Home / ಲೇಖನಗಳು / ದುಲ್‍ಖೈರ್ನೈನ್ ಮತ್ತು ಮುಸ್ಲಿಮ್ ಸಮುದಾಯ

ದುಲ್‍ಖೈರ್ನೈನ್ ಮತ್ತು ಮುಸ್ಲಿಮ್ ಸಮುದಾಯ

-ಸೈಯದ್ ಸಆದತುಲ್ಲಾ ಹುಸೈನಿ 

ಜುಮಾ ಖುತ್ಬಾ:

ಕೋವಿಡ್-19 ಎಂಬ ಪಿಡುಗು ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತನ್ನು ನಲುಗಿಸಿ ಬಿಟ್ಟಿದೆ. ಪ್ರಪಂಚದ ಆರ್ಥಿಕ ಸ್ಥಿತಿಯನ್ನೇ ಬುಡ ಮೇಲುಗೊಳಿಸಿದೆ. ಅದರಲ್ಲೂ ನಮ್ಮ ದೇಶದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇತ್ತೀಚೆಗಿನ ವರದಿಯಂತೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಅದರೊಂದಿಗೆ ಹಸಿವು, ದಾರಿದ್ರ್ಯ ಹಾಗೂ ಕೌಟುಂಬಿಕ ಸ್ಥಿತಿಯೂ ಹದಗೆಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಈ ದೇಶದ ಮುಸಲ್ಮಾನರ ಮೇಲೆ ಗುರುತರವಾದ  ಹೊಣೆಗಾರಿಕೆಯಿದೆ. ಈ ಸಂದರ್ಭದಲ್ಲಿ ನಾನು ಪವಿತ್ರ ಕುರ್‍ಆನಿನಲ್ಲಿ ಬಂದಿರುವ ಝುಲ್‍ಕರ್ನೈನ್‍ರವರ ಪ್ರಸ್ತಾಪವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಅವರನ್ನು ಪವಿತ್ರ ಕುರ್‍ಆನ್ ಓರ್ವ ಮಾದರೀಯೋಗ್ಯ ಚಕ್ರವರ್ತಿಯಾಗಿ ಬಿಂಬಿಸುತ್ತದೆ.

ಸೂರಃ ಅಲ್‍ಕಹಫ್‍ನ ವ್ಯಾಖ್ಯಾನಗಾರರ ಪ್ರಕಾರ ಅವರು ಇರಾನಿನ ರಾಜಬೋದನ್  (ಖುಸ್ರೂ)ನಲ್ಲಿದ್ದರು. ಅಲ್ಲಾಹನು ಅವರಿಗೆ ಭೂಮಿಯಲ್ಲಿ ಪ್ರಭುತ್ವ ಹಾಗೂ ಎಲ್ಲಾ ರೀತಿಯ  ಸಾಧನಾಕೂಲತೆಗಳನ್ನು ಒದಗಿಸಿದ್ದನು. ಅವರು ಪಶ್ಚಿಮ, ಪೂರ್ವ, ದಕ್ಷಿಣ ಹಾಗೂ ಉತ್ತರದ  ದಂಡಯಾತ್ರೆ ನಡೆಸಿ ಅನೇಕ ಪ್ರದೇಶಗಳನ್ನು ಜಯಿಸಿದ್ದರು.

ದುಲ್‍ಖೈರ್ನೈನ್‍ರ ವ್ಯಕ್ತಿತ್ವದ ವಿಶೇಷತೆಯನ್ನು ಕುರ್‍ಆನಿನ ಮೂಲಕ ತಿಳಿಯಲು ಪ್ರಯತ್ನಿಸೋಣ.

ಅವರ ವ್ಯಕ್ತಿತ್ವದಲ್ಲಿ ಮೂರು ವಿಶೇಷತೆಗಳನ್ನು ಕಾಣಬಹುದು. ಒಂದನೆಯದು, ದಂಡಯಾತ್ರೆಯ  ಸಂದರ್ಭದಲ್ಲಿ ಜನಾಂಗಗಳ ಮುಂದಿರಿಸಿದ ಏಕ ದೇವತ್ವ ಮತ್ತು ಪರಲೋಕದ ಚಿತ್ರಣವನ್ನು ಸೂರಃ ಕಹಫ್‍ನ ಸೂಕ್ತದಲ್ಲಿ ಕಾಣಬಹುದು.

ಅವರ ಎರಡನೆಯ ಮಿಶನ್ ನ್ಯಾಯ ಸ್ಥಾಪನೆ ಮತ್ತು  ದೌರ್ಜನ್ಯದ ನಿರ್ಮೂಲನವಾಗಿದೆ. ಅವರು ಒಂದು ಜನಾಂಗದ ಬಳಿ ತಲುಪಿದಾಗ, ಆ ಜನಾಂಗವು ಯಾಜೂಜು ಮಾಜೂಜು ಎಂಬವರ ದಾಳಿಗೆ ಒಳಗಾಗಿ ಬಹಳ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿತ್ತು. ಅವರಿಂದ ರಕ್ಷಣೆ  ಹೊಂದಲು ಒಂದು ಗೋಡೆ ನಿರ್ಮಿಸಬೇಕೆಂದು ಆ ಜನಾಂಗವು ದುಲ್‍ಖೈರ್ನೈನ್‍ರೊಡನೆ ಅಪೇಕ್ಷಿಸುತ್ತದೆ. ಇದಕ್ಕಾಗಿ ತೆರಿಗೆ ಸಂಗ್ರಹಿಸಿ ನಿಮಗೆ ನೀಡುವೆವು ಎನ್ನುತ್ತದೆ. ಆದರೆ ಅವರು “ನನ್ನ ಪ್ರಭು ನನಗೆ ದಯಪಾಲಿಸಿರುವುದು ಸಾಕಷ್ಟಿದೆ” ಎಂದುತ್ತರಿಸಿದರು. ನೀವು ನಿಮ್ಮ ಪರಿಶ್ರಮದ ಮೂಲಕ ಸಹಾಯ ಮಾಡಿರಿ ಎಂದು ಹೇಳಿದರು. ಕಬ್ಬಿಣ ಹಾಗೂ ತಾಮ್ರ ಬಳಸಿ ನಿರ್ಮಾಣದ ಯುಕ್ತಿಯನ್ನು ಅಲ್ಲಾಹನು ಅವರಿಗೆ ನೀಡಿದ್ದನು. ಆ ಪ್ರಕಾರ ಅವರು ಆ ಜನಾಂಗದೊಡನೆ ಕಬ್ಬಿಣದ  ಹಾಳೆಗಳನ್ನು ತಂದು ಎರಡು ಪರ್ವತಗಳ ನಡುವಿನ ಖಾಲಿ ಸ್ಥಳವನ್ನು ತುಂಬಿಸಿ ಬೆಂಕಿ ಉರಿಸಲು ಹೇಳಿದರು. ಕಬ್ಬಿಣ ಕೆಂಪಾದಾಗ ತಾಮ್ರದ ದ್ರವವನ್ನು ಹೊಯ್ದು ಒಂದು ಭದ್ರವಾದ ಗೋಡೆಯನ್ನು ನಿರ್ಮಿಸಿದರು. ಈ ರೀತಿ ಸೇವೆಗೈದ ಅವರು ತನ್ನ ಕೆಲಸದ ಬಗ್ಗೆ ಜಂಭಕೊಚ್ಚಲಿಲ್ಲ. ಇದು ನನ್ನ ಪ್ರಭುವಿನ ಕೃಪೆಯಾಗಿದೆ. ನನ್ನ ಪ್ರಭುವಿನ ವಾಗ್ದಾನ ಬಂದಾಗ ಅವನು ಇದನ್ನು ನೆಲಸಮ ಮಾಡಿ ಬಿಡುವನು ಎಂಬ ಸಂದೇಶವನ್ನು ಅವರ ಮುಂದಿಟ್ಟರು.

ಅವರ ಮಿಶನ್‍ನ ಮೂರನೆಯ ಭಾಗವು ಬಹಳ ಪ್ರಾಮುಖ್ಯವಾದುದು. ಅದು ಇಂದಿನ ಈ  ಕೊರೋನ ಸಂದಿಗ್ಧ ಸ್ಥಿತಿಯಲ್ಲಿ ಬಹಳ ಪ್ರಸ್ತುತವಾಗಿದೆ. ಅದುವೇ ಮಾನವೀಯತೆಯ ಪುನಃ ಸ್ಥಾಪನೆಯಾಗಿದೆ. ಇದನ್ನು ಮುಸಲ್ಮಾನರು ಬಹಳ ಗಂಭೀರವಾಗಿ ಅವಲೋಕಿಸಬೇಕಾಗಿದೆ. ಕೇವಲ ದುಆ ಮೂಲಕ ಈ ಪಿಡುಗು ನಿವಾರಣೆಯಾಗದು. ಮಾಸ್ಕ್ ಧರಿಸಿ, ಅಂತರವನ್ನು ಕಾಪಾಡಿ ಎಲ್ಲಾ  ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಮಾಡಿ ನಂತರ ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು.

ಇಡೀ ದೇಶದಲ್ಲಿ ಒಂದು ರೀತಿಯ ಭಯದ ವಾತಾವರಣವಿದೆ. ಬಡತನ, ನಿರುದ್ಯೋಗ, ಹಸಿವೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಕೇವಲ ಕೈ ಕಟ್ಟಿ  ಕುಳಿತರೆ ಸಮಸ್ಯೆ ನಿವಾರಣೆಯಾಗದು. ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಬೇಕು. ಪಿಡುಗಿಗೆ ಹೊಸ ಲಸಿಕೆಯನ್ನು ಕಂಡುಕೊಳ್ಳಲು ಕೂಡಾ ತಯಾರಾಗಬೇಕು.

ಮನುಕುಲದ ವಿಮೋಚಕ, ಇಡೀ ಜಗತ್ತಿಗೆ ಅನುಗ್ರಹೀತರಾಗಿ ಆಗಮಿಸಿದ ಪ್ರವಾದಿ ಮುಹಮ್ಮದ್ (ಸ)ರವರ ಮಾನವೀಯ ಶಿಕ್ಷಣವನ್ನು ಈ ದೇಶದ ಜನರಿಗೆ ತಲಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಬದ್ರ್ ಯುದ್ಧದಲ್ಲಿ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಯುದ್ಧಕ್ಕೆ ತಯಾರಾದ ಬಳಿಕ ಪ್ರವಾದಿ ಮತ್ತು ಅನುಯಾಯಿಗಳು ಅಲ್ಲಾಹನೊಂದಿಗೆ ಸಹಾಯಕ್ಕಾಗಿ ಪ್ರಾರ್ಥಿಸಿದರು. ಯುದ್ಧದಲ್ಲಿ ಹೋರಾಡಿ ಶತ್ರುವನ್ನು ಸೋಲಿಸಿ ಅಲ್ಲಾಹನ ಸಹಾಯದಿಂದ ವಿಜಯ ಸಾಧಿಸಿದರು.  ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಅವರ ಕರ್ತವ್ಯದ ಬಗ್ಗೆ ಹಾಗೂ ದೇವನ ಸಹಾಯದ ಬಗ್ಗೆ ಭರವಸೆ ಮೂಡಿಸಬೇಕು. ಎಲ್ಲವನ್ನೂ ಕೈ ಚೆಲ್ಲಿ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ  ಮಾಡುವವರ ಸಂಖ್ಯೆ ಹೆಚ್ಚುತ್ತಾ ಇದೆ. ಮಾನವ ಸಮುದಾಯ ಸಂಪೂರ್ಣ ಹತಾಶರಾಗಿ ದಾರಿಗಾಣದಿರುವ ಈ ಸ್ಥಿತಿಯಲ್ಲಿ ಅವರಿಗೆ ಆಶಾಕಿರಣವಾಗಿ ನಾವು ಕಾರ್ಯನಿರ್ವಹಿಸಬೇಕು.

ಕೋವಿಡ್‍ನ ಲಾಕ್‍ಡೌನ್ ಸಂದರ್ಭದಲ್ಲಿ ಈ ದೇಶದ ಉದ್ದಗಲಕ್ಕೂ ಮುಸ್ಲಿಮ್ ಯುವಕರು  ಮಾಡಿದ ಸಮಾಜ ಸೇವಾ ಕಾರ್ಯವು ಶ್ಲಾಘನೀಯವಾಗಿದೆ. ಜನರ ಆವಶ್ಯಕತೆಗಳನ್ನು ಪೂರೈಸಲು  ಸದಾ ಸಿದ್ಧರಾಗಿ ಕಷ್ಟ ನಷ್ಟಗಳನ್ನು ನಿವಾರಿಸಲು ದುಡಿದು ಅದಕ್ಕಾಗಿ ಎಲ್ಲಾ ರೀತಿ ಆವಶ್ಯಕ ವಸ್ತುಗಳನ್ನು ಸಂಗ್ರಹಿಸಿ ಸೇವೆಗೈದ ಯುವಕರಿಗೆ ಅಲ್ಲಾಹನು ಸಹಾಯ ಮಾಡಲಿ. ಈ ಮೂಲಕ  ಜನರಲ್ಲಿ ಇಸ್ಲಾಮಿನ ಬಗ್ಗೆ ಒಂದು ಆಶಾಕಿರಣದ ಉದ್ದೀಪನೆಯಾಗಲಿ ಎಂದು ಹಾರೈಸುತ್ತೇನೆ.

ಕೊನೆಯದಾಗಿ ನಮ್ಮ ಎಲ್ಲಾ ರೀತಿಯ ಸೇವಾ ಕಾರ್ಯಗಳು ಅಲ್ಲಾಹನ ಸಂಪ್ರೀತಿಗಾಗಿರಬೇಕು. ಯಾವುದೇ ರೀತಿಯ ಲೌಕಿಕ ಲಾಭದ ಕಿಂಚಿತ್ತೂ ಆಸೆ ಇರಬಾರದು. ಈ ಮೂಲಕ ದೇಶದಲ್ಲಿ  ಹರಡಿರುವ ಅರಾಜಕತೆ ದೂರವಾಗಿ ಪ್ಯಾಸಿಸ್ಟ್ ಶಕ್ತಿಗಳ ಎಲ್ಲಾ ಕುತಂತ್ರಗಳು ವಿಫಲಗೊಂಡು ದೇಶದಲ್ಲಿ ಶಾಂತಿ ಸುಭಿಕ್ಷೆಯ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ. ಅಲ್ಲಾಹನು ಅನುಗ್ರಹಿಸಲಿ.

  • ಅನು: ಡಿ.ಎಂ. ಅಬ್ದುಲ್ ಅಝೀಝ್
SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …