Home / ಲೇಖನಗಳು / ಪುಟಕ್ಕಿಟ್ಟ ಪುಟಗಳು: ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ

ಪುಟಕ್ಕಿಟ್ಟ ಪುಟಗಳು: ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ

– ಯೋಗೇಶ್ ಮಾಸ್ಟರ್

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಎಂದು ಪ್ರಾರಂಭವಾಗುವ ಈ ಕೃತಿಯು ಪ್ರವಾದಿ ಮಹಮದರ ಶಾಂತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಮುಸ್ಲಿಮೇತರರಿಗೆ ಸ್ಪಷ್ಟತೆಯನ್ನು ನೀಡುವಂತಹ, ಇಸ್ಲಾಮಿ ಸಾಹಿತ್ಯ ಪ್ರಕಾಶನದ ಪುಸ್ತಕ ’ಇಸ್ಲಾಂ ಸಮೀಕ್ಷೆ’. ಬಹುಶಃ ಮುಸಲ್ಮಾನರಿಗೂ ತಮ್ಮದೇ ಧರ್ಮದಲ್ಲಿರುವ ಆಚರಣೆಗಳಿಗಿಂತ ಮುಖ್ಯವಾಗಿ ಆದ್ಯತೆಗಳನ್ನು ಕಂಡುಕೊಳ್ಳಲೂ ಇದು ನೆರವಾಗುತ್ತದೆ ಎಂಬುದು ನನ್ನ ಗ್ರಹಿಕೆ.

ಇಸ್ಲಾಮನ್ನು ಅರಿಯಲು ನಮ್ಮ ಸುತ್ತಲಿನ ಮುಸಲ್ಮಾನರನ್ನು ಗಮನಿಸುವುದರಲ್ಲಿ ಅರ್ಥವಿಲ್ಲ. ಅವರಿಗೆ ತಮ್ಮದೇ ಆದಂತಹ ವ್ಯಕ್ತಿಗತವಾದ ಮತ್ತು ಸಾಮಾಜಿಕ ಪ್ರಭಾವದ ಲೋಪದೋಷಗಳು ಮಾನುಷ ಸಹಜವಾಗಿರುತ್ತವೆ. ಅವರ ನಡವಳಿಕೆಗಳು, ವ್ಯವಹಾರಗಳೆಲ್ಲವೂ ಇಸ್ಲಾಂ ಧರ್ಮೀಯ ನೈತಿಕತೆ ಅಥವಾ ಧಾರ್ಮಿಕತೆಯ ಪ್ರತಿಫಲನಗಳೇನಾಗಿರುವುದಿಲ್ಲ. ಆದ್ದರಿಂದ ಯಾವುದೇ ಧರ್ಮವನ್ನು ಅರಿಯಬೇಕೆಂದರೆ ನಮ್ಮ ಮುಂದೆ ಕಾಣುವ ಧರ್ಮೀಯರ ಕಡೆಗೆ ಬೊಟ್ಟು ಮಾಡುವುದರ ಬದಲು ಆಯಾ ಧರ್ಮದ ಆಕರ ಗ್ರಂಥಗಳನ್ನು, ಮೂಲ ಸಿದ್ಧಾಂತಗಳನ್ನು, ತಾತ್ವಿಕತೆಯ ಚರಿತ್ರೆಯನ್ನು ಗಮನಿಸಬೇಕಾಗುತ್ತದೆ. ಅಂತೆಯೇ 1974ರಲ್ಲಿ ಪ್ರಕಟವಾದ ಈ ಕೃತಿಯು ಇಸ್ಲಾಂ ಧರ್ಮವನ್ನು ಅರಿಯಲು ಒಂದು ಪ್ರವೇಶಿಕೆಯನ್ನು ಒದಗಿಸುತ್ತದೆ.

ಒಬ್ಬೊಬ್ಬ ವ್ಯಕ್ತಿಯೂ ತನ್ನನ್ನು ತಾನು ರೂಪುಗೊಳಿಸಿಕೊಳ್ಳುವ ಮೂಲಕ ತನ್ನ ಕುಟುಂಬವನ್ನು ಮತ್ತು ಅದರ ವಿಸ್ತೃತ ರೂಪವಾದ ಸಮಾಜವನ್ನೂ ರೂಪುಗೊಳಿಸುತ್ತಾನೆ. ಅದರಂತೆಯೇ ವಿಶ್ವಶಾಂತಿಯೂ ಕೂಡಾ. ತನ್ನಲ್ಲಿ ತಾನು ಶಾಂತಿಯನ್ನು ಕಂಡುಕೊಳ್ಳಲಾಗದವನು ತಾನಿರುವ ಕುಟುಂಬದಲ್ಲಿಯೂ ಕೂಡಾ ಶಾಂತಿಯನ್ನು ಕಾಣಲಾರ. ಅಂತೆಯೇ ವಿಶ್ವಶಾಂತಿಯನ್ನು ನಾವು ಎಂದಿಗೂ ಕಾಣಲಾರೆವು.

ಈ ಆಧುನಿಕ ಜಗತ್ತಿನಲ್ಲಿ ಇಸ್ಲಾಮನ್ನು ಒಂದು ಭಯೋತ್ಪಾದಕ ಧರ್ಮವೆಂದೂ ಮತ್ತು ಇತರೆ ಧರ್ಮೀಯರ ಶ್ರದ್ಧೆ ಮತ್ತು ನಂಬಿಕೆಗಳ ಬಗ್ಗೆ ಅದಕ್ಕೆ ಅಸಹನೆ ಇದೆ ಎಂದೂ ತೋರಿಸುವಂತಹ ಒಂದು ಮನಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಇಸ್ಲಾಮೋಫೋಬಿಯಾವಾಗಿ ರೂಪಿಸುವಂತಹ ಕೆಲಸಗಳಾಗುತ್ತಿವೆ.

ಮತೋನ್ಮತ್ತ ಆತ್ಮಾಹುತಿಯ ಬಾಂಬರುಗಳಾಗಿ ಅಸಂಖ್ಯಾತ ಜನರನ್ನು ಕೊಲ್ಲುವಂತಹ ಭಯೋತ್ಪಾದಕರನ್ನು ನಾವು ಕಂಡಿದ್ದೇವೆ. ಜಗತ್ತಿನ ಆ ಈ ಮೂಲೆಗಳಲ್ಲಿ ಅಂತಹ ಕೊಲೆಗಡುಕರನ್ನು ಕಾಣುತ್ತಿದ್ದೇವೆ.

ಆದರೆ ವಿನಾಶಕಾರಿ ಧೋರಣೆಗಳಿಂದ ಧರ್ಮದ ಹೆಸರನಲ್ಲಿ ಮಾರಣಾಂತಿಕ ಚಟುವಟಿಕೆಗಳನ್ನು ಮಾಡುವ ಇಂತಹವರು, ಅಲ್ಲಾಹನ ಸಂದೇಶವಾಹಕರೆನಿಸಿಕೊಳ್ಳುವ ಪ್ರವಾದಿ ಮಹಮದರ ಜೀವನ ಮತ್ತು ಬೋಧನೆ ಮುಸಲ್ಮಾನರಿಗೆ ಮಾತ್ರವಲ್ಲ, ಜಗತ್ತಿನ ಜನರಿಗೆಲ್ಲಾ ಏನನ್ನು ಹೇಳುತ್ತದೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕಾಗಿದೆ.

ಯಾವುದೇ ಧರ್ಮದ ಲಾಂಛನವ ಹೊತ್ತಿದ್ದರೂ ಒಬ್ಬ ವ್ಯಕ್ತಿಯು ತನ್ನ ಮನೋವ್ಯಾಧಿಯ ಮತ್ತು ಚಿತ್ತಭ್ರಮೆಯ ಕಾರಣದಿಂದ ಮೊದಲು ತಾನು ತನಗೇ, ನಂತರ ತನ್ನ ಸಂಗಾತಿಗಳಿಗೆ, ತದನಂತರ ತನ್ನ ಕುಟುಂಬಕ್ಕೆ, ಆನಂತರ ಸಮಾಜಕ್ಕೆ ಕಿರುಕುಳವಾಗಿ ಪರಿಣಮಿಸುತ್ತಾನೆ. ಈ ವಿಷಯದಲ್ಲಿ ನನ್ನ ಸ್ಪಷ್ಟ ಗ್ರಹಿಕೆ ಮತ್ತು ಅರಿವು ಏನೆಂದರೆ, ಇಂತಹ ಕಿರುಕುಳಗಳಿಗೆ ಧಾರ್ಮಿಕ ಮನೋಭಾವವಾಗಲಿ, ಧಾರ್ಮಿಕ ಸಂಸ್ಕಾರವಾಗಲಿ ಕಾರಣವಲ್ಲದೇ ಬರಿಯ ಅವರ ವ್ಯಕ್ತಿಗತ ಮನೋಧರ್ಮವೇ ಆಗಿರುತ್ತದೆ.

ಇಸ್ಲಾಮೋಫೋಬಿಯಾವನ್ನು ಹರಡುವಂತಹವರು ಯಾರೇ ಆಗಿದ್ದರೂ ಅವರಿಗೆ ಸೂಕ್ಷ್ಮದೃಷ್ಟಿಯೂ, ವಾಸ್ತವಗ್ರಹಿಕೆಯೂ ಮತ್ತು ಇಸ್ಲಾಮಿನ ಬಗ್ಗೆ ಸಾಧಾರಣ ತಿಳಿವಳಿಕೆಯೂ ಇಲ್ಲವೆಂಬುದು ಸ್ಪಷ್ಟ. ನಾನು ಇಸ್ಲಾಂ ಧರ್ಮೀಯನಲ್ಲ. ಇಸ್ಲಾಂ ಪಂಡಿತನೂ ಅಲ್ಲ. ಆದರೆ, ನಮ್ಮ ಸಹಜೀವಿಗಳು ಅನುಸರಿಸುವ ಧರ್ಮದ ಬಗ್ಗೆ ಸಹಜ ಆಸಕ್ತಿ ಮತ್ತು ಕುತೂಹಲದಿಂದ ಸ್ಥೂಲವಾಗಿಯೇ ಗಮನಿಸಿದಾಗ ಪ್ರವಾದಿ ಮಹಮದರ ಜೀವನ, ಬೋಧನೆ ಮತ್ತು ಸಾಧನೆಗಳೊಂದಿಗೆ ಅವರ ಆಶಯ ಹಾಗೂ ಸಂದೇಶಗಳೇನೆಂಬುದು ಕೂಡ ತಿಳಿಯುತ್ತದೆ. ಅದಕ್ಕೆ ನನಗೆ ಮೊದಲು ನೆರವಾಗಿದ್ದು ಈ ಇಸ್ಲಾಂ ಸಮೀಕ್ಷೆ. ಇಷ್ಟರಮಟ್ಟಿಗೆ ತಿಳಿಯುವುದೇನೆಂದರೆ ಮತಾಂತರವಾಗುವುದೋ ಅಥವಾ ಧರ್ಮಾರಾಧಕರಾಗುವುದೋ ಬೇಕಾಗಿಲ್ಲ. ಬದಲಿಗೆ ನಮ್ಮ ಬದುಕಿನಲ್ಲಿ ನಾವೇ ಅಳವಡಿಸಿಕೊಳ್ಳಬೇಕಾದ ಸಹನೆ ಮತ್ತು ಸರಳ ದೃಷ್ಟಿಯ ಅಗತ್ಯತೆ.

ನಾವೇ ನಮ್ಮ ಬದುಕಿನಲ್ಲಿ ಯಾವುದನ್ನು ಮೌಲ್ಯವೆಂದು ಭಾವಿಸುತ್ತೇವೆಯೋ ಅದನ್ನೇ ಆ ಮೂಲಕವೂ ಗಟ್ಟಿಗೊಳಿಸಿಕೊಳ್ಳುವ ರೀತಿ ಇದಾಗಿರುತ್ತದೆ. ಮುಸಲ್ಮಾನ ಧರ್ಮೀಯರಲ್ಲದೇ ಅಥವಾ ಧಾರ್ಮಿಕವಾಗಿಯಲ್ಲದೇ ನಾವು ಪ್ರೀತಿಸುವ, ಗೌರವಿಸುವ, ಆಪ್ತವಾಗಿ ಕಾಣುವ ನಮ್ಮ ಬದುಕಿನ ಹಲವು ಅಂಶಗಳಿಗೆ ಪ್ರವಾದಿ ಮಹಮದ್ ಪ್ರೇರಕವಾಗುತ್ತಾರೆ ಮತ್ತು ನಾವು ಬದುಕ ಬಯಸುವ ರೀತಿ ನೀತಿಗಳಿಗೆ ಸೂತ್ರಗಳನ್ನು ನೀಡುತ್ತಾರೆ. ಧಾರ್ಮಿಕತೆ ಮಾನವ ಬದುಕಿನ ಗುರಿಯಲ್ಲ. ಅದು ಒಂದು ದಾರಿಯಷ್ಟೇ. ಆದರೆ ಅದು ರೂಪುಗೊಳಿಸುವುದು ನಮ್ಮ ಮನೋಭಾವವನ್ನು, ನೆರೆಹೊರೆಯನ್ನು, ಪರಿಸರವನ್ನು, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು, ಸಮಾಜವನ್ನು, ಅತಿಮುಖ್ಯವಾಗಿ ನಮ್ಮ ಸಹಜೀವಿಗಳೊಡನೆ ಇರುವ ನಮ್ಮ ಸಂಬಂಧವನ್ನು.

ಸಮಗ್ರವಾಗಿ ನೋಡಲು ಹೋದರೆ ಇಂದು ಜಗತ್ತು ಘನತೆಯಿಂದ ಕೂಡಿಲ್ಲ. ರಾಜಕೀಯ ಚದುರಂಗದಾಟಗಳಿಂದಾಗಿ, ಸಾಮಾನ್ಯರ ಬದುಕಿನ ಹಾವು-ಏಣಿಯಾಟಗಳಿಂದಾಗಿ ಮಾನವ ಜಗತ್ತು ಸಾಮಾಜಿಕ ಮತ್ತು ಆರ್ಥಿಕ ಭೇದಗಳಿಂದ ಕೂಡಿವೆ. ಅನ್ಯಾಯವಂತೂ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿದೆ. ಲಿಖಿತ ಸಂವಿಧಾನದ ತಳಹದಿಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿಯೇ ನ್ಯಾಯವನ್ನು ಪಡೆದುಕೊಳ್ಳುವ ವಿಷಯದಲ್ಲಿ ದಿಗಿಲನ್ನು ಹುಟ್ಟಿಸುತ್ತದೆ ಎಂದರೆ, ಅರಾಜಕತೆಯಿರುವಂತಹ ಮತ್ತು ಸಂಘರ್ಷಗಳಲ್ಲಿ ನಿರತವಾಗಿರುವಂತಹ ರಾಷ್ಟ್ರಗಳಲ್ಲಿ ಜನಸಾಮಾನ್ಯರ ಪಾಡನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು.

ಮಾನವೀಯ ನೆಲೆಗಟ್ಟಿನಲ್ಲಿ ನ್ಯಾಯ ಮತ್ತು ಅನ್ಯಾಯಗಳ ಸ್ಪಷ್ಟ ಪ್ರಜ್ಞೆಯು ವ್ಯವಸ್ಥೆಗಾಗಲಿ ಮತ್ತು ವ್ಯಕ್ತಿಯಲ್ಲಾಗಲಿ ಈ ಕ್ಷಣವೇ ಉಂಟಾಗಬೇಕಾಗಿರುವಷ್ಟು ತುರ್ತಿನ ಅಗತ್ಯವಿದೆ.

ವ್ಯಕ್ತಿ ವ್ಯಕ್ತಿಗಳ ಪ್ರತಿ ನಡೆಗಳಲ್ಲಿ ನ್ಯಾಯಬದ್ಧವಾದ ಪ್ರಜ್ಞಾವಂತಿಕೆಯು ಇದ್ದಲ್ಲಿ ಮಾತ್ರವೇ ಒಂದು ಕುಟುಂಬದಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ, ವ್ಯವಸ್ಥೆಗಳಲ್ಲಿ, ಸರಕಾರಗಳಲ್ಲಿ, ರಾಷ್ಟ್ರಗಳಲ್ಲಿ ಮತ್ತು ಜಗತ್ತಿನಲ್ಲಿ ನ್ಯಾಯಸ್ಥಾಪನೆಯಾಗಲು ಸಾಧ್ಯವಿದೆ. ಎಂತಹ ಅಪಾಯಕಾರಿ ಮನಸ್ಥಿತಿಯನ್ನು ಜಗತ್ತು ಕಾಣುತ್ತಿದೆಯೆಂದರೆ, ನಾಚಿಕೊಳ್ಳಬೇಕಾದ ವಿಷಯದಲ್ಲಿ ಅಭಿಮಾನವನ್ನು ಹೊಂದಿರುತ್ತಾರೆ. ಯಾವುದು ಅಭಿಮಾನದಿಂದ ಆರಾಧಿಸಬೇಕಾದ ವಿಷಯವಿರುತ್ತದೆಯೋ, ಅದು ಅಸ್ತಿತ್ವದಲ್ಲಿ ಪ್ರಾಯೋಗಿಕವಾಗಿ ಇರಲು ಸಾಧ್ಯವೇ ಇಲ್ಲ ಎಂಬಂತೆ ಅದನ್ನು ಕಾಣುತ್ತಾರೆ. ಇದೊಂದು ಪರಮಾಪಾಯದ ಲಕ್ಷಣ.

ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರಗಳು ಜನತೆಯ ಜೀವನಮಟ್ಟದ ಸುಧಾರಣೆಗಿಂತ, ಜನತೆಯ ಜೀವನವನ್ನೇ ಕಸಿಯುವಂತಹ ವ್ಯವಸ್ಥೆಯನ್ನು ರೂಪಿಸಿದರೆ, ಇಡೀ ಸಮಾಜ ಅಥವಾ ರಾಷ್ಟ್ರವೇ ಶೂನ್ಯಸಹನೆಯ ವಲಯದಲ್ಲಿ (ಜೀರೋಟಾಲರೆನ್ಸ್ ಜೋನ್) ಇರುವಂತೆ ತೋರುತ್ತದೆ. ಈ ಬಗೆಯ ಅಸಹನೆಯ ಪರಮಾವಧಿಯ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಕಾಣುತ್ತದೆ. ವ್ಯಕ್ತಿಗತವಾಗಿರುವ ಮಾನಸಿಕ ಸಮಸ್ಯೆಯು ಸಾಂಕ್ರಾಮಿಕವಾಗುತ್ತಾ ಸಂಕಲಿತವಾಗಿ ಸಮಾಜದ ಮಾನಸಿಕ ಸಮಸ್ಯೆಯಾಗುವುದೇ ಈ ಅನವಶ್ಯಕ ಅಸಹನೆಗೆ ಕಾರಣ. ಅವರ ಮಾನಸಿಕ ಸಮಸ್ಯೆಯ ಒಂದು ಭಾಗವಾದ ಈ ಅನವಶ್ಯ ಅಸಹನೆಗೆ ಕಾರಣಗಳಿಗಿಂತ ನೆಪಗಳೇ ಮುಖ್ಯವಾಗುತ್ತದೆ. ಇಸ್ಲಾಮೋಫೋಬಿಯಾ ಎಂಬ ಅಸಹನೆಯೂ ಕೂಡಾ ಇಂತದ್ದರದೇ ಒಂದು ಭಾಗ.

ಮನುಷ್ಯನ ಬದುಕಿಗೆ ಅಗತ್ಯವಾದಂತಹ ಮಾರ್ಗದರ್ಶನ, ನೈತಿಕತೆ ಮತ್ತು ಅವುಗಳಿಗೆ ಅಗತ್ಯವಾದಂತಹ ಬೆಂಬಲಗಳು ದೊರಕದೇ ಇದ್ದ ಪಕ್ಷದಲ್ಲಿ ಸಮಾಜದ ಸಂರಚನೆಯೇ ಕುಸಿದುಬೀಳುವದರಲ್ಲಿ ಯಾವ ಸಂದೇಹವೂ ಇಲ್ಲ.

ಮೊಟ್ಟಮೊದಲನೆಯದಾಗಿ ಮುಸಲ್ಮಾನರಲ್ಲದ ನನ್ನಂತವರು ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ, ಹಿಂದೂ ಧರ್ಮವನ್ನು ಹೇಗೆ ಜೀವನದ ಒಂದು ಪದ್ಧತಿ ಎಂದು ಗುರುತಿಸಲಾಗುತ್ತದೆಯೋ, ಅದೇ ರೀತಿ ಇಸ್ಲಾಂ ಕೂಡಾ ತನ್ನದೇ ಆದ ಪರಿಪೂರ್ಣತೆಯನ್ನು ಹೊಂದಿರುವ ಬದುಕಿನ ಮಾರ್ಗ.

ಮನುಷ್ಯ ತನ್ನ ಗೊಂದಲಗಳಿಂದಾಗಿ, ಅಪರಿಪೂರ್ಣತೆಯಿಂದಾಗಿ, ಅಪ್ರಬುದ್ಧತೆಯಿಂದಾಗಿ, ಅಪಾರ್ಥದಿಂದಾಗಿ, ದೌರ್ಬಲ್ಯಗಳಿಂದಾಗಿ, ದುರಾಸೆಗಳಿಂದಾಗಿ, ಲೌಕಿಕ ಸೆಳೆತಗಳಿಂದಾಗಿ, ದುಡುಕು ವರ್ತನೆಗಳಿಂದಾಗಿ ತನ್ನ ಸಹಜೀವಿಗಳ ಬದುಕಿಗೆ ತೊಡಕಾಗುವನು. ಏಕೆಂದರೆ ಅವನ ದೃಷ್ಟಿ ಅವನ ಇತಿಮಿತಿಯದ್ದಾಗಿರುತ್ತದೆಯೇ ಹೊರತು ವಿಶ್ವತೋಮುಖವಾಗಿರುವುದಿಲ್ಲ. ಜಗತ್ತಿನ ಎಲ್ಲಾ ಜೀವಿಗಳಿಗೆ ನ್ಯಾಯವೊದಗಿಸುವಂತದ್ದಾಗಿರುವುದಿಲ್ಲ. ಹಾಗಾದರೆ ಈ ವಿಶ್ವದ ಸೃಷ್ಟಿಕರ್ತನ ದೃಷ್ಟಿಯಿಂದ ನ್ಯಾಯಸಮ್ಮತವಾಗಿ ನಡೆಯಬೇಕಾಗಿರುವುದು ಅಗತ್ಯವೆಂಬುದೇ ಶರೀಯದ ಉದ್ದೇಶ.

ಇಸ್ಲಾಂ ಎಂದರೇನೇ ಶಾಂತಿ ಎಂದರ್ಥ. ವಿಶ್ವದೊಡೆಯ ಅಲ್ಲಾಹನ ಇಚ್ಛೆಯಂತೆ ಈ ಜಗತ್ತಿನಲ್ಲಿ ಶಾಂತಿಯನ್ನುಂಟುಮಾಡಲು ಒಬ್ಬ ನೈತಿಕವಾಗಿ, ಆಧ್ಯಾತ್ಮಿಕವಾಗಿ ವಿವಿಧ ಹಂತಗಳಲ್ಲಿ ಉನ್ನತಿಗೇರುವುದೇ ಮುಸಲ್ಮಾನನಾಗುವುದರ ಪರಿಕಲ್ಪನೆ. ಇಸ್ಲಾಂ ಹುಟ್ಟಿದಾಗಿನಿಂದಲೇ ಗುರುತಿಸಲಾಗುವಂತಹ ಜಾತಿಯ ರೀತಿಯನ್ನು ಒಳಗೊಂಡ ಒಂದು ಧರ್ಮವಲ್ಲ. ಅದೊಂದು ದೀಕ್ಷಾಧರ್ಮ. ಜೈನ, ಬೌದ್ಧ, ಕ್ರೈಸ್ತ, ಲಿಂಗಾಯತ ಮತ್ತು ಇಸ್ಲಾಂ; ಈ ಎಲ್ಲವೂ ದೀಕ್ಷೆಯ ಧರ್ಮಗಳೇ. ಹಾಗೆಯೇ ದೀಕ್ಷೆ ಪಡೆದನಂತರ ದೊರೆಯುವ ಸಂಸ್ಕಾರ, ಆ ಸಂಸ್ಕಾರದ ಪ್ರಭಾವದಿಂದ ಅವನು ಜೀವನದಲ್ಲಿ ಆಚಾರವಿಚಾರಗಳನ್ನು ಅಳವಡಿಸಿಕೊಳ್ಳುತ್ತಾ ಒಬ್ಬ ವ್ಯಕ್ತಿ ಬೌದ್ಧ, ಲಿಂಗಾಯತ ಅಥವಾ ಮುಸಲ್ಮಾನನಾಗುತ್ತಾನೆಯೇ ಹೊರತು, ಆಯಾ ಧರ್ಮದ ಕುಟುಂಬದಲ್ಲಿ ಹುಟ್ಟಿದ್ದರೂ, ಅವನು ಆಚಾರ ಮತ್ತು ವಿಚಾರಗಳಿಗೆ ಬದ್ಧನಾಗಿ ಆ ನಿರ್ದಿಷ್ಟ ಮಾರ್ಗದಲ್ಲಿ ನಡೆಯದಿದ್ದರೆ ಅವನು ಆ ಧರ್ಮೀಯನೇ ಅಲ್ಲ. ಮುಸಲ್ಮಾನ ಅಥವಾ ಬೌದ್ಧ ಅಥವಾ ಲಿಂಗಾಯತ ಧರ್ಮೀಯರ ಕುಟುಂಬದಲ್ಲಿ ಹುಟ್ಟಿದರೂ ಅದರಿಂದ ಅವನು ಹೊರತಾಗಬಹುದು. ಅಂತೆಯೇ ಅನ್ಯಧರ್ಮದಲ್ಲಿ ಹುಟ್ಟಿದರೂ ಗುಣಮೌಲ್ಯಗಳನ್ನು ಗ್ರಹಿಸಿ ಧರ್ಮದ ದೀಕ್ಷೆಯನ್ನು ಪಡೆದುಕೊಂಡು ವ್ಯಕ್ತಿ ಆ ಧರ್ಮಕ್ಕೆ ಸೇರಬಹುದು. ಈ ವಿಷಯದಲ್ಲಿ ಮುಸಲ್ಮಾನರಿಗೂ ಮತ್ತು ಮುಸಲ್ಮಾನೇತರರಿಗೂ ಬಹಳ ಸ್ಪಷ್ಟತೆ ಇರಬೇಕು.

ಈ ದಿಕ್ಕಿನಲ್ಲಿ ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ ತನ್ನ ಸತ್ಯ ವಿಶ್ವಾಸದ ಪ್ರತಿಯೊಂದು ಮಜಲುಗಳನ್ನು ಹಂತಹಂತವಾಗಿ ವಿವರಿಸುತ್ತಾ ಹೋಗುತ್ತದೆ.

ಕೃಪೆ: ನಾನು ಗೌರಿ.ಕಾಮ್

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …