Home / ಲೇಖನಗಳು / ಕೃಷಿಯ ಮಹತ್ವ ಇಸ್ಲಾಮಿನಲ್ಲಿ

ಕೃಷಿಯ ಮಹತ್ವ ಇಸ್ಲಾಮಿನಲ್ಲಿ

ಸಂಗ್ರಹ: ಎನ್.ಎಂ. ಪಡೀಲ್

ಅನ್ ಅನಸ್(ರ) ಕಾಲ: ಕಾಲ ರಸೂಲುಲ್ಲಾಹಿ(ಸ): ಮಾ ಮಿನ್ ಮುಸ್ಲಿಮಿ, ಯಫ್‍ರಿಸು ಘರ್‍ಸನ್ ಅವ್ ಯಝ್‍ರಊ ಝರ್‍ಅನ್ ಫಯಅïಕುಲು ಮಿನ್‍ಹು ತೈರುನ್ ಅವ್ ಇನ್‍ಸಾನುನ್ ಅವ್  ಬಹೀಮತುನ್ ಇಲ್ಲಾ ಕಾನ ಲಹು ಬಿಹಿ ಸದಕತುನ್. (ಬುಖಾರಿ)
ಅನಸ್(ರ)ರಿಂದ ವರದಿಯಾಗಿದೆ. ಪ್ರವಾದಿಯವರು(ಸ) ಹೇಳಿದರು: “ಓರ್ವ ಮುಸ್ಲಿಮ್ ಗಿಡ ನೆಡುತ್ತಾನೆ ಅಥವಾ ಕೃಷಿ ಮಾಡುತ್ತಾನೆ. ನಂತರ ಅದರ ಬೆಳೆಯನ್ನು ಹಕ್ಕಿ, ಮನುಷ್ಯ ಅಥವಾ ಪ್ರಾಣಿಗಳು ತಿನ್ನುತ್ತವೆ. ಆಗ ಫಸಲನ್ನು ಬೆಳದವನಿಗೆ ದಾನ ಧರ್ಮದ ಪುಣ್ಯ ಲಭಿಸದಿರುವುದಿಲ್ಲ. (ಬುಖಾರಿ)

ಆಹಾರವು ಪ್ರತಿಯೊಂದು ಜೀವಿಯ ಮೂಲಭೂತ ಆವಶ್ಯಕತೆಯಾಗಿದೆ. ಆಹಾರವು ಜೀವ ಸಂಕುಲದ ಉಳಿವಿಗೆ ಅನಿವಾರ್ಯವಾದುದು. ಧಾನ್ಯ, ಕಾಳು, ಹಸಿರು ತರಕಾರಿಗಳು, ಹಣ್ಣು ಇವೆಲ್ಲಾ ಮನುಷ್ಯರ ಆಹಾರದಲ್ಲಿ ಮುಖ್ಯವಾಗಿದೆ. ಇವೆಲ್ಲವೂ ಲಭಿಸಬೇಕಾದರೆ ಗಿಡಗಳನ್ನು ನೆಡಬೇಕು. ಆಗ ಅದರಿಂದ ಫಸಲು ದೊರೆಯುತ್ತದೆ. ನಾವು ಸ್ವತಃ ಮಾಡಿದ ಕೃಷಿಯಿಂದ ಮನುಷ್ಯರು ಬಿಡಿ, ಪಕ್ಷಿಗಳು,  ಪ್ರಾಣಿಗಳು ಅಥವಾ ಇತರ ಜೀವಜಾಲಗಳು ತಿಂದರೆ ಅದನ್ನು ನೆಟ್ಟು ಬೆಳೆಸಿದ ವ್ಯಕ್ತಿಗಳಿಗೆ ದಾನ ಮಾಡಿದ ಪುಣ್ಯ ಲಭಿಸುವುದೆಂದು ಈ ಹದೀಸ್ ಸ್ಪಷ್ಟಪಡಿಸುತ್ತದೆ.

ಕೃಷಿ ಕಾರ್ಯವನ್ನು ನಡೆಸುವ ವ್ಯಕ್ತಿಗಳು ತಮಗೂ ಸಮಾಜಕ್ಕೂ, ಕುಟುಂಬಗಳಿಗೂ ಬಹಳ ದೊಡ್ಡ ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ ಇಸ್ಲಾಮ್ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.  ಪ್ರವಾದಿಯವರು(ಸ) ಹೇಳಿರುವರು: “ಯಾರಿಗಾದರೂ ಸ್ಥಳವಿದ್ದರೆ ಆತ ಅಲ್ಲಿ ಕೃಷಿ ಮಾಡಲಿ. ಕೃಷಿ ಮಾಡುವುದಿಲ್ಲವೆಂದಾದರೆ ಅದನ್ನು ತಮ್ಮ ಸಹೋದರನಿಗೆ ನೀಡಿ. ನೀಡಲು ಆತ ನಿರಾಕರಿಸುತ್ತಾನೆಂದಾದರೆ ಅವನಿಂದ ಕಿತ್ತುಕೊಳ್ಳಲಿ.”
(ಅಹ್ಮದ್, ನಸಾಈ, ಇಬ್ನುಮಾಜಃ)

ಪ್ರವಾದಿಯವರು(ಸ) ದುಡಿಮೆಯನ್ನು ಪ್ರೋತ್ಸಾಹಿಸಿದ್ದಾರೆ. ಉದ್ಯೋಗದಲ್ಲಿ ಮೂರು ವಿಧಗಳಿವೆ. ಕೃಷಿ, ವ್ಯಾಪಾರ, ಕೈ ಕಸುಬುಗಳು. ಇದರಲ್ಲಿ ಅತ್ಯಂತ ಮುಖ್ಯವಾದುದು ಕೃಷಿಯಾಗಿದೆ. ಅಲ್ಲಾಹನ  ನಾಮದೊಂದಿಗೆ ಸದುದ್ದೇಶದಿಂದ ಓರ್ವನು ಕೃಷಿ ಮಾಡಿದರೆ, ಅದರಿಂದ ಯಾರು ಸೇವಿಸಿದರೂ ಅದಕ್ಕೆ ದಾನ ಮಾಡಿದ ಪುಣ್ಯ ಲಭಿಸುವುದು.

ಕೃಷಿ ಮಾಡುವುದರಿಂದ ಓರ್ವರಿಗೆ ಎರಡು ರೀತಿಯ ಲಾಭವಿದೆ. ಒಂದನೆಯದು ದೈಹಿಕ ಶ್ರಮ. ಇದು ಆತನ ಆರೋಗ್ಯವನ್ನು ಸಂರಕ್ಷಿಸುತ್ತದೆ. ಎರಡನೆಯದು ಕೃಷಿ ಮಾಡುವುದಕ್ಕೆ ಇರುವ ಮಹತ್ವ.  ಅದನ್ನು ಗಮನಿಸಿಯೇ ಪ್ರವಾದಿ(ಸ)ರು ಹೀಗೆ ಹೇಳಿರುವರು: “ಅಂತ್ಯದಿನ ಸಮೀಪಿಸಿತೆಂದು ತಿಳಿದರೂ ತನ್ನ ಕೈಯಲ್ಲಿರುವ ಗಿಡವನ್ನು ನೆಡಬೇಕು.”

ನಾವು ಮಾಡುವಂತಹ ಕೃಷಿ ನಮಗೆ ಮಾತ್ರ ಸೀಮಿತವಾಗಿರಬಾರದು. ಅದು ಇತರರಿಗೂ ಉಪಯೋಗವಾಗಬೇಕು. ಒಮ್ಮೆ ದಾರಿಯಲ್ಲಿ ಓರ್ವ ವೃದ್ಧನು ಗಿಡವನ್ನು ನೆಡುತ್ತಿದ್ದನು. ಆ ದಾರಿಯಲ್ಲಿ  ಚಕ್ರವರ್ತಿಯೊಬ್ಬರು ಬಂದರು. ಆಲಿವ್ ಗಿಡ ನೆಡುತ್ತಿದ್ದ ವೃದ್ಧನೊಡನೆ ಅವರು ಹೇಳಿದರು: “ಇದು ಫಲ ಬರಲು ತುಂಬಾ ಸಮಯ ಹಿಡಿಯುತ್ತದೆಯಲ್ವಾ?” ಆಗ ವೃದ್ಧರು ನಗುತ್ತಾ ಹೇಳಿದರು, “ನಮ್ಮ  ಹಿರಿಯರು ಗಿಡ ನೆಟ್ಟರು. ಅದರಿಂದುಂಟಾದ ಹಣ್ಣು ತರಕಾರಿಗಳನ್ನು ನಾವು ತಿಂದೆವು. ಇನ್ನು ಮುಂದಿನ ಪೀಳಿಗೆಗಾಗಿ ನಾನು ನೆಡುತ್ತಿದ್ದೇನೆ.

” ಆಯಿಶಾ(ರ) ರಿಂದ ವರದಿಯಾಗಿದೆ. ಪ್ರವಾದಿಯವರು(ಸ)  ಹೇಳಿದರು: “ಯಾರದೇ ಒಡೆತನದಲ್ಲಿ ಇಲ್ಲದ ಭೂಮಿಯಲ್ಲಿ ಯಾರಾದರೂ ಕೃಷಿ ಮಾಡಿ ಬದುಕಿದರೆ ಅದರ ಹಕ್ಕುದಾರ ಅವನೇ ಆಗಿರುತ್ತಾನೆ.” (ಬುಖಾರಿ) ಯಾರ ಒಡೆತನದಲ್ಲೂ ಇಲ್ಲದ ಒಂದು  ಸ್ಥಳದಲ್ಲಿ ಯಾರಾದರೂ ಕೃಷಿ ಮಾಡಿದರೆ ಅದರ ಪ್ರತಿಫಲವು ಕೃಷಿ ಮಾಡಿದ ವ್ಯಕ್ತಿಗೆ ಲಭಿಸುವುದು.

ವಿವಿಧ ರೋಗಗಳು ತುಂಬಿಕೊಂಡಿರುವ ಒಂದು ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಜನರು ಆರೋಗ್ಯವಂತರಾಗಿರಬೇಕಾದರೆ ದುಡಿಮೆ ಅತ್ಯಗತ್ಯ. ಪ್ರವಾದಿಯವರು(ಸ) ಹೇಳಿರುವರು: “ಹೆಚ್ಚಿನ ಜನರು ಎರಡು ಕಾರ್ಯಗಳಿಂದ ವಂಚಿತರಾಗಿದ್ದಾರೆ. ಅದು ಆರೋಗ್ಯ ಮತ್ತು ಬಿಡುವಿನ ವೇಳೆಯಾಗಿದೆ.” ಸಮಯವು ಉರುಳುತ್ತಲೇ ಇದೆ. ಪ್ರತಿಯೊಂದು ನಿಮಿಷವು ನಮ್ಮ ಜೀವನದಲ್ಲಿ ಬಹಳ ಬೆಲೆಬಾಳುವಂತಹದ್ದಾಗಿದೆ. ಅದನ್ನು ವ್ಯರ್ಥ ಮಾಡಬಾರದು. ಆದ್ದರಿಂದ ಸಮಯವನ್ನು ವ್ಯರ್ಥಗೊಳಿಸದೆ, ಒಳ್ಳೆಯ ಮನಸ್ಸಿನೊಂದಿಗೆ, ಪ್ರಾರ್ಥನೆಯೊಂದಿಗೆ ಕೃಷಿ ಮಾಡುವುದಾದರೆ ಹಲವು ಅನುಗ್ರಹಗಳು ನಮಗೆ ಲಭಿಸುತ್ತದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …