Home / ಲೇಖನಗಳು / ಧರ್ಮ ಮತ್ತು ಮಾನವೀಯ ಸಂಬಂಧಗಳು

ಧರ್ಮ ಮತ್ತು ಮಾನವೀಯ ಸಂಬಂಧಗಳು

ಜೀವನದ ಕಾರ್ಯರಂಗಗಳಿಂದ ದೂರ ಸರಿದು ಕೇವಲ ಆರಾಧನಾಲಯಗಳ ಮೂಲೆಗಳಲ್ಲಿ ಜಪತಪಗಳಿಂದ ಕಾಲ ಕಳೆಯುವವರು ಇಸ್ಲಾಮಿನ ದೃಷ್ಟಿಯಲ್ಲಿ ಪುಣ್ಯಾತ್ಮರಲ್ಲ. ಲೌಕಿಕ ಜೀವನದಿಂದ ವಿಮುಖರಾಗಿ ಆತ್ಮಶಾಂತಿಯನ್ನು ಹುಡುಕುವ ಕಪಟ ಸನ್ಯಾಸವು ಸತ್ಯ ಧರ್ಮಕ್ಕೆ ಭೂಷಣವಲ್ಲ. ಇಸ್ಲಾಮ್ ಧರ್ಮವು ಲೌಕಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಸಮಂಜಸವಾಗಿ ಸಮನ್ವಯಗೊಳಿಸುವ ವಿಶಿಷ್ಟ ಜೀವನ ವಿಧಾನವಾಗಿದೆ. ಆತ್ಮ ಸಂತೃಪ್ತಿಯಂತೆಯೇ ಪರರ ಸಂತೃಪ್ತಿಯನ್ನೂ ಸಾರ್ಥಕ್ಯವೆಂದು ಭಾವಿಸುವಾತನೇ ನೈಜ ಮುಸ್ಲಿಮ್.

ಧರ್ಮವೆಂದರೆ ಮರದಡಿಯಲ್ಲಿ ಕುಳಿತು ಧ್ಯಾನಮಗ್ನವಾಗಿರುವುದಲ್ಲ. ಬದಲಾಗಿ ವೈಯಕ್ತಿಕ ಜೀವನದ ಖಾಸಗಿ ರಂಗದಲ್ಲಿಯೂ ಸಾರ್ವಜನಿಕ ಜೀವನದ ವಿಶಾಲ ರಂಗಗಳಲ್ಲಿಯೂ ಸನ್ಮಾರ್ಗದ ಸಂಸ್ಥಾಪನೆಯಾಗಿದೆ. ವಿವಿಧ ಕರ್ಮ ರಂಗಗಳಲ್ಲಿ ಪರಿಶುದ್ಧತೆಯನ್ನು ಪಾಲಿಸುವವರೇ ನೈಜ ಯತಿಗಳು, ಕರ್ಮ ಭೂಮಿಯಲ್ಲಿ ಪಾಪಮುಕ್ತವಾದ ಜೀವನ ಸಾಗಿಸುವವರೇ ನೈಜ ಭಕ್ತರು.

ಮಾನವನನ್ನು ಸೋಮಾರಿ, ದುರುಳ ಮತ್ತು ದುಷ್ಟನಾಗಿ ಮಾಡುವುದು ಧರ್ಮದ ಕಾರ್ಯಭಾರವಲ್ಲ. ಸದ್ಗುಣ ಸಂಪನ್ನ ಲೋಕದ ನಿರ್ಮಾಣಕ್ಕಾಗಿ ನೇಮಕಗೊಂಡ ದೇವನ ದಾಸನು ಎಂದಿಗೂ ನಿಷ್ಕ್ರಿಯನಾಗಲಾರ. ಮಾನವಕುಲದ ಕಲ್ಯಾಣ ಮತ್ತು ವಿಕಾಸದ ಹಾದಿಗಳನ್ನು ಪಿಶಾಚಿಗಳಿಗೆ ಒಪ್ಪಿಸಿ ಸನ್ಯಾಸದಿಂದ ಸಂತೃಪ್ತರಾಗುವ ಮಂದಿ ದೇವನ ದಾಸರಾಗುವುದಾದರೂ ಹೇಗೆ? ವಸ್ತುತಃ ಸಾಮಾಜಿಕ ನಿಷ್ಠೆಯನ್ನು ಉತ್ತೇಜಿಸದ ಧಾರ್ಮಿಕ ವಿಶ್ವಾಸವು ಅಚೇತನವಾಗಿದೆ.

ದ್ವಿಪಕ್ಷೀಯ ಸಂಬಂಧಗಳು
ದೇಶದಲ್ಲಿ ಆರಾಧನಾಲಯಗಳು ಹೆಚ್ಚುತ್ತಿವೆ. ಪ್ರಾರ್ಥನೆಗಾಗಿ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ ಧಾರ್ಮಿಕ ಒಲವು ಕಡಿಮೆಯಾಗುತ್ತಿದೆ. ಅದರ ಕಾರಣ ಸುಸ್ಪಷ್ಟವಾಗಿದೆ. ಧರ್ಮವು ಪ್ರತಿಪಾದಿಸುವ ಉದಾತ್ತ ಮೌಲ್ಯಗಳು ವಿಶ್ವಾಸಿಗಳ ಜೀವನವನ್ನು ಪಾವನಗೊಳಿಸುವುದಿಲ್ಲ. ಆಚಾರ ಕರ್ಮಗಳಲ್ಲಿ ನಿಷ್ಠೆ ಹೊಂದಿರುವವರ ಮಾನವೀಯ ಸಂಬಂಧಗಳಲ್ಲಿ ಪ್ರೀತಿ ವಾತ್ಸಲ್ಯದ ಭಾವನೆಗಳು ಗೋಚರಿಸುವುದಿಲ್ಲ. ದಯಾಮಯನಾದ ದೇವನ ಹೆಸರಲ್ಲಿ ಮಾತಾಡುವವರು ಘೋರ ಅನ್ಯಾಯಗಳಲ್ಲಿ ನಿರತರಾಗಿರುತ್ತಾರೆ. ದೇವನೊಂದಿಗಿನ ಸಂಬಂಧವು ಸುದೃಢವಾಗುವಾಗ ಮಾನವನೊಂದಿಗಿನ ಸಂಬಂಧವ ಶಿಥಿಲವಾಗುತ್ತಿದೆ.

ವಸ್ತುತಃ ಮಾನವ ಮತ್ತು ದೇವನ ಪರಸ್ಪರ ಸಂಬಂಧದಂತೆಯೇ ಮಾನವ ಮತ್ತು ಮಾನವನ ಪರಸ್ಪರ ಸಂಬಂಧವೂ ಪರಮ ಪ್ರಧಾನವಾಗಿದೆ. ಈ ಸಂಬಂಧವು ಹೇಗಿರಬೇಕೆಂದು ಇಸ್ಲಾಮ್ ಸ್ಪಷ್ಟವಾಗಿ ಕಲಿಸಿದೆ. ಆ ಪಾಠಗಳ ಉಲ್ಲಂಘನೆಯಿಂದ ಧರ್ಮದ ಮಾನವೀಯ ಅಂಶವು ಸೋರಿ ಹೋಗುತ್ತದೆ. ಮಾನವೀಯ ಅಂಶದ ನಷ್ಟದಿಂದ ಧರ್ಮವು ಸಾಯುತ್ತದೆ. ಇಂದು ಸಮಾಜದಲ್ಲಿ ನಡೆಯುತ್ತಿರುವುದೂ ಅದುವೇ ಆಗಿದೆ.

ಇಸ್ಲಾಮಿನ ದೃಷ್ಟಿಯಲ್ಲಿ, ಮಾನವರೊಂದಿಗಿನ ಕರ್ತವ್ಯಗಳ ನಿರ್ವಹಣೆಯು ಸೃಷ್ಟಿಕರ್ತನಾದ ದೇವನೊಂದಿಗಿನ ಹೊಣೆ ನಿರ್ವಹಣೆಗೆ ಸಮಾನವಾಗಿದೆ. ಅವೆರಡರ ಉಲ್ಲಂಘನೆಯೂ ಮಹಾ ಪಾಪವಾಗಿದೆ.

ಮರಣದ ಬಳಿಕ ಪರಲೋಕದಲ್ಲಿ ಮಾನವ ಜೀವನದ ವಿಚಾರಣೆ ನಡೆಸುವಾಗ ಎರಡು ವಿಧದ ಆರೋಪಗಳನ್ನು ಹೊರಿಸಲಾಗುವುದೆಂದು ಕುರ್‌ಆನ್ ಸ್ಪಷ್ಟ ಪಡಿಸಿದೆ: 1) ದೇವನಿಗೆ ಸಂಬಂಧಿಸಿದ ಆರೋಪಗಳು. ii) ಮಾನವನಿಗೆ ಸಂಬಂಧಿಸಿದ ಆರೋಪಗಳು.

‘ಕರ್ಮಪತ್ರವನ್ನು ಎಡಗೈಯಲ್ಲಿ ನೀಡಲ್ಪಟ್ಟಾತನು ಹೇಳುವನು: ಅಯ್ಯೋ! ನನ್ನ ಕರ್ಮಪತ್ರವನ್ನು ನನಗೆ ನೀಡದಿರುತ್ತಿದ್ದರೆ! ನನ್ನ ಕರ್ಮದ ಸ್ಥಿತಿಯನ್ನು ನನಗೆ ತಿಳಿಸದಿರುತ್ತಿದ್ದರೆ! ಮರಣದೊಂದಿಗೆ ಎಲ್ಲವೂ ಪರ್ಯಾವಸಾನವಾಗಿ ಬಿಡುತ್ತಿದ್ದರೆ! ನನ್ನ ಸಂಪತ್ತು ಇಂದು ನನಗೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ನನ್ನ ಅಧಿಕಾರವೆಲ್ಲವೂ ಕೊನೆಗೊಂಡಿತು. ಆಗ ಅಲ್ಲಾಹನ ಅಪ್ಪಣೆಯಾಗುವುದು: ಆತನನ್ನು ಹಿಡಿಯಿರಿ, ಕೊರಳಿಗೆ ಸಂಕೋಲೆ ಹಾಕಿರಿ, ತರುವಾಯ ನರಕಕ್ಕೆ ಎಸೆಯಿರಿ. ಆ ಬಳಿಕ ಆತನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯಿಂದ ಬಿಗಿಯಿರಿ, ಅವನು ಮಹೋನ್ನತನಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿರಲಿಲ್ಲ. ನಿರ್ಗತಿಕರಿಗೆ ಆಹಾರ ನೀಡಲು ಪ್ರೇರೇಪಿಸುತ್ತಿರಲಿಲ್ಲ. ಆದ್ದರಿಂದ ಇಂದು ಇಲ್ಲಿ ಅವನಿಗೆ ಯಾರೂ ಸಹಾನುಭೂತಿ ತೋರಿಸುವವರಿಲ್ಲ. ಹುಣ್ಣಿನ ಕೀವಿನ ಹೊರತು ಬೇರೆ ಯಾವ ಆಹಾರವೂ ಇಲ್ಲ. ಅದನ್ನು ಪಾಪಿಗಳ ಹೊರತು ಇನ್ನಾರೂ ತಿನ್ನುವುದಿಲ್ಲ.”
(ಪವಿತ್ರ ಕುರ್‌ಆನ್, 69:25-37).

ದೇವನಲ್ಲಿ ವಿಶ್ವಾಸವಿರಿಸದವರು ನಮಾಝ್, ಉಪವಾಸ ವ್ರತ, ಝಕಾತ್, ಹಜ್ ಅಥವಾ ಇತರ ಆರಾಧನಾ ಕರ್ಮಗಳನ್ನು ನಿರ್ವಹಿಸುವುದಿಲ್ಲ. ಮದ್ಯಪಾನ, ವ್ಯಭಿಚಾರ, ಕಳ್ಳತನ ಇತ್ಯಾದಿ ದುಷ್ಕೃತ್ಯಗಳನ್ನು ಅವರು ಮಾಡಿರಬಹುದು. ಆದರೆ ಅವುಗಳನ್ನು ಶಿಕ್ಷಾರ್ಹವೆಂದು ಎತ್ತಿ ಹೇಳಲಾಗಿಲ್ಲ. ಬದಲಾಗಿ ನಿರ್ಗತಿಕರಿಗೆ ಆಹಾರ ನೀಡಲು ಪ್ರೇರೇಪಿಸದಿರುವುದನ್ನು ದ್ವಿತೀಯ ಅಪರಾಧವಾಗಿ ಹೇಳಲಾಗಿದೆ. ಇಲ್ಲಿ ಈ ಎರಡು ಪಾಪ ಕೃತ್ಯಗಳೂ ಎರಡು ಪ್ರತೀಕಗಳಾಗಿವೆ. ಅಲ್ಲಾಹನಲ್ಲಿ ವಿಶ್ವಾಸವಿರಿಸಿಲ್ಲವೆಂಬುದು ಸೃಷ್ಟಿಕರ್ತನೊಂದಿಗಿನ ಕರ್ತವ್ಯ ಲೋಪವನ್ನೂ, ನಿರ್ಗತಿಕರಿಗೆ ಆಹಾರ ನೀಡಲು ಪ್ರೇರೇಪಿಸಿಲ್ಲವೆಂಬುದು ಮಾನವರೊಂದಿಗಿನ ಕರ್ತವ್ಯ ಲೋಪವನ್ನೂ ಸೂಚಿಸುತ್ತದೆ. ಇಸ್ಲಾಮ್ ಎರಡಕ್ಕೂ ಸಮಾನ ಮಹತ್ವವನ್ನು ನೀಡುತ್ತದೆ.

ನರಕವಾಸಿಗಳು ಸ್ವತಃ ಒಪ್ಪಿಕೊಳ್ಳುವ ಅಪರಾಧಗಳ ಸ್ಥಿತಿಯೂ ಅಷ್ಟೆ. ಕುರ್‌ಆನ್ ಹೇಳುತ್ತದೆ:
‘ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿರಿಸಲ್ಪಟ್ಟಿದ್ದಾನೆ. ಬಲಗಡೆಯವರ ಹೊರತು ಅವರು ಸ್ವರ್ಗದ ಹಕ್ಕುದಾರರು. ಅವರು ಅಪರಾಧಿಗಳೊಡನೆ ಹೀಗೆ ವಿಚಾರಿಸುತ್ತಾರೆ: ‘ನಿಮ್ಮನ್ನು ನರಕಕ್ಕೆ ಹಾಕಲು ಕಾರಣವೇನು?’ ಅವರು ಹೇಳುವರು: ‘ನಾವು ನಮಾಝ್ ಮಾಡುವವರಾಗಿರಲಿಲ್ಲ ಮತ್ತು ದರಿದ್ರರಿಗೆ ಉಣಿಸುತ್ತಿರಲಿಲ್ಲ. ಸತ್ಯದ ವಿರುದ್ದ ವಾದಿಸುವವರ ಜತೆಗೂಡಿ ನಾವೂ ವಾದಿಸುತ್ತಿದ್ದೆವು. ನಾವು ತೀರ್ಪಿನ ದಿನವನ್ನು ನಿರಾಕರಿಸುತ್ತಿದ್ದೆವು. ಹಾಗೆಯೇ ಆ ಅನಿಷೇಧ್ಯ ವಾಸ್ತವಿಕತೆಯನ್ನು ನಾವು ನೇರವಾಗಿ ಅನುಭವಿಸಿದೆವು.”
(ಪವಿತ್ರ ಕುರ್‌ಆನ್, 14: 38-47)

ಇಲ್ಲಿ ಪ್ರಸ್ತಾಪಿಸಲಾದ ಎರಡು ಅಪರಾಧಗಳು ಎರಡು ವಿಧದ ಕರ್ತವ್ಯ ಚ್ಯುತಿಗಳನ್ನು ಸೂಚಿಸುತ್ತದೆ. ನಮಾಝ್ ಮಾಡುತ್ತಿರಲಿಲ್ಲವೆಂಬುದು ಅಲ್ಲಾಹನೊಂದಿಗಿನ ಕರ್ತವ್ಯ ಚ್ಯುತಿಯಾಗಿದೆ. ನಿರ್ಗತಿಕರಿಗೆ ಅಹಾರ ನೀಡಿಲ್ಲವೆಂಬುದು ಮಾನವರೊಂದಿಗಿನ ಸಂಬಂಧ ಮತ್ತು ಕರ್ತವ್ಯವನ್ನು ಸರಿಯಾಗಿ ಪಾಲಿಸದಿರುವುದನ್ನು ಸೂಚಿಸುತ್ತದೆ.

ಹೀಗೆ ಮರಣೋತ್ತರ ಪರಲೋಕದಲ್ಲಿ ಶಿಕ್ಷಾರ್ಹವೆಂದು ಕುರ್‌ಆನ್ ಪ್ರಸ್ತಾಪಿಸಿರುವ ವಿಷಯಗಳನ್ನು ಪರಿಶೀಲಿಸಿದರೆ ಈ ಎರಡು ಸಂಬಂಧ ಮತ್ತು ಕರ್ತವ್ಯಗಳಲ್ಲಿ ಮಾಡಿದ ಲೋಪದೋಷಗಳೇ ಅದಕ್ಕೆ ಕಾರಣವೆಂದು ವ್ಯಕ್ತವಾಗುತ್ತದೆ. ಅವೆರಡನ್ನೂ ಕುರ್‌ಆನ್ ಸಮಾನ ಮಹತ್ವದೊಂದಿಗೆ ಪ್ರಸ್ತಾಪಿಸಿದೆ.

ಇಸ್ಲಾಮ್, ಘೋರ ಪಾಪಗಳೆಂದು ಪರಿಗಣಿಸಿರುವ ಹೆಚ್ಚಿನ ಕೃತ್ಯಗಳು ಮಾನವರಿಗೆ ಸಂಬಂಧಪಟ್ಟಿವೆ.

ಧರ್ಮನಿಷೇಧಿ
ಸಾಮಾನ್ಯವಾಗಿ ದೇವನನ್ನೂ ಧರ್ಮವನ್ನೂ ನಿರಾಕರಿಸುವಾತನನ್ನು ಧರ್ಮ ನಿಷೇಧಿಯೆನ್ನಲಾಗುತ್ತದೆ. ಈ ಸಾಮಾನ್ಯ ಭಾವನೆಯನ್ನು ಪವಿತ್ರ ಕುರ್‌ಆನ್ ತಿದ್ದುತ್ತದೆ. ಸಹಜೀವಿಗಳೊಂದಿಗಿನ ಧೋರಣೆಯಲ್ಲಿ ದೇವಾಜ್ಞೆಯನ್ನು ಪಾಲಿಸದವರನ್ನೂ ಕುರ್‌ಆನ್ ಆ ಸಾಲಿಗೆ ಸೇರಿಸಿದೆ.
‘ಕರ್ಮಫಲದ ದಿನವನ್ನು ನಿರಕಾರಿಸುವಾತನನ್ನು ನೀವು ನೋಡಿದಿರಾ? ಆತನು ಅನಾಥನನ್ನು ನಿರ್ಲಕ್ಷಿಸುವವನು ಮತ್ತು ನಿರ್ಗತಿಕರಿಗೆ ಆಹಾರ ನೀಡಲು ಪ್ರೇರೇಪಿಸದವನಾಗಿದ್ದಾನೆ.” (ಪವಿತ್ರ ಕುರ್‌ಆನ್, 107:1-3)

ಇಲ್ಲಿ ನಮಾಝ್ ನಿರ್ವಹಿಸದವನ ಬದಲಾಗಿ ನಮಾಝ್ ನಿರ್ವಹಿಸುವಾತನನ್ನೇ ಕುರ್‌ಆನ್ ಧರ್ಮನಿಷೇಧಿಯೆಂದು ಪ್ರಸ್ತಾಪಿಸಿದೆ. ಏಕೆಂದರೆ, ಆತನು ತೀರಾ ಅಶ್ರದ್ದೆಯಿಂದ ಮತ್ತು ಜನರಿಗೆ ತೋರಿಸಲಿಕ್ಕಾಗಿ ನಮಾಝ್ ನಿರ್ವಹಿಸುತ್ತಾನೆ. ಆತನ ನಮಾಝ್ ಅವನ ಜೀವನದ ಮೇಲೆ ಕಿಂಚಿತ್ತೂ ಪ್ರಭಾವ ಬೀರುವುದಿಲ್ಲ. ಅದರಿಂದಾಗಿ ಜನರಿಗೆ ಸಣ್ಣ ಪುಟ್ಟ ಉಪಕಾರಗಳನ್ನು ಮಾಡುವ ಸದ್ಭಾವನೆಯೂ ಅವನಲ್ಲಿ ಮೂಡುವುದಿಲ್ಲ.
‘ಅಂತಹ ನಮಾಝಿಗಳಿಗೆ ವಿನಾಶವಿದೆ. ಅವರು ತಮ್ಮ ನಮಾಝ್ ನ ಬಗ್ಗೆ ಅನಾಸ್ಥೆ ತೋರಿಸುತ್ತಾರೆ. ಅವರು ತೋರಿಕೆಯ ಕೆಲಸ ಮಾಡುತ್ತಾರೆ ಮತ್ತು ಜನರಿಗೆ ಸಾಮಾನ್ಯ ಅವಶ್ಯಕ ವಸ್ತುಗಳನ್ನೂ ನಿರಾಕರಿಸುತ್ತಾರೆ.” (ಪವಿತ್ರ ಕುರ್‌ಆನ್, 107:4-6)

ಅಲ್ಲಾಹನ ಫಿರ್ಯಾದಿ
ಇಸ್ಲಾಮ್ ದೇವದತ್ತವಾಗಿದೆ. ಮಾನವಕುಲಕ್ಕಾಗಿ ನೀಡಲಾದ ಜೀವನ ಪದ್ಧತಿ. ಆದ್ದರಿಂದ ಅದು ಮಾನವೀಯವೂ ಸಂಪೂರ್ಣ ನೈಸರ್ಗಿಕವೂ ಆಗಿದೆ. ಮಾನವನು ಸೃಷ್ಟಿಗಳಲ್ಲಿ ಶ್ರೇಷ್ಠ ಮತ್ತು ಅತ್ಯಂತ ಗೌರವಾರ್ಹನಾಗಿದ್ದಾನೆ. ‘ಮಾನವ ಸಂತತಿಯನ್ನು ನಾವು ಗೌರವಿಸಿರುತ್ತೇವೆ. ಅವರಿಗೆ ನಾವು ನೆಲದಲ್ಲಿಯೂ ಜಲದಲ್ಲಿಯೂ ವಾಹನಗಳನ್ನು ನೀಡಿದೆವು. ಉತ್ತಮ ವಸ್ತುಗಳನ್ನು ಆಹಾರವಾಗಿ ಒದಗಿಸಿದೆವು. ನಾವು ಸೃಷ್ಟಿಸಿದ ಅನೇಕ ವಸ್ತುಗಳಿಗಿಂತ ಶ್ರೇಷ್ಠತೆಯನ್ನು ದಯಪಾಲಿಸಿದೆವು.” (ಪವಿತ್ರ ಕುರ್‌ಆನ್, 17:70)

ಮಾನವ ಮತ್ತು ಮಾನವನ ಪರಸ್ಪರ ಸಂಬಂಧವನ್ನು ಅಲ್ಲಾಹನು ತನ್ನ ಸಂಬಂಧದೊಂದಿಗೆ ಜೋಡಿಸಿದ್ದಾನೆ. ಅಲ್ಲಾಹನು, ಸಂಕಷ್ಟ ಅನುಭವಿಸುವ ಓರ್ವ ಮಾನವನ ಸ್ಥಾನದಲ್ಲಿ ಸ್ವತಃ ನಿಂತು ಆತನೊಂದಿಗಿನ ವ್ಯವಹಾರವನ್ನು ತನ್ನೊಂದಿಗಿನ ವ್ಯವಹಾರವೆಂದು ಪರಿಗಣಿಸುವ ಒಂದು ದೃಶ್ಯವನ್ನು ಪ್ರವಾದಿಯವರು(ಸ) ವಿವರಿಸಿದ್ದಾರೆ, ಅಂತಿಮ ದಿನದಲ್ಲಿ ಅಲ್ಲಾಹನು ಹೇಳುತ್ತಾನೆ: “ಓ ಮಾನವಾ! ನಾನು ರೋಗಿಯಾಗಿದ್ದಾಗ ನೀನು ನನ್ನನ್ನು ಸಂದರ್ಶಿಸಲಿಲ್ಲ.”ಆಗ ಮಾನವನು ಹೇಳುವನು: “ನನ್ನ ಪ್ರಭೂ, ನಾನು ನಿನ್ನನ್ನು ಸಂದರ್ಶಿಸುವುದೇ?” ಆ ವೇಳೆ ಅಲ್ಲಾಹನು ಹೇಳುವನು: ನನ್ನ ಇಂತಿಂತಹ ದಾಸನು ರೋಗಿಯಾದುದು ನಿನಗೆ ತಿಳಿದಿರಲಿಲ್ಲವೇ? ಆದರೂ ನೀನು ಆತನನ್ನು ಸಂದರ್ಶಿಸಲಿಲ್ಲ. ಆತನನ್ನು ಸಂದರ್ಶಿಸುತ್ತಿದ್ದರೆ ಆತನ ಬಳಿ ನನ್ನನ್ನು ನೀನು ಕಾಣಬಹುದಾಗಿತ್ತೆಂದು ನಿನಗೆ ತಿಳಿದಿಲ್ಲವೇ? “ಓ ಮಾನವಾ! ನಾನು ನಿನ್ನಲ್ಲಿ ಆಹಾರ ಬೇಡಿದೆ. ನೀನು ನನಗೆ ಆಹಾರ ನೀಡಲಿಲ್ಲ. ಮಾನವನು ಹೇಳುವನು, “ನನ್ನ ಪ್ರಭೂ, ನೀನು ಜಗದ್ರಕ್ಷಕನಲ್ಲವೇ? ನಾನು ನಿನಗೆ ಆಹಾರ ನೀಡುವುದಾದರೂ ಹೇಗೆ?” ಅಲ್ಲಾಹನು ಹೇಳುವನು: “ನನ್ನ ಇಂತಿಂತಹ ದಾಸನು ಆಹಾರ ಬೇಡಿದ್ದು ನಿನಗೆ ತಿಳಿದಿರಲಿಲ್ಲವೇ? ಆದರೂ ನೀನು ಆತನಿಗೆ ಆಹಾರ ಕೊಡಲಿಲ್ಲ ನೀನು ಆತನಿಗೆ ಆಹಾರ ಕೊಟ್ಟಿರುತ್ತಿದ್ದರೆ ಅದನ್ನು ನನ್ನ ಬಳಿ ನೋಡಬಹುದಾಗಿತ್ತೆಂದು ನಿನಗೆ ತಿಳಿದಿಲ್ಲವೇ? “ಓ ಮಾನವಾ! ನಾನು ನಿನ್ನೊಡನೆ ಕುಡಿಯಲು ನೀರು ಕೇಳಿದೆ. ನೀನು ನನಗೆ ನೀರು ಕೊಡಲಿಲ್ಲ. ಮಾನವ ಹೇಳುತ್ತಾನೆ, “ನನ್ನ ಪ್ರಭೂ, ನೀನು ಸರ್ವಲೋಕ ಸಂರಕ್ಷಕ, ನಾನು ನಿನಗೆ ನೀರು ಕೊಡುವುದು ಹೇಗೆ?” ಅಲ್ಲಾಹನು ಹೇಳುವನು, “ನನ್ನ ಇಂತಹ ದಾಸ ನಿನ್ನೊಡನೆ ನೀರು ಕೇಳಿದ. ನೀನು ಆತನಿಗೆ ನೀರು ಕೊಡಲಿಲ್ಲ. ನಿನಗೆ ತಿಳಿದಿಲ್ಲವೇ, ನೀನು ಕೊಟ್ಟಿರುತ್ತಿದ್ದರೆ ಅದನ್ನು ನನ್ನ ಬಳಿ ಕಾಣಬಹುದಾಗಿತ್ತು.” (ಬುಖಾರಿ)

ದಿವಾಳಿಕೋರ
ಸಹಜೀವಿಗಳೊಂದಿಗಿನ ಧೋರಣೆಯು ಸ್ವರ್ಗ ಅಥವಾ ನರಕ ಪ್ರಾಪ್ತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೆಟ್ಟ ಧೋರಣೆ ಅಥವಾ ದುರ್ವರ್ತನೆಗಳು, ಜೀವನದಾದ್ಯಂತ ಪಾಲಿಸಿದ ಆರಾಧನಾ ಕರ್ಮಗಳನ್ನೂ ನಿಷ್ಟಯೋಜಕಗೊಳಿಸುತ್ತದೆ. ಒಮ್ಮೆ ಪ್ರವಾದಿಯವರು(ಸ) ತಮ್ಮ ಅನುಯಾಯಿಗಳೊಡನೆ ಕೇಳಿದರು, “ದಿವಾಳಿಕೋರ ಯಾರೆಂದು ನಿಮಗೆ ತಿಳಿದಿದೆಯೇ?” ಅವರು ಹೇಳಿದರು, “ದಿರ್ಹಮ್ ಮತ್ತು ದೀನಾರ್ ಅಥವಾ ಜೀವನಾವಶ್ಯಕ ಸಾಮಗ್ರಿಗಳಿಲ್ಲದವರು ನಮ್ಮ ಪೈಕಿ ದಿವಾಳಿಕೋರರೆನಿಸುತ್ತಾರೆ.” ಆಗ ಪ್ರವಾದಿ(ಸ) ಹೇಳಿದರು, “ಅಂತಿಮ ದಿನದಲ್ಲಿ ತಾನು ನಿರ್ವಹಿಸಿದ ನಮಾಝ್, ಉಪವಾಸ ವ್ರತ ಮತ್ತು ಝಕಾತ್ ಸಹಿತ ಆಗಮಿಸುವಾತನೇ ನನ್ನ ಸಮುದಾಯದ ದಿವಾಳಿಕೋರ. ಆದರೆ, ಆತನು ಒಬ್ಬನನ್ನು ಬೈದಿದ್ದಾನೆ, ಮತ್ತೊಬ್ಬನ ಬಗ್ಗೆ ಕುಪ್ರಚಾರ ನಡೆಸಿದ್ದಾನೆ, ಇನ್ನೊಬ್ಬನ ಹಣವನ್ನು ಅಪಹರಿಸಿದ್ದಾನೆ, ಮತ್ತೊಬ್ಬನ ರಕ್ತ ಹರಿಸಿದ್ದಾನೆ, ಬೇರೊಬ್ಬನಿಗೆ ಹೊಡೆದಿದ್ದಾನೆ. ಆದ್ದರಿಂದ ಆತನ ಸತ್ಕರ್ಮಗಳನ್ನು ಅವರಿಗೆ ನೀಡಲಾಗುವುದು. ಆದರೆ, ಋಣ ಸಂದಾಯವಾಗುವುದಕ್ಕಿಂತ ಮುಂಚೆಯೇ ಆತನ ಸತ್ಕರ್ಮಗಳು ಮುಗಿಯುತ್ತವೆ. ಆಗ ಅವರ ಪಾಪಗಳನ್ನು ಆತನಿಗೆ ನೀಡಲಾಗುವುದು. ಹೀಗೆ ಆತನನ್ನು ನರಕಕ್ಕೆ ಎಸೆಯಲಾಗುವುದು.” (ಮುಸ್ಲಿಮ್)

ಇದರ ತಾತ್ಪರ್ಯವು ಸುಸ್ಪಷ್ಟವಾಗಿದೆ. ಸಹಜೀವಿಗಳಿಗೆ ಅನ್ಯಾಯವೆಸಗುವ ಮಂದಿಗೆ ತಮ್ಮ ಆರಾಧನೆಗಳ ಸತ್ಪಲಗಳನ್ನೂ ಅನುಭವಿಸಲಾಗುವುದಿಲ್ಲ. ಮಾತ್ರವಲ್ಲ, ತಮ್ಮಿಂದ ಅನ್ಯಾಯವಾಗಿರುವವರ ಪಾಪಗಳನ್ನು ಅವರು ಹೊರಬೇಕಾಗುವುದು. ಇದರಿಂದ ದೇವ ಧರ್ಮವು ಮಾನವ ಮತ್ತು ಮಾನವೀಯ ಸಂಬಂಧಗಳಿಗೆ ನೀಡುವ ಮಹತ್ವವು ವ್ಯಕ್ತವಾಗುತ್ತದೆ.

ಕುರುಡನನ್ನು ನಿರ್ಲಕ್ಷಿಸಿದಾಗ
ಉಮ್ಮು ಮಖ್ತುಂ‌ರ ಮಗ ಅಬ್ದುಲ್ಲಾ ಕುರುಡರಾಗಿದ್ದರು. ಒಮ್ಮೆ ಅವರು ಪ್ರವಾದಿಯವರ(ಸ) ಬಳಿಗೆ ಬಂದರು. ಆಗ ಪ್ರವಾದಿಯವರು(ಸ) ಗಂಭೀರ ಚರ್ಚೆಯಲ್ಲಿ ನಿರತರಾಗಿದ್ದರು. ಪ್ರಮುಖ ಪ್ರತಿಸ್ಪರ್ಧಿಗಳಾದ ಕುರೈಶರ ಗಣ್ಯ ವ್ಯಕ್ತಿಗಳು ಅಲ್ಲಿ ಸೇರಿದ್ದರು. ಅವರ ಜತೆಗಿನ ಮಾತುಕತೆ ಯಶಸ್ವಿಯಾದರೆ ಅದು ಉತ್ತಮ ಪರಿಣಾಮ ಬೀರುತ್ತಿತ್ತು. ವಿರೋಧವು ಕೊನೆಗೊಳ್ಳಬಹುದು. ಕಾರ್ಯಭಾರವು ಯಶಸ್ವಿಯಾಗಬಹುದು. ತನ್ಮಧ್ಯೆ ಕುರುಡನ ಆಗಮನ, ಅಸಂತುಷ್ಟಿಯು ಪ್ರವಾದಿಯವರ(ಸ) ಮುಖದಲ್ಲಿ ಗೋಚರಿಸಿತು. ಕುರುಡರಾಗಿದ್ದ ಅಬ್ದುಲ್ಲಾರಿಗೆ ಅದು ಕಾಣಿಸಲಿಲ್ಲ. ತನ್ನನ್ನು ನಿರ್ಲಕ್ಷಿಸಲಾಗಿದೆಯೆಂದು ಅವರಿಗೆ ತಿಳಿಯಲಿಲ್ಲ. ಒಂದು ವೇಳೆ ತಿಳಿದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಏಕೆಂದರೆ ಕುರುಡರನ್ನು ನಿರ್ಲಕ್ಷಿಸುವುದು ಹೊಸ ವಿಷಯವೇನಾಗಿರಲಿಲ್ಲ. ಗಣ್ಯರ ಕೂಟಗಳಲ್ಲಿ ಅವರಿಗೆ ಅವಕಾಶ ನೀಡುತ್ತಿರಲಿಲ್ಲ. ಆದ್ದರಿಂದ ಪ್ರವಾದಿಯವರ(ಸ) ವರ್ತನೆಯು ಅಸಂಗತವಲ್ಲವೆಂದು ತೋರಬಹುದು. ಆದರೆ ಅಲ್ಲಾಹನು ಅದನ್ನು ಅತಿ ಗಂಭೀರವಾಗಿ ಪರಿಗಣಿಸಿದನು. ತನ್ನ ಓರ್ವ ದುರ್ಬಲ ದಾಸನ ಅವಗಣನೆಯನ್ನು ಆತನು ಮೆಚ್ಚಲಾರನು. ಆದ್ದರಿಂದ, ತನ್ನ ಅಂತಿಮ ಪ್ರವಾದಿಯಿಂದಾದ(ಸ) ಪ್ರಮಾದವನ್ನು ಅವರ ನಾಲಗೆಯಿಂದಲೇ ಆತನು ತಿದ್ದಿದನು.
”ಅವರು ಮುಖ ಸಿಂಡರಿಸಿಕೊಂಡರು ಮತ್ತು ನಿರ್ಲಕ್ಷಿಸಿದರು ಅವರ ಬಳಿಗೆ ಆ ‘ಅಂಧನು’ ಬಂದುದಕ್ಕಾಗಿ, ನಿಮಗೇನು ಗೊತ್ತು, ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು ಅಥವಾ ಉಪದೇಶಕ್ಕೆ ಗಮನ ಕೊಡಬಹುದು. ಆ ಉಪದೇಶವು ಅವನ ಪಾಲಿಗೆ ಫಲಕಾರಿಯಾಗಲೂಬಹುದು. ಯಾರು ನಿರ್ಲಕ್ಷ್ಯ ತೋರುತ್ತಾನೋ, ಅವನ ಕಡೆಗಂತೂ ನೀವು ಗಮನ ಕೊಡುತ್ತೀರಿ. ಅವನು ತನ್ನನ್ನು ಸಂಸ್ಕರಿಸಿಕೊಳ್ಳದಿದ್ದರೆ ನಿಮ್ಮ ಮೇಲೆ ಅವನ ಹೊಣೆಯೇನಿದೆ? ತಾನಾಗಿಯೇ ನಿಮ್ಮ ಬಳಿಗೆ ಧಾವಿಸಿ ಬರುವವನು ಮತ್ತು (ಅಲ್ಲಾಹನನ್ನು) ಭಯ ಪಡುತ್ತಿರುವವನು. ಅವನನ್ನು ನೀವು ಕಡೆಗಣಿಸುತ್ತೀರಿ, ಖಂಡಿತ ಅಲ್ಲ. ಇದೊಂದು ಉಪದೇಶವಾಗಿರುತ್ತದೆ. ಇಷ್ಟವಿದ್ದವನು ಇದನ್ನು ಸ್ವೀಕರಿಸಲಿ.”
(ಪವಿತ್ರ ಕುರ್‌ಆನ್, 80:1-12)

ಓರ್ವ ಕುರುಡನ ಪರವಾಗಿ ದೇವ ಗ್ರಂಥವು ಇಲ್ಲಿ ಮಧ್ಯ ಪ್ರವೇಶಿಸಿತು. ಅಲ್ಲಾಹನು ತನ್ನ ಪ್ರೀತಿಯ ಪ್ರವಾದಿಯನ್ನೇ ವಿಮರ್ಶಿಸಿದನು. ವಸ್ತುತಃ ಘಟನೆಯು ನಗಣ್ಯವಾಗಿತ್ತು. ಆದರೆ ದಿವ್ಯ ಗ್ರಂಥದ ಮೂಲಕ ಅಲ್ಲಾಹನು ಅದನ್ನು ಅನಶ್ಚರಗೊಳಿಸಿದನು. ಬಡಪಾಯಿಗಳನ್ನು ನಿರ್ಲಕ್ಷಿಸುವವರಿಗೆ ತಾಕೀತುಮಾಡಿದನು. ಮುಂದಿನ ಶತಮಾನಗಳಲ್ಲಿ ಕೋಟ್ಯಾಂತರ ಜನರು ಈ ಕುರುಡನ ಕಥೆಯನ್ನು ಆಲಿಸಬೇಕೆಂದು ಅಲ್ಲಾಹನು ನಿರ್ಣಯಿಸಿದನು. ಪವಿತ್ರ ಕುರ್‌ಆನ್ ಮೂಲಕ ಅಲ್ಲಾಹನು ಅಂತಿಮ ಪ್ರವಾದಿಯನ್ನು (ಸ) ವಿಮರ್ಶಿಸಿರುವುದಕ್ಕೆ ಆರಾಧನಾ ಕರ್ಮಗಳಲ್ಲಿ ಅನಾಸ್ಥೆ ಅಥವಾ ಅಲ್ಲಾಹನೊಂದಿಗಿನ ಸಂಬಂಧದ ಕೊರತೆಯ ಬದಲಾಗಿ ಮಾನವರೊಂದಿಗಿನ ಸಂಬಂಧದ ಲೋಪವೇ ಕಾರಣವಾಗಿತ್ತು. ಕೇವಲ ಈ ಒಂದೇ ಘಟನೆಯಿಂದ ಮಾನವೀಯತೆಗೆ ಇಸ್ಲಾಮ್ ನೀಡುವ ಮಹತ್ವವು ವ್ಯಕ್ತವಾಗುತ್ತದೆ.

ಗುಲಾಮನ ವಿಮೋಚನೆ
ಸ್ಪಷ್ಟಿಕರ್ತನೊಂದಿಗಿನ ಕರ್ತವ್ಯ ನಿರ್ವಹಣೆ, ದೇವನ ದಾಸರಾದ ಮಾನವರ ಸೇವೆ ಇವೆರಡನ್ನೂ ಅಲ್ಲಾಹನು ಪರಸ್ಪರ ಜೋಡಿಸಿದ್ದಾನೆ. ಹಲವೊಮ್ಮೆ ಎರಡಕ್ಕೂ ಸಮಾನ ಮಹತ್ವ ನೀಡಲಾಗಿದೆ. ಕೆಲವೊಮ್ಮೆ ತನ್ನ ದಾಸನ ಪಾಲಿಗೆ ವಿಶೇಷ ಮಹತ್ವ ನೀಡಿರುವುದನ್ನೂ ಕಾಣಬಹುದು.
ಮಾನವನು ಅಲ್ಲಾಹನಿಗಾಗಿ ಉಪವಾಸ ವ್ರತ ಆಚರಿಸುತ್ತಾನೆ. ಅದು ದಾಸ ಮತ್ತು ಒಡೆಯನ ಪರಸ್ಪರ ಖಾಸಗಿ ವ್ಯವಹಾರದ ಭಾಗವಾಗಿದೆ. ”ಉಪವಾಸ ನನಗಾಗಿರುವುದಾಗಿದೆ. ಅದಕ್ಕೆ ನಾನೇ ಪ್ರತಿಫಲ ನೀಡುತ್ತೇನೆ.” (ಬುಖಾರಿ)

ಆದರೆ ಅಲ್ಲಾಹನು ತನ್ನ ದಾಸನ ವಿಮೋಚನೆ ಮತ್ತು ದರಿದ್ರರಿಗೆ ಆಹಾರ ನೀಡುವುದಕ್ಕೆ, ತನಗೆ ಮೀಸಲಾಗಿರುವ ಉಪವಾಸ ವ್ರತ ಅಥವಾ ಅದಕ್ಕಿಂತ ಹೆಚ್ಚು ಮಹತ್ವ ನೀಡಿರುತ್ತಾನೆ. ಹಲವು ಪಾಪ ಕೃತ್ಯಗಳಿಗೆ ಕುರ್‌ಆನ್ ನಿರ್ಣಯಿಸಿರುವ ಪ್ರಾಯಶ್ಚಿತ್ತವನ್ನು ಪರಿಶೀಲಿಸಿದರೆ ಅದು ವ್ಯಕ್ತವಾಗುತ್ತದೆ.
“ಯಾರಾದರೂ ಪ್ರಮಾದವಶಾತ್, ಒಬ್ಬ ಸತ್ಯವಿಶ್ವಾಸಿಯನ್ನು ವಧಿಸಿಬಿಟ್ಟರೆ ಅದರ ಪ್ರಾಯಶ್ಚಿತ್ತವು ಓರ್ವ ಸತ್ಯವಿಶ್ವಾಸಿಯನ್ನು ದಾಸ್ಯದಿಂದ ಮುಕ್ತಗೊಳಿಸುವುದು, ಅಥವಾ ಹತ ವ್ಯಕ್ತಿಯ ವಾರೀಸುದಾರರು ಪರಿಹಾರ ಧನವನ್ನು ಮನ್ನಾ ಮಾಡದಿದ್ದರೆ ಅದನ್ನು ಅವರಿಗೆ ಕೊಡುವುದು. ಆದರೆ ಹತನಾದ ವ್ಯಕ್ತಿಯು ನಿಮ್ಮ ಜನಾಂಗದವನಾಗಿದ್ದರೆ ಓರ್ವ ವಿಶ್ವಾಸಿಯಾದ ಗುಲಾಮನನ್ನು ವಿಮೋಚನೆಗೊಳಿಸುವುದೇ ಅದರ ಪ್ರಾಯಶ್ಚಿತ್ತವಾಗಿದೆ. ಇನ್ನು ಆತನು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡ ಅನ್ಯ ಜನಾಂಗದ ವ್ಯಕ್ತಿಯಾಗಿದ್ದರೆ ಅವನ ವಾರೀಸುದಾರರಿಗೆ ಪರಿಹಾರ ಧನ ಕೊಡಬೇಕು ಮತ್ತು ಓರ್ವ ಸತ್ಯವಿಶ್ವಾಸಿ ಗುಲಾಮನನ್ನು ವಿಮೋಚನೆಗೊಳಿಸಬೇಕು. ಗುಲಾಮನು ದೊರೆಯದಿದ್ದರೆ ನಿರಂತರ ಎರಡು ತಿಂಗಳು ಉಪವಾಸ ವ್ರತ ಆಚರಿಸಬೇಕು. ಇದು ಪ್ರಸ್ತುತ ಪಾಪಕ್ಕಾಗಿ ಅಲ್ಲಾಹನೊಡನೆ ಪಶ್ಚಾತ್ತಾಪ ಪಡುವ ಕ್ರಮವಾಗಿದೆ.” (ಪವಿತ್ರ ಕುರ್‌ಆನ್, 4:92)

ಇಲ್ಲಿ ಅಲ್ಲಾಹನು ತನಗೆ ವಿಶಿಷ್ಟವಾಗಿರುವ ಉಪವಾಸ ವ್ರತಕ್ಕಿಂತ, ದಾಸನ ವಿಮೋಚನೆಗೆ ಮಹತ್ವ ನೀಡಿರುವನು. ಝಿಹಾರ್‌ನ ಪ್ರಾಯಶ್ಚಿತ್ತವೂ ಅದೇ ಪ್ರಕಾರವಿದೆ. ಪತಿಯು ಪತ್ನಿಯೊಡನೆ, “ನೀನು ನನಗೆ ನನ್ನ ತಾಯಿಯ ಬೆನ್ನಿನಂತೆ” ಎಂದು ಹೇಳುವುದೇ ‘ಝಿಹಾರ್’ ಅರ್ಥಾತ್ ನಾನು ನಿನ್ನೊಂದಿಗೆ ನಡೆಸುವ ಲೈಂಗಿಕ ಸಂಬಂಧವು ತಾಯಿಯೊಂದಿಗಿನ ಹಾದರಕ್ಕೆ ಸಮಾನವಾಗಿದೆ. ಹೀಗೆ ಝಿಹಾರ್ ನಡೆಸಿ ಅನಂತರ ಅದರಿಂದ ಹಿಂದೆ ಸರಿಯುವ ಪತಿಯು ಈರ್ವರೂ ಪರಸ್ಪರ ಸ್ಪರ್ಶಿಸುವುದಕ್ಕಿಂತ ಮುಂಚಿತವಾಗಿ ಓರ್ವ ಗುಲಾಮನನ್ನು ವಿಮೋಚನೆಗೊಳಿಸಬೇಕು.

“ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರಿಬ್ಬರು ಪರಸ್ಪರರನ್ನು ಸ್ಪರ್ಶಿಸುವುದಕ್ಕಿಂತ ಮುಂಚೆ ಅವನು ನಿರಂತರವಾಗಿ ಎರಡು ತಿಂಗಳ ಉಪವಾಸ ವ್ರತವನ್ನು ಆಚರಿಸಬೇಕು. ಇದಕ್ಕೂ ಅಶಕ್ತನಾಗಿರುವಾತನು 60 ಮಂದಿ ದರಿದ್ರರಿಗೆ ಊಟ ಕೊಡಬೇಕು.” (ಪವಿತ್ರ ಕುರ್‌ಆನ್, 58: 4)

ಶಪಥ ಉಲ್ಲಂಘನೆಗೆ ನಿರ್ಣಯಿಸಲಾದ ಶಿಕ್ಷೆಯಲ್ಲಿಯೂ ಇದು ಎದ್ದು ತೋರುತ್ತದೆ: ”ನೀವು ಮಾಡುವ ನಿರರ್ಥಕ ಶಪಥಗಳಿಗಾಗಿ ಅಲ್ಲಾಹನು ನಿಮ್ಮನ್ನು ಹಿಡಿಯುವುದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿ ಮಾಡುವ ಶಪಥಗಳ ಕುರಿತು ಅವನು ಅಗತ್ಯವಾಗಿ ನಿಮ್ಮ ವಿಚಾರಣೆ ನಡೆಸುವನು. (ಇಂಥ ಶಪಥಗಳನ್ನು ಮುರಿದುದಕ್ಕೆ) ಪ್ರಾಯಶ್ಚಿತ್ತವಾಗಿ ಹತ್ತು ಮಂದಿ ದರಿದ್ರರಿಗೆ, ನೀವು ನಿಮ್ಮ ಕುಟುಂಬಕ್ಕೆ ಕೊಡುವಂತಹ ಮಧ್ಯಮ ತರಹದ ಊಟವನ್ನು ಕೊಡಬೇಕು ಅಥವಾ ಅವರಿಗೆ ಬಟ್ಟೆ ತೊಡಿಸಬೇಕು. ಅಥವಾ ಗುಲಾಮನನ್ನು ವಿಮೋಚನೆಗೊಳಿಸಬೇಕು. ಇದಕ್ಕೆ ಬೇಕಾದ ಸಾಮರ್ಥ್ಯವಿಲ್ಲದವನು ಮೂರು ದಿನ ಉಪವಾಸ ವ್ರತ ಆಚರಿಸಬೇಕು. ಇದು ಮಾಡಿದ ಶಪಥವನ್ನು ಮುರಿದುದಕ್ಕಾಗಿ ನಿರ್ವಹಿಸಬೇಕಾದ ಪ್ರಾಯಶ್ಚಿತ್ತವಾಗಿದೆ. ನಿಮ್ಮ ಶಪಥಗಳ ಬಗ್ಗೆ ಎಚ್ಚರ ವಹಿಸಿರಿ.” (ಪವಿತ್ರ ಕುರ್‌ಆನ್, 5:89)

ಇಲ್ಲಿ ಬಡವರಿಗೆ ಉಣ ಬಡಿಸುವುದಕ್ಕೂ, ಬಟ್ಟೆ ತೊಡಿಸುವುದಕ್ಕೂ ಗುಲಾಮರ ವಿಮೋಚನೆಗೂ ಉಪವಾಸ ವ್ರತಕ್ಕಿಂತ ಆದ್ಯತೆ ನೀಡಲಾಗಿದೆ.

ಅಲ್ಲಾಹನು ಆತನೊಂದಿಗೆ ಮಾಡಿದ ತಪ್ಪುಗಳನ್ನು ಕ್ಷಮಿಸಬಹುದು. ಆದರೆ, ತನ್ನ ಗುಲಾಮನಿಗೆ ಮಾಡಿದ ಅಪರಾಧವನ್ನು ಆತನು ಸ್ವತಃ ಕ್ಷಮಿಸದೆ ಅಲ್ಲಾಹನು ಕ್ಷಮಿಸುವುದಿಲ್ಲ. – ಮಾನವನನ್ನು ಪ್ರೀತಿಸದೆ ಸೃಷ್ಟಿಕರ್ತನ ಪ್ರೀತಿ ಸಂಪಾದಿಸಲು ಸಾಧ್ಯವಿಲ್ಲ. ಸಹಜೀವಿಗಳನ್ನು ಮರೆಯುವವರನ್ನು ಅಲ್ಲಾಹನೂ ಮರೆಯುತ್ತಾನೆ. ಅವರನ್ನು ದ್ವೇಷಿಸುವವರನ್ನು ಅಲ್ಲಾಹನೂ ದ್ವೇಷಿಸುತ್ತಾನೆ. ಅವರನ್ನು ಪೀಡಿಸುವವರನ್ನು ಅವರು ಜೀವನದಾದ್ಯಂತ ಆರಾಧನಾ ಕರ್ಮಗಳಲ್ಲಿ ನಿರತರಾದವರಾಗಿದ್ದರೂ ಅಲ್ಲಾಹನು ದಂಡಿಸುತ್ತಾನೆ. ಅವರ ಆ ಸತ್ಕರ್ಮಗಳ ಸತ್ಫಲವನ್ನು ಅವರಿಂದ ಪೀಡಿತರಾದವರಿಗೆ ಕೊಡಲಾಗುವುದು. ದೇವ ನ್ಯಾಯವು ಅತಿ ಶ್ರೇಷ್ಠವಾಗಿದೆ, ಅದು ಮಾನವರೊಂದಿಗಿನ ಅನಂತ ಕರುಣೆಯಲ್ಲಿ ಸ್ಥಾಪಿತವಾಗಿದೆ.

‘ಮಾನವೀಯ ಧರ್ಮ’ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ

ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” …