Home / ಲೇಖನಗಳು / ಕೊರೋನಾ ಕಲಿಸಿದ ಪಾಠ

ಕೊರೋನಾ ಕಲಿಸಿದ ಪಾಠ

@ ಮೌ| ವಲಿಯುಲ್ಲಾಹ್ ಸಈದಿ ಫಲಾಹಿ

ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವ ಹಾನಿ ಮತ್ತು ಉತ್ಪನ್ನಗಳ ನಾಶಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸಂದರ್ಭಗಳಲ್ಲಿ ತಾಳ್ಮೆ ವಹಿಸಿ ದವರಿಗೆ ಸುವಾರ್ತೆ ನೀಡಿರಿ. (ಪವಿತ್ರ ಕುರ್‍ಆನ್: 2-155)

ಕೋವಿಡ್- 19 ಎಂಬ ಮಹಾ ಪಿಡುಗು ಪವಿತ್ರ ಕುರ್‍ಆನಿನ ಮೇಲಿನ ಸೂಕ್ತದಲ್ಲಿ ತಿಳಿಸಿರುವ ಎಲ್ಲಾ ಪರೀಕ್ಷೆಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ. ನಾನು ಇವತ್ತು ಭಯ ಮತ್ತು ಹಸಿವು ಈ ಎರಡು ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸುವೆನು.

ಕೋವಿಡ್- 19 ಜನರಲ್ಲಿ ಒಂದು ಭಯದ ವಾತಾವರಣ ಸೃಷ್ಟಿಸಿದೆ. ಈ ರೋಗವು ನನ್ನನ್ನು ಬಾಧಿಸುತ್ತದೋ, ಮನೆಯವರಿಗೆ ಬಾಧಿಸುತ್ತದೋ ಎಂಬ ಭಯ. ಅದರೊಂದಿಗೆ ಪ್ರಯಾಣಿಸಲು ಭಯ, ಮನೆಗೆ ನೆಂಟರು ಬಂದರೂ ಭಯ. ಇದರಿಂದಾಗಿ ಹೆಚ್ಚಿನವರು ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಈ ಭಯದ ವಾತಾವರಣ ಹೊಸ ವಿಷಯವೇನೂ ಅಲ್ಲ. ಒಂದು ಜನಾಂಗದ  ಅತಿರೇಕಗಳು ಹೆಚ್ಚಾದಾಗ ಅಲ್ಲಾಹನು ಭಯದ ವಾತಾವರಣ ಸೃಷ್ಟಿಸಿ ಅದನ್ನು ಪರೀಕ್ಷಿಸುತ್ತಾನೆ. ಒಮ್ಮೊಮ್ಮೆ ಯುದ್ಧದ ಭೀತಿಯ  ಮೂಲಕ ಭಯ ಉಂಟು ಮಾಡುತ್ತಾನೆ. ಆದರೆ ಈ ಪಿಡುಗು ಇಡೀ ಜಗತ್ತನ್ನೇ ಭಯದಲ್ಲಿ ಜೀವಿಸುವಂತೆ ಮಾಡಿದೆ. ಪ್ರವಾದಿ(ಸ)  ಸಹಾಬಿಗಳೊಂದಿಗೆ ಅಲ್ಲಾಹನು ಶತ್ರುಗಳು ನಿಮ್ಮ ಮೇಲೆ ಏರಿ ಬರುವಂತೆ ಯುದ್ಧದ ಮೂಲಕ ನಿಮ್ಮನ್ನು ಪರೀಕ್ಷಿಸುವನು ಎಂದು  ಹೇಳಿರುತ್ತಾರೆ. ಆಗ ಶೈತಾನನು ನಿಮ್ಮ ಮನಸ್ಸಿನಲ್ಲಿ ಭೀತಿ ಹುಟ್ಟಿಸಿ ಯುದ್ಧ ರಂಗದಿಂದ ಹಿಂದೆ ಸರಿಯುವಂತೆ ಮಾಡುವನು. ಆದರೆ  ನೈಜ ಸತ್ಯವಿಶ್ವಾಸಿಗಳು ದೃಢಚಿತ್ತರಾಗಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುವರು.

ಮೂಮಿನರು ಎಂದಿಗೂ ನಿರಾಶರಾಗುವುದಿಲ್ಲ. ಅವರು ಸಂಪೂರ್ಣವಾಗಿ ಅಲ್ಲಾಹನ ಮೇಲೆ ಭರವಸೆ ಇಡುತ್ತಾರೆ. ಇತರ ಧರ್ಮದವರು ಜನಾಂಗಗಳು ನಾಸ್ತಿಕರು ಏನಾದರೂ ಸಂಕಷ್ಟ, ವಿಪತ್ತು ಬಂದಾಗ ನಿರಾಶರಾಗಿ ಕೈಚೆಲ್ಲಿ ಕುಳಿತುಕೊಳ್ಳುವರು.  ಅವರಲ್ಲಿ ಆಶಾಭಾವನೆ ಕಿಂಚಿತ್ತೂ ಗೋಚರಿಸದು. ಕೋವಿಡ್- 19 ಸಂದರ್ಭದಲ್ಲಿ ಆರ್ಥಿಕ ಹಾಗೂ ಇತರ ಸಂಕಷ್ಟಗಳಿಂದ  ಪಾರಾಗಲು ಆತ್ಮಹತ್ಯೆಗೆ ಶರಣಾದ ಸಾವಿರಾರು ಉದಾಹರಣೆಗಳನ್ನು ನಾವು ದಿನನಿತ್ಯ ಪತ್ರಿಕೆಗಳಲ್ಲಿ ಕಾಣಬಹುದು.

ಇಂಥ ಭಯಗ್ರಸ್ತ ವಾತಾವರಣದಿಂದ ಪಾರಾಗಲು ಮುಸ್ಲಿಮರಿಗೆ ಮಾರ್ಗದರ್ಶನವು ಕುರ್‍ಆನಿನಿಂದಲೇ ದೊರೆಯುತ್ತದೆ. ಈ  ಸಂದರ್ಭಗಳಲ್ಲಿ ಸತ್ಯವಿಶ್ವಾಸಿಗಳು ನಮಾಝ್ ಮತ್ತು ಸಹನೆಯ ಮೂಲಕ ಅಲ್ಲಾಹನ ಸಹಾಯ ಯಾಚಿಸುತ್ತಾರೆ.  “ಖಂಡಿತವಾಗಿಯೂ ನಾವು ಅಲ್ಲಾಹನಿಂದಲೇ ಬಂದವರು ಮತ್ತು ಅವನ ಕಡೆಗೇ ಮರಳಬೇಕಾಗಿದೆ ಎಂಬ ದೃಢವಿಶ್ವಾಸ  ಅವರಿಗಿದೆ. ರೋಗವು ಅಲ್ಲಾಹನಿಂದಲೇ ಬರುತ್ತದೆ ಮತ್ತು ಅದನ್ನು ಗುಣಪಡಿಸುವವನು ಅವನೇ ಆಗಿರುತ್ತಾನೆ. ಯಾವುದೇ ಕಠಿಣ ಸನ್ನಿವೇಶದಲ್ಲೂ ತಾಳ್ಮೆ ಎಂಬ ಆಯುಧವನ್ನು ಎಂದಿಗೂ ಕೈಬಿಡಬಾರದು. ಪ್ರವಾದಿ(ಸ)ರು ಹಾಗೂ ಅವರ ಅನುಯಾಯಿಗಳು  ವಹಿಸಿದ ತಾಳ್ಮೆಯ ಕಾರಣ ಅವರನ್ನು ಎಂಥ ಉನ್ನತ ಸ್ಥಾನಕ್ಕೇರಿಸಲಾಯಿತು ಎಂದು ಚರಿತ್ರೆಯಿಂದ ತಿಳಿಯಬಹುದು.

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣದ ಸವಿಯನ್ನು ಅನುಭವಿಸಲೇಬೇಕು. ಅದರ ಗಳಿಗೆ ಬಂದಾಗ ದೊಡ್ಡ ದೊಡ್ಡ ಡಾಕ್ಟರ್‍ ಗಳು ಸುತ್ತುವರಿದರೂ ಅದನ್ನು ಒಂದು ಕ್ಷಣಕ್ಕೂ ಮುಂದೂಡಲಾಗದು. ಮನುಷ್ಯನು ಅನೇಕ ದೊಡ್ಡ ದೊಡ್ಡ ಆಕಾಂಕ್ಷೆಗಳು ಹೊತ್ತು ಕೊಂಡಿದ್ದರೂ ಅದನ್ನು ಪೂರೈಸಲಾಗದೆ ಮರಣ ಹೊಂದಿದ ಅನೇಕ ಉದಾಹಣೆ ನಮ್ಮ ಮುಂದಿವೆ. ಎರಡನೆಯದಾಗಿ ಕೃತಜ್ಞತಾ  ಭಾವವನ್ನು ಸದಾ ರೂಢಿಸಿಕೊಳ್ಳಬೇಕು. ಯಾವಾಗ ಮನುಷ್ಯನು ಅಲ್ಲಾಹನು ನೀಡಿದ ಅನುಗ್ರಹಗಳಿಗೆ  ಕೃತಘ್ನತೆ ತೋರುತ್ತಾನೋ ಆಗ ಅವನನ್ನು ನಾನಾ ರೀತಿಯ ಕಷ್ಟಗಳಿಗೆ ತುತ್ತಾಗಿಸಿ ಪರೀಕ್ಷೆಗೊಳಪಡಿಸು ತ್ತಾನೆ. ನಮಗೆ ಸಿಕ್ಕಿರುವ  ಎಲ್ಲಾ ಸವಲತ್ತುಗಳು ಅವನ ಅನುಗ್ರಹ ಆಗಿದೆ. ಅಹಂಕಾರ ದೊಡ್ಡಸ್ತಿಕೆಗೆ ಒಳಗಾಗದೆ ಯಾವಾಗಲೂ ಅವನ ಮುಂದೆ ವಿನೀತನಾಗಿ  ಜೀವನ ಸಾಗಿಸಬೇಕಾಗಿದೆ. ನಾವು ಮಾಡುವ ದುಂದು ವೆಚ್ಚ, ಅಯವ್ಯಯದ ಕಾರಣ ಭಯ ಹಾಗೂ ಹಸಿವೆಯ ಕಷ್ಟಗಳನ್ನು ಎರಗಿಸುತ್ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ನಾವು ಎಷ್ಟನ್ನು ದುವ್ರ್ಯಯ ಮಾಡುತ್ತೇವೆ? ರಮಝಾನ್ ತಿಂಗಳಲ್ಲಿ ಅಗತ್ಯಕ್ಕಿಂತ ಹೆಚ್ಚು  ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನಲು ಸಾಧ್ಯವಾಗದೆ ಹೊರಗೆ ಬಿಸಾಡುವುದನ್ನು ನಾವು ರೂಢಿಸಿಕೊಂಡಿದ್ದೇವೆ. ಮದುವೆ  ಸಮಾರಂಭ ಗಳಲ್ಲಿ ಜನರು ಊಟ ಮಾಡದೆ ಹೋಗಬಾರದು ಎಂಬ ಭಯದಿಂದ ಅಗತ್ಯಕ್ಕಿಂತ ಹೆಚ್ಚು ತಯಾರಿಸಿ ಕಸದ ತೊಟ್ಟಿಗಳಲ್ಲಿ ಎಸೆಯುವುದನ್ನು ನೋಡುತ್ತೇವೆ. ಇವೆಲ್ಲದರ ಪರಿಣಾಮವಾಗಿ ಈ ಕೋವಿಡ್- 19 ರೋಗವು ನಮಗೆ ಪಾಠ  ಕಲಿಸಲು ಬಂದಂತಾಗಿದೆ. ಮದುವೆ ಸಮಾರಂಭಗಳನ್ನು ಅದ್ದೂರಿಯಿಂದ ನಡೆಸದಂತೆ ಸರಕಾರವೇ ನಿರ್ಬಂಧ ಹೇರಿದೆ. ಮದುವೆ  ಹಾಲ್‍ಗಳು ಸಮಾರಂಭಗಳಿಲ್ಲದೆ ಬೀಕೋ ಎನ್ನುತ್ತಿವೆ. ಈಗಲಾದರೂ ನಾವು ಎಚ್ಚೆತ್ತು ಅಲ್ಲಾಹನ ಕಡೆಗೆ ಮರಳಬೇಕಾಗಿದೆ.

ಇನ್ನೊಂದು ವಿಷಯದ ಬಗ್ಗೆ ಚರ್ಚಿಸುವುದಾದರೆ ಅದು ಆಹಾರದ ಸಮಸ್ಯೆಯಾಗಿದೆ. ಕೋವಿಡ್- 19 ರೋಗದಿಂದ ಜನರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರಕಾರದ ಅಸಮರ್ಪಕ ವ್ಯವಸ್ಥೆಯಿಂದಾಗಿ ಜನರು ನಾನಾ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಆದರೆ ಸತ್ಯವಿಶ್ವಾಸಿಗಳು ಈ ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಅವರು ಆಹಾರ ನೀಡುವವನು ಅಲ್ಲಾಹನಾಗಿದ್ದಾನೆ ಎಂಬ ವಿಶ್ವಾಸ ಹೊಂದಿರುತ್ತಾರೆ. ಈ ತಾತ್ಕಾಲಿಕ ಸಮಸ್ಯೆಯ ಮೂಲಕ ಅವನು ನಮ್ಮನ್ನು  ಪರೀಕ್ಷಿಸುತ್ತಾನೆ ಎಂಬ ವಿಶ್ವಾಸ ಅವರಿಗಿದೆ. ಪ್ರವಾದಿಯವರ(ಸ) ವಚನದಂತೆ ಒಬ್ಬ ವ್ಯಕ್ತಿಯ ಆಹಾರದ ಪಡಿತರವು ಆ ಮಗುವು  ತಾಯಿಯ ಹೊಟ್ಟೆಯಲ್ಲಿರುವಾಗಲೇ ನಿರ್ಧರಿಸಲ್ಪಡುತ್ತದೆ. ಆ ವ್ಯಕ್ತಿಯು “ತನ್ನ ಆಹಾರದ ಲೆಕ್ಕವನ್ನು ಮುಗಿಸದೆ ಮರಣ  ಹೊಂದಲಾರ” ಎಂದೂ ಕೂಡಾ ಇದೆ. ಆದ್ದರಿಂದ ಕೆಲಸದ ಭಯ, ಆಹಾರದ ಕೊರತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ತನ್ನಿಂದಾದಷ್ಟು ಪರಿಶ್ರಮಿಸಿ ಭರವಸೆಯನ್ನು ಅಲ್ಲಾಹನಲ್ಲಿಟ್ಟು ಪ್ರಾರ್ಥಿಸಬೇಕಾಗಿದೆ. ಆಹಾರದ ಒಂದು ದಾರಿಯು ಮುಚ್ಚಲ್ಪಟ್ಟಾಗ ಇತರ  ಹತ್ತು ದಾರಿಗಳು ತೆರೆಯುವುದು ಎಂಬ ದೃಢವಿಶ್ವಾಸ ನಮ್ಮಲ್ಲಿರಬೇಕು. ಶೈತಾನನು ನಾನಾ ವಿಧಗಳಿಂದ ನಮ್ಮಲ್ಲಿ ಸಂಶಯವನ್ನುಂಟು  ಮಾಡಲು ಪ್ರಯತ್ನಿಸುತ್ತಾನೆ. ಕೆಲಸವಿಲ್ಲದೆ ನಾವು ನಮ್ಮ ಮಕ್ಕಳನ್ನು ಹೇಗೆ ಸಾಕುವುದು. ನಮ್ಮ ಮಕ್ಕಳ ಮದುವೆ ಹೇಗೆ ಮಾಡುವುದು ಮುಂತಾಗಿ ನಮ್ಮನ್ನು ಅಲ್ಲಾಹನ ಬಗ್ಗೆ ನಿರಾಶರನ್ನಾಗಿ ಮಾಡಲು ಪ್ರಯತ್ನಿಸುತ್ತಾನೆ. ಅಲ್ಲಾಹನು ಅನ್ನದಾತ ಆಗಿರುತ್ತಾನೆ. ಭೂಮಿಯಲ್ಲಿರುವ ಸಕಲ ಜೀವಿಗಳಿಗೂ ಆಹಾರ ಒದಗಿಸುವವನು ಅವನು ಮಾತ್ರ. “ಅವನು ಅತ್ಯಂತ ಪ್ರಬಲನೂ ಮತ್ತು ಸಕಲ  ವಸ್ತುಗಳ ಮೇಲೆ ನಿಯಂತ್ರಣ ಉಳ್ಳವನಾಗಿರುತ್ತಾನೆ” ಎಂಬ ಪವಿತ್ರ ಕುರ್‍ಆನಿನ ಸೂಕ್ತವನ್ನು ಸದಾ ನಮ್ಮ ದೃಷ್ಟಿಯ ಮುಂದಿಟ್ಟು ಕಾರ್ಯಪ್ರವೃತರಾಗಬೇಕು. ಶೈತಾನನ ಪ್ರಲೋಭನೆಗೆ ತುತ್ತಾಗದಂತೆ ಸದಾ ಜಾಗೃತರಾಗಿರಬೇಕು.

ನಮ್ಮ ಆಹಾರವು ನಾವು ದುಡಿಯುವ ಕಂಪೆನಿಯ ಕೈಯಲ್ಲಿದೆ. ನಮ್ಮ ಸರಕಾರದ ನಮಗೆ ಆಹಾರ ಸಿಗುತ್ತದೆ. ದೇವಿ ದೇವತೆಗಳನ್ನು ಪ್ರಾರ್ಥಿಸುವ ಮೂಲಕ ನಮಗೆ ಆಹಾರ ಸಿಗುತ್ತದೆ ಎಂಬ ಭಾವನೆಯನ್ನು ಪವಿತ್ರ ಕುರ್‍ಆನ್ ಖಡಾಖಂಡಿತವಾಗಿ ತಿರಸ್ಕರಿಸುತ್ತದೆ. ಮೇಲಿನ ಯಾವ ವಿಧದಿಂದಲೂ ಆಹಾರ ದೊರೆಯುವುದಿಲ್ಲ. ಆಹಾರವು ಅಲ್ಲಾಹನ ವತಿಯಿಂದ ಮಾತ್ರ ಲಭಿಸುತ್ತದೆ. ಆಹಾರ ನೀಡಿದ್ದಕ್ಕಾಗಿ ನಾವು ಸದಾ ಅವನಿಗೆ ಕೃತಜ್ಞತೆ ಸಲ್ಲಿಸಬೇಕು. ಕಾರನೂನು ತನ್ನ ಸಂಪತ್ತಿನ ಬಗ್ಗೆ ಅಹಂಕಾರ ಮತ್ತು ದರ್ಪ ಪ್ರದರ್ಶಿಸಿದ. ಇದು ನನ್ನ ಸಾಮಥ್ರ್ಯದಿಂದ ಗಳಿಸಿತು ಎಂದು ಜಂಭಕೊಚ್ಚಿದ ಆದರೆ ಅಲ್ಲಾಹನು ಅದರ ಮೂಲಕವೇ ಅವನನ್ನು ವಿನಾಶದ ಕೂಪಕ್ಕೆ ತಳ್ಳಿದನು.  ಒಬ್ಬ ದೊಡ್ಡ ತೋಟಗಾರ ಹಾಗೂ ಒಬ್ಬ ಬಡ ವಿಶ್ವಾಸಿಯ ನಡೆಯುವ ಸಂಭಾಷಣೆಯ ಚಿತ್ರಣವನ್ನು ಸೂರಃ ಅಲ್‍ಕಹಫ್‍ನಲ್ಲಿ  ಕಾಣಬಹುದು. ಆದರೆ ಕೇವಲ ಇನ್‍ಶಾ ಅಲ್ಲಾಹ್ ಎಂದು ಹೇಳದ ಕಾರಣ ಆ ಜಮೀನ್ದಾರನ ತೋಟವು ಬಿರುಗಾಳಿಗೆ ಸಿಲುಕಿ ನಾಶವಾದ ಘಟನೆಯಿಂದ ನಾವು ಪಾಠ ಕಲಿಯಬೇಕಾಗಿದೆ. ಇಂದು ನಮ್ಮಲ್ಲಿ ಕೂಡಾ ತಮ್ಮ ಸಂಪತ್ತಿನ ಬಗ್ಗೆ ಅಹಂಭಾವ  ತೋರುವವರಿದ್ದಾರೆ. ನನ್ನ ಸಾಮಥ್ರ್ಯ ಹಾಗೂ ಪರಿಶ್ರಮದಿಂದ ನನಗೆ ಲಭಿಸಿದೆ ಎಂದು ಜಂಭಕೊಚ್ಚುವವರಿದ್ದಾರೆ.

“ಒಮ್ಮೆ ಒಬ್ಬ ವ್ಯಕ್ತಿಯು ಬಹಳ ಪರಿಶ್ರಮಿಸಿ, ಆಚೀಚ ದೌಡಾಯಿಸುವುದನ್ನು ಪ್ರವಾದಿಯವರಿಗೆ(ಸ) ಅವರ ಸಹಾಬಿಗಳು ತೋರಿಸುತ್ತಾರೆ. ಆಗ ಪ್ರವಾದಿ(ಸ)ರವರು ಅವನ ಈ ಪರಿಶ್ರಮವು ಮಡದಿ ಮಕ್ಕಳ, ಪೋಷಣೆ, ಅವನ ವೃದ್ಧಾಪ್ಯ ತಂದೆ-ತಾಯಿಯರ ಆರೈಕೆಗಾಗಿದ್ದರೆ ಬಡಬಗ್ಗರ ಕಷ್ಟ ನಿವಾರಣೆಗಾಗಿದ್ದರೆ ಹಾಗೂ ಧರ್ಮದ ಕೆಲಸ ಕಾರ್ಯಗಳಿಗಾಗಿದ್ದರೆ ಅವೆಲ್ಲವೂ ಅಲ್ಲಾಹನ  ಮಾರ್ಗದ ಪರಿಶ್ರಮವಾಗಿದೆ. ಒಂದು ವೇಳೆ ಅದು ತನ್ನ ಅಹಂಭಾವ ಪ್ರದರ್ಶನ, ಪ್ರತಿಷ್ಠೆ, ಜಂಭಕ್ಕಾಗಿದ್ದರೆ ಅದು ಶೈತಾನನ  ಮಾರ್ಗದ ಪರಿಶ್ರಮವಾಗಿದೆ” ಎಂದು ಹೇಳಿರುವರು. ಆದ್ದರಿಂದ ನಮ್ಮ ಆಹಾರದ ಗಳಿಕೆಯು ಕೇವಲ ಹಲಾಲ್ (ಧರ್ಮ ಸಮ್ಮತ)  ರೀತಿಯಿಂದಾಗಿರಬೇಕು. ಹರಾಮ್ ಮಾರ್ಗದ ಮೂಲಕ ಲಭಿಸುವ ಎಲ್ಲಾ ವಿಧದ ಆಹಾರ ಸೌಲಭ್ಯಗಳನ್ನು ತೊರೆಯಬೇಕು.  ಹಲಾಲ್ ಮೂಲಕ ದೊರೆಯುವ ಒಂದು ತುತ್ತು ಅನ್ನವು, ಹರಾಮ್ ಮೂಲಕ ದೊರೆಯಲು ಐಶಾರಾಮದ ಆಹಾರಕ್ಕಿಂತಲೂ  ಉತ್ತಮವಾಗಿದೆ. ಹರಾಮ್‍ನಿಂದ ಪೋಷಿಸಲ್ಪಟ್ಟ ಜನರ ಪ್ರಾರ್ಥನೆಗಳು ಖಂಡಿತ ಅಲ್ಲಾಹನಲ್ಲಿ ಸ್ವೀಕರಿಸಲ್ಪಡುವುದಿಲ್ಲ. ಆಹಾರದ ಬಗ್ಗೆ  ನಿರಾಶರಾಗದೆ, ಸಂಪೂರ್ಣವಾಗಿ ಅಲ್ಲಾಹನ ಮೇಲೆ ಭರವಸೆ ಇಟ್ಟು ಕಾರ್ಯಪ್ರವೃತ್ತರಾಗೋಣ. ನಮ್ಮ ಎಲ್ಲಾ ಸಂಕಷ್ಟಗಳ  ಪರಿಹಾರಕ್ಕಾಗಿ ಹಾಗೂ ಈ ಕೋವಿಡ್- 19 ಮಹಾ ಪಿಡುಗಿನಿಂದ ರಕ್ಷಣೆ ಒದಗಿಸಲು ಅಲ್ಲಾಹನೊಂದಿಗೆ ದೃಢಚಿತ್ತರಾಗಿ,  ಆತ್ಮಸ್ಥೈರ್ಯದೊಂದಿಗೆ ಪ್ರಾರ್ಥಿಸೋಣ. ಕತ್ತಲೆಯ ಬಳಿಕ ಸೂರ್ಯೋದಯದ ನಿರೀಕ್ಷೆಯಲ್ಲಿರುವಂತೆ ಉತ್ತಮ ಭವಿಷ್ಯಕ್ಕಾಗಿ  ಕಾಯೋಣ.

ಕೊನೆಯದಾಗಿ ಮರಣವು ಖಂಡಿತ ಬರಲಿದೆ. ಅದು ನಿಶ್ಚಿತ ಸಮಯದಲ್ಲಿ ಬಂದೇ ತೀರುವುದು. ಮರಣವು ವ್ಯಕ್ತಿಯ ನೆರಳಿನಂತೆ  ಸದಾ ಅವನನ್ನು ಹಿಂಬಾಲಿಸುತ್ತಿರುವುದು. ಆದರೆ ಪ್ರವಾದಿಯವರು(ಸ), “ಒಬ್ಬ ವ್ಯಕ್ತಿಯ ಆಹಾರವು ಅವನ ಮರಣಕ್ಕಿಂತ ಹೆಚ್ಚು  ಅವನನ್ನು ಹಿಂಬಾಲಿಸುತ್ತದೆ” ಎಂಬ ವಚನವು ಎಷ್ಟು ಅರ್ಥಗರ್ಭಿತವಾಗಿದೆ ಎಂದು ತಿಳಿದಿರಬೇಕು. ಆದ್ದರಿಂದ ಸದಾ ಅಲ್ಲಾಹನ  ಕೃತಜ್ಞದಾಸರಾಗಿ ಜೀವಿಸುತ್ತಾ, ಎಲ್ಲಾ ಸಂದರ್ಭಗಳಲ್ಲೂ ಅವನಿಗೆ ವಿನಮ್ರ ಪ್ರಕಟಿಸುತ್ತಾ ಜೀವಿಸೋಣ. ಲಕ್ಷಗಟ್ಟಲೆ ಜನರು ಆಹಾರ ಹಾಗೂ ಇತರ ಕಷ್ಟಗಳಿಗೆ ತುತ್ತಾಗಿದ್ದಾರೆ. ಅದರ ನಿವಾರಣೆಗಾಗಿ ತಮ್ಮಿಂದಾದಷ್ಟು ಪ್ರಯತ್ನಿಸಿ ಅವರ ಸುಖ ದುಃಖಗಳಲ್ಲಿ  ಪಾಲ್ಗೊಂಡು ಅಲ್ಲಾಹನ ಸಂಪ್ರೀತಿಯನ್ನುಗಳಿಸೋಣ.
ಅಲ್ಲಾಹನು ಅನುಗ್ರಹಿಸಲಿ- ಅಮೀನ್

(ಲೇಖಕರು, ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ)
ಅನು: ಅಬ್ದುಲ್ ಅಝೀಝ್

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” …