Home / ವಾರ್ತೆಗಳು / ರಾಜಸ್ಥಾನದ ಕುಗ್ರಾಮದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಸಜ್ಜಾದ ಮದ್ರಸ

ರಾಜಸ್ಥಾನದ ಕುಗ್ರಾಮದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಸಜ್ಜಾದ ಮದ್ರಸ

ಜೈಪುರ,ಮೇ 22: ರಾಜಸ್ಥಾನದ ಸಿಕರ್ ಜಿಲ್ಲೆಯ ಕುಗ್ರಾಮ ಖೀರವಾದಲ್ಲಿಯ ಮದರಸವು ಕೋವಿಡ್ ರೋಗಿಗಳಿಗಾಗಿ ತನ್ನ ಬಾಗಿಲುಗಳನ್ನು ತೆರೆದಿದೆ. ಮೇ 2ರ ಸುಮಾರಿಗೆ ಇಲ್ಲಿ ಆರಂಭಗೊಂಡಿರುವ ಕೋವಿಡ್-19 ಕಾಳಜಿ ಕೇಂದ್ರದಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈವರೆಗೆ ಈ ಕೇಂದ್ರದಲ್ಲಿ ಸುಮಾರು 30 ಕೋವಿಡ್ ರೋಗಿಗಳು ದಾಖಲಾಗಿದ್ದು, 10-12 ರೋಗಿಗಳು ಚೇತರಿಸಿಕೊಂಡು ತಮ್ಮ ಮನೆಗಳಿಗೆ ಮರಳಿದ್ದಾರೆ.

ಜಾಮಿಯಾ ಅರೆಬಿಯ ಬರ್ಕತುಲ್ ಇಸ್ಲಾಂ ಮದರಸದಲ್ಲಿಯ ಈ ಕೋವಿಡ್ ಕಾಳಜಿ ಕೇಂದ್ರವು ಆಸುಪಾಸಿನ ಗ್ರಾಮಗಳ ಕೋವಿಡ್ ರೋಗಿಗಳಿಗೆ ಸೇವೆಯನ್ನೊದಗಿಸುತ್ತದೆ. ಕೋವಿಡ್ ಕೇಂದ್ರವಾಗಿ ಪರಿವರ್ತನೆಗೊಳ್ಳುವ ಮೊದಲು ಇದು 400ಕ್ಕೂ ಅಧಿಕ ವಿದ್ಯಾರ್ಥಿಗಳ ಸನಿವಾಸ ಶಿಕ್ಷಣ ಕೇಂದ್ರವಾಗಿತ್ತು.

ಖೀರವಾಕ್ಕೆ ಸಮೀಪದ ಸರಕಾರಿ ಕೋವಿಡ್ ಕಾಳಜಿ ಕೇಂದ್ರವು ಸುಮಾರು 25 ಕಿ.ಮೀ.ದೂರದ ಜಾಜೋಡ್ ಸಮುದಾಯ ಕೇಂದ್ರದಲ್ಲಿದೆ. ಖೀರವಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ದಿನಕ್ಕೆರಡು ಬಾರಿ ಮದರಸಕ್ಕೆ ಬಂದು ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ರೋಗಿಗಳ ಶುಶ್ರೂಷೆಗಾಗಿ ಮತ್ತು ವೈದ್ಯರು ಸೂಚಿಸಿರುವ ಔಷಧಿಗಳನ್ನು ಸಕಾಲದಲ್ಲಿ ನೀಡಲು ನರ್ಸ್ ಇರ್ಫಾನ್ ಪಠಾಣ್ (26) ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನರ್ಸಿಂಗ್ ಪದವೀಧರರಾಗಿರುವ ಪಠಾಣ್ ಮೊದಲು ಜೈಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ತನ್ನ ಸ್ವಗ್ರಾಮ ಖೀರವಾದ ಮದರಸವು ಕೋವಿಡ್ ಕಾಳಜಿ ಕೇಂದ್ರವನ್ನು ಆರಂಭಿಸಿದೆ ಮತ್ತು ಅಲ್ಲಿ ತರಬೇತುಗೊಂಡ ಸ್ವಯಂಸೇವಕರ ಅಗತ್ಯವಿದೆ ಎಂಬ ಮಾಹಿತಿ ಲಭಿಸಿದ ಬಳಿಕ ಜೈಪುರದಲ್ಲಿಯ ಉದ್ಯೋಗವನ್ನು ತೊರೆದು ಇಲ್ಲಿ ಸೇರಿಕೊಂಡಿದ್ದಾರೆ. ಇತರ ಕೆಲವು ಸ್ವಯಂಸೇವಕರೂ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದೇಣಿಗೆಗಳ ಮೂಲಕ ಸ್ಥಾಪಿಸಲಾಗಿರುವ ಮತ್ತು ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿರುವ ಮದರಸದ ಈ ಸೌಲಭ್ಯವು ಕ್ವಾರಂಟೈನ್ ಕೇಂದ್ರವಾಗಿ ಕಾರ್ಯ ನಿರ್ವಹಿಸಲು ರಾಜ್ಯ ಸರಕಾರವು ಅನುಮತಿ ನೀಡಿದೆ ಎಂದು ಲಕ್ಷ್ಮಣಗಡ ಉಪವಿಭಾಗಾಧಿಕಾರಿ ಕುಲರಾಜ್ ಮೀನಾ ತಿಳಿಸಿದರು.

ಸಿಕರ್ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿರುವ 10 ಗ್ರಾಮಗಳಲ್ಲಿ ಖೀರವಾ ಒಂದಾಗಿದೆ. 6,900ಕ್ಕೂ ಅಧಿಕ ಸಕ್ರಿಯ ಪ್ರಕರಣಗಳೊಡನೆ ಸಿಕರ್ ಅತ್ಯಧಿಕ ಸಕ್ರಿಯ ಸೋಂಕು ಪ್ರಕರಣಗಳಿರುವ ರಾಜ್ಯದ ಐದನೇ ಜಿಲ್ಲೆಯಾಗಿದೆ.

ರೋಗಿಗಳು ವ್ಯಾಯಾಮ ಮಾಡಲು ಮತ್ತು ತಾಜಾ ಗಾಳಿಯನ್ನು ಉಸಿರಾಡಿಸಲು ವಿಶಾಲವಾದ ಲಾನ್ ಅನ್ನು ಮದರಸವು ಹೊಂದಿದೆ.

ಮದರಸ ಆಡಳಿತವು ನಡೆಸುತ್ತಿರುವ ಈ ಕೋವಿಡ್ ಕಾಳಜಿ ಕೇಂದ್ರದಿಂದಾಗಿ ಜಾಜೋಡ್ ಸಮುದಾಯ ಆರೋಗ್ಯ ಕೇಂದ್ರದ ಮೇಲಿನ ಹೊರೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಮೀನಾ ತಿಳಿಸಿದರು.

‘ಕೋವಿಡ್ ಕಾಳಜಿ ಕೇಂದ್ರವು ಜಾತಿ-ಧರ್ಮಗಳ ಹಂಗಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ. ಬೇಡಿಕೆಯು ಹೆಚ್ಚುತ್ತಿದ್ದರೂ ಆಮ್ಲಜನಕದ ಕೊರತೆಯಿಂದಾಗಿ ಇನ್ನಷ್ಟು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಸರಕಾರವು ನಮಗೆ ಪ್ರತಿದಿನ 10-15 ಆಮ್ಲಜನಕ ಸಿಲಿಂಡರ್ಗಳ ಪೂರೈಕೆ ವ್ಯವಸ್ಥೆಯನ್ನು ಮಾಡಿದರೆ ಇನ್ನಷ್ಟು ಕೋವಿಡ್ ರೋಗಿಗಳಿಗೆ ನಾವು ಸೇವೆ ಸಲ್ಲಿಸಬಹುದು. ಸದ್ಯ ಕೇಂದ್ರದಲ್ಲಿ ಒಂದು ಆಮ್ಲಜನಕ ಸಾಂದ್ರಕವಿದ್ದು, ಅದನ್ನು ಇಬ್ಬರು ರೋಗಿಗಳು ಬಳಸುತ್ತಿದ್ದಾರೆ. ಇನ್ನೊಂದು ಸಾಂದ್ರಕದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕೋವಿಡ್ ಲಕ್ಷಣಗಳಿರುವ ಗ್ರಾಮಸ್ಥರಿಗಾಗಿ ಹೊರರೋಗಿಗಳ ಕೇಂದ್ರವೊಂದನ್ನೂ ನಾವು ನಡೆಸುತ್ತಿದ್ದೇವೆ ’ಎಂದು ಕಾಳಜಿ ಕೇಂದ್ರದ ಮುಖ್ಯಸ್ಥ ವೌಲಾನಾ ಹಸನ್ ಮಹಮೂದ್ ಕಾಝ್ಮಿ ತಿಳಿಸಿದರು.

‘ಆಮ್ಲಜನಕ ಕೊರತೆ ತೀವ್ರವಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಿಗೂ ಸಾಕಷ್ಟು ಆಮ್ಲಜನಕವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮದರಸಕ್ಕೆ ಆಮ್ಲಜನಕ ಪೂರೈಕೆ ಸದ್ಯಕ್ಕೆ ಕಷ್ಟವಾಗುತ್ತದೆ. ಸಮಸ್ಯೆ ಕೆಲವೇ ದಿನಗಳಲ್ಲಿ ಬಗೆಹರಿಯುತ್ತದೆ ಎಂಬ ಆಶಯವನ್ನು ನಾವು ಹೊಂದಿದ್ದೇವೆ ’ಎಂದು ಮೀನಾ ಹೇಳಿದರು.

ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳನ್ನು ಹೊಂದಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಮದರಸದ ಈ ಉಪಕ್ರಮವು ಸ್ಥಳೀಯಾಡಳಿತಕ್ಕೆ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ವೈದ್ಯರ ಅಗತ್ಯವಿರುವುದರಿಂದ ಸದ್ಯಕ್ಕೆ ಗಂಭೀರ ಕೋವಿಡ್ ರೋಗಿಗಳನ್ನು ಮದರಸದ ಕೇಂದ್ರದಲ್ಲಿ ದಾಖಲಿಸಿಕೊಳ್ಳುತ್ತಿಲ್ಲ ಮತ್ತು ಅವರನ್ನು ಸಮುದಾಯ ಆರೋಗ್ಯ ಕೇಂದ್ರಗಳು ಅಥವಾ ಸರಕಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವಿಚಲ್ ಚತುರ್ವೇದಿ ತಿಳಿಸಿದರು.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …