯಾಕೆ? ಅದು ಶಾಂತಿಯ ಪ್ರಾರ್ಥನೆಯಾಗಿದ್ದರೆ ಅದನ್ನು ಎಲ್ಲರಲ್ಲೂ ಹೇಳಬಹುದಲ್ಲವೇ? ಈ ಅಭಿಪ್ರಾಯವು ಸರಿಯಲ್ಲವೇ?

ಉತ್ತರ: ‘ಅಸ್ಸಲಾಮು ಅಲೈಕುಂ’ ಎಂಬುವುದು ಮುಸ್ಲಿಮ್-ಮುಸ್ಲಿಮೇತರ ಎಂಬ ಬೇಧ ಭಾವವಿಲ್ಲದೆ ಪ್ರಯೋಗಿಸಬಹುದಾದ ವಾಕ್ಯವಾಗಿದೆ. ಇಮಾಮ್ ಬುಖಾರಿ ಹಾಗೂ ಮುಸ್ಲಿಮ್ ವರದಿ ಮಾಡಿರುವ ಹದೀಸಿನಲ್ಲಿ ಹೀಗೆ ಕಾಣಬಹುದು. “ಅಲ್ಲಾಹನು ಆದಮರನ್ನು(ಅ) ಸೃಷ್ಟಿಸಿದ ಬಳಿಕ ಹೀಗೆ ಹೇಳಿದನು- ತಾವು ಆ ಗುಂಪಿನ ಬಳಿಗೆ ಹೋಗಿರಿ. ಅಲ್ಲಿ ಮಲಕ್‍ಗಳ ಒಂದು ಗುಂಪು ಇದೆ. ಅವರು ನಿಮ್ಮನ್ನು ಅಭಿನಂಧಿಸುವುದನ್ನು ಆಲಿಸಿರಿ. ನಿಮ್ಮ ಹಾಗೂ ನಿಮ್ಮ ಸಂತತಿಗಳ ಅಭಿನಂದನೆಯು ಅದುವೇ ಆಗಿದೆ. ಹಾಗೆ ಅವರು ‘ಅಸ್ಸಲಾಮು ಅಲೈಕುಂ’ ಎಂದು ಹೇಳಿದರು. ಅಸ್ಸಲಾಮು ಅಲೈಕ ವರಹ್‍ಮತುಲ್ಲಾಹಿ ಎಂದು ಅವರು ಪ್ರತಿಯಾಗಿ ಅಭಿನಂಧಿಸಿದರು.” (ಬುಖಾರಿ, ಮುಸ್ಲಿಂ)

ಇದರಿಂದ ತಿಳಿದು ಬರುವುದೇನೆಂದರೆ ಅಲ್ಲಾಹನು ಆದಮರಿಗೂ(ಅ) ಅವರ ಸಂತತಿಗಳಿಗೂ ಅಭಿನಂದನೆಯ ವಾಕ್ಯವಾಗಿ ಕಲಿಸಿದ್ದು ಅಸ್ಸಲಾಮು ಅಲೈಕುಂ ಎಂದಾಗಿದೆ. ಆದಮರ ಸಂತತಿಗಳು ಎಂದು ಹದೀಸ್‍ನಲ್ಲಿ ಹೇಳಲಾಗಿದೆ. ಮನುಷ್ಯರೆಲ್ಲರೂ ಆದಮರ ಸಂತತಿಗಳಾಗಿದ್ದಾರೆ.

ಕುರ್‍ಆನಿನಲ್ಲೂ ನಮಗೆ ವಿಭಿನ್ನ ಅಭಿನಂದನಾ ರೀತಿಗಳನ್ನು ಕಾಣಲು ಸಾಧ್ಯವಿಲ್ಲ. ಉದಾ: “ಸತ್ಯ ವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಈ ಕ್ರಮವು ನಿಮ್ಮ ಮಟ್ಟಿಗೆ ಉತ್ತಮ. ನೀವು ಇದನ್ನು ಗಮನದಲ್ಲಿರಿಸುವಿರೆಂದು ನಿರೀಕ್ಷಿಸಲಾಗಿದೆ.” (ಅನ್ನೂರ್: 27)

“ಸಂದೇಶವಾಹಕರೇ, ಇವರನ್ನು ಮನ್ನಿಸಿರಿ ಮತ್ತು ನಿಮಗೆ ಸಲಾಮ್ (ಶಾಂತಿ) ಎಂದು ಹೇಳಿರಿ. ಸದ್ಯವೇ ಇವರಿಗೆ ತಿಳಿದು ಬರುವುದು.” (ಅಝುಖ್‍ರುಫ್: 89)

“ಆಗ ಇಬ್ರಾಹೀಮರು, `ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭುವಿನೊಡನೆ ಪ್ರಾರ್ಥಿಸುವೆನು. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು’ ಎಂದರು.” (ಮರ್ಯಮ್: 47)

ಮುಸ್ಲಿಮೇತರರಿಗೂ ಸಲಾಮ್ ಹೇಳಬಹುದು ಎಂದು ಪ್ರಸಿದ್ಧ ಸಹಾಬಿಗಳಾದ ಇಬ್ನು ಅಬ್ಬಾಸ್, ಇಬ್ನು ಮಸ್‍ಊದ್, ಅಬೂ ಉಮಾಮ(ರ) ಮೊದಲಾದವರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳ ಕಾಲಾನಂತರ ಬಂದ ಖಲೀಫಾ ಉಮರ್ ಬಿನ್ ಅಬ್ದುಲ್ ಅಝಿಝ್, ಸುಫ್‍ಯಾನ್ ಬಿನ್ ಉಯೈನ, ಶಅïಬಿ, ಔಝಾಈ, ತ್ವಬ್‍ರಿ ಮುಂತಾದವರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.

ಯಹೂದಿ-ಕ್ರೈಸ್ತರಿಗೆ ಸಲಾಮ್ ಹೇಳುವುದನ್ನು ವಿರೋಧಿಸಿದ ಹದೀಸ್ ಗಳನ್ನು ಪರಿಶೀಲಿಸಿದರೆ ಅದು ಯುದ್ಧದ ಸಂದರ್ಭಗಳಿಗೆ ಮಾತ್ರ ಸೀಮಿತವಾದ ಪ್ರತ್ಯೇಕ ವಿಧಿಗಳೆಂದು ತಿಳಿದು ಬರುತ್ತದೆ. “ನಾಳೆ ಅವರನ್ನು ಎದುರಿಸಲು ಹೋಗಲಿದ್ದೇವೆ. ಆದ್ದರಿಂದ ಅವರೊಂದಿಗೆ ಸಲಾಮ್‍ನಿಂದ ಆರಂಭಿಸಬೇಡಿ” ಎಂದು ಒಂದು ವರದಿಯಲ್ಲಿ ಕಾಣಬಹುದು. ಬೇರೆ ಶೈಲಿಯಲ್ಲೂ ಈ ಇಂಗಿತವು ಪ್ರಕಟಗೊಂಡಿದೆ. ಇಂತಹ ಹದೀಸ್‍ಗಳ ಪೂರ್ಣ ರೂಪವನ್ನು ನೋಡುವುದಾದರೆ, ಯಹೂದಿಯರು ಕೈಗೊಂಡ ಇಸ್ಲಾಮ್ ವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ಅಂತಹ ಸಲಹೆ ನೀಡಲಾಗಿದೆ ಎಂದು ತಿಳಿದು ಬರುವುದು.

ಒಟ್ಟಿನಲ್ಲಿ ಶತ್ರುಗಳಲ್ಲದೆ ಯಾರೇ ಆದರೂ ಅವರಿಗೆ ಸಲಾಮ್ ಹೇಳುವುದಕ್ಕೂ ಅದನ್ನು ಮರಳಿಸುವುದಕ್ಕೂ ವಿರೋಧವಿಲ್ಲ ಎಂಬ ಅಭಿಪ್ರಾಯವು ಹೆಚ್ಚು ಸ್ವೀಕಾರಾರ್ಹ ಎಂದು ಭಾಸವಾಗುತ್ತದೆ. ಪ್ರವಾದಿ(ಸ) ಹೀಗೆ ಕಲಿಸಿದ್ದಾರೆ, “ನೀನು ಪರಿಚಿತರೊಂದಿಗೂ ಅಪರಿಚಿತರೊಂದಿಗೂ ಸಲಾಮ್ ಹೇಳು.”

ಇಮಾಮ್ ಕುರ್ತುಬಿ ತನ್ನ ಕುರ್‍ಆನ್ ವ್ಯಾಖ್ಯಾನ ಗ್ರಂಥದಲ್ಲಿ ಈ ವಿಷಯವನ್ನು ಚರ್ಚಿಸಿದ್ದಾರೆ. ಇಮಾಮ್ ಸುಫ್‍ಯಾನ್ ಬಿನ್ ಉಯೈನರೊಂದಿಗೆ ಓರ್ವ ವ್ಯಕ್ತಿ ಕೇಳಿದರು, “ಸತ್ಯನಿಷೇಧಿಗಳಿಗೆ ಸಲಾಮ್ ಹೇಳಬಹುದೇ?” “ಹೌದು, ಹೇಳಬಹುದು.” ಅವರು ಉತ್ತರಿಸಿದರು. ಬಳಿಕ ಮುಮ್ತಹಿನ ಅಧ್ಯಾಯದ ನಾಲ್ಕನೇ ಸೂಕ್ತವನ್ನು ಪುರಾವೆಯಾಗಿ ಓದಿದರು. ಮಾತ್ರವಲ್ಲ, ಇಬ್ರಾಹೀಮರಲ್ಲಿ(ಅ) ನಮ್ಮ ಉತ್ತಮ ಮಾದರಿ ಇದೆ ಎಂಬ ಸೂಕ್ತವನ್ನು ಉದ್ಧರಿಸಿ, ಇಬ್ರಾಹೀಮ್(ಅ) ತನ್ನ ತಂದೆಯೊಂದಿಗೆ `ಸಲಾಮುನ್ ಅಲೈಕ’ ಎಂದು ಹೇಳಿದ ಭಾಗವನ್ನೂ ಅವರು ತೋರಿಸಿದರು. ಈ ನಿಲುವು ಸರಿ ಎಂದು ಇಮಾಮ್ ತ್ವಬ್ರೀ ಒತ್ತು ನೀಡಿ ಹೇಳಿದ್ದಾರೆ. ಗತ ಕಾಲದ ಮಹಾನ್ ವ್ಯಕ್ತಿಗಳಲ್ಲಿ ಇತರ ಧರ್ಮೀಯರಿಗೆ ಸಲಾಮ್ ಹೇಳಿದವರೂ ಹೇಳದವರೂ ಇದ್ದರು ಎಂದು ಇಮಾಮ್ ಔಝಾಈ ಹೇಳಿದ್ದನ್ನು ಕುರ್ತುಬಿ ಉದ್ಧರಿಸಿದ್ದಾರೆ.

ಒಟ್ಟಿಗೆ ಆಡಿ, ಕಲಿತು, ಬೆರೆತು, ಒಟ್ಟಿಗೆ ದುಡಿದು ಪರಸ್ಪರ ಗೌರವದೊಂದಿಗೆ ಬದುಕುವವರು ಯಾವುದೇ ಧರ್ಮಿಯರಾಗಿದ್ದರೂ ಅವರಿಗೆ ಆದಮರ(ಅ) ಸಂತತಿಗೆ ಅಲ್ಲಾಹನು ಕಲಿಸಿದ ಶಾಂತಿಯ ಹಾಗೂ ಸಾಮಾಧಾನದ ಹಾರೈಕೆ ಅರ್ಪಿಸಬೇಕು ಎಂಬುದು ಇಸ್ಲಾಮಿನ ಬಯಕೆಯಾಗಿದೆ.

SHARE THIS POST VIA

About editor

Check Also

ಅಲ್ಲಾಹ್ ಎಂಬ ಹೆಸರು?

– ಅಲ್ಲಾಹ್ ಎಂಬ ಹೆಸರು ಹೇಗೆ ಬಂತು? ಅಲ್ಲಾಹ್ ಅಂದರೆ ದೇವರಾ? ಅವನಿಗಿರುವ ಶಕ್ತಿಯೇನು? ಮೊದಲು ಅಲ್ಲಾಹ್ ಎಂದು ಹೆಸರು …