Home / ಲೇಖನಗಳು / ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರವಾದಿವರ್ಯರ ಮಾದರಿ

ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರವಾದಿವರ್ಯರ ಮಾದರಿ

@ ಡಾ| ಕೆ.ಎಂ. ಬಹಾವುದ್ದೀನ್ ಹುದವಿ

ಪ್ರವಾದಿ(ಸ)ರು ತಮ್ಮ ಜೀವನದ ಸಿಂಹಪಾಲು ಮಕ್ಕಾದಲ್ಲಿ ಕಳೆದರು. ಮಕ್ಕಾದ 53 ವರ್ಷಗಳ ಜೀವನವೂ ಮದೀನಾದ ಹತ್ತು ವರ್ಷಗಳ ಜೀವನವೂ ಅಸ್ವಸ್ಥತೆ ತುಂಬಿಕೊಂಡದ್ದಾಗಿತ್ತು. ಐಹಿಕ ಜೀವನವೆಂಬುದು ಸ್ವಸ್ಥವಾಗಿ ಜೀವಿಸಲು ಇರುವ ಅವಕಾಶವಲ್ಲವೆಂದೂ ನಿರಂತರ ಪರೀಕ್ಷೆಗಳ ಸಂಗಮ ಭೂಮಿಯೆಂಬ ಸಂದೇಶವನ್ನು ಇದು ನಮಗೆ ನೀಡುತ್ತದೆ. ಅಂತಹ ಸಂದರ್ಭಗಳನ್ನು ಯಾವ ರೀತಿ ಯುಕ್ತಿಯುತವಾಗಿ ಎದುರಿಸಬಹುದು ಎಂಬುದನ್ನು ನಾವು ಅದರಿಂದ ಕಲಿಯಬೇಕು.

ಪ್ರವಾದಿತ್ವದ ಬಳಿಕದ 13 ವರ್ಷ ಮಕ್ಕಾ ಕಾಲಘಟ್ಟವಾಗಿತ್ತು. ಒಂದು ಬಹುಸಂಸ್ಕ್ರತಿಯ ಸಮೂಹದಲ್ಲಿ ಅಲ್ಪಸಂಖ್ಯಾತರಾಗಿ ಪ್ರವಾದಿವರ್ಯರು(ಸ) ಮತ್ತು ಅನುಯಾಯಿಗಳು ಜೀವಿಸುತ್ತಿದ್ದರು. ಹುದೈಬಿಯಾ ಸಂಧಿಯವರೆಗೆ ಮುಸ್ಲಿಮರ ಸಂಖ್ಯೆ 4000 ಮಾತ್ರವಾಗಿತ್ತು ಎಂದು ಕೆಲವು ದಾಖಲೆಗಳು ತಿಳಿಸುತ್ತವೆ. ಒಮ್ಮೆ ಜೋರಾಗಿ ಅಳಲು ಕೂಡಾ ಸಾಧ್ಯವಿಲ್ಲದ ಮಕ್ಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಲಾಹನು ತನಗೆ ಅತ್ಯಂತ ಇಷ್ಟವಾದ ವ್ಯಕ್ತಿಯನ್ನು ಪರೀಕ್ಷೆಗಳಿಗೆ ಗುರಿಪಡಿಸಿ ಇಷ್ಟು ವರ್ಷ ಕಾಲ ಕಷ್ಟ ಕೊಟ್ಟನೆಂದೂ  ಆರಂಭದಲ್ಲೇ ಮದೀನಾಕ್ಕೆ ತಲುಪಿಸಿ ಇಸ್ಲಾಮಿನ ಸುಗಮವಾದ ಪ್ರಯಾಣಕ್ಕೆ ನಾಂದಿ ಹಾಡಬಹುದಿತ್ತಲ್ಲ ಎಂದೂ ಕೆಲವರು ಭಾವಿಸುತ್ತಾರೆ. ಇದು ಸಂಭವಿಸಿರುತ್ತಿದ್ದರೆ ಮುಸ್ಲಿಮರ ಜೀವನಕ್ಕೆ ದಾರಿದೀಪವಾಗುವ ನಂತರದ ಹಲವು ಮಾದರಿಗಳಿಂದ  ವಂಚಿತರಾಗಬೇಕಾಗಿತ್ತು.

ವಿಶ್ವದ ಮುಸ್ಲಿಮರು ಹೆಚ್ಚಿನ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುತ್ತಾರೆಂದೂ ಬಹುಸಂಸ್ಕ್ರತಿಯ ಸಮಾಜದಲ್ಲಿ ಅವರ ಜೀವನವಿರುತ್ತದೆಂದೂ ಆ ಜೀವನವನ್ನು ಯಾವ ರೀತಿ ಎದುರಿಸಬೇಕೆಂದೂ ಪ್ರವಾದಿ(ಸ)ರ ಜೀವನ, ವಿಶೇಷವಾಗಿ ಮಕ್ಕಾ ಜೀವನ ನಮಗೆ ತೋರಿಸಿ ಕೊಡುತ್ತದೆ. ಜನ್ಮ ನಾಡಿನಲ್ಲಿ ಪೌರತ್ವವನ್ನು ಕಳೆದುಕೊಳ್ಳುವುದು, ಪ್ರಯಾಣ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಾಗುವುದು, ಸತ್ಯ, ನ್ಯಾಯ, ನೀತಿ, ಧಾರ್ಮಿಕತೆಯ ಅವಸಾನವಾಗುವುದು, ಅದಕ್ಕಾಗಿ ಹೋರಾಡುವವರು ಜೈಲು ಪಾಲಾಗುವುದು ಮೊದಲಾದ ನಾವು ಈಗ ಅನುಭವಿಸುತ್ತಿರುವ ಹೆಚ್ಚಿನ ಎಲ್ಲ ಸಮಸ್ಯೆಗಳೂ ಪ್ರವಾದಿ(ಸ)ರ ಜೀವನದಲ್ಲಿ ಘಟಿಸಿದೆ.  ‘ನಿಮಗೆ ಅಲ್ಲಾಹನ ಪ್ರವಾದಿಯವರಲ್ಲಿ ಉತ್ತಮ ಮಾದರಿಯಿದೆ’ (ಅಲ್ ಅಹ್‍ಝಾಬ್ 21) ಎಂಬ ಸೂಕ್ತವು ಕೇವಲ ನಿಯಮ ನಿಬಂಧನೆಗಳಿಗೆ ಮಾತ್ರ ಸೀಮಿತವಾದದ್ದಲ್ಲ. ಜೀವನದ ಆರಂಭದಿಂದ ಅಂತ್ಯದವರೆಗೂ ಮಾದರಿಯನ್ನು ಸೃಷ್ಟಿಸಿಕೊಂಡೇ ಪ್ರವಾದಿ(ಸ)ರ ಜೀವನ ಹಾದು ಹೋಗಿದೆ.

ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ ಸ್ವಲ್ಪವೂ ಧೃತಿಗೆಡದೆ, ನಿರಾಶೆಗೊಳ್ಳದೆ ಶುಭ ಪ್ರತೀಕ್ಷೆಯೊಂದಿಗೆ ಅದನ್ನು ಎದುರಿಸುವುದೇ ಪ್ರವಾದಿ(ಸ)ರ ಮಾದರಿ. ಅನುಯಾಯಿಗಳು ಆತಂಕಗೊಂಡಾಗ ಅವರನ್ನು ಸಮಾಧಾನಪಡಿಸಿ, ಸಾಂತ್ವನಗೊಳಿಸಿದ ಪ್ರವಾದಿಯವರ(ಸ) ಜೀವನವನ್ನು ನಾವು ಇತಿಹಾಸದಲ್ಲಿ ಕಾಣಲು ಸಾಧ್ಯವಿದೆ. ಹಲವು ರೀತಿಗಳಿಂದ ಅನುಯಾಯಿಗಳನ್ನು ಸಾಂತ್ವನಗೊಳಿಸಿದ್ದನ್ನು ನಮಗೆ ತಿಳಿಯಬಹುದು. ಕ್ಷಮೆ ಮತ್ತು ಸಹನೆ ವಹಿಸಿದರೆ ದೊರೆಯುವ ಪ್ರತಿಫಲವೂ ಮತ್ತು ದೇವಸಂಪ್ರೀತಿಯನ್ನು ಮನವರಿಕೆ ಮಾಡಿಕೊಡುವುದು ಇದರ ಒಂದು ರೀತಿಯಾಗಿತ್ತು. ಅದನ್ನು  ಸಮರ್ಥಿಸುವ ಹಲವಾರು ದಿವ್ಯ ವಚನಗಳು, ಹದೀಸ್ ಸಾಕ್ಷ್ಯಗಳೂ ಧಾರಾಳವಿದೆ. ಓರ್ವ ಮುಸ್ಲಿಮನಿಗೆ ರೋಗ, ತೊಂದರೆ, ಆಯಾಸ, ದುಃಖ ಸಂಭವಿಸಿದರೆ ಹೆಚ್ಚೇಕೆ ತನ್ನ ಕಾಲಿಗೆ ಒಂದು ಮುಳ್ಳು ಚುಚ್ಚಿದರೂ ಕೂಡ ಅದು ಆತನ ಪಾಪಗಳನ್ನು ತೊಳೆಯಲು ಕಾರಣವಾಗುತ್ತದೆಂದು ಬುಖಾರಿ ಮುಸ್ಲಿಮ್ ಉದ್ಧರಿಸಿದ ಹದೀಸ್‍ಗಳಲ್ಲಿವೆ. ಓರ್ವರಿಗೆ ಏನಾದರೂ ತೊಂದರೆ ಅನುಭವಿಸಿದರೆ ಮರಣವನ್ನು ಬಯಸಬಾರದೆಂದೂ ಗತ್ಯಂತರವಿಲ್ಲದೆ ಬಂದಾಗ ಅಂದರೆ ಅಷ್ಟೊಂದು ಅಸಹನೀಯವಾದಾಗ ‘ನನ್ನ  ಜೀವನ ಅನುಗ್ರಹವಾಗಿದ್ದರೆ ನನ್ನನ್ನು ಬದುಕಿಸಬೇಕೆಂದೂ ಮರಣವು ಉತ್ತಮವೆಂದಾದರೆ ನನ್ನನ್ನು ಮರಣಗೊಳಿಸಬೇಕು’ ಎಂದೂ ಪ್ರಾರ್ಥಿಸಬಹುದೆಂದು ಪ್ರವಾದಿ(ಸ)ರು ಕಲಿಸಿದ್ದಾರೆ.

ಪೂರ್ವ ಪ್ರವಾದಿಗಳ ಚರಿತ್ರೆಯಲ್ಲಿ ಸಾಂತ್ವನದ ಇನ್ನೊಂದು ರೀತಿಯನ್ನು ತೋರಿಸಿ ಕೊಡಲಾಗಿದೆ. ‘ನಾವು ಸಂದೇಶವಾಹಕರ  ಚರಿತ್ರೆಗಳನ್ನು ಹೇಳಿ ಕೊಡುವುದು ತಮ್ಮ ಹೃದಯದಲ್ಲಿ ಶಕ್ತಿ ಉಂಟಾಗಲಿಕ್ಕಾಗಿದೆ’ (ಹೂದ್ 120) ಎಂದೂ ಕುರ್‍ಆನ್ ಹೇಳುತ್ತದೆ.  ಖಬ್ಬಾಬ್ ಇಬ್ನುಲ್ ಅರತ್(ರ) ಉದ್ಧರಿಸುವ ಒಂದು ಹದೀಸ್ ಇಮಾಮ್ ಬುಖಾರಿ ಉಲ್ಲೇಖಿಸುತ್ತಾರೆ: ಪ್ರವಾದಿ(ಸ)ರು ಒಂದು ದಿನ ಕಅಬಾ ಭವನದ ನೆರಳಿನಲ್ಲಿ ಒಂದು ಹೊದಿಕೆಯನ್ನು ತಲೆದಿಂಬಾಗಿ ಇರಿಸಿ ಮಲಗಿದ್ದರು. ಆಗ ನಾವು ಅನುಭವಿಸುತ್ತಿರುವ  ತೊಂದರೆಗಳ ಕುರಿತು ಪ್ರವಾದಿಯವರಿಗೆ ಹೇಳಿದೆವು. ನಾವು ಕೇಳಿದೆವು, “ಅಲ್ಲಾಹನ ಪ್ರವಾದಿಗಳೇ, ನಮಗಾಗಿ ತಾವು ಅಲ್ಲಾಹನೊಡನೆ ಸಹಾಯ ಯಾಚಿಸುವುದಿಲ್ಲವೇ? ಪ್ರಾರ್ಥಿಸುವುದಿಲ್ಲವೇ?” ಆಗ ಪ್ರವಾದಿ(ಸ)ರು ಉತ್ತರಿಸಿದರು, “ನಿಮ್ಮ ಪೂರ್ವಿಕರಾದ  ಕೆಲವು ಸತ್ಯವಿಶ್ವಾಸಿಗಳನ್ನು ಅರ್ಧ ಭಾಗದವರೆಗೆ ಭೂಮಿಯಲ್ಲಿ ಹೂತು ಭರ್ಚಿಯಿಂದ ತಿವಿಯಲಾಗುತ್ತಿತ್ತು. ಇನ್ನು ಕೆಲವರನ್ನು ಕಬ್ಬಿಣದ ಬಾಚಣಿಗೆಯಿಂದ ಶರೀರದ ಮಾಂಸ ಮತ್ತು ಎಲುಬುಗಳನ್ನು ಪ್ರತ್ಯೇಕಿಸಲಾಗುತ್ತಿತ್ತು. ಅದ್ಯಾವುದೂ  ಅವರನ್ನು ಧರ್ಮದಿಂದ ಹಿಂಜರಿಸಲಿಲ್ಲ.” ಹದೀಸ್ ಕೊನೆಗೊಳ್ಳುವುದು ಅವರಿಗೆ ಸಾಂತ್ವನ ನೀಡಿ ಆಗಿತ್ತು. ಪ್ರವಾದಿ(ಸ)  ಮುಂದುವರಿದು ಹೇಳುತ್ತಾರೆ, “ಅಲ್ಲಾಹನಾಣೆ, ಈ ಕಾರ್ಯ ಅಥವಾ ಈ ಧರ್ಮ ಸಂಪೂರ್ಣವಾಗಿಯೇ ತೀರುವುದು. ಅಂದು ಸನ್‍ಆದಿಂದ ಹಝರಲ್ ಮೌತ್ ವರೆಗೆ ಓರ್ವರಿಗೆ ನಿರ್ಭೀತಿಯಿಂದ ಸಂಚರಿಸಲು ಸಾಧ್ಯವಾಗುವುದು. ಅಲ್ಲಾಹನನ್ನು ಮತ್ತು ತನ್ನೊಂದಿ ಗಿರುವ ಆಡುಗಳನ್ನು ತೋಳವು ಹಿಡಿದೀತೆಂಬ ಭಯದ ಹೊರತು ಬೇರಾರಿಗೂ ಭಯ ಪಡಬೇಕಾಗಿಲ್ಲ. ಆದರೆ ನೀವು ಅವಸರ ಪಡುತ್ತೀರಿ.”

ಅಬ್ದುಲ್ಲಾ ಇಬ್ನು ಮಸ್‍ಊದ್(ರ) ಹೇಳುತ್ತಾರೆ, ಪ್ರವಾದಿಯವರ ಜೀವನದಲ್ಲಿ ನಡೆದ ಘಟನೆ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ.  ತನ್ನ ಸಮುದಾಯ ಅವರನ್ನು ಹೊಡೆದು ರಕ್ತ ದಿಂದ ತೋಯಿಸಿತು. ಅವರು ಒಸರುತ್ತಿದ್ದ ರಕ್ತವನ್ನು ಸವರುತ್ತಾ ಪ್ರಾರ್ಥಿಸಿದರು,  “ಅಲ್ಲಾಹನೇ, ನನ್ನ ಸಮುದಾಯವನ್ನು ನೀನು ಕ್ಷಮಿಸು. ಅವರು ಅರಿವು ಇಲ್ಲದವರಾಗಿದ್ದಾರೆ.” (ಬುಖಾರಿ, ಮುಸ್ಲಿಮ್) ಇದಕ್ಕೆ  ಸಮಾನವಾದ ಹಲವು ಉದಾಹರಣೆಗಳನ್ನು ಉಲ್ಲೇಖಿಸಲು ಸಾಧ್ಯವಿದೆ.

ಅಸತ್ಯವು ಎಷ್ಟೇ ಪ್ರಬಲವಾಗಿದ್ದರೂ ಅದರ ವಿರುದ್ಧ ಸತ್ಯದ ವಿಜಯಗಾಥೆಯನ್ನು ಪ್ರವಾದಿಗಳು ಹೇಳಿದ ಕಥೆಗಳಲ್ಲಿದೆ. ಉಖ್‍ದುದ್ದೀನ್‍ರ ಚರಿತ್ರೆಯನ್ನು ಕುರ್‍ಆನ್‍ನಲ್ಲಿ ವ್ಯಂಗ್ಯವಾಗಿ ಹೇಳಲಾಗಿದೆ. ಆದರೆ ಒಂದು ದೀರ್ಘವಾದ ಹದೀಸ್‍ನ ಮೂಲಕ ಪ್ರವಾದಿ(ಸ)ರು ಸಂಪೂರ್ಣವಾಗಿ ಅದನ್ನು ವಿವರಿಸಿದ್ದಾರೆ. ಬಹುದೇವಾರಾಧನೆ ಹಾಗೂ ರಾಜಭಕ್ತಿಯಿಂದ ಜೀವಿಸಿದ್ದ ಒಂದು ಇಡೀ ನಾಡು ಸತ್ಯವಿಶ್ವಾಸಿಯಾದ ಓರ್ವ ಹುಡುಗನ ಕಾರಣದಿಂದ ಇಸ್ಲಾಮಿಗೆ ಬಂದ ಚರಿತ್ರೆ ಉಖ್‍ದುದ್ದೀನ್‍ನದು. ನಂತರ ಆ ಇಡೀ ನಾಡು ಸತ್ಯಧರ್ಮಕ್ಕಾಗಿ ಹುತಾತ್ಮವಾಯಿತು ಎಂದು ಇತಿಹಾಸವು ಕಲಿಸುತ್ತದೆ.

ಇಂತಹ ನೂರಾರು ಕಠಿಣ ಪರೀಕ್ಷೆಗಳಿಗೆ ಗುರಿಯಾಗುವಾಗಲೂ ಅವರ ವಿಶ್ವಾಸದಲ್ಲಿ ದೃಢತೆ ನೀಡಲು ಪ್ರವಾದಿವರ್ಯರು(ಸ)  ಧಾರಾಳ ಶುಭ ನಿರೀಕ್ಷೆಗಳನ್ನು ಅವರಿಗೆ ನೀಡಿದರು. ಸನ್‍ಆದಿಂದ ಹಝರುಲ್ ಮೌತ್ ವರೆಗೆ ನಿರ್ಭಯವಾಗಿ ನಡೆಯಲು ಸಾಧ್ಯವಿದೆಯೆಂಬ ಸಾಂತ್ವನದ ಮಾತು ಆಗಲೇ ಹೇಳಿದೆನಲ್ಲವೇ? ಹಿಜಿರಾದ ಸಂದರ್ಭದಲ್ಲಿ ಸುರಾಕತುಬ್ನು ಮಾಲಿಕ್ ಪ್ರವಾದಿ(ಸ)  ಸಮೀಪಕ್ಕೆ ತಲುಪುವಾಗ ಅಬೂಬಕರ್(ರ)ರು ಆತಂಕಗೊಳ್ಳುತ್ತಾರೆ. ‘ತಾವು ಭಯಪಡಬೇಡಿ, ಅಲ್ಲಾಹನು ನಮ್ಮೊಂದಿಗಿದ್ದಾನೆ’  ಎಂದು ಹೇಳಿ ಸಿದ್ದೀಕ್(ರ)ರನ್ನು ಸಾಂತ್ವನಗೊಳಿಸಿದರು ಪ್ರವಾದಿ. ಬಳಿಕ ಪ್ರವಾದಿ(ಸ)ರು ಸುರಾಕರೊಂದಿಗೆ ಕೇಳುವ ಪ್ರಶ್ನೆಯೊಂದಿದೆ. ಅದು ಅಬೂಬಕರ್‍ ರಿಗೆ ಬಹಳ ಸಾಂತ್ವನದ ಕೊಡುಗೆಯಾಗಿತ್ತು. “ಸುರಾಖಾ, ಕಿಸ್ರಾನ ಕಿರೀಟ ಮತ್ತು ಕಡಗವನ್ನು ನೀನು ಧರಿಸಿದರೆ ಹೇಗಿರಬಹುದು?” ಎಂದು ಪ್ರವಾದಿಯವರು(ಸ) ಕೇಳುವಾಗ, ಕೆಲವೇ ವರ್ಷಗಳಲ್ಲಿ ಪರ್ಷಿಯಾ ಸಾಮ್ರಾಜ್ಯವು ತನ್ನ ಅಧೀನಕ್ಕೆ ಬರುವುದು ಎಂಬ ಶುಭ ಪ್ರತೀಕ್ಷೆಯನ್ನು ಹಂಚಿಕೊಂಡಿದ್ದರು.

ಕಂದಕ ತೋಡುವಾಗ ಉಂಟಾದ ಒಂದು ಘಟನೆಯನ್ನು ಹೇಳುತ್ತೇನೆ. ಕಂದಕ ತೋಡುತ್ತಿದ್ದ ವೇಳೆ ಯಾವುದೇ ಸಲಕರಣೆಗಳಿಂದಲೂ ಹುಡಿಯಾಗದ ಒಂದು ದೊಡ್ಡ ಬಂಡೆಕಲ್ಲು ಪ್ರತ್ಯಕ್ಷ್ಯವಾಯಿತು. ಅನುಚರರು ಪ್ರವಾದಿ(ಸ)ರೊಡನೆ ಬಂದು ವಿಷಯ ತಿಳಿಸಿದರು. ಆಗ ಪ್ರವಾದಿ(ಸ)ರು ಮೇಲ್ವಸ್ತ್ರವನ್ನು ತೆಗೆದು ಕಂದಕಕ್ಕೆ ಇಳಿದರು. ಕೊಡಲಿಯಿಂದ ಬಂಡೆಕಲ್ಲಿಗೆ ಬಲವಾದ ಏಟು ಕೊಟ್ಟರು. ಆಗ ಅದರ ಒಂದು ಭಾಗ ಒಡೆಯಿತು. ಪ್ರವಾದಿ(ಸ)ರು ಜೋರಾಗಿ ತಕ್ಬೀರ್ ಹೇಳುತ್ತಾ ಹೇಳಿದರು, “ನನಗೆ  ಶಾಮ್ ದೇಶದ ಕೀಲಿಕೈ ದೊರೆಯಿತು. ಅಲ್ಲಿರುವ ಕೆಂಪು ಅರಮನೆಗಳನ್ನು ನಾನು ಕಾಣುತ್ತಿದ್ದೇನೆ.” ಎರಡೇ ಬಾರಿಯ ಪ್ರಯೋಗದಿಂದ ಬಂಡೆಕಲ್ಲಿನ ಮೂರರಲ್ಲೊಂದು ಭಾಗವೂ ತುಂಡಾಯಿತು. ಪ್ರವಾದಿ(ಸ) ತಕ್ಬೀರ್ ಮೊಳಗಿಸುತ್ತಾ, ನನಗೆ ಪರ್ಷಿಯನ್ ಕೀಲಿಕೈಯೂ ದೊರೆಯಿತು ಎಂದೂ ಮದಾಇನ್‍ನ ಬಿಳಿಯ ಅರಮನೆಗಳನ್ನು ನಾನು ಕಾಣುತ್ತಿದ್ದೇನೆಂದೂ ಹೇಳಿದರು. ಮೂರನೇ  ಏಟಿಗೆ ಬಂಡೆ ಸಂಪೂರ್ಣವಾಗಿ ಛಿದ್ರಗೊಂಡಿತು. ಇಲ್ಲಿ ಬೆನ್ನಿಗಂಟಿದ ಹೊಟ್ಟೆಯೊಂದಿಗೆ ತನ್ನ ಮುಂದಿರುವ ಅನುಚರರಿಗೆ ಒಂದು  ಶುಭ ನಿರೀಕ್ಷೆಯನ್ನು ಪ್ರವಾದಿಯವರು ನೀಡಿದ್ದರು.

ಅತ್ಯಂತ ದೊಡ್ಡ ಶುಭಾಪ್ತಿಯ ವಿಶ್ವಾಸ ಪ್ರವಾದಿ(ಸ)ರೇ ಆಗಿದ್ದರಲ್ಲವೇ?
ತಾಇಫ್‍ನಲ್ಲಿ ತೀವ್ರ ಹಿಂಸೆ, ಅವಮಾನಗಳಿಗೆ ಗುರಿಯಾಗಿ, ಬಹಳ ದುಃಖ, ನೋವು, ಮಾನಸಿಕ ಸಂಕಟ ಅನುಭವಿಸುತ್ತಿದ್ದ ಪ್ರವಾದಿ(ಸ)ರ ಬಳಿಗೆ ದೇವದೂತ ಜಿಬ್ರೀಲ್(ಅ) ಪ್ರತ್ಯಕ್ಷರಾದರು. ಆ ಸಮುದಾಯವನ್ನು ನಾಶಗೊಳಿಸಲು ಅನುಮತಿ ಕೇಳಿದಾಗ ಪ್ರವಾದಿ(ಸ)ರು ಅವರಿಗಾಗಿ ಪ್ರಾರ್ಥಿಸಿದರು. ಮಾತ್ರವಲ್ಲ, ಇವರಿಂದ ಅಲ್ಲಾಹನನ್ನು ಆರಾಧಿಸುವ ಓರ್ವ ವ್ಯಕ್ತಿಯಾದರೂ ಬರಬಹುದೆಂಬ ಶುಭ ನಿರೀಕ್ಷೆ ಪ್ರವಾದಿ(ಸ)ರದ್ದಾಗಿತ್ತು.

ಮಾನಸಿಕ ದೃಢತೆಯು ಒಂದು ಸಮೂಹದ ಸ್ವಸ್ಥತೆಗೆ ಅತ್ಯಂತ ಮುಖ್ಯವಾದ ಇನ್ನೊಂದು ವಿಷಯ. ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾದಿಯವರು ಮಾಡಿದ ಭಾಷಣಗಳಾಗಿತ್ತು. ಅನುಯಾಯಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ಅಥವಾ ಯಾವುದಾದರೂ ಅಸ್ವಸ್ಥತೆ ಗೋಚರಿಸಿದಾಗ ಪ್ರವಾದಿಯವರು(ಸ) ಅವರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ಬಹಳ ಗಂಭೀರವಾದ ಭಾಷಣಗಳನ್ನು ಮಾಡುತ್ತಿದ್ದರು. ಇದರಿಂದ ಅವರ ಮನೋಬಲ, ವಿಶ್ವಾಸದಾಢ್ರ್ಯ, ಮನಸ್ಸಿಗೆ ಸಾಂತ್ವನ ನೀಡಲು ಪ್ರವಾದಿ(ಸ)ರಿಗೆ ಸಾಧ್ಯವಾಗಿದೆ.

ಪ್ರಾರ್ಥನೆಗಳು ಯಾವಾಗಲೂ ಮನಸ್ಸಿಗೆ ಸಮಾಧಾನ ನೀಡುವ ಚಾಲಕ ಶಕ್ತಿಯಾಗಿದೆ. ಎಷ್ಟೇ ಅಸಹಾಯಕತೆ, ಸಮಸ್ಯೆಗಳಿದ್ದರೂ ಎಲ್ಲವನ್ನೂ ಆ ಪ್ರಭುವಿನ ಮುಂದೆ ನಿವೇದಿಸಿಕೊಂಡರೆ ಮನಸ್ಸಿನ ಚಂಚಲತೆ, ದೌರ್ಬಲ್ಯ ದೂರವಾಗುತ್ತದೆ. ತಾಇಫ್‍ನ  ಭೂಮಿಯಲ್ಲಿ ಪ್ರವಾದಿ(ಸ)ರು ಒಂದು ದೀರ್ಘವಾದ ಪ್ರಾರ್ಥನೆಯನ್ನು ಮಾಡುತ್ತಾರೆ. ಬದ್ರ್ ರಣಾಂಗಣದಲ್ಲಿ ಕೇವಲ ನಾಮ ಮಾತ್ರ  ಸೈನಿಕರು ಮತ್ತು ಆಯುಧಗಳಿದ್ದ ಸಮಯದಲ್ಲಿ ಪ್ರವಾದಿವರ್ಯರು ಸುದೀರ್ಘವಾದ ಭಾಷಣವನ್ನು ನಿರ್ವಹಿಸಿದ ಬಳಿಕ, ದೀರ್ಘವಾಗಿ ಪ್ರಾರ್ಥಿಸಿದ್ದರು. ‘ಈ ಮಣ್ಣಿನಲ್ಲಿ ನಾವು ಪರಾಜಯಗೊಂಡರೆ ನಿನ್ನನ್ನು ಆರಾಧಿಸಲು ಒಂದು ಸಮುದಾಯ ಈ  ಭೂಮಿಯಲ್ಲಿ ಇರಲಾರದು’ ಎಂದು ಪ್ರವಾದಿ(ಸ)ರು ಹೇಳುವಾಗ ಬದ್ರ್‍ನ ವಿಜಯವನ್ನು ಪ್ರವಾದಿ(ಸ)ರು ಅಲ್ಲಾಹನಿಗೆ  ವಹಿಸಿಕೊಟ್ಟಿದ್ದರು. ಆ ಪ್ರಾರ್ಥನೆಯು ವಿಶ್ವಾಸಿಗಳ ಮನೋಶಕ್ತಿಯನ್ನು ಹೆಚ್ಚಿಸಿತ್ತೆಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ.

ಒಟ್ಟಿನಲ್ಲಿ, ನಾವು ಇಂದು ಎದುರಿಸುತ್ತಿರುವ ಸಂದಿಗ್ಧತೆಗಳಿಂದ ಮನೋದಾಢ್ರ್ಯ ಕೆಡದಿರಲು ಪ್ರವಾದಿಯವರು(ಸ) ಕಲಿಸಿದ ಪಾಠಗಳನ್ನು ಕಲಿಯಬೇಕು. ಹಿಂದೆ ಆಗಿ ಹೋದಂತಹ ಘಟನೆಗಳ ಪುನರಾವರ್ತನೆಯನ್ನು ಮಾತ್ರ ನಾವು ಇಂದೂ ಅನುಭವಿಸುತ್ತಿದ್ದೇವೆ. ಮನೋದಾಢ್ರ್ಯವನ್ನು ಕೆಡಿಸುವುದೇ ಶತ್ರುವಿನ ಕುತಂತ್ರಗಳಲ್ಲಿ ಪ್ರಥಮವಾದದ್ದು. ಇದರಲ್ಲಿ ನಾವು  ಸೋಲಬಾರದು. ಯಾವುದೇ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಬಾರದು. ನಮಗೆ ಪ್ರವಾದಿ ಮುಹಮ್ಮದ್(ಸ)ರ ಜೀವನವೇ  ಇಂತಹ ಸಂದರ್ಭದಲ್ಲಿ ಮಾದರಿ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …