Home / ಲೇಖನಗಳು / ಬದ್ರ್: ಸತ್ಯಮಿಥ್ಯದ ನಡುವಿನ ಸಂಘರ್ಷ

ಬದ್ರ್: ಸತ್ಯಮಿಥ್ಯದ ನಡುವಿನ ಸಂಘರ್ಷ

@ ಸಲೀಮ್ ಬೋಳಂಗಡಿ

ಬದ್ರ್ ಇಸ್ಲಾಮೀ ಇತಿಹಾಸದ ಬಹಳ ಪ್ರಧಾನವಾದ ಘಟನೆಯಾಗಿದೆ. ಬದ್ರ್ ಯುದ್ಧವು ಸತ್ಯ ಮತ್ತು ಅಸತ್ಯದ ನಡುವಿನ ಸಂಘರ್ಷವಾಗಿತ್ತು. ಯುದ್ಧದ ವ್ಯಾಮೋಹದಿಂದ ಯಾರನ್ನೋ ಮಣಿಸಿ ಪ್ರಭುತ್ವ ಸ್ಥಾಪಿಸಲು ಮಾಡಿದ ಯುದ್ಧವಲ್ಲ. ಪ್ರವಾದಿ ಮುಹಮ್ಮದ್(ಸ)ರು ಈ ಲೋಕಕ್ಕೆ ಅನುಗ್ರಹೀತರಾಗಿ ಬಂದವರು. ಶಾಂತಿಯ ದೂತರಾಗಿ ಬಂದವರು. ಸಹನೆಯ ಸದುಪದೇಶದಿಂದ ಮಿಥ್ಯವನ್ನು ಹೋಗಲಾಡಿಸಲು ಆಗಮಿಸಿದವರು. ಬಹುದೇವತ್ವದ ಸಮಾಜವನ್ನು ಏಕದೇವಾರಾಧನೆಯ ವಾಹಕವಾಗಿ ಮಾಡಲು ದೇವನಿಂದಲೇ ನಿಯುಕ್ತರಾದ ಸಂದೇಶವಾಹಕ. ಅವರು ಸಮಾಜಕ್ಕೆ ಒಳಿತನ್ನು ಬಯಸುತ್ತ ಅರಬರನ್ನು ಸುಧಾರಿಸಲು ಪ್ರಯತ್ನಿಸಿ ಯಶಸ್ಸು ಕಂಡವರು. ಈ ಪಯಣದಲ್ಲಿ ಅನೇಕ ಸಂಕಷ್ಟಗಳನ್ನು ಅವರು ಅನುಭವಿಸಬೇಕಾಯಿತು. ಅಂದು ಮಕ್ಕಾವು ಎಲ್ಲ ರೀತಿಯ ಕೆಡುಕುಗಳಿಂದ ಆವೃತವಾಗಿತ್ತು. ಅಂತಹ ಒಂದು ಸಮಾಜವನ್ನು ಸಂಪೂರ್ಣವಾಗಿ ಬದಲಿಸಿದ ಕೀರ್ತಿ ಪ್ರವಾದಿವರ್ಯರಿಗೆ(ಸ) ಸಲ್ಲುತ್ತದೆ.

ವಿಗ್ರಹಾರಾಧನೆಯಲ್ಲಿ ಮುಳುಗಿ ಸ್ವೇಚ್ಛೆಯ ಜೀವನ ನಡೆಸುತ್ತಿದ್ದ ಅರಬರಿಗೆ ಅವರು ಹೊಸ ಜೀವನ ಕಲಿಸಿದರು. ಅಲ್ಲಿ ಸಮಾನತೆಯು ನೆಲೆ ನಿಲ್ಲ ತೊಡಗಿತು. ಬಡವರು ದರಿದ್ರರು ತುಳಿತಕ್ಕೊಳ ಪಟ್ಟವರಿಗೆ ಆ ಸಮಾಜದಲ್ಲೊಂದು ಗೌರವವನ್ನು ದೊರಕಿಸಿ ಕೊಟ್ಟರು. ಪ್ರವಾದಿಯವರ(ಸ) ಏಕ ದೇವತ್ವದ ಸಂದೇಶವನ್ನು ಆಹ್ವಾನಿಸಿಕೊಂಡವರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಇದು ತಮ್ಮ ಸ್ವೇಚ್ಛೆಯಿಂದ ಕೂಡಿದ ದರ್ಪದ ಆಡಳಿತ ನಡೆಸುವವರ ನಿದ್ದೆಯನ್ನು ಕೆಡಿಸಿತು. ಆದ್ದರಿಂದ ಪ್ರವಾದಿಯವರಿಗೆ(ಸ) ಮತ್ತು ಅವರ ಸಂಗಾತಿಗಳಿಗೆ ನಾನಾ ರೀತಿಯ ಕಿರುಕುಳ ನೀಡಿದರು. ಅವರೆಷ್ಟು ತೀಕ್ಷ್ಣವಾಗಿ ಕಿರುಕುಳ ನೀಡುತ್ತಿದ್ದರೋ ಅಷ್ಟೇ ಪ್ರಬಲವಾಗಿ ಇಸ್ಲಾಮ್ ಬೆಳೆಯ ತೊಡಗಿತು.

ಮಕ್ಕಾದಲ್ಲಿ ಸಂದೇಶ ಪ್ರಚಾರದಲ್ಲಿ ನಿರತರಾದ ಪ್ರವಾದಿವರ್ಯರ(ಸ) ಸಂಗಾತಿಗಳ ಮೇಲೆ ನಿರಂತರ ಕಿರುಕುಳ ಕೀಟಲೆಗಳು ವ್ಯಾಪಕವಾದಾಗ ಪ್ರವಾದಿಯವರು(ಸ) ಮದೀನಕ್ಕೆ ಹಿಜ್‍ರಾ ಹೊರಡಲು ನಿರ್ಧರಿಸಿದರು. ಕೆಲವರು ರಹಸ್ಯವಾಗಿ ಹಿಜ್‍ರಾ ಹೊರಟರೆ ಉಮರ್‍ ರಂತಹ ವೀರರು ಬಹಿರಂಗವಾಗಿ ಸವಾಲೆಸೆದು ಹಿಜ್‍ರಾ ಹೊರಟರು. ಈ ಕಳೆದ ಹದಿಮೂರು ವರ್ಷಗಳ ಮಕ್ಕಾ ಜೀವನವಿದೆಯಲ್ಲ ಅದು ಸಹನೆಯ ತಾಳ್ಮೆಯ ಜೀವನವಾಗಿತ್ತು. ಇಸ್ಲಾಮೀ ಸಂದೇಶ ಪ್ರಚಾರದ ಹೊಣೆಯನ್ನು ಅವರು ನಿರ್ವಹಿಸಿದರು. ತಮ್ಮ ಕರ್ತವ್ಯ ಪೂರ್ಣಗೊಂಡಿದೆಯೆಂದು ಮನವರಿಕೆಯಾದಾಗ ಮದೀನಕ್ಕೆ ಹೊರಟರು. ಈ ಹದಿಮೂರು ವರ್ಷಗಳಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳು ಇತಿಹಾಸದಲ್ಲಿ ಅಚ್ಚಳಿಯದೆ ವಿವರಿಸಲಾಗಿದೆ. ಆದರೆ ಅವರೆಂದೂ ಶಸ್ತ್ರವನ್ನು ಕೈಗೆತ್ತಿಕೊಂಡಿರಲಿಲ್ಲ. ಸಹನೆಯ ತಾಳ್ಮೆಯ ಜೀವನವನ್ನೇ ಸವೆಸಿ ತಮ್ಮ ಗುರಿಯನ್ನು ಸಾಧಿಸಲು ಪಣತೊಟ್ಟರು.

ಇಸ್ಲಾಮ್ ಇಸ್ಲಾಮಿನಂತೆ ಬದುಕಲು ಪ್ರೇರೇಪಿಸುತ್ತದೆ. ಅದು ಏಕಾಏಕಿ ಸಾಯಲು ಪ್ರೇರೇಪಿಸುವುದಿಲ್ಲ. ಒಂದು ವೇಳೆ ಹುತಾತ್ಮದ ಮೋಹ ಅವರಲ್ಲಿ ಆ ಸಂದರ್ಭದಲ್ಲಿ ಉದ್ಭವಿಸಿದ್ದಿದ್ದರೆ ಮದೀನಕ್ಕೆ ವಲಸೆ ಹೋಗುವ ಅಗತ್ಯವಿರಲಿಲ್ಲ. ಮಕ್ಕಾದ ಮುಶ್ರಿಕರೊಡನೆ ಈ ಸಣ್ಣ ಸಂಘ ಹೋರಾಡಿ ಶಹೀದ್ ಆಗಬಹುದಿತ್ತು. ಆದರೆ ಅದರಿಂದ ಇಸ್ಲಾಮಿನ ನಿಜವಾದ ಉದ್ದೇಶ ಈಡೇರುತ್ತಿರಲಿಲ್ಲ. ತಮ್ಮ ಮಕ್ಕಾ ಜೀವನದ ಅವಧಿಯಲ್ಲಿಯೂ ಪ್ರವಾದಿವರ್ಯರು(ಸ) ತಮ್ಮ ಅನುಚರರಿಗೆ ಶಸ್ತ್ರಾಸ್ತ್ರವನ್ನು ಸಂಗ್ರಹಿಸಲು ಅನುಮತಿ ನೀಡಿ ಯುದ್ಧಕ್ಕೆ ಸಿದ್ಧಗೊಳ್ಳುವಂತೆ ಪ್ರೇರೇಪಿಸಬಹುದಿತ್ತು. ಆದರೆ ಹಾಗಾಗಲಿಲ್ಲ. ಮೊದಲು ಇಸ್ಲಾಮ್ ನಿಮಗೆ ಆದೇಶಿಸಿರುವ ಕರ್ತವ್ಯವನ್ನು ನಿಭಾಯಿಸಿರಿ. ಸಂದೇಶವನ್ನು ಸಾರಿರಿ. ಏಕದೇವತ್ವದ ಸಂದೇಶವನ್ನು ಸಮಾಜದಲ್ಲಿ ಪಸರಿಸಿರಿ. ಆಗ ಬರುವ ಎಲ್ಲ ರೀತಿಯ ವಿರೋಧಗಳನ್ನು ತಾಳ್ಮೆಯಿಂದ ಎದುರಿಸಿರಿ. ಇದು ಪ್ರವಾದಿ ಚರ್ಯೆಯಾಗಿದೆ.

ಆದರೆ ಇಂದು ಸಮಾಜದಲ್ಲಿ ಇದಕ್ಕೆ ವ್ಯತಿರಿಕ್ತವಾಗಿರುವುದನ್ನು ನಾವು ಕಾಣುತ್ತೇವೆ. ಮುಸ್ಲಿಮ್ ಸಮುದಾಯ ಮೊದಲು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಇಸ್ಲಾಮಿನ ಸಂದೇಶವನ್ನು ಸಾರಿ ಸಮಾಜದಲ್ಲಿ ಇಸ್ಲಾಮಿನ ಬಗೆಗಿರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಾವು ಕಾರ್ಯಪ್ರವೃತ್ತರಾದರೆ ಇವರು ಯುದ್ಧದಾಹಿಗಳು ಎಂದು ಇಸ್ಲಾಮಿನ ಬಗ್ಗೆ ತಪ್ಪು ಸಂದೇಶವನ್ನು ನಾವೇ ಹರಡಿದಂತಾಗುತ್ತಿದೆ. ಆದ್ದರಿಂದ ಬದ್ರ್‍ನ ನೈಜ ಸಂದೇಶವೇನೆಂಬುದರ ಬಗ್ಗೆ ನಾವು ಅರಿಯಬೇಕಾಗಿದೆ.

ಹೀಗೆ ಮದೀನದಲ್ಲಿ ಇಸ್ಲಾಮ್ ಬೆಳೆದು ಒಂದು ಸಣ್ಣ ಇಸ್ಲಾಮೀ ರಾಷ್ಟ್ರವೊಂದನ್ನು ಪ್ರವಾದಿವರ್ಯರು(ಸ) ಸ್ಥಾಪಿಸಿದರು. ಮದೀನದಲ್ಲಿ ಇಸ್ಲಾಮ್ ಚಿಗುರೊಡೆಯುತ್ತಿರುವುದು ಮಕ್ಕಾದ ಮುಶ್ರಿಕರನ್ನು ಕಂಗೆಡಿಸಿತು. ಹೇಗಾದರೂ ಅವರನ್ನು ಸದೆಬಡಿಯಬೇಕೆಂಬ ವ್ಯಾಮೋಹ ಅಲ್ಲಿ ಮೆರೆದಾಡಿತ್ತು. ಮುಹಮ್ಮದರ ಅನುಯಾಯಿಗಳು ದಿನೇ ದಿನೇ ಪ್ರಬಲ್ಯರಾಗುತ್ತಿದ್ದಾರೆ. ಅವರನ್ನು ಹತ್ತಿಕ್ಕಲೇಬೇಕಾಗಿದೆ. ಮುಂದೆ ನಾವು ಯಸ್ರಿಬ್ ಮೂಲಕ ಸಿರಿಯಾಕ್ಕೆ ಹೋಗುವ ಹೆದ್ದಾರಿಯನ್ನು ತಡೆಯಬಹುದು. ಅವರನ್ನು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಸಂಪೂರ್ಣವಾಗಿ ಸದೆ ಬಡಿಯಬೇಕೆಂಬ ನಿರ್ಧಾರ ತಳೆದರು. ಅದು ಇಸ್ಲಾಮನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ತಂತ್ರವಾಗಿತ್ತು.

ಯುದ್ಧಾವೇಶದೊಂದಿಗೆ ಮುಶ್ರಿಕರ ಸೇನೆ ಬದ್ರ್‍ನಲ್ಲಿ ಸೇರಿತು. ಅದರಲ್ಲಿ ಸಾವಿರ ಸೈನಿಕರು 600 ಯುದ್ಧ ಕವಚಗಳು ನೂರು ಕುದುರೆ, ಏಳುನೂರು ಒಂಟೆಗಳಿಂದ ಕೂಡಿತ್ತು. ನರ್ತಿಕಿಯರೂ ಗಾಯಕಿಯರೂ ಅವರನ್ನು ಹುರಿದುಂಬಿಸುತ್ತಿದ್ದರು. ಕುರೈಶರು ದರ್ಪದಿಂದ ಠೀವಿಯಿಂದ ಮುನ್ನಡೆಯುತ್ತಿದ್ದರು. ಅವರಿಗೆ ಮುಸ್ಲಿಮರ ಸೇನೆಯು ತೃಣ ಸಮಾನವಾಗಿ ಕಂಡಿತ್ತು. ಇದರ ವಿರುದ್ಧ ಮುನ್ನೂರು ಮೀರಿದ ಮುಸ್ಲಿಮರ ತಂಡ ಅಲ್ಲಿರುವುದು. ಕೇವಲ ಎರಡು ಕುದುರೆ, ಅರವತ್ತು ಒಂಟೆಗಳು, ಖಡ್ಗಗಳೂ, ಭರ್ಚಿಗಳೂ, ಬಿಲ್ಲು ಬಾಣಗಳೂ ಸಂಖ್ಯೆಯಲ್ಲಿ ಕಡಿಮೆ. ಆದರೆ ದೃಢ ವಿಶ್ವಾಸದ ಬಲವೇ ಅವರಿಗೆ ಆಯುಧವಾಗಿತ್ತು. ಅಲ್ಲಾಹನ ಮೇಲಿನ ಅಪಾರ ಭರವಸೆಯೇ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿತ್ತು.

ಹೀಗೆ ಯುದ್ಧಕ್ಕೆ ಸನ್ನದ್ಧವಾಗಿ ಸತ್ಯ ಮತ್ತು ಅಸತ್ಯದ ತಂಡಗಳಿರುವಾಗ ಅಲ್ಲಿ ಮಳೆಯ ಮೂಲಕ ಮುಸ್ಲಿಮರಿಗೆ ಅಲ್ಲಾಹನು ತಂಪೆರೆದನು. ಆದರೆ ಮುಶ್ರಿಕರ ಪಾಲಿಗೆ ಅದು ರಾಡಿ ಕೆಸರಾಗಿ ಪರಿವರ್ತನೆಯಾಯಿತು. ಅಂದರೆ ಎತ್ತರದ ಸ್ಥಳದಿಂದ ನೀರು ಹರಿದು ಅವರು ಬೀಡು ಬಿಟ್ಟಿದ್ದ ಸ್ಥಳವೆಲ್ಲಾ ಕೆಸರುಮಯವಾಗಿತ್ತು. ಮುಸ್ಲಿಮರಿಗೆ ಅನುಗ್ರಹವಾಗಿ ಬಂದ ಈ ಮಳೆಯಿಂದ ತಂಪೆರೆದು ತೂಕಡಿಕೆ ಬಂದು ನಿದ್ದೆ ಆವರಿಸಿತು. ನಿದ್ದೆಯಿಂದೆದ್ದು ಉಲ್ಲಾಸ ಉತ್ಸಾಹದಿಂದ ಯುದ್ಧ ರಂಗಕ್ಕೆ ಅವರು ಧುಮುಕಿದರು.

ಪ್ರವಾದಿ(ಸ) ಪ್ರಾರ್ಥನಾ ನಿರತರಾಗುತ್ತಾರೆ. “ಓ ಅಲ್ಲಾಹ್! ನೀನು ನನ್ನಲ್ಲಿ ಮಾಡಿರುವಂತಹ ವಾಗ್ದಾನವನ್ನು ಪೂರ್ಣಗೊಳಿಸು.” ಅವರಿಗರಿವಿಲ್ಲದಂತೆಯೇ ಪ್ರವಾದಿವರ್ಯರ(ಸ) ಹೆಗಲ ಮೇಲಿದ್ದ ಶಾಲು ಕೆಳಗೆ ಬಿತ್ತು. ಅದೇ ಸ್ಥಿತಿಯಲ್ಲಿ ಸಾಷ್ಟಾಂಗವೆರಗಿ ಈ ರೀತಿ ಪ್ರಾರ್ಥಿಸುತ್ತಾರೆ. “ಓ ಅಲ್ಲಾಹ್! ಇಂದು ಈ ಕೆಲವು ಮಂದಿ ನಾಶವಾದರೆ ಮತ್ತೆ ಈ ಭೂಮಿಯ ಮೇಲೆ ಕೇವಲ ನನ್ನ ಆರಾಧನೆ ಮಾಡುವವರು ಯಾರೂ ಉಳಿಯಲಾರರು” ಹೀಗೆ ಪ್ರವಾದಿಗಳು ನಿರಂತರ ಪ್ರಾರ್ಥನಾ ನಿರತರಾಗುತ್ತಾರೆ.

ಆ ಬಳಿಕ ಪ್ರವಾದಿವರ್ಯರು(ಸ) ಶತ್ರುಗಳ ಸೇನೆಯ ವಿರುದ್ಧ ಮುನ್ನುಗ್ಗಲು ಆದೇಶಿಸುತ್ತಾರೆ. ಹೀಗೆ ಸತ್ಯ ಮತ್ತು ಮಿಥ್ಯದ ನಡುವೆ ವೀರಾವೇಶದ ಹೋರಾಟ ನಡೆಯುತ್ತದೆ. ಅಲ್ಲಾಹನು ದೇವದೂತರ ಮೂಲಕ ಮುಸ್ಲಿಮರಿಗೆ ಸಹಾಯ ಮಾಡಿದನು. ಮುಶ್ರಿಕರು ಪರಾಜಿತರಾದರು. 70ರಷ್ಟು ಸೈನಿಕರು ಸೆರೆಯಾಳಾದರು. ಮುಸ್ಲಿಮ ರನ್ನು ತೃಣ ಸಮಾನವಾಗಿ ಕಂಡು ಅಹಂಕಾರದಿಂದ ಮೆರೆದಾಡುತ್ತಿದ್ದ ಸತ್ಯನಿಷೇಧಿಗಳ ಗರ್ವ ಉಡುಗಿತು. ಅವರ ದೊಡ್ಡ ದೊಡ್ಡ ಸರದಾರರರು ಹತರಾದರು. ಅರೇಬಿಯದಲ್ಲಿ ಆದ ಯಾವುದೇ ಯುದ್ಧದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕುರೈಶ್ ಸರದಾರರು ಹತರಾಗಿರಲಿಲ್ಲ. ಅವರು ಭಯಭೀತರಾದರು. ಅವರು ಪಲಾಯನಗೈದರು. ಬದ್ರ್‍ನ ಈ ಅಭೂತಪೂರ್ವ ಗೆಲುವು ಇತಿಹಾಸದಲ್ಲಿ ಅಜರಾಮರವಾಗಿದೆ. ಅದು ಅಲ್ಲಾಹನ ಧರ್ಮ ಸಂಸ್ಥಾಪನೆಯ ಗೆಲುವಾಗಿತ್ತು.

ಇಸ್ಲಾಮನ್ನು ಈ ಭೂಮಿಯಿಂದ ಕಿತ್ತು ಹಾಕಲು ಸಿದ್ಧವಾಗಿದ್ದ ತಂಡವು ಸೋತು ದಿಕ್ಕಿಲ್ಲದಂತಾಯಿತು. 6ನೇ ಶತಮಾನದಲ್ಲಿ ನಡೆದ ಈ ಇತಿಹಾಸದ ಅಧ್ಯಯನ ನಡೆಸಬೇಕು. ಈ ಯುದ್ಧ ಸಂಭವಿಸಿರುವುದು ಮಾನವೀಯತೆಯ ಉಳಿವಿಗಾಗಿ, ಶಾಂತಿಯ ಸ್ಥಾಪನೆಗಾಗಿ. ಪ್ರವಾದಿ ಮುಹಮ್ಮದ್(ಸ)ರು ಹದಿಮೂರು ವರ್ಷಗಳ ನಿರಂತರ ಸಹನೆ ಸಂಯಮ ತಾಳ್ಮೆಯ ಜೀವನ ನಡೆಸಿದ ಬಳಿಕ ಶಾಂತಿಯ ಸ್ಥಾಪನೆಗಾಗಿ ಅನಿವಾರ್ಯ ಘಟ್ಟದಲ್ಲಿ ಮಾಡಿದ ಯುದ್ಧವಿದು. ವಿವೇಕ ತನದಿಂದ ಮಾಡಿದ ಯುದ್ಧವಿದು. ಅಲ್ಲಾಹನ ಆದೇಶದನುಸಾರ ಮಾಡಿದ ಯುದ್ಧವಿದು. ಈ ಬದ್ರ್‍ನ ಯೋಧರ ತ್ಯಾಗ, ಪರಿಶ್ರಮದ ಇತಿಹಾಸದ ಅಧ್ಯಯನ ನಡೆಸಿದಾಗ ಅದರ ವಾಸ್ತವ ಅರಿವಿಗೆ ಬರುತ್ತದೆ.

ಬದ್ರ್ ನಮಗೆ ಮಾದರಿಯಾಗಬೇಕಿದೆ. ಬದ್ರ್ ನಮಗೆ ಹಲವಾರು ಉದಾತ್ತವಾದ ಸಂದೇಶಗಳನ್ನು ನೀಡುತ್ತದೆ. ಅಲ್ಲಾಹನ ಮತ್ತು ಪ್ರವಾದಿಗಳ ಆದೇಶದ ಮುಂದೆ ಮಹಾ ಸೈನ್ಯವನ್ನು ತೃಣ ಸಮಾನವಾಗಿ ಕಂಡು ಆ ಸತ್ಯ ವಿಶ್ವಾಸಿಗಳು ಹೋರಾಡಿದರು. ಅಲ್ಲಾಹನ ಮೇಲಿನ ಅಪಾರವಾದ ಭರವಸೆಯೊಂದಿಗೆ ತಾಳ್ಮೆ ಸಹನೆಯ ಸಂಯಮದ ಸದುಪದೇಶದ ಸಂದೇಶ ಪ್ರಚಾರದಿಂದ ಕೂಡಿದ ಆ ಮಹತ್ತರವಾದ ಜೀವನವು ಅವರನ್ನು ವಿಜಯದ ಮೆಟ್ಟಲು ಏರುವಂತೆ ಮಾಡಿತು.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …