Home / ಇಸ್ಲಾಮಿನ ಸಾಮಾಜಿಕ ವ್ಯವಸ್ಥೆ

ಇಸ್ಲಾಮಿನ ಸಾಮಾಜಿಕ ವ್ಯವಸ್ಥೆ

ಲೋಕದ ಎಲ್ಲ ಮನುಷ್ಯರೂ ಮೂಲತಃ ಒಂದೇ ಪರಿವಾರದವರು ಎಂಬುದೇ ಇಸ್ಲಾಮೀ ಸಾಮಾಜಿಕ ವ್ಯವಸ್ಥೆಯ ಮೂಲ ಸಿದ್ಧಾಂತವಾಗಿದೆ. ಇಸ್ಲಾಮಿನ ಪ್ರಕಾರ, ದೇವನು ಪ್ರಥಮವಾಗಿ ಒಬ್ಬ ಪುರುಷ ಮತ್ತು ಸ್ತ್ರೀಯ ಜೋಡಿಯನ್ನು ಸೃಷ್ಟಿಸಿದನು. ಅನಂತರ ಈ ದಂಪತಿಯರಿಂದ ಮನುಷ್ಯ ಸಂತಾನವು ಆರಂಭಗೊಂಡಿತು. ಮೊದಲು, ಬಹುಕಾಲದವರೆಗೆ ಈ ಮನುಷ್ಯರೆಲ್ಲಾ ಒಂದೇ ಸಮಾಜದಂತಿದ್ದರು. ಅವರ ಧರ್ಮ, ಭಾಷೆ ಎಲ್ಲಾ ಒಂದೇ ಆಗಿತ್ತು. ಅವರ ನಡುವೆ ಯಾವುದೇ ಭಿನ್ನತೆ ಇರಲಿಲ್ಲ. ಆದರೆ ಕ್ರಮೇಣ, ಅವರ ಸಂಖ್ಯೆಯು ಹೆಚ್ಚುತ್ತಾ, ಲೋಕದ ನಾನಾ ಭಾಗಗಳಿಗೆ ವ್ಯಾಪಿಸುತ್ತಾ ಹೋದಂತೆ ಸ್ವಾಭಾವಿಕವಾಗಿಯೇ ಅವರು ವಿಭಿನ್ನ ಜನಾಂಗ, ಕೋಮು ಮತ್ತು ಪಂಗಡಗಳಾಗಿ ಬೇರ್ಪಟ್ಟರು. ಅವರ ಭಾಷೆ, ವಸ್ತ್ರ, ವಿನ್ಯಾಸ ಇತ್ಯಾದಿಗಳೆಲ್ಲಾ ಬದಲಾದುವು. ಅವರ ಜೀವನ ವಿಧಾನದಲ್ಲಿ ವ್ಯತ್ಯಾಸವುಂಟಾಯಿತು. ಆಯಾ ಪ್ರದೇಶದ ಹವಾಗುಣಕ್ಕೆ ತಕ್ಕಂತೆ ಅವರ ವರ್ಣ, ರೂಪ ಮತ್ತು ಆಕಾರಗಳಲ್ಲೂ ಪರಿವರ್ತನೆಯುಂಟಾಯಿತು.

ಈ ಭಿನ್ನತೆಗಳನ್ನೆಲ್ಲಾ ಇಸ್ಲಾಮ್, ವಾಸ್ತವಿಕತೆಗಳೆಂದು ಅಂಗೀಕರಿಸುತ್ತದೆ. ಆದರೆ ಈ ಭಿನ್ನತೆಗಳ ಆಧಾರದಲ್ಲಿ ಜನರಲ್ಲಿ ಹುಟ್ಟಿಕೊಳ್ಳುವ ವರ್ಣ, ಭಾಷೆ, ಕೋಮು ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಸಂಕುಚಿತ ಮನೋಭಾವಗಳನ್ನು ಅದು ವಿರೋಧಿಸುತ್ತದೆ. ಕೇವಲ ಹುಟ್ಟಿನ ಆಧಾರದಲ್ಲಿ ಮನುಷ್ಯ-ಮನುಷ್ಯರ ನಡುವೆ ಉಚ್ಚ-ನೀಚ, ಮೇಲು-ಕೀಳು, ನಮ್ಮವರು-ಪರಕೀಯರು ಎಂಬಿತ್ಯಾದಿಯಾಗಿ ಭೇದ ಕಲ್ಪಿಸುವುದು ಇಸ್ಲಾಮಿನ ದೃಷ್ಟಿಯಲ್ಲಿ ಕೇವಲ ಮೌಢ್ಯವಾಗಿದೆ. ಲೋಕದ ಎಲ್ಲ ಮನುಷ್ಯರೂ ಮೂಲತಃ ಒಂದೇ ತಂದೆ ತಾಯಿಯ ಮಕ್ಕಳಾಗಿದ್ದು, ಆ ನೆಲೆಯಲ್ಲಿ ಎಲ್ಲರೂ ಪರಸ್ಪರ ಸಹೋದರರು ಮತ್ತು ಮನುಷ್ಯರೆಂಬ ನೆಲೆಯಲ್ಲಿ ಎಲ್ಲರೂ ಸಮಾನರು ಎಂದು ಇಸ್ಲಾಮ್ ಸಾರುತ್ತದೆ.

ಮಾನವೀಯ ಭ್ರಾತೃತ್ವದ ಈ ಕಲ್ಪನೆಯನ್ನು ಕೊಡುವ ಇಸ್ಲಾಮ್, ಮನುಷ್ಯ ಮನುಷ್ಯರ ಮಧ್ಯೆ ನಿಜವಾಗಿ ವ್ಯತ್ಯಾಸವೇನಾಧರೂ ಇದ್ದರೆ ಅದು ವಿಚಾರ, ಚಾರಿತ್ರ್ಯ ಮತ್ತು ತತ್ವಗಳ ಆಧಾರದಲ್ಲಿ ಇರಬೇಕೇ ಹೊರತು ವರ್ಣ, ಜನಾಂಗ, ಭಾಷೆ ಅಥವಾ ರಾಷ್ಟ್ರದ ಆಧಾರದಲ್ಲಿ ಇರಬಾರದೆಂದು ಪ್ರತಿಪಾದಿಸುತ್ತದೆ.

ಇಬ್ಬರು ಮಕ್ಕಳು ಒಂದೇ ತಾಯಿ ತಂದೆಗೆ ಹುಟ್ಟಿದ್ದರೂ ಅವರ ವಿಚಾರ, ಆದರ್ಶ, ಚಾರಿತ್ರ್ಯಗಳು ಪರಸ್ಪರ ಭಿನ್ನವಾಗಿದ್ದರೆ ಜೀವನದಲ್ಲಿ ಅವರು ಕ್ರಮಿಸುವ ದಾರಿಗಳೂ ವಿಭಿನ್ನವಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಬೇರೆ ಇಬ್ಬರು ಮನುಷ್ಯರು- ಬಾಹ್ಯವಾಗಿ ಅವರ ಮಧ್ಯೆ ಪೂರ್ವ-ಪಶ್ಚಿಮಗಳಷ್ಟು ಅಂತರವಿದ್ದರು- ಅವರ ವಿಚಾರ, ಆಚಾರಗಳು ಒಂದೇ ಆಗಿದ್ದರೆ ಅವರಿಬ್ಬರೂ ಜೀವನದಲ್ಲಿ ಕ್ರಮಿಸುವ ಹಾದಿಯು ಸಮಾನವಾಗಿರುತ್ತದೆ.

ಇದೇ ದೃಷ್ಟಿಕೋನದಿಂದ ಇಸ್ಲಾಮ್ ಎಲ್ಲ ಬಗೆಯ ವರ್ಗೀಯ, ಜನಾಂಗೀಯ ಮತ್ತು ರಾಷ್ಟ್ರೀಯ ಸಮಾಜಗಳಿಗಿಂತ ಭಿನ್ನವಾದ ಅಪ್ಪಟ ವೈಚಾರಿಕ, ತಾತ್ವಿಕ ಮತ್ತು ಸಚ್ಚಾರಿತ್ರ್ಯದ ಆಧಾರದ ಒಂದು ಮಾದರೀ ಸಮಾಜವನ್ನು ರೂಪಿಸ ಬಯಸುತ್ತದೆ. ಅದು ರೂಪಿಸುವ ಸಮಾಜದಲ್ಲಿ ಮನುಷ್ಯರು ಒಂದು ಸಮಾನ ಸಿದ್ಧಾಂತ ಮತ್ತು ನೈತಿಕ ನಿಯಮದ ಆಧಾರದಲ್ಲಿ ಪರಸ್ಪರ ಒಗ್ಗೂಡುತ್ತಾರೆಯೇ ಹೊರತು ಕೇವಲ ಜನ್ಮದ ಆಧಾರದಲ್ಲಿಯಲ್ಲ. ಒಬ್ಬ ದೇವನನ್ನು ತಮ್ಮ ಒಡೆಯನೆಂದೂ ಆರಾಧ್ಯನೆಂದೂ ಅವನ ಸಂದೇಶವಾಹಕರು ತಂದಿತ್ತ ಮಾರ್ಗದರ್ಶನವನ್ನೇ ತಮ್ಮ ಜೀವನ ವಿಧಾನವೆಂದೂ ಅಂಗೀಕರಿಸುವ ಎಲ್ಲ ಮನುಷ್ಯರೂ ಈ ಸಮಾಜದಲ್ಲಿ ಒಂದು ಗೂಡುತ್ತಾರೆ. ಅವರು ಹುಟ್ಟಿದ್ದು ಆಫ್ರಿಕದಲ್ಲೋ ಅಮೇರಿಕದಲ್ಲೋ ಅವರು ಆರ್ಯರೋ ದ್ರಾವಿಡರೋ ಕರಿಯರೋ ಬಿಳಿಯರೊ ಹಿಂದಿ ಮಾತನಾಡುವವರೋ ಅರಬೀ ಭಾಷೆಯವರೋ ಎಂಬುದು ಅಪ್ರಸ್ತುತವಾಗುತ್ತದೆ. ಈ ಸಮಾಜಕ್ಕೆ ಸೇರುವ ಎಲ್ಲ ಮನುಷ್ಯರ ಹಕ್ಕು-ಅಧಿಕಾರಗಳು ಮತ್ತವರ ಸಾಮಾಜಿಕ ಸ್ಥಾನಮಾನಗಳು ಸಮಾನವಾಗಿರುತ್ತದೆ. ಅವರ ಮಧ್ಯೆ ಜನಾಂಗ, ರಾಷ್ಟ್ರ ಅಥವಾ ವರ್ಗಕ್ಕೆ ಸಂಬಂಧಿಸಿದ ಯಾವುದೇ ಅಂತರವಿರುವುದಿಲ್ಲ. ಯಾವುದೇ ಬಗೆಯ ಉಚ್ಚನೀಚ ನೀತಿ ಇರುವುದಿಲ್ಲ. ಯಾರನ್ನೂ ಅಸ್ಪ್ರಶ್ಯರಾಗಿ, ಮ್ಲೇಚ್ಛರಾಗಿ ಪರಿಗಣಿಸಲಾಗುವುದಿಲ್ಲ.

ಈ ಸಮಾಜದಲ್ಲಿ ಮದುವೆ, ನೆಂಟಸ್ತಿಕೆ ವಿಷಯದಲ್ಲಾಗಲೀ, ತಿನ್ನುಣ್ಣುವ ಅಥವಾ ಪರಸ್ಪರ ಬೆರೆಯುವ ವಿಷಯದಲ್ಲಾಗಲೀ ಜನರ ಮಧ್ಯೆ ಅಡ್ಡ ಗೋಡೆಗಳಿರುವುದಿಲ್ಲ. ಯಾರೂ ತನ್ನ ಹುಟ್ಟಿನ ಅಥವಾ ವೃತ್ತಿಯ ಆಧಾರದಲ್ಲಿ ಕೆಳದರ್ಜೆಯವನೆನಿಸುವುದಿಲ್ಲ. ಯಾರಿಗೂ ಅವರ ವಂಶ, ಕುಲ ಇತ್ಯಾದಿಗಳ ಆಧಾರದಲ್ಲಿ ಯಾವುದೇ ವಿಶೇಷ ಸ್ಥಾನಮಾನಗಳೋ ಅಧಿಕಾರಗಳೋ ಇರುವುದಿಲ್ಲ. ಯಾರೂ, ಕೇವಲ ತನ್ನ ಶ್ರೀಮಂತಿಕೆ ಅಥವಾ ತನ್ನ ಕೌಟುಂಬಿಕ ಹಿನ್ನೆಲೆಯ ಕಾರಣ ದೊಡ್ಡವನೆನಿಸುವುದಿಲ್ಲ. ಇಲ್ಲಿ ಒಬ್ಬನು ಹಿರಿಯನೆನಿಸಿಕೊಳ್ಳಬೇಕಾದರೆ ಅವನು ತನ್ನ ಚಾರಿತ್ರ್ಯ, ದೇವಭಕ್ತಿ ಮತ್ತು ಸದಾಚಾರದಲ್ಲಿ ಇತರರಿಗಿಂತ ಉನ್ನತನಾಗಿರಬೇಕು.

ಈ ಮಾದರೀ ಸಮಾಜವು ಭಾಷೆ, ವರ್ಣ, ಜನಾಂಗ ಇತ್ಯಾದಿ ಎಲ್ಲ ಬಂಧನಗಳನ್ನು ಮಾತ್ರವಲ್ಲ ಭೌಗೋಳಿಕ ಸೀಮೆಗಳನ್ನೂ ಮೀರಿ ಲೋಕದ ಎಲ್ಲ ಭಾಗಗಳಿಗೆ ವ್ಯಾಪಿಸಲು ಶಕ್ತವಾಗಿರುತ್ತದೆ. ಇದರ ಆಧಾರದಲ್ಲಿ ಜಾಗತಿಕ ಮಟ್ಟದಲ್ಲಿ ಮಾನವೀಯ ಭ್ರಾತೃತ್ವವು ಸ್ಥಾಪಿತವಾಗಬಹುದಾಗಿದೆ. ರಾಷ್ಟ್ರೀಯ ಮತ್ತು ಜನಾಂಗೀಯ ಸಮಾಜಗಳಲ್ಲಿ ಕೇವಲ ಆ ಜನಾಂಗ ಅಥವಾ ರಾಷ್ಟ್ರದಲ್ಲಿ ಹುಟ್ಟಿದವನಿಗೆ ಮಾತ್ರ ಮಾನ್ಯತೆ ಇರುತ್ತದೆ. ಪರಕೀಯರ ಪಾಲಿಗೆ ಇಂತಹ ಸಮಾಜಗಳ ಬಾಗಿಲು ಮುಚ್ಚಿರುತ್ತದೆ. ಆದರೆ ತಾತ್ವಿಕ ಮತ್ತು ವೈಚಾರಿಕ ಬುನಾದಿಗಳಲ್ಲಿ ಕಟ್ಟಲ್ಪಡುವ ಇಸ್ಲಾಮೀ ಸಮಾಜದಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತ ಮತ್ತು ನೈತಿಕ ನಿಯಮವನ್ನು ಅಂಗೀಕರಿಸುವ ಎಲ್ಲರಿಗೆ ಸಮಾನ ಅಧಿಕಾರಗಳು ಸಿಗುತ್ತವೆ.

ಇನ್ನು ಪ್ರಸ್ತುತ ವಿಶ್ವಾಸ ಮತ್ತು ನಿಯಮವನ್ನು ಅಂಗೀಕರಿಸದೆ ಇರುವವರ ವಿಷಯ ಅಂಥವರನ್ನು ಇಸ್ಲಾಮೀ ಸಮಾಜವು ತನ್ನ ಅಂಗವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಮನುಷ್ಯರೆಂಬ ನೆಲೆಯಲ್ಲಿ ಅವರನ್ನೂ ಸಹೋದರರೆಂದೇ ಪರಿಗಣಿಸುತ್ತದೆ. ಮಾತ್ರವಲ್ಲ ಅವರಿಗೆ ಎಲ್ಲ ಬಗೆಯ ಮಾನವೀಯ ಹಕ್ಕುಗಳನ್ನೂ ಅದು ಕೊಡಮಾಡುತ್ತದೆ.

ಒಬ್ಬ ತಾಯಿಯ ಇಬ್ಬರು ಮಕ್ಕಳ ವಿಚಾರಗಳು ಭಿನ್ನವಾಗಿದ್ದರೆ ಸಹಜವಾಗಿಯೇ ಅವರ ಜೀವನ ವಿಧಾನಗಳೂ ಭಿನ್ನವಾಗಿಯೇ ಇರುತ್ತದೆ. ಆದರೆ ಕೇವಲ ಈ ಕಾರಣಕ್ಕಾಗಿ ಒಬ್ಬನು ಇನ್ನೊಬ್ಬನ ಸಹೋದರನಲ್ಲ ಎನ್ನಲಾಗುವುದಿಲ್ಲ. ಇದೇ ರೀತಿ ಮಾನವಕುಲದ ಎರಡು ಗುಂಪುಗಳ ತತ್ವ ಸಿದ್ಧಾಂತಗಳು ವಿಭಿನ್ನವಾಗಿದ್ದರೆ ಅವರ ಸಮಾಜಗಳು ಭಿನ್ನವಾಗಿರುತ್ತವೆ. ಆದರೆ ಮಾನವೀಯತೆಯ ನೆಲೆಯಲ್ಲಿ ಆ ಎರಡು ಗುಂಪುಗಳು ಸಮಾನವಾಗಿರುತ್ತವೆ. ಈ ಮಾನವೀಯ ಸಮಾನತೆಯ ಆಧಾರದಲ್ಲಿ ಯಾರಾಧರೂ ಊಹಿಸಬಹುದಾದ ಗರಿಷ್ಠ ಅವಕಾಶ, ಹಕ್ಕು ಮತ್ತು ಅಧಿಕಾರಗಳನ್ನು ಇಸ್ಲಾಮೀ ಸಮಾಜವು ಇಸ್ಲಾಮೇತರ ಸಮಾಜಕ್ಕೆ ಕೊಡುತ್ತದೆ.

ಇಸ್ಲಾಮೀ ಸಾಮಾಜಿಕ ವ್ಯವಸ್ಥೆಯ ತಳಹದಿಗಳೇನು ಎಂಬುದನ್ನು ನೋಡಿದ ಬಳಿಕ ನಾವೀಗ, ಇಸ್ಲಾಮ್ ಧರ್ಮವು ಮಾನವ ಕುಲದ ಸೌಹಾರ್ದಯುತ ಅಸ್ತಿತ್ವಕ್ಕೆ ತೋರಿಸಿರುವ ವಿಧಾನ ಮತ್ತು ಅದಕ್ಕಾಗಿ ಮುಂದಿಟ್ಟಿರುವ ತತ್ವಾದರ್ಶಗಳು ಏನೆಂಬುದನ್ನು ನೋಡೋಣ.

ಕುಟುಂಬವೇ ಮನುಷ್ಯ ಸಮಾಜದ ಪ್ರಥಮ ಹಾಗೂ ಅತ್ಯಂತ ಪ್ರಧಾನ ಅಂಗ. ಒಬ್ಬ ಪುರುಷ ಮತ್ತು ಸ್ತ್ರೀಯ ಮಿಲನದಿಂದ ಕುಟುಂಬ ಆರಂಭವಾಗುತ್ತದೆ. ಈ ಮಿಲನದಿಂದಲೇ ಒಂದು ಹೊಸ ಸಂತತಿ ಅಸ್ತಿತ್ವಕ್ಕೆ ಬರುತ್ತದೆ. ಹಾಗೆಯೇ ಸಂಬಂಧ, ನೆಂಟಸ್ತಿಕೆ ಇತ್ಯಾದಿ ಆರಂಭವಾಗುತ್ತದೆ. ಕೊನೆಗೂ ಇದೇ ಪ್ರಕ್ರಿಯೆ ಮುಂದುವರಿದು ಒಂದು ಸಮಾಜವು ರೂಪುಗೊಳ್ಳುತ್ತದೆ ಅಲ್ಲದೆ ಒಂದು ಪೀಳಿಗೆಯು ತನ್ನ ಮುಂದಿನ ಪೀಳಿಗೆಯನ್ನು ಮನುಷ್ಯ ನಾಗರಿಕತೆಯ ವ್ಯಾಪಕ ಸೇವೆಗಾಗಿ ತರಬೇತಿಗೊಳಿಸುವ ಮತ್ತು ಪ್ರೇಮ-ಪ್ರೀತಿ, ವಾತ್ಸಲ್ಯ, ಹಿತಾಕಾಂಕ್ಷೆಯನ್ನು ಧಾರೆಯೆರೆದು ಆ ಪೀಳಿಗೆಯನ್ನು ಬೆಳೆಸುವ ಕಾರ್ಯವು ನಡೆಯುವುದೂ ಇದೇ ಸ್ಥಳದಲ್ಲಿ.

ಕುಟುಂಬವೆಂಬ ಈ ಅಂಗವು ಮನುಷ್ಯ ನಾಗರಿಕತೆಯ ಉಳಿವು ಮತ್ತು ಬೆಳವಣಿಗೆಗೆ ಕೇವಲ ನಾಮ ಮಾತ್ರವಾಗಿ ಕಾರಣವಾಗುವುದಲ್ಲ. ಕುಟುಂಬದ ಪ್ರತಿಯೊಬ್ಬ ಸದಸ್ಯನು ತನ್ನ ಅನಂತರ ಬರುವವರು ತನಗಿಂತ ಸಮರ್ಥರಾಗಿರಬೇಕೆಂದು ಪ್ರಾಮಾಣಿಕವಾಗಿ ಅಪೇಕ್ಷಿಸುತ್ತಾನೆ. ಆದ್ದರಿಂದಲೇ ಕುಟುಂಬವೇ ಮನುಷ್ಯ ನಾಗರಿಕತೆಯ ತಳಹದಿಯಾಗಿದೆ ಎಂಬುದೊಂದು ವಾಸ್ತವ. ನಾಗರಿಕತೆಯ ಆರೋಗ್ಯ ಮತ್ತು ಶಕ್ತಿಯು ಈ ಮೂಲಭೂತ ಅಂಗದ ಆರೋಗ್ಯ ಮತ್ತು ಶಕ್ತಿಯನ್ನು ಬಹಳಷ್ಟು ಅವಲಂಬಿಸಿಕೊಂಡಿದೆ. ಇದೇ ಕಾರಣದಿಂದ ಇಸ್ಲಾಮ್, ಸಾಮಾಜಿಕ ಜೀವನದಲ್ಲಿ ಪ್ರಪ್ರಥಮವಾಗಿ ಕುಟುಂಬವೆಂಬ ಈ ಪ್ರಧಾನ ಅಂಗವನ್ನು ಅತ್ಯಂತ ಸಮರ್ಪಕವಾದ ತಳಹದಿಯಲ್ಲಿ ಕಟ್ಟಿ ಬೆಳೆಸುವ ಕಡೆಗೆ ಗಮನ ಹರಿಸುತ್ತದೆ.

ಇಸ್ಲಾಮೀ ದೃಷ್ಟಿಕೋನದಂತೆ, ಸ್ತ್ರೀ-ಪುರುಷರ ಸಂಬಂಧವು ಸಿಂಧುವೆನಿಸಬೇಕಾದರೆ ಈ ಸಂಬಂಧದ ಜೊತೆಗೆ ಅವರು ಸಾಮಾಜಿಕ ಹೊಣೆಗಾರಿಕೆಗಳನ್ನೂ ಸ್ವೀಕರಿಸಬೇಕು ಮತ್ತು ಈ ಸಂಬಂಧವು ಒಂದು ಕುಟುಂಬಕ್ಕೆ ನಾಂದಿಯಾಗಬೇಕು. ಸ್ವಚ್ಛಂದ ಹಾಗೂ ಜವಾಬ್ದಾರಿ ರಹಿತವಾದ ಸಂಬಂಧಗಳನ್ನು ಅದು ಕೇವಲ ಒಂದು ಮುಗ್ಧ ಕ್ರಿಯೆಯೆಂದು ಅಥವಾ ಸಾಮಾನ್ಯ ಅನಿಷ್ಟವೆಂದು ನಿರ್ಲಕ್ಷಿಸುವುದಿಲ್ಲ. ಇಸ್ಲಾಮಿನ ದೃಷ್ಟಿಯಲ್ಲಿ ಇಂತಹ ಅಕ್ರಮ ಸಂಬಂಧವು ಮನುಷ್ಯ ನಾಗರಿಕತೆಯ ಬೇರಿಗೇ ಕೊಡಲಿಯೇಟು ಹಾಕುವಂತಹ ಘೋರ ಕೃತ್ಯವಾಗಿದೆ. ಆದ್ದರಿಂದಲೇ ಅದು ಇಂತಹ ಅನಧಿಕೃತ ಸಂಬಂಧಗಳನ್ನು ನಿಷಿದ್ಧವೆಂದು ಮಾತ್ರವಲ್ಲ ಕಾನೂನುರೀತ್ಯಾ ಅಪರಾಧವೆಂದು ಘೋಷಿಸುತ್ತದೆ. ಇಂತಹ ಸಮಾಜ ಘಾತುಕ ಸಂಬಂಧಗಳು ಚಿಗುರದಂತೆ ತಡೆಗಟ್ಟಲು ಅದು ಕಠಿಣ ಶಿಕ್ಷೆಗಳನ್ನೂ ಸೂಚಿಸಿದೆ. ಜೊತೆಗೇ ಇಂತಹ ಜವಾಬ್ದಾರಿರಹಿತ ಅಕ್ರಮ ಸಂಬಂಧಗಳು ಬೆಳೆಯಲು ಪ್ರೇರಕವಾಗುವಂತಹ ಅಥವಾ ಅದಕ್ಕೆ ಅವಕಾಶ ಕೊಡುವಂತಹ ಎಲ್ಲ ಮೂಲಗಳನ್ನು ಅದು ನಿರ್ಮೂಲನಗೊಳಿಸುತ್ತದೆ. ಪರ್ದಾದ ಆದೇಶ, ಸ್ತ್ರೀ-ಪುರುಷರ ಅನಿಯಂತ್ರಿತ ಸಮ್ಮಿಲನಕ್ಕೆ ನಿಷೇಧ, ಪ್ರಚೋದಕ ಚಿತ್ರ ಮತ್ತು ಸಂಗೀತಗಳಿಗೆ ನಿಷೇಧ, ಅಶ್ಲೀಲ ಪ್ರಕಟನೆಗಳ ಮೇಲಿನ ನಿರ್ಬಂಧ ಇವೆಲ್ಲಾ ಈ ಘೋರ ಕೃತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿರುವ ಮುಂಜಾಗ್ರತಾ ಕ್ರಮಗಳಾಗಿವೆ. ಕುಟುಂಬವನ್ನು ಬಲಪಡಿಸುವುದು ಹಾಗೂ ಸುರಕ್ಷಿತವಾಗಿಡುವುದೇ ಈ ಎಲ್ಲದರ ಕೇಂದ್ರೀಯ ಉದ್ದೇಶವಾಗಿದೆ.

ಇನ್ನೊಂದೆಡೆ ಅಧಿಕೃತ ಸಂಬಂಧ ಅಥವಾ ವಿವಾಹ (ನಿಕಾಹ್)ವನ್ನು ಇಸ್ಲಾಮ್ ಕೇವಲ ಸಮ್ಮತಿಸಿರುವುದು ಮಾತ್ರವಲ್ಲ. ಅದೊಂದು ಸತ್ಕರ್ಮ ಹಾಗೂ ಪುಣ್ಯದಾಯಕ ಧಾರ್ಮಿಕ ಕೃತ್ಯವೆಂದು ಬಣ್ಣಿಸಿದೆ. ಸ್ತ್ರೀ-ಪುರುಷರು ಪ್ರಬುದ್ಧತೆಗೆ ತಲುಪಿದ ಅನಂತರ ಅವರು ಏಕಾಂಗಿಗಳಾಗಿರುವುದನ್ನು ಇಸ್ಲಾಮ್ ನಿರುತ್ತೇಜಿಸುತ್ತದೆ. ಅದು ಪ್ರತಿಯೊಬ್ಬ ಯುವಕನಿಗೆ, ನಾಗರಿಕತೆಯ ಯಾವ ಹೊಣೆಗಾರಿಕೆಗಳನ್ನು ಅವನ ಹೆತ್ತವರು ವಹಿಸಿದ್ದರೋ ಅದನ್ನು ತನ್ನ ಸರದಿ ಬಂದಾಗ ತಾನೂ ವಹಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ಸನ್ಯಾಸ ಅಥವಾ ವೈರಾಗ್ಯವನ್ನು ಇಸ್ಲಾಮ್ ಸದಾಚಾರವೆಂದು ಪರಿಗಣಿಸುವುದಿಲ್ಲ. ಇದು ದೇವನಿಶ್ಚಿತ ಪ್ರಕೃತಿಯ ವಿರುದ್ಧ ನಡೆಸುವ ಒಂದು ಅನಾಚಾರವೆಂದು ಸಾರುತ್ತದೆ. ವಿವಾಹವನ್ನು ಕಷ್ಟಕರವಾಗಿಸುವಂತಹ ಎಲ್ಲ ಬಗೆಯ ಸಂಪ್ರದಾಯ ಮತ್ತು ಕಟ್ಟು ಕಟ್ಟಳೆಗಳನ್ನು ಇಸ್ಲಾಮ್ ವಿರೋಧಿಸುತ್ತದೆ. ಅದು ಸಮಾಜದಲ್ಲಿ ವಿವಾಹವನ್ನು ಅತ್ಯಂತ ಸುಲಭ ಹಾಗೂ ವ್ಯಭಿಚಾರವನ್ನು ಅತ್ಯಂತ ಕಷ್ಟಕರ ಕೆಲಸವಾಗಿ ಮಾಡ ಬಯಸುತ್ತದೆ. ಆದ್ದರಿಂದಲೇ ಇಸ್ಲಾಮ್ ಕೆಲವು ಅತ್ಯಂತ ಹತ್ತಿರದ ಸಂಬಂಧಗಳನ್ನು ಬಿಟ್ಟರೆ ಉಳಿದ ಎಲ್ಲ ಆಪ್ತ ಅಥವಾ ದೂರದ ಸಂಬಂಧಿಕರ ನಡುವೆ ಅಥವಾ ಜನರು ತಾವು ಬಯಸಿದಲ್ಲಿಂದ ವಿವಾಹ ಸಂಬಂಧ ಏರ್ಪಡಿಸಲು ಅನುಮತಿಸಿದೆ. ಜಾತಿ, ಕುಲ, ಉಪಜಾತಿಗಳ ಯಾವುದೇ ಬಂಧನವಿಲ್ಲದೆ ಲೋಕದ ಎಲ್ಲ ಮುಸಲ್ಮಾನರಿಗೆ ತಮ್ಮೊಳಗೆ ವಿವಾಹ ಸಂಬಂಧ ಸ್ಥಾಪಿಸಲು ಅನುಮತಿಸಿದೆ. ಕನ್ಯಾ ಶುಲ್ಕ ಮತ್ತು ವಧುವಿಗೆ ಕೊಡುವ ಉಡುಗೊರೆಗಳನ್ನು ಬಹಳ ಸೀಮಿತ ಪ್ರಮಾಣದಲ್ಲಿಡಲು ಆದೇಶಿಸುವ ಮೂಲಕ ವಿವಾಹವನ್ನು ಸರಳಗೊಳಿಸಿದೆ. ಅಲ್ಲದೆ ಇಸ್ಲಾಮಿನ ಪ್ರಕಾರ ವಿವಾಹಕ್ಕೆ ಯಾರಾದರೂ ಪುರೋಹಿತರ ಅಥವಾ ವಿದ್ವಾಂಸರ ಅಗತ್ಯ ಕೂಡಾ ಇಲ್ಲ. ರಿಜಿಸ್ಟರುಗಳ ಅಗತ್ಯ ಕೂಡಾ ಇಲ್ಲ. ಇಸ್ಲಾಮೀ ಸಮಾಜದಲ್ಲಿ ವಿವಾಹ ಸಮಾರಂಭವು ಎಷ್ಟು ಸರಳವೆಂದರೆ, ಇಬ್ಬರು ಸಾಕ್ಷಿಗಳ ಮುಂದೆ ಹೆಣ್ಣು ಮತ್ತು ಗಂಡು ಪರಸ್ಪರರನ್ನು ಸ್ವೀಕರಿಸಲು ಒಪ್ಪಿಕೊಂಡರೆ (ಈಜಾಬ್ ವ ಕಬೂಲ್) ಮುಗಿಯಿತು. ಈ ಒಪ್ಪಂದವು ಗೌಪ್ಯವಾಗಿರದೆ ಪರಿಸರದ ಮಂದಿಗೆ ತಿಳಿದಿರಬೇಕಾದುದು ಮಾತ್ರ ಅಗತ್ಯ.

ಕುಟುಂಬದೊಳಗೆ ಇಸ್ಲಾಮ್, ಪುರುಷನಿಗೆ ಮುಖ್ಯ ಸ್ಥಾನವನ್ನು ವಹಿಸಿಕೊಟ್ಟು ಅವನು ಕುಟುಂಬದ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಮಾಡುತ್ತದೆ. ಪತ್ನಿಯು ಪತಿಗೆ ಮತ್ತು ಮಕ್ಕಳು ತಂದೆ ತಾಯಿಗಳಿಗೆ ವಿಧೇಯರಾಗಿದ್ದು ಅವರ ಸೇವೆ ಮಾಡಬೇಕೆಂದು ಆದೇಶಿಸುತ್ತದೆ. ಅವ್ಯವಸ್ಥಿತವಾದ ಹಾಗೂ ಕುಟುಂಬದ ನೈತಿಕ ಮತ್ತಿತರ ವ್ಯವಹಾರಗಳನ್ನು ನಿಯಂತ್ರಣದಲ್ಲಿಡಲು ಯಾರಿಗೂ ಹೊಣೆ ವಹಿಸಿಕೊಡದಂತಹ ಅಸಮರ್ಪಕ ಕುಟುಂಬ ವ್ಯವಸ್ಥೆಯನ್ನು ಇಸ್ಲಾಮ್ ಮೆಚ್ಚುವುದಿಲ್ಲ. ಮನೆಯ ಶಿಸ್ತನ್ನು ನೋಡಿಕೊಳ್ಳಲು ಒಬ್ಬ ಹೊಣೆಯರಿತ ಮುಖ್ಯಸ್ಥನಿರಲೇಬೇಕ್ಠು. ಇಸ್ಲಾಮಿನ ದೃಷ್ಟಿಯಲ್ಲಿ ಕುಟುಂಬದಲ್ಲಿ ತಂದೆಯಾಗಿರುವವನೇ ಈ ಸ್ಥಾನಕ್ಕೆ ಹೆಚ್ಚು ಅರ್ಹನು. ಆದರೆ ಇದರರ್ಥ, ಪುರುಷನನ್ನೇ ಕುಟುಂಬದ ನಿರಂಕುಶ ಸರ್ವಾಧಿಕಾರಿಯಾಗಿ ಮಾಡಲಾಗಿದೆಯೆಂದೋ ಮಹಿಳೆಯನ್ನು ಅಸಹಾಯಕ ದಾಸಿಯಂತೆ ಸಂಪೂರ್ಣವಾಗಿ ಅವನ ಕೃಪೆಗೆ ಬಿಡಲಾಗಿದೆಯೆಂದೋ ಖಂಡಿತ ಅಲ್ಲ. ಇಸ್ಲಾಮಿನ ಪ್ರಕಾರ ಪ್ರೇಮ ಮತ್ತು ವಾತ್ಸಲ್ಯವೇ ವೈವಾಹಿಕ ಜೀವನದ ತಿರುಳಾಗಿದೆ. ಕುಟುಂಬದಲ್ಲಿ ಪತಿಯ ಆಜ್ಞಾಪಾಲನೆ ಪತ್ನಿಯ ಕರ್ತವ್ಯ. ಆದರೆ ಅದೇ ವೇಳೆ ತನ್ನ ಅಧಿಕಾರವನ್ನು ಅನ್ಯಾಯಕ್ಕೆ ಬಳಸುವ ಬದಲು ಸುಧಾರಣೆಗೆ ಬಳಸಬೇಕಾದುದು ಪತಿಯ ಕರ್ತವ್ಯ.

ವೈವಾಹಿಕ ಸಂಬಂಧದಲ್ಲಿ ಪ್ರೇಮ ವಾತ್ಸಲ್ಯಗಳು ಬೆಸೆದುಕೊಂಡಿದ್ದು ಪತಿ-ಪತ್ನಿಯರು ಸೌಹಾರ್ದಯುತವಾಗಿ ಮುಂದುವರಿಯುವ ಸಾಧ್ಯತೆಗಳಿರುವ ತನಕ ಮಾತ್ರ ಇಸ್ಲಾಮ್ ಈ ಬಂಧನವನ್ನು ಕಾಪಾಡುತ್ತದೆ. ಈ ಸಾಧ್ಯತೆಗಳು ಇಲ್ಲವಾದಾಗ ಅದು ಪುರುಷನಿಗೆ ತಲಾಕ್‍ನ ಹಕ್ಕನ್ನು ಮತ್ತು ಸ್ತ್ರೀಗೆ ಖುಲಾದ ಹಕ್ಕನ್ನು ಕೊಡುತ್ತದೆ. ಕೆಲವು ಸಂದರ್ಭಗಳಲ್ಲಿ ಒಂದು ವೈವಾಹಿಕ ಸಂಬಂಧವು ಅನುಗ್ರಹವೆನಿಸುವ ಬದಲು ಶಾಪವಾಗಿ ಪರಿಣಮಿಸಿದಾಗ ಅಂತಹ ಸಂಬಂಧವನ್ನು ಮುರಿದು ಬೇರ್ಪಡಿಸುವ ಅಧಿಕಾರವನ್ನು ಇಸ್ಲಾಮ್ ನ್ಯಾಯಾಲಯಕ್ಕೂ ಕೊಟ್ಟಿದೆ.

ಕುಟುಂಬದ ಸೀಮಿತ ವೃತ್ತದ ಹೊರಗೆ ನಿಕಟ ಸಂಬಂಧಿಕರ ಒಂದು ವಲಯವಿರುತ್ತದೆ. ಅದು ಸಾಕಷ್ಟು ವಿಶಾಲವಾಗಿರುತ್ತದೆ. ಹೆತ್ತವರ, ಸಹೋದರ-ಸಹೋದರಿಯರ ಅಥವಾ ನೆಂಟಸ್ತಿಕೆಯ ಆಧಾರದಲ್ಲಿ ಪರಸ್ಪರ ಬಂಧುಗಳಾಗಿರುವ ಜನರು ಪರಸ್ಪರ ಸಹಾಯಕರಾಗಿ, ಹಿತೈಷಿಗಳಾಗಿ ನೋವು-ನಲಿವುಗಳನ್ನು ಹಂಚಿಕೊಳ್ಳುವವರಾಗಿ ಇರಬೇಕೆಂದು ಇಸ್ಲಾಮ್ ಅಪೇಕ್ಷಿಸುತ್ತದೆ. ಕುರ್‍ಆನಿನಲ್ಲಿ ಬಂಧುಗಳ ಜೊತೆ ಸದ್ವರ್ತನೆ ಮಾಡುವಂತೆ ಆಗಾಗ ಆಜ್ಞಾಪಿಸಲಾಗಿದೆ. ಪ್ರವಾದಿ ವಚನಗಳಲ್ಲಿ ಕೂಡಾ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ಬಹಳಷ್ಟು ಒತ್ತು ಕೊಡಲಾಗಿದ್ದು ಅದನ್ನು ಭಾರೀ ಪುಣ್ಯ ಕಾರ್ಯವೆಂದು ಬಣ್ಣಿಸಲಾಗಿದೆ. ತನ್ನ ಸಂಬಂಧಿಕರೊಂದಿಗೆ ದುರ್ವರ್ತನೆ ಮಾಡುವವನು ಅಥವಾ ಅವರ ಬಗ್ಗೆ ಅಸಡ್ಡೆ ತೋರುವವನನ್ನು ಇಸ್ಲಾಮ್ ಮೆಚ್ಚುವುದಿಲ್ಲ.

ಹಾಗೆಂದು ಎಲ್ಲ ಅಸಂಗತ ವಿಷಯಗಳಲ್ಲೂ ಬಂಧು-ಬಳಗದವರನ್ನು ಬೆಂಬಲಿಸಬೇಕೆಂದು ಇಸ್ಲಾಮ್ ಹೇಳುವುದಿಲ್ಲ. ಸತ್ಯ-ನ್ಯಾಯಗಳಿಗೆ ವಿರುದ್ಧವಾದ ವಿಷಯಗಳಲ್ಲಿ ಬಂಧು ಬಳಗದವರನ್ನು ಬೆಂಬಲಿಸುವುದು ಮೌಢ್ಯವೆಂದು ಇಸ್ಲಾಮ್ ಪರಿಗಣಿಸಿದೆ. ಅದೇ ರೀತಿ ಒಬ್ಬ ಸರಕಾರೀ ಅಧಿಕಾರಿ, ಸಾರ್ವಜನಿಕರ ಹಣವನ್ನು ತನ್ನ ಬಂಧು-ಬಳಗದವರ ಉದ್ಧಾರಕ್ಕೆ ಬಳಸುವುದು ಅಥವಾ ತೀರ್ಪುಗಳನ್ನು ಕೊಡಬೇಕಾದ ಸಂದರ್ಭಗಳಲ್ಲಿ ಸ್ವಜನ ಪಕ್ಷಪಾತ ತೋರಿಸುವುದು ಇಸ್ಲಾಮಿನ ದೃಷ್ಟಿಯಲ್ಲಿ ಪೈಶಾಚಿಕ ಕೃತ್ಯವಾಗಿದೆ. ಇಸ್ಲಾಮ್ ಆದೇಶಿಸುವಂತಹ ಸ್ವಜನ ವಾತ್ಸಲ್ಯವು ನಿಜವಾಗಿ ವ್ಯಕ್ತಿಯಿಂದ ಆರಂಭಗೊಳ್ಳುತ್ತದೆ. ಅದು ಸತ್ಯ ಮತ್ತು ನ್ಯಾಯದ ಮಿತಿಗಳೊಳಗೆ ಇರಬೇಕಾದುದು ಅಗತ್ಯ.

ಬಂಧುಗಳ ನಂತರ ಇರುವಂತಹ ಅತ್ಯಂತ ನಿಕಟ ಸಂಬಂಧ ನೆರೆಕರೆಯವರದ್ದು. ಕುರ್‍ಆನಿನ ಪ್ರಕಾರ ನೆರೆಕರೆಯವರು ಮೂರು ಬಗೆಯವರಿದ್ದಾರೆ. ಮೊದಲನೆಯದಾಗಿ ನೆರೆಯಲ್ಲಿ ವಾಸಿಸುವ ಬಂಧುಗಳು, ಎರಡನೆಯದಾಗಿ ನೆರೆಯಲ್ಲಿ ವಾಸಿಸುವ ಅಪರಿಚಿತರು(ಬಂಧುಗಳಲ್ಲದವರು) ಮೂರನೆಯದಾಗಿ ನಡೆಯುವಾಗ, ಪ್ರಯಾಣಿಸುವಾಗ ಅಥವಾ ಎಲ್ಲಾದರೂ ತಂಗಿರುವಾಗ ತಾತ್ಕಾಲಿಕವಾಗಿ ಜೊತೆಗಿರುವ ವ್ಯಕ್ತಿಗಳು. ಇಸ್ಲಾಂನ ದೃಷ್ಟಿಯಲ್ಲಿ ಈ ಎಲ್ಲ ಬಗೆಯ `ನೆರೆಯವರೂ’ ನಮ್ಮ ಹಿತಾಕಾಂಕ್ಷೆ, ಸದ್ವರ್ತನೆ ಮತ್ತು ಸ್ನೇಹಶೀಲ ವ್ಯವಹಾರಕ್ಕೆ ಅರ್ಹರಾಗಿರುತ್ತಾರೆ. ಪ್ರವಾದಿ ಮುಹಮ್ಮದ್(ಸ) ಹೇಳಿದ್ದರು: `ನನಗೆ ನನ್ನ ನೆರೆಯವನ ಹಕ್ಕು ಬಾಧ್ಯತೆಗಳ ಬಗ್ಗೆ ಎಷ್ಟು ಒತ್ತು ಕೊಟ್ಟು ಹೇಳಲಾಗಿದೆಯೆಂದರೆ ಈ ನೆರೆಕರೆಯವರನ್ನು ನಮ್ಮ ವಾರೀಸು ಸೊತ್ತಿನಲ್ಲೂ ಹಕ್ಕುದಾರರಾಗಿ ಮಾಡಲಾಗುತ್ತದೋ ಎಂದು ಕೆಲವೊಮ್ಮೆ ನನಗೆ ಭಾಸವಾಗುತ್ತದೆ.”

ಇನ್ನೊಂದು ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”, ಪ್ರವಾದಿ ಮುಹಮ್ಮದ್(ಸ)ರ ಇನ್ನೊಂದು ವಚನವು ಹೀಗಿದೆ; “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.”

ಒಮ್ಮೆ ಯಾರೋ ಪ್ರವಾದಿ ಮುಹಮ್ಮದ್(ಸ)ರೊಡನೆ ಹೇಳಿದರು: “ಒಬ್ಬ ಹೆಂಗಸು ಬಹಳಷ್ಟು ನಮಾಜ್ (ಆರಾಧನೆ) ಮಾಡುತ್ತಾಳೆ, ಆಗಾಗ ಉಪವಾಸ ವ್ರತ ಆಚರಿಸುತ್ತಾಳೆ, ಸಾಕಷ್ಟು ದಾನ ಧರ್ಮ ಮಾಡುತ್ತಾಳೆ, ಆದರೆ ಅವಳ ಜಗಳಗಂಟಿ ಸ್ವಭಾವದಿಂದಾಗಿ ಅವಳ ನೆರೆಯವರೆಲ್ಲಾ ಬೇಸತ್ತಿದ್ದಾರೆ.” ಆಗ ಪ್ರವಾದಿ(ಸ) ಹೇಳಿದರು: “ಆಕೆ ನರಕಕ್ಕೆ ಯೋಗ್ಯಳು.” ಇನ್ನೊಬ್ಬರು “ಇನ್ನೊಬ್ಬ ಹೆಂಗಸಿದ್ದಾಳೆ. ಅವಳಲ್ಲಿ ಪ್ರಸ್ತುತ ವೈಶಿಷ್ಟ್ಯಗಳೇನೂ ಇಲ್ಲ. ಆದರೆ ಅವಳು ತನ್ನ ನೆರೆಯವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.” ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಆಕೆ ಸ್ವರ್ಗ ಪಡೆಯುವಳು.”

“ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ ಬಡವರಿಗೆ ನೋವಾಗಬಾರದು.”- ಎಂದು ಕೂಡಾ ಪ್ರವಾದಿ ಮುಹಮ್ಮದ್(ಸ) ಹೇಳಿದ್ದರು.

ಇನ್ನೊಂದು ಸಂದರ್ಭದಲ್ಲಿ ಪ್ರವಾದಿ(ಸ) ಹೇಳಿದರು: “ನಿನ್ನ ಅಕ್ಕಪಕ್ಕದವರು ನಿನ್ನನ್ನು ಒಳ್ಳೆಯವನೆಂದು ಭಾವಿಸುತ್ತಾರೆಂದಾದರೆ ನೀನು ನಿಜಕ್ಕೂ ಒಳ್ಳೆಯವನು, ಅವರ ದೃಷ್ಟಿಯಲ್ಲಿ ನೀನು ಕೆಟ್ಟವನಾಗಿದ್ದರೆ ನೀನು ನಿಜಕ್ಕೂ ಕೆಟ್ಟವನು.”

ಒಟ್ಟಿನಲ್ಲಿ ಇಸ್ಲಾಮ್, ಒಂದೇ ವಠಾರದಲ್ಲಿ ಜೀವಿಸುವ ಜನರಿಗೆ ಪರಸ್ಪರ ಪ್ರೇಮ-ವಾತ್ಸಲ್ಯ-ಹಿತಾಕಾಂಕ್ಷೆ, ಅನುಕಂಪ ತೋರುತ್ತಾ ನೋವು-ನಲಿವುಗಳಲ್ಲಿ ಪರಸ್ಪರ ಪಾಲುಗೊಳ್ಳುತ್ತಾ ಸೌಹಾರ್ದಯುತವಾಗಿ ಬಾಳ್ವೆ ನಡೆಸುವಂತೆ ಆದೇಶಿಸುತ್ತದೆ. ಅವರು ಪರಸ್ಪರರಲ್ಲಿ ವಿಶ್ವಾಸವಿಡುವಂತಹ ಮತ್ತು ನಮ್ಮ ಪರಿಸರದಲ್ಲಿ ತಮ್ಮ ಸೊತ್ತು, ವಿತ್ತ, ಗೌರವಗಳು ಸುರಕ್ಷಿತವಾಗಿವೆ ಎಂಬ ನಂಬಿಕೆಯಿಂದ ನೆಮ್ಮದಿಯಲ್ಲಿರುವಂತಹ ವಾತಾವರಣವನ್ನು ನಿರ್ಮಿಸಲು ಇಸ್ಲಾಮ್ ಬಯಸುತ್ತದೆ.

ಕೆಲವೆಡೆ ಇಬ್ಬರು ವ್ಯಕ್ತಿಗಳು ಒಂದೇ ಗೋಡೆಯ ಆಚೀಚೆ ವರ್ಷಗಟ್ಟಲೆ ಜೀವಿಸುತ್ತಿದ್ದರು ಅವರು ಪರಸ್ಪರರಿಗೆ ಅಪರಿಚಿತರಾಗಿಯೇ ಇರುತ್ತಾರೆ. ಒಂದೇ ವಠಾರದಲ್ಲಿ ಬಾಳುತ್ತಿದ್ದರೂ ಪರಸ್ಪರರ ಬಗ್ಗೆ ಯಾವುದೇ ಆದರ, ಆಸಕ್ತಿ, ಸಹಾನುಭೂತಿ ಅಥವಾ ವಿಶ್ವಾಸ ಇರುವುದಿಲ್ಲ, ಇಂತಹ ಸಮಾಜವು ಯಾವ ವಿಧದಲ್ಲೂ ಒಂದು ಇಸ್ಲಾಮೀ ಸಮಾಜವೆನಿಸಲು ಸಾಧ್ಯವಿಲ್ಲ.

ಈ ನಿಕಟ ಸಂಪರ್ಕಗಳ ಅನಂತರ ಸಂಪೂರ್ಣ ಸಮಾಜಿಕ ಕ್ಷೇತ್ರದಲ್ಲಿ ಇರಬೇಕಾದಂತಹ ವ್ಯಾಪಕ ಸಂಬಂಧದ ಮಜಲು ಬರುತ್ತದೆ. ಈ ವಿಶಾಲ ಕ್ಷೇತ್ರದಲ್ಲಿ ಇಸ್ಲಾಮ್, ನಮ್ಮ ಸಮೂಹ ಜೀವನವನ್ನು, ಮುಖ್ಯವಾಗಿ ಈ ಕೆಳಗಿನ ತತ್ವಗಳ ಮೇಲೆ ಸ್ಥಾಪಿಸ ಬಯಸುತ್ತದೆ.

1. ಒಳಿತು ಮತ್ತು ದೇವಭಕ್ತಿಯ ಕಾರ್ಯಗಳಲ್ಲಿ ಪರಸ್ಪರ ಸಹಕರಿಸುವುದು; ಕೆಡುಕು ಮತ್ತು ಅನ್ಯಾಯದ ಕಾರ್ಯಗಳಲ್ಲಿ ಪರಸ್ಪರ ಸಹಕರಿಸದಿರುವುದು. (ಕುರ್‍ಆನ್)

2. ನಿಮ್ಮ ಸ್ನೇಹ-ವೈರ ಎರಡೂ ದೇವನಿಗಾಗಿರಬೇಕು. ಏನಾದರೂ ಕೊಡುವುದಾದರೆ ಅಲ್ಲಾಹನಿಗಾಗಿ ಕೊಡಬೇಕು. ಏನಾದರು ಕೊಡುವುದರಿಂದ ಹಿಂಜರಿಯುವುದಾದರೆ ಅದು ಕೂಡಾ ಅಲ್ಲಾಹನಿಗಾಗಿಯೇ ಇರಬೇಕು. (ಕುರ್‍ಆನ್)

3. ನೀವು ಲೋಕದ ಒಳಿತಿಗಾಗಿ ಎದ್ದೇಳಿಸಲ್ಪಟ್ಟ ಅತ್ಯುತ್ತಮ ಸಮುದಾಯವಾಗಿದ್ದೀರಿ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ನಿಷೇಧಿಸುವುದು ನಿಮ್ಮ ಕರ್ತವ್ಯವಾಗಿದೆ. (ಕುರ್‍ಆನ್)

4. ಪರಸ್ಪರ ಅವಿಶ್ವಾಸ ತೋರಿಸಬೇಡಿ. ಒಬ್ಬರು ಇನ್ನೊಬ್ಬರ ದೋಷಗಳನ್ನು ಹುಡುಕುತ್ತಿರಬೇಡಿ. ಜನರನ್ನು ಪರಸ್ಪರ ಎತ್ತಿ ಕಟ್ಟಬೇಡಿ. ಪರಸ್ಪರ ಅಸೂಯೆ ಪಡಬೇಡಿ. ದ್ವೇಷವನ್ನು ತೊರೆಯಿರಿ. ಒಬ್ಬರು ಇನ್ನೊಬ್ಬರನ್ನು ಖಂಡಿಸುತ್ತಾ ಮೂದಲಿಸುತ್ತಾ ಇರಬೇಡಿ. ಎಲ್ಲರ ಜೊತೆ ಪರಸ್ಪರ ಸಹೋದರರಂತೆ ಇರಿ. (ಹದೀಸ್)

5. ಒಬ್ಬನು ಅಕ್ರಮಿ ಎಂದು ತಿಳಿದಿದ್ದರೆ ಅವನಿಗೆ ನೆರವಾಗಬೇಡಿ. (ಹದೀಸ್)

6. ಅನ್ಯಾಯದ ವಿಷಯದಲ್ಲೂ ಸ್ವಜನಾಂಗವನ್ನು ಬೆಂಬಲಿಸುವುದೆಂದರೆ, ತನ್ನ ಒಂಟೆ ಬಾವಿಗೆ ಬೀಳುವಾಗ ಅದರ ಬಾಲ ಹಿಡಿದು ತಾನೂ ಬಾವಿಗೆ ಬೀಳುವುದಕ್ಕೆ ಸಮಾನ. (ಹದೀಸ್)

7. ನೀವು ನಿಮಗಾಗಿ ಏನನ್ನು ಇಷ್ಟ ಪಡುತ್ತೀರೋ ಅದನ್ನೇ ಇತರರಿಗಾಗಿಯೂ ಇಷ್ಟಪಡಿರಿ. (ಹದೀಸ್)

SHARE THIS POST VIA