Home / ಲೇಖನಗಳು / ಬಹುಪತ್ನಿತ್ವ

ಬಹುಪತ್ನಿತ್ವ

ಇಂದು ಬಹುಪತ್ನಿತ್ವವನ್ನು ಮಹಿಳೆಯ ಅಪಮಾನವೆಂದು ಪರಿಗಣಿಸಲಾಗುತ್ತದೆ. ಇಸ್ಲಾಮಿನ ವಿಧಿ ನಿಯಮಗಳ ಪೈಕಿ ಪುರುಷರಿಗೆ ನಾಲ್ಕು ವಿವಾಹವಾಗುವ ಅನುಮತಿಯು ಅತ್ಯಧಿಕ ಟೀಕೆಗೆ ಗುರಿಯಾಗಿದೆ. ಇದು ಮಹಿಳಾ ಸ್ವಾತಂತ್ರ್ಯ ಮತ್ತು ಸ್ತ್ರೀ-ಪುರುಷ ಸಮಾನತೆಗೆ ವಿರುದ್ಧವಾಗಿದೆಯೆಂದು ಹೇಳಲಾಗುತ್ತದೆ. ಇದರಿಂದ ಇಸ್ಲಾವಿೂ ಸಮಾಜದಲ್ಲಿ ಸ್ತ್ರೀಯನ್ನು ಕೇವಲ ಭೋಗ ವಸ್ತುವೆಂದು ಪರಿಗಣಿಸಲಾಗಿದೆಯೆಂದು ಸಾಬೀತು ಪಡಿಸಲು ಪ್ರಯತ್ನಿಸಲಾಗು ತ್ತದೆ. ಆದರೆ ವಸ್ತುಸ್ಥಿತಿಯು ಇದಕ್ಕೆ ತೀರಾ ಭಿನ್ನವಾಗಿದೆ.

ಇಸ್ಲಾಮ್ ಸ್ತ್ರೀಯನ್ನು ತಾಯಿ, ಮಗಳು, ಸೋದರಿ, ಪತ್ನಿ ಮತ್ತು ಸೊಸೆಯ ರೂಪಗಳಲ್ಲಿ ಕಾಣುತ್ತದೆ. ಈ ಎಲ್ಲ ರೂಪಗಳಲ್ಲಿಯೂ ಆಕೆ ಸನ್ಮಾನಿತ, ಸುರಕ್ಷಿತ ಮತ್ತು ಪವಿತ್ರಳಾಗಿದ್ದಾಳೆ. ಆದರೆ ಅಜ್ಞಾನ ಕಾಲದ ಅನಾಗರಿಕರಂತೆ ಇಂದಿನ ಪ್ರಗತಿಪರರೆನಿಸಿದವರು ಕೂಡಾ ಸ್ವಾವಲಂಬನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಹೆಸರಲ್ಲಿ ಆಕೆಯ ಸ್ಥಿತಿಯನ್ನು ಬದಲಾಯಿಸಿ ಆಕೆಯನ್ನು ‘ಭೋಗದ ವಸ್ತು’ ಮತ್ತು ‘ಜಾಹೀರಾತಿನ ಮಾಧ್ಯಮ’ವಾಗಿ ಮಾರ್ಪಡಿಸಿದ್ದಾರೆ. ಇಂದು ಪ್ರಗತಿಯ ಹೆಸರಲ್ಲಿ ಆಕೆಗೆ ಆಗುವಷ್ಟು ಅಗೌರವ, ಅವಮಾನ ಮತ್ತು ಅನ್ಯಾಯ ಹಿಂದೆಂದೂ ಆಗಿರಲಾರದು. ‘ಭೋಗದ ವಸ್ತು’ ವೆಂಬ ಹೊರತು ಆಕೆಯ ಇತರೆಲ್ಲ ಗೌರವಾರ್ಹ ಪಾತ್ರಗಳು ಗೌಣವಾಗಿದೆ. ಈ ಪರಿಸ್ಥಿತಿಗೆ ಎರಡು ಕಾರಣಗಳಿರಲು ಸಾಧ್ಯ. ಒಂದೋ ಪುರುಷನು ಅಧಿಕ ಕಾಮುಕನಾಗುತ್ತಿದ್ದಾನೆ ಅಥವಾ ಆತನ ಲೈಂಗಿಕ ಬಯಕೆಯ ಈಡೇರಿಕೆಗಿರುವ ಧರ್ಮಸಮ್ಮತ ಮಾರ್ಗಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಸ್ತ್ರೀಯರನ್ನು ಸ್ವೇಚ್ಛಾವಿಹಾರಿಗಳಾಗಿ ಮಾಡಿ ಅದರಿಂದ ಪುರುಷನು ತನ್ನ ಕಾಮಾಸಕ್ತಿಯನ್ನು ತಣಿಸುತ್ತಿದ್ದಾನೆ.

ವೇಶ್ಯಾವಾಟಿಕೆ
ವೇಶ್ಯಾವಾಟಿಕೆಯು ಇಂದು ಸಾಮಾನ್ಯವಾಗಿದೆ. ಎಲ್ಲ ನಗರಗಳಲ್ಲೂ ಕೆಂಪು ದೀಪ ಪ್ರದೇಶಗಳು ಬೆಳೆಯುತ್ತಿವೆ. ಹೆಚ್ಚಿನ ವಸತಿ ಗೃಹಗಳು, ಹೋಟೆಲ್‍ಗಳು, ನೈಟ್ ಕ್ಲಬ್‍ಗಳು ಕೂಡಾ ವ್ಯಭಿಚಾರದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಹಿಂದೊಮ್ಮೆ ಕೇವಲ ಮಹಾ ನಗರಗಳಿಗೆ ಸೀಮಿತವಾಗಿದ್ದ ಈ ಪಿಡುಗು ಇಂದು ಹಳ್ಳಿ ಪಟ್ಟಣವೆಂಬ ಭೇದವಿಲ್ಲದೆ ಸಾರ್ವತ್ರಿಕವಾಗಿದೆ. ಲಕ್ಷಾಂತರ ಯುವತಿಯರು ಈ ನೀಚ ಕೃತ್ಯವನ್ನು ಕಸುಬಾಗಿ ಮಾಡಿ ಕೊಂಡಿದ್ದಾರೆ. ಯುವಕರಿಂದ ಮುದುಕರ ವರೆಗೆ ಎಲ್ಲ ಪ್ರಾಯದ ಲಕ್ಷಾಂತರ ಮಂದಿ ದಿನನಿತ್ಯ ಈ ಮಾರುಕಟ್ಟೆಯ ಗ್ರಾಹಕರಾಗುತ್ತಿದ್ದಾರೆ.

ಈ ನಗ್ನಸತ್ಯವು ನಮ್ಮ ಮಟ್ಟಿಗೆ ಅಪಮಾನಕರ. ಸಮಾಜಕ್ಕೆ ಕಳಂಕ ಮತ್ತು ಸ್ತ್ರೀ ಕುಲಕ್ಕೆ ಶಾಪವಾಗಿದೆ. ಸಾಮಾನ್ಯವಾಗಿ ಬಡತನವೇ ಸ್ತ್ರೀಯರು ವೇಶ್ಯಾವಾಟಿಕೆಗೆ ಇಳಿಯು ವುದಕ್ಕೆ ಕಾರಣವೆನ್ನಲಾಗುತ್ತದೆ. ಆದರೆ ಓರ್ವ ‘ಕಾಲ್ ಗರ್ಲ್’ ಪತ್ರಕರ್ತರೊಬ್ಬರಿಗೆ ಈ ಕುರಿತು ನೀಡಿದ ಕಾರಣ ಗಮನಾರ್ಹವಾಗಿದೆ: “ನಾವು ಈ ವೃತ್ತಿಯಲ್ಲಿಲ್ಲದಿರುತ್ತಿದ್ದರೆ ಹಾಡುಹಗಲಲ್ಲೇ ನಿಮ್ಮ ಸೋದರಿಯರ ಮತ್ತು ಹೆಣ್ಣು ಮಕ್ಕಳ ಮಾನಹರಣ ಆಗುತ್ತಿತ್ತು.” ಇದು ಇಂದಿನ ವಾತಾವರಣದ ಕಟು ವಾಸ್ತವಿಕತೆಯಾಗಿದೆ.

ಈ ಪರಿಸ್ಥಿತಿಗೆ ಒಂದು ಕಾರಣ ಪುರುಷರು ಸ್ತ್ರೀಯರಿಗಿಂತ ಹೆಚ್ಚು ಕಾಮಾಸಕ್ತಿಯನ್ನು ಹೊಂದಿರುವುದಾಗಿದೆ. ಇಂದಿನ ಸ್ತ್ರೀಯರಲ್ಲಿ ವ್ಯಾಪಕವಾಗಿರುವ ಸ್ವಚ್ಛಂದತೆ, ನಗ್ನತೆ ಮತ್ತು ಅಶ್ಲೀಲತೆಯು ಈ ಸುಪ್ತ ಲೈಂಗಿಕ ತೃಷೆಯನ್ನು ಇನ್ನಷ್ಟು ಕೆರಳಿಸುತ್ತದೆ. ಇದರಿಂದ ಆರ್ಥಿಕ ಲಾಭ ಪಡೆಯುವ ಮಾಧ್ಯಮಗಳು ಕಾಲೇಜು ಹುಡುಗಿಯರನ್ನೂ ನೌಕರಿಯಲ್ಲಿರುವ ತರುಣಿಯರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ‘ಕಾಲ್ ಗರ್ಲ್’ಗಳಾಗಿ ಮಾರ್ಪಡಿಸುತ್ತಿವೆ. ಆಧುನಿಕ ಟಿ.ವಿ., ಸಿನೆಮಾ ಮತ್ತು ಜಾಹೀರಾತುಗಳಲ್ಲಿ ಸ್ತ್ರೀಯನ್ನು ಕೇವಲ ಭೋಗದ ವಸ್ತುವಾಗಿ ಪ್ರದರ್ಶಿಸಲಾಗುತ್ತಿದೆ. ಅರೆನಗ್ನ ನೃತ್ಯಗಳ ಕಾಮಕೇಳಿಯ ದೃಶ್ಯಗಳು, ಮಾನಭಂಗ ಮತ್ತು ಅತ್ಯಾಚಾರದ ಸನ್ನಿವೇಶಗಳನ್ನು ಅತ್ಯಧಿಕ ಪ್ರದರ್ಶಿಸಲಾಗುತ್ತದೆ. ಜೊತೆಗೆ ಮಾದಕ ದ್ರವ್ಯಗಳ ವ್ಯಾಪಕತೆಯು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿದೆ. ಮಾನಭಂಗದ ಪ್ರಕರಣಗಳು ದಿನೇ ದಿನೇ ಏರುತ್ತಿವೆ.

ಎರಡು ಮಾರ್ಗಗಳು

ಪರಸ್ತ್ರೀಯರ ಕಡೆಗೆ ಪುರುಷರ ಆಕರ್ಷಣೆಗೆ ಇನ್ನೊಂದು ಮುಖ್ಯ ಕಾರಣ ಅನೇಕ ಸಂದರ್ಭಗಳಲ್ಲಿ ಪತ್ನಿಯರು ತಮ್ಮ ಪತಿಯಂದಿರ ಲೈಂಗಿಕ ಬಯಕೆಯನ್ನು ಪೂರ್ತಿಗೊಳಿಸುವ ಸ್ಥಿತಿಯಲ್ಲಿಲ್ಲದಿರುವುದಾಗಿದೆ. ಉದಾ: ಅನಾರೋಗ್ಯ, ಬಲಹೀನತೆ, ಸಾಂಕ್ರಾಮಿಕ ರೋಗ, ಆರ್ತವ, ಗರ್ಭಧಾರಣೆ, ಪ್ರಸವ ಇತ್ಯಾದಿ. ಇಂತಹ ಸಂದರ್ಭಗಳಲ್ಲಿ ಅನೇಕ ಪುರುಷರಿಗೆ ತಮ್ಮ ಕಾಮಾಸಕ್ತಿಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆಗ ಆತನಿಗೆ ಇರುವ ಮಾರ್ಗ ಕೇವಲ ಎರಡು. ಒಂದೋ ತನ್ನ ಕಾಮಾಪೇಕ್ಷೆಯನ್ನು ಧರ್ಮಸಮ್ಮತವಾಗಿ ತೀರಿಸಲು ಇನ್ನೊಂದು ಮದುವೆ ಮಾಡಿಕೊಂಡು ಆ ಸ್ತ್ರೀಯ ಎಲ್ಲ ಹೊಣೆಗಾರಿಕೆಗಳನ್ನು ವಹಿಸುವುದು ಅಥವಾ ವ್ಯಭಿಚಾರವೆಸಗಿ ತನ್ನ ಮತ್ತು ಓರ್ವ ಸ್ತ್ರೀಯ ನೈತಿಕತೆಯನ್ನು ಹಾಳು ಮಾಡುವುದು, ಜೊತೆಗೆ ಸಮಾಜಕ್ಕೆ ತುಂಬಲಾರದಷ್ಟು ಹಾನಿ ಮುಟ್ಟಿಸುವುದು. ವ್ಯಭಿಚಾರದ ಮೂಲಕ ಓರ್ವ ಪುರುಷನು ತನ್ನ ಮತ್ತು ಆ ಸ್ತ್ರೀಯ ಮಾನ ಕೆಡಿಸುವುದು ಮಾತ್ರವಲ್ಲ, ಪ್ರಸ್ತುತ ಲೈಂಗಿಕ ಕ್ರಿಯೆಯಿಂದ ಸ್ತ್ರೀಗೆ ಆಗುವ ಯಾವುದೇ ಪರಿಣಾಮದ ಹೊಣೆಯಿಂದಲೂ ಆತನು ಮುಕ್ತನಾಗಿರುತ್ತಾನೆ. ಈ ಎರಡು ಮಾರ್ಗಗಳ ಪೈಕಿ ಧಾರ್ಮಿಕ ಮತ್ತು ನೈತಿಕ ಪ್ರಜ್ಞೆಯಿರುವ ಸಭ್ಯ ನಾಗರಿಕನು ಯಾವುದನ್ನು ಆರಿಸಬೇಕೆಂಬುದು ಸಾಮಾನ್ಯ ಬುದ್ಧಿಗೂ ನಿಲುಕುವ ವಿಷಯವಾಗಿದೆ.

ಸ್ತ್ರೀಯರ ಜೀವನದಲ್ಲಿ ಅವರ ಕಾಮಾಸಕ್ತಿಯು ಕ್ಷಯಿಸುವ ಒಂದು ಕಾಲ ಬರುತ್ತದೆ. ಉದಾ: ಮಕ್ಕಳ ಪಾಲನೆ ಪೋಷಣೆಯಲ್ಲಿ ನಿರತರಾಗಿರುವುದು. ಸಾಮಾನ್ಯವಾಗಿ ಧಾರ್ಮಿಕ ಪ್ರಜ್ಞೆ ಇರುವ ಮಹಿಳೆಯರು ಮಧ್ಯ ವಯಸ್ಸಿಗೆ ತಲುಪಿದಾಗ ಅವರ ಒಲವು ಆಧ್ಯಾತ್ಮಿಕತೆಯತ್ತ ಹೆಚ್ಚಾಗುತ್ತದೆ. ಹಲವು ಸಲ ಗರ್ಭಧಾರಣೆ ಮತ್ತು ಹೆರಿಗೆಯಾಗುವುದರಿಂದಲೂ ಅವರಲ್ಲಿ ಕಾಮಾಸಕ್ತಿಯನ್ನು ಕಡಿಮೆ ಮಾಡುವಂತಹ ಬಲಹೀನತೆ ತಲೆದೋರುತ್ತದೆ. ಪತ್ನಿಯ ಪ್ರೀತಿಯು ಮಕ್ಕಳಲ್ಲಿ ಹಂಚಿ ಹೋಗುವ ಕಾರಣದಿಂದಲೂ ತನ್ನನ್ನು ಉಪೇಕ್ಷಿಸಲಾಗುತ್ತಿದೆ ಎಂದು ಪತಿಯು ಭಾವಿಸತೊಡಗುತ್ತಾನೆ. ಮಧ್ಯ ವಯಸ್ಸಿನಲ್ಲಿ ಪುರುಷರು ತಮ್ಮ ಸಂಪರ್ಕಕ್ಕೆ ಬರುವ ಮಹಿಳೆಯರಿಂದ ಅತ್ಯಧಿಕ ಆಕರ್ಷಿತರಾಗುತ್ತಾರೆಂದು ಒಂದು ಸವಿೂಕ್ಷೆಯಿಂದ ತಿಳಿದು ಬಂದಿದೆ. ಈ ಅನೈತಿಕ ಸಂಪರ್ಕವನ್ನು ಪೋಷಿಸುವ ಬದಲು ಆರ್ಥಿಕ ಸಾಮರ್ಥ್ಯವಿರುವ ಪುರುಷರಿಗೆ ದ್ವಿತೀಯ ವಿವಾಹದ ಅನುಮತಿ ನೀಡುವುದೇ ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಹೆಚ್ಚು ಸಮಂಜಸವಲ್ಲವೇ?

ಸಂತಾನ ಭಾಗ್ಯ

ಎಲ್ಲ ದಂಪತಿಗಳೂ ಸಂತಾನ ಭಾಗ್ಯ ಬಯಸುವುದು ಸ್ವಾಭಾವಿಕ. ಆದರೆ ಸ್ತ್ರೀಯು ಬಂಜೆಯಾಗಿದ್ದರೆ ಪತಿ-ಪತ್ನಿಯರಿಬ್ಬರೂ ಸಂತಾನ ಭಾಗ್ಯದಿಂದ ವಂಚಿತರಾಗಿ ಇರಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಬಡಪಾಯಿ ಸ್ತ್ರೀಯನ್ನು ಆಕೆಯದ್ದಲ್ಲದ ದೋಷಕ್ಕಾಗಿ ವಿಚ್ಛೇದನ ಮಾಡಿ ಬಿಡುವುದು ನ್ಯಾಯ ಸಮ್ಮತವಲ್ಲ. ದ್ವಿತೀಯ ವಿವಾಹದ ಅನುಮತಿಯು ಇಂತಹ ದಂಪತಿಗಳಿಗೆ ಒಂದು ದೊಡ್ಡ ವರವಾಗಿ ಮಾರ್ಪಡುತ್ತದೆ. ಇಂತಹ ಅನೇಕ ಸಂದರ್ಭಗಳಲ್ಲಿ ಪ್ರಥಮ ಪತ್ನಿ ಸ್ವಯಂ ತನ್ನ ಪತಿಯನ್ನು ದ್ವಿತೀಯ ಮದುವೆಗೆ ಪ್ರೇರೇಪಿಸುತ್ತಾಳೆ. ಪತಿಯ ಅಸಾಮರ್ಥ್ಯವು ಗರ್ಭಧಾರಣೆಗೆ ಅಡ್ಡಿಯಾಗಿದ್ದರೆ ಅಂತಹ ಪತಿಯಿಂದ ವಿಚ್ಛೇದನ ಪಡೆದು ಬೇರೆ ವಿವಾಹವಾಗಲು ಸ್ತ್ರೀಗೂ ಅನುಮತಿ ಇದೆ.

ಯುದ್ಧ, ಮಾರಕ ಸಾಂಕ್ರಾಮಿಕ ರೋಗ ಅಥವಾ ಇನ್ನಾವುದೇ ಕಾರಣಕ್ಕಾಗಿ ಸ್ತ್ರೀಯರ ಅನುಪಾತವು ಪುರುಷರಿಗಿಂತ ಹೆಚ್ಚಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪುರುಷರಿಗೆ ಒಂದಕ್ಕಿಂತ ಅಧಿಕ ವಿವಾಹ ಮಾಡುವ ಅನುಮತಿ ನೀಡದೆ ಹೋದರೆ ಅನೇಕ ಮಹಿಳೆಯರು ಮದುವೆಯಿಂದಲೇ ವಂಚಿತರಾಗುವರು. ವಿಧವಾ ವಿವಾಹ ಮತ್ತು ವಿಚ್ಛೇದಿತೆಯ ಪುನರ್ ವಿವಾಹವನ್ನು ಸಮಾಜದಲ್ಲಿ ರೂಢಿಗೆ ತರಬೇಕಾದರೂ ಬಹುಪತ್ನಿತ್ವಕ್ಕೆ ಅನುಮತಿಸುವುದು ಅನಿವಾರ್ಯವಾಗುತ್ತದೆ. ಇಸ್ಲಾಮ್ ಧರ್ಮ ವಿಧವಾ ವಿವಾಹವನ್ನು ಮತ್ತು ವಿಚ್ಛೇದಿತೆಯರ ಪುನರ್ವಿವಾಹವನ್ನು ಪ್ರೋತ್ಸಾಹಿಸುತ್ತದೆ. ಬಹುಪತ್ನಿತ್ವಕ್ಕಿರುವ ಅನುಮತಿಯು ಹೆಚ್ಚಿನ ವಿಧವೆಯರು ಮತ್ತು ವಿಚ್ಛೇದಿತೆಯರ ಗೌರವ ಪೂರ್ಣ ಪುನರ್ವಸತಿಗೆ ಕಾರಣವಾಗುತ್ತದೆ. ಅನ್ಯಥಾ ಇಂತಹ ಸ್ತ್ರೀಯರನ್ನು ತಮ್ಮ ಉಪಜೀವನಕ್ಕಾಗಿ ಅಥವಾ ಕಾಮಾಪೇಕ್ಷೆಯ ಈಡೇರಿಕೆಗಾಗಿ ಪರ ಪುರುಷರೊಂದಿಗೆ ಅನೈತಿಕ ಸಂಬಂಧ ಸ್ಥಾಪಿಸಲು ನಿರ್ಬಂಧಿಸಿದಂತಾಗುತ್ತದೆ.

ಮೇಲಿನ ಚರ್ಚೆಯಿಂದ ಸ್ಪಷ್ಟವಾಗುವುದೇನೆಂದರೆ ಸಮಾಜದಲ್ಲಿ ಬೆಳೆಯುತ್ತಿರುವ ಲೈಂಗಿಕ ಅರಾಜಕತೆಗೆ ಪುರುಷರ ಸಹಜ ಬಯಕೆ ಮತ್ತು ಸ್ತ್ರೀಯರ ವಿವಶತೆ ಪ್ರಮುಖ ಕಾರಣವಾಗಿದೆ. ಈ ಅಸಭ್ಯ, ನೀಚ ಮತ್ತು ಲಜ್ಜಾಸ್ಪದ ಸ್ಥಿತಿಯಿಂದ ಮಹಿಳೆಯರ ವಿಮುಕ್ತಿಯ ನಿಟ್ಟಿನಲ್ಲಿ ಇಸ್ಲಾವಿೂ ಜೀವನ ವ್ಯವಸ್ಥೆಯಲ್ಲಿರುವ ಬಹುಪತ್ನಿತ್ವದ ಅವಕಾಶವು ಒಂದು ಮಹತ್ತರ ಕೊಡುಗೆಯಾಗಿದೆ. ಆದರೆ ಈ ವ್ಯವಸ್ಥೆಯು ಒಂದು ನೈಜ ಇಸ್ಲಾವಿೂ ಸಮಾಜದಲ್ಲಿ ಬಹಳಷ್ಟು ಉಪಯುಕ್ತವಾಗಿರುತ್ತದೆ. ಸಮಾಜದಲ್ಲಿ ಇಸ್ಲಾವಿೂ ಮೌಲ್ಯಗಳು ಇಲ್ಲದಾಗಿ ಕೇವಲ ಬಹುಪತ್ನಿತ್ವವನ್ನು ಮಾತ್ರ ಅಳವಡಿಸಿಕೊಂಡರೆ ಅದರಿಂದ ಕೆಲವು ಅನ್ಯಾಯಗಳಾಗುವ ಸಾಧ್ಯತೆಯೂ ಇದೆ.

ಪತ್ನಿಯರ ಮಧ್ಯೆ ನ್ಯಾಯ

ಅಲ್ಲಾಹನ ಮೇಲೆ ವಿಶ್ವಾಸ ಮತ್ತು ಅವನ ಮುಂದೆ ಜವಾಬ್ದಾರಿಕೆಯ ಪ್ರಜ್ಞೆ, ಪ್ರವಾದಿಗಳ ಅನುಸರಣೆ ಮತ್ತು ಪರಲೋಕದ ಶಾಶ್ವತ ಜೀವನದ ಸಫಲತೆಯನ್ನು ಉದ್ದೇಶ ವಾಗಿಡುವುದೇ ಇಸ್ಲಾಮಿನ ಪ್ರಾಥಮಿಕ ಮೌಲ್ಯಗಳಾಗಿವೆ. ಈ ಮೌಲ್ಯಗಳಿಂದ ವಿರಹಿತವಾದ ಸಮಾಜದಲ್ಲಿ ಬಹುಪತ್ನಿತ್ವವು ಕೇವಲ ಭೋಗ ವಿಲಾಸದ ಹೇತುವಾದೀತು. ಆದರೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿರಿಸುವ ಮನುಷ್ಯನು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸಲಾರ. ಆದ್ದರಿಂದ ಅವನಿಂದ ಸ್ತ್ರೀಯ ಶೋಷಣೆಯಾಗುವ ಸಂಭವವಿಲ್ಲ.

ಬಹುಪತ್ನಿತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚಿನ ಪತ್ನಿಯರ ಮಧ್ಯೆ ಪಕ್ಷಪಾತವಾಗುವ ಸಂಭವವಿದೆ ಎಂಬುದು ಈ ಬಗ್ಗೆ ಏಳುವ ಒಂದು ಸಹಜ ಸಂಶಯವಾಗಿದೆ. ಪವಿತ್ರ ಕುರ್‍ಆನ್ ಬಹುಪತ್ನಿತ್ವಕ್ಕೆ ಅನುಮತಿ ನೀಡಿರುವುದರ ಜೊತೆಗೇ ಪತ್ನಿಯರ ಮಧ್ಯೆ ನ್ಯಾಯ ಪಾಲಿಸಬೇಕೆಂಬ ನಿರ್ಬಂಧವನ್ನೂ ಹೇರಿದೆ. ಒಬ್ಬ ವ್ಯಕ್ತಿಯು ನ್ಯಾಯ ಪಾಲಿಸುವ ಶರತ್ತನ್ನು ಪೂರೈಸದೇ ಬಹುಪತ್ನಿತ್ವದ ಅನುಮತಿಯನ್ನು ಬಳಸಿಕೊಳ್ಳುತ್ತಾನಾದರೆ ಅವನು ನಿಜವಾಗಿ ಅಲ್ಲಾಹನ ಆಜ್ಞೆಗೆ ದ್ರೋಹ ಬಗೆಯುತ್ತಾನೆ. ಇಸ್ಲಾವಿೂ ನ್ಯಾಯಾಲಯ ವ್ಯವಸ್ಥೆಯು ಈ ರೀತಿ ಅನ್ಯಾಯಕ್ಕೊಳಗಾದ ಪತ್ನಿಯರ ಫಿರ್ಯಾದಿಯನ್ನು ಆಲಿಸಿ ಸೂಕ್ತ ತೀರ್ಪು ನೀಡಬಹುದಾಗಿದೆ.

ಇನ್ನೊಂದು ವಿಷಯವೂ ಈ ಬಗ್ಗೆ ಪ್ರಸ್ತಾಪನೀಯವಾಗಿದೆ. ಒಬ್ಬ ಮನುಷ್ಯನಿಗೆ ತನ್ನ ಮಕ್ಕಳ ಮಧ್ಯೆ ತಾರತಮ್ಯ ಮಾಡದೆ ಇರಲು ಸಾಧ್ಯವೆಂದಾದರೆ ಅವನಿಗೆ ತನ್ನ ಪತ್ನಿಯರ ಮಧ್ಯೆ ತಾರತಮ್ಯ ಮಾಡದೆ ಇರಲು ಮತ್ತು ಅವರ ಮಧ್ಯೆ ನ್ಯಾಯ ಪಾಲಿಸಲು ಅಸಾಧ್ಯವೆಂದು ಬಗೆಯುವುದು ಹೇಗೆ? ಒಂದು ವೇಳೆ ಒಬ್ಬ ವ್ಯಕ್ತಿಗೆ, ತನ್ನ ಒಬ್ಬ ಪತ್ನಿಯ ಸೌಂದರ್ಯ, ಗುಣನಡತೆ, ವಿದ್ಯಾರ್ಹತೆ ಇತ್ಯಾದಿಗಳ ಕಾರಣದಿಂದ ಆಕೆಯೊಂದಿಗೆ ಭಾವನಾತ್ಮಕ ಸಂಬಂಧ ಹೆಚ್ಚಾಗಿರಬಹುದು. ಅದು ಸ್ವಾಭಾವಿಕ. ಪತ್ನಿಯರ ಮಧ್ಯೆ ಪೂರ್ಣ ಸಮಾನತೆ ಪಾಲಿಸುವುದು ಮನುಷ್ಯನಿಂದ ಸಾಧ್ಯವಿಲ್ಲದ ವಿಚಾರ. ಆದ್ದರಿಂದ ಇಸ್ಲಾಮ್ ಈ ಬಗ್ಗೆ ಪುರುಷನನ್ನು ಅಸಾಧ್ಯ ನಿರ್ಬಂಧಗಳಿಗೆ ಗುರಿಪಡಿಸಿಲ್ಲ. ಆದರೆ ಈ ಭಾವನಾತ್ಮಕ ಸಂಬಂಧವು ಇತರ ಪತ್ನಿಯರ ಲೈಂಗಿಕ ಬಯಕೆಯ ಈಡೇರಿಕೆ, ಅವರ ಜೀವನಾಂಶ ನೀಡಿಕೆ, ಅವರ ಲೌಕಿಕ ಅವಶ್ಯಕತೆಗಳ ಪೂರೈಕೆ, ಅವರ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಪತ್ನಿಯರ ಮಧ್ಯೆ ಪೂರ್ಣ ಸಮಾನತೆಯನ್ನು ಪಾಲಿಸುವುದಕ್ಕೆ ಯಾವ ರೀತಿಯಲ್ಲೂ ತಡೆಯಾಗಬಾರದೆಂದು ಇಸ್ಲಾಮ್ ಆದೇಶಿಸುತ್ತದೆ. ಇಸ್ಲಾವಿೂ ವಾರೀಸು ನಿಯಮದಂತೆ ಎಲ್ಲ ಪತ್ನಿಯರಿಗೂ ಪತಿಯ ಸಂಪತ್ತಿನಲ್ಲಿ ಸಮಾನ ಪಾಲು ಇದೆ. ಈ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲದವನು ಬಹುಪತ್ನಿತ್ವದ ಹಕ್ಕನ್ನು ಕಳೆದುಕೊಳ್ಳುತ್ತಾನೆ.

ಇನ್ನೊಂದು ಪ್ರಮುಖ ವಿಷಯವನ್ನೂ ಈ ಬಗ್ಗೆ ತಿಳಿದಿರಬೇಕಾದುದು ಅತ್ಯಗತ್ಯ. ಪ್ರವಾದಿವರ್ಯರ(ಸ) ಕಾಲದಲ್ಲಿ ಅನಿಯಂತ್ರಿತವಾಗಿದ್ದ ಬಹುಪತ್ನಿತ್ವವನ್ನು ಇಸ್ಲಾಮ್ ನಾಲ್ಕು ಮಂದಿ ಪತ್ನಿಯರಿಗೆ ಮಿತಿಗೊಳಿಸಿತೇ ವಿನಾ ಏಕಪತ್ನಿತ್ವ ಇದ್ದುದನ್ನು ಬಹುಪತ್ನಿತ್ವವಾಗಿ ಮಾರ್ಪಡಿಸಲಿಲ್ಲ. ಪವಿತ್ರ ಕುರ್‍ಆನ್ ಮಾಡಿದ ಕಾರ್ಯವು ನಿಜವಾಗಿ ಏಕಕಾಲದಲ್ಲಿ ನಾಲ್ಕು ಮಂದಿಗಿಂತ ಹೆಚ್ಚಿನ ಪತ್ನಿಯರನ್ನಿರಿಸುವುದನ್ನು ನಿಷೇಧಿಸಿದುದಾಗಿದೆ.

ಇತಿಹಾಸದಿಂದಲೂ ಈ ವಿಷಯವು ಸ್ಪಷ್ಟವಾಗುತ್ತದೆ. ತಾಯಿಫ್ ನ ಓರ್ವ ಸರದಾರನು ಇಸ್ಲಾಮ್ ಸ್ವೀಕರಿಸಿದಾಗ ಅವನಿಗೆ ಒಂಭತ್ತು ಮಂದಿ ಪತ್ನಿಯರಿದ್ದರು. ಪ್ರವಾದಿಯವರು(ಸ) ಆತನಿಗೆ ನಾಲ್ಕು ಮಂದಿ ಪತ್ನಿಯರನ್ನು ಉಳಿಸಿಕೊಂಡು ಉಳಿದವರನ್ನು ವಿಚ್ಛೇದಿಸಬೇಕೆಂದು ಆಜ್ಞಾಪಿಸಿದರು. ನೌಫಲ್ ಬಿನ್ ಮುಆವಿಯಾ ಎಂಬೋರ್ವ ವ್ಯಕ್ತಿಗೆ ಐದು ಮಂದಿ ಪತ್ನಿಯರಿದ್ದರು. ಪ್ರವಾದಿವರ್ಯರು(ಸ) ಆ ಪೈಕಿ ಒಬ್ಬಳನ್ನು ತೊರೆಯಬೇಕೆಂದು ಅವರಿಗೆ ಆಜ್ಞಾಪಿಸಿದರು.

‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …