Home / ಲೇಖನಗಳು / ಉಪವಾಸ- ಆತ್ಮದ ಶಕ್ತಿ

ಉಪವಾಸ- ಆತ್ಮದ ಶಕ್ತಿ

@ ಅಶೀರುದ್ದೀನ್ ಆಲಿಯಾ, ಮಂಜನಾಡಿ

“ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮ ನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”  (ಅಲ್‍ಬಕರ: 183)

ಉಪವಾಸ ಒಂದು ಆತ್ಮಶುದ್ಧೀಕರಣದ ಮಾರ್ಗ. ಮನುಷ್ಯ ಧಾರ್ಮಿಕನಾಗಿ, ಆಧ್ಯಾತ್ಮಿಕನಾಗಿ, ದೇವನಿಗೆ ಎಷ್ಟು ನಿಷ್ಠಾವಂತನಾಗಿದ್ದಾನೆ ಎಂಬುದನ್ನು ಇದು ತಿಳಿಸುತ್ತದೆ. ಉಪವಾಸ ಎಂದರೆ ಊಟ ಮಾಡದೇ ಇರುವುದು, ಉಪವಾಸಾಚರಣೆ, ನಿರಶನ,  ಲಂಘನ, ನಿರಾಹಾರ ಇತ್ಯಾದಿ ಕನ್ನಡ ನಿಘಂಟಿನಲ್ಲಿವೆ. ಇಂಗ್ಲಿಷ್‍ನಲ್ಲಿ ಫಾಸ್ಟ್ ಅಥವಾ ಫಾಸ್ಟಿಂಗ್, ಅರಬಿಕ್‍ನಲ್ಲಿ `ಸೌಮ್’ `ಸಿಯಾಮ್’ ಎಂಬ ಅರ್ಥ ಪ್ರಯೋಗಗಳು ಇವೆ. ಉಪವಾಸವು ಒಂದು ಅವಧಿಯಿಂದ ಮತ್ತೊಂದು ಅವಧಿಯವರೆಗೆ  ಸ್ವಲ್ಪ ಅಥವಾ ಸಂಪೂರ್ಣ ಆಹಾರ ಪಾನಿಯ ಅಥವಾ ಎರಡರ ಇಚ್ಛೆಯುಳ್ಳ ಲಂಘನ ಅಥವಾ ಕಡಿತ ಎಂಬ ವಿವರಣೆ ಕೊಡಬಹುದು.

ಕುರ್‍ಆನ್ ಹೇಳಿರುವಂತೆ ಉಪವಾಸವು ಗತಕಾಲದ ಎಲ್ಲಾ ಸಮುದಾಯದ ಜನರಿಗೂ ಕಡ್ಡಾಯವಾದ ಒಂದು ಕರ್ಮವಾಗಿತ್ತು. ಎಲ್ಲಾ ಧರ್ಮಗಳು ತಮ್ಮ ಆಧ್ಯಾತ್ಮ ಶಕ್ತಿಯ ಉತ್ತೇಜನಕ್ಕಾಗಿ ಉಪವಾಸ ಮಾಡಲು ಬೋಧಿಸುತ್ತದೆ. ಉಪವಾಸವು ಒಂದು  ಆಧ್ಯಾತ್ಮಿಕ ಕ್ರಿಯೆ. ಸಾಮಾಜಿಕವಾಗಿ, ಸಾಂಸ್ಕತಿಕವಾಗಿ, ರಾಜಕೀಯವಾಗಿ, ಒಂದು ಶಕ್ತಿಯಾಗಿ ಒಂದು ಮುಕ್ತಿಯಾಗಿ, ಒಂದು ಅಸ್ತ್ರವಾಗಿ ಸಮಾಜದಲ್ಲಿ ಇದು ಬೆಳೆದಿದೆ. ಅಲ್ಲದೆ ವೈಜ್ಞಾನಿಕವಾಗಿಯೂ ವೈದ್ಯಕೀಯ ವಾಗಿಯೂ ಉಪವಾಸಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಧಾರ್ಮಿಕರು ಆತ್ಮ ನಿಯಂತ್ರಣಕ್ಕೆ, ಆಧ್ಯಾತ್ಮಿಕತೆಗೆ ಉಪವಾಸವನ್ನು ಆಚರಿಸಿದರೆ ಅಧಾರ್ಮಿಕರು (ಧರ್ಮದಲ್ಲಿ ನಂಬಿಕೆ ಇರಿಸದವರು) ದೇಹ ದಂಡನೆಗೂ ಬೊಜ್ಜು ಕರಗಿಸಲೂ, ಮಾನಸಿಕ ಅಭಿಲಾಶೆಗಳ ನಿಯಂತ್ರಣಕ್ಕೂ ಉಪವಾಸವನ್ನು ಆಚರಿಸುತ್ತಾರೆ.

ಎಲ್ಲಾ ಧರ್ಮಗಳಲ್ಲಿಯೂ ಉಪವಾಸಕ್ಕೆ ಒಂದೊಂದು ರೀತಿಯ ಸ್ಥಾನವಿದೆ. ಒಂದೊಂದು ಧರ್ಮ ಒಂದೊಂದು ರೀತಿಯಲ್ಲಿ ಉಪವಾಸವನ್ನು ಆಚರಿಸುತ್ತದೆ. ಕೆಲವರಿಗೆ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಅನ್ನಪಾನೀಯ  ನಿಶಿದ್ಧವಾದರೆ ಇನ್ನು ಕೆಲವರಿಗೆ ಬೇಯಿಸಿದ ಆಹಾರ ಪಾನೀಯಗಳು ನಿಷಿದ್ಧ. ಕೆಲವರಿಗೆ ಪಾನ ಮಾಡಬಹುದು. ಆದರೆ, ಘನ ಆಹಾರಗಳು ನಿಷಿದ್ಧ, ಕೆಲವರಿಗೆ ಹಣ್ಣು ಹಂಪಲುಗಳನ್ನು ಮಾತ್ರ ತಿನ್ನಬಹುದು. ಕೆಲವರಿಗೆ ಮಾಂಸ ಪದಾರ್ಥಗಳು ನಿಷಿದ್ಧ.  ಹೀಗೆ ಧರ್ಮದಲ್ಲಿ ಉಪವಾಸ ಆಚರಣಾ ಕರ್ಮ ವಿಧಾನಗಳು ವಿಭಿನ್ನವಾಗಿವೆ.

ಸಾಮಾಜಿಕ, ಸಾಂಸ್ಕತಿಕ, ವೈದ್ಯಕೀಯ, ವೈಜ್ಞಾನಿಕ, ರಾಜಕೀಯದಲ್ಲಿ ಉಪವಾಸಕ್ಕೆ ವಿಭಿನ್ನ ಸ್ಥಾನಮಾನಗಳಿದ್ದರೂ ಕುರ್‍ಆನ್ ಉಪವಾಸವನ್ನು ಕೆಡುಕನ್ನು ತಡೆಯುವ ಅಸ್ತ್ರದಂತೆ, ಪಾಪಗಳಿಂದ ವಿಮೋಚಿತರಾಗಲು ಧರ್ಮನಿಷ್ಠರಾಗಲು ಉಪವಾಸ  ಆಚರಿಸಬೇಕೆಂದಿದೆ. ಮನುಷ್ಯನಲ್ಲಿ ನೆಲೆಗೊಂಡಿರುವ ಕಾಮ, ಮದ, ಮತ್ಸರ, ಲೋಭ, ಅಹಂಬಾವ, ಅಹಂಕಾರದಂತಹ ಆತ್ಮದ ಅಸ್ವಸ್ಥತೆಯನ್ನು ಕೆಡಿಸುವ ಶೈತಾನನನ್ನು ತಡೆಯಲು ಉಪವಾಸವು ಗುರಾಣಿಯಾಗುತ್ತಿದೆ.

ಪುರಾಣದಲ್ಲಿ ಹೀಗೆ ವಿವರಿಸಲಾಗಿದೆ.
“ಉಪವೃತಸ್ಯ ಪಾಪೇ ಭೋ ಯತ್ತು ವಾಸೋ ಗುಣೈ: ಸಹ|
ಉಪವಾಸ: ಸ ವಿಜ್ಞೇಯ: ಸರ್ವಭೋಗ ವಿವರ್ಜಿತ:||
(ಭವಿಷ್ಯ ಪುರಾಣ 64: 4)
“ಎಲ್ಲಾ ಪಾಪಗಳಿಂದ ಮುಕ್ತನಾಗಿ ಸದ್ಗುಣಗಳಿಂದ ಕೂಡಿ ಇಂದ್ರಿಯ ವಿಷಯ, ಭೋಗವನ್ನು ತ್ಯಜಿಸುವುದೇ ಉಪವಾಸ.

ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಲ್ಲಿ ಉಪವಾಸವು ಒಂದು ಪ್ರಮುಖ ಅಂಗ. ಭಾರತದ ಕೆಲವು ಭಾಗಗಳಲ್ಲಿ ಆಚರಿಸಲಾಗುವ `ಕರ್ವಾಚತ್’ ಒಂದು ಬಗೆಯ ಉಪವಾಸ. ಇದರಲ್ಲಿ ವಿವಾಹಿತ ಸ್ತ್ರೀಯರು ತಮ್ಮ ಗಂಡಂದಿರ  ಯೋಗ ಕ್ಷೇಮಕ್ಕಾಗಿ ಅಭ್ಯುದಯಕ್ಕಾಗಿ ಮತ್ತು ದೀರ್ಘಾಯುಷ್ಯಕ್ಕಾಗಿ ಉಪವಾಸ ಆಚರಿಸುತ್ತಾರೆ. ಪಾಪಗಳ ಪ್ರಾಯಶ್ಚಿತ್ತವಾಗಿ ಆಚರಿಸುವ ಉಪವಾಸ, ಸರ್ವ ಸಾಧಾರಣವಾಗಿರುವ ಏಕಾದಶಿ ಉಪವಾಸ, ನವರಾತ್ರಿ ಶಿವರಾತ್ರಿಯಂದು ಆಚರಿಸುವ ಉಪವಾಸ, ವಿಶೇಷವಾಗಿ ಹರಕೆಯ ಹಬ್ಬಗಳ ಉಪವಾಸವು ಹೆಚ್ಚಿನ ಜನರಲ್ಲಿ ಪಾಲನೆಯಲ್ಲಿದೆ. ಹಿಂದುಗಳಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿರುವುದರಿಂದ ಎಲ್ಲರಿಗೂ ಒಂದೇ ರೀತಿಯ ಉಪವಾಸ ಕ್ರಮವಲ್ಲ. ಒಂದೊಂದು ಜಾತಿಗೆ ಒಂದೊಂದು ರೀತಿಯ ಉಪವಾಸವಿದೆ. ಹಾಗೆಯೇ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಮ ನವಮಿ, ಹರತಾಳಿಕ ಉಪವಾಸಗಳು ಶುಕ್ರವಾರ, ಮಂಗಳವಾರ, ಗುರುವಾರದ ಉಪವಾಸಗಳು ಚಾಲ್ತಿಯಲ್ಲಿವೆ. ಜೈನರು ಸಹ ಉಪವಾಸವನ್ನು ಆಚರಿಸುತ್ತಾರೆ. ಮಹಾವೀರನು ಸಿದ್ದಿಯನ್ನು ಪಡೆಯುವುದಕ್ಕಿಂತ ಮುಂಚೆ ಅನೇಕ ಘಟ್ಟಗಳಲ್ಲಿ ಮೂರು ದಿನಗಳ ಉಪವಾಸವನ್ನು ಆಚರಿಸಿದ ಕಾರಣಕ್ಕಾಗಿ ಜೈನರಲ್ಲೂ ಉಪವಾಸಾಚರಣೆಯ ವಿಧಿಗಳಿವೆ. ಬುದ್ಧನು ಕಠಿಣ ರೀತಿಯ ಉಪವಾಸವನ್ನು ನಿಷೇಧಿಸಿದವನಾದರೂ ಬೌದ್ಧರಲ್ಲೂ ಉಪವಾಸಕ್ಕೆ ಒಂದು ಪ್ರಾಮುಖ್ಯತೆಯಿದೆ. ಬುದ್ಧಿ ನಿರ್ವಾಣ ಪಡೆದ ದಿನಕ್ಕೆ ಐದು ದಿನಗಳ ಮುಂಚೆ ಅವರು ಉಪವಾಸವನ್ನು ಪ್ರಾರಂಭಿಸುತ್ತಾರೆ. ಯಹೂದ್ಯರಲ್ಲೂ ವಾಡಿಕೆಯಂತೆ ಪ್ರಾಯಶ್ಚಿತ್ತವಾಗಿ ಉಪವಾಸವನ್ನು ಮಾಡಲಾಗುತ್ತದೆ.  ಪ್ರವಾದಿ ಮೊಸೆಸ್(ಮೂಸಾ) ಪ್ರವಾದಿ ಆಗುವುದಕ್ಕಿಂತ ಮುಂಚೆ ನಲವತ್ತು ದಿನಗಳ ಕಾಲ ಉಪವಾಸವನ್ನು ಆಚರಿಸಿದ್ದರು. ಧರ್ಮೋಪದೇಶದ ಬೆಟ್ಟವಾದ ಹೀರ್(ತೂರ್)ಗೆ ಮೊಸೆಸ್ ಹೋಗಿದ್ದು ಗುರುವಾರ. ಅಲ್ಲಿಂದ ಹಿಂದಿರುಗಿದ್ದು ಸೋಮವಾರ ಮತ್ತು ಗುರುವಾರ ಆದ್ದರಿಂದ ಈ ದಿನಗಳು ಕ್ರೈಸ್ತರಿಗೆ ಮತ್ತು ಯಹೂದರಿಗೆ ಪವಿತ್ರ ದಿನಗಳಾಗಿದ್ದು ಉಪವಾಸವನ್ನು ಈ ದಿನಗಳಂದು ಆಚರಿಸುತ್ತಾರೆ. ಲೆಂಟಿನ್, ನಲವತ್ತು ದಿನಗಳು, ಎಂಬರ್ ದಿನಗಳು, ರೊಗೇಷನ್ ದಿನಗಳು ಶುಕ್ರವಾರದ ಉಪವಾಸದ ದಿನಗಳೆಂದು ರೋಮ್ ಮತ್ತು ಇಂಗ್ಲೆಂಡಿನ ಚರ್ಚುಗಳು ತೀರ್ಮಾನಿಸಿವೆ. ಈ ದಿನಗಳಲ್ಲಿ ದೀಕ್ಷೆ ಪಡೆಯುವವರು ದೀಕ್ಷೆ ಪಡೆಯುವ ಉಪವಾಸವನ್ನು ಆಚರಿಸಬೇಕು. ಕೈಸ್ತನು ಮಾಡಿದ ನಲವತ್ತು ದಿನಗಳ ಉಪವಾಸದ ನೆನಪಿಗಾಗಿ `ಲೆಂಟ್’  ಎಂಬ ನಲವತ್ತು ದಿನಗಳ ಉಪವಾಸವನ್ನು ಆಚರಿಸಲಾಗುವುದು.

ಎಲ್ಲಾ ಧರ್ಮಗಳು ವಿಧಿಸಿರುವ ಉಪವಾಸಾಚರಣೆಯ ಪರಿಕಲ್ಪನೆಯು ಒಂದೇ ಆಗಿದೆ- `ಆತ್ಮ ಶುದ್ಧಿ’. ಎಲ್ಲಾ ಪಾಪಗಳಿಂದ ಮುಕ್ತವಾಗಬೇಕೆಂದು ಧರ್ಮಗಳು ಬೋಧಿಸುತ್ತವೆ. ಮನುಷ್ಯನು ಆಹಾರದ ಅತಿರೇಕದಿಂದ ತಾಮಸ ಪ್ರವೃತ್ತಿ ಹೆಚ್ಚಿ ಮನಸ್ಸು ಸನ್ಮಾರ್ಗದಿಂದ ವಿಮುಖವಾಗುತ್ತದೆ. ಉಪವಾಸವು ಶರೀರದಲ್ಲಿ ಶಕ್ತಿ ಸಂಚಯ ಉಂಟಾಗಿ ಮಾನಸಿಕ ಶಾಂತಿಯ ಅನುಭೂತಿಯುಂಟಾಗುತ್ತದೆ. ಲಘು ಫಲಾಹಾರ ಉಪವಾಸವಲ್ಲ, ನಿರಾಹಾರಿಯಾಗಿರುವುದೇ ಉಪವಾಸ. ಉಪವಾಸದಿಂದ ಭಗವಂತನ  ಸಾಮೀಪ್ಯದ ಸುಖವನ್ನು ಅನುಭವಿಸಬೇಕು.

ಬೈಬಲ್ ಈ ರೀತಿ ಹೇಳುತ್ತದೆ, “ಆಗ ನೀನು ಉಪವಾಸವನ್ನು ಮಾಡುತ್ತಿ ಎಂದು ಜನರಿಗೆ ಕಾಣದಿದ್ದರೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಕಾಣುವುದು ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು (ಮತ್ತಾಯ 6:18)

ಪ್ರವಾದಿ(ಸ) ಹೇಳಿರುವರು: “ಉಪವಾಸವು ಕೇವಲ ಅನ್ನ-ಪಾನೀಯಗಳನ್ನು ವರ್ಜಿಸುವುದಲ್ಲ. ಉಪವಾಸವು ಅನಗತ್ಯ ಮಾತುಗಳನ್ನು ಮತ್ತು ಅಶ್ಲೀಲ ಮಾತುಗಳನ್ನು  ವರ್ಜಿಸುವುದಾಗಿದೆ. (ಹಾತಿಂ)

`ಸರ್ವ ಭೋಗ ವವರ್ಜಿತ’ ಎಂದು ಭವಿಷ್ಯ ಪುರಾಣದಲ್ಲಿ ಹೇಳಿದೆ. ಎಲ್ಲಾ ಭೋಗ ವಿಲಾಸವನ್ನು ವಿಸರ್ಜಿಸುವುದು ಅಥವಾ ತ್ಯಜಿಸುವುದು.

ಬೈಬಲ್‍ನಲ್ಲಿ ಹೀಗೆ ಹೇಳಲಾಗಿದೆ, “ನೀವು ಉಪವಾಸ ಮಾಡುವಾಗ ಕಪಟಿಗಳ ಹಾಗೆ ವ್ಯಸನದ ಮುಖ ಮಾಡಿಕೊಳ್ಳಬೇಡಿರಿ. (ಮತ್ತಾಯ 6: 18)

ಪ್ರವಾದಿ(ಸ) ಈ ರೀತಿ ಹೇಳಿದ್ದಾರೆ, “ಯಾರು ಸುಳ್ಳು ಹೇಳುವುದನ್ನು ಮತ್ತು ಅದರೊಂದಿಗಿರುವ ಪ್ರವೃತ್ತಿಗಳನ್ನು ತೊರೆಯುವುದಿಲ್ಲವೋ ಅವನು ತನ್ನ ಆಹಾರ ಮತ್ತು ಪಾನೀಯಗಳನ್ನು ತೊರೆಯಬೇಕೆಂಬ ಅಗತ್ಯವು ಅಲ್ಲಾಹನಿಗಿಲ್ಲ.” (ಬುಖಾರಿ)

ಹಾಗೆಯೇ ನೀವು ಉಪವಾಸ ಮಾಡುತ್ತಿರುವುದನ್ನು ಡಂಗುರ ಹೊಡೆದು ಸಾರುವುದನ್ನು ಅಥವಾ ಇತರರು ಹೇಳುತ್ತಾರೆ ಎಂಬ ಕಾರಣಕ್ಕೆ ಉಪವಾಸ ಮಾಡುವುದು ಕೂಡಾ  ತಪ್ಪು. (ಮತ್ತಾಯ 6: 16) ಆಧ್ಯಾತ್ಮಿಕವಾಗಿ ದೇವರಿಗೆ ಹತ್ತಿರವಾಗಲು ನಿಜವಾಗಿಯೂ ಉಪವಾಸವು ಒಂದು ಶಕ್ತಿಯುತವಾದ ದಾರಿಯಾಗಿದೆ.

ಇಸ್ಲಾಮ್ ಉಪವಾಸಕ್ಕೆ ಅದರ ವಿಧಿ ವಿಧಾನಗಳನ್ನು ಸಮರ್ಪಕವಾಗಿ ತಿಳಿಸಿ ಹೇಳಿದೆ. ಇಸ್ಲಾಮಿನ ಐದು ಆಧಾರ ಸ್ತಂಭಗಳಲ್ಲಿ ಉಪವಾಸವೂ ಒಂದಾಗಿದೆ. ವಿಶೇಷವಾಗಿ ಪವಿತ್ರ ಕುರ್‍ಆನ್ ಅವತರಿಸಿದ ತಿಂಗಳು ಎಂಬ ವಿಶೇಷತೆಯೂ ಇದೆ. ಹಿಜರಿ  ಮಾಸದ ರಮಝಾನ್ ತಿಂಗಳ ನಿರ್ದಿಷ್ಟ ಸಮಯ ಮುಸ್ಲಿಮರು ಕಡ್ಡಾಯವಾಗಿ ಉಪವಾಸವನ್ನು ಆಚರಿಸಬೇಕು. ಕುರ್‍ಆನ್ ಹೀಗೆ ಹೇಳುತ್ತದೆ:  ಆದ್ದರಿಂದ ನಿಮ್ಮಲ್ಲಿ ಯಾವನಾದರೂ ಈ ತಿಂಗಳನ್ನು ಪಡೆದರೆ ಅದರಲ್ಲಿ ಉಪವಾಸ ವ್ರತವನ್ನು ಆಚರಿಸಲಿ. (ಅಲ್‍ಬಕರ: 184)

ರಮಝಾನ್ ತಿಂಗಳ ಉಪವಾಸವು ಮುಸ್ಲಿಮರ ಪಾಲಿಗೆ ಹಲವಾರು ಅನುಗ್ರಹಗಳು ಸುರಿಯುವ ತಿಂಗಳಾಗಿದೆ. ಪಾಪ ವಿಮೋಚನೆಯ, ಪ್ರಾರ್ಥನೆಗಳಿಗೆ ಪ್ರತಿಫಲ ದೊರೆಯುವ, ಸ್ವರ್ಗದ ಬಾಗಿಲು ತೆರೆದ, ನರಕದ  ಬಾಗಿಲು ಮುಚ್ಚಿದ, ಶೈತಾನನ್ನೂ ಪಿಶಾಚಿಗಳನ್ನೂ ಕಟ್ಟಿ ಹಾಕಿದ ತಿಂಗಳಾಗಿದೆ. ದಾನ-ಧರ್ಮಗಳಿಗೆ, ಆತ್ಮಸಂಸ್ಕರಣೆಗಳಿಗೆ ಹೆಚ್ಚು ಆದ್ಯತೆ ನೀಡುವ ತಿಂಗಳೂ ಇದಾಗಿದೆ. ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ಉಪವಾಸ ಆಚರಿಸು. ಏಕೆಂದರೆ  ಖಂಡಿತವಾಗಿಯೂ ಅದಕ್ಕೆ ಸಮಾನವಾಗಿ ಯಾವುದೂ ಇಲ್ಲ” (ನಸಾಈ). ಅಲ್ಲಾಹನ ಮಾರ್ಗದಲ್ಲಿ ಯಾವೊಬ್ಬ ದಾಸನು ಒಂದು ದಿನ ಉಪವಾಸವನ್ನು ಆಚರಿಸುವನೋ ಆ ದಿನದಿಂದಾಗಿ ಅಲ್ಲಾಹನು ಅವನ ಮುಖವನ್ನು ನರಕದಿಂದ ಎಪ್ಪತ್ತು  ವರ್ಷಗಳಷ್ಟು ದೂರಗೊಳಿಸುವನು (ಬುಖಾರಿ). ಉಪವಾಸವೆಂದರೆ ಹಸಿವಿನಿಂದ ಇರುವುದಲ್ಲ ಮನುಷ್ಯನ ಎಲ್ಲಾ ಪೈಶಾಚಿಕ ಕೃತ್ಯಗಳಿಗೆ ಅಂತ್ಯವನ್ನು ಸಾರುವುದಾಗಿದೆ. ಮನುಷ್ಯ ಒಳ್ಳೆಯವನಾಗಿ ಬದುಕಲು ಒಂದು ತರಬೇತಿ ತಿಂಗಳಾಗಿದೆ ರಮಝಾನ್.

`ವ್ರತವು ಒಂದು ಗುರಾಣಿಯಾಗಿದೆ’ ಎಂದು ಪ್ರವಾದಿ(ಸ) ಹೇಳಿರುವರು. ಉಪವಾಸಿಗ ತನ್ನ ಕಿವಿಯನ್ನು ದೃಷ್ಟಿಯನ್ನು, ನಾಲಗೆಯನ್ನು ರಕ್ಷಿಸದಿದ್ದರೆ ಅದು ಕೇವಲ ಹಸಿವು ಮಾತ್ರವೆಂದು ಓರ್ವ ಅರಬಿ ಕವಿ ಹಾಡಿದ್ದಾರೆ. ರಮಝಾನ್ ಉಪವಾಸವು  ಕೆಲವು ವಿಧಿ ವಿಧಾನಗಳಿಂದ ಕೂಡಿದೆ. ಮೊದಲನೆಯದಾಗಿ ಚಂದ್ರ ದರ್ಶನವಾಗಬೇಕು. ಸಹರಿ ಉಣ್ಣಬೇಕು. ಉಪವಾಸ ಮಾಡುವೆನೆಂದು ಸಂಕಲ್ಪ ಮಾಡಬೇಕು. ಮುಂಜಾನೆಯಿಂದ ಅನ್ನ ಪಾನೀಯಗಳನ್ನು ಅಭಿಲಾಶೆಗಳನ್ನು ಸಂಪೂರ್ಣವಾಗಿ  ವರ್ಜಿಸಬೇಕು. ಮುಂಜಾನೆ ಸೂರ್ಯ ಅಸ್ತಮ ಸಮಯದಲ್ಲಿ ಲಘು ಆಹಾರ ಸೇವಿಸಿ ಉಪವಾಸ ತೊರೆಯಬೇಕು.

ಉಪವಾಸ ಆಚರಿಸಲು ಅರ್ಹರು ಯಾರೆಂದರೆ.. 
– ಮಕ್ಕಳು ಕನಿಷ್ಠ ಪಕ್ಷ ಹತ್ತು ವರ್ಷ ಮೀರಬೇಕು. ಪ್ರಾಯಕ್ಕೆ ಬಂದ ನಂತರ ಮಾತ್ರ ಅವರಿಗೆ ಉಪವಾಸ ಕಡ್ಡಾಯವಾಗಿರುತ್ತದೆ.
– ಬುದ್ಧಿ ಸ್ಥಿಮಿತದಲ್ಲಿರಬೇಕು.
– ಋತುಸ್ರಾವ ಅಥವಾ ಬಾಣಂತಿತನದಲ್ಲಿರುವವರಾಗಬಾರದು.
– ಹಾಲುಣಿಸುವ ಸ್ತ್ರೀ ಉಪವಾಸವನ್ನು ತೊರೆಯಬಹುದು.
– ಅನಾರೋಗ್ಯದಿಂದಿರುವವರಿಗೆ ಉಪವಾಸ ಕಡ್ಡಾಯವಿಲ್ಲ.
– ಯಾತ್ರಾರ್ಥಿಗಳಿಗೂ ಕಡ್ಡಾಯವಿಲ್ಲ.

ಉಪವಾಸದಲ್ಲಿ ನಾಲ್ಕು ವಿಧಗಳಿವೆ.
1. ಕಡ್ಡಾಯ ಉಪವಾಸ. 2) ಐಚ್ಛಿಕ ಉಪವಾಸ. 3) ಅನಪೇಕ್ಷಿತ. 4) ನಿಷಿದ್ಧ.

ಕಡ್ಡಾಯ ಉಪವಾಸವೆಂದರೆ ರಮಝಾನ್ ತಿಂಗಳ ಉಪವಾಸ, ಪ್ರಾಯಶ್ಚಿತ್ತ ಉಪವಾಸ, ಹರಕೆಯ ಉಪವಾಸ.
ಐಚ್ಛಿಕ ಉಪವಾಸ:  ಶವ್ವಾಲ್ ತಿಂಗಳ ಆರು ದಿನಗಳ ಉಪವಾಸ. ದುಲ್‍ಹಜ್ಜ್ ತಿಂಗಳ ಪ್ರಥಮ ಒಂಭತ್ತು ದಿನಗಳು, ಮುಹರ್ರಮ್ ಒಂಭತ್ತು ಹತ್ತರ ಉಪವಾಸ, ಪ್ರತಿ ತಿಂಗಳ ಮೂರು ದಿನಗಳ ಉಪವಾಸ. ಶಅಬಾನ್ ತಿಂಗಳ ಉಪವಾಸ, ಶನಿವಾರ,  ಆದಿತ್ಯವಾರದ ಉಪವಾಸ, ಸೋಮವಾರ ಮತ್ತು ಗುರುವಾರದ ಉಪವಾಸ ಇತ್ಯಾದಿ.
ಕಝಾ ಉಪವಾಸ: ಒಬ್ಬ ವ್ಯಕ್ತಿ ಮರಣ ಹೊಂದಿದರೆ ಅವನ ಉಪವಾಸವನ್ನು ನಿರ್ವಹಿಸಬೇಕೆಂದಿಲ್ಲ. ಬದಲಾಗಿ ಬಡವರಿಗೆ ದಾನ ಮಾಡಬೇಕು.
ನಿಷಿದ್ಧವಾದ ಉಪವಾಸ: ಹಬ್ಬದ ದಿನಗಳ ಉಪವಾಸ (ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ) `ಅಯ್ಯಾಬಲುತ್ತಶ್ರೀಕ್’ ದುಲ್‍ಹಜ್ಜ್ ತಿಂಗಳ 11, 12, 13 ದಿನಗಳು.
ಪತಿಯು ಊರಲ್ಲಿರುವಾಗ ಆತನ ಅನುಮತಿಯಿಲ್ಲದೆ ಪತ್ನಿ ಉಪವಾಸ ಆಚರಿಸುವುದು, ನಿರಂತರ ಉಪವಾಸ ಆಚರಿಸುವುದು.

ಇವಿಷ್ಟು ವಿಷಯಗಳಿಂದ ಉಪವಾಸವು ಒಂದು ಅತ್ಯಮೂಲ್ಯವಾದ ಕರ್ಮವಾಗಿದೆಯೆಂದು ಮನವರಿಕೆಯಾಗಿದೆ. ಉಪವಾಸವನ್ನು ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಬಳಸಲಾಗುತ್ತದೆ. ಬೇಡಿಕೆಗಳ ಈಡೇರಿಕೆಗಳಿಗಾಗಿ ರಾಜಕಾರಣಿಗಳ ಉಪವಾಸ, ಸಾಮಾಜಿಕ ನ್ಯಾಯಕ್ಕಾಗಿ ಜನಸಾಮಾನ್ಯರ ಉಪ ವಾಸ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಪವಾಸವು ಒಂದು ದೊಡ್ಡ ಅಸ್ತ್ರವಾಗಿತ್ತು. ಗಾಂಧೀಜಿಯವರು ಉಪವಾಸ ಸತ್ಯಾಗ್ರಹದ ಮೂಲಕ ಬ್ರಿಟಿಷರ ಸದ್ದು ಅಡಗಿಸಲು ಶ್ರಮಿಸಿದ್ದರು ಮತ್ತು ಯಶಸ್ವಿಯಾಗಿದ್ದರು.

ಅದೂ ಅಲ್ಲದೆ ಉಪವಾಸದಿಂದಾಗಿ ಹಲವಾರು ವೈಜ್ಞಾನಿಕ ಗುಣಗಳಿವೆ. ಆಧುನಿಕ ಯುಗದಲ್ಲಿ ಬೆಳೆದ ವೈಜ್ಞಾನಿಕ ಮನೋಭಾವದಿಂದಾಗಿ ಉಪವಾಸ ವ್ರತದ ವೈದ್ಯಕೀಯ ಪ್ರಕ್ರಿಯೆಗಳು ಹೇರಳವಾಗಿವೆ. ಮನುಷ್ಯನ  ಅಂಗಾಂಗಗಳು ನಿರಂತರ ಕಾರ್ಯ ನಿರ್ವಹಿಸಿದ ಬಳಿಕ ವಿಶ್ರಾಂತಿ ಬಯಸುವುದು ಸಹಜ. ಉಪವಾಸ ವ್ರತದಲ್ಲಿ ಕೊಬ್ಬಿನಾಂಶ ಬಿಡುಗಡೆಗೊಂಡಾಗ ಕೀಟೋನ್ ಎಂಬ ಅಂಶವೂ ಮಸ್ತಿಷ್ಕವನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ.  ಕೊಬ್ಬಿನಾಂಶ ಹೆಚ್ಚಾದರೆ ಹೃದಯಾಘಾತ, ರಕ್ತದೊತ್ತಡ, ಪಾಶ್ರ್ವ ವಾಯು, ಅನಗತ್ಯ ತೂಕದ ಸಮಸ್ಯೆಗಳು ಎದುರಾಗುತ್ತದೆ.

ಉಪವಾಸ ವ್ರತದ ಆಚರಣೆಯಿಂದಾಗಿ ಎಲ್ಲಾ ಸಮಸ್ಯೆಗಳು ಬಹುಮಟ್ಟಿಗೆ ನೀಗುತ್ತವೆ. ಉಪವಾಸ ಸಮಯದಲ್ಲಿ ಬೆಳವಣಿಗೆಯ ಹಾರ್ಮೋನುಗಳು ಹಾಗೂ ದೇಹಕ್ಕೆ ಉಪಯುಕ್ತವಾದ ಇತರ ಹಾರ್ಮೋನುಗಳು ಬಿಡುಗಡೆಗೊಂಡು ಆರೋಗ್ಯ ವೃದ್ಧಿಗೆ ಸಹಾಯವಾಗುತ್ತದೆ. ಸಹರಿ ಉಂಡು ಸಂಜೆ ಇಫ್ತಾರ್ ಉಣ್ಣು ವುದರಿಂದ ವಿಟಮಿನ್‍ಗಳು, ಅಲಿನೋ ಆಸಿಡ್‍ಗಳು ಹೆಚ್ಚು ದೇಹಕ್ಕೆ ಆಕರ್ಷಿಸಲ್ಪಡುತ್ತದೆ. ಪಚನಾಂಗ ಕ್ರಿಯೆ ತ್ವರಿತಗತಿಯಲ್ಲಿ ಸಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಪವಾಸದಿಂದ ಉತ್ಪಾದನಾ ಸಾಮಥ್ರ್ಯ ಹುಟ್ಟಿಕೊಳ್ಳುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ವಿಶ್ರಾಂತಿಯನ್ನು ನೀಡುತ್ತದೆ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪವಾಸ ಕೈಗೊಳ್ಳುವುದು ಸರಳ ವಿಧಾನ.

ಉಪವಾಸ ಒಂದು ದೇಹ ದಂಡನೆಯೆಂದು ಕೆಲವರು ಭಾವಿಸಿರಬಹುದು. ನಿಜವಾಗಿಯೂ ಉಪವಾಸದಲ್ಲಿ ಅನೇಕ ಪ್ರಯೋಜನಗಳಿವೆ. ಅದು ಮಾನಸಿಕ ನೆಮ್ಮದಿಯನ್ನು ತಂದುಕೊಡುತ್ತದೆ. ದೇಹ ದಂಡನೆ ಅಥವಾ ಡಯೆಟಿಂಗ್ ಉದ್ದೇಶದಿಂದ ಉಪವಾಸ ಆಚರಿಸಿದರೆ ಅಷ್ಟೇ ಅವರಿಗೆ ಸಿಗುವುದು. ಧರ್ಮ ಸಂಕಲ್ಪದ ಉಪವಾಸವು ಡಯೆಟಿಂಗ್ ಉದ್ದೇಶದಿಂದಲ್ಲ ಆತ್ಮಸಂಸ್ಕರಣೆ, ಆತ್ಮಶುದ್ಧಿಯನ್ನು ಬಯಸುತ್ತದೆ. ಉಪವಾಸದಿಂದ ಬದಲಾಗಲು ಸಾಧ್ಯವಿಲ್ಲದವನು ತನ್ನ ಇತರ ದೈನಂದಿನ ಜೀವನದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಉಪವಾಸವೆಂದರೆ ಆಹಾರ ಪದಾರ್ಥಗಳ ಹಬ್ಬವಲ್ಲ. ಮಿತ ಆಹಾರವನ್ನೇ ಹೆಚ್ಚಾಗಿ ಉಪವಾಸಿಗರು ಬಯಸಬೇಕು. ಹೊಟ್ಟೆ ತುಂಬ ಸಹರಿಗೆ ಉಂಡು ಮತ್ತೆ ಹೊಟ್ಟೆ ತುಂಬಾ ಇಫ್ತಾರಿಗೆ ಉಣ್ಣುವುದರಿಂದ ಉಪವಾಸದ ರುಚಿ ಸವಿಯಲು ಸಾಧ್ಯವೇ?

ಮುಂಜಾನೆಯಿಂದ ಮುಸ್ಸಂಜೆಯವರೆಗೆ ಕುಂಭಕರ್ಣನಂತೆ ನಿದ್ದೆ ಹೊಡೆದು ಉಪವಾಸ ಆಚರಿಸಲು ಸಾಧ್ಯವೇ? ತನ್ನ ವ್ಯವಹಾರ, ವ್ಯಾಪಾರ ಮತ್ತು ದೈನಂದಿನ
ಚಟುವಟಿಕೆಯಲ್ಲಿ ಎಂದಿನಂತಾಗಿದ್ದರೆ ಯಾವುದೇ ನೈತಿಕ ಬದಲಾವಣೆ ತರಲು ಸಾಧ್ಯ. ಅಶ್ಲೀಲ ವರ್ತನೆಯಿಂದ ವಂಚನೆಯಿಂದ ಕೂಡಿದ್ದಾದರೆ ಉಪವಾಸಿಗನಾಗಿ ಏನು ಪ್ರಯೋಜನ? ಹಸಿವಿನಿಂದಿರುವುದು ಉಪವಾಸವಲ್ಲ, ತನ್ನ ಹಸಿವು ಇನ್ನೊಬ್ಬನ  ಹಸಿವನ್ನು ಅರ್ಥೈಸಲು ಇರುವುದೆಂಬ ಪರಿಜ್ಞಾನ ಉಪವಾಸಿಗನಲ್ಲಿ ಇರಬೇಕು. ದಾನ ಧರ್ಮಗಳನ್ನು ಹೆಚ್ಚಾಗಿ ಮಾಡಬೇಕು. ತನ್ನ ಹಸಿವು ದೇವನಿಗೆ ಮೀಸಲಿಡುವುದೇ ನಿಜವಾದ ಉಪವಾಸ. ಅವನೇ ನಿಜವಾದ ಉಪವಾಸಿಗ. ಅಂತಹ ಉಪವಾಸದಲ್ಲಿ ಧರ್ಮ ನಿಷ್ಠೆಯು ಅಡಗಿರುವುದು.

ಅಲ್ಲಾಹನು ಹೀಗೆ ಹೇಳಿದ್ದಾನೆಂದು ಪ್ರವಾದಿ(ಸ) ಹೇಳಿದ್ದಾರೆ, “ದಾಸನು ನನಗಾಗಿ ಮಾತ್ರ ಆಹಾರ ಪಾನೀಯಗಳನ್ನು ತೊರೆಯುತ್ತಾನೆ. ಉಪವಾಸವು ನನಗೆ ಮಾತ್ರವಾಗಿರುವುದಾಗಿದೆ.” (ಮುಸ್ಲಿಮ್)
ಯಾರಾದರೂ ವಿಶ್ವಾಸವಿಟ್ಟುಕೊಂಡು ಪ್ರತಿಫಲಾಕ್ಷೆಯಿಂದ ರಮಝಾನಿನಲ್ಲಿ ವ್ರತಾನುಷ್ಠಾನ ಕೈಗೊಂಡರೆ ಅವನ ಗತ ಕಾಲದ ಪಾಪಗಳನ್ನು ಕ್ಷಮಿಸಲ್ಪಡುವುದು. (ಬುಖಾರಿ)

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …