Home / ಲೇಖನಗಳು / ಜಗತ್ತು ಕಂಡ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ಮಹಿಳಾ ವಿಮೋಚಕ ಪ್ರವಾದಿ ಮುಹಮ್ಮದ್(ಸ)

ಜಗತ್ತು ಕಂಡ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ಮಹಿಳಾ ವಿಮೋಚಕ ಪ್ರವಾದಿ ಮುಹಮ್ಮದ್(ಸ)

ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ. ಈ ಭೂಮುಖದ ಮೇಲೆ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ಕಾಲಗಳಲ್ಲಿ ಪ್ರವಾದಿಗಳ ಆಗಮನವಾಗಿದೆ ಎಂಬುದು ಮುಸಲ್ಮಾನರ ವಿಶ್ವಾಸದ ಭಾಗವಾಗಿದೆ. ಸುಮಾರು ಒಂದುಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದಿರುವರೆಂದು ವರದಿಯಿದೆ. ಪ್ರವಾದಿ ಮುಹಮ್ಮದ್(ಸ) ರು ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ.

ಜಾಗತಿಕ ಮುಸಲ್ಮಾನರು ರಬಿಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ರನ್ನು ಅತಿ ಹೆಚ್ಚು ಸ್ಮರಿಸುವುದನ್ನು, ಗುಣಗಾನ ಮಾಡುವುದನ್ನು ಕಾಣಬಹುದು. ರಬಿಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ರ ಜನನವಾಗಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ.

ಎಲ್ಲ ಕಾಲಗಳಲ್ಲಿಯೂ ಹೆಣ್ಣು ಪುರುಷನ ಪಾಲಿಗೆ ಕೇವಲ ಭೋಗದ ವಸ್ತುವಾದಾಗ, ಮಾರಾಟದ ಸರಕಾದಾಗ, ಪುರುಷಪ್ರಧಾನ ವ್ಯವಸ್ಥೆಯ ಪ್ರಭಾವಕ್ಕೆ ಒಳಗಾಗಿ ಶೋಷಣೆಗೆ ಒಳಗಾದಾಗ ಪ್ರವಾದಿಗಳ ಆಗಮನವಾಗಿದೆ. ಸುಮಾರು ಸಾವಿರದ ಐನೂರು ವರ್ಷಗಳ ಹಿಂದೆ ಮರುಭೂಮಿ ಪ್ರದೇಶವಾಗಿದ್ದ ಮಕ್ಕಾದಲ್ಲಿ ಹೆಣ್ಣು ಮಕ್ಕಳ ಬದುಕುವ ಹಕ್ಕನ್ನೇ ಕಸಿಯಲಾಗಿತ್ತು. ಯಾರಾದರೂ ಗರ್ಭಿಣಿಯಾಗಿದ್ದರೆ ಮೊದಲೇ ಗುಂಡಿ ತೋಡಿ ಸಿದ್ದಪಡಿಸಲಾಗುತ್ತಿತ್ತು. ಹೆಣ್ಣು ಮಗುವಾದರೆ ಅಪಶಕುನವೆಂದು ಬಗೆದು ತಂದೆಯಾದವನು ಅವಮಾನ ಸಹಿಸಲಾರದೆ ಗುಂಡಿಗೆ ಹಾಕಿ ಮುಚ್ಚಿಬಿಡುತ್ತಿದ್ದನು. ಒಬ್ಬ ಪುರುಷನಿಗೆ ಹತ್ತಕ್ಕಿಂತ ಹೆಚ್ಚು ಪತ್ನಿಯರಿದ್ದರು.ಅವರೊಂದಿಗೆ ಮೃಗಗಳಿಗಿಂತ ಹೀನಾಯವಾಗಿ ವರ್ತಿಸಲಾಗುತ್ತಿತ್ತು. ಹೊಡೆಯಲಾಗುತ್ತಿತ್ತು. ಪತ್ನಿಯರ ಮಧ್ಯೆ ನ್ಯಾಯಪಾಲಿಸುತ್ತಿರಲಿಲ್ಲ. ಬೇರೆಯವರನ್ನು ಮದುವೆಯಾಗದಂತೆ ವಿಚ್ಛೇದನವನ್ನೂ ನೀಡದೆ ತ್ರಿಶಂಕು ಸ್ಥಿತಿಯಲ್ಲಿಡುತ್ತಿದ್ದರು. ತಂದೆಯ ಪತ್ನಿ (ಮಲತಾಯಿ)ಯೊಂದಿಗೆ ವ್ಯಭಿಚಾರ ಎಸಗುತ್ತಿದ್ದರು. ವಾರೀಸುಸೊತ್ತಿನಲ್ಲಿ ಮಹಿಳೆಯರಿಗೆ ಪಾಲಿರಲಿಲ್ಲ. ಬಡ್ಡಿಯ ಗುಲಾಮಗಿರಿಯು ಯಾವ ಮಟ್ಟದಲ್ಲಿ ಹೆಣ್ಣನ್ನು ಶೋಷಣೆಗೆ ಒಳಪಡಿಸುತ್ತಿತ್ತೆಂದರೆ ಸಾಲ ಮರುಪಾವತಿಗಾಗಿ ತನ್ನ ಹೆಂಡತಿಯನ್ನು ಬಡ್ಡಿಸಾಹುಕಾರನಿಗೆ ಕೊಟ್ಟುಬಿಡುತ್ತಿದ್ದರು.

ಓದು ಬರಹ ಬಾರದ ನಿರಕ್ಷರಿಗಳಾಗಿದ್ದ, ಅಜ್ಞಾನಿಗಳಾಗಿದ್ದ ಅರಬರ ಮಧ್ಯೆ ಮುಹಮ್ಮದ್(ಸ) ರ ಜನನವಾಗಿತ್ತು. ಒಮ್ಮೆಯೂ ಸುಳ್ಳು ಹೇಳದ ಕಾರಣ ಮುಹಮ್ಮದರನ್ನು ಸತ್ಯಸಂಧ, ಪ್ರಾಮಾಣಿಕ (ಅಲ್ ಅಮೀನ್) ಎಂಬ ಬಿರುದಿನಿಂದ ಜನ ಕರೆಯುತ್ತಿದ್ದರು. ಅರಬ್ ಗೋತ್ರ ಗೋತ್ರಗಳ ಮಧ್ಯೆ ಸ್ವಪ್ರತಿಷ್ಟಗಾಗಿ,ಸಣ್ಣಪುಟ್ಟ ವಿಷಯಗಳಿಗಾಗಿ ಯುದ್ಧ ನಡೆಯುತ್ತಿತ್ತು. ಮಕ್ಕಾ ನಗರ ದ್ವೇಷದ,ಪ್ರತೀಕಾರದ ಬೆಂಕಿಯಿಂದ ಸರ್ವನಾಶವಾಗುವ ಭೀತಿಯನ್ನು ಎದುರಿಸುತ್ತಿತ್ತು. ಮಹಿಳೆಯರು ವಿಧವೆಯರಾಗುತ್ತಿದ್ದರು. ಮಕ್ಕಳು ಅನಾಥರಾಗುತ್ತಿದ್ದರು. ದರೋಡೆಕೋರರಿಂದ ಸ್ತ್ರೀಯರ ಅಪಹರಣವಾಗುತ್ತಿತ್ತು. ಕಣ್ಣೆದುರೇ ಕಾಣುವ ಘಟನಾವಳಿಗಳು ಯುವಕರಾಗಿದ್ದ ಮುಹಮ್ಮದ್(ಸ) ರನ್ನು ಚಿಂತೆಗೀಡುಮಾಡಿತ್ತು. ಸದಾ ಯೋಚನಾಮಗ್ನರಾಗಿರುತ್ತಿದ್ದರುಸಮಾಜದ ಸಮಸ್ಯೆಗಳಿಗೆ ಪರಿಹಾರ ಸಿಗದೆ ಸದಾ ಖಿನ್ನರಾಗಿರುತ್ತಿದ್ದರು. ಹೆಚ್ಚಿನ ಸಮಯವನ್ನು ಹಿರಾಬೆಟ್ಟದಲ್ಲಿ ಧ್ಯಾನಾಸಕ್ತರಾಗುತ್ತಾ ಕಳೆಯುತ್ತಿದ್ದರು. ಪ್ರಿಯ ಪತ್ನಿ ಖದೀಜ (ರ) ಹಿರಾಬೆಟ್ಟಕ್ಕೆ ಆಹಾರ ತಲುಪಿಸುತ್ತಿದ್ದರು.

ಒಮ್ಮೆ ಹಿರಾಬೆಟ್ಟದಲ್ಲಿ ಧ್ಯಾನಾಸಕ್ತರಾಗಿದ್ದಾಗ ಹಿಂದಿನ ಪ್ರವಾದಿಗಳ ಬಳಿಗೆ ಬಂದ ದೇವಚರ ಜಿಬ್ರೀಲರ ಆಗಮನವಾಗುತ್ತದೆ. ಆಗ ಮುಹಮ್ಮದರಿಗೆ ವಯಸ್ಸು ನಲ್ವತ್ತು.
“ಓದಿರಿ” ಎಂಬ ಸೂಕ್ತದೊಂದಿಗೆ ಆರಂಭವಾದ ದಿವ್ಯವಾಣಿಯು ಅಜ್ಞಾನದ ಅಂಧಕಾರದಲ್ಲಿ ಜ್ಞಾನದ ಬೆಳಕಾಗಿ ಮಾರ್ಪಟ್ಟಿತು. ನಿರಂತರ ಇಪ್ಪತ್ತಮೂರು ವರ್ಷಗಳ ದಿವ್ಯವಾಣಿಯ ಅವತರಣವು ಮಕ್ಕಾದ ಜನರನ್ನು ಆಂತರಿಕವಾಗಿ ಸಂಸ್ಕರಿಸಿತು.

ಪ್ರವಾದಿ ಮುಹಮ್ಮದ್(ಸ) ರು ಓರ್ವ ಮಾದರಿ ಶಿಕ್ಷಕರಾಗಿ ಗಂಡು ಮತ್ತು ಹೆಣ್ಣು ಒಬ್ಬ ದೇವನ ಸೃಷ್ಟಿಗಳು. ಗಂಡು ಮತ್ತು ಹೆಣ್ಣು ಒಂದೇ ಜೀವ ಎನ್ನುವ ಮೂಲಕ ಸ್ತ್ರೀಪುರುಷರ ಮಧ್ಯೆ ಸಮಾನತೆಯ ಕಲ್ಪನೆಯನ್ನು ಮೂಡಿಸಿದರು..
“ನಿಮ್ಮ ಪೈಕಿ ತನ್ನ ಮನೆಯ ಸ್ತ್ರೀಯರೊಡನೆ ಉತ್ತಮವಾಗಿರುವವನೇ ಅತ್ತುತ್ತಮನು” ಎಂದು ಹೇಳಿದರು. ಪ್ರಯಾಣದಲ್ಲಿರುವಾಗ ಮಹಿಳೆಯರ ಬಗ್ಗೆ ಮೃದು ಧೋರಣೆ ಅನುಸರಿಸಬೇಕೆಂದು ಕಲಿಸಿಕೊಟ್ಟರು. ಮುಹಮ್ಮದ್(ಸ) ರ ಶಿಕ್ಷಣದಿಂದ ಮನೆಯ ಒಳಗೂ ಹೊರಗೂ ಸ್ತ್ರೀಯರು ಗೌರವದಿಂದ ಬದುಕುವಂತಾಯಿತು.
ಹೆಣ್ಣುಮಕ್ಕಳ ಹತ್ಯೆಯನ್ನು (ಭ್ರೂಣಹತ್ಯೆ), ಮಲತಾಯಿಯೊಂದಿಗೆ ಲೈಂಗಿಕ ಸಂಬಂಧವನ್ನು ಮಹಾಪರಾಧವೆಂದು ಸಾರಿದರು. ಜನರಲ್ಲಿ ಈ ಬಗ್ಗೆ ಪಾಪಪ್ರಜ್ಞೆ ಮೂಡಿತು. ಹಿಂದೆ ಮಾಡಿದ ತಪ್ಪಿಗೆ ಜನರು ಪಶ್ಚಾತ್ತಾಪಪಟ್ಟರು.

ವಾರೀಸು ಸೊತ್ತಿನಲ್ಲಿ ಹೆಣ್ಣಿನ ಪಾಲನ್ನು ನಿಶ್ಚಯಿಸಿದರು. ಹೆಣ್ಣುಮಕ್ಕಳ ಪಾಲನೆ ಪೋಷಣೆ ಮಾಡಿ ಅತ್ಯುತ್ತಮ ಶಿಕ್ಷಣ ತರಬೇತಿ ನೀಡಿದವರಿಗೆ ಮತ್ತು ಹೆಣ್ಣು ಮಕ್ಕಳೊಡನೆ ನ್ಯಾಯ ಪಾಲಿಸಿದವರಿಗೆ ಸ್ವರ್ಗ ಖಚಿತವೆಂದು ಹೇಳಿದರು.

ವಿಧವೆಯರ ಸಂರಕ್ಷಣೆ ಅತ್ತುತ್ತಮ ದಾನವಾಗಿದೆ ಎನ್ನುವ ಮೂಲಕ ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಯುವಕರು ಕೂಡ ವಿಧವೆಯನ್ನು ಮದುವೆಯಾಗಲು ಮುಂದೆ ಬಂದರು.

ಹತ್ತಕ್ಕಿಂತ ಹೆಚ್ಚು ವಿವಾಹವಾಗುವ ಅರಬರ ಸಂಪ್ರದಾಯವನ್ನು ಕೊನೆಗೊಳಿಸಿ ಪತ್ನಿಯ ಸಂಖ್ಯೆಯನ್ನು ಒಂದಕ್ಕೆ ಇಳಿಸಲಾಯಿತು. ನ್ಯಾಯಪಾಲನೆಯ ಶರ್ತದೊಂದಿಗೆ ಹೆಚ್ಚೆಂದರೆ ನಾಲ್ಕು ಮದುವೆಯ ಅನುಮತಿ ನೀಡಲಾಯಿತು. ಪತ್ನಿಯರ ನಡುವೆ ನ್ಯಾಯಪಾಲನೆ ಸಾಧ್ಯವಾಗದವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದರು.

“ಆದರೆ ಅವರೊಂದಿಗೆ ನ್ಯಾಯಪಾಲಿಸಲಾರಿರೆಂಬ ಆಶಂಕೆ ನಿಮಗಿದ್ದರೆ ಒಬ್ಬ ಸ್ತ್ರೀಯನ್ನು ಮಾತ್ರ (ವಿವಾಹವಾಗಿರಿ)”(ಪವಿತ್ರಕುರ್ ಆನ್: ಅನ್ನಿಸಾ)

ವಿವಾಹದ ಸಂದರ್ಭದಲ್ಲಿ ಹೆಣ್ಣಿನ ಅನುಮತಿಯನ್ನು ಖಡ್ಡಾಯಗೊಳಿಸಿದರು. ಮಹಿಳೆ ತಾನು ವಿವಾಹವಾಗುವ ಪುರುಷನೊಂದಿಗೆ ಮೆಹರ್ (ವಧುದಕ್ಷಿಣೆಯ) ನ ಬೇಡಿಕೆಯನ್ನು ಇಡುವ ಸ್ವಾತಂತ್ರ್ಯ ನೀಡಲಾಯಿತು. ವಿವಾಹವಾಗುವ ಪುರುಷನು ಹೆಣ್ಣಿಗೆ ಮೆಹರ್ (ವಧುದಕ್ಷಿಣೆ)ನೀಡುವುದನ್ನು ಖಡ್ಡಾಯಗೊಳಿಸಿದ ಕಾರಣ ಹೆಣ್ಣು ಸ್ವಾಭಿಮಾನದಿಂದ ಬದುಕುವಂತಾಯಿತು. ವಿವಾಹದ ಸಂದರ್ಭ ಮಹ್ರ್ (ವಧುದಕ್ಷಿಣೆ)ನ್ನು ಹೆಣ್ಣಿನ ತಂದೆಗೆ ಕೊಡುವಂತಿಲ್ಲ. ವಧುವಿನ ಕೈಯ್ಯಲ್ಲಿ ಕೊಡಬೇಕು ಮಾತ್ರವಲ್ಲ ಅವಳು ಇಷ್ಟಬಂದಂತೆ ಅದನ್ನು ಖರ್ಚುಮಾಡುವ ಸ್ವಾತಂತ್ರ್ಯ ನೀಡಲಾಯಿತು.

ಸ್ತ್ರೀಯರಿಗೆ ‘ವಿವಾಹಧನ’ವನ್ನು ಆತ್ಮ ಸಂತೋಷದಿಂದ (ಕಡ್ಡಾಯವೆಂದರಿತು) ಪಾವತಿ ಮಾಡಿರಿ.
(ಪವಿತ್ರಕುರ್ ಆನ್: ಅನ್ನಿಸಾ)

ಓರ್ವ ವ್ಯಕ್ತಿ ವಿವಾಹವಾಗದೆ ವ್ಯಭಿಚಾರಕ್ಕೆ ಅನುಮತಿ ಕೇಳಿದಾಗ ಪ್ರವಾದಿ ಮುಹಮ್ಮದ್(ಸ) ರು ನೀಡಿದ ಉಪದೇಶ ಕಲ್ಲುಹೃದಯವನ್ನೂ ಕರಗಿಸಿತು.
ಪ್ರತಿಯೊಬ್ಬ ಹೆಣ್ಣು ಇನ್ನೊಬ್ಬನ ತಾಯಿಯಾಗಿರಬಹುದು. ಸಹೋದರಿಯಾಗಿರಬಹುದು. ನೀನು ನಿನ್ನ ತಾಯಿ,ಸಹೋದರಿಯೊಂದಿಗೆ ಯಾರಾದರೂ ವ್ಯಭಿಚಾರ ಎಸಗುವುದನ್ನು ಇಷ್ಟಪಡುವೆಯಾ? ಆತ ನಿರುತ್ತರನಾಗುತ್ತಾನೆ.
ವಿವಾಹದಂತಹ ಪವಿತ್ರ ಬಂಧದ ಪ್ರಾಮುಖ್ಯತೆಯನ್ನು ಸಮಾಜಕ್ಕೆ ಬೋಧಿಸುವ ಮೂಲಕ ಹೆಣ್ಣು ನಿರ್ಭೀತಿಯಿಂದ ಸಂಚರಿಸುವಂತೆ ಮಾಡಿದರು.

ಸತಾಯಿಸಲ್ಪಡುವ ಕಾರಣಕ್ಕಾಗಿ ದಾಂಪತ್ಯ ಜೀವನವನ್ನು ತ್ರಿಶಂಕು ಸ್ಥಿತಿಯಲ್ಲಿಡದಂತೆ ಪುರುಷರಿಗೆ ವಿಚ್ಛೇದನ(ತಲಾಕ್ )ದ ನಿಯಮವನ್ನೂ, ಸ್ರೀಯರಿಗೆ ಖುಲಾ(ಬೀಳ್ಕೊಡುಗೆ)ದ ನಿಯಮವನ್ನೂ ಕಲಿಸಿಕೊಡಲಾಯಿತು. ಮುಹಮ್ಮದ್(ಸ) ರು ಸ್ತ್ರೀಪುರುಷರ ಪಾಲಿಗೆ ಆಪ್ತ ಸಮಾಲೋಚಕರಾಗಿದ್ದರು.

ಮೆಹರ್ ಮತ್ತು ವಾರೀಸುಸೊತ್ತು ಹೆಣ್ಣಿನ ಸ್ವಂತ ಸೊತ್ತಾಗಿದ್ದು ಮಹಿಳೆಯರಿಗೆ ವ್ಯಾಪಾರದಲ್ಲಿ ಬಂಡವಾಳವನ್ನು ಹೂಡಲು ಪ್ರೇರಕವಾಯಿತು. ಹೆಣ್ಣು ಆರ್ಥಿಕವಾಗಿ ಸಬಲಳಾದಳು.

ಅಕ್ರಮ ವ್ಯಾಪಾರ(ಬಡ್ಡಿ) ಮತ್ತು ಪ್ರಾಮಾಣಿಕ ವ್ಯಾಪಾರದ ವ್ಯತ್ಯಾಸವನ್ನು ತಿಳಿಸುವ ಮೂಲಕ ಬಡ್ಡಿಯ ಗುಲಾಮಗಿರಿಯಿಂದ ಸಮಾಜವನ್ನು ಮುಕ್ತಗೊಳಿಸಿದರು.ಇದರ ಪ್ರಯೋಜನವನ್ನು ಮಹಿಳೆಯರು ಪಡೆಯುವಂತಾಯಿತು. ಗಂಡನು ಬಡ್ಡಿಯ ಸಾಲ ತೀರಿಸಲಾಗದೆ ಸಾಲದ ಮರುಪಾವತಿಗಾಗಿ ಪತ್ನಿಯನ್ನು ಕೊಟ್ಟುಬಿಡುವ,ದಯೆಯಿಲ್ಲದ ದುಷ್ಟ ಪದ್ಧತಿಗೆ ಕಡಿವಾಣ ಬಿತ್ತು.
“ತಾಯಿಯ ಸೇವೆ ತಂದೆಗಿಂತ ಮೂರು ಪಟ್ಟು ಹೆಚ್ಚು” ಎನ್ನುವ ಮೂಲಕ ಪ್ರವಾದಿ ಮುಹಮ್ಮದ್(ಸ) ರು ಹೆಣ್ಣಿಗೆ ಉನ್ನತವಾದ ಸ್ಥಾನಮಾನವನ್ನು ನೀಡಿದರು.

ಹೆಣ್ಣಿಗೆ ಆತ್ಮವೇ ಇಲ್ಲ,ಹೆಣ್ಣು ಅಪಶಕುನ, ಪ್ರಾಣಿಗಳಿಗಿಂತಲೂ ನಿಕೃಷ್ಟವೆಂದು ಭಾವಿಸಿ ಹೆಣ್ಣಿನ ಬದುಕುವ ಹಕ್ಕನ್ನು ಕಸಿದುಕೊಂಡಿದ್ದ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಬೆಳೆದು,ಶಿಕ್ಷಣಗಳಿಸಿ, ವ್ಯಾಪಾರಸ್ಥಳಾಗಿ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಿ, ದೊಡ್ಡ ದೊಡ್ಡ ಆಧಿಕಾರಿಗಳ ಮುಂದೆ ನಿಂತು ಸಲಹೆ,ಸೂಚನೆಗಳನ್ನು ನೀಡುವ,ಆಡಳಿತದ ಭ್ರಷ್ಟಾಚಾರವನ್ನು ಪ್ರಶ್ನಿಸುವ,ಧಾರ್ಮಿಕ ವಿಷಯಗಳಲ್ಲಿ ಫತ್ವಾ ನೀಡುವ ಪಂಡಿತಳಾಗಿ ಮಾರ್ಪಡಿಸಿದ ಮುಹಮ್ಮದ್ ಸ.ಅ ಯಥಾರ್ಥ ಮಹಿಳಾಪರಹೋರಾಟಗಾರ. ಮಾನವತೆಯ ಶಿಲ್ಪಿಯಾಗಿರುವ ಹೆಣ್ಣನ್ನು ಗೌರವಿಸಿ ಆಕೆಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿದರು.ಅವರ ಮೇಲೆ ಶಾಂತಿ ಇರಲಿ.

ಶಮೀರ ಜಹಾನ್
ಮಂಗಳೂರು

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …