Home / ಲೇಖನಗಳು / ದುಬೈಯಿಂದ ಬಂದಿಳಿದ ಪ್ರಯಾಣಿಕರೆಲ್ಲ ಮುಸ್ಲಿಮರೇ!- ಅಂಕಿ-ಅಂಶಗಳು ಹೇಳುವ ಕತೆಯೇ ಬೇರೆ

ದುಬೈಯಿಂದ ಬಂದಿಳಿದ ಪ್ರಯಾಣಿಕರೆಲ್ಲ ಮುಸ್ಲಿಮರೇ!- ಅಂಕಿ-ಅಂಶಗಳು ಹೇಳುವ ಕತೆಯೇ ಬೇರೆ

-ರಶೀದ್ ವಿಟ್ಲ

ದುಬೈಯಿಂದ 179 ಪ್ರಯಾಣಿಕರನ್ನು ತುಂಬಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಮೇ12 ರಂದು ರಾತ್ರಿ ಮಂಗಳೂರಿಗೆ ತಲುಪಿದೆ. ಬಂದಿರುವ 21 ಪ್ರಯಾಣಿಕರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ವರದಿ ಪ್ರಕಟವಾಗಿದ್ದು ಆತಂಕ ತಂದಿದೆ.

ದುಬೈ ಎಂದಾಕ್ಷಣ ಅರಬ್ ರಾಷ್ಟ್ರ, ಮುಸ್ಲಿಂ ರಾಷ್ಟ್ರ ಎಂಬ ಕಲ್ಪನೆ ಸಾಮಾನ್ಯ. ಅಲ್ಲಿಂದ ಬಂದಂತಹ ಬಹುತೇಕ ಮಂದಿ ಮುಸ್ಲಿಮರು ಎಂಬ ಊಹೆ ಇಟ್ಟುಕೊಂಡು ಕೆಲವರು ಅಪಪ್ರಚಾರ ಮಾಡುವ ಸಾಧ್ಯತೆ ಇದೆ.

ಇದೀಗಾಗಲೇ ಖಾಸಗಿ ಆಸ್ಪತ್ರೆಯೊಂದರಿಂದಾಗಿ ಜಿಲ್ಲಾದ್ಯಂತ ಕೊರೋನಾ ಹಬ್ಬಿದ್ದು, ಐದು ಜನರ ಸಾವಿಗೆ ಕಾರಣವಾದ ಸುದ್ದಿಯ ಬಿಸಿ ತಣಿಯುವ ಮೊದಲೇ ದುಬೈ ವಿಮಾನದಲ್ಲಿ ಬಂದ ದಕ್ಷಿಣ ಕನ್ನಡ ಮೂಲದ 14, ಉತ್ತರ ಕನ್ನಡದ 1 ಹಾಗೂ ಉಡುಪಿ ಜಿಲ್ಲೆಯ 6 ಪ್ರಯಾಣಿಕರಿಗೆ ಸೋಂಕು ದೃಢ ಪಟ್ಟಿದೆ.

ಮುಂದಿನ ದಿನಗಳಲ್ಲಿ ಹಿಂದಿನ ಎಲ್ಲಾ ಘಟನೆಗಳನ್ನು ಮರೆ ಮಾಚಲು ದುಬೈ ವಿಮಾನದ ನೆಪದಲ್ಲಿ “ದುಬೈ ಕೊರೋನಾ” ಅಥವಾ “ಅರಬ್ ಕೊರೋನಾ” ಎಂಬ ಲೇಬಲ್ ಬೀಳಬಾರದೆಂಬ ಹಿತದೃಷ್ಟಿಯಿಂದ ವಿಮಾನದಲ್ಲಿ ಬಂದಿರುವ ಪ್ರಯಾಣಿಕರ ಜಾತಿವಾರು ಅಂಕಿ ಅಂಶವನ್ನು ಇಲ್ಲಿ ಪ್ರಕಟಿಸಲಾಗಿದೆ.

ವಿಮಾನದಲ್ಲಿದ್ದ 179 ಸದಸ್ಯರಲ್ಲಿ 81 ಹಿಂದೂ ಬಾಂಧವರು, 58 ಮುಸ್ಲಿಮರು ಹಾಗೂ 40 ಕ್ರೈಸ್ತರು ಇದ್ದರು. ಆದರೆ ಇಷ್ಟು ಪ್ರಯಾಣಿಕರಲ್ಲಿ ಯಾರಿಗೆ ಕೊರೋನಾ ಪಾಸಿಟಿವ್ ಅನ್ನುವುದು ಪ್ರಕಟಿಸಬಾರದೆಂಬ ನಿಯಮವಿದೆ. ಪಾಸಿಟಿವ್ ಆದವರ ಹೆಸರು ಬಹಿರಂಗ ಪಡಿಸಬಾರದೆಂಬ ಆದೇಶವಿದೆ. ಕೊರೋನಾ ವೈರಸ್ ಜಾತಿ-ಧರ್ಮ, ವರ್ಣ-ಲಿಂಗ, ಮೇಲು-ಕೀಳು, ಬಡವ-ಶ್ರೀಮಂತ ನೋಡಿ ಬರುವುದಿಲ್ಲ ಎನ್ನುವುದು ಜಗತ್ತು ಸಾಬೀತು ಪಡಿಸಿದೆ. ಆದರೂ ಕೆಲವು ಮಾದ್ಯಮಗಳು ಈಗಾಗಲೇ ತಬ್ಲೀಗ್, ಅಜ್ಮೀರ್, ನಮಸ್ತೆ ಟ್ರಂಪ್ ಮೊದಲಾದ ಹೆಸರಿಟ್ಟು ಧರ್ಮದ ಲೇಪನ ನೀಡಿದ್ದು ದುರಂತ.

ಮುಂದಿನ ದಿನಗಳಲ್ಲಿ ‘ರಮಝಾನ್ ಕೊರೋನಾ’ ಬರಬಾರದೆಂಬ ಹಿನ್ನೆಲೆಯಲ್ಲಿ ಇದೀಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ರಮಝಾನ್ ಹಬ್ಬದ ಶಾಪಿಂಗ್ ಮಾಡದೇ ಸ್ವಯಂ ಜಾಗೃತಿ ಮೂಡಿಸಿದ್ದಾರೆ. ಮುಸ್ಲಿಂ ವ್ಯಾಪಾರಸ್ಥರು ಹಬ್ಬ ಮುಗಿಯುವ ತನಕ ಸ್ವಯಂ ಪ್ರೇರಿತ ಬಂದ್ ಮಾಡಿ ಮಾದರಿಯಾಗಿದ್ದಾರೆ. ಇದಕ್ಕೆ ಕೆಲವು ಕಡೆ ಹಿಂದೂ ಬಾಂಧವರೂ ಪ್ರೋತ್ಸಾಹ ನೀಡಿದ್ದಾರೆ.

ಇದೀಗ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಕೊರೋನಾ ವ್ಯಾಪಕವಾಗಿ ಹರಡಿದ್ದು ದೊಡ್ಡ ಸುದ್ದಿಯಾಗಿದೆ. ಅದರ ಬೆನ್ನಿಗೇ ದುಬೈ ಪ್ರಯಾಣಿಕರ ವರದಿಯೂ ಬಂದಿದೆ. ವಿಮಾನದಲ್ಲಿ ಏನೋ ಎಡವಟ್ಟು ನಡೆದಿದೆಯೋ ಅಥವಾ ವಿಮಾನದ ಹವಾ ನಿಯಂತ್ರಣದಲ್ಲಿ ಕೊರೋನಾ ಹರಡುತ್ತದೆಯೋ ಎಂಬ ಗೊಂದಲ ಮೂಡಿದೆ. ಏನಿದ್ದರೂ ಕೊರೋನಾ ದೇಹಕ್ಕೆ ಅಂಟಿ ಜೀವಂತವಾಗಿ ಕಾರ್ಯಾಚರಿಸಬೇಕಾದರೆ ಕೆಲವು ದಿನಗಳು ಬೇಕೆಂದು ತಜ್ಞರು ಹೇಳುತ್ತಾರೆ. ದುಬೈಯಿಂದ ಹೊರಡುವಾಗ ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿಯೂ ಸಿಕ್ಕಿಲ್ಲ. ಒಟ್ಟಿನಲ್ಲಿ ಆದಷ್ಟು ಜಾಗೃತರಾಗೋಣ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …