Home / ಲೇಖನಗಳು / ದೇವನನ್ನು ಒಪ್ಪಿಕೊಳ್ಳದವರಲ್ಲೂ ಓರ್ವ ದೇವನಿದ್ದಾನೆ

ದೇವನನ್ನು ಒಪ್ಪಿಕೊಳ್ಳದವರಲ್ಲೂ ಓರ್ವ ದೇವನಿದ್ದಾನೆ

ಕುರ್‍ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ, ಮಂಜನಾಡಿ

“ಹೇಳಿರಿ. ಅವನು ಅಲ್ಲಾಹನು, ಏಕೈಕನು, ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ ಅವನು, ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರು ಇಲ್ಲ.” (ಪವಿತ್ರ ಕುರ್‍ಆನ್: 1-4)

ಜಗತ್ತು ತನ್ನಿಂತಾನೇ ಹುಟ್ಟಿಕೊಂಡಿದೆ, ಮಾತ್ರವಲ್ಲದೆ ಸಕಲ ಜೀವಜಾಲಗಳೂ ಪ್ರಾಕೃತಿಕ ಸೃಷ್ಟಿ, ಅವುಗಳನ್ನು ಸೃಷ್ಟಿಸಿದವನಾರೂ ಇಲ್ಲ,  ಪಾರತ್ರಿಕ ಜೀವನವಿಲ್ಲ ಎಂಬ ನಕಾರಾತ್ಮಕ ಚಿಂತನೆಗಳು ಇವೆಯಾದರೂ ಪ್ರತಿಯೊಬ್ಬ ಮನುಷ್ಯನು ತನ್ನ ಅಂತರಾತ್ಮದೊಳಗೆ ದೇವರೆಂಬ ಮಹಾಶಕ್ತಿಯನ್ನು ಒಪ್ಪಿಕೊಳ್ಳುತ್ತಾನೆ. ತನ್ನ ಆಪತ್ಕಾಲದಲ್ಲಿ ಒಬ್ಬಂಟಿಯಾದಾಗ, ನಿರಾಶ್ರಿತನಾದಾಗ ತನ್ನ ದೇವರನ್ನು ಸ್ಮರಿಸದೇ ಇರಲಾರ.  ಜಗತ್ತಿನ ಸೃಷ್ಟಿಯ ಹಿಂದೆ ಒಂದು ಮಹಾಶಕ್ತಿಯ ಕೈವಾಡವಿದೆಯೆಂದು ಪ್ರತಿಯೋರ್ವ ಬುದ್ಧಿವಂತನೂ ಒಪ್ಪಿಕೊಳ್ಳುತ್ತಾನೆ. ತನ್ನ ನಿತ್ಯ  ಜೀವನದ ಏರು ಪೇರುಗಳಲ್ಲಿ ಓ ಮೈ ಗಾಡ್, ಓ ದೇವರೇ, ಯಾ ಅಲ್ಲಾಹ್ ಎಂಬ ಪದಗಳನ್ನು ಸ್ಮರಿಸದೆ ಇರಲಾರ. ಆ ದೇವರ ಬಗ್ಗೆ  ನಾನು ನಿಮ್ಮಲ್ಲಿ ಚರ್ಚಿಸಲು ಬಯಸುತ್ತೇನೆ.

ದೇವನು, ದೇವರೆಂದರಾರು? ಕಥೆಗಾರರು ಬರೆದಿರುವ ಭಾವನಾತ್ಮಕ ರೂಪವೇ? ಧಾರಾವಾಹಿ, ಸಿನಿಮಾಗಳಲ್ಲಿ ಮೂಡಿಬರುವ ಚಿತ್ರಣವೇ?  ಚಿತ್ರಕಾರರು ಗೀಚಿದ ಕಲ್ಪನೆಗಳೇ? ದೇವರು ಮಾನವನ ಆಲೋಚನೆಗಳಿಗೆ ನಿಲಕದ್ದು. ಅವನು ಏಕೈಕನೂ, ನಿರಪೇಕ್ಷನೂ ನಿರಾವಲಂಬಿತನೂ,  ಕುಟುಂಬವಿಲ್ಲದವನೂ ಆಗಿದ್ದಾನೆ. ಅವನಂತೆ ಇನ್ನೊಬ್ಬನಿಲ್ಲ. ಅವನೇ ನಮ್ಮೆಲ್ಲರ ಸೃಷ್ಟಿದಾತ ಈಶ್ವರ, ಅಲ್ಲಾಹ್, ಪರಮಾತ್ಮ, ಭಗವಂತ,  ಯಹೂನ, ರಬ್ಬ್ ಹೀಗೆ ಒಂದೊಂದು ವರ್ಗ ಒಂದೊಂದು ಹೆಸರಿನಿಂದ ಕರೆಯಬಹುದು. ದೇವನೊಬ್ಬನೇ, ನಾಮ ಮಾತ್ರ ಹಲವು.

ಎಲ್ಲಾ ಧರ್ಮಗಳು ಅದ್ವೈತ ಸಿದ್ಧಾಂತವನ್ನು ಸಾರುತ್ತವೆ. ಕಲ್ಲು ಮಣ್ಣು, ಮೂರ್ತಿ, ಅಗ್ನಿ ಮತ್ತು ಸೂರ್ಯ, ಚಂದ್ರ, ನಕ್ಷತ್ರ, ಜೀವಜಂತುಗಳು ಯಾವುವೂ ದೇವರಲ್ಲ. ಬುದ್ಧ, ಬಸವ, ಏಸು, ಮೂಸ, ರಾಮ, ಮುಹಮ್ಮದ್ ಯಾರೂ ದೇವರಲ್ಲ. ಅವರೆಲ್ಲಾ ಸೃಷ್ಟಿಗಳು. ದೇವನ ದಿವ್ಯಜ್ಞಾನ ಸಿಕ್ಕಿದವರು ಮಾತ್ರ.

ಬಸವಣ್ಣ ಹೇಳುತ್ತಾರೆ,
“ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ!
ಕೂಳಗ ದೈವ, ಗಿಣ್ಣಿಲು ದೈವ ಕಾಣಿರೋ!
ದೈವ ದೈವವೆಂದು ಕಾಲಿಡಲಿಂಬಿಲ್ಲ
ದೈವನೊಬ್ಬನೆ ಕೂಡಲಸಂಗಮ ದೇವ
ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡ
ಒಬ್ಬನೇ ಕಾಣಿರೊ, ಇಬ್ಬರೆಂಬುವುದು ಹುಸಿ ನೋಡಾ! ಕೂಡಲ ಸಂಗಮ ದೇವನಲ್ಲದೆ ಇಲ್ಲವೆಂದಿತು ವೇದ.
ಕೂಡಲ ಸಂಗಮ ದೇವ ಎಂದರೆ ಎಲ್ಲವೂ ಸಂಗಮಿಸುವವನು ಎಂದರ್ಥ. ಇದು ಬಸವಣ್ಣನವರು ದೇವರಿಗೆ ಕೊಟ್ಟ ಕಲ್ಪನೆ. ಹಿಂದೂ  ಧರ್ಮ ಪೌರೋಹಿತ್ಯತನ, ಮೂಢನಂಬಿಕೆ, ಅಂಧವಿಶ್ವಾಸಕ್ಕೆ ಬಲಿಯಾದಾಗ ಜನರನ್ನು ಸರಿದಾರಿಗೆ ತರಲು ಮಹಾ ಚಳವಳಿ ನಡೆಸಿದವರು ಬಸವಣ್ಣ. ಅವರು ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಬಲವಾಗಿ ಖಂಡಿಸಿದರು.

ಹಿಂದೂ ಧರ್ಮದಲ್ಲಿ ಮೂಢಾಚಾರವನ್ನು, ಮೂರ್ತಿ ಪೂಜೆಯನ್ನು ವಿರೋಧಿಸಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟ ಸ್ವಾಮಿ ದಯಾನಂದ ಸರಸ್ವತಿಯವರು ತನ್ನ ಗ್ರಂಥ ಸತ್ಯಾರ್ಥ ಪ್ರಕಾಶದಲ್ಲಿ ದೇವನ ಬಗ್ಗೆ ಹೀಗೆ ವಿವರಿಸುತ್ತಾರೆ:
“ಪರಮಾತ್ಮನೆಂದರೆ ಸರ್ವರಿಗಿಂತ ಉತ್ಕ್ರಷ್ಟನೂ ಮತ್ತು ಜೀವ ಪ್ರಕೃತಿ ಮತ್ತು ಆಕಾಶಕ್ಕಿಂತ ಅತೀ ಸೂಕ್ಷ್ಮನೂ ಮತ್ತು ಜೀವರೆಲ್ಲರ ಅಂತರ್ಯಾಮೀ ಆತ್ಮನೂ ಆಗಿರುವನು.”

ಇನ್ನೊಂದು ಕಡೆ ದೇವರ ಬಗ್ಗೆ ವಿವರಿಸುತ್ತಾ,
“ಯಾ ಈಶ್ವರೇಷು ಸರ್ವೇಷು ಪರಮ ಶ್ರೇಷ್ಠ: ಸ ಪರಮೇಶ್ವರ”
ಯಾವನು ಈಶ್ವರರೆಲ್ಲರ ಸಮರ್ಥದಲ್ಲೂ ಸಮರ್ಥನೂ ಯಾವನಿಗೆ ಸಮನಾದವನು
ಯಾವನೂ ಇಲ್ಲವೋ ಅವನ ಹೆಸರು ಪರಮೇಶ್ವರ.
ಅದ್ವೈತ ಸಿದ್ಧಾಂತದ ಮತ್ತೊಬ್ಬ ದಾರ್ಶನಿಕರಾದ ಮಧ್ವಾಚಾರ್ಯರು ಭಗವಾನನ ಬಗ್ಗೆ ಹೇಳಿದ್ದು ಹೀಗೆ,
“ಭಾಗವತವಿರುವ ಅವರು (ದೇವರ) ಅಂದರೆ ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ಒಬ್ಬ ಸರ್ವರಿಗೂ ಸಂಪನ್ನ.”

ಸ್ವಾಮೀ ವಿವೇಕಾನಂದರು ಹೇಳುತ್ತಾರೆ:
ಯಾವನೇ ವ್ಯಕ್ತಿ ಹಿಂದೂವಾಗಿರಲಿ, ಬೌದ್ಧನಾಗಿರಲಿ, ಕ್ರೈಸ್ತ ಮುಸಲ್ಮಾನ ಬಾಂಧವನಾಗಿರಲಿ ಅವರೆಲ್ಲರ ದೇವರು ಒಂದೇ ಆಗಿದ್ದಾನೆ. ಈ ಧರ್ಮಗಳಲ್ಲಿ ಯಾವುದೇ ಧರ್ಮವನ್ನು ಅವಮಾನ ಮಾಡಿದರೆ ಅವನ ದೇವರನ್ನು ಅವಮಾನ ಮಾಡಿದಂತಾಗುತ್ತದೆ.’

ಏಸು ಕ್ರೈಸ್ತರು ಜನರಲ್ಲಿ ಏಕದೇವನ ಕಡೆಗೆ ಮರಳಲು ಬೋಧಿಸಿದವರು. ಆದರೆ ಕ್ರೈಸ್ತರು ಕ್ರಿಸ್ತನನ್ನೇ ದೇವನ ಮಟ್ಟಕ್ಕೆ ಏರಿಸಿದ್ದಾರೆ. ಹಾಗೆಯೇ ಬಹುಪಾಲು ಕ್ರೈಸ್ತರು ಒಪ್ಪಿಕೊಂಡೂ ಬದುಕುತ್ತಿದ್ದಾರೆ. ಜೊತೆಗೇ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸುತ್ತಾರೆ. ಇದೊಂದು  ವಿಪರ್ಯಾಸ. ಹಾಗಾದರೆ ನಾವು ಆಲೋಚಿಸಬೇಕಾಗುತ್ತದೆ, ಏಸುಕ್ರಿಸ್ತನ ಜನನಕ್ಕಿಂತ ಮುಂಚೆ ಇದ್ದ ದೇವನಾರು? ಕುರ್‍ಆನ್ ಏಸು ಕ್ರಿಸ್ತನನ್ನು ಈಸಾ ಎಂದು ಕರೆದಿದಿದೆ ಮತ್ತು ಈಸಾ ದೇವನಲ್ಲ, ಅವರು ದೇವನ ಪ್ರವಾದಿ. ಜನರನ್ನು ಸರಿದಾರಿಗೆ ತರಲು
ಕಳುಹಿಸಲಾದ ಪ್ರವಾದಿ ಎಂದಿದೆ. ತೌರಾತ್ (ಬೈಬಲ್) ಅದನ್ನೇ ಬೋಧಿಸುತ್ತದೆ. “ಒಬ್ಬನೇ ಸತ್ಯ ದೇವನಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಏಸುಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯ ಜೀವನ.”  (ಯೋಹಾನ: 17:3)

ಬೈಬಲ್ ದೇವರ ಬಗ್ಗೆ ನೀಡುವ ವಿಶ್ಲೇಷಣೆಯಲ್ಲೂ ಎಲ್ಲಾ ಧರ್ಮದ ವೇದಗಳು ವಿವರಿಸುವಂತೆ ಸಮಾನತೆಯಿದೆ. “ಭೂಮಿ-ಆಕಾಶ ಎಲ್ಲವನ್ನೂ ಸೃಷ್ಟಿಸಿದವನು ಸತ್ಯ ದೇವರು. ಆತನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ.” (ಕೀರ್ತನೆ- 90:2)

ಬುದ್ಧ ಒಮ್ಮೆಯೂ ದೇವರಲ್ಲ. ಭಾರತೀಯ ಸಂಸ್ಕ್ರತಿಯೊಳಗೆ ವ್ಯಾಪಕವಾಗಿ ಹರಡಿದ್ದ ಮೂಢನಂಬಿಕೆ ಮತ್ತು ಮೂರ್ತಿಪೂಜೆಯನ್ನು ವಿರೋಧಿಸಿ ಪರಮಾತ್ಮನಲ್ಲಿ ಲೀನವಾಗಲು ಜನರನ್ನು ಬೋಧಿಸಿದವರು ಅವರು. ಅವರೋರ್ವ ಪ್ರವಾದಿ ಎಂದು ಕರೆಯಬಹುದೇನೋ. ಬೋದಿ ವೃಕ್ಷದ ಕೆಳಗೆ ಅವರಿಗೆ ದಿವ್ಯಜ್ಞಾನವಾಗಿ ಅವರು ಬುದ್ಧ ಮಹಾನರಾಗುತ್ತಾರೆ.
ಮನುಷ್ಯನನ್ನು ಸೃಷ್ಟಿಸಿದ ದೇವರು ಅವನ ಅನ್ನದಾತನಾದ ಒಡೆಯನ್ನು ಪೂಜಿಸಲು ಕಲಿಸಿರುತ್ತಾನೆ. ನಂಬಿಕೆ, ದೌರ್ಬಲ್ಯಗಳು ಮನುಷ್ಯನನ್ನು ಮೂರ್ತಿ ಪೂಜಿತರನ್ನಾಗಿಯೂ ಮೂಢನಂಬಿಕೆಯುಳ್ಳವರಾಗಿಯೂ ಮಾಡುತ್ತದೆ. ಇದರಿಂದ ಪುರೋಹಿತ ವರ್ಗ ಲಾಭಗಳಿಸುತ್ತದೆ. ಅವುಗಳಿಂದ ಜನರನ್ನು ತಡೆಯಲು ಪ್ರವಾದಿಗಳು, ದಾರ್ಶನಿಕರು, ಮಹಾತ್ಮರು ಹುಟ್ಟಿಕೊಳ್ಳುತ್ತಾರೆ. ಅವರೆಲ್ಲರ ಗ್ರಂಥಗಳು ಬೋಧಿಸುವುದು ಒಂದೇ- ದೇವನೊಬ್ಬ. ಅವನೇ ಸರ್ವ ಸಾಮರ್ಥ್ಯವನ್ನು ಹೊಂದಿರುವವನು. ಅದನ್ನೇ. ನಾನು ನಿಮಗೆ ಕುರ್‍ಆನಿನ ಮೇಲಿನ ಸೂಕ್ತದ ಮೂಲಕ ಸ್ಪಷ್ಟಪಡಿಸಿದ್ದೇನೆ.

ಪ್ರವಾದಿ ಮುಹಮ್ಮದ್(ಸ)ರು ಮೂರ್ತಿ ಪೂಜೆ, ಬಹುದೇವಾರಾಧನೆ, ಮೂಢನಂಬಿಕೆ ಹಾಗೂ ಸಾಮಾಜಿಕ ವಂಚನೆಗಳಿಂದಲೂ ದುಷ್ಕ್ರತ್ಯಗಳಿಂದಲೂ ಕೂಡಿದ ಸಮುದಾಯದಲ್ಲಿ ಪ್ರಥಮವಾಗಿ ಮೊಳಗಿಸಿದ ಕರೆ- “ಲಾ ಇಲಾಹ ಇಲ್ಲಲ್ಲಾಹ್”- ದೇವನಲ್ಲದೆ ಅನ್ಯ ಆರಾಧ್ಯನಿಲ್ಲ. “ಅಲ್ಲಾಹು ಅಹದ್” ಅಲ್ಲಾಹನು ಒಬ್ಬನೇ. ದೇವನಿಗೆ ಶರಣಾಗತಿಯಿಂದಲೇ ಸಾಮಾಜಿಕ ಪರಿಷ್ಕರಣೆ ಸಾಧ್ಯ. ಒಬ್ಬನೇ ದೇವನೆಂದು ಸಕಲ ಮನುಷ್ಯರು ಒಪ್ಪಿಕೊಂಡರೆ ಮತ್ತು ದೇವನಿದ್ದಾನೆಂಬ ವಾಸ್ತವವನ್ನು ಅರಿತುಕೊಂಡರೆ ಅಹಂ, ಸ್ವಾರ್ಥ, ಆಡಂಬರ, ಜಾತಿ, ತಾರತಮ್ಯ, ಅಸಮಾನತೆ ಮತ್ತು ಗಡಿ ಬೇಲಿಗಳು ಇಲ್ಲವಾಗುತ್ತವೆ. ಮತ್ತು ಮಾನವರೆಲ್ಲರೂ ದೇವರ ಮಕ್ಕಳೆಂಬ ಭಾವೈಕ್ಯತೆ ಹುಟ್ಟಿಕೊಳ್ಳುತ್ತದೆ. ಜಾತಿ ಬೇಧಗಳೆಂಬ ಬೇಲಿಗಳನ್ನು ಹೊಡೆದು ಎಲ್ಲರೂ ಸಮಾನರು, ದೇವನೊಬ್ಬನನ್ನೇ ಆರಾಧಿಸಿರಿ ಎನ್ನುತ್ತಾರೆ ಪ್ರವಾದಿ. ಕುರ್‍ಆನ್ ಹೇಳುತ್ತದೆ, “ನಿಮ್ಮ ದೇವ ಏಕೈಕ ದೇವ. ಆ ದಯಾಮಯನೂ  ಕರುಣಾನಿಧಿಯೂ ಆಗಿರುವವನ ಹೊರತು ಇನ್ನೊಬ್ಬ ದೇವನಿಲ್ಲ.” (ಅಲ್‍ಬಕರ: 163)

ಇಬ್ಬರು ದೇವರಿದ್ದರೆ ಜಾಗತಿಕ ಪರಿಸ್ಥಿತಿ ಹೇಗಾಗಬಹುದೆಂದು ಊಹಿಸಿ. ದೇವರುಗಳ ನಡುವೆ ಪರಸ್ಪರ ಕಚ್ಚಾಟಗಳು ನಡೆಯಬಹುದು. ಒಬ್ಬನು ಮಳೆ ಸುರಿಸಿದರೆ ಇನ್ನೊಬ್ಬನು ಚಳಿ ಬರಿಸಬಹುದು. ಮನುಷ್ಯರಲ್ಲಿ ಒಂದು ವಿಭಾಗ ಒಂದು ದೇವರಲ್ಲಿ ನಂಬಿಕೆಯಿರಿಸಿದರೆ ಇನ್ನೊಂದು ವಿಭಾಗ ಮತ್ತೊಬ್ಬನಲ್ಲಿ ನಂಬಿಕೆಯಿರಿಸಬಹುದು. ಹಾಗೆಯೇ ಭೂಮಿಗೊಂದು ದೇವ, ಆಕಾಶಕ್ಕೊಂದು, ಮಳೆಗೊಂದು, ಬಿಸಿಲಿಗೊಂದು, ಸಿರಿವಂತನಾಗಿಸುವವನೊಬ್ಬ, ಬಡವನಾಗಿಸುವವನೊಬ್ಬ ಹೀಗೆ ಒಂದೊಂದು ವಿಭಾಗಕ್ಕೆ ದೇವರಿದ್ದರೆ ಜಾಗತಿಕ ಸಮತೋಲನೆಯಿರದು.  ಕೋಲಾಹಲಗಳು ಸಂಭವಿಸಬಹುದು. ಆದ್ದರಿಂದ ದೇವರು ಎಂಬ ಮಹಾಶಕ್ತಿ ಅದು ಒಬ್ಬನೇ. ಅವನನ್ನು ಕಾಣದಿದ್ದರೂ ಅವನು ನಮ್ಮನ್ನು  ಕಾಣುತ್ತಿದ್ದಾನೆಂಬ ಅಂತರಾಳದ ವಿಶ್ವಾಸವನ್ನು ನಾವು ಇರಿಸಬೇಕು. ನಿಜವಾಗಿಯೂ ದೇವನೆಂಬ ಶಕ್ತಿ ಇದೆಯೆಂಬ ವಿಶ್ವಾಸ ಎಲ್ಲರಲ್ಲಿಯೂ ಇದೆ. ವಿಚಾರವಾದಿ ಮತ್ತು ನಾಸ್ತಿಕವಾದದಲ್ಲಿ ನಂಬಿಕೆಯಿಟ್ಟವರು ಬಾಹ್ಯವಾಗಿ ದೇವರಿಲ್ಲವೆಂದು ಹೇಳಿದರೂ ಅವರ ಅಂತರಾತ್ಮ ಒಬ್ಬನನ್ನು ಒಪ್ಪಿಕೊಂಡಿರುತ್ತದೆ. ಇದು ವಾಸ್ತವ. ಬಹುದೇವಾರಾಧಕರಲ್ಲಿಯೂ ದೇವನೊಬ್ಬನೆಂಬ ವಿಶ್ವಾಸವಿದ್ದರೂ ಅವರ ನಂಬಿಕೆ ದೌರ್ಬಲ್ಯಗಳೇ ಮೂರ್ತಿ ಪೂಜಿತರನ್ನಾಗಿಸಿದೆ. ಒಂದು ಪ್ರಳಯ ಅಥವಾ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ವ್ಯಕ್ತಿಗಳಿರಲಿ, ಮೂರ್ತಿಗಳಿರಲಿ, ಮರ,  ಕಲ್ಲು, ಬಂಡೆಗಳಿರಲಿ, ಮಹಾನರ ಗೋರಿಗಳಿರಲಿ ಅವು ಪ್ರಳಯದೊಂದಿಗೆ ಹರಿಯುತ್ತದೆ. ಎಲ್ಲಾ ಸೃಷ್ಟಿಗಳನ್ನು ಸೃಷ್ಟಿಸಿದ ಮತ್ತು ನಿಯಂತ್ರಿಸುವ, ಜೀವನ-ಮರಣ, ಸುಖ, ಸಂತೋಷ, ನೋವು-ದುಃಖಗಳನ್ನು ನೀಡುವವನೇ ದೇವನು ಪರಮಾತ್ಮ. ಅವನವನು ತನ್ನ ಆತ್ಮದ ಶಕ್ತಿಯೊಂದಿಗೆ ನಿಷ್ಕಳಂಕ ಭಕ್ತಿಯೊಂದಿಗೆ ಗುರುತಿಸಬೇಕು.
ಪ್ರೀತಿಸಬೇಕು.

ಬಸವಣ್ಣ ಹೇಳುತ್ತಾರೆ,
“ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ
ಮರದ ದೇವರು ದೇವರಲ್ಲ
ಪಂಚ ಲೋಹದಿಂದ ಮಾಡಿದ ದೇವರು ದೇವರಲ್ಲ
ಸೇತು ಬಂಧ, ರಾಮೇಶ್ವರ, ಕಾಶಿ, ಗೋಕರ್ಣ ಕೇದಾರ
ಮೊದಲಾದ ಪುಣ್ಯ ತೀರ್ಥ ಕ್ಷೇತ್ರಗಳಲ್ಲಿಹ ದೇವರು ದೇವರಲ್ಲ
ತನ್ನ ತಾನಾರೆಂದು ತಿಳಿದೆಡೆ ತಾನೇ
ದೇವನೋಡ ಅಪ್ರಮಾನ ಕೂಡಲ ಸಂಗಮ ದೇವ.

ಅದೇ ರೀತಿ ಕುರ್‍ಆನ್ ಹೇಳುತ್ತದೆ, “ಅಲ್ಲಾಹನನ್ನು ಬಿಟ್ಟ ಇವರು ಯಾರನ್ನು ಕರೆದು ಪ್ರಾರ್ಥಿಸುತ್ತಾರೋ ಅವರು ಯಾವುದೇ ವಸ್ತುವಿನ ಸೃಷ್ಟಿಕರ್ತರಲ್ಲ. ಅವರು ಸ್ವತಃ ಸೃಷ್ಟಿಗಳು.”  (ಪವಿತ್ರ ಕುರ್‍ಆನ್- 16:20)

ಅಲ್ಲಾಹನನ್ನು ಬಿಟ್ಟು ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರೋ ಅವರೆಲ್ಲಾ ಸೇರಿಕೊಂಡು ಒಂದು ನೊಣವನ್ನೂ ಸೃಷ್ಟಿಸಲಾರರು.  ಒಂದುವೇಳೆ, ನೊಣವೇ ಅವರಿಂದೇನಾದರೂ ಕಿತ್ತುಕೊಂಡು ಹೋದರೆ ಅದರಿಂದ (ನೊಣದಿಂದ) ಅವರು ಅದನ್ನು ಮರಳಿ ಪಡೆಯಲು ಅಶಕ್ತರು. ಸಹಾಯಾರ್ಥಿಗಳೂ ದುರ್ಬಲರು ಮತ್ತು ಯಾರಿಂದ ಸಹಾಯ ಯಾಚಿಸಲಾಗುತ್ತದೋ ಅವರು ಕೂಡ ಬಲಹೀನರು.” (ಪವಿತ್ರ  ಕುರ್‍ಆನ್- 22:73)

ಎಲ್ಲಾ ಧರ್ಮಗಳಿಗೂ ದೇವನ ಬಗೆಗಿರುವ ಅಭಿಪ್ರಾಯದಲ್ಲಿ ಒಮ್ಮತವಿದೆ. ಪೌರೋಹಿತ್ಯ ಮತ್ತು ಮೂಢಾಚಾರದಿಂದಾಗಿ ವೇದಗಳು ಸಾರಿದ ಸತ್ಯ ಸಂಗತಿಗಳನ್ನು ಜನರು ತಿಳಿಯದಂತಾಗಿದೆ. ಅಥವಾ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅವುಗಳನ್ನು ತಿಳಿಸದೆ ಗೌಪ್ಯವಾಗಿಡಲೂ ಬಹುದು.  ಮನುಷ್ಯ ದೇವನನ್ನು ಅರಿಯದೆ ತನ್ನನ್ನು ತಾನು ಎಂದೂ ಅರಿಯಲಾರ. ದೇವರು ಒಬ್ಬನೆಂದು ಒಪ್ಪಿಕೊಂಡರೆ ಮಾತ್ರ ಒಳಿತು, ನ್ಯಾಯ, ಸಮಾನತೆ, ಭಾವೈಕ್ಯತೆ ಮತ್ತು ಶಾಂತಿ ಈ ಭೂಮಿಯಲ್ಲಿ ನೆಲೆಗೊಳ್ಳುತ್ತದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …